ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 15ನೇ ವಯಸ್ಸಿನಲ್ಲಿ ಆಟಿಕೆಗಳೊಂದಿಗೆ ಕೋಣೆಯಲ್ಲಿ ಲಾಕ್; 42ನೇ ವಯಸ್ಸಿನಲ್ಲಿ ಮಹಿಳೆಯ ರಕ್ಷಣೆ

Locked in a room with toys: ಪೋಲೆಂಡ್‍ನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಪೋಷಕರು ತಮ್ಮ ಪುತ್ರಿಯನ್ನು ಆಕೆ 15 ವರ್ಷ ವಯಸ್ಸಿನವಳಾಗಿದ್ದಾಗ ಆಟಿಕೆಗಳ ಸಹಿತ ಕೋಣೆಯಲ್ಲಿ ಬಂಧಿಸಿಟ್ಟಿದ್ದರು. ಇದೀಗ ಮಹಿಳೆಯ 42ನೇ ವಯಸ್ಸಿನಲ್ಲಿ ರಕ್ಷಿಸಲಾಗಿದೆ. ಆಕೆಯ ಸ್ಥಿತಿ ಕೇಳಿದರೆ ಎಂತಹ ಕಲ್ಲು ಹೃದಯವಾದರೂ ಕರಗುತ್ತೆ.

3 ದಶಕಗಳಿಂದ ಕೋಣೆಯಲ್ಲಿ ಬಂಧಿಯಾಗಿದ್ದ ಮಹಿಳೆಯ ರಕ್ಷಣೆ

-

Priyanka P Priyanka P Oct 17, 2025 7:10 PM

ವಾರ್ಸಾ: ಬಾಲಕಿಯೊಬ್ಬಳು 15ನೇ ವಯಸ್ಸಿನಲ್ಲಿ ಗೃಗ ಬಂಧನಕ್ಕೆ ಒಳಗಾಗಿದ್ದು, ಇದೀಗ ಆಕೆಯ 42ನೇ ವಯಸ್ಸಿನಲ್ಲಿ ಆಕೆಯನ್ನು ರಕ್ಷಿಸಲ್ಪಟ್ಟ ಹೃದಯ ವಿದ್ರಾವಕ ಘಟನೆಯು ಪೋಲೆಂಡ್‍ನ (Poland) ಸ್ವಿಯೆಟೊಕ್ಲೋವಿಸ್‌ನಲ್ಲಿ ನಡೆದಿದೆ. ದೀರ್ಘಕಾಲದ ಬಂಧನದ ನಂತರ ಪ್ರಕರಣ ಬೆಳಕಿಗೆ ಬಂದಿದೆ. 42 ವರ್ಷದ ಮಹಿಳೆಯೊಬ್ಬರು ಸುಮಾರು ಮೂರು ದಶಕಗಳ ಕಾಲ ತಮ್ಮ ಸ್ವಂತ ಮನೆಯ ಕೋಣೆಯಲ್ಲಿ ಬಂಧಿಸಲ್ಪಟ್ಟಿದ್ದರು. 1998ರಲ್ಲಿ 15ನೇ ವಯಸ್ಸಿನಲ್ಲಿ ಕೊನೆಯ ಬಾರಿಗೆ ಹೊರಗಿನ ಪ್ರಪಂಚಕ್ಕೆ ಕಾಣಿಸಿಕೊಂಡಿದ್ದ ಮಿರೆಲಾ, ಈ ವರ್ಷದ ಜುಲೈನಲ್ಲಿ ಕೌಟುಂಬಿಕ ಕಲಹದ ಕುರಿತು ಪೊಲೀಸರಿಗೆ ದೂರು ನೀಡಿದ ನಂತರ ಪತ್ತೆಯಾಗಿದ್ದರು (Viral News).

ನಿವಾಸಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ದಿಗ್ಭ್ರಮೆಗೊಂಡಿದ್ದರು. ಮಿರೆಲಾಳ ಕೋಣೆಯು ಮಗುವಿನ ರೂಮ್‌ನಂತೆ ಇತ್ತು. ಸಣ್ಣ ಹಾಸಿಗೆ, ಚದುರಿದ ಆಟಿಕೆಗಳು ಮತ್ತು ಹೂವಿನ ಆಕಾರದ ಮೇಜು ಇತ್ತು. ಮಕ್ಕಳಿಗೆ ಬೇಕಾದ ಆಟಿಕೆಗಳು ಅಲ್ಲಿದ್ದರೂ, ಇದೀಗ ಆಕೆಗೆ 42 ವರ್ಷ ವಯಸ್ಸಾಗಿದ್ದು, ತೀವ್ರ ಅಪೌಷ್ಟಿಕತೆಯಿಂದ ದುರ್ಬಲಳಾಗಿದ್ದಳು.

ಆಕಸ್ಮಿಕವಾಗಿ ಆಕೆಯ ವಿಚಾರ ಗೊತ್ತಾಗಿದ್ದರಿಂದ ಅದೃಷ್ಟವಶಾತ್ ಬದುಕುಳಿದಿದ್ದಾಳೆ. ಇನ್ನೂ ಕೆಲವು ದಿನಗಳವರೆಗೆ ಗೊತ್ತಾಗದೇ ಇದ್ದಿದ್ದರೆ ಆಕೆ ಬದುಕುಳಿಯುವುದೇ ಕಷ್ಟವಾಗಿತ್ತು. ಮೂರು ದಶಕಗಳ ಕಾಲ ಕೋಣೆಯಲ್ಲಿ ಬಂಧನದಲ್ಲಿದ್ದ ಕಾರಣ ಮಿರೆಲಾಗೆ ನಡೆಯುವುದಂತೂ ಕಷ್ಟ. ನಿಲ್ಲಲೂ ಆಗುವುದಿಲ್ಲ ಮತ್ತು ಆಕೆಯ ಕಾಲುಗಳು ಊದಿಕೊಂಡಿದ್ದವು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Viral News: ಇದು ನನ್ನ ಕೊನೆಯ ದೀಪಾವಳಿ...! ಕ್ಯಾನ್ಸರ್‌ ಪೀಡಿತ ಯುವಕನ ಹೃದಯವಿದ್ರಾವಕ ಪೋಸ್ಟ್

ಈ ಬಗ್ಗೆ ಮಿರೆಲಾಳ ಪೋಷಕರನ್ನು ಪ್ರಶ್ನಿಸಿದಾಗ, ಅವರು ನೀಡಿದ ವಿವರಣೆಗಳು ಅಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿದವು. ಸ್ನೇಹಿತರನ್ನು ಭೇಟಿಯಾಗಲು ಸಾಂದರ್ಭಿಕವಾಗಿ ಅವಕಾಶ ನೀಡಲಾಗುತ್ತಿತ್ತು ಎಂದು ಮಿರೆಲಾಳ ತಾಯಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಯು ಸಾಕಷ್ಟು ಗೊಂದಲ ಮೂಡಿಸಿದೆ. ಅಲ್ಲದೆ ಕೋಣೆಯಲ್ಲಿದ್ದ ವಸ್ತುಗಳನ್ನು ಎಸೆಯಲು ತನಗೆ ಸಮಯ ಸಿಕ್ಕಿಲ್ಲ ಎಂದೂ ಹೇಳಿದ್ದಾರೆ.

ಅಂದಹಾಗೆ, ಮಿರೆಲಾಳ ರಕ್ಷಣೆ ಸಮಯದಲ್ಲಿ ತನಗೆ ಯಾರ ಸಹಾಯದ ಅಗತ್ಯವೂ ಇಲ್ಲ ಎಂದು ಹೇಳಿದಳು. ಇದು ದಶಕಗಳ ಕಾಲದ ಪ್ರತ್ಯೇಕತೆಯ ಮಾನಸಿಕ ನೋವನ್ನು ಒತ್ತಿಹೇಳುತ್ತದೆ. ತಿಂಗಳ ಹಿಂದೆಯೇ ರಕ್ಷಣೆ ನಡೆದಿದ್ದರೂ, ಇತ್ತೀಚೆಗೆ ಇದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಮಿರೆಲಾ ಎರಡು ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಮಿರೆಲಾ ಅನುಭವಿಸಿದ ತೀವ್ರ ಯಾತನೆಯನ್ನು ಎತ್ತಿ ತೋರಿಸಲಾಗಿದೆ. ಅವಳು ಎಂದಿಗೂ ವೈದ್ಯಕೀಯ ಆರೈಕೆಯನ್ನು ಪಡೆಯಲಿಲ್ಲ, ಗುರುತಿನ ಚೀಟಿಯನ್ನು ಪಡೆಯಲಿಲ್ಲ ಮತ್ತು ಸಾಮಾನ್ಯ ಜೀವನವನ್ನು ಎಂದಿಗೂ ಅನುಭವಿಸಲಿಲ್ಲ. ಆಕೆಯ ಕೂದಲು, ಹಲ್ಲುಗಳು ಮತ್ತು ಸಾಮಾನ್ಯ ದೈಹಿಕ ಸ್ಥಿತಿಯು ಅಪಾಯಕಾರಿ ಎಂದು ಪರಿಗಣಿಸಲಾದ ಸ್ಥಿತಿಯಲ್ಲಿದೆ ಎಂದು ವಿವರಿಸಲಾಗಿದೆ.

ಮಿರೆಲಾಳ ಬಗ್ಗೆ ಅನೇಕ ಜನರು ತಿಳಿದಿದ್ದರು. ಆಕೆ ದಶಕಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದಳು ಎಂದು ನಂಬಿದ್ದರು. ಆದರೆ ವಾಸ್ತವವು ಇನ್ನೂ ಕಠೋರವಾಗಿದೆ. ಮಿರೆಲಾ ತಮ್ಮ ನಗರವನ್ನು ನಿಜವಾಗಿಯೂ ಎಂದಿಗೂ ನೋಡಿಲ್ಲ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.