Viral News: ಕಸದ ಲಾರಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಔಷಧ ಸಾಗಾಟ; ವೈದ್ಯನ ಅಮಾನತು
ಉತ್ತರ ಚೆನ್ನೈನಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕಸ ಸಂಗ್ರಹಣಾ ವಾಹನದಲ್ಲಿ ಔಷಧಿಗಳನ್ನು ಸಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಗ್ರೇಟರ್ ಚೆನ್ನೈ ಕಾರ್ಪೊರೇಷನ್, ಗುತ್ತಿಗೆ ವೈದ್ಯರ ಸೇವೆಯನ್ನು ರದ್ದುಗೊಳಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (UPHC) ಕಸದ ವಾಹನದಲ್ಲಿ ಸಾಗಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

-

ಚೆನ್ನೈ: ಉತ್ತರ ಚೆನ್ನೈನಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕಸ ಸಂಗ್ರಹಣಾ ವಾಹನದಲ್ಲಿ ಔಷಧಿಗಳನ್ನು ಸಾಗಿಸಲಾಗುತ್ತಿದೆ ಎಂಬ (Viral News) ಆರೋಪ ಕೇಳಿಬಂದಿದ್ದು, ಗ್ರೇಟರ್ ಚೆನ್ನೈ ಕಾರ್ಪೊರೇಷನ್, ಗುತ್ತಿಗೆ ವೈದ್ಯರ ಸೇವೆಯನ್ನು ರದ್ದುಗೊಳಿಸಿದೆ. ಗರ್ಭಿಣಿಯರಿಗೆ ಫೆರಸ್ ಸಲ್ಫೇಟ್ ಮಾತ್ರೆಗಳು, ಮಕ್ಕಳಿಗೆ ಪ್ಯಾರಸಿಟಮಾಲ್ ಸಿರಪ್ ಮತ್ತು ಪ್ರತಿಜೀವಕ ಬಾಟಲುಗಳು ಸೇರಿದಂತೆ ಔಷಧಿಗಳನ್ನು ಮುತ್ತಮಿಳ್ ನಗರದಿಂದ ಕೊಡುಂಗೈಯೂರ್‌ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (UPHC) ಕಸದ ವಾಹನದಲ್ಲಿ ಸಾಗಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.
ವರದಿ ಬಳಿಕ ವಿವಾದ ಹುಟ್ಟಿಕೊಂಡಿತ್ತು. ಔಷಧಿ ವಿತರಣೆಗೆ ಯಾವುದೇ ಮೀಸಲಾದ ಬಜೆಟ್ ಅಥವಾ ವ್ಯವಸ್ಥೆ ಇಲ್ಲದೆ, ಆರೋಗ್ಯ ಕೇಂದ್ರದ ಸಿಬ್ಬಂದಿ ಕಸದ ವಾಹನಗಳನ್ನು ನಿರ್ವಹಿಸುವ ಘನತ್ಯಾಜ್ಯ ನಿರ್ವಹಣಾ ಇಲಾಖೆಯಿಂದ ಸಹಾಯ ಕೋರಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ರವಾನೆಯ ಸ್ವರೂಪದ ಬಗ್ಗೆ ತಿಳಿದಿಲ್ಲದ ಇಲಾಖೆಯು ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು ಹಲವಾರು ಬಾರಿ ಇದೇ ರೀತಿ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಗರ್ಭಿಣಿಯರು ಮತ್ತು ಮಕ್ಕಳಿಗೆ ಮೀಸಲಾದ ಜೀವರಕ್ಷಕ ಔಷಧಿಗಳನ್ನು ಚೆನ್ನೈನ ಕೊಡುಂಗೈಯೂರಿನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಸದ ಟ್ರಕ್‌ನಲ್ಲಿ ಸಾಗಿಸುವ ನಾಚಿಕೆಗೇಡಿನ ಕೃತ್ಯವು, ತಮಿಳುನಾಡು ಜನರ ಯೋಗಕ್ಷೇಮದ ಬಗ್ಗೆ ಡಿಎಂಕೆ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇಂತಹ ಸ್ಪಷ್ಟ ಅಸಮರ್ಥತೆಯು ಆಡಳಿತವನ್ನು ಅಣಕವಾಗಿ ಪರಿವರ್ತಿಸಿದೆ" ಎಂದು ಬಿಜೆಪಿ ತಮಿಳುನಾಡು ಮುಖ್ಯಸ್ಥ ಕೆ. ಅಣ್ಣಾಮಲೈ ಹೇಳಿದ್ದಾರೆ. ತಮಿಳುನಾಡು ಮೂಲದ ಔಷಧ ಘಟಕವೊಂದು ತಯಾರಿಸಿದ ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿ 21 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾದ ಇತ್ತೀಚಿನ ಪ್ರಕರಣದ ಬಳಿಕ ಈ ಘಟನೆ ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ: Cough Syrup: ಕೆಮ್ಮಿನ ಸಿರಪ್ ತಯಾರಿಕೆ ಕಾರ್ಖಾನೆಯಲ್ಲಿ ಮೂಲಭೂತ ಸೌಕರ್ಯ ಕೊರತೆ; ಸ್ವಚ್ಛತೆಯೂ ಇಲ್ಲ: ಬೆಚ್ಚಿ ಬೀಳಿಸುವ ಮಾಹಿತಿ ಬಹಿರಂಗ
ಹಲವಾರು ರಾಜ್ಯಗಳಲ್ಲಿ ಡಜನ್‌ಗಟ್ಟಲೆ ಮಕ್ಕಳ ಸಾವಿಗೆ ಕಾರಣವಾದ ಕಲಬೆರಕೆ ಕೆಮ್ಮಿನ ಸಿರಪ್ ತಯಾರಿಸಿದ್ದ ತಮಿಳುನಾಡು ಮೂಲದ ಫಾರ್ಮಾ ಕಂಪನಿಯ ಮಾಲೀಕನನ್ನು ಗುರುವಾರ ಬಂಧಿಸಲಾಗಿದೆ. ಮಧ್ಯಪ್ರದೇಶ ಪೊಲೀಸರು ಚೆನ್ನೈನಲ್ಲಿ ಶ್ರೀಶನ್ ಫಾರ್ಮಾ ಕಂಪನಿಯ ಮಾಲೀಕ ರಂಗನಾಥನ್‌ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸರು ರಂಗನಾಥನ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಆತನ ಬಂಧನಕ್ಕೆ 20,000 ರೂ. ಬಹುಮಾನವನ್ನೂ ಘೋಷಿಸಲಾಗಿತ್ತು. ಮಧ್ಯಪ್ರದೇಶವಲ್ಲದೆ ರಾಜಸ್ಥಾನದಲ್ಲೂ ಈ ಸಿರಪ್ ಸೇವಿಸಿದ ನಂತರ ಮಕ್ಕಳು ಸಾವನ್ನಪ್ಪಿರುವ ವರದಿಗಳಿವೆ.