ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Parekat Column: 80ರ ಹೊಸ್ತಿಲಲ್ಲಿ ಬಿ.ಆರ್‌.ಎಲ್

ಕನ್ನಡದ ಪ್ರೇಮಕವಿ, ಸಾಹಿತ್ಯ ಜಗತ್ತಿನ ಜಾಲಿ ಕವಿ ಎಂದೇ ಖ್ಯಾತರಾದ ಬಿ.ಆರ್.ಲಕ್ಷ್ಮಣ ರಾವ್ ಅವರು ಕನ್ನಡ ಕಾವ್ಯ ಪ್ರಪಂಚದ ಭಾವಗೀತೆಗಳ ಸರದಾರ. ಗಾಢ ಪ್ರೇಮ, ವಿರಹ, ವಿಷಾದ, ಜೀವನತತ್ವ ಹೀಗೆ ಹಲವು ವಿಷಯ ವಸ್ತುಗಳ ಕವನಗಳನ್ನು ವೈವಿಧ್ಯಮಯವಾಗಿ ನಿರೂಪಿಸಿ ಸಾಹಿತ್ಯ ಜಗತ್ತಿಗೆ ಉತ್ತಮ ಕೃತಿಗಳನ್ನು ಕೈಗಿತ್ತ ಖ್ಯಾತಿ ಅವರದ್ದಾಗಿದೆ. ಚಿರಯವ್ವನಿಗ ಬಿಆರ್‌ಎಲ್ ಇದೇ ಮಂಗಳವಾರ (ಸೆ.9) 80ಕ್ಕೆ ಕಾಲಿಡುತ್ತಿದ್ದಾರೆ

Narendra Parekat Column: 80ರ ಹೊಸ್ತಿಲಲ್ಲಿ ಬಿ.ಆರ್‌.ಎಲ್

-

Ashok Nayak Ashok Nayak Sep 7, 2025 12:26 PM

ನರೇಂದ್ರ ಪಾರೆಕಟ್

ಕನ್ನಡದ ಪ್ರೇಮಕವಿ, ಸಾಹಿತ್ಯ ಜಗತ್ತಿನ ಜಾಲಿ ಕವಿ ಎಂದೇ ಖ್ಯಾತರಾದ ಬಿ.ಆರ್.ಲಕ್ಷ್ಮಣ ರಾವ್ ಅವರು ಕನ್ನಡ ಕಾವ್ಯ ಪ್ರಪಂಚದ ಭಾವಗೀತೆಗಳ ಸರದಾರ. ಗಾಢ ಪ್ರೇಮ, ವಿರಹ, ವಿಷಾದ, ಜೀವನತತ್ವ ಹೀಗೆ ಹಲವು ವಿಷಯ ವಸ್ತುಗಳ ಕವನಗಳನ್ನು ವೈವಿಧ್ಯಮಯವಾಗಿ ನಿರೂಪಿಸಿ ಸಾಹಿತ್ಯ ಜಗತ್ತಿಗೆ ಉತ್ತಮ ಕೃತಿಗಳನ್ನು ಕೈಗಿತ್ತ ಖ್ಯಾತಿ ಅವರದ್ದಾಗಿದೆ. ಚಿರಯವ್ವನಿಗ ಬಿಆರ್‌ಎಲ್ ಇದೇ ಮಂಗಳವಾರ (ಸೆ.9) 80ಕ್ಕೆ ಕಾಲಿಡುತ್ತಿದ್ದಾರೆ. ಕನ್ನಡದ ಮನಸ್ಸುಗಳಲ್ಲಿ ಬೆಚ್ಚನೆಯ ಭಾವ ಮೂಡಿಸಿದ ಕವಿಗೆ ವಿಶ್ವವಾಣಿಯ ಶುಭಾಶಯಗಳು.

ಕವಿತೆ ಎಂಬುದು ಒಬ್ಬೊಬ್ಬರಿಗೆ ಒಂದೊಂದು ಅರ್ಥದಲ್ಲಿ ನಿಲುಕುವ ಇಲ್ಲವೇ ನಿಲುಕದ ನಕ್ಷತ್ರ. ಕವಿತೆಯ ಸೃಷ್ಟಿಕರ್ತನಾದ ಕವಿ ಕೂಡಾ ಬಹಳಷ್ಟು ಸಮಯದಲ್ಲಿ ಆತನ ಕವಿತೆಯಷ್ಟೇ ನಿಗೂಢ. ಆತನನ್ನು ಅರ್ಥ ಮಾಡಿಕೊಳ್ಳಬೇಕಾದರೆ ಆತ ಹೋದ ದಾರಿಯಲ್ಲೇ ಸಾಗಬೇಕಾಗುತ್ತದೆ ಎಂಬೊಂದು ಮಾತೂ ಸರ್ವೇಸಾಮಾನ್ಯ. ಆದರೆ ಅದಕ್ಕೆ ಅಪವಾದ ಎಂಬಂತೆ ಇರುವವರು ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ, ಭಾವಗೀತೆಗಳ ಸರದಾರ ಬಿ.ಆರ್.ಲಕ್ಷ್ಮಣರಾವ್.

ಕನ್ನಡ ಸಾಹಿತ್ಯ ವಲಯದಲ್ಲಿ ಬಿಆರ್‌ಎಲ್ ಎಂದೇ ಇವರು ಜನಜನಿತರಾದವರು. ಅವರೊಂದಿಗೆ ಒಮ್ಮೆ ಸ್ನೇಹ ಬೆಳೆಸಿಕೊಂಡರೆ ಸಾಕು, ಅವರೇ ಸದಾ ನಮಗರಿವಿಲ್ಲದಂತೆ ಆಪ್ತರಾಗುತ್ತಾರೆ, ದಿನಾಲೂ ನಾವೇ ಅವರ ಸಮೀಪ ಇರುವಷ್ಟು ಆತ್ಮೀಯರನ್ನಾಗಿರಿಸುತ್ತಾರೆ, ಅದೇ ಅವರ ವ್ಯಕ್ತಿ ವಿಶೇಷ. ಬಿ.ಆರ್.ಲಕ್ಷ್ಮಣ್‌ರಾವ್‌ರವರ ಮನಸ್ಸು ಅಂದರೇನೇ ಹೀಗೆ, ಕನ್ನಡ ಕಾವ್ಯ ಪ್ರಪಂಚವನ್ನು ಜಗದಗಲದತ್ತ ಕೊಂಡೊಯ್ಯಬೇಕೆಂದು ಸದಾ ಹಂಬಲಿಸುತ್ತಿರುವವರು.

ಹಾಗಾಗಿಯೇ ತಾನು ಭಿನ್ನವಾಗಿ ನಿಲ್ಲದೆ, ತನಗಿಂತ ಕಿರಿಯರ ಸ್ನೇಹ ಬಳಗವನ್ನೇ ಹೆಚ್ಚಾಗಿ ಸಂಪಾ ದಿಸಿರುವ ಅಪರೂಪದ ವ್ಯಕ್ತಿ. ರಾಜ್ಯೋತ್ಸವ ಆಚರಣೆಯ ನವೆಂಬರ್ ತಿಂಗಳು ಬಂತೆಂದ ರಂತೂ ಸಾಕು, ಪೂರ್ತಿ ತಿಂಗಳು ನಾಡಿನ ಉದ್ದಗಲದ ಕನ್ನಡ ಸಾಹಿತ್ಯ ಸಂಘ-ಸಂಸ್ಥೆಗಳು ಆಹ್ವಾನಿಸಿದಾಗ ಅವರ‍್ಯಾರಿಗೂ ಯಾವುದೇ ರೀತಿಯಲ್ಲಿ ನಿರಾಸೆಪಡಿಸದೆ, ಸಾಧ್ಯವಾದಷ್ಟೂ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾಲಿಗೆ ಚಕ್ರ ಕಟ್ಟಿಕೊಂಡು ದಣಿವರಿಯದಂತೆ ರಾಜ್ಯದ ಉದ್ದಗಲಕ್ಕೂ ಕನ್ನಡ ಭಾಷೆಯ ಕುರಿತಾದ ತಮ್ಮ ನುಡಿಗಳನ್ನಾಡಲು ಓಡಾಡುವವರು. ‌

ಇದನ್ನೂ ಓದಿ: Narendra Parekat Column: ಬೈಕ್‌ ಆಟೋ ತಾಕಲಾಟ, ಪ್ರಯಾಣಿಕರಿಗೆ ಪೀಕಲಾಟ

ಬಿಆರ್‌ಎಲ್ ಬಾಲ್ಯ

ಕನ್ನಡ ಸಾಹಿತ್ಯಾಸಕ್ತರ ನೆಚ್ಚಿನ ಪ್ರೀತಿಗೆ ಪಾತ್ರರಾಗಿರುವ ಬಿ.ಆರ್.ಲಕ್ಷ್ಮಣರಾವ್ ಅವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿಯ ಬಳಿಯ ಚೀಮಂಗಲ ಎಂಬೊಂದು ಹಳ್ಳಿಯಲ್ಲಿ. ಹೇಳಿ ಕೊಳ್ಳುವಂತಹ ಸಾಹಿತ್ಯದ ಹಿನ್ನೆಲೆಯ ಕುಟುಂಬ ಅವರದ್ದಾಗಿರಲಿಲ್ಲ. ಅವರ ತಂದೆಯವರಿಗೆ ಇದ್ದದ್ದು ಸ್ವಂತದ್ದೊಂದು ಪೋಟೋ ಸ್ಟುಡಿಯೊ. ಸಮೀಪದ ಗ್ರಂಥಾಲಯಗಳಿಂದ ತಾಯಿ ತಂದು ಕೊಡುವ ತರಾವರಿ ಸಾಹಿತ್ಯಕ ಪುಸ್ತಕಗಳನ್ನು ಹುಟ್ಟೂರಿನ ಪ್ರಾಥಮಿಕ ಶಾಲಾ ಹಂತದಲ್ಲೇ ಓದಿ ಮುಗಿಸಿರುವ ಹೆಗ್ಗಳಿಕೆ ಲಕ್ಷ್ಮಣರಾವ್ ಅವರದ್ದಾಗಿದೆ. ಬಳಿಕ ದಾವಣಗೆರೆಯಲ್ಲಿ ಕಾಲೇಜು ಕಲಿಕೆ,

ಮುಂದೆ ಬೆಂಗಳೂರಿನಲ್ಲಿ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕ್ಕೋತ್ತರ ಪದವಿ ಪಡೆದ ಹಿರಿಮೆ ಅವರದ್ದಾಗಿದೆ. ಓದಿನ ಹಂತದಲ್ಲೇ ಸಾಹಿತ್ಯವನ್ನು ಅಚ್ಚುಕಟ್ಟಾಗಿ ನಿಷ್ಠೆಯಿಂದ ಕರಗತ ಮಾಡಿ, ಕನ್ನಡದ ಕಾವ್ಯಲೋಕಕ್ಕೆ ಹೊಸತೊಂದು ಮೆರಗನ್ನು ಕೊಟ್ಟವರು.

ಕಾಡುವ ಕವಿತೆಗಳ ಕಾಯಕ ಯೋಗಿ ಲಕ್ಷ್ಮಣರಾವ್ ಅವರ ಭಾವಗೀತೆಯ ಹೊಳಪು ವೈಶಿಷ್ಟ್ಯ ಪೂರ್ಣ. ಅವರ ಜನಪ್ರಿಯ ಕವನ ಸಂಕಲನ ‘ಗೋಪಿ ಮತ್ತು ಗಾಂಡಲೀನ‘ ಕನ್ನಡ ಕಾವ್ಯ ಪರಂಪರೆಯ ಒಂದು ವಿಶಿಷ್ಟ ಪಯಣ. ಹಾಗೆಯೇ ಅವರು ರಚಿಸಿದ ಜನಪ್ರಿಯ ಭಾವಗೀತೆ ‘ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು..’ ಸಾಲು ಅದೆಷ್ಟೋ ಮಂದಿಯ ಮನಸ್ಸನ್ನು ಬಲವಾಗಿ ಕಾಡಿದೆ.

ಅಮ್ಮಂದಿರ ಪ್ರೀತಿ, ಮಮತೆಯನ್ನು ಉಂಡು ಬೆಳೆದವರೆಲ್ಲರೂ ಅವರ ಆ ಸಾಲಿನ ಗೀತೆಗೇ ಶರಣಾದವರು. ಹಾಗೆಯೇ ‘ಬಾ ಮಳೆಯೇ ಬಾ. ಅಷ್ಟು ಬಿರುಸಾಗಿ ಬಾರದಿರು ನಲ್ಲೆ ಬದಲಾಗದಂತೆ.. ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ..’ ಭಾವಗೀತೆಯನ್ನು ಯಾರು ತಾನೇ ಮರೆಯಲು ಸಾಧ್ಯ? ಒಮ್ಮೆ ಅದನ್ನು ಕೇಳಿದರೆ ಸಾಕು, ಯಾವ ನಲ್ಲೆಯೂ ಸೋಲದೆ ಇರಲಾರಳು.

ಚಂದದ ಲಯ, ಅದಕ್ಕೆ ಹೊಂದುವ ಪದಪುಂಜ, ಒಂದು ಸುಂದರ ಆಕೃತಿಯಿಲ್ಲದ ಯಾವ ಕವಿತೆಯೂ ಕವಿತೆಯಾಗಲಾರದು ಎಂಬುವುದು ಬಿಆರ್ ಎಲ್ ಅವರಿಗೆ ಎಂದೂ ಕರಗತ. ಆ ಕಾರಣಕ್ಕಾಗಿಯೇ ಅವರ ಕವಿತೆಗಳು ಎಲ್ಲರ ಎದೆಯಾಳದಲ್ಲಿ ಎಂದೂ ಗಟ್ಟಿಯಾಗಿ ನೆಲೆ ನಿಲ್ಲುತ್ತದೆ.

ಲಕ್ಷ್ಮಣರಾವ್ ಅವರ ‘ಲಿಲ್ಲಿಪುಟ್ಟಿಯ ಹಂಬಲ’, ‘ಇವಳು ನದಿಯಲ್ಲ’ ಮುಂತಾದ ಕವನ ಸಂಕಲನ ಗಳು ಓದುಗರ ಮನಸ್ಸಿಗೆ ಕಚಗುಳಿ ಇಡುತ್ತದೆ. ಬಹುತೇಕ ಕವಿತೆಗಳು ಮತ್ತು ಭಾವಗೀತೆಗಳಿಂದ ಲಕ್ಷ್ಮಣರಾವ್ ಅವರು ಮನೆಮಾತಾ ಗಿದ್ದರೂ, ಅವರದ್ದು ಬಹುಮುಖ ಪ್ರತಿಭೆ. ಕತೆ, ಕಾದಂಬರಿ, ನಾಟಕ, ಪ್ರಬಂಧ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಅವರ ಕಾರ್ಯ ಶ್ಲಾಘನೀಯ.

ಹಾಗಾಗಿಯೇ ‘ಕಬ್ಬೆಕ್ಕು’ ಸೇರಿದಂತೆ ಮೂರು ಕಥಾ ಸಂಕಲನ, ‘ಹೀಗೊಂದು ಪ್ರೇಮ ಕಥೆ’ ಕಾದಂಬರಿಯೂ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ನಿಲ್ಲುವ ಅವರ ಅಮೂಲ್ಯ ಸಾಹಿತ್ಯ ಕೃಷಿಗಳೆನಿಸಿವೆ. ಚಿತ್ತಾಕರ್ಷಕ ತುಂಟ ನಗುವಿನ ಯುವ ಮನಸ್ಸಿನ ಪ್ರೇಮ ಕವಿ ಇದೀಗ 80 ವರ್ಷಕ್ಕೆ ಹೆಜ್ಜೆ ಇರಿಸುತ್ತಿದ್ದಾರೆ. ಲವಲವಿಕೆಯ ಬತ್ತದ ತೊರೆಯಂತಹ ಕಾವ್ಯೋತ್ಸಾಹವನ್ನು ಬಲ್ಲ,

ಕಾವ್ಯ ರಸಿಕರಿಗೆ ಕಾಣುವ ಜೀವ ಚಿಲುಮೆಯಂತೆ ಚಿಮ್ಮುವ ಅವರ ಹುಟ್ಟುಹಬ್ಬ ಬರೀ ಒಂದು ಸಂಖ್ಯೆ. ಬಿ.ಆರ್.ಲಕ್ಷ್ಮಣರಾವ್ ಅವರ ಹೊಸ ಹೊಸ ಕವನಗಳು ಕನ್ನಡಿಗರ ಮನಸ್ಸು, ಹೃದಯ ವನ್ನು ಸದಾ ಮುಂದಿನ ದಿನಗಳಲ್ಲೂ ಅರಳಿಸಲಿದೆ ಎಂಬುವುದರಲ್ಲಿ ಎರಡು ಮಾತಿಲ್ಲ..!

ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ, ನಮ್ಮನ್ನು ಅಗಲಿದ ಎಚ್. ಎಚ್. ವೆಂಕಟೇಶ ಮೂರ್ತಿ ಯವರು ಎಲ್ಲೇ ಸಮಾರಂಭಕ್ಕೆ ಹೋಗಲಿ, ತಮ್ಮ ಭಾಷಣದಲ್ಲಿ ಬಿ.ಎಲ್.ಲಕ್ಷ್ಮಣರಾವ್ ಅವರ ಹೆಸರನ್ನು ಹೇಳದ ದಿನಗಳಿರಲಿಲ್ಲ. ಒಂಥರಾ ಅವರಿಬ್ಬರೂ ‘ಜೀವದ ಜೋಡಿ’ ಎಂದೇ ಕನ್ನಡ ಸಾಹಿತ್ಯಾಭಿಮಾನಿಗಳು ಗುರುತಿಸಿದ್ದುಂಟು. ಖ್ಯಾತ ಚುಟುಕು ಕವಿ ಎಚ್. ದುಂಡಿರಾಜ್, ಕಿರುತೆರೆಯ ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಮ್, ಹಿರಿಯ ರಂಗತಜ್ಞ ನಾ. ದಾಮೋದರ ಶೆಟ್ಟಿ, ಖ್ಯಾತ ಹಾಸ್ಯ ಲೇಖಕ ಎಂ. ಎಸ್. ನರಸಿಂಹ ಮೂರ್ತಿ, ಲೇಖಕ ಜೋಗಿ ಮುಂತಾದವರೂ ಸದಾ ಬಿಆರ್‌ಎಲ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡವರು.

ಹಾಗೆಯೇ ತನ್ನ ಕೋಲಾರದ ಚಿಂತಾಮಣಿಯಿಂದ ಬೆಂಗಳೂರಿಗೆ ಬಂದು ಸಾಧನೆ ಮಾಡಿದ ಹಿರಿಯ ಲೇಖಕ, ಪದಬಂಧಗಳ ಸರದಾರ ಅ.ನಾ. ಪ್ರಹ್ಲಾದ ರಾವ್, ಹಿರಿಯ ಪತ್ರಕರ್ತರಾದ ವೈ. ಜಿ. ಗಿರಿಶಾಸಿ ಅವರೂ ಸೇರಿದಂತೆ ಹಲವರ ಬಗ್ಗೆ ಬಿ.ಆರ್.ಲಕ್ಷ್ಮಣರಾವ್ ಅವರಿಗೆ ವಿಶೇಷ ಪ್ರೀತಿ.

ಅರಸಿ ಬಂದಿರುವ ಪ್ರಶಸ್ತಿಗಳು, ಅಭಿನಂದನಾ ಗ್ರಂಥಗಳು

ಬಿ.ಆರ್.ಲಕ್ಷ್ಮಣರಾವ್ ಅವರಿಗೆ ಸಂದಿರುವ ಪ್ರಶಸ್ತಿ, ಬಹುಮಾನಗಳು ನೂರಾರು. ಅವುಗಳ ಪೈಕಿ ಪ್ರಮುಖವಾದವುಗಳು-ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಫಿಲ್ಮ್ ಫರ್ ಪ್ರಶಸ್ತಿ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಡಾ. ಪು.ತಿ.ನ. ಕಾವ್ಯ ಪುರಸ್ಕಾರ, ಆರ್ಯಭಟ ಪ್ರಶಸ್ತಿ, ಸಂದೇಶ ಸಾಹಿತ್ಯ ಪ್ರಶಸ್ತಿ

(ಮಂಗಳೂರು) ಇತ್ಯಾದಿ.

ಪುಸ್ತಕ ಬಿಡುಗಡೆ-ದೃಶ್ಯಗೀತೆ ಲೋಕಾರ್ಪಣೆ

ಬಿಆರ್‌ಎಲ್ ಅವರ ಹುಟ್ಟುಹಬ್ಬದ ಅಂಗವಾಗಿ ‘ವಿ-ಲ ರೂಪಧಾರಿಣಿ’ ಪುಸ್ತಕ ಬಿಡುಗಡೆ ಮತ್ತು ‘ಕೊಂಚ ಸಮಯ ಬೇಕು’ ದೃಶ್ಯಗೀತೆಗಳ ಲೋಕಾರ್ಪಣೆ ಸಮಾರಂಭ ಮುಂದಿನ ಭಾನುವಾರ (ಸೆ.೧೪) ಬೆಂಗಳೂರಿನ ಡಾ. ಸಿ. ಅಶ್ವತ್ಥ್ ಕಲಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ. ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಲೋಕದ ಹಲವಾರು ಗಣ್ಯರು ಆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರ ‘ವಿ-ಲ ರೂಪಧಾರಿಣಿ’ ಸಂಕಲನವು ಸ್ಥಳೀಯ ಮತ್ತು ವಿಶ್ವಾತ್ಮಕ ನೆಲೆಯಲ್ಲಿ ಪ್ರಸಿದ್ಧರಾಗಿರುವ ಪೌರಾಣಿಕ, ಚಾರಿತ್ರಿಕ ಮತ್ತು ಕಾವ್ಯಲೋಕದ ವ್ಯಕ್ತಿತ್ವದ ಚಿತ್ರಣವನ್ನೊಂದಿದೆ ಎನ್ನುವುದು ಹೆಗ್ಗಳಿಕೆ.