Viral Video: ಮದ್ಯದ ಟ್ರಕ್ ಪಲ್ಟಿ; ಗಾಯಗೊಂಡು ಚಾಲಕ ನರಳುತ್ತಿದ್ದರೂ ನೆರವಿಗೆ ಧಾವಿಸದೆ ಬಿಯರ್ ಬಾಟಲಿಗಾಗಿ ಮುಗಿಬಿದ್ದ ಜನ
ಮಧ್ಯ ಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಇತ್ತೀಚೆಗೆ ಎಮ್ಮೆ ಅಡ್ಡ ಬಂದ ಕಾರಣ ನೂರಾರು ಮದ್ಯದ ಬಾಕ್ಸ್‌ಗಳನ್ನು ತುಂಬಿದ್ದ ಟ್ರಕ್ ಪಲ್ಟಿಯಾಗಿದೆ. ದಾರಿಹೋಕರು ಟ್ರಕ್‍ನೊಳಗೆ ಸಿಲುಕಿದ್ದ ಚಾಲಕ ಮತ್ತು ಕ್ಲೀನರ್‌ಗೆ ಸಹಾಯ ಮಾಡುವ ಬದಲು ಬಿಯರ್ ಬಾಟಲಿಗಳನ್ನು ದೋಚಲು ಎದ್ದೋ ಬಿದ್ದೋ ಓಡಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಭೋಪಾಲ್: ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಹೆದ್ದಾರಿಯಲ್ಲಿ ವ್ಯಕ್ತಿಯೊಬ್ಬನ ಬ್ಯಾಗ್‌ನಲ್ಲಿದ್ದ ಹಣ ರಸ್ತೆ ತುಂಬಾ ಬಿದ್ದಿದ್ದು ಅದನ್ನು ಸಂಗ್ರಹಿಸಲು ಜನ ಮುಗಿಬಿದ್ದಿದ್ದರು.ಇದೀಗ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನೂರಾರು ಮದ್ಯದ ಪೆಟ್ಟಿಗೆಗಳನ್ನು ತುಂಬಿದ್ದ ಟ್ರಕ್ ಪಲ್ಟಿಯಾದ ನಂತರ ಜನರು ಬಿಯರ್ ಬಾಟಲಿಗಳನ್ನು ದೋಚಲು ಎದ್ದೋ ಬಿದ್ದೋ ಓಡಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
ಜನರಿಗೆ ಆಸೆ ಎಷ್ಟರಮಟ್ಟಿಗೆ ಇದೆ ಎಂದರೆ ಟ್ರಕ್ ಪಲ್ಟಿಯಾದ್ದರಿಂದ ಗಾಯಗೊಂಡ ಚಾಲಕ ಮತ್ತು ಕ್ಲೀನರ್ ಟ್ರಕ್‍ನೊಳಗೆ ಸಿಲುಕಿಕೊಂಡು ನರಳುತ್ತಿದ್ದರೂ ದಾರಿಹೋಕರು ಅವರಿಗೆ ಸಹಾಯ ಮಾಡುವ ಬದಲು ಬಾಟಲಿಗಳನ್ನು ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಕಟ್ನಿಯ ಚಾಪರಾ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘೋರ ಘಟನೆ ನಡೆದಿದೆ.
ವಿಡಿಯೊ ನೋಡಿ...
People Rush To Loot Beer Bottles As Loaded Truck Overturns In MP's Jabalpur #people #Jabalpur #BearBottles #loot #MadhyaPradesh pic.twitter.com/EUoJkaEtER
— Free Press Madhya Pradesh (@FreePressMP) May 19, 2025
ಮಾಹಿತಿಯ ಪ್ರಕಾರ, ಟ್ರಕ್ ಜಬಲ್ಪುರದಿಂದ ಭೋಪಾಲ್‌ನ ಹಜಾರಿಬಾಗ್‌ಗೆ ತೆರಳುತ್ತಿತ್ತು. ಎಮ್ಮೆ ಇದ್ದಕ್ಕಿದ್ದಂತೆ ಅಡ್ಡ ಬಂದ ಕಾರಣ ಟ್ರಕ್ ಪಲ್ಟಿಯಾಗಿದೆ. ಶುರುವಿನಲ್ಲಿ ಕೆಲವರು ಟ್ರಕ್ ಒಳಗೆ ಸಿಲುಕಿದ್ದ ಚಾಲಕ ಮತ್ತು ಕ್ಲೀನರ್‌ಗೆ ಸಹಾಯ ಮಾಡಲು ಮುಂದೆ ಬಂದರಾದರೂ, ಟ್ರಕ್‍ನಲ್ಲಿ ಮದ್ಯ ಇರುವುದನ್ನು ನೋಡಿದ ಕೂಡಲೇ ಅವರಿಗೆ ಸಹಾಯ ಮಾಡುವ ಬದಲು ಬಾಟಲಿ ತೆಗೆದುಕೊಂಡು ಪರಾರಿಯಾಗಿದ್ದಾರೆ. ಜನರು ಮದ್ಯದ ಬಾಟಲಿಗಳನ್ನು ದೋಚುತ್ತಿರುವುದನ್ನು ತೋರಿಸುವ ಘಟನೆಯ ವಿಡಿಯೊಗಳು ಈಗ ಮೀಡಿಯಾದಲ್ಲಿ ವೈರಲ್ ಆಗಿದೆ.
ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಸಲೀಮ್ನಾಬಾದ್ ಪೊಲೀಸ್ ಠಾಣೆಯ ಉಸ್ತುವಾರಿ ಅಖಿಲೇಶ್ ದಹಿಯಾ ನೇತೃತ್ವದ ತಂಡ ಸ್ಥಳಕ್ಕೆ ಬಂದಿದೆ. ಗಾಯಗೊಂಡ ಚಾಲಕ ಮತ್ತು ಕ್ಲೀನರ್‌ನನ್ನು ಚಿಕಿತ್ಸೆಗಾಗಿ ಕಟ್ನಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಈ ನಡುವೆ, ಉಳಿದ ಮದ್ಯವನ್ನು ಪಡೆಯಲು ಅಬಕಾರಿ ಇಲಾಖೆಯೂ ಆಗಮಿಸಿದೆ. ಆದರೆ ಆ ಹೊತ್ತಿಗೆ, ಸ್ಥಳೀಯರು ಈಗಾಗಲೇ ಹೆಚ್ಚಿನ ಪ್ರಮಾಣದ ಮದ್ಯವನ್ನು ತೆಗೆದುಕೊಂಡು ಹೋಗಿದ್ದರು.
ಅಪಘಾತ ಮತ್ತು ದರೋಡೆಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮದ್ಯ ಗುತ್ತಿಗೆದಾರ ಹೇಳಿಕೊಂಡಿದ್ದಾನೆ. ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ವೈರಲ್ ವಿಡಿಯೊಗಳನ್ನು ಬಳಸಿಕೊಂಡು ಶಂಕಿತರನ್ನು ಗುರುತಿಸಲು ಮುಂದಾಗಿದ್ದಾರೆ. ಕಾನೂನು ಕ್ರಮ ಕೈಗೊಳ್ಳಲು ದೃಶ್ಯಗಳಲ್ಲಿ ಕಂಡುಬರುವ ಜನರನ್ನು ಗುರುತಿಸಲು ಸಹಾಯ ಮಾಡುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಜಿಪ್‍ಲೈನ್ ಮಾಡುವಾಗ ಕೆಳಗೆ ಉರುಳಿ ಬಿದ್ದ ಪುರೋಹಿತ; ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ
ಇದೇ ರೀತಿಯ ಘಟನೆ ಈ ಹಿಂದೆ ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ವರದಿಯಾಗಿತ್ತು. ಅಲ್ಲಿ ಮದ್ಯದ ಬದಲು 500 ರೂ.ಗಳ ನೋಟು ಹೆದ್ದಾರಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಆಗ ಕೂಡ ಜನರು ಆ ನೋಟುಗಳನ್ನು ಸಂಗ್ರಹಿಸಲು ರಸ್ತೆಯಲ್ಲಿ ವಾಹನ ಸಂಚಾರವಿದ್ದರೂ ತಮ್ಮ ಜೀವವನ್ನು ಪಣಕಿಟ್ಟು ರಸ್ತೆಯಲ್ಲೆಲ್ಲಾ ಓಡಾಡಿದ್ದರು.