ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ 16 ವರ್ಷದ ಕಾಮುಕನನ್ನು ಓಡಿಸಿದ ಬೀದಿನಾಯಿಗಳು; ವೈರಲ್ ವಿಡಿಯೊ ಇಲ್ಲಿದೆ
Stray Dogs Save Victim: ನಿರ್ಜನ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ಅಪ್ರಾಪ್ತ ವಯಸ್ಕ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಬೀದಿನಾಯಿಗಳು ಆಕೆಯನ್ನು ಕಾಪಾಡಿದ್ದು, ಆರೋಪಿಯನ್ನು ಓಡಿಸಿವೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶ್ವಾನಗಳು ನಿರಂತರ ಬೊಗಳುವ, ನಡೆಸುವ ಮೂಲಕ ಕಾಮುಕನನ್ನು ಅಲ್ಲಿಂದ ಓಡಿಹೋಗುವಂತೆ ಮಾಡಿವೆ. ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ -
ಚೆನ್ನೈ, ಸೆ. 5: ನಿರ್ಜನ ಪ್ರದೇಶದಲ್ಲಿ ಮಹಿಳೆಯೊಬ್ಬರಿಗೆ ಅಪ್ರಾಪ್ತ ವಯಸ್ಕ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಬೀದಿನಾಯಿಗಳು ಆಕೆಯನ್ನು ಕಾಪಾಡಿದ್ದು, ಕಾಮುಕನನ್ನು ಓಡಿಸಿವೆ. ತಮಿಳುನಾಡಿನ (Tamil Nadu) ಕೊಯಮತ್ತೂರಿನಲ್ಲಿ ಈ ಘಟನೆ ನಡೆದಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, (Viral Video), ಬೀದಿ ನಾಯಿಗಳ ನಡೆಯನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಸೆಪ್ಟೆಂಬರ್ 3ರಂದು ಕೊಯಮತ್ತೂರಿನ ತುಡಿಯಲೂರು ಬಳಿ ಈ ಘಟನೆ ನಡೆದಿದ್ದು, ಕುಡಿದ ಅಮಲಿನಲ್ಲಿ ಕಿರುಕುಳ ನೀಡಿದ 16 ವರ್ಷದ ಬಾಲಕನನ್ನು ಕೊಯಮತ್ತೂರು ನಗರ ಪೊಲೀಸರು ಬಂಧಿಸಿ ಬಾಲಾಪರಾಧಿ ಗೃಹಕ್ಕೆ ಕಳುಹಿಸಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ, ಕುಡಿದ ಮತ್ತಿನಲ್ಲಿದ್ದ ಅಪ್ರಾಪ್ತ ವಯಸ್ಕ ಮಹಿಳೆಯ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಕೂಡಲೇ ಬೀದಿ ನಾಯಿಗಳು ಓಡಿ ಬಂದು ಬಾಲಕನತ್ತ ನೋಡಿ ಬೊಗಳುತ್ತಲೇ ಇದ್ದವು. ಮಹಿಳೆಯನ್ನು ಅವನಿಂದ ರಕ್ಷಿಸಲು ಪ್ರಯತ್ನಿಸಿದವು. ನಿರಂತರ ಬೊಗಳುವ ಮೂಲಕ, ದಾಳಿ ನಡೆಸುವ ಮೂಲಕ ಅಪರಾಧಿ ಅಲ್ಲಿಂದ ಓಡಿಹೋಗುವಂತೆ ಮಾಡಿದವು.
“ಬಾಲಕ ಲೈಂಗಿಕ ದೌರ್ಜನ್ಯ ಎಸಗುವ ಮುನ್ನ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ್ದ. ಸೆಪ್ಟೆಂಬರ್ 3ರಂದು ಕೊಯಮತ್ತೂರಿನ ತುಡಿಯಲೂರು ಬಳಿ ಈತ ಮದ್ಯದ ಅಮಲಿನಲ್ಲಿ ಅಂಗಡಿಯೊಂದಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದ. ಈ ಬಗ್ಗೆ ತನಿಖೆ ನಡೆಸುತ್ತಿದ್ದಾಗ, ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಅವನು 30 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿರುವುದು ಕಂಡುಬಂದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿದೆ ವಿಡಿಯೊ:
A woman being sexually assaulted on the road was saved by a stray dogs in Coimbatore, Tamil Nadu. pic.twitter.com/XWCx5Qslbq
— Piyush Rai (@Benarasiyaa) September 4, 2026
ಸೆಪ್ಟೆಂಬರ್ 3ರಂದು ಬೆಳಗಿನ ಜಾವ 1.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ತನಿಖೆಯಲ್ಲಿ ಮಹಿಳೆ ಗಾಯಗೊಂಡಿರುವುದು ಪತ್ತೆಯಾಗಿದೆ. ಬೆಳಗಿನ ಜಾವ 1.30ರ ಸುಮಾರಿಗೆ ಆಕಸ್ಮಿಕವಾಗಿ ತನ್ನ ಮನೆಯಿಂದ ಹೊರಬಂದ ಆಕೆಗೆ, ಆ ಹುಡುಗ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಬೀದಿ ನಾಯಿಗಳು ಜೋರಾಗಿ ಬೊಗಳಲು ಪ್ರಾರಂಭಿಸಿದವು. ಹೀಗಾಗಿ ಆತ ಓಡಿಹೋದ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಡ್ಯಾನ್ಸ್ ತರಗತಿಗೆ ಹಾಜರಾಗಲು ಅಡುಗೆ ಮಾಡಲು ನಿರಾಕರಿಸಿದ ಪತ್ನಿಯನ್ನು ಕೊಂದ ಪಾಪಿ ಪತಿ
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವಂತ), ಸೆಕ್ಷನ್ 75 (ಲೈಂಗಿಕ ಕಿರುಕುಳ), ಮತ್ತು ಸೆಕ್ಷನ್ 79 (ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾತು, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಅಪ್ರಾಪ್ತ ವಯಸ್ಕನನ್ನು ಬಂಧಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.