Viral Story: ವಿಮಾನದ ಕಾಕ್‍ಪಿಟ್ ಬಾಗಿಲು ಓಪನ್; ಪ್ರಯಾಣಿಕರು ಗಲಿಬಿಲಿ, ಪೈಲಟ್ ಅಮಾನತು; ನಡೆದಿದ್ದೇನು?
ವಿಮಾನ ಹಾರಾಟದ ಸಮಯದಲ್ಲಿ ಕಾಕ್‌ಪಿಟ್ ಬಾಗಿಲು ತೆರೆದಿಡುವ ಮೂಲಕ ವಾಯುಯಾನ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಬ್ರಿಟಿಷ್ ಏರ್‌ವೇಸ್ ಪೈಲಟ್‌ನನ್ನು ಅಮಾನತುಗೊಳಿಸಲಾಗಿದೆ. ಪೈಲಟ್ ಕುಟುಂಬ ಸದಸ್ಯರು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಇದೇ ಕಾರಣಕ್ಕೆ ಬಾಗಿಲು ತೆರೆದಿಡಲಾಗಿತ್ತು ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಲಂಡನ್: ಬ್ರಿಟೀಷ್ ಏರ್‌ವೇಸ್ ಪೈಲಟ್ (British Airways pilot) ಒಬ್ಬರು ಕಾಕ್‌ಪಿಟ್ ಬಾಗಿಲು ತೆರೆದಿಟ್ಟ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಅಟ್ಲಾಂಟಿಕ್ ಸಾಗರದ ಹಾರಾಟದ ಸಮಯದಲ್ಲಿ ಕಾಕ್‌ಪಿಟ್ (cockpit) ಬಾಗಿಲು ತೆರೆದಿಡುವ ಮೂಲಕ ಕಟ್ಟುನಿಟ್ಟಾದ ವಾಯುಯಾನ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಬ್ರಿಟಿಷ್ ಏರ್‌ವೇಸ್ ಪೈಲಟ್ನನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಈ ಘಟನೆಯು ಪ್ರಯಾಣಿಕರಲ್ಲಿ ಕಳವಳವನ್ನು ಉಂಟು ಮಾಡಿತು. ಪೈಲಟ್ ಯಾಕಾಗಿ ಕಾಕ್‍ಪಿಟ್ ಬಾಗಿಲು ತೆರೆದಿಟ್ಟ ಎಂಬ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ (Viral Story).
ವರದಿ ಪ್ರಕಾರ, ಪೈಲಟ್ ಕುಟುಂಬ ಸದಸ್ಯರು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅವರು ವಿಮಾನವನ್ನು ಚಲಾಯಿಸುವುದನ್ನು ನೋಡಬೇಕೆಂದು ಬಯಸಿದ್ದರು. ಹೀಗಾಗಿ ಪೈಲಟ್ ಕಾಕ್‍ಪಿಟ್ ಬಾಗಿಲು ತೆರೆದಿಟ್ಟರು ಎಂದು ಹೇಳಲಾಗಿದೆ. ಆದರೆ ಪೈಲಟ್ ಈ ರೀತಿ ಮಾಡಿದ್ದರಿಂದ ಸಿಬ್ಬಂದಿ ಹಾಗೂ ಪ್ರಯಾಣಿಕರನ್ನು ಭೀತಿಗೊಳಿಸಿತು. ನಂತರ ಬ್ರಿಟೀಷ್ ಏರ್‌ವೇಸ್ ಪೈಲಟ್ನನ್ನು ತಾತ್ಕಾಲಿಕವಾಗಿ ಸೇವೆಯಿಂದ ಅಮಾನತು ಮಾಡಿತು ಹಾಗೂ ವಿಮಾನ ಹಾರಾಟವನ್ನು ರದ್ದುಗೊಳಿಸಲಾಯಿತು.
ಈ ಸುದ್ದಿಯನ್ನೂ ಓದಿ: Tragic Accident: ಮೇಲ್ಸೇತುವೆ ಮೇಲಿಂದ ಕೆಳಕ್ಕೆ ಬಿದ್ದ ಕಬ್ಬಿಣದ ತುಂಡುಗಳು; ಸ್ಕೂಟರ್ ಸವಾರ ಗಂಭೀರ, ಸಿಸಿಟಿವಿ ವಿಡಿಯೊ ವೈರಲ್
ಭದ್ರತಾ ಉಲ್ಲಂಘನೆಯ ನಂತರ ವಿಮಾನ ಹಾರಾಟದಲ್ಲಿ ಅಡಚಣೆ
ಪೈಲಟ್‍ನನ್ನು ಅಮಾನತುಗೊಳಿಸಿದರಿಂದ ಆಗಸ್ಟ್ 8ರಂದು ನ್ಯೂಯಾರ್ಕ್‌ನಿಂದ ಲಂಡನ್‌ಗೆ ಹೋಗುವ BA174 ವಿಮಾನದ ಹಾರಾಟವನ್ನು ರದ್ದುಗೊಳಿಸಲಾಯಿತು. ಬೋಯಿಂಗ್ 777-300 ವಿಮಾನವು ಹಾರಾಟ ನಡೆಸಬೇಕಿತ್ತು. ಬ್ರಿಟಿಷ್ ಏರ್‌ವೇಸ್ ಪರ್ಯಾಯ ವಿಮಾನಗಳನ್ನು ವ್ಯವಸ್ಥೆಗೊಳಿಸಿದ್ದರೂ, ಈ ರದ್ಧತಿಯು ಪ್ರಯಾಣಿಕರ ಮೇಲೆ ಪರಿಣಾಮ ಬೀರಿತು.
ಪೈಲಟ್ ಕಾಕ್‍ಪಿಟ್ ಬಾಗಿಲು ತೆರೆದಿದ್ದು ಪ್ರಯಾಣಿಕರಲ್ಲಿ ಆತಂಕವನ್ನುಂಟು ಮಾಡಿತು. ಸಿಬ್ಬಂದಿ ಮತ್ತು ಪ್ರಯಾಣಿಕರು ಕಾಕ್‌ಪಿಟ್ ಬಾಗಿಲು ತೆರೆದಿರುವುದನ್ನು ತಕ್ಷಣ ಗಮನಿಸಿದರು. ಬಾಗಿಲು ತುಂಬಾ ಸಮಯದವರೆಗೆ ತೆರೆದಿತ್ತು. ಹೀಗಾಗಿ ಸಹಜವಾಗಿ ಎಲ್ಲರೂ ಕಳವಳಗೊಂಡಿದ್ದರು. ಸುರಕ್ಷತೆ ಮತ್ತು ಭದ್ರತೆಯು ವಿಮಾನಯಾನ ಸಂಸ್ಥೆಯ ಆದ್ಯತೆ ಎಂದು ಬ್ರಿಟಿಷ್ ಏರ್‌ವೇಸ್ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ನಾಗರಿಕ ವಿಮಾನಯಾನ ಪ್ರಾಧಿಕಾರ (CAA) ಈ ವಿಷಯದ ಬಗ್ಗೆ ತುರ್ತು ತನಿಖೆ ಆರಂಭಿಸಿದೆ ಎಂದು ದೃಢಪಡಿಸಿದೆ. 2001ರ ಸೆಪ್ಟೆಂಬರ್ 11ರಂದು ನಡೆದ ಭಯೋತ್ಪಾದಕ ದಾಳಿಯ ನಂತರ, ವಿಮಾನಯಾನ ಸಂಸ್ಥೆಗಳು ಹಾರಾಟದ ಸಮಯದಲ್ಲಿ ಕಾಕ್‌ಪಿಟ್ ಬಾಗಿಲುಗಳು ಎಲ್ಲ ಸಮಯದಲ್ಲೂ ಲಾಕ್ ಆಗಿರಬೇಕು ಎಂಬ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುತ್ತಿವೆ.
ಈಸಿಜೆಟ್‍ನ ಪ್ರತ್ಯೇಕ ಘಟನೆ
ಈ ವಾರದ ಆರಂಭದಲ್ಲಿ, ಈಸಿಜೆಟ್‍ನ ಪ್ರಕರಣವೂ ಸುದ್ದಿ ಮಾಡಿತ್ತು. ಕೇಪ್ ವರ್ಡೆಯ ಅಮಿಲ್ಕಾರ್ ಕ್ಯಾಬ್ರಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ವಿಮಾನ ಚಲಾಯಿಸಬೇಕಿದ್ದ ಪೈಲಟ್ ಒಬ್ಬರನ್ನು ಅಮಾನತುಗೊಳಿಸಲಾಯಿತು. ಐಷಾರಾಮಿ ಹೋಟೆಲ್‌ನಲ್ಲಿ ಕುಡಿದು ಬೆತ್ತಲೆಯಾಗಿ ಕಂಡುಬಂದ ನಂತರ ಅವರನ್ನು ಅಮಾನತುಗೊಳಿಸಲಾಯಿತು.
ಪೈಲಟ್ ಆಗಸ್ಟ್ 4ರಂದು ಪಂಚತಾರಾ ಮೆಲಿಯಾ ಡುನಾಸ್ ಬೀಚ್ ರೆಸಾರ್ಟ್ ಮತ್ತು ಸ್ಪಾದಲ್ಲಿ ತಂಗಿದ್ದ. ಬೆಳಗಿನ ಜಾವ 2:30ಕ್ಕೆ ತನ್ನ ಬಟ್ಟೆಗಳನ್ನು ಬಿಚ್ಚಿ, ಜಿಮ್ ಮತ್ತು ಸ್ಪಾ ಬಳಿ ನಡೆದುಕೊಂಡು ಹೋಗಿದ್ದಾನೆ. ಈಸಿಜೆಟ್ ಪ್ರಯಾಣಿಕರಾಗಿದ್ದ ಕೆಲವರು ಇದನ್ನು ನೋಡಿ ವಿಷಯ ತಿಳಿಸಿದ್ದರು. ಹೀಗಾಗಿ ಪೈಲಟ್‍ನನ್ನು ಅಮಾನತುಗೊಳಿಸಲಾಯಿತು. ಆಗಸ್ಟ್ 6ರಂದು ಈ ಘಟನೆ ನಡೆದಿದ್ದು, ವಿಮಾನಕ್ಕೆ ಅವರ ಬದಲಿಗೆ ಮತ್ತೊಬ್ಬ ಪೈಲಟ್‌ನನ್ನು ನೇಮಕಗೊಳಿಸಲಾಯಿತು.