Sudhakar D Column: ಹಲಸೂರು ಕೆರೆಯಲ್ಲಿ ನೀರುಹಕ್ಕಿಗಳು !
ಸುಮಾರು 80 ರಿಂದ 100 ದೊಡ್ಡ ಗಾತ್ರದ ಹಕ್ಕಿಗಳು ಕೆರೆಯಲ್ಲಿನ ಲಭ್ಯ ನೀರಿನಲ್ಲಿ ಆಹಾರಾ ನ್ವೇಷಣೆ ನಡೆಸಿದ್ದವು. ಅವುಗಳ ಆಹಾರ, ಗೊತ್ತಲ್ಲ, ಮೀನು ಮತ್ತು ಇತರ ಜಲಚರಗಳು! ಅದೆಲ್ಲಿಂದಲೋ ಬಂದ ಈ ಹಕ್ಕಿಗಳು, ಇರುವ ಸ್ವಲ್ಪ ನೀರಿನಲ್ಲೇ ತಮ್ಮ ಆಹಾರ ಹುಡುಕುತ್ತಾ, ಅತ್ತಿತ್ತ ಹಾರಾಡುತ್ತಿರುವ ದೃಶ್ಯ ಸುಂದರವಾಗಿತ್ತು.
-
ಸುಧಾಕರ್ ಡಿ.
ಬೆಂಗಳೂರಿನ ಅತಿ ದೊಡ್ಡ ಕೆರೆಗಳಲ್ಲಿ ಒಂದಾದ ಹಲಸೂರು ಕೆರೆ (ಅಲಸೂರು ಕೆರೆ), ಈ ನಗರದ ಐತಿಹಾಸಿಕ ಪರಂಪರೆಯ ಒಂದು ಭಾಗ. ಕೆಂಪೇಗೌಡರ ಕಾಲದ ಈ ಕೆರೆಯನ್ನು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಸದಾಕಾಲ ನೀರಿನಿಂದ ತುಂಬಿರುವ ಈ ಕೆರೆಯು, ಈ ವರ್ಷ ಬೇಸಗೆಯಲ್ಲಿ ತುಸು ಒಣಗಿತ್ತು: ಅಂದರೆ, ಕೆರೆಯ ಹೂಳೆತ್ತುವ ಕೆಲಸಕ್ಕಾಗಿ ಮತ್ತು ಅಭಿವೃದ್ಧಿಗಾಗಿ, ಕೆರೆಯ ಬಹುಭಾಗದ ನೀರನ್ನು ತೆರೆವುಗೊಳಿಸಲಾಗಿದ್ದು, ಹೂಳೆತ್ತುವ ಕೆಲಸ ಈಗಲೂ (ಜೂನ್ 2026) ನಡೆಯುತ್ತಿದೆ.
ಇದನ್ನೂ ಓದಿ: National Bird Day: ಆಕಾಶದ ಅತಿಥಿಗಳ ರಕ್ಷಿಸೋಣ
ಈ ನಡುವೆ, ಜೂನ್ ಮೊದಲವಾರ ಬೆಂಗಳೂರಿನಲ್ಲಿ ಬಂದ ಮಳೆಯಿಂದಾಗಿ, ಕೆರೆಯ ಒಂದು ಭಾಗದಲ್ಲಿ ನೀರು ತುಂಬಿತು! ಬಹುಪಾಲು ಒಣಗಿದಂತಿದ್ದ ಕೆರೆಯ ಅಂಗಳದಲ್ಲಿ, ಈಗ ಸುಮಾರು ಶೇ.20ರಷ್ಟು ನೀರು ತುಂಬಿದೆ. ಕಾರ್ಯನಿಮಿತ್ತ, ಕ್ಯಾಮೆರಾ ಹಿಡಿದು, ಹಲಸೂರು ಕೆರೆಯ ದಾರಿ ಯಲ್ಲಿ ಹೋಗುತ್ತಿದ್ದಾಗ, ಬಹು ವಿಶೇಷ ಎನಿಸುವ ಒಂದು ವಿದ್ಯಮಾನ ಗಮನ ಸೆಳೆಯಿತು! ಆ ವಿಶಾಲ ಕೆರೆಯ ಒಂದು ಭಾಗದಲ್ಲಿ, ಸುಮಾರು 100 ನೀರುಹಕ್ಕಿಗಳು ಬೀಡುಬಿಟ್ಟಿವೆ!
ಸುಮಾರು 80 ರಿಂದ 100 ದೊಡ್ಡ ಗಾತ್ರದ ಹಕ್ಕಿಗಳು ಕೆರೆಯಲ್ಲಿನ ಲಭ್ಯ ನೀರಿನಲ್ಲಿ ಆಹಾರಾ ನ್ವೇಷಣೆ ನಡೆಸಿದ್ದವು. ಅವುಗಳ ಆಹಾರ, ಗೊತ್ತಲ್ಲ, ಮೀನು ಮತ್ತು ಇತರ ಜಲಚರಗಳು! ಅದೆಲ್ಲಿಂದಲೋ ಬಂದ ಈ ಹಕ್ಕಿಗಳು, ಇರುವ ಸ್ವಲ್ಪ ನೀರಿನಲ್ಲೇ ತಮ್ಮ ಆಹಾರ ಹುಡುಕುತ್ತಾ, ಅತ್ತಿತ್ತ ಹಾರಾಡುತ್ತಿರುವ ದೃಶ್ಯ ಸುಂದರವಾಗಿತ್ತು.
ನಮ್ಮ ರಾಜ್ಯದ ಇತರ ಭಾಗಗಳಲ್ಲಿ ಕಂಡುಬರುವ ಬಣ್ಣದ ಕೊಕ್ಕರೆ (ಪೇಂಟೆಡ್ ಸ್ಟ್ರೋಕ್), ಪೆಲಿಕನ್‌ಗಳು ಈ ಜೂನ್ ತಿಂಗಳಿನಲ್ಲಿ, ಹಲಸೂರು ಕೆರೆಯ ನೀರನ್ನು ಆಶ್ರಯಿಸಿದ್ದು ಕಂಡು, ನನಗೆ ತುಸು ಅಚ್ಚರಿಯೇ ಎನಿಸಿತು. ಏಕೆಂದರೆ, ಕಳೆದ ಒಂದು ದಶಕಕ್ಕೂ ಮೀರಿದ ಅವಧಿಯಲ್ಲಿ, ಕ್ಯಾಮೆರಾ ಹಿಡಿದು, ವೃತ್ತಿ ನಿಮಿತ್ತ -ಟೋ ತೆಗೆಯಲು ಅದೇ ದಾರಿಯಾಗಿ ಹಲವು ಬಾರಿ ಓಡಾಡಿ ದ್ದೇನೆ. ಇದೇ ಮೊದಲ ಬಾರಿ, ಪೆಲಿಕನ್ ಮತ್ತು ಬಣ್ಣದ ಕೊಕ್ಕರೆಯನ್ನು ಹಲಸೂರು ಕೆರೆಯಲ್ಲಿ ನೋಡಿದೆ.
ಬೆಂಗಳೂರಿನ ಇತರ ಕೆರೆಗಳಲ್ಲಿ ಇವು ಕಾಣಿಸುವುದುಂಟು; ಆದರೆ, ಅಲಸೂರು ಕೆರೆಯಲ್ಲಿ ತುಂಬಾ ಅಪರೂಪ. ನನ್ನ ವೃತ್ತಿನಿಮಿತ್ತ ಫೋಟೋ ಅಸೈನ್‌ಮೆಂಟ್ ಕೆಲಸದ ನಡುವೆಯೇ, ಬಿಡುವು ಮಾಡಿಕೊಂಡು, ಈ ಜಲಪಕ್ಷಿಗಳ ಚಿತ್ರಗಳನ್ನು ಕ್ಲಿಕ್ಕಿಸಿದೆ. ಬೆಂಗಳೂರಿನಂತಹ ಮಹಾನಗರದಲ್ಲೂ ಅಪರೂಪದ ನೂರಾರು ಜಲಪಕ್ಷಿಗಳು ಕಾಣಸಿಗುತ್ತಿವೆ ಎಂಬುದು ನಿಜಕ್ಕೂ ಸಂತಸದ ಸುದ್ದಿಯೇ ಸರಿ; ಈ ರೀತಿ ಹಕ್ಕಿಗಳು ಬಂದು, ಆಹಾರ ಹುಡುಕುತ್ತಿವೆ ಎಂದರೆ, ಅಲ್ಲಿನ ನೀರು ಮತ್ತು ಪರಿಸರ, ಒಂದು ಮಟ್ಟದ ಆರೋಗ್ಯವನ್ನು ಕಾಪಾಡಿಕೊಂಡಿದೆ ಎಂದು ಸ್ಥೂಲವಾಗಿ ತಿಳಿಯಬಹುದು.
ಪೆಲಿಕನ್ ಮತ್ತು ಪೇಂಟೆಡ್‌ಸ್ಟ್ರೋಕ್‌ಗಳ ಜತೆಯಲ್ಲೇ, ನೀರು ಕಾಗೆ ಮತ್ತು ಇತರ ಕೊಕ್ಕರೆಗಳೂ ನನ್ನ ಕ್ಯಾಮೆರಾದಲ್ಲಿ ಸೆರೆಯಾದವು. ಆ ಪಕ್ಷಿಗಳ ಸಂತತಿ ಇನ್ನಷ್ಟು ವೃದ್ಧಿಯಾಗಲಿ, ಜಲಚರಗಳ ಸಂಖ್ಯೆ ಸಾವಿರವಾಗಲಿ ಎಂಬುದೇ ನನ್ನ ಆಶಯ.
(ಅಕ್ಷರರೂಪಕ್ಕೆ: ಶ.ಹಾ.)