Harish Kera Column: ಜಗದ ಜೀವಿಗಳ ಸಖ ಅಟೆನ್ ಬರೋ
1926 ಮೇ 8 ರಂದು ಇಂಗ್ಲೆಂಡ್‌ನಲ್ಲಿ ಜನಿಸಿದ ಡೇವಿಡ್ ಆಂಗ್ಲರ ಕ್ಲಾಸಿಕ್ ಸಭ್ಯತೆಯನ್ನು ಮನುಷ್ಯರಲ್ಲೂ ಪ್ರಾಣಿಗಳ ಜೊತೆಗೂ ರೂಢಿಸಿಕೊಂಡವರು. ಕಲಿತದ್ದೆಲ್ಲ ಕೇಂಬ್ರಿಜ್‌ನಲ್ಲಿ. ನೈಸರ್ಗಿಕ ವಿಜ್ಞಾನದ ಅಧ್ಯಯನ. 1947ರಿಂದ 1949ರವರೆಗೆ ರಾಯಲ್ ನೇವಿಯಲ್ಲಿ ಸೇವೆ. ಆದರೆ ಮನಸ್ಸೆಲ್ಲ ಹಸಿರು ಕಾಡು ವನ್ಯಜೀವಿಗಳತ್ತ. ನಂತರ ಬಿಬಿಸಿಗೆ ಸೇರಿ ಏಳು ದಶಕ ಪ್ರಸಾರ ವೃತ್ತಿಜೀವನ.
-
“ನಾವು ಪ್ರಕೃತಿಯಿಂದ ಬೇರೆಯಲ್ಲ, ಅದರ ಒಂದು ಭಾಗ. ನಿಸರ್ಗ ಅಚ್ಚರಿಯ ಮತ್ತು ಉತ್ಸಾಹದ ದೊಡ್ಡ ಮೂಲ. ಅದು ಕಣ್ಣಿಗೆ ಕಾಣುವ ಅತ್ಯಂತ ಸುಂದರ ಲೋಕ. ಜ್ಞಾನ ಮತ್ತು ಚಿಂತನೆಗೆ ದೊಡ್ಡ ಪ್ರೇರಣೆ. ಬದುಕನ್ನು ಜೀವಿಸುವಂತಾ ಗಿಸುವ ಅನೇಕ ಸುಂದರ ಸಂಗತಿಗಳ ಮೂಲವೇ ಪ್ರಕೃತಿ" ಎಂದಿದ್ದಾನೆ ಡೇವಿಡ್ ಅಟೆನ್‌ಬರೋ. ಪರಿಸರವನ್ನು, ಪ್ರಕೃತಿಯನ್ನು, ವನ್ಯಜೀವಿಗಳನ್ನು ಚಿತ್ರಿಸುವುದೇ ತನ್ನ ಬದುಕು ಎಂದು ಪರಿಭಾವಿಸಿ, ಜೀವನವಿಡೀ ಅದರಲ್ಲೇ ತೊಡಗಿಕೊಂಡು, ಈ ಭೂಮಿಯಲ್ಲಿ ಅದೆಷ್ಟೋ ಜನರನ್ನು ಪರಿಸರಪ್ರೇಮಿಗಳನ್ನಾಗಿ ಪರಿವರ್ತಿಸಿದ ಈ ಖ್ಯಾತ ವನ್ಯಜೀವಿ ಛಾಯಚಿತ್ರಗಾರನಿಗೆ ಈಗ ನೂರು ವರ್ಷ ತುಂಬಿದೆ!
ನೀವೇನಾದರೂ ಕರ್ನಾಟಕ ಅರಣ್ಯ ಇಲಾಖೆ ತಯಾರಿಸಿದ ‘ವೈಲ್ಡ್ ಕರ್ನಾಟಕ’ ಸಾಕ್ಷ್ಯ ಚಿತ್ರದ ಇಂಗ್ಲಿಷ್ ಆವೃತ್ತಿ ನೋಡಿದ್ದರೆ, ಅದರ ಹಿನ್ನೆಲೆಯಲ್ಲಿರುವ ನಿರೂಪಣೆಯ ಧ್ವನಿಯನ್ನು ಖಂಡಿತ ಮರೆಯಲಾರಿರಿ - ಅವರು ಒನ್ ಆಂಡ್ ಓನ್ಲೀ ಡೇವಿಡ್ ಅಟೆನ್ ಬರೋ. ಜಗತ್ತು ಈ ವಾರ ಈ ಮನುಷ್ಯನನ್ನು ಮನ ತುಂಬಿ ಕೊಂಡಾಡುತ್ತಿದೆ.
ಜೀವವೈವಿಧ್ಯವನ್ನೂ ಕಾಡನ್ನೂ ಬದುಕನ್ನೂ ಪ್ರೀತಿಸುವ ಎಲ್ಲರ ಹೃದಯಕ್ಕೆ ಖುಷಿಯ ಊಟೆಯನ್ನು ಹಲವು ರೀತಿ ಕೊಡಮಾಡಿದ ಈತನಿಗೆ ಮೊನ್ನೆ ನೂರು ವರ್ಷ ತುಂಬಿತು. ‘ವೈಲ್ಡ್ ಕರ್ನಾಟಕ’ಕ್ಕೆ’ ತನ್ನ ಸಮುದ್ರದ ಮೊರೆತದಂಥ ಧ್ವನಿ ನೀಡಿದಾಗ ಅವರಿಗೆ 94 ವರ್ಷ.
ವನ್ಯಜೀವಿ, ಪರಿಸರ, ಭೂಗ್ರಹ, ಜೀವಜಾತಿಗಳ ಕುರಿತ ನೂರಾರು ಸಾಕ್ಷ್ಯಚಿತ್ರಗಳನ್ನೂ ವಿಡಿಯೋಗಳನ್ನೂ ಮಾಡಿ ನಮ್ಮ ಅರಿವು ಹೆಚ್ಚಿಸಿದ ಡೇವಿಡ್, ಡಿಸ್ಕವರಿ, ನ್ಯಾಷನಲ್ ಜಿಯೊಗ್ರಾಫಿಕ್, ಬಿಬಿಸಿಗಳಿಗೆಲ್ಲ ಅಚ್ಚುಮೆಚ್ಚು. ನೀವು ಇದೊಂದು ವಿಡಿಯೋವನ್ನು ಮಿಸ್ ಮಾಡಿರಲು ಸಾಧ್ಯವೇ ಇಲ್ಲ- ಈಗಷ್ಟೇ ಮೊಟ್ಟೆಯೊಡೆದು ಹೊರ ಬಂದ ಸಮುದ್ರ ಇಗುವಾನಾದ ಮರಿಗಳನ್ನು ನೂರಾರು ಹಾವುಗಳು ಸಾಮೂಹಿಕವಾಗಿ ಬೆನ್ನಟ್ಟಿ ಬೇಟೆ ಯಾಡುವ ದೃಶ್ಯ.
ಇದನ್ನೂ ಓದಿ: Hari Paraak Column: 60ಎಂಎಲ್ ಕುಡಿಯುವವನು: ಸೀನಿಯರ್ ಸಿಟಿಜನ್
ಮೆಲ್ಲನೆ ತತ್ತಿಯೊಡೆದು ಕಣ್ಬಿಡುವ ಮರಿ, ಸುತ್ತಮುತ್ತ ಚಲನೆಯನ್ನೇ ಗ್ರಹಿಸಿ ಬೆನ್ನಟ್ಟುವ ಹಾವುಗಳು, ಮರಳು ದಿಬ್ಬಗಳು ಮತ್ತು ಬಂಡೆಗಳ ನಡುವೆ ರಣಭೀಕರ ಚೇಸ್ ಇದೆಲ್ಲ ಒಮ್ಮೆ ನೋಡಿದರೆ ಮರೆಯಲು ಸಾಧ್ಯವೇ ಇಲ್ಲದಂತೆ ಮೈ ರೋಮಾಂಚನಗೊಳಿಸುತ್ತದೆ.
ಅದು ಡೇವಿಡ್ ‘ಬಿಬಿಸಿ ಅರ್ತ್’ಗಾಗಿ ಚಿತ್ರಿಸಿದ ‘ಪ್ಲಾನೆಟ್ ಅರ್ತ್’ ಸರಣಿಯ ‘ಐಲ್ಯಾಂಡ್ಸ್ ಎಪಿಸೋಡ್’ನ ಒಂದು ತುಣುಕು. ಹಾಲಿವುಡ್ ಫಿಲಂಗಳಲ್ಲಿ ಕೂಡ ಇಂಥ ಚೇಸಿಂಗ್ ದೃಶ್ಯ ಇರಲು ಸಾಧ್ಯವಿಲ್ಲ ಎಂಬುದು ಇದನ್ನು ನೋಡಿದವರ ಅಂಬೋಣ.
1926 ಮೇ 8 ರಂದು ಇಂಗ್ಲೆಂಡ್‌ನಲ್ಲಿ ಜನಿಸಿದ ಡೇವಿಡ್ ಆಂಗ್ಲರ ಕ್ಲಾಸಿಕ್ ಸಭ್ಯತೆಯನ್ನು ಮನುಷ್ಯರಲ್ಲೂ ಪ್ರಾಣಿಗಳ ಜೊತೆಗೂ ರೂಢಿಸಿಕೊಂಡವರು. ಕಲಿತದ್ದೆಲ್ಲ ಕೇಂಬ್ರಿಜ್‌ನಲ್ಲಿ. ನೈಸರ್ಗಿಕ ವಿಜ್ಞಾನದ ಅಧ್ಯಯನ. 1947ರಿಂದ 1949ರವರೆಗೆ ರಾಯಲ್ ನೇವಿಯಲ್ಲಿ ಸೇವೆ. ಆದರೆ ಮನಸ್ಸೆಲ್ಲ ಹಸಿರು ಕಾಡು ವನ್ಯಜೀವಿಗಳತ್ತ. ನಂತರ ಬಿಬಿಸಿಗೆ ಸೇರಿ ಏಳು ದಶಕ ಪ್ರಸಾರ ವೃತ್ತಿಜೀವನ.
ಮನುಷ್ಯ ಹೊರತುಪಡಿಸಿ ಅನ್ಯಜೀವಿಗಳ ಬದುಕಿನ ವೈಖರಿ ಅವರನ್ನು ಎಷ್ಟು ಒಳಗೊಂಡಿತ್ತು ಅಂದರೆ, ಇತ್ತೀಚಿನ ವರ್ಷಗಳಲ್ಲಿ ಲಂಡನ್‌ನಂಥ ದಟ್ಟ ಪಟ್ಟಣದ ನಡುವೆಯೇ ಇದ್ದ ಕಾಡುಪ್ರಾಣಿಗಳ ಬಗ್ಗೆಯೂ ಬರೆದಿದ್ದ ಚಿತ್ರೀಕರಿಸಿದ್ದ- ನಗರದ ಜಿಂಕೆ ಗಳಿಂದ ಹಿಡಿದು ಬೀದಿಯಲ್ಲೇ ಗೂಡು ಕಟ್ಟುವ ಪೆರೆಗ್ರಿನ್ ಫಾಲ್ಕನ್'ಗಳವರೆಗೆ.
ಲೈಫ್ ಆನ್ ಅರ್ತ್, ದಿ ಬ್ಲೂ ಪ್ಲಾನೆಟ್, ಪ್ಲಾನೆಟ್ ಅರ್ತ್, ಫ್ರೋಜನ್ ಪ್ಲಾನೆಟ್, ಅವರ್ ಪ್ಲಾನೆಟ್, ಗೊರಿಲ್ಲಾ ಸ್ಟೋರಿ, ಓಶಿಯನ್ ಮೊದಲಾದವು ಅವರ ಪ್ರಖ್ಯಾತ ಡಾಕ್ಯು ಮೆಂಟರಿಗಳು. ಆಸಕ್ತರಿಗೆ ಅವೆಲ್ಲವೂ ಯುಟ್ಯೂಬ್ʼನಲ್ಲೂ, ನೆಟ್‌ಫ್ಲಿಕ್ಸ್‌ನಂಥ ಒಟಿಟಿ ಗಳಲ್ಲೂ ಲಭ್ಯವಿವೆ.
ಅಟೆನ್‌ಬರೋ ಪ್ರಾಣಿಗಳ ವರ್ತನೆಯನ್ನು ಚಿತ್ರಿಸುವ ಬಗೆಯನ್ನು ನೋಡಿಯೇ ತಿಳಿಯ ಬೇಕು. ‘ನೈಟ್ ಆನ್ ಅತ್’ ಎಂಬ ಸಾಕ್ಷ್ಯಚಿತ್ರ ಸರಣಿಯಲ್ಲಿ ಅವರು ರಾತ್ರಿ ವೇಳೆ ಪ್ರಾಣಿಗಳ ಚಲನವಲನ, ಬದುಕು ಹೇಗಿರುತ್ತದೆ ಎಂಬುದನ್ನು ದಂಗುಬಡಿಸುವಂಥ ಚಿತ್ರಿಕೆಗಳ ಮೂಲಕ ಕಾಣಿಸುತ್ತಾರೆ. ವನ್ಯಮೃಗಗಳ ಹೆಜ್ಜೆ ಸಪ್ಪಳ, ಸಣ್ಣ ಕೂಗು, ಮೆತ್ತಗಿನ ಚಲನೆ, ಬಿಸಿಯುಸಿರು ಎಲ್ಲವೂ ನಮ್ಮನ್ನು ಬಲು ಹತ್ತಿರದಿಂದ ತಾಕುವಂತೆ ಮಾಡುವ ಅವರ ದೃಶ್ಯೀಕರಣದ ವೈಖರಿಯೇ ಅನನ್ಯ.
ಲ್ಯೂಕಾದಿಂದ ಇಂದಿನ ತನಕ
‘ಲೈಫ್ ಆನ್ ಅವರ್ ಪ್ಲಾನೆಟ್’ ಎಂಬ ರೋಮಾಂಚನಕಾರಿ ಫಿಲಂ ಸರಣಿ ನೆಟ್ʼಫ್ಲಿಕ್ಸ್ ನಲ್ಲಿದೆ. ಭೂಮಿಯ ಮೇಲೆ ಲ್ಯೂಕಾ ಎಂಬ ಹೆಸರಿನ ಮೊತ್ತಮೊದಲ ಜೀವಕೋಶ ಸೃಷ್ಟಿ ಯಾದಂದಿನಿಂದ ಹಿಡಿದು ಈ ಕ್ಷಣದವರೆಗೂ ಜೀವಜಾಲ ಬೆಳೆದು ಬಂದ ಬಗೆಯನ್ನು ನೀವದರಲ್ಲಿ ಕಾಣಬಲ್ಲಿರಿ. ಅದೇನೂ ಬೋರಿಂಗ್ ಜೀವಶಾಸ್ತ್ರ ವಿವರಣೆಯಲ್ಲ.
ಒಂದು ಪತ್ತೇದಾರಿ ಸಿನಿಮಾದಂತೆ ನೋಡಿಸಿಕೊಂಡು ಹೋಗುತ್ತದೆ. ಅಟೆನ್‌ಬರೋನ ಸ್ಕ್ರಿಪ್ಟ್ ಹಾಗೂ ಚಿತ್ರಿಕೆಗಳು ಮಾರ್ಗನ್ ಫ್ರೀಮನ್‌ನ ಧ್ವನಿಯಲ್ಲಿ ಅಷ್ಟು ಜೀವಂತ. ‘ಇದುವರೆಗೂ ಭೂಮಿಯ ಮೇಲೆ ಹುಟ್ಟಿ ಬೆಳೆದ ಜೀವಜಾತಿಗಳಲ್ಲಿ ಇಂದು ನಮಗೆ ಕಂಡು ಬರುವದು 1 ಶೇಕಡ ಮಾತ್ರ, ಉಳಿದ 99 ಶೇಕಡ ನಾಶವಾಗಿದೆ. ಐದು ಸಾಮೂಹಿಕ ಜೀವನಾಶಗಳು ಈ ಪ್ರಪಂಚದಲ್ಲಿ ಆಗಿಹೋಗಿವೆ’ ಎಂದು ನಿರುದ್ವಿಗ್ನವಾಗಿ ಅವರು ನಿರೂಪಿಸುತ್ತಾರೆ. ಡೈನೋಸಾರ್‌ಗಳ ಹೆಜ್ಜೆ ಸದ್ದು, ಬೇಟೆಯಾಡುವ ಪರಿ, ಆರ್ತನಾದ ಮತ್ತು ಅಬ್ಬರ ಎಲ್ಲವೂ ನಿಮ್ಮನ್ನು ಅಲುಗಾಡಿಸುತ್ತವೆ.
ಮನೆಯಲ್ಲೇ ಪುಟ್ಟ ಮ್ಯೂಸಿಯಂ
ಚಿಕ್ಕವನಾಗಿದ್ದಾಗಲೇ ಡೇವಿಡ್‌ಗೆ ಕಲ್ಲುಗಳು, ಹಕ್ಕಿಗಳ ಮೊಟ್ಟೆಗಳು, ಪುರಾತನ ಜೀವಿಗಳ ಅವಶೇಷಗಳನ್ನು ಸಂಗ್ರಹಿಸುವ ಹುಚ್ಚು. ಮನೆಯೊಳಗೆ ಸಣ್ಣ ಮ್ಯೂಸಿಯಂ ಮಾಡಿ ಕೊಂಡಿದ್ದ. ಒಮ್ಮೆ ಅವನು ತಂಗಿಯ ಆಟದ ಗೊಂಬೆಗಳ ಜಾಗದಲ್ಲೇ ಕಪ್ಪೆಗಳನ್ನು ಇಟ್ಟುಬಿಟ್ಟಿದ್ದ. ಕಾಡುಜೀವಿಗಳ ಚಿತ್ರೀಕರಣ ಮಾಡುವಾಗ ಅನೇಕ ಅಪಾಯ ಎದುರಿಸಿ ದ್ದಾನೆ. ಒಮ್ಮೆ ವಿಷಕಾರಿ ಹಾವು ಅವನ ತುಂಬ ಹತ್ತಿರ ಬಂದಿತ್ತು. ಕ್ಯಾಮೆರಾ ಮುಂದೆ ಶಾಂತವಾಗಿ ನಿಂತ. “ಆ ಕ್ಷಣದಲ್ಲಿ ಹೃದಯ ಬಡಿತ ಹೆಚ್ಚಿತ್ತು" ಎಂದು ಹೇಳಿದ್ದ.
ಅಂಟಾರ್ಟಿಕಾದಲ್ಲಿ ಚಿತ್ರೀಕರಣ ಮಾಡುವಾಗ ಭಾರಿ ಚಳಿ ಎದುರಿಸಬೇಕಾಯಿತು. ಕೆಲವೊಮ್ಮೆ ಕ್ಯಾಮೆರಾಗಳೇ ಕೆಲಸ ಮಾಡುತ್ತಿರಲಿಲ್ಲ. ಆದರೂ ಅವನು ಪೆಂಗ್ವಿನ್‌ಗಳ ಜೀವನವನ್ನು ಅದ್ಭುತವಾಗಿ ಚಿತ್ರೀಕರಿಸಿದನು. ಪೆಂಗ್ವಿನ್‌ಗಳು ಅವನ ಬೂಟಿನ ಲೇಸ್ ಗಳನ್ನು ಕಚ್ಚುತ್ತಾ ಆಟವಾಡುತ್ತಿದ್ದವು.
1960ರ ದಶಕದಲ್ಲಿ ಟಿವಿಗಳು ಕಪ್ಪು-ಬಿಳುಪಿನಿಂದ ಬಣ್ಣಕ್ಕೆ ತಿರುಗಿದವು. ಡೇವಿಡ್ ಮೊದಲ ಬಾರಿಗೆ ಪ್ರಕೃತಿಯನ್ನು ಅದರೆಲ್ಲ ವರ್ಣವೈಭವದೊಂದಿಗೆ ತೋರಿಸಿದ. ಜನ ಮೊದಲ ಬಾರಿಗೆ ಕಾಡಿನ, ಹಸಿರಿನ, ಜೀವಜಾಲದ ನಿಜವಾದ ಬಣ್ಣಗಳನ್ನು ಟಿವಿಯಲ್ಲಿ ನೋಡಿ ಆಶ್ಚರ್ಯಪಟ್ಟರು.
ಗೊರಿಲ್ಲಾ ತೋರಿದ ಪ್ರೀತಿ
ಯಾವ ಕಾಡು ಪ್ರಾಣಿಯೂ ಮನುಷ್ಯನನ್ನಾಗಲಿ ಬೇರೊಂದು ಜೀವಿಯನ್ನಾಗಲಿ ತನ್ನ ಕುಟುಂಬದ ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ಆದರೆ ಗೊರಿಲ್ಲಾಗಳು ಆತನ ಜೊತೆ ತುಂಬ ಪ್ರೀತಿಯಿಂದ ಎಂಬಂತೆ ವರ್ತಿಸಿದ ಒಂದು ಘಟನೆ ದಾಖಲಾಗಿದೆ. ಆಗ ಆತ ರುವಾಂಡದ ಕಾಡಿನಲ್ಲಿ ಗೊರಿಲ್ಲಾಗಳ ಕುಟುಂಬವೊಂದನ್ನು ಚಿತ್ರೀಕರಿಸುತ್ತಿದ್ದ. ಚಿತ್ರೀಕರಿಸುತ್ತ ತುಸು ಹತ್ತಿರ ಹೋದ. ಇದ್ದಕ್ಕಿದ್ದಂತೆ ಎರಡು ಗೊರಿಲ್ಲಾ ಮರಿಗಳು ಆತನ ಬಳಿ ಬಂದು ನೆಗೆದು, ಅವನ ತೊಡೆಯ ಮೇಲೇ ಕುಳಿತು ಬಹಳ ಕಾಲದ ಸಖನೋ ಎಂಬಂತೆ ಉರುಳಾಡ ತೊಡಗಿದವು.
ಡೇವಿಡ್ ಮತ್ತು ಇಡೀ ಚಿತ್ರೀಕರಣ ತಂಡ ಸ್ತಂಭೀಭೂತವಾಯಿತು. ಪಕ್ಕದಲ್ಲೇ ಇದ್ದ ತಾಯಿ ಗೊರಿಲ್ಲಾ ಶಾಂತವಾಗಿಯೇ ಇತ್ತು. ತಾಯಿ ಏನು ಮಾಡುತ್ತದೋ ಎಂದು ತುಸು ಆತಂಕದಿಂದ ಅದರತ್ತ ನೋಡಿದ ಡೇವಿಡ್ ತಲೆಯನ್ನು ಒಂದು ಬಲಿಷ್ಠವಾದ ಕಪ್ಪು ಹಸ್ತ ತನ್ನ ಕಡೆ ತಿರುಗಿಸಿಕೊಂಡಿತು.
ಡೇವಿಡ್‌ನ ಬಾಯಿಯೊಳಗೆ ತನ್ನ ಒಂದು ಬೆರಳನ್ನು ಹಾಕಿ ಪರಿಶೀಲಿಸಿತು. ಅದು ಗೊರಿಲ್ಲಾಗಳು ತಮ್ಮ ಆಪ್ತತೆಯನ್ನು ಪ್ರದರ್ಶಿಸುವ ರೀತಿ. ಡೇವಿಡ್ ಉಮ್ಮಳಿಸುವ ಭಾವ ಗಳೊಂದಿಗೆ ಮೌನವಾಗಿ ಕುಳಿತಿದ್ದ. ಮಾಡಿಕೊಂಡಿದ್ದ ಸ್ಕ್ರಿಪ್ಟ್ ಎಲ್ಲ ಮರೆತೇ ಹೋಗಿತ್ತು.
ಹೊಸದೊಂದೇ ಭಾವುಕ ಲೋಕ ತೆರೆದುಕೊಂಡಿತ್ತು. “ಆ ಕ್ಷಣದಲ್ಲಿ, ನಾವೂ ಅವುಗಳೂ ಬೇರೆ ಜೀವಿಗಳಲ್ಲ ಅನ್ನಿಸಿತು" ಎಂದು ಡೇವಿಡ್ ನಂತರ ಹೇಳಿದ. ಡೇವಿಡ್ ಕಾಡುಪ್ರಾಣಿಗಳ ಜೊತೆಗೆ ಎಷ್ಟು ಶಾಂತವಾಗಿ, ಹೆದರಿಕೆಯಿಲ್ಲದೆ ಬೆರೆಯುತ್ತಿದ್ದ ಎಂಬ ಬಗ್ಗೆ ಕತೆಗಳೇ ಇವೆ. ನ್ಯೂ ಗಿನಿಯಾದ ಕಾಡಿನಲ್ಲಿ ಬರ್ಡ್ ಆಫ್ ಪ್ಯಾರಡೈಸ್ ಎಂಬ ವಿಚಿತ್ರ ಹಕ್ಕಿಯನ್ನು ಚಿತ್ರೀಕರಿಸುತ್ತಿದ್ದ. ಈ ಹಕ್ಕಿ ಹೆಣ್ಣನ್ನು ಆಕರ್ಷಿಸಲು ವಿಚಿತ್ರ ನೃತ್ಯ ಮಾಡುತ್ತದೆ.
ಸಾಮಾನ್ಯವಾಗಿ ಹೆಣ್ಣು ಹಕ್ಕಿ ಬಿಟ್ಟು ಬೇರೆ ಯಾರಿಗೂ ಈ ನೃತ್ಯ ಕಾಣಿಸದು. ಆದರೆ ಒಂದು ಹಕ್ಕಿ ಡೇವಿಡ್ ಮುಂದೆಯೇ ಕುಣಿಯಲು ಶುರುಮಾಡಿತು. “ಅದು ನನ್ನನ್ನೇ ಇಂಪ್ರೆಸ್ ಮಾಡಲು ಬಂದಂತೆ ಕಾಣುತ್ತಿತ್ತು" ಎಂದ. ದಕ್ಷಿಣ ಅಮೆರಿಕಾದ ಕಾಡಿನಲ್ಲಿ ಸ್ಲಾತ್ ಎಂಬ ಸೋಮಾರಿ ಪ್ರಾಣಿಯಿದೆ. ಅದು ಕೆಲವೊಮ್ಮೆ ಮರದಲ್ಲಿ ಕುಳಿತರೆ ವಾರಗಟ್ಟಲೆ ಅಲ್ಲಾಡು ವುದಿಲ್ಲ. ಇಂಥ ಒಂದು ಸ್ಲಾತ್ ಒಮ್ಮೆ ಇವನ ಕೈ ಹಿಡಿದು ಬಹಳ ಹೊತ್ತು ಬಿಡಲೇ ಇಲ್ಲ. ಇಡೀ ಚಿತ್ರತಂಡ ಅದು ಕೈಬಿಡಲು ಗಂಟೆಗಟ್ಟಲೆ ನಗುತ್ತಾ ಕಾಯಬೇಕಾಯ್ತು.
ಆಫ್ರಿಕಾದಲ್ಲಿ ಚಿತ್ರೀಕರಣ ಮಾಡುವಾಗ ಒಂದು ತುಂಟ ಕಪಿ ಅವರ ಮೈಕ್ರೋಫೋನ್ ಹಿಡಿದು ಓಡಿಬಿಟ್ಟಿತು. ಇಂಡೋನೇಷ್ಯಾದಲ್ಲಿ ಕೊಮೊಡೋ ಡ್ರಾಗನ್ ಎಂಬ ಜಗತ್ತಿನ ಅತಿ ದೊಡ್ಡ ಹಲ್ಲಿಹಾವು, ಇವನ ತುಂಬ ಹತ್ತಿರಕ್ಕೆ ಬಂದಾಗ, ಎಲ್ಲರೂ ಸ್ವಲ್ಪ ಹೆದರಿದರು.
ಆದರೆ ಡೇವಿಡ್ ಶಾಂತವಾಗಿ ನಿಂತಿದ್ದರು. “ಅದರ ಕಣ್ಣುಗಳಲ್ಲಿ ಪುರಾತನ ಜಗತ್ತಿನ ಹೊಳಪು ಕಾಣಿಸಿತು" ಎಂದನಾತ! ಅದಕ್ಕೆ ಕಾರಣ ಅದು ಬಹಳ ಪುರಾತನ ಜೀವಿ. ತಿಮಿಂಗಿ ಲದ ಬಹಳ ನಿಕಟವಾಗಿ ಹಾದು ಹೋದಾಗ, ಅದು ಜಲಪಾತದಂತೆ ನೀರನ್ನು ಚಿಮ್ಮಿಸಿ ದಾಗ, ವಿಷಕಾರಿ ದೊಡ್ಡ ಜೇಡವನ್ನು ಚಿತ್ರೀಕರಿಸಲು ಅದನ್ನು ಕೈ ಮೇಲೆ ಹಿಡಿದಾಗ ಕೂಡ ಡೇವಿಡ್ ಶಾಂತನಾಗಿಯೇ ಇದ್ದನಂತೆ.
ಡೇವಿಡ್ ಅವನ ಸಹೋದರ ರಿಚರ್ಡ್ ಅಟೆನ್‌ಬರೋನಂತೆ (ಇವನನ್ನು ನೀವು ‘ಜುರಾಸಿಕ್ ಪಾರ್ಕ್’ನಲ್ಲಿ ನೋಡಿದ್ದೀರಿ) ಸಿನಿಮಾ ನಟ ಹಾಗೂ ನಿರ್ದೇಶಕ ಆಗುವುದಿತ್ತು. ಆದರೆ ಡೇವಿಡ್‌ನ ಹಲ್ಲು ಮುಂದಕ್ಕಿದೆ ಎಂಬ ಕಾರಣಕ್ಕೆ ನಟನಾಗುವುದು ತಪ್ಪಿಹೋಯಿತಂತೆ!
ಅದರಿಂದ ವೈಲ್ಡ್‌ಲೈಫ್ ಚಿತ್ರೀಕರಣಕ್ಕೆ ಒಳ್ಳೆಯದೇ ಆಯಿತು. ಇವನ ಮೇಲಿರುವ ಒಂದೇ ಟೀಕೆ ಎಂದರೆ, ಭೂಮಿಯನ್ನು ಸುಂದರವಾಗಿ ತೋರಿಸಿದಷ್ಟು, ಅದರ ಮೇಲೆ ಮಾನವ ರಿಂದ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ತೋರಿಸಿಲ್ಲ ಎಂದು. 2020ರಲ್ಲಿ ಬಿಡುಗಡೆಯಾದ ‘ಎ ಲೈಫ್ ಆನ್ ಅವರ್ ಪ್ಲಾನೆಟ್’ ಚಿತ್ರದಲ್ಲಿ ಅದನ್ನೂ ಡೇವಿಡ್ ಮಾಡಿದ್ದಾನೆ. ಅಲ್ಲಿ ಆತ ಕೇವಲ ಸಮಸ್ಯೆಗಳನ್ನೇ ಹೇಳದೇ, ಅವುಗಳಿಗೆ ಪರಿಹಾರಗಳನ್ನೂ ವಿವರಿಸಿದ. ಪ್ರಕೃತಿ ಎದುರಿಸುತ್ತಿರುವ ಎರಡು ದೊಡ್ಡ ಸಂಕಟಗಳಾದ ಹವಾಮಾನ ಬದಲಾವಣೆ, ಜೀವ ವೈವಿಧ್ಯದ ಕುಸಿತ ಮತ್ತು ಜೀವಿಗಳ ನಾಶದ ಬಗ್ಗೆ, ಇವುಗಳನ್ನು ಸರಿಪಡಿಸಲು ಪ್ರತಿಯೊಬ್ಬ ರೂ ಹೇಗೆ ಪಾತ್ರ ವಹಿಸಬಹುದು ಎಂಬ ಬಗ್ಗೆ ಮಾತಾಡಿದ.
“ಡೇವಿಡ್ ಪ್ರಾಣಿಗಳನ್ನು ಸಹಜೀವಿಗಳಂತೆ ನೋಡಿದರು" ಎಂಬುದು ಅವನ ಜೊತೆ ಕೆಲಸ ಮಾಡಿದವರು ಹೇಳುವ ಮಾತು. “ನಾವು ಪ್ರಕೃತಿಯಿಂದ ಬೇರೆಯಲ್ಲ, ಅದರ ಒಂದು ಭಾಗ. ನಿಸರ್ಗ ಅಚ್ಚರಿಯ ಮತ್ತು ಉತ್ಸಾಹದ ದೊಡ್ಡ ಮೂಲ. ಅದು ಕಣ್ಣಿಗೆ ಕಾಣುವ ಅತ್ಯಂತ ಸುಂದರ ಲೋಕ. ಜ್ಞಾನ ಮತ್ತು ಚಿಂತನೆಗೆ ದೊಡ್ಡ ಪ್ರೇರಣೆ. ಬದುಕನ್ನು ಜೀವಿಸು ವಂತಾಗಿಸುವ ಅನೇಕ ಸುಂದರ ಸಂಗತಿಗಳ ಮೂಲವೇ ಪ್ರಕೃತಿ" ಎಂಬುದು ಡೇವಿಡ್‌ನ ಮೂಲಮಂತ್ರ.
ಹಲವು ದಾಖಲೆಗಳ ಸರದಾರ
ಡೇವಿಡ್‌ನ ಹೆಸರಿನಲ್ಲಿ ದಾಖಲೆಗಳ ಮೇಲೆ ದಾಖಲೆಗಳೇ ಇವೆ. ಯುದ್ಧಗ್ರಸ್ತ ಇರಾಕ್, ಇರಾನ್, ತಾಂಜಾನಿಯಾದ ದಟ್ಟ ಕಾಡುಗಳು ಇಲ್ಲೆಲ್ಲೋ ಹೋಗಿ ಚಿತ್ರೀಕರಿಸಿದ್ದಾನೆ. ಅಪಾಯಕಾರಿ ಸಮುದ್ರದಾಳ, ಗುಹೆಗಳು ಯಾವುದನ್ನೂ ಇವನು ಬಿಟ್ಟಿಲ್ಲ. ಇವನು ಭೂಮಿಯ, ಇಲ್ಲಿನ ಜೀವಜಗತ್ತಿನ ಚೆಲುವನ್ನೆಲ್ಲ ಮೊಗೆಮೊಗೆದು ತೋರಿಸಿದ್ದರಿಂದಲೇ ಮುಂದಿನ ತಲೆಮಾರಿಗಳು ಭೂಗ್ರಹವನ್ನು ಪ್ರೀತಿಸುವರಾದರು. ಡೇವಿಡ್‌ನನ್ನು ಆರಾಧಿಸುವ ಫಿಲಂಮೇಕರ್‌ಗಳು ಹುಟ್ಟಿಕೊಂಡರು.