ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S N SridharMurthy Column: ಬೇಂದ್ರ ಸಂಗೀತ: ಒಂದು ವಿಶ್ಲೇಷಣೆ: ರವೀಂದ್ರ ಸಂಗೀತ ಇದ್ದಂತೆ ಬೇಂದ್ರೆ ಸಂಗೀತ ಸಾಧ್ಯವೆ ?

ಕವಿತೆಗೆ ಹಾಡುವ ಗುಣ ಕೊಡುವುದು ಬಹಳ ಸರಳ ಸಂಗತಿ. ಆದರೆ ಸಂಗೀತದ ಬೇರೆ ಸಾಧ್ಯತೆಗಳ ಕುರಿತು ಬೇಂದ್ರೆ ಅವರಿಗೆ ಕುತೂಹಲವಿತ್ತು. ಶಬ್ದ ಮತ್ತು ಅರ್ಥ ಎರಡನ್ನೂ ದಾಟಿದ ನಾದದ ಕುರಿತು ಅವರಿಗೆ ಕುತೂಹಲವಿತ್ತು. ಭಾರತೀಯ ಸಂಗೀತ ಎಂದರೆ ೨೨/೭ ಎಂದರು ಬೇಂದ್ರೆ; ಈ ಸಂಖ್ಯಾಶೇಷವು ಪೈ ಯನ್ನು ಸೂಚಿಸುತ್ತದೆ; ಹೀಗೆ ಚಿಂತಿಸಿದವರಲ್ಲಿ ಬೇಂದ್ರೆಯವರೇ ಮೊದಲಿಗರು ಎನ್ನುತ್ತಾರೆ ಭಾಸ್ಕರ್ ಚಂದಾವರ್ಕರ್. ನಮಗೆ ಸ್ವರಗಳನ್ನು ಹಿಡಿಯಲು ಕಷ್ಟವಾಗುವುದು ರಾಗಗಳ ಸೂತ್ರದಿಂದ. ರಾಗಗ ಳನ್ನೇ ಬಿಟ್ಟು ಸ್ವರದ ನೆಲೆಯಲ್ಲಿ ಹೋದರೆ.. ಬೇಂದ್ರೆ ಇಂತಹ ಸಾಧ್ಯತೆ ಯೋಚಿಸಿದ್ದರೆ? ಹೀಗೆ ಊಹಿಸಲು ಸಾಕಷ್ಟು ಕಾರಣಗಳಿವೆ.

ರವೀಂದ್ರ ಸಂಗೀತ ಇದ್ದಂತೆ ಬೇಂದ್ರೆ ಸಂಗೀತ ಸಾಧ್ಯವೆ ?

Profile Ashok Nayak May 18, 2025 9:31 PM

ಎನ್.ಎಸ್.ಶ್ರೀಧರ ಮೂರ್ತಿ

ಬೇಂದ್ರೆ ‘ಇಂದ್ರಪ್ರಸ್ಥ ಮತ’ ಎಂಬ ಕಲ್ಪನೆಯ ಬಗ್ಗೆ ಅನೇಕ ಸಲ ಮಾತನಾಡಿದ್ದಾರೆ. ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ಎರಡು ಇಂದ್ರಪ್ರಸ್ಥ ಮತದ ಬಗ್ಗೆ ಉಲ್ಲೇಖವಿದೆ. ಬೇಂದ್ರೆ ‘ಸಿಂಹಸ್ಥ’ ಎನ್ನುವ ಪದವನ್ನು ಬಳಸುತ್ತಾರೆ. ಇದಕ್ಕೆ ಇಂದ್ರಪ್ರಸ್ಥದಲ್ಲಿ ವಿಶೇಷ ನೆಲೆ ಇರಬಹುದು. ಅದು ಸಿಕ್ಕರೆ ಬೇಂದ್ರೆ ಲೋಕದೊಳಗೆ ಇನ್ನಷ್ಟು ದೂರ ಹೋಗಬಹುದು. ಬೇಂದ್ರೆಯವರ ನಾದ ವಿನ್ಯಾಸವನ್ನು ಇನ್ನಷ್ಟು ಸೂಕ್ಷ್ಮವಾಗಿ ನೋಡಿದರೆ, ಶಬ್ದ- ಅರ್ಥ, ವಾಚ್ಯ-ಸೂಚ್ಯ ಹೀಗೆ ಸರಳವಾಗಿ ನೋಡಿದರೆ ಬೇಂದ್ರೆ ಸಿಕ್ಕುವವರೇ ಅಲ್ಲ.

ಬೇಂದ್ರೆಯವರದು ಗಾಂಧಾರ ಗ್ರಾಮ.. ಅದು ಅಲೌಕಿಕವಾಗಿದ್ದು, ಅನುಭವಕ್ಕೆ ಮಾತ್ರ ದೊರಕ ಬಲ್ಲದು; ಅದು ಮಾತಿಗೆ ಸಿಲುಕದ್ದು. ಇಷ್ಟಕ್ಕೂ ‘ಬೇಂದ್ರೆ ಸಂಗೀತ’ ಎಂಬ ಪರಿಕಲ್ಪನೆ ವಿನೂತನವೆ? ಅಂತಹದೊಂದು ಸಾಧ್ಯತೆ ಇದೆಯೆ? ಈ ಕುರಿತು ಒಂದು ವಿಶ್ಲೇಷಣೆ ಇಲ್ಲಿದೆ. ಇದನ್ನೋದಿ ನಿಮಗೇನನಿಸಿತು? ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.

ಸಾಹಿತಿ, ಕವಿ ರವೀಂದ್ರನಾಥ ಠಾಗೂರರ ಸಾಹಿತ್ಯದ ಕುರಿತ ಅಧ್ಯಯನದಲ್ಲಿ ರವೀಂದ್ರ ಸಂಗೀತ ಎನ್ನುವುದು ಒಂದು ಮಹತ್ವದ ಸಂಗೀತ. ರವೀಂದ್ರನಾಥ ಠಾಗೂರರು ಸಂಗೀತವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಸ್ವತ: ಸಿತಾರ್ ನುಡಿಸುತ್ತಿದ್ದರು. ರವೀಂದ್ರ ಸಂಗೀತವೆನ್ನುವುದು ಕಾಪಿ ರೈಟ್ ಕೂಡ ಪಡೆದು ಕೊಂಡಂತಹ ಸಂಗೀತದ ಒಂದು ಪದ್ಧತಿಯಾಗಿದೆ.

ಮುಖ್ಯವಾಗಿ ರವೀಂದ್ರನಾಥ ಠಾಗೂರರೇ ಸಂಗೀತ ಸಂಯೋಜನೆ ಮಾಡಿರುವ 2233 ರಚನೆಗಳಿವೆ. ರವೀಂದ್ರರು ಹಿಂದೂಸ್ತಾನಿ, ಜನಪದ ಮತ್ತು ಪಾಶ್ಯಾತ್ಯ ಹೀಗೆ ಮೂರು ನೆಲೆಗಳಲ್ಲಿ ಸಂಯೋಜನೆ ಗಳನ್ನು ಮಾಡಿದ್ದಾರೆ. ಅವರು ಬಳಸುತ್ತಿದ್ದ ಪೂರ್ಬಿ (ನಮ್ಮ ಪೂರ್ವಿ ಕಲ್ಯಾಣಿ), ಭೂಪಾಲ್
(ನಮ್ಮ ಮೋಹನ), ಪರಾಗ್ (ನಮ್ಮ ಶಿವರಂಜಿನಿ) ರಾಗಗಳ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ.

‘ಸ್ವರ ಬಿತಾನ್’ ಎಂಬ ರವೀಂದ್ರ ಸಂಗೀತದ ಕುರಿತ ಚರ್ಚೆ ಮತ್ತು ವ್ಯಾಖ್ಯಾನಗಳು 64 ಸಂಪುಟ ಗಳಲ್ಲಿ ಬಂದಿದೆ. ರವೀಂದ್ರರು ಪುರಾಣ, ವೇದ, ಉಪನಿಷತ್ತುಗಳನ್ನು ಸಾಹಿತ್ಯಕ್ಕೆ ತಂದರು. ಅದರ ಛಂದೋಗುಣಗಳನ್ನು ತಂದರು, ಕಾಳಿದಾಸನ ‘ಮೇಘದೂತ’ ಮತ್ತು ‘ಅಭಿಜ್ಞಾನ ಶಾಕುಂತಲ’ ಎರಡನ್ನೂ ಬಂಗಾಳಿಗೆ ತಂದರು. ಒಟ್ಟಾಗಿ ಸಂಗೀತದ ನೆಲೆಯಿಂದ ಅವರ ಸಾಹಿತ್ಯದ ಕುರಿತು ಬಹಳಷ್ಟು ಮಹತ್ವದ ಚರ್ಚೆಗಳನ್ನು ನಡೆಸಬಹುದು.

ಇದನ್ನೂ ಓದಿ: Hari Paraak Column: ಟ್ರಂಪ್‌ ʼಕ್ರೆಡಿಟ್‌ʼ ತಗೊಂಡ್ರೆ ಅದು ಅಮೆರಿಕ ʼಸಾಲʼ ತಗೊಂಡಂತೆ

ಈ ಹಿನ್ನೆಲೆಯಲ್ಲಿ ‘ಬೇಂದ್ರೆ ಸಂಗೀತ’ ಎನ್ನುವ ಸಾಧ್ಯತೆ ಇದೆಯೇ? ಅದಕ್ಕೆ ಕಾಪಿರೈಟ್ ಪಡೆಯ ಬಹುದೇ ಎನ್ನುವ ಚರ್ಚೆ ಹಿಂದೆ ಕೂಡ ನಡೆದಿದೆ. ಒಂದು ಗಮನಿಸಬೇಕಾದ ಸಂಗತಿ ಇದೆ.

ನಮ್ಮಲ್ಲಿ ವಾಗ್ಗೇಯಕಾರರ ಪರಿಕಲ್ಪನೆ ಇದೆ : ಅಂದರೆ, ತಮ್ಮ ಸಾಹಿತ್ಯಕ್ಕೆ ತಾವೇ ಸಂಗೀತ ನೀಡುವುದು. ನಮ್ಮಲ್ಲಿ ‘ಪುತಿನ’ ಅವರು, ತಮ್ಮ ಗೀತ ನಾಟಕಗಳಲ್ಲಿ ರಾಗ ಮತ್ತು ತಾಳಗಳನ್ನು ಸೂಚಿಸುತ್ತಿದ್ದರು. ನವೋದಯದ ಬಹುತೇಕ ಬರಹಗಾರರಿಗೆ ಇಂತಹ ಸಂಗೀತದ ಹಿನ್ನೆಲೆ ಇತ್ತು. ವಾಗ್ಗೇಯಕಾರರು ಸೂಚಿಸಿದ ರಾಗಗಳ ಹೊರತಾಗಿ ಅವರ ಕೃತಿಗಳನ್ನು ಹಾಡುವುದೇ ಸಾಧ್ಯವಿಲ್ಲ. ತ್ಯಾಗ ರಾಜರು, ಮುತ್ತು ಸ್ವಾಮಿ ದೀಕ್ಷಿತರು, ಪುರಂದರ ದಾಸರು ಎಲ್ಲರ ಮಟ್ಟಿಗೆ ಸತ್ಯ ಇದು. ರವೀಂದ್ರ ನಾಥ ಠಾಗೂರರು ಈ ಪರಂಪರೆಗೆ ಸೇರಿದವರು.

ಅಹಿರ್ ಭೈರವ್‌ನಲ್ಲಿ ಇಳಿದು ಬಾ ತಾಯೆ!

ಆದರೆ ಬೇಂದ್ರೆ ಹಾಗಲ್ಲ. ಅವರಿಗೆ ಹಾಡಲು ರಾಗ ಹಾಕುವುದು ಮುಖ್ಯವೇ ಅಲ್ಲ. ‘ಇಳಿದು ಬಾ ತಾಯೆ’ಗೀತೆ ಯನ್ನು ಕಾಳಿಂಗ ರಾವ್, ಬಾಳಪ್ಪ ಹುಕ್ಕೇರಿ, ಮೈಸೂರು ಅನಂತ ಸ್ವಾಮಿ, ವಿಜಯ ಭಾಸ್ಕರ್ ಮೊದಲಾದವರು ತಮ್ಮದೇ ಆದ ರೀತಿಯಲ್ಲಿ ಸ್ವರ ಸಂಯೋಜನೆ ಮಾಡಿದ್ದಾರೆ. ನಾವು ಎಲ್ಲವನ್ನೂ ಇಷ್ಟ ಪಟ್ಟಿದ್ದೇವೆ. ಕುತೂಹಲದ ಸಂಗತಿ ಎಂದರೆ ಒಂದು ಕಡೆ ಬೇಂದ್ರೆ ಈ ಕವಿತೆಗೆ ‘ಅಹಿರ್ ಭೈರವ್’ ರಾಗದ ಸೂಚನೆ ಮಾಡಿದ್ದಾರೆ’; ಆದರೆ ಇದುವರೆಗೂ ಯಾರೂ ಈ ರಾಗದಲ್ಲಿ ‘ಇಳಿದು ಬಾ ತಾ’ ಕವಿತೆಗೆ ರಾಗ ಸಂಯೋಜನೆ ಮಾಡಿಲ್ಲ!

ಕವಿತೆಗೆ ಹಾಡುವ ಗುಣ ಕೊಡುವುದು ಬಹಳ ಸರಳ ಸಂಗತಿ. ಆದರೆ ಸಂಗೀತದ ಬೇರೆ ಸಾಧ್ಯತೆಗಳ ಕುರಿತು ಬೇಂದ್ರೆ ಅವರಿಗೆ ಕುತೂಹಲವಿತ್ತು. ಶಬ್ದ ಮತ್ತು ಅರ್ಥ ಎರಡನ್ನೂ ದಾಟಿದ ನಾದದ ಕುರಿತು ಅವರಿಗೆ ಕುತೂಹಲವಿತ್ತು. ಪುಣೆಯಲ್ಲಿ ಇಂಟರ್ ನ್ಯಾಷನಲ್ ಬುಕ್ ಶಾಪ್ ಎಂಬ ಅಂಗಡಿ ಇದೆ. ಅದರ ಒಡೆಯ ವಿಠಲ್ ರಾವ್ ದೀಕ್ಷಿತ್, ಬೇಂದ್ರೆಯವರಿಗೆ ಅವರೊಡನೆ ಅಪಾರ ಸ್ನೇಹ ಹೊಂದಿದ್ದರು.

ಅವರೊಡನೆ ನಡೆಯುತ್ತಿದ್ದ ಚರ್ಚೆಗಳೆಲ್ಲೂ ಸಂಗೀತದ್ದೇ, ಅಲ್ಲಿ ಒಮ್ಮೆ ಭಾಸ್ಕರ್ ಚಂದಾವರ್ಕರ್ ಬೇಂದ್ರೆಯವರನ್ನು ಭೇಟಿ ಮಾಡಿದರು. ಭಾರತೀಯ ಸಂಗೀತ ಎಂದರೆ 22/7 ಎಂದರು ಬೇಂದ್ರೆ. ಹೀಗೆ ಚಿಂತಿಸಿದವರಲ್ಲಿ ಬೇಂದ್ರೆಯವರೇ ಮೊದಲಿಗರು ಎನ್ನುತ್ತಾರೆ ಭಾಸ್ಕರ್ ಚಂದಾವರ್ಕರ್. ಮುಂದೆ ಪ್ರೊ.ಎಂ.ಡಿ.ರಾಮನಾಥನ್ ಕೂಡ ಬೇಂದ್ರೆಯವರ ಸಂಶೋಧನೆಯ ಶ್ರೇಷ್ಠತೆಯನ್ನು ಪ್ರಶಂಸಿಸಿದರು.

ಸಂಗೀತ ಮತ್ತು ಪೈ

‘ಪೈ’ ಎಂದರೆ 22/7 ಎನ್ನುವುದು ಪ್ರಾಥಮಿಕ ಗಣಿತ ವಿಚಾರ ತಿಳಿದಿರುವ ಎಲ್ಲರಿಗೂ ಗೊತ್ತಿದೆ. ಇದನ್ನು ಸಂಗೀತಕ್ಕೂ ಹೊಂದಿಸಬಹುದು ಎಂದು ಸೂಚಿಸಿದವರು ಬೇಂದ್ರೆ. ಇದನ್ನು ಹೀಗೆ ವಿವರಿಸಬಹುದ: ಷಡ್ಜ, ಮಧ್ಯಮ, ಪಂಚಮ ಮೂರಕ್ಕೂ ನಾಲ್ಕು ಶ್ರುತಿಗಳಿವೆ. ದೈವತ ಮತ್ತು ರಿಷಭಕ್ಕೆ ಮೂರು ಶ್ರುತಿಗಳು. ನಿಷಾದಕ್ಕೆ ಎರಡು ಶ್ರುತಿಗಳು. ಹೀಗೆ 22 ಶ್ರುತಿಗಳು ದೊರಕುತ್ತವೆ. ಅದನ್ನು ಸಪ್ತ ಸ್ವರಕ್ಕೆ ಹೊಂದಿಸಿದಾಗ ದೊರಕುವುದೇ ವೃತ್ತದ ಪರಿಧಿ ಮತ್ತು ವ್ಯಾಸಕ್ಕಿರುವ ಹೊಂದಾಣಿಕೆ. ಇದೇ ನಾದದ ಮೂಲ ಸೂತ್ರ!

ಇದು ಮಂತ್ರ ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ ತಾನೆ ತಾನೆ ಸಮರ್ಥಛಂದ: ದೃಗಭಂದ ದಿಗ್ಭಂಧ: ಪ್ರಾಣದ ಕೆಚ್ಚು ಕೆತ್ತಿರಚಿಸಿದೆ; ಉಸಿರ ಹೆದೆಗೆ ಹೂಡಿದ ಗರಿಯ ನಿರಿಯುಟ್ಟು ಬರುತಿದೆ ತೂರಿ ಲೀಲೆಯನಾಯಾಸ (ಗಾರುಡಿಗ) ಎಂದು ಬೇಂದ್ರೆ ಇದನ್ನು ವಿವರಿಸುತ್ತಾರೆ. ನಾದದ ಒಳನೂಲನ್ನು ಎಳೆದೆಳೆದು ನೋಡಿದಾಗ ಶ್ರುತಿಯ ವ್ಯಾಪ್ತಿ ಅರಿವಾಗುತ್ತದೆ. ಪರಾವಾಣಿಯಂತೆ ಪಶ್ಯಂತಿ, ಮಧ್ಯಮಾ ಮಾರ್ಗಗಳ ಮೂಲಕ ವೈಖರಿಯಾಗಿ ಹೊರ ಹೊಮ್ಮುವ ದರ್ಶನವನ್ನು ಬೇಂದ್ರೆ ನಾದ ಸೂತ್ರ ಹೇಳುತ್ತದೆ.

ಗ್ರಹಗೋಲ ಸಂಗೀತ ತಾನ ತಾನದ ನನೆಯ ಭಾವದ ಪರಿಸ್ಪಂದ ಆತ್ಮ ಆತ್ಮವೇ ತಾನು ವಾಚ್ಯವರ್ಣ ಗಳಲ್ಲಿ ನವಿರು ನವಿಲನ ಕೇಕೆ ಶ್ರೀ ಅನಿರ್ವಾಚ್ಯಕ್ಕೆ ಬೇರೆ ಭಾಷ್ಯವು ಬೇಕೆ (ನಾದ ಮಯೂರ)

ಶ್ರೀ ರಾಗವನ್ನು ಹಾರ್ಮೋನಿಯಂ ಮೂಲಕ ನುಡಿಸಿದರೆ ರಿಷಭ ಸಿಗುವುದು ಕಷ್ಟ. ಏಕೆಂದರೆ ಈ ರಾಗದಲ್ಲಿರುವುದು ಕೋಮಲ ರಿಷಭ. ಈ ರಾಗ ಹಾಡುವಾಗ ಕುಮಾರ ಗಂಧರ್ವರು ಹಾರ್ಮೋ ನಿಯಂನವರಿಗೆ ‘ನಿಲ್ಲಿಸಿ’ ಎನ್ನತ್ತಿದ್ದರಂತೆ. ಇದನ್ನು ಬೇಂದ್ರೆ ‘ಅನಿರ್ಜ್ಞಚ್ಯ’ ಎಂದು ಕರೆಯುತ್ತಾರೆ. ಅಂದರೆ ಲಯವಾದ ನಾದ ಕೂಡ ಚಕ್ರದಲ್ಲಿ ಬಹಳ ಮುಖ್ಯವಾಗುತ್ತದೆ.

ಷಡ್ಜ ಮತ್ತು ಮಂದ್ರದ ನಡುವೆ ಒಂದು ಸಮೀಕರಣವಿದೆ. ಹಾಗೆ ರಿಷಭ ಮತ್ತು ಪಂಚಮಗಳ ನಡುವೆ ಕೂಡ ಸಂಬಂಧವಿದೆ. ಎರಡೂ ಒಂದೇ ರೀತಿಯಲ್ಲಿ ಇಲ್ಲ. ಈ ಕುರಿತು ಬೇಂದ್ರೆ ಕವಿತೆಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪ ಬರುತ್ತದೆ. ಇದರಲ್ಲಿ ಏನೋ ವಿಶೇಷವಿರಲೇ ಬೇಕು. ಕಲ್ಯಾಣಿ, ಯಮನ್, ಕೇದಾರ್ ಯಾವುದೇ ರಾಗ ಶ್ರುತಿ ಮಾಡಿಕೊಳ್ಳಿ, ಈ ಸಮೀಕರಣ ಕಾರ್ಯ ನಿರ್ವಹಿಸುತ್ತದೆ.

ಅದೇ ಬಾಗೇಶ್ರೀ ಶ್ರುತಿ ಮಾಡಿ ಈ ಸಮೀಕರಣದಂತೆ ಪಂಚಮಕ್ಕೆ ಬಂದರೆ ನಿಮ್ಮ ತಂಬೂರಿ ತಂತಿಯೇ ತುಂಡಾಗ ಬಹುದು. ಏಕೆಂದರೆ ಅದು ಮಧ್ಯಮ ಪ್ರಾಧಾನ್ಯತೆಯ ರಾಗ. ಸ್ವರದ ನೆಲೆಯಲ್ಲಿ ಬೇಂದ್ರೆ ಸೂಚನೆ? ನಮಗೆ ಸ್ವರಗಳನ್ನು ಹಿಡಿಯಲು ಕಷ್ಟವಾಗುವುದು ರಾಗಗಳ ಸೂತ್ರ ದಿಂದ. ರಾಗಗಳನ್ನೇ ಬಿಟ್ಟು ಸ್ವರದ ನೆಲೆಯಲ್ಲಿ ಹೋದರೆ.. ಬೇಂದ್ರೆ ಇಂತಹ ಸಾಧ್ಯತೆ ಯೋಚಿಸಿ ದ್ದರೆ? ಹೀಗೆ ಊಹಿಸಲು ಸಾಕಷ್ಟು ಕಾರಣಗಳಿವೆ.

ಬೇಂದ್ರೆ ‘ಇಂದ್ರಪ್ರಸ್ಥ ಮತ’ ಎಂಬ ಕಲ್ಪನೆಯ ಬಗ್ಗೆ ಅನೇಕ ಸಲ ಮಾತನಾಡಿದ್ದಾರೆ. ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ಎರಡು ಇಂದ್ರಪ್ರಸ್ಥ ಮತದ ಬಗ್ಗೆ ಉಲ್ಲೇಖವಿದೆ. ಮೊದಲನೆಯದು ಮತಂಗ ಮುನಿಯ ಕಾಲದ್ದು, ಇಲ್ಲಿ ಬೀಜಾಕ್ಷರ, ಮೂರ್ಛನೆ (ಆಗ ಇನ್ನು ರಾಗಗಳ ಕಲ್ಪನೆ ಇರಲಿಲ್ಲ), ಛಂದೋಗುಣ, ಗ್ರಹಗತಿ ಎಲ್ಲವೂ ಸೇರಿದ ಮೂಲಗಣಿತದ ಚರ್ಚೆ ಇದೆ.

ಎರಡನೆಯ ‘ಇಂದ್ರಪ್ರಸ್ಥ ಮತ’ ಪರ್ಷಿಯನ್ ಪ್ರಭಾವದ ನಂತರದ್ದು, ಇಲ್ಲಿ ಶ್ರುತಿಗಳ ಚರ್ಚೆ ಇದೆ. ಬೇಂದ್ರೆ ಮೊದಲ ಇಂದ್ರಪ್ರಸ್ಥ ಮತದ ಕುರಿತೇ ಹೇಳಿದ್ದಾರೆ ಎನ್ನುವುದು ಸ್ಪಷ್ಟ. ಇದರ ಕುರಿತ ಕೃತಿಗಳನ್ನು ಓದಿದ್ದರೂ ಈ ಲೇಖಕನಿಗೆ ಅದು ಪೂರ್ತಿ ಅರ್ಥವಾಗಿಲ್ಲ. ಶಂಕರ ಮೊಕಾಶಿ ಪುಣೇಕ ರರು ಇದರ ಬಗ್ಗೆ ಬರೆದಿದ್ದಾರೆ. ಆದರೆ ಅದು ಹೆಚ್ಚು ಅಧ್ಯಾತ್ಮ, ಅವಧೂತ ಗುಣದ ಬಗ್ಗೆ ಇದೆ.

ಇನ್ನು ಮರಾಠಿಯಲ್ಲಿ ಇದರ ಬಗ್ಗೆ ಚರ್ಚೆ ಇದೆ ಎಂದು ಕೀರ್ತಿನಾಥ ಕುರ್ತುಕೋಟಿಯವರು ಹೇಳುತ್ತಿದ್ದರು. ಬೇಂದ್ರೆ ಮರಾಠಿಯನ್ನು ಚೆನ್ನಾಗಿ ಬಲ್ಲವರಾದ್ದರಿಂದ ಅದರ ವಿಸ್ತಾರ ಬಹಳವಾಗಿರ ಬೇಕು. ಬೇಂದ್ರೆ ‘ಸಿಂಹಸ್ಥ’ ಎನ್ನುವ ಪದವನ್ನು ಬಳಸುತ್ತಾರೆ. ಜ್ಯೋತಿಷದಲ್ಲಿ ರವಿ ಕನ್ಯಾರಾಶಿ ಯನ್ನು ಪ್ರವೇಶಿಸಿದಾಗ ಈ ಸಿಂಹಸ್ಥ ಪದ ಬಳಕೆಯಾಗುತ್ತದೆ. ಇದಕ್ಕೆ ಇಂದ್ರಪ್ರಸ್ಥದಲ್ಲಿ ವಿಶೇಷ ನೆಲೆ ಇರಬಹುದು. ಅದು ಸಿಕ್ಕರೆ ಬೇಂದ್ರೆಲೋಕ ದೊಳಗೆ ಇನ್ನಷ್ಟು ದೂರ ಹೋಗ ಬಹುದು.

ಚತುರ್ಮುಖನ ನಾಲಿಗೆಯ

ಹಾಸಿ ತುಟಿದಿಂಬು ಮಾಡಿದಾಕೆ

ವತ್ಸಲಾಂಛನದ ಹೃದಯಕಮಲದಲಿ ಮನೆಯ ಹೂಡಿದಾಕೆ

ಹರನಮೈಯನರೆದುಂಬಿ ಲೀಲೆಯಲಿ ತಲೆಯನೇರಿದಾಕೆ

ಹೀಗೆ ಕುಣಿಯೆ ಆನಂದ ಲಹರಿ ಈ ಜೀವ ಸೇರಿದಾಕೆ

(ಗಾಯತ್ರಿ ಸೂಕ್ತ)

ಎನ್ನುವಲ್ಲಿ ಬೇಂದ್ರೆಯವರು ‘ಇಂದ್ರಪ್ರಸ್ಥ’ ಮತದ ವಿಸ್ತಾರನ್ನು ಬಲ್ಲವರಾಗಿದ್ದರು ಎನ್ನುವುದನ್ನು ಗುರುತಿಸ ಬಹುದು. ಈ ಸಾಲುಗಳಲ್ಲಿ ಎಲ್ಲಾ ನೆಲೆಯಲ್ಲಿ ಗ್ರಹಿಕೆಗಳನ್ನು ವಿಸ್ತರಿಸಬಹುದು.

ನನ್ನ ತಾತ ನುಲೆನೂರು ಶಂಕರಪ್ಪನವರು 1951ರಲ್ಲಿ ‘ಇಂದ್ರಪ್ರಸ್ಥ ಮತ’ದ ಕುರಿತು ಲೇಖನ ಬರೆದಿದ್ದಾರೆ. ಅದರಲ್ಲಿ ಬೇಂದ್ರೆ ಕವಿತೆಗಳ ಉಲ್ಲೇಖಗಳೂ ಇವೆ. ಹಲವು ಸೂತ್ರಗಳಿವೆ. ಇದನ್ನು ಪ್ರೊ.ಎಸ್.ಕೆ.ರಾಮಚಂದ್ರ ರಾಯರ ಸಹಾಯದಿಂದ ಬಿಡಿಸಿದೆ. ಪೂರ್ಣ ಪ್ರಮಾಣದಲ್ಲಿ ಅದನ್ನು ಸಂಗೀತಕ್ಕೆ ಜೋಡಿಸಲು ಆಗಿಲ್ಲ. ಆದರೆ ಇನ್ನೊಂದು ನೆಲೆ ಸಿಕ್ಕ ಬಹುದು.

ಗಂಗಾವತರಣ

ಬೇಂದ್ರೆಯವರ ನಾದ ವಿನ್ಯಾಸವನ್ನು ಇನ್ನಷ್ಟು ಸೂಕ್ಷ್ಮವಾಗಿ ನೋಡಿದರೆ, ಶಬ್ದ-ಅರ್ಥ, ವಾಚ್ಯ-ಸೂಚ್ಯ ಹೀಗೆ ಸರಳವಾಗಿ ನೋಡಿದರೆ ಬೇಂದ್ರೆ ಸಿಕ್ಕುವವರೇ ಅಲ್ಲ. ಅವರ ‘ಗಂಗಾವತರಣ’ ಕವಿತೆ ಯನ್ನೇ ನೋಡೋಣ. ಇದು ಮೂರು-ಐದು ಮಾತ್ರೆಗಳ ಲಯದಲ್ಲಿ ಆರಂಭವಾಗುತ್ತದೆ. ‘ದಿಗ್ ದಿಗಂತದ’ ಎಂಬ ಪದ ಸಮೂಹವನ್ನೇ ನೋಡಿ: ಗಣ ವಿಭಜನೆ ಪ್ರಕಾರ ‘ದಿಗ್ ದಿ’ ಎನ್ನುವುದು ಒಂದು ಘಟಕ. ಆದರೆ ‘ದಿಗ್ ದಿ’ ಎನ್ನುವುದು ಒಂದು ಪದವೂ ಅಲ್ಲ, ಪ್ರಕೃತಿಯೂ ಅಲ್ಲ. ನಾವು ಇಲ್ಲಿ ನಿಲ್ಲದೆ ಮುಂದಿನ ಗಣಕ್ಕೆ ಧಾವಿಸಬೇಕು, ಪೂರ್ತಿ ಯತಿ ದೊರಕುವುದು ‘ಚರಚರಾಗಳಿಗೆ’ ಎನ್ನುವಲ್ಲಿ.

ಇಲ್ಲಿ ಇನ್ನೊಂದು ವಿಶೇಷವೆಂದರೆ ‘ಚರಾ’ ಎಂಬ ಗಣ ಗುರು ಲಘುವಾಗಿರದೆ ಲಘು ಗುರು ವಾಗುವುದು ಕನ್ನಡ ಭಾಷೆಯ ಸಾಧಾರಣ ಲಕ್ಷಣವಲ್ಲ. ಇದು ಬೇಂದ್ರೆ ಕಾವ್ಯ ತಳೆಯುವ ನಾದ ವಿನ್ಯಾಸ. ಇಳಿದು; ಹರನ ಹರಿಯ ಋಷಿಯ ಎಂಬ ಲಘು ಮಾತ್ರೆಗಳಲ್ಲಿಯೇ ಮುಂದುವರೆದು ದೇವ ದೇವರನು ಎನ್ನುವಲ್ಲಿ ವಿಶಿಷ್ಟ ನಿಲುಗಡೆ ಪಡೆಯುತ್ತದೆ. ಸಂಗೀತದ ಪರಿಭಾಷೆಯಲ್ಲಿ ಹೇಳುವು ದಾದರೆ ಇದ್ದಕಿದ್ದಂತೆ ಚತುಶ್ರತಿ ದೈವತ, ಕೈಶಕೀ ನಿಷಾದಗಳು ಬಂದು ಬಿಡುತ್ತವೆ.

ನಿಮಗೆ ಷಡ್ಜ ಎಲ್ಲಿದೆ ಎಂದು ತಿಳಿಯುವದೇ ಈ ಸಾಲು ಬಂದಾಗ. ಹೀಗಿದ್ದರೂ ಇದನ್ನು ‘ಅಹಿರ್ ಭೈರವ್’ ಎನ್ನುವುದು ಕಷ್ಟ. ಇಲ್ಲಿಂದ ಮುಂದೆ ಬೇಂದ್ರೆ ಮೂರು-ಐದನ್ನು ಬದಲಾಯಿಸಿ ಐದು-ಮೂರನ್ನು ತರುತ್ತಾರೆ. ‘ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ’ ಹೀಗೆ ಸ್ವಲ್ಪ ಹಿಂದೆ ‘ಕರು ಕಂಡ ಕರುಳೆ’ ಕೂಡ ಬಂದಿದೆ. ಇಲ್ಲಿ ಇನ್ನೊಂದು ವಿಶೇಷವೆಂದರೆ ಅಕಾರಂತ ಅಕ್ಷರಗಳೊಂದಿಗೆ ಏಕಾರಂತ ಅಕ್ಷರಗಳಿರುವ ಪದಗಳು ನಿರಂತರವಾಗಿ ಬಂದಿವೆ.

ಮುಂದಿನ ಏಳು ಸಾಲುಗಳಲ್ಲಿ ಏಕಾರಂತ ಪದಗಳೇ ಬರುತ್ತವೆ. ಇಲ್ಲಿ ಗಮಕರಹಿತ ಗಾಂಧಾರ ಬರುತ್ತದೆ. ಇದರಿಂದ ಗಂಗೆಯ ಅಧಃಪತನ ಚಿತ್ರಿತವಾಗಿದೆ. ಇಡೀ ಕವಿತೆಯನ್ನು ಶಬ್ದ ಅದಕ್ಕೆ ಅರ್ಥ ಹೀಗೆ ಓದಿದರೆ ಏನೂ ಸಿಕ್ಕುವುದಿಲ್ಲ. ಅದು ರೂಪಿತವಾಗಿರುವುದೇ ನಾದಗುಣದಿಂದ.

ಹಕ್ಕಿ ಹಾರಿದ್ದು ಕಂಡಿರಾ!

ಹಾಗೆಯೇ ‘ಹಕ್ಕಿ ಹಾರುತಿದೆ ನೋಡಿದಿರಾ?’ ಕವಿತೆ ಗಮನಿಸಿ. ಇದರ ಪಲ್ಲವಿ 3-5-5-2 ವಿನ್ಯಾಸ ದಲ್ಲಿದೆ. ಹಕ್ಕಿ ಮತ್ತು ಹಾರುತಿದೆ ಎರಡು ಪದಗಳ ನಡುವಿನ ನಾದ ವಿನ್ಯಾಸದಿಂದ ಹಾರುವ ಸ್ಪಷ್ಟ ಅನುಭೂತಿ ಮೂಡುತ್ತದೆ. ಚರಣ ನಾಲ್ಕು ಮಾತ್ರಗಳ ನಾಲ್ಕು ಗಣದಲ್ಲಿದ್ದರೂ 5+3 ಅಥವಾ 3+5 ಹೀಗೆ ಕೂಡ ಜೋಡಣೆಯಾಗುತ್ತವೆ. ‘ನೀಲ ಮೇಘಮಂಡಲ’ ಇಲ್ಲಿ ಎಂಟು ಮಾತ್ರಗಳಿದ್ದರೂ ಒಡೆಯುವುದು ಕಷ್ಟ. ಸೂರ್ಯಚಂದ್ರರನ್ನು ಕೂಡ ಹಾಗೆಯೇ. ಇಡೀ ಕವಿತೆಯಲ್ಲಿ ಹಕ್ಕಿಯ ಹಾರಾಟ ಕಾಣಿಸುತ್ತದೆ; ಕೇಳಿಸುತ್ತದೆ. ಬರೀ ಅರ್ಥದ ನೆಲೆ ಹಿಡಿದರೆ ಇದು ಸಿಗದು. ಭರತ ತನ್ನ ‘ನಾಟ್ಯಶಾಸ್ತ್ರ’ದಲ್ಲಿ ಮೂರು ಗ್ರಾಮಗಳ ಬಗ್ಗೆ ಮಾತನಾಡುತ್ತಾನೆ. ಷಡ್ಜ ಗ್ರಾಮ, ಮಧ್ಯಮ ಗ್ರಾಮ ಮತ್ತು ಗಾಂಧಾರ ಗ್ರಾಮ.. ಷಡ್ಜ ಗ್ರಾಮ ಲೌಕಿಕ ಸಂಗೀತ (‘ರವೀಂದ್ರ ಸಂಗೀತ’ ಇಲ್ಲಿಗೆ ಸೇರಿಬರುತ್ತದೆ.)

ಮಧ್ಯಮ ಗ್ರಾಮ ಪ್ರಯೋಗಶೀಲ ಸಂಗೀತ; ಬೇಂದ್ರೆಯವರದು ಗಾಂಧಾರ ಗ್ರಾಮ.. ಅದು ಅಲೌಕಿಕ ವಾಗಿದ್ದು, ಅನುಭವಕ್ಕೆ ಮಾತ್ರ ದೊರಕಬಲ್ಲದು; ಅದು ಮಾತಿಗೆ ಸಿಲುಕದ್ದು. ಗಮನಿಸಿ, ಷಡ್ಜ ಗ್ರಾಮಕ್ಕೆ ಷಡ್ಜ ಪಂಚಮ ಭಾವ, ಮಧ್ಯಮ ಗ್ರಾಮಕ್ಕೆ ಷಡ್ಜ ಮಧ್ಯಮ ಭಾವ.. ಆದರೆ ಗಾಂಧಾರ ಗ್ರಾಮಕ್ಕೆ ಷಡ್ಜ ಗಾಂಧಾರ ಮಧ್ಯಮ ಭಾವ ಆಗುವುದಿಲ್ಲ! ಅದೇ ಅಲೌಕಿಕತೆ! ಬೇಂದ್ರೆ ತಮ್ಮ ಕಾವ್ಯವನ್ನು ‘ವಿಶ್ವರಹಸ್ಯದ ಅನಾವರಣ’ ಎಂದು ಕರೆದಿರುವುದನ್ನು ಈ ಅಲೌಕಿಕ ಗ್ರಹಿಕೆಯ ಹಿನ್ನೆಲೆಯಲ್ಲಿ ನೋಡಬಹುದು. ಮಾತು ಅವರಿಗೆ ಕೇವಲ ಶಾಬ್ದಿಕ ಸಂeಯಾಗಿರದೆ, ಅಲೌಕಿಕಕ್ಕೆ ಮಾರ್ಗವಾಗಿತ್ತು.

ಸ್ವರವೆತ್ತೆ ಮಂತ್ರ ಬೆರಳೆತ್ತೆ ತಂತ್ರ

ಮೈ ಕಟ್ಟು ಯಂತ್ರವೆನಿಸಿ

(ವಿಕಾಸ)

ಈ ಕವಿತೆ ಹೀಗೆ ಮುಂದುವರೆದು ಯೋಗಿಕ ಅನುಭೂತಿಯ ನೆಲೆಗಳನ್ನು ನೋಡುತ್ತದೆ. ಮೂಲಾ ಧಾರದ ಬುನಾದಿಯಿಂದ ಸಹಸ್ರಾರದ ಶಿಖರದವರೆಗಿನ ಹಾದಿ ಇಲ್ಲಿ ಉಲ್ಲೇಖಿತವಾಗುತ್ತದೆ. ಸೋಮ-ಸೂರ್ಯರು ಅಲ್ಲಿ ಒಂದಾಗಿ ನಿಲ್ಲುತ್ತಾರೆ. ಈ ಅರಿವು ಅನುಭೂತಿಯಾಗಿ ಸ್ವರ್ಣಗಂಗೆ ಈ ಅರಿವಿನ ಹೊಳೆಯಾಗಿ ಅಲೌಕಿಕದ ಕದ ತೆರೆಯುತ್ತದೆ. ಯೋಗ ಪರಿಭಾಷೆಯಲ್ಲಿ, ಸುಷಮ್ನನಾಡಿ ತೆರೆದಾಗ ಮೂಲದ ಶಕ್ತಿ ಸಹಸ್ರಾರಕ್ಕೆಕ್ಕೇರುವ ಹಾದಿ ತೆರೆಯುತ್ತದೆ.

ಯಾರು ತೆರೆದರೂ ನೀರ ರೂಪ

ಅವರವರ ರೂಪ ಆ ವರಸ್ವರೂಪ

ಇದು ಬೇಂದ್ರೆಯವರ ಕಾಣ್ಕೆಯಲ್ಲಿ ಬರುವ ಗಾಂಧಾರ ಗ್ರಾಮ. ಹೀಗೆ ಮುಂದುವರೆದು ಬರುವ ಸಾಲುಗಳ ಗಮನಿಸಿ:

ಅಂಬಿಕೆಯ ಬೀಜ ನಂಬಿಕೆಯ ಮೊಳೆತು

ಆ ದತ್ತು ಆದ ಹೂವು

ಬ್ರಹ್ಮ ಕಾಮವೇ ಕಾವನಾಗಿ

ಕಾಯ್ದಿತ್ತು ನುಡಿಯ ಗುಡಿಯು

ಹೀಗೆ ಜಗತ್ತಿನ ಮೂಲ ಸಂಕಲ್ಪಗಳು ಅವರಲ್ಲಿ ಕಾಣ್ಕೆಯಾಗುತ್ತವೆ. ಈ ಧಾರೆಯ ಹುಡುಕಾಟವೇ ಅದರ ಜನ್ಮಮೂಲ. ಅಂಬಿಕೆ ಆ ಮೂಲ ಬೀಜವಾದರೆ ದತ್ತ ಅದರ ಹೂವು. ಅರಿವಿನ ಬೀಜ ಅರಳಲು ದತ್ತನ ಇರುವು ಒಂದು ನೆಪ. ಅಂಬಿಕಾತನಯದತ್ತ ಎನ್ನುವುದೇ ಪೂರ್ಣಸ್ಥಿತಿ.

ಅಚಲ ಷಡ್ಜ

ಬೇಂದ್ರೆಯವರು ಬಳಸುವ ಇನ್ನೊಂದು ಸಂಗೀತದ ಪರಿಕಲ್ಪನೆ ಅಚಲ ಷಡ್ಜದ್ದು. ಷಡ್ಜ ಎನ್ನುವ ಹೆಸರಿನಲ್ಲಿಯೇ ಅದು ಆರು ಸ್ವರಕ್ಕೂ ಜನಕ ಎಂಬ ಕಲ್ಪನೆ ಇದೆ. ಇದನ್ನು ವಿಸ್ತರಿಸಿ ಬೇಂದ್ರೆ ಏಳು, ಒಂಭತ್ತು ಮತ್ತು ಹದಿಮೂರನೆಯ ಸ್ವರಗಳನ್ನು ಸಂವಾದಿ ಎನ್ನುತ್ತಾರೆ. ಇದು ಸ-ಮ ಮತ್ತು ಸ-ಪಗಳ ಸಂಬಂಧದ ಕುರಿತಾಗಿದೆ. ಈ ೭-೯-೧೩ ಎಂಬ ಸಂಖ್ಯೆಗಳು ವೇದ ಮೂಲಗಣಿತ ಎಂದು ಕರೆಯುವ ‘ಇಂದ್ರಪ್ರಸ್ಥ ಮತ’ದಿಂದ ಬಂದಿದ್ದು. ಬೇಂದ್ರೆಯವರಿಗೆ ಇದರ ಬಗ್ಗೆ ನಂಬಿಕೆ ಇತ್ತು, ಅದನ್ನು ಅವರು ತಮ್ಮ ಕವಿತೆಗಳ ಬೇರೆ ಬೇರೆ ನೆಲೆಯಲ್ಲಿ ತಂದರು.

ಸಂಖ್ಯೆ ಎಂಬುದು ಆಕೃತಿ ಭಾಷೆ

ಆಕೃತಿ ಎಂಬುದು ಸಂಖ್ಯೆಯ ಆಸೆ

ಸಂಖ್ಯಾಕೃತಿಯಲಿ ಗುಣಮೈದೋರೆ

ಕ್ರಿಯಾಶೀಲವಾಯಿತು ಆ ಹೋರೆ

ಎನ್ನುವ ಬೇಂದ್ರೆ ಅದರ ಮೂಲಕವೇ ದರ್ಶನವನ್ನು ಕಾಣಲು ಪ್ರಯತ್ನಿಸಿದೆ.

ಕಾಣಬೇಕಂಬವರಿಗೆ

ಕಾಣು ಶಂಕರನಾರಾಯಣಾ-೫೧೨೦೨೧೫

ಎಂದು ‘ಭಂ ಭಂ ಭೋಲಾನಾಥ’ ಕವಿತೆಯಲ್ಲಿ ಬರೆಯತ್ತಾರೆ. ಈ ೫೧೨೦೨೧೫ ಎನ್ನುವುದೇ ಅಚಲ ಷಡ್ಜದ ಮೂಲ ಸೂತ್ರ. ಇದರ ವಿಸ್ತಾರವೇ ತಾರಕ ರಾಮ ಮಂತ್ರ. ಇವೆಲ್ಲವೂ ಬೇಂದ್ರೆ ಕಾವ್ಯದಲ್ಲಿ ಮುಖ್ಯ ಪಾತ್ರವನ್ನು ವಹಿಸಿವೆ. ಷಡ್ಜ ಸಾಪೇಕ್ಷತೆ, ನಿಯುಕ್ತ ಸ್ವರಾಂತರ, ತಾಳ ವಿಪ್ರವಾಹ, ಆವರ್ತನ ಶೀಲತೆ ಮತ್ತು ಅಲಂಕಾರ ಇವೆಲ್ಲವನ್ನೂ ತಮ್ಮ ಕವಿತೆಗಳಲ್ಲಿ ಬೇಂದ್ರೆ ಬಳಸುತ್ತಾರೆ. ಇದರ ಹಿಂದಿನ ತಾತ್ವಿಕತೆ ಏನು? ಹುಡುಕಲು ಈ ಜನ್ಮ ಸಾಲದು! ಆದರೂ ಪ್ರಯತ್ನ ಮಾಡುವಲ್ಲಿ ತಪ್ಪಿಲ್ಲವೆಂಬುದೇ ನನ್ನ ಭಾವನೆ.

ವಿಶ್ವ ಸಾಮರಸ್ಯದ ಓಂಕಾರವನ್ನು ಅ-ಉ-ಮ ಸಂವಾದ ಕವಿತೆಯ ಮೂಲಕ ಬೇಂದ್ರೆ ವಿಶ್ಲೇಷಿಸಿ ದ್ದಾರೆ. ಇದನ್ನು ಅವರು ಬೀಜಾಕ್ಷರವಾಗಿ ಬಳಸಿ ಕೊಂಡರು. ಬೀಜಾಕ್ಷರಗಳು ತಾತ್ವಿಕತೆಯ ನೆಲಗಟ್ಟು. ಅದನ್ನು ಅರ್ಥದ ರೂಪದಲ್ಲಿ ನೋಡಲಾಗದು. ಸರ್ವವೂ ಏಕದಲ್ಲಿ ಲೀನವಾಗುವ ಅಲ್ಲಿಂದಲೇ ಸರ್ವವೂ ಉದಯಿಸುವ ಮೂಲ ಸಾಧ್ಯತೆಯನ್ನು ಬೇಂದ್ರೆ ಅನ್ವೇಷಿಸುತ್ತಿದ್ದರು. ಪ್ರಣವ ಪ್ರವೀಣ ಎನ್ನುವ ಅವರ ಕವಿತೆ ನಾದಸ್ತಂಭ ಗಗನದಲ್ಲಿ ಗುಡುಗುವುದನ್ನು ಕೇಳುತ್ತದೆ. ಇದು ಅನಾಹತವು ಆಹತವಾಗಿ ಮೂಡುವ ಬೆರಗು. ಷಡ್ಜ ಸಾಪೇಕ್ಷತೆ, ನಿಯುಕ್ತ ಸ್ವರಾಂತರ, ತಾಳ ವಿಪ್ರವಾಹ, ಆವರ್ತನ ಶೀಲತೆ ಮತ್ತು ಅಲಂಕಾರ ಇವೆಲ್ಲವನ್ನೂ ತಮ್ಮ ಕವಿತೆಗಳಲ್ಲಿ ಬೇಂದ್ರೆ ಬಳಸುತ್ತಾರೆ. ಇದರ ಹಿಂದಿನ ತಾತ್ವಿಕತೆ ಏನು .. ಹುಡುಕಲು ಈ ಜನ್ಮ ಸಾಲದು.. ಆದರೂ ಪ್ರಯತ್ನ ಮಾಡುವಲ್ಲಿ ತಪ್ಪಿಲ್ಲವೆಂಬುದೇ ನನ್ನ ಭಾವನೆ.

ದದವಾ ದದದೋಂ ದದದಮ ದತ್ತೋಂ

ದಿಕ್ತಟ ತಟವಟ ಧಿಗಿದಂ ಧಿಕ್ತೋಂ

ರ್ನಿದ್ವಂದ್ವದೊಳೆದ್ದಿತು ಓಂ ನಾದ

ತಾಂಡವೇಶ್ವರನ ಅಖಂಡ ವಾದ

(ಸಹಸ್ರ ತಂತ್ರಿ)

ಇದು ಬೇಂದ್ರೆ ಪರಿಭಾವಿಸಿ ಕೊಂಡ ಸಂಗೀತ. ಇಲ್ಲಿ ಸಾಹಿತ್ಯ-ಸಂಗೀತ-ಅಧ್ಯಾತ್ಮ ಹೀಗೆ ಹಲವು ನೆಲೆಗಳು ಒಟ್ಟಾಗಿ ಸೇರಿವೆ. ಹೀಗಾಗಿ ಇದನ್ನು ‘ಬೇಂದ್ರೆ ಸಂಗೀತ’ ಎನ್ನುವುದಕ್ಕಿಂತ ‘ಬೇಂದ್ರೆ ಉಪ ನಿಷತ್’ ಎಂಬುದೇ ಸರಿಯಾದ ಪರಿಕಲ್ಪನೆ ಆಗಬಹುದು ಎನ್ನುವುದು ನನ್ನ ಗ್ರಹಿಕೆ. (ಪ್ರತಿಕ್ರಿಯಿಸಿ :
viramapost@ gmail.com)

*

ನಾಕು ತಂತಿ!

ಷಡ್ಜ ಎನ್ನುವುದು ಅಸ್ತಿತ್ವ, ಇದು ಇಡೀ ಸಂಗೀತದ ವ್ಯಕ್ತ ರೂಪ, ಇದು ವಿಶ್ವವೀಣೆಯ ಮೊದಲ ತಂತಿ. ಇದನ್ನು ಸ್ಥಾಯಿ ತತ್ವವೆಂದೂ ಕರೆಯ ಬಹುದು. ಶ್ರೀವಿದ್ಯೆಯ ಇದು ನಾದ ನೀನು ಎಂಬ ಎರಡನೆಯ ತಂತಿ ಪಂಚಮ ಭಾವ ಇದನ್ನು ಬಿಂದು ಎಂದೂ ಕರೆಯಲಾಗುತ್ತದೆ. ಇದು ಸ್ತ್ರೀ ತತ್ವ. ಬೇಂದ್ರೆಯವರ ಕಾವ್ಯದ ನೆಲೆಯಾದ ಮಾತೃ ತತ್ವ. ನಾದ- ಬಿಂದು ಸೇರಿದಾಗಲೇ ಸೃಷ್ಟಿ ಸಾಧ್ಯ. ಅವೆರಡು ಸೇರಿದಾಗಲೇ ಜಗತ್ತು ಮುಂದುವರೆಯುವುದು ಸಾಧ್ಯ. ‘ಸ’ಯಿಂದ ‘ಪ’ವರೆಗೆ ಇರುವುದು ಗಾಂಧಾರ ಭಾವ: ಇದನ್ನೇ ಬೇಂದ್ರೆ ‘ಆನು’ ಎಂದು ಕರೆಯುತ್ತಾರೆ. ಹಾಗೆ ‘ಪ’ಯಿಂದ ‘ಸ’ವರೆಗಿನದು ಮಧ್ಯಮ ಭಾವ; ಇದನ್ನು ಬೇಂದ್ರೆ ‘ತಾನು’ ಎಂದು ಕರೆಯುತ್ತಾರೆ. ನೀವು ಷಡ್ಜ ಪಂಚಮಭಾವದಲ್ಲಿದ್ದರೆ ಪಂಚಮಕ್ಕಾಗಿ ನಿರ್ದಿಷ್ಟ ಸ್ಥಾನ ಮೀಸಲಿರುತ್ತದೆ, ಅದರ ನಂತರ ದೈವತ ಬರುತ್ತದೆ. ಷಡ್ಜ ಮಧ್ಯಮ ಭಾವದಲ್ಲಿ ನುಡಿಸುತ್ತಿರುವಾಗ ಆ ಸ್ಥಾನ ಪಂಚಮ ಮತ್ತು ದೈವತದ ನಡುವೆ ಬರುತ್ತದೆ. ಇದೇ ಬೇಂದ್ರೆಯವರ ಪ್ರಕಾರ ಪ್ರಮಾಣ ಶ್ರುತಿ; ‘ನಾಕುತಂತಿ’ ಕವಿತೆ ಬಿಂಬಿಸುತ್ತಿರುವುದು ಅದನ್ನೇ.