Viral Video: ಬೆಂಗಳೂರಿಗೆ ಭಾವನಾತ್ಮಕ ವಿದಾಯ ಹೇಳಿದ ವಿದೇಶಿ ಮಹಿಳೆ; ವಿಡಿಯೊ ನೋಡಿ
ಕೆಲವು ದಿನಗಳ ಹಿಂದೆ ನೋಯ್ಡಾದ ಯುವಕನೊಬ್ಬ ಬೆಂಗಳೂರಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಟ್ಟ ಅನುಭವಗಳ ಬಗ್ಗೆ ಹಂಚಿಕೊಂಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ವಿದೇಶಿ ಮಹಿಳೆಯೊಬ್ಬರು ಬೆಂಗಳೂರಿನಲ್ಲಿನ ತಮ್ಮ ಸುಂದರ ಅನುಭವಗಳ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನಗರವನ್ನು ತೊರೆಯುವಾಗ ಭಾವುಕರಾಗಿರುವ ಅವರು ಇದನ್ನು ಸಾಮಾಜಿಕ ಮಾಧ್ಯಮದ ಮೂಲಕ ಹೇಳಿಕೊಂಡಿದ್ದಾರೆ.


ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ (Silicon City Bangalore) ಪ್ರವಾಸ (Foreign tourist) ಬಂದಿದ್ದ ವಿದೇಶಿ ಪ್ರವಾಸಿಗರು ನಗರಕ್ಕೆ ವಿದಾಯ ಹೇಳುವಾಗ ಭಾವುಕರಾಗಿದ್ದಾರೆ. ಇದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬಾರಿ ವೈರಲ್ (Viral Video) ಆಗಿದೆ. ನಗರದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿರುವ ವಿದೇಶಿ ಪ್ರವಾಸಿಗರು ಬೆಂಗಳೂರಿಗೆ ವಿದಾಯ ಹೇಳುವಾಗ ಆಗಿರುವ ನೋವನ್ನು ತಮ್ಮ ಭಾವನಾತ್ಮಕ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅರಿನಾ ಎಂಬ ಮಹಿಳೆ ಹಂಚಿಕೊಂಡಿರುವ ಈ ವಿಡಿಯೊಗೆ ಹಲವಾರು ಮಂದಿ ಹೃದಯಸ್ಪರ್ಶಿಯಾಗಿ ಕಮೆಂಟ್ ಕೂಡ ಮಾಡಿದ್ದಾರೆ.
ಅರಿನಾ ಬೆಂಗಳೂರಿನಿಂದ ಹೊರಡಲು ಸಿದ್ಧವಾಗುವ ಕಣ್ಣೀರು ಒರೆಸಿಕೊಳ್ಳುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಇದನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ''ನಾನು ನನ್ನ ದೇಶವನ್ನು ಬಿಟ್ಟು ಬರುವಾಗ ಎಂದಿಗೂ ಅಳಲಿಲ್ಲ...'' ಎಂದಿದ್ದಾರೆ.
ಅನಂತರ ಅರಿನಾ ನಗರದಲ್ಲಿ 15 ದಿನಗಳ ವಾಸ್ತವ್ಯದ ಕುರಿತು ಹೇಳಿಕೊಂಡಿದ್ದಾರೆ. ಉತ್ಸಾಹಭರಿತ ಮಾರುಕಟ್ಟೆಗಳು, ಶಾಂತ ನೆರೆಹೊರೆ, ಇಲ್ಲಿನ ಸಾಂಸ್ಕೃತಿಕ ವೈವಿಧ್ಯ ಬಗ್ಗೆ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.
''ನಾನು ಬೆಂಗಳೂರಿನಲ್ಲಿ 15 ದಿನಗಳನ್ನು ಕಳೆದಿದ್ದೇನೆ. ಇದು ನನ್ನ ಮೂರನೇ ಭಾರತ ಭೇಟಿ. ನಾನು ಈ ದೇಶವನ್ನು ಪ್ರೀತಿಸುತ್ತೇನೆ. ಭಾರತ ತುಂಬಾ ಅದ್ಭುತವಾಗಿದೆ. ದೈವಿಕ ಶಕ್ತಿಯನ್ನು ಹೊಂದಿದೆ'' ಎಂದು ತಿಳಿಸಿರುವ ಅವರು ಬೆಂಗಳೂರಿನ ಬಗ್ಗೆ ಮಾತನಾಡುತ್ತಾ, ''ಬೆಂಗಳೂರಿನಲ್ಲಿ ಹಲವು ಧರ್ಮಗಳನ್ನು ಅನುಸರಿಸುವ ಜನರಿದ್ದಾರೆ. ಇಲ್ಲಿ ನನಗೆ ಇಷ್ಟವಾದದ್ದು ವಾಕಿಂಗ್ ಮಅಡುವುದು ಮತ್ತು ವಸತಿ ಪ್ರದೇಶಗಳನ್ನು ನೋಡುವುದು. ಮನೆಗಳ ವಿಷಯದಲ್ಲಿ ಭಾರತೀಯರು ಉತ್ತಮ ಅಭಿರುಚಿಯನ್ನು ಹೊಂದಿದ್ದಾರೆ ಎಂದು ನಾನು ಹೇಳಲೇಬೇಕುʼʼ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ನಗರದ ಸುತ್ತಲೂ ನಡೆಯುವುದು ಮತ್ತು ಅದರ ಪ್ರತಿಯೊಂದು ಮೂಲೆಯನ್ನು ಅನ್ವೇಷಿಸುವುದು ತುಂಬಾ ಆಹ್ಲಾದಕರ ಮತ್ತು ಆಸಕ್ತಿದಾಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ʼʼನಾನು ಇಲ್ಲಿ ಒಂದು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೋಗಿದ್ದೆ. ಅದು ಅದ್ಭುತ, ಭಾವನಾತ್ಮಕವಾಗಿತ್ತು. ನನಗೆ ಮರಳುವ ಮನಸ್ಸಾಗಲಿಲ್ಲʼʼ ಎಂದಿರುವ ಅವರು, ʼʼಬೆಂಗಳೂರಿನ ವಿಮಾನ ನಿಲ್ದಾಣ ಸುಂದರವಾಗಿದೆ. ಮುಂದಿನ ಭೇಟಿಯವರೆಗೆ ಭಾರತಕ್ಕೆ ನಾನು ವಿದಾಯ ಹೇಳುತ್ತೇನೆʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಬೀದಿ ಬದಿ ರೊಟ್ಟಿ ತಿಂತೀರಾ? ...... ಹಾಗಾದ್ರೆ ಈ ವಿಡಿಯೋ ನೋಡಿ
ಅವರು ತಮ್ಮ ಸ್ಟೋರಿಗೆ ಬೆಂಗಳೂರು: ಭಾಗ 3 ಎನ್ನುವ ಶೀರ್ಷಿಕೆ ನೀಡಿದ್ದಾರೆ. ಅವರ ಈ ವಿಡಿಯೊಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಒಬ್ಬರು ಬೆಂಗಳೂರು ಅತ್ಯುತ್ತಮ ನಗರ. ಇದು ಹಸಿರಿನಿಂದ ಕೂಡಿದೆ ಎಂದು ಹೇಳಿದ್ದರೆ ಇನ್ನೊಬ್ಬರು ಉತ್ತರದವರು ನಮ್ಮ ನಗರದ ಸಂಸ್ಕೃತಿ ಮತ್ತು ಭಾಷೆಯನ್ನು ದೂಷಿಸುವ ಬದಲು ನಿಮ್ಮಿಂದ ಕಲಿಯಬೇಕು. ನೀವು ಕನ್ನಡವನ್ನು ಅರ್ಥ ಮಾಡಿಕೊಂಡ ಅನಂತರ ಮತ್ತು ಕರ್ನಾಟಕದ ಮೇಲಿನ ಪ್ರೀತಿಯನ್ನು ಅನುಭವಿಸಿದ ಬಳಿಕ ಈ ನಗರ ಏಕೆ ರತ್ನ ಎಂದು ತಿಳಿಯಿತು ಎಂದಿದ್ದಾರೆ.
ಇನ್ನೊಬ್ಬರು ಬೆಂಗಳೂರನ್ನು ಕೇವಲ ಒಂದು ನಗರವಲ್ಲ, ಬದಲಾಗಿ ಒಂದು ಭಾವನೆ ಎಂದು ಹೇಳಿದ್ದಾರೆ. ಹೀಗೆ ನೂರಾರು ಕಮೆಂಟ್‌ಗಳು ಅರಿನಾ ಅವರ ಸ್ಟೋರಿಗೆ ಬಂದಿರುವುದು ಅವರನ್ನು ಮತ್ತಷ್ಟು ಭಾವುಕರನ್ನಾಗಿಸಿತು ಎಂದು ಹೇಳಿದ್ದಾರೆ.