Viral News: ಪರೀಕ್ಷೆ ನಿಲ್ಲಿಸಲು 'ಪ್ರಾಂಶುಪಾಲರು ಸತ್ತಿದ್ದಾರೆ' ಎಂಬ ನೊಟೀಸ್ ನೀಡಿದ ವಿದ್ಯಾರ್ಥಿಗಳು; ಮುಂದೇನಾಯ್ತು ಗೊತ್ತೆ?
ಅಕ್ಟೋಬರ್ 15 ಮತ್ತು 16ರಂದು ನಡೆಯಬೇಕಿದ್ದ ನಿರಂತರ ಸಮಗ್ರ ಮೌಲ್ಯಮಾಪನ (ಸಿಸಿಇ) ಪರೀಕ್ಷೆಗಳನ್ನು ಸ್ಥಗಿತಗೊಳಿಸಲು ಸಂಚು ರೂಪಿಸಿದ ಇಬ್ಬರು ಬಿಸಿಎ ವಿದ್ಯಾರ್ಥಿಗಳು ಪ್ರಾಂಶುಪಾಲರು ಸಾವನ್ನಪ್ಪಿದ್ದಾರೆ ಎನ್ನುವ ನಕಲಿ ನೊಟೀಸ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

-

ಭೋಪಾಲ್: ಪರೀಕ್ಷೆಯನ್ನು ಸ್ಥಗಿತಗೊಳಿಸಲು ವಿದ್ಯಾರ್ಥಿಗಳಿಬ್ಬರು ಪ್ರಾಂಶುಪಾಲರು ಸಾವನ್ನಪ್ಪಿದ್ದಾರೆ ಎನ್ನುವ ನಕಲಿ ನೊಟೀಸ್ (Fake death news) ನೀಡಿರುವ ಘಟನೆ ಮಧ್ಯ ಪ್ರದೇಶದಲ್ಲಿ (Madhya Pradesh) ನಡೆದಿದೆ. ಅಕ್ಟೋಬರ್ 15 ಮತ್ತು 16ರಂದು ನಡೆಯಲಿರುವ ನಿರಂತರ ಸಮಗ್ರ ಮೌಲ್ಯಮಾಪನ (Continuous Comprehensive Evaluation exam) ಪರೀಕ್ಷೆಗಳನ್ನು ಸ್ಥಗಿತಗೊಳಿಸಲು ಸಂಚು ರೂಪಿಸಿ ಬಿಸಿಎ ವಿದ್ಯಾರ್ಥಿಗಳಿಬ್ಬರು ಪ್ರಾಂಶುಪಾಲರು ಸಾವನ್ನಪ್ಪಿದ್ದಾರೆ ಎನ್ನುವ ನಕಲಿ ನೊಟೀಸ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಿಬ್ಬರನ್ನು ಬಂಧಿಸಿ ಅವರ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಈ ಇಬ್ಬರು ಬಿಸಿಎ ವಿದ್ಯಾರ್ಥಿಗಳು ಪರೀಕ್ಷೆಯ ಹಿಂದಿನ ದಿನ ಜ್ವರ ಬಂದಿದೆ, ಹೊಟ್ಟೆ ನೋಯುತ್ತಿದೆ ಎನ್ನುವ ನೆಪ ನೀಡಿ ಪರೀಕ್ಷೆಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು. ಆದರೆ ಯಾವುದು ಸಾಧ್ಯವಾಗದೇ ಇದ್ದಾಗ ಪ್ರಾಂಶುಪಾಲರ ಸಾವಿನ ನಕಲಿ ಪೋಸ್ಟರ್ ಶೇರ್ ಮಾಡಿದ್ದಾರೆ.
ಇಂದೋರ್‌ನ ಸರ್ಕಾರಿ ಹೋಳ್ಕರ್ ವಿಜ್ಞಾನ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲ ಡಾ. ಅನಾಮಿಕಾ ಜೈನ್ ಅವರ ನಕಲಿ ಮರಣ ನೊಟೀಸ್ ಅನ್ನು ತಯಾರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ಪ್ರಸಾರ ಮಾಡಿದರು. ನಕಲಿ ಕಾಲೇಜು ಲೆಟರ್‌ಹೆಡ್‌ನಲ್ಲಿ ರಚಿಸಲಾದ ಈ ಪತ್ರವು ಭಾರಿ ವೈರಲ್ ಆಗಿದೆ. ಅನೇಕರು ಪ್ರಾಂಶುಪಾಲರ ಮನೆಗೆ ಭಯ, ಗೊಂದಲದಲ್ಲಿ ಕರೆ ಮಾಡಿದ್ದಾರೆ. ಇನ್ನು ಕೆಲವರು ಸಂತಾಪ ಸೂಚಿಸಲು ಆಗಮಿಸಿದರು.
ಘಟನೆ ವಿವರ
ಅಕ್ಟೋಬರ್ 15 ಮತ್ತು 16 ರಂದು ನಿರಂತರ ಸಮಗ್ರ ಮೌಲ್ಯಮಾಪನ (CCE) ಪರೀಕ್ಷೆಗಳು ನಡೆಯಬೇಕಿತ್ತು. ಇದನ್ನು ಸ್ಥಗಿತಗೊಳಿಸಲು ಬಿಸಿಎಯ ಮೂರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳು ಸಂಚು ರೂಪಿಸಿದ್ದರು. ಮಂಗಳವಾರ ರಾತ್ರಿ 10:15ರ ಸುಮಾರಿಗೆ ಪ್ರಾಂಶುಪಾಲ ಡಾ. ಅನಾಮಿಕಾ ಜೈನ್ ಅವರ ಹಠಾತ್ ನಿಧನದ ಕಾರಣದಿಂದ ಕಾಲೇಜಿನ ಆನ್‌ಲೈನ್ ಪರೀಕ್ಷೆಗಳು ಮತ್ತು ತರಗತಿಗಳನ್ನು ಮುಂದೂಡಲಾಗುತ್ತಿದೆ ಎನ್ನುವ ಸಂದೇಶವನ್ನು ಸಾಮಾಜಿಕ ಮಾಧ್ಯಮಗಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಗೊಂದಲಕ್ಕೆ ಒಳಗಾದ ಅನೇಕರು ರಾತ್ರಿ 10.30ರ ಸುಮಾರಿಗೆ ಡಾ. ಜೈನ್ ಅವರಿಗೆ ಅನೇಕ ಮಂದಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಆಘಾತಕ್ಕೊಳಗಾದ ಪ್ರಾಂಶುಪಾಲರು ಗೊಂದಲಕ್ಕೆ ಒಳಗಾದರು. ಅವರಿಗೆ ಸಾಕಷ್ಟು ಮಂದಿ ಕರೆ ಮಾಡಿದರು. ಕೆಲವು ಪ್ರಾಧ್ಯಾಪಕರು ಅವರ ಮನೆಗೆ ಧಾವಿಸಿದರು. ತಕ್ಷಣವೇ ಡಾ. ಜೈನ್ ಭನ್ವರ್ಕುವಾನ್ ಪೊಲೀಸರಿಗೆ ಔಪಚಾರಿಕ ದೂರು ನೀಡಿದರು. ಇದಾದ ಬಳಿಕ ಕೆಲವೇ ಗಂಟೆಗಳಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ವಿದ್ಯಾರ್ಥಿಗಳಾದ ಮಾಯಾಂಕ್ ಕಚ್ವಾಲ್ ಮತ್ತು ಹಿಮಾಂಶು ಜೈಸ್ವಾಲ್ ಎಂಬವರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಒಬ್ಬ ವಿದ್ಯಾರ್ಥಿ ಎಲ್ಲ ವಾಟ್ಸಾಪ್ ಡೇಟಾವನ್ನು ಅಳಿಸಿ ಹಾಕಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: Tejas Jet: ಬಾನಂಗಳದಲ್ಲಿ ಯಶಸ್ವಿಯಾಗಿ ಹಾರಾಟ ನಡೆಸಿದ ತೇಜಸ್ ಜೆಟ್; ಭಾರತೀಯ ವಾಯುಪಡೆ ಇನ್ನಷ್ಟು ಬಲಿಷ್ಠ
ಆರೋಪಿ ವಿದ್ಯಾರ್ಥಿಗಳ ವಿರುದ್ಧ ವ್ಯಕ್ತಿಯ ಖ್ಯಾತಿಗೆ ಧಕ್ಕೆ ತರುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336(4)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭನ್ವರ್ಕುವಾನ್ ಪೊಲೀಸ್ ಠಾಣಾಧಿಕಾರಿ ರಾಜ್‌ಕುಮಾರ್ ಯಾದವ್ ತಿಳಿಸಿದ್ದಾರೆ.