ಮಧುಮೇಹಿಗಳಲ್ಲಿ ಮೊದಲು ಕಣ್ಣಿನ ತೊಂದರೆ ಬರುವುದು ಯಾಕೆ? ತಜ್ಞರು ಹೇಳುವುದೇನು?
ಮಧುಮೇಹ ಎನ್ನುವುದು ಸೈಲೆಂಟ್ ಕಿಲ್ಲರ್. ಇದು ದೇಹದಲ್ಲಿರುವುದು ಗೊತ್ತಾಗುವುದೇ ಯಾವುದಾದರೂ ಅಂಗಾಂಗ ವೈಫಲ್ಯವಾದಾಗ. ನಮ್ಮ ದೇಹವು ಇದಕ್ಕೆ ಸಾಕಷ್ಟು ಮೊದಲೇ ಮುನ್ಸೂಚನೆಯನ್ನು ನೀಡುತ್ತದೆ. ಆದರೆ ನಾವು ಇದನ್ನು ನಿರ್ಲಕ್ಷಿಸುತ್ತೇವೆ. ಹೀಗಾಗಿ ಮಧುಮೇಹವಿದ್ದರೂ ಅನೇಕರಿಗೆ ತಿಳಿಯುವಾಗ ತಡವಾಗುತ್ತದೆ. ಹೀಗಾಗಿ ಮಧುಮೇಹಿಗಳು ನಿರಂತರ ಆರೋಗ್ಯ ತಪಾಸಣೆ ನಡೆಸಬೇಕು, ಅವು ಯಾವುದು, ಯಾಕಾಗಿ ಎನ್ನುವ ಮಧುಮೇಹ ತಜ್ಞರಾದ ಡಾ. ಸುಮನ್ ಅವರು ನೀಡಿರುವ ಮಾಹಿತಿ ಇಲ್ಲಿದೆ.
ಬೆಂಗಳೂರು: ಮಧುಮೇಹಿಗಳಲ್ಲಿ (diabetics) ಮೊದಲು ಕಾಣಿಸಿಕೊಳ್ಳುವುದು ಕಣ್ಣಿನ (eye problem) ತೊಂದರೆ. ಹೀಗಾಗಿ ಕಣ್ಣು ಮಂಜಾದಾಗ ಮೊದಲು ಮಧುಮೇಹವಿದೆಯೇ ಎಂಬುದನ್ನು ಪರೀಕ್ಷೆ ಮಾಡಬೇಕು ಎನ್ನುತ್ತಾರೆ ಮಧುಮೇಹ ತಜ್ಞರಾದ (diabetic exports) ಡಾ. ಸುಮನ್. ವಿಶ್ವವಾಣಿ ಹೆಲ್ತ್ (Vishwavani health) ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಅವರು, ಮಧುಮೇಹಿಗಳು ನಿರಂತರವಾಗಿ 15 ದಿನಗಳಿಗೊಮ್ಮೆ ಮನೆಯಲ್ಲಿ ಹಾಗೂ ಎರಡು ತಿಂಗಳಿಗೊಮ್ಮೆ ಪ್ರಯೋಗಾಲಯದಲ್ಲಿ ಮಧುಮೇಹದ ಪರೀಕ್ಷೆ (Diabetes test) ನಡೆಸಬೇಕು. ಇದರಿಂದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇರಿಸಲು ಸಾಧ್ಯವಾಗುತ್ತದೆ. ಮಧುಮೇಹ ಎನ್ನುವುದು ಸೈಲೆಂಟ್ ಕಿಲ್ಲರ್. ಇದು ದೇಹದಲ್ಲಿರುವುದು ಗೊತ್ತಾಗುವುದೇ ಯಾವುದಾದರೂ ಅಂಗಾಂಗ ವೈಫಲ್ಯವಾದಾಗಲೇ. ಹೀಗಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು. ಮಧುಮೇಹಿಗಳಲ್ಲಿ ಮೊದಲು ಕಾಲು ಉರಿ, ಕಣ್ಣು ಮಂಜಾಗುವುದು, ಸ್ಪರ್ಶದ ಅರಿವು ಇಲ್ಲದಾಗುವ ಸಮಸ್ಯೆಗಳು ಕಂಡು ಬರುತ್ತವೆ. ಇವುಗಳನ್ನು ನಿರ್ಲಕ್ಷಿಸಬಾರದು ಎನ್ನುವ ಅವರು ಮಧುಮೇಹಿಗಳು ವರ್ಷಕ್ಕೊಮ್ಮೆ ಕಿಡ್ನಿ ಪರೀಕ್ಷೆ, ಲಿವರ್ ಪರೀಕ್ಷೆ, ಕೊಲೆಸ್ಟ್ರಾಲ್, ಹಿಮೋಗ್ಲೋಬಿನ್, ವಿಟಮಿನ್ ಡಿ, ಬಿ12, ಥೈರಾಯ್ಡ್ ಪರೀಕ್ಷೆಗಳನ್ನು ಮಾಡಬೇಕು. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವುದನ್ನು ತಡೆಯಬಹುದು. ಸಕಾಲದಲ್ಲಿ ಚಿಕಿತ್ಸೆ ದೊರೆತರೆ ಸಾಕಷ್ಟು ಸಮಸ್ಯೆಗಳನ್ನು ಆರಂಭದಲ್ಲೇ ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದರು.