ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಮುಂದೆ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲʼʼ: ಬೇಷರತ್‌ ಕ್ಷಮೆಯಾಚಿಸಿದ ನಟ ಇಮ್ರಾನ್‌ ಖಾನ್‌ಗೆ ಭಾರತದಲ್ಲೇ ಉಳಿಯಲು ಅವಕಾಶ

Imran Khan's unconditional apology: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ಕಾಕ್ರೋಚ್‌ ಜನತಾ ಪಾರ್ಟಿ ಅಕ್ಟೋಬರ್‌ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಬಾಲಿವುಡ್‌ ನಟ ಇಮ್ರಾನ್ ಖಾನ್ ಸೋಮವಾರ (ನವೆಂಬರ್‌ 2) ಬಾಂಬೆ ಹೈಕೋರ್ಟ್‌ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಇದರಿಂದ ಅವರಿಗೆ ಭಾರತದಲ್ಲಿ ತಂಗಲು ಅನುಮತಿ ನೀಡಲಾಗಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ನಿಗದಿಪಡಿಸಲಾಗಿದೆ.

ಭೇಷರತ್‌ ಕ್ಷಮೆಯಾಚಿಸಿದ ನಟ ಇಮ್ರಾನ್‌ ಖಾನ್‌ಗೆ ಭಾರತದಲ್ಲೇ ಉಳಿಯಲು ಅವಕಾಶ

ಇಮ್ರಾನ್‌ ಖಾನ್‌ ಮತ್ತು ಬಾಂಬೆ ಹೈಕೋರ್ಟ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 2, 2026 5:48 PM

ಮುಂಬೈ, ನ. 2: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಕಾಕ್ರೋಚ್‌ ಜನತಾ ಪಾರ್ಟಿ ಅಕ್ಟೋಬರ್‌ನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಬಾಲಿವುಡ್‌ ನಟ ಇಮ್ರಾನ್ ಖಾನ್ ಸೋಮವಾರ (ನವೆಂಬರ್‌ 2) ಬಾಂಬೆ ಹೈಕೋರ್ಟ್‌ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ (Imran Khan's unconditional apology). ಅಲ್ಲದೆ, ಭವಿಷ್ಯದಲ್ಲಿ ಇಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ಇದರಿಂದ ಅವರಿಗೆ ಭಾರತದಲ್ಲಿ ತಂಗಲು ಅನುಮತಿ ನೀಡಲಾಗಿದೆ.

ಮುಂಬೈಯಲ್ಲಿ ನಡೆದ ಪ್ರತಿಭಟನೆಯ ವೇಳೆ ಅಕ್ಟೋಬರ್ 10ರಂದು ವಶಕ್ಕೆ ಪಡೆಯಲ್ಪಟ್ಟು, ಭಾರತ ತೊರೆಯುವ ನೋಟಿಸ್ ಪಡೆದ ಇಮ್ರಾನ್‌ ಖಾನ್‌ ಇದೀಗ ಥಂಡಾ ಹೊಡೆದಿದ್ದಾರೆ. ತನಗೆ ಪ್ರತಿಭಟನೆಯ ಆಯೋಜಕರೊಂದಿಗೆ ಯಾವುದೇ ಸಂಬಂಧವಿಲ್ಲವೆಂದೂ, ಪ್ರತಿಭಟನೆಯಲ್ಲಿ ಭಾಗವಹಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ತನಗೆ ಅರಿವಿರಲಿಲ್ಲವೆಂದೂ ತಿಳಿಸಿದ್ದಾರೆ.

ನಟ ಇಮ್ರಾನ್ ಖಾನ್ ಅವರಿಗೆ ಕೋರ್ಟ್‌ ತರಾಟೆ:



ಹೈಕೋರ್ಟ್ ಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನಂತರ ಇಮ್ರಾನ್‌ ಖಾನ್ ಕ್ಷಮೆಯಾಚಿಸಿದ್ದಾರೆ. ಇಮ್ರಾನ್‌ ಖಾನ್ ಅಮೆರಿಕದ ಪ್ರಜೆಯಾಗಿದ್ದು, ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ (OCI) ಕಾರ್ಡ್ ಹೊಂದಿದ್ದಾರೆ. ಹೀಗಾಗಿ ಭಾರತೀಯ ಪ್ರಜೆಯಾಗಿ ರಾಜಕೀಯ ಪ್ರತಿಭಟನೆಗಳಲ್ಲಿ ಭಾಗವಹಿಸಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದು ನ್ಯಾಯಪೀಠವು ನೆನಪಿಸಿತು. ಅಮೆರಿಕದಲ್ಲಿ ಭಾರತೀಯ ಪ್ರಜೆಯೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಆ ವ್ಯಕ್ತಿಯನ್ನು ಹೇಗೆ ಪರಿಗಣಿಸಲಾಗುತ್ತದೆಯೋ ಅದೇ ರೀತಿ ಇಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಉದಾಹರಣೆ ನೀಡುವ ಮೂಲಕ, ಇಮ್ರಾನ್‌ ಖಾನ್ ಅವರಿಗೆ ಇರುವ ಹಕ್ಕಿನ ಬಗ್ಗೆ ನ್ಯಾಯಪೀಠವು ಪ್ರಶ್ನಿಸಿತು.

ನಟ ಇಮ್ರಾನ್ ಖಾನ್‌ಗೆ ರಿಲೀಫ್: ಭಾರತ ಬಿಟ್ಟು ತೊಲಗಿ ನೋಟಿಸ್‌ಗೆ ಸಂಬಂಧಿಸಿದಂತೆ ನವೆಂಬರ್ 2ರವರೆಗೆ ಯಾವುದೇ ಕ್ರಮ ಇಲ್ಲ ಎಂದ ಸರ್ಕಾರ

"ನೀವು ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ಹೊಂದಿರುವವರು. ನೀವು ಭಾರತೀಯ ಪ್ರಜೆಯಂತೆ ವರ್ತಿಸಲು ಸಾಧ್ಯವಿಲ್ಲ. ಎಸ್‌ಐಆರ್ ಕುರಿತು ಮಾತನಾಡಲು ನಿಮಗೆ ಯಾವುದೇ ಹಕ್ಕಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಲು ನಿಮಗೆ ಯಾವುದೇ ಅಧಿಕಾರವಿರಲಿಲ್ಲ. ನೀವು ನ್ಯಾಯಾಲಯಕ್ಕೆ ಸ್ಪಷ್ಟವಾದ ಲಿಖಿತ ಭರವಸೆಯನ್ನು ನೀಡಲೇಬೇಕು" ಎಂದು ನ್ಯಾಯಪೀಠವು ಸೂಚಿಸಿತು.

ಇಮ್ರಾನ್‌ ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ವೆಂಕಟೇಶ್ ಧೋಂಡ್, ʼʼಅವರು ತಮ್ಮ ಇಡೀ ಜೀವನವನ್ನು ಭಾರತದಲ್ಲಿಯೇ ಕಳೆದಿದ್ದಾರೆ ಮತ್ತು ಹುಟ್ಟಿನಿಂದಲೇ ಅಮೆರಿಕದ ಪೌರತ್ವವನ್ನು ಪಡೆದಿದ್ದಾರೆʼʼ ಎಂದು ತಿಳಿಸಿದರು. ಅವರು ಎಲ್ಲಿ ಜನಿಸಿದರು ಎಂಬುದು ವಿದೇಶಿ ಪ್ರಜೆ ಎಂಬ ಅವರ ಸ್ಥಾನಮಾನವನ್ನು ಬದಲಾಯಿಸುವುದಿಲ್ಲ ಎಂದು ನ್ಯಾಯಾಲಯವು ಹೇಳಿತು.

"ಒಬ್ಬ ಭಾರತೀಯ ಪ್ರಜೆಯು ಬೇರೆ ಯಾವುದೇ ದೇಶದಲ್ಲಿ-ಉದಾಹರಣೆಗೆ, ನಿಮ್ಮ ದೇಶವಾದ ಅಮೆರಿಕದಲ್ಲಿಯೇ ಇಂತಹ ಪ್ರತಿಭಟನೆಗಳನ್ನು ನಡೆಸಿದರೆ ಏನಾಗಬಹುದು ಎಂದು ಊಹಿಸಿಕೊಳ್ಳಿ. ಅಂತಹ ಭಾರತೀಯ ಪ್ರಜೆಯನ್ನು ತಕ್ಷಣವೇ ಮುಂದಿನ ವಿಮಾನದಲ್ಲಿ ಸ್ವದೇಶಕ್ಕೆ ಕಳುಹಿಸಿಬಿಡಲಾಗುತ್ತಿತ್ತು" ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಭಾರತದಲ್ಲಿಯೇ ಬೆಳೆದು, ಬಾಲಿವುಡ್ ನಟನಾಗಿ ನೆಲೆ ಕಂಡುಕೊಂಡಿದ್ದರೂ ಇಮ್ರಾನ್‌ ಖಾನ್ ಏಕೆ ಭಾರತೀಯ ಪೌರತ್ವವನ್ನು ಪಡೆಯಲು ಮುಂದಾಗಲಿಲ್ಲ ಎಂದು ನ್ಯಾಯಪೀಠವು ಪ್ರಶ್ನಿಸಿತು. "ನೀವು ಬಾಲ್ಯದಿಂದಲೂ ಇಲ್ಲೇ ಇದ್ದೀರಿ. ಹಾಗಾದರೆ, ನೀವು ಭಾರತೀಯ ಪೌರತ್ವವನ್ನು ಏಕೆ ಸ್ವೀಕರಿಸಬಾರದು? ನೀವು ಇಲ್ಲಿ ಬಾಲಿವುಡ್ ತಾರೆಯಾಗಿದ್ದೀರಿ" ಎಂದು ಹೇಳಿತು.

ಇಮ್ರಾನ್‌ ಖಾನ್ ಅಮೆರಿಕದಲ್ಲಿ ಜನಿಸಿದವರು ಎಂದು ಧೋಂಡ್ ನ್ಯಾಯಾಲಯಕ್ಕೆ ತಿಳಿಸಿದರು. ಅವರು 2006ರಲ್ಲಿ ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ ಸ್ಥಾನಮಾನ ಪಡೆಯುವ ಮೊದಲು, ಪರ್ಸನ್ ಆಫ್ ಇಂಡಿಯನ್ ಒರಿಜಿನ್ (PIO) ಕಾರ್ಡ್ ಹೊಂದಿದ್ದರು. ಅಲ್ಲದೆ, ಅವರು ಭಾರತದಲ್ಲಿ ವಿವಾಹವಾಗಿದ್ದರು ಮತ್ತು ಇಲ್ಲಿ ಕೆಲಸವನ್ನೂ ಮಾಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸುವುದರಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಅವರಿಗೆ ಪೂರ್ಣ ಅರಿವಿರಲಿಲ್ಲ ಎಂದು ಹೇಳಿದರು.

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಈ ವಾದಗಳಿಗೆ ಆಕ್ಷೇಪ ವ್ಯಪ್ತಪಡಿಸಿದರು. ಇಮ್ರಾನ್‌ ಖಾನ್‌ ಈ ಹಿಂದೆ ಹಲವು ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಿದರು. ಕ್ಷಮೆಯಾಚನೆಯು ವಿದೇಶಿ ಪ್ರಜೆಯನ್ನು ಆರೋಪಗಳಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.

ಎಸ್‌ಐಆರ್‌ ರದ್ದುಗೊಳಿಸಿ, ಹೊಸ ಪ್ರಕ್ರಿಯೆ ನಡೆಸಿ: ಕೇಂದ್ರ ಚುನಾವಣಾ ಆಯೋಗಕ್ಕೆ ಸಿಎಂ ಡಿಕೆಶಿ ಒತ್ತಾಯ

ಕ್ಷಮೆಯಾಚನೆ

ಕೊನೆಗೆ ಇಮ್ರಾನ್‌ ಅವರ ಬೇಷರತ್ ಕ್ಷಮೆಯಾಚನೆ ಮತ್ತು ನೀಡಿದ ಭರವಸೆಯನ್ನು ಗಮನಿಸಿದ ನ್ಯಾಯಪೀಠವು, ಭಾರತ ತೊರೆಯುವ ನೋಟಿಸ್ ಜಾರಿಯನ್ನು ಸದ್ಯಕ್ಕೆ ತಡೆಹಿಡಿದಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ನಿಗದಿಪಡಿಸಲಾಗಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.