Viral News: ಬಡತನದಿಂದ ಬೇಸತ್ತು ಹೆತ್ತ ಮಗುವನ್ನೇ ಮಾರಾಟ ಮಾಡಿದ ದಂಪತಿ!
Couple Sells Month-Old Baby: ಬಡತನದಿಂದ ಬೇಸತ್ತ ದಂಪತಿಯು ತಮ್ಮ ಒಂದು ತಿಂಗಳ ಗಂಡು ಮಗುವನ್ನು 50,000 ರೂ. ಗೆ ಮಾರಾಟ ಮಾಡಿರುವ ಕರುಣಾಜನಕ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ. ಘಟನೆಯ ಬಗ್ಗೆ ತಿಳಿದ ಕೂಡಲೇ ಪೊಲೀಸರಿಗೆ ಮಗುವನ್ನು ರಕ್ಷಿಸುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದರು.

-

ರಾಂಚಿ: ಬಡತನದಿಂದ ಬೇಸತ್ತ ದಂಪತಿಯು ತಮ್ಮ ಒಂದು ತಿಂಗಳ ಗಂಡು ಮಗುವನ್ನು 50,000 ರೂ.ಗೆ ಮಾರಾಟ ಮಾಡಿರುವ ಕರುಣಾಜನಕ ಘಟನೆ ಜಾರ್ಖಂಡ್ (Jharkhand) ನಲ್ಲಿ ನಡೆದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು (Police) ಮಗುವನ್ನು ರಕ್ಷಿಸಿದ್ದಾರೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಘಟನೆಯ ಬಗ್ಗೆ ತಿಳಿದುಕೊಂಡು ನಂತರ ಮಗುವನ್ನು ಕೂಡಲೇ ರಕ್ಷಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು. ಆ ನಂತರ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ. ಪಲಮು ಜಿಲ್ಲೆಯ ಲೆಸ್ಲಿಗಂಜ್ ಪ್ರದೇಶದ ದಂಪತಿಗಳು ತೀವ್ರ ಬಡತನದಿಂದಾಗಿ ತಮ್ಮ ಮಗನನ್ನು 50,000 ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಲೆಸ್ಲಿಗಂಜ್ ವೃತ್ತ ಅಧಿಕಾರಿ ಸುನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.
ವಿಷಯ ಬೆಳಕಿಗೆ ಬರುತ್ತಿದ್ದಂತೆ, ಪಲಮು ಜಿಲ್ಲಾಡಳಿತವು ಕುಟುಂಬವನ್ನು ಸಂಪರ್ಕಿಸಿ ಅವರಿಗೆ 20 ಕೆಜಿ ಆಹಾರ ಧಾನ್ಯವನ್ನು ಒದಗಿಸಿತು. ಮಗುವಿಗೆ ಜನ್ಮ ನೀಡಿದ ನಂತರ ಅಸ್ವಸ್ಥರಾಗಿದ್ದ ಪತ್ನಿ ಪಿಂಕಿ ದೇವಿಗೆ ಚಿಕಿತ್ಸೆ ನೀಡಲು ಮತ್ತು ಜೀವನ ನಡೆಸಲು ಹಣವಿಲ್ಲದ ಕಾರಣ, ಒಂದ ತಿಂಗಳ ಮಗುವನ್ನು ಹತ್ತಿರದ ಹಳ್ಳಿಯ ವ್ಯಾಪಾರಿ ದಂಪತಿಗೆ ಮಾರಿರುವುದಾಗಿ ಶಿಶುವಿನ ತಂದೆ ರಾಮಚಂದ್ರ ರಾಮ್ ತಿಳಿಸಿದ್ದಾರೆ.
ಪತ್ನಿಯ ಚಿಕಿತ್ಸೆಗೆ ಅಥವಾ ಆಹಾರ ವ್ಯವಸ್ಥೆ ಮಾಡಲು ತನ್ನ ಬಳಿ ಹಣವಿರಲಿಲ್ಲ ಎಂದು ರಾಮ್ ಹೇಳಿದರು. ಅವರು ದಿನಗೂಲಿ ಕಾರ್ಮಿಕರಾಗಿದ್ದರು, ಕಳೆದ ಕೆಲವು ತಿಂಗಳುಗಳಿಂದ ನಿರಂತರ ಮಳೆಯಿಂದಾಗಿ ನಿರುದ್ಯೋಗಿಗಳಾಗಿದ್ದರು. ಹಣ ಪಾವತಿ ಪೂರ್ಣಗೊಂಡ ನಂತರ ಮಧ್ಯವರ್ತಿ ದಂಪತಿಗಳು ಮಗುವನ್ನು ಲತೇಹಾರ್ ಜಿಲ್ಲೆಗೆ ಕರೆದುಕೊಂಡು ಹೋದರು.
ಇದನ್ನೂ ಓದಿ: Viral Video: ಪೊಲೀಸರು ಅರೆಸ್ಟ್ ಮಾಡೋಕೆ ಬಂದಾಗ ಹಾಸಿಗೆ ಹಿಂದೆ ಅವಿತು ಕುಳಿತ ಸಮಾಜವಾದಿ ಪಕ್ಷದ ನಾಯಕ! ಈ ವಿಡಿಯೊ ನೋಡಿ
ನಾವು ನಿರಾಶ್ರಿತರಾಗಿದ್ದು, ನಮ್ಮ ಇತರ ನಾಲ್ಕು ಮಕ್ಕಳೊಂದಿಗೆ ಶಿಥಿಲಗೊಂಡ ಶೆಡ್ ಅಡಿಯಲ್ಲಿ ರಾತ್ರಿಗಳನ್ನು ಕಳೆಯುತ್ತೇವೆ ಎಂದು ರಾಮ್ ಹೇಳಿದರು. ರಾಮ್ ಉತ್ತರ ಪ್ರದೇಶದ ಮಿರ್ಜಾಪುರದವರಾಗಿದ್ದು, ತನ್ನ ಪತ್ನಿಯೊಂದಿಗೆ ಸುಮಾರು 15 ವರ್ಷಗಳಿಂದ ಲೋಟ್ವಾದಲ್ಲಿ ವಾಸಿಸುತ್ತಿದ್ದಾರೆ. ದಂಪತಿಗಳು ಕೂಲಿ ಕೆಲಸ ಮಾಡುತ್ತಿದ್ದರು. ಕೆಲಸವಿಲ್ಲದಿದ್ದಾಗ ಗ್ರಾಮದಲ್ಲಿ ಭಿಕ್ಷೆ ಬೇಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ .
ಆಧಾರ್ ಅಥವಾ ಪಡಿತರ ಚೀಟಿ ಇಲ್ಲದ ಕಾರಣ ದಂಪತಿಗಳು ಸರ್ಕಾರಿ ಯೋಜನೆಗಳ ಸವಲತ್ತುಗಳಿಂದ ವಂಚಿತರಾಗಿದ್ದರು ಎಂದು ಅವರು ಹೇಳಿದರು. ತನ್ನ ತಂದೆ ತನಗೆ ಒಂದು ಸಣ್ಣ ತುಂಡು ಭೂಮಿಯನ್ನು ನೀಡಿದ್ದರು. ಅದರಲ್ಲಿ ಅವರು ಒಂದು ಗುಡಿಸಲು ಕಟ್ಟಿದ್ದರು, ಅದು ಮಳೆಯಲ್ಲಿ ಹಾನಿಗೊಳಗಾಯಿತು ಎಂದು ಪಿಂಕಿ ದೇವಿ ಹೇಳಿದರು. ಶೆಡ್ ಅಡಿಯಲ್ಲಿ ವಾಸಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ ಎಂದು ರಾಮ್ ಹೇಳಿದರು.
ಆ ಮಹಿಳೆ ಶೆಡ್ ಅಡಿಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು, ಅಂದಿನಿಂದ ಅಸ್ವಸ್ಥಳಾಗಿದ್ದಳು. ಮಗುವನ್ನು ಹುಡುಕಲು ಪೊಲೀಸರ ತಂಡವನ್ನು ಲತೇಹಾರ್‌ಗೆ ಕಳುಹಿಸಲಾಗಿದ್ದು, ನಂತರ ಭಾನುವಾರದಂದು ಮಗುವನ್ನು ರಕ್ಷಿಸಲಾಗಿದೆ ಎಂದು ಲೆಸ್ಲಿಗಂಜ್ ಪೊಲೀಸ್ ಠಾಣಾಧಿಕಾರಿ ಉತ್ತಮ್ ಕುಮಾರ್ ರೈ ತಿಳಿಸಿದ್ದಾರೆ.
ಇದನ್ನೂ ಓದಿ: Kalash Stolen: ಚಿನ್ನ, ವಜ್ರ ಖಚಿತ ಬರೋಬ್ಬರಿ 1ಕೋಟಿ ರೂ. ಮೌಲ್ಯ ಕಲಶ ಕಳವು- ಲೋಕಸಭಾ ಸ್ಪೀಕರ್ ಇದ್ದ ಕಾರ್ಯಕ್ರಮದಲ್ಲೇ ಕಳ್ಳತನ