ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shashidhara Halady Column: ಬೇಕೆ ಇಂತಹ ವಿನಾಶ! ಹೆದ್ದಾರಿಗಾಗಿ ಕಾಡು ನಾಶ !

ಪಶ್ಚಿಮ ಘಟ್ಟಗಳು ಮತ್ತು ಅದರ ಆಶ್ರಯದಲ್ಲಿ ಬೆಳೆದಿರುವ ವನಸಿರಿ - ಇದನ್ನು ಪಡೆದಿರುವ ನಮ್ಮ ರಾಜ್ಯವು ನಿಜಕ್ಕೂ ಅದೃಷ್ಟವಂತ ರಾಜ್ಯ! ಇಂತಹದೊಂದು ಅಪರೂಪದ ಕಾಡು ಪ್ರದೇಶವನ್ನು ಪಡೆದಿರುವ ನಮ್ಮ ರಾಜ್ಯದ ಜನರು ಸಹ ಅದೃಷ್ಟ ವಂತರು. ಇಂತಹ ಅಪರೂಪದ ಕಾಡು, ವನಸಿರಿ, ಜೀವ ವೈವಿಧ್ಯ ನಮ್ಮ ದೇಶದ ಅವೆಷ್ಟೋ ರಾಜ್ಯಗಳಲ್ಲಿ ಕಾಣ ಸಿಗದು!

ಬೇಕೆ ಇಂತಹ ವಿನಾಶ! ಹೆದ್ದಾರಿಗಾಗಿ ಕಾಡು ನಾಶ !

-

ಶಶಿಧರ ಹಾಲಾಡಿ

ನಮ್ಮ ರಾಜ್ಯದ ಅತಿ ಅಪರೂಪದ ಮತ್ತು ಅಪಾರ ಜೀವ ವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟಗಳ ಭಾಗದಲ್ಲಿ, ರಸ್ತೆಯನ್ನು ವಿಸ್ತರಣೆ ಮಾಡುವ ಮತ್ತು ಅದಕ್ಕೆಂದೇ ಸುರಂಗ ಕೊರೆಯುವ ಪ್ರಸ್ತಾಪ ಮುನ್ನೆಲೆಗೆ ಬಂದಿದೆ. ಆದರೆ, ಅಂತಹದೊಂದು ಬೃಹತ್ ಕಾಮಗಾರಿ ಯಿಂದಾಗಿ ನಡೆಯಬಹುದಾದ ಕಾಡಿನ ನಾಶ ಅನೂಹ್ಯ. ಇಂದಿನ ಸನ್ನಿವೇಶದಲ್ಲಿ, ಕಾಡನ್ನು ಕಡಿದು ರಸ್ತೆ ವಿಸ್ತರಿಸುವಷ್ಟು ಸಿರಿವಂತರು ನಾವಲ್ಲ, ಬದಲಿಗೆ ಈಗ ಇರುವ ಪರಿಸರ ವನ್ನುಉಳಿಸಿಕೊಂಡು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾದುದು ಇಂದಿನ ತುರ್ತು ಅಗತ್ಯ.

ಪಶ್ಚಿಮ ಘಟ್ಟಗಳು ಮತ್ತು ಅದರ ಆಶ್ರಯದಲ್ಲಿ ಬೆಳೆದಿರುವ ವನಸಿರಿ - ಇದನ್ನು ಪಡೆದಿರುವ ನಮ್ಮ ರಾಜ್ಯವು ನಿಜಕ್ಕೂ ಅದೃಷ್ಟವಂತ ರಾಜ್ಯ! ಇಂತಹದೊಂದು ಅಪರೂಪದ ಕಾಡುಪ್ರದೇಶವನ್ನು ಪಡೆದಿರುವ ನಮ್ಮ ರಾಜ್ಯದ ಜನರು ಸಹ ಅದೃಷ್ಟ ವಂತರು. ಇಂತಹ ಅಪರೂಪದ ಕಾಡು, ವನಸಿರಿ, ಜೀವ ವೈವಿಧ್ಯ ನಮ್ಮ ದೇಶದ ಅವೆಷ್ಟೋ ರಾಜ್ಯಗಳಲ್ಲಿ ಕಾಣಸಿಗದು!

ಸಹ್ಯಾದ್ರಿ ಶ್ರೇಣಿಯ ಅಪಾರ ಜೀವ ವೈವಿಧ್ಯವು ನಮ್ಮ ರಾಜ್ಯದ ಸಿರಿ; ಕಾಡು, ಬೆಟ್ಟ, ತೊರೆ, ನದಿ, ಜಲಪಾತ, ಉರಗ, ಹಕ್ಕಿ, ಹುಲಿ, ಆನೆ - ಹೀಗೆ ನಮ್ಮ ರಾಜ್ಯದ ಪ್ರಾಕೃತಿಕ ವಿಸ್ಮಯ ಗಳು ಒಂದೇ ಎರಡೇ! ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಪಶ್ಚಿಮ ಘಟ್ಟಗಳ ಬಹುಭಾಗವು ನಮ್ಮ ರಾಜ್ಯದಲ್ಲಿದೆ; ಆ ಘಟ್ಟಗಳಲ್ಲಿ ಬೆಳೆದಿರುವ ನಿತ್ಯ ಹರಿದ್ವರ್ಣ ವನದ ಬಹುಭಾಗವು ಕರ್ನಾಟಕದಲ್ಲಿದೆ; ಆ ಕಾಡುಗಳಲ್ಲಿರುವ ಅಪಾರ ಸಂಖ್ಯೆಯ ಸಸ್ಯ ಮತ್ತು ಪ್ರಾಣಿಗಳು ನಮ್ಮ ರಾಜ್ಯದಲ್ಲಿವೆ.

ನಮ್ಮ ರಾಜ್ಯದ ಪಶ್ಚಿಮಘಟ್ಟಗಳು ನಮ್ಮ ಪರಂಪರೆಯ ಭಾಗ; ಜತೆಗೆ ಇಲ್ಲಿನ ವನಸಿರಿಯು ಸಮಸ್ತ ಕನ್ನಡಿಗರ ಹೆಮ್ಮೆ.

ಆದರೆ, ಇಪ್ಪತೊಂದನೆಯ ಶತಮಾನದ ಮೊದಲರ್ಧದಲ್ಲಿ, ಇಂದು ಏನಾಗುತ್ತಿದೆ? ನಮ್ಮ ರಾಜ್ಯದಲ್ಲಿರುವ ಪಶ್ಚಿಮ ಘಟ್ಟಗಳನ್ನು, ಅಲ್ಲಿನ ಕಾಡು ಗಳನ್ನು ಹಂತಹಂತವಾಗಿ ಕತ್ತರಿಸುವ, ನಾಶ ಮಾಡುವ, ಬರಡು ಮಾಡುವ ಗಂಭೀರ ಪ್ರಯತ್ನಗಳು ನಿರಂತರಗಾಗಿ ನಡೆಯುತ್ತಲೇ ಇವೆ! ಕಾಡು ನಾಶ ಮಾಡಲು, ಸಹ್ಯಾದ್ರಿಯ ಒಡಲನ್ನು ಬರಿದು ಮಾಡಲು ನಮ್ಮವರು ಮುಂದೊಡ್ಡುವ ಕಾರಣಗಳು ಹಲವು; ಕ್ಷುಲ್ಲಕ ನೆಪಗಳು ಹಲವು; ಕಾಡಿನೊಳಗೆ ಬೃಹತ್ ಕಾಮಗಾರಿಗಳನ್ನು ಯೋಜಿಸಲು, ಅದಕ್ಕಾಗಿ ಅದೆಷ್ಟೋ ಸಾವಿರ ರುಪಾಯಿ ಗಳನ್ನು ವೆಚ್ಚ ಮಾಡಲು ನಮ್ಮ ಸರಕಾರಗಳು ತುದಿಗಾಲಿನಲ್ಲಿ ನಿಂತಿವೆಯೇನೋ ಎಂಬಂತಹ ಸನ್ನಿವೇಶ!

ಇದನ್ನೂ ಓದಿ: Shashidhara Halady Column: ಹೀಗೂ ಇದೆ ಸೋಗುವೇಷದ ಉದಾಹರಣೆ !

ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ದೊಡ್ಡ ದೊಡ್ಡ ಕಂಪೆನಿಗಳು, ಅದಕ್ಕಾಗಿ ವಿಶ್ವಮಟ್ಟದಲ್ಲಿ ಟೆಂಡರ್! ಕಾಡಿನೊಳಗೆ ನೂರಾರು ಲಾರಿಗಳ ಓಡಾಟ, ಬುಲ್‌ ಡೋಜರ್‌ ಗಳ ಆರ್ಭಟ, ಹೊಸ ಹೊಸ ಕಾಲುವೆಗಳನ್ನು ನಿರ್ಮಿಸಲು ನೆಲವನ್ನು ಅಕರಾಳ ವಿಕರಾಳ ವಾಗಿ ಅಗೆದು ಹಾಕುವ ಉತ್ಸಾಹ!

ಒಟ್ಟಿನಲ್ಲಿ, ಬರಿದಾಗುತ್ತಿರುವುದು ಮಾತ್ರ, ಅಮೂಲ್ಯವಾದ ಕಾಡು, ಜೀವವೈವಿಧ್ಯ ಮತ್ತು ಪ್ರಾಕೃತಿಕ ಸಂಪತ್ತು. ಇಲ್ಲಿ ‘ಬರಿದಾಗುತ್ತಿರುವ’ ಎಂಬ ಸಂಜೀವಿನಿ ಗೋಧಾಮದಿಂದ ವಿನೂತನ ಅಭಿಯಾನ ಪದವು, ನಡೆಯುತ್ತಿರುವ ವಿನಾಶವನ್ನು ತೆಳುವಾಗಿ ವರ್ಣಿಸುತ್ತಿದೆ; ಏಕೆಂದರೆ, ಪಶ್ಚಿಮ ಘಟ್ಟಗಳಲ್ಲಿ ಒಮ್ಮೆ ನಾಶವಾದ ಕಾಡಿನ ಭಾಗವು ಇನ್ನೆಂದಿಗೂ ಮರು ಚೇತರಿಸಿಕೊಳ್ಳಲು ಸಾಧ್ಯವಿಲ್ಲ!

ಇಂತಹ ಹಲವು ಯೋಜನೆಗಳು ಈ ಶತಮಾನದಲ್ಲಿ ಜಾರಿಗೆ ಬಂದಿವೆ, ಬರುತ್ತಿವೆ, ಈಗ ಪ್ರಗತಿಯಲ್ಲಿವೆ. ದೂರದ ಬಯಲು ಸೀಮೆಗೆ ನೀರು ತರಲೆಂದು ಈಗಲೂ ನಡೆಯುತ್ತಿರುವ ಎತ್ತಿನ ಹೊಳೆ ಯೋಜನೆಯನ್ನೇ ಗಮನಿಸಿದರೆ, ಅದಾವ ಪರಿಯಲ್ಲಿ ಸಹ್ಯಾದ್ರಿಯ ಪರಿಸರ ವು ನಾಶವಾಗುತ್ತಿದೆ ಎಂಬುದು ಅರಿವಾದೀತು; ಹಲವು ವರ್ಷಗಳಿಂದ ಸಹ್ಯಾದ್ರಿಯ ಮಡಿಲಲ್ಲಿ ನಡೆಯುತ್ತಿರುವ ಈ ಬೃಹತ್ ಕಾಮಗಾರಿಯು ಇನ್ನೂ ಮುಂದುವರಿದಿದೆ, ಆದರೆ ಆ ಯೋಜನೆಯಿಂದ ಬರುತ್ತದೆನ್ನಲಾಗಿರುವ ನೀರು ಇನ್ನೂ ಸಮರ್ಪಕ ವಾಗಿ ಬಂದಿಲ್ಲ. ಶರಾವತಿ ಪಂಪ್ಡ್ ಸ್ಟೋರೇಜ್, ಬೆಂಗಳೂರಿಗೆ ಶರಾವತಿಯ ನೀರು, ಅಘನಾಶಿನಿ ವರದಾ ಜೋಡಣೆಯ ಯೋಜನೆ, ಹುಬ್ಬಳ್ಳಿ ಅಂಕೋಲ ಹೆದ್ದಾರಿಗಾಗಿ ಕಾಡಿನ ನಾಶ - ಇಂತಹ ಹೊಸ ಹೊಸ ಯೋಜನೆಗಳ ಪ್ರಸ್ತಾಪಗಳು ಸದಾ ಸುದ್ದಿಯಲ್ಲಿವೆ. ಇನ್ನು 20ನೆಯ ಶತಮಾನದಲ್ಲಿ ಇಂತಹ ನೂರಾರು ಕಾಮಗಾರಿಗಳು ಸಹ್ಯಾದ್ರಿಯ ಪರಿಸರವನ್ನು ಗಹನವಾಗಿ ನಾಶಮಾಡಿದ್ದನ್ನು ಕಂಡಿದ್ದೇವೆ.

Screenshot_6 R

ಹೊಸ ನೆಪಗಳು ಹೊಸ ಯೋಜನೆಗಳು

ಈಗ ಕಾಡುನಾಶದ ಹೊಸ ಮಜಲನ್ನು ನಾವು ಪ್ರವೇಶಿಸುತ್ತಿದ್ದೇವೆಯೋ ಏನೋ ಎಂಬಂತಹ ಒಂದು ಹೊಸ ಯೋಜನೆಯ ಪ್ರಸ್ತಾಪ ಸುದ್ದಿಯಲ್ಲಿದೆ. ಅದುವೇ, ಆಗುಂಬೆ ಘಾಟಿಯ ರಸ್ತೆ ಅಗಲೀಕರಣ (ರಾಷ್ಟ್ರೀಯ ಹೆದ್ದಾರಿ 169 ಎ) ಮತ್ತು ಅದಕ್ಕಾಗಿ ಸುರಂಗ ಯೋಜನೆ! ನಮ್ಮ ರಾಜ್ಯದಲ್ಲಿ ಇನ್ನೂ ನಾಶವಾಗದೇ ಉಳಿದುಕೊಂಡಿರುವ ಅಪರೂಪದ ಕಾಡನ್ನು ಹೊಂದಿರುವ ಸೋಮೇಶ್ವರ ಅಭಯಾರಣ್ಯ ಮತ್ತು ಆಗುಂಬೆ ಸುತ್ತಲಿನ ಕಾಡಿಗೆ ತೀವ್ರ ಧಕ್ಕೆ ತರುವಂತಹ ಹೊಸ ಯೋಜನೆಯನ್ನು ಈಗ ಪ್ರಸ್ತಾಪಿಸಲಾಗಿದೆ.

ದಟ್ಟಕಾಡಿನಲ್ಲಿ ರಸ್ತೆಯ ಅಗಲೀಕರಣ ಒಂದು ಅಪಾಯವಾದರೆ, ಅದಕ್ಕಾಗಿ ಸಹ್ಯಾದ್ರಿಯ ಗರ್ಭದಲ್ಲಿ ಕೊರೆಯಲಿರುವ ಉದ್ದೇಶಿತ ಸುರಂಗವು, ಜಲಮೂಲವನ್ನೇ ನಾಶಗೊಳಿಸುವ ಸಾಧ್ಯತೆ ಹೊಂದಿದ್ದು, ಅದರಿಂದಾಗಿ ಅಪಾರ ಪ್ರಮಾಣದ ಕಾಡು ಹಾನಿಗೊಳಗಾಗುತ್ತದೆ.

ಈಗ ಉಳಿದುಕೊಂಡಿರುವ, ವಿರಳಾತಿವಿರಳ ಎನಿಸುವ ದಟ್ಟವಾದ ಕಾಡು ಮತ್ತು ವನಸಿರಿಯು ಆವರಿಸಿರುವ ಆಗುಂಬೆ ಸುತ್ತಲಿನ ಪರಿಸರವು ಅತಿ ಅಮೂಲ್ಯವಾದುದು; ಅಲ್ಲಿನ ಪರಿಸರ ನಾಶ ಎಂದರೆ, ಅದು ಬಹುದೊಡ್ಡ ವಿನಾಶ! ಆದ್ದರಿಂದ, ಆಗುಂಬೆ ಘಾಟಿಯ ರಸ್ತೆಯನ್ನು ಈಗ ಇರುವ ಸ್ಥಿತಿಯಲ್ಲೇ ತುಸು ಉತ್ತಮಗೊಳಿಸಿ, ಆ ಪ್ರದೇಶದ ಉತ್ತಮಗುಣಮಟ್ಟದ ಕಾಡನ್ನು ಮತ್ತು ಜೀವವೈವಿಧ್ಯವನ್ನು ಉಳಿಸಿಕೊಳ್ಳಬೇಕು ಎಂದು ಪರಿಸರಪ್ರೇಮಿಗಳು ಆಗ್ರಹಿಸುತ್ತಿದ್ದಾರೆ. ಈ ಆಗ್ರಹವು ಸಕಾರಣ ಮತ್ತು ಸ್ವಾರ್ಥರಹಿತ ಕೂಡ; ಆಗುಂಬೆ ಸುತ್ತಲೂ ಹರಡಿರುವ ಮತ್ತು ಸೋಮೇಶ್ವರ ಅಭಯಾರಣ್ಯದಲ್ಲಿನ ಕಾಡನ್ನು ರಕ್ಷಿಸುವುದರಿಂದಾಗಿ, ನಮ್ಮ ಮುಂದಿನ ಪೀಳಿಗೆಯು ಸಕಾಲದಲ್ಲಿ ಮಳೆ, ಬೆಳೆಯನ್ನು ಪಡೆದು, ಕುಡಿಯುವ ನೀರನ್ನು ಹೊಂದುವಂತಾಗುತ್ತದೆ ಎಂಬ ಮಾತು ಸಹ ನಮ್ಮ ರಾಜ್ಯದ ಭವಿಷ್ಯದ ಹಿತದೃಷ್ಟಿಯಿಂದ ಪ್ರಮುಖ ಎನಿಸುತ್ತದೆ.

ಬೇರೆ ಘಾಟಿ ರಸ್ತೆಗಳೂ ಇವೆ!

ಸದ್ಯ, ಆಗುಂಬೆ ಘಾಟಿ ರಸ್ತೆಯು, ಒಂದು ಕಡಿದಾದ, ಅಗಲಕಿರಿದಾದ ರಸ್ತೆಯಾಗಿದ್ದು, ಸೋಮೇಶ್ವರ-ಹೆಬ್ರಿ ಮೂಲಕ ಮಲೆನಾಡನ್ನು ಕರಾವಳಿಗೆ ಸಂಪರ್ಕಿಸುವ ಮಾರ್ಗ ಎನಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ನಾಗೋಡಿ ಘಾಟಿ ಮತ್ತು ಬಾಳೆಬರೆ ಘಾಟಿಗಳು ಕುಂದಾಪುರ ಪ್ರದೇಶಕ್ಕೆ ಸಂಪರ್ಕ ನೀಡುತ್ತವೆ (ಇಲ್ಲಿ ಬಸ್ ಮತ್ತು ಲಾರಿಗಳು ಸಹ ಸಂಚರಿಸ ಬಹುದು); ಆಗುಂಬೆ ಘಾಟಿಯು ತೀರ್ಥಹಳ್ಳಿಯಿಂದ ಉಡುಪಿಗೆ ಸಂಪರ್ಕ ನೀಡುತ್ತದೆ; ಇನ್ನೂ ದಕ್ಷಿಣದಲ್ಲಿ ಕೆರೆಕಟ್ಟೆ ಘಾಟಿ, ಚಾರ್ಮಾಡಿ ಘಾಟಿ, ಬಿಸಿಲೆ ಘಾಟಿ, ಶಿರಾಡಿ ಘಾಟಿ ಮತ್ತು ಸಂಪಾಜೆ ಘಾಟಿಗಳು ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ನೀಡುತ್ತವೆ. ಇವುಗಳ ಪೈಕಿ, ಆಗುಂಬೆ ಘಾಟಿಯು ಅತಿ ಕಿರಿದು ಮತ್ತು ಅತಿ ಕಡಿದು. 14 ಹಿಮ್ಮುರಿ ತಿರುವುಗಳನ್ನು ಹೊಂದಿರುವ ಈ ರಸ್ತೆಯು, ತೀವ್ರ ಕಡಿದಾಗಿದ್ದು,

ಕೇವಲ 10 ಕಿ.ಮೀ. ಅಂತರದಲ್ಲಿ ಘಟ್ಟದ ಕೆಳಗಿನ ಸೋಮೇಶ್ವರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅಗಲ ಕಿರಿದಾಗಿದ್ದು, ಹೆಚ್ಚು ವಿಸ್ತರಿಸಲು ಅವಕಾಶ ಇಲ್ಲದೇ ಇದ್ದುರಿಂದ, ಸದ್ಯ ಈ ಘಾಟಿಯ ಮೂಲಕ ಕಾರು, ಮಿನಿ ಬಸ್, ಮಿನಿ ಟ್ರಕ್ ಮೊದಲಾದ ಚಿಕ್ಕ ವಾಹನಗಳು ಮಾತ್ರ ಸಂಚರಿಸಬಲ್ಲವು. ದೊಡ್ಡ ಬಸ್ ಮತ್ತು ಲಾರಿಗಳ ಸಂಚಾರವನ್ನು ಇಲ್ಲಿ ನಿಷೇಧಿಸ ಲಾಗಿದೆ.

ಸಿಂಗಳೀಕಗಳ ಆವಾಸಸ್ಥಾನ

Screenshot_7 R

ದಟ್ಟವಾದ ಕಾಡಿನಲ್ಲಿ ಸಾಗುವ ಆಗುಂಬೆ ಘಾಟಿ ರಸ್ತೆಯಲ್ಲಿ ಸಂಚರಿಸುವವರಿಗೆ ಸುಂದರ ಪರಿಸರ ದೃಶ್ಯಗಳ ಕಾಣಸಿಗುತ್ತವೆ; ಜತೆಗೆ, ಅಳಿವಿನ ಅಂಚಿನಲ್ಲಿರುವ ಸಿಂಗಳೀಕ (ಲಯನ್ ಟೈಲ್ಡ್ ಮಕಾಕ್)ಗಳು ಈ ಕಾಡುಪ್ರದೇಶದಲ್ಲಿ ವಾಸಿಸುತ್ತವೆ; ಇಲ್ಲಿನ ಕಾಡಿನಲ್ಲಿ ವಿವಿಧ ಉರಗಗಳ ಜತೆ, ಕಾಳಿಂಗ ಸರ್ಪಗಳೂ ಇವೆ. ಇತರ ಹಲವು ಅಪರೂಪದ ಹಕ್ಕಿಗಳಿವೆ, ಪ್ರಾಣಿಗಳಿವೆ, ಕೀಟಗಳಿವೆ, ಜೀವಿಗಳಿವೆ. ಈಗ ಅಗಲಕಿರಿದಾಗಿರುವ ಈ ರಸ್ತೆಯ ಅಗಲವನ್ನು ಹೆಚ್ಚಿಸಿ, ಮೇಗರವಳ್ಳಿಯಿಂದ ಸೋಮೇಶ್ವರದ ತನಕ ಸುರಂಗ ಕೊರೆಯುವ ಪ್ರಸ್ತಾಪವನ್ನು ಈಗ ಮಾಡಲಾಗಿದೆ; ಇದಕ್ಕಾಗಿ ಡಿಪಿಆರ್ (ವಿವರವಾದ ಸಮೀಕ್ಷೆ) ತಯಾರಿಸಲು ಸಿದ್ಧ ವಾಗಿದ್ದು, ಅದಕ್ಕಾಗಿ, ಸುಮಾರು 2.33 ಕೋಟಿ ರುಪಾಯಿಗಳನ್ನು ಮೀಸಲಿರಿಸಲಾಗಿದೆ. ಅಕಸ್ಮಾತ್ ಈ ಪ್ರಸ್ತಾಪವು ಪುರಸ್ಕಾರಗೊಂಡು, ಯೋಜನೆಯು ಜಾರಿಗೆ ಬಂದರೆ, ಸುಮಾರು 8000 ಕೋಟಿ ರುಪಾಯಿಗಳ ಯೋಜನೆ ಇದಾಗಬಹುದು ಎಂದು ಕೆಲವು ಪರಿಸರ ಪ್ರೇಮಿಗಳು ಅಂದಾಜಿಸಿದ್ದು, ಪಶ್ಚಿಮಘಟ್ಟಗಳ ನಡುವೆ ಇಂತಹದೊಂದು ಬೃಹತ್ ಕಾಮಗಾರಿಯನ್ನು ಕೈಗೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಅತಿ ಅಪಾಯಕಾರಿ ಎಂದು ವಾದಿಸುತ್ತಿದ್ದಾರೆ.

ವಿಶ್ವಪರಂಪರೆಯ ತಾಣ ಎನಿಸಿರುವ ಪಶ್ಚಿಮ ಘಟ್ಟಗಳ ಗರ್ಭದಲ್ಲಿ ಸುರಂಗವನ್ನು ಕೊರೆದರೆ, ಅಲ್ಲಿನ ಜಲಮೂಲಗಳ ಮೇಲೆ ತೀವ್ರ ಪರಿಣಾಮವಾಗುತ್ತದೆ ಮತ್ತು ತೊರೆ ಮತ್ತು ನದಿಗಳ ಸ್ವರೂಪವೇ ಬದಲಾದೀತು ಎಂದು ಪರಿಸರ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.

ರಸ್ತೆ ಅಗಲೀಕರಣಕ್ಕಾಗಿ ಸಂಚರಿಸುವ ಬೃಹತ್ ಟ್ರಕ್ ಮತ್ತು ಜೆಸಿಬಿಗಳಿಂದಾಗಿ, ಹಲವು ಅಪರೂಪದ ಜೀವಿಗಳು ನಾಶವಾಗುವ ಸಾಧ್ಯತೆ ಇದೆಯಾದ್ದರಿಂದ, ಆಗುಂಬೆ ಘಾಟಿ ರಸ್ತೆಯನ್ನು ಹೆಚ್ಚಿನ ಅಭಿವೃದ್ಧಿಗೆ ಒಳಪಡಿಸುವುದು ಬೇಡ ಎಂದು ಹೇಳುತ್ತಿದ್ದಾರೆ.

ಈಗ ಇರುವ ರಸ್ತೆಯ ಒಂದು ಬದಿಯಲ್ಲಿ ಕಬ್ಬಿಣದ ಕಟ್ಟಣೆ ಮತ್ತು ಕಾಂಕ್ರೀಟ್ ಬಳಕೆ ಯಿಂದ 21ನೆಯ ಶತಮಾನದಂತಹ ಆಧುನಿಕ ಯುಗದಲ್ಲಿ ನಾವಿದ್ದೇವೆ; ಈಗಲೂ ನಮ್ಮನ್ನು ಆಳುವವರು, ಜನಪ್ರತಿನಿಧಿಗಳು ಕಾಡನ್ನು ನಾಶ ಮಾಡಿ ಅಭಿವೃದ್ಧಿ ಕಾಮಗಾರಿ ಗಳನ್ನು ಜಾರಿಗೆ ತರಲು ಉತ್ಸುಕರಾಗಿರುವುದು ಆಘಾತಕಾರಿಯೇ ಸರಿ.

Screenshot_8 R

ಹಿಂದಿನ ದಶಕಗಳಲ್ಲಿ ಸಾಕಷ್ಟು ಕಾಡನ್ನು, ಪ್ರಾಕೃತಿಕ ಸಂಪತ್ತನ್ನು ಅಭಿವೃದ್ಧಿಗಾಗಿ ನಾಶ ಮಾಡಿದ್ದೇವೆ; ಆಗಿದ್ದು ಆಗಿಹೋಯಿತು; ಅದರಿಂದಾಗಿ ಅಭಿವೃದ್ಧಿಯೂ ಆಗಿದೆ; ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ನೀರಾವರಿ ಮತ್ತು ರಸ್ತೆ ನಿರ್ಮಾಣಕ್ಕೆ ಆದ್ಯತೆ ಇತ್ತು; ಪರಿಸರ ರಕ್ಷಿಸುವ ಕೂಗು ಎದ್ದಿರಲಿಲ್ಲ; ಅಭಿವೃದ್ಧಿಗೆ ಆದ್ಯತೆ ಇತ್ತು. ಆದರೆ, ಈಗ ಅಂದರೆ, ಇಪ್ಪತ್ತೊಂದನೆಯ ಶತಮಾನದಲ್ಲಿ ನಾವು ಪರಿಸರವನ್ನು ನಾಶ ಮಾಡಿ, ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಷ್ಟು ‘ಶ್ರೀಮಂತರಾಗಿ’ ಉಳಿದಿಲ್ಲ! ನಿಜ! ನಮ್ಮ ರಾಜ್ಯದ ಪರಿಸರವು, ಕಾಡುಗಳು, ಗುಡ್ಡಗಾಡು ಪ್ರದೇಶಗಳು, ವನಸಿರಿ, ಸಸ್ಯಸಂಪತ್ತು, ಜೀವ ವೈವಿಧ್ಯವು ಇಂದು ತೀವ್ರ ಒತ್ತಡದಲ್ಲಿದೆ. ಈಗ ಉಳಿದುಕೊಂಡಿರುವ ಪರಿಸರವನ್ನು, ಜೀವ ವೈವಿಧ್ಯವನ್ನು ರಕ್ಷಿಸಬೇಕಾದುದು ನಮ್ಮ ಸರಕಾರ ಗಳ, ಪ್ರಾಜ್ಞರ ಆದ್ಯ ಕರ್ತವ್ಯ ಎನಿಸಿದೆ.

ಬರೇ ರಕ್ಷಿಸುವುದಲ್ಲ, ಬದಲಿಗೆ ಅತೀವ ಆಸ್ಥೆಯಿಂದ, ಈಗ ಉಳಿದಿರುವ ಪರಿಸರವನ್ನು ಕಾಪಾಡಿಕೊಳ್ಳಬೇಕಾಗಿದೆ. ಈಗ ಕೆಲವೇ ಕೆಲವು ಪ್ರದೇಶಗಳಲ್ಲಿ ಉಳಿದಿರುವ ಪ್ರಾಕೃತಿಕ ಸಂಪತ್ತನ್ನು ರಕ್ಷಿಸಿಕೊಂಡು, ಮುಂದಿನ ಪೀಳಿಗೆಗೆ, ತಲೆಮಾರಿಗೆ ಒಪ್ಪಿಸಬೇಕು, ಆ ಮೂಲಕ ಅವರ ಬದುಕನ್ನು ಸಾಕಷ್ಟು ಹಸನಾಗಿರಿಸಬೇಕು; ಇದು ನಮ್ಮ ಸರಕಾರದ, ಜನಪ್ರತಿನಿಧಿ ಗಳ, ಅಧಿಕಾರಿಗಳ ಆದ್ಯ ಕರ್ತವ್ಯ ಎನಿಸಬೇಕಾಗಿತ್ತು.

Screenshot_9 R

ಆದರೆ, ಸರಕಾರಕ್ಕೆ, ಅದರ ಚುಕ್ಕಾಣಿ ಹಿಡಿದಿರುವವರಿಗೆ, ಪರಿಸರದ ಮೇಲೆ ಪ್ರಾಮಾಣಿಕ ಕಾಳಜಿಯೇ ಇಲ್ಲ ಎನಿಸುವಂತಹ ವರದಿಗಳು ಪತ್ರಿಕೆಗಳಲ್ಲಿ ಈಗ ಪ್ರಕಟಗೊಳ್ಳುತ್ತಿವೆ. ನಿರಂತರವಾಗಿ ಒಂದರ ಹಿಂದೆ ಒಂದರಂತೆ ವರದಿಯಾಗುತ್ತಿರುವ ಹೊಸ ಹೊಸ ಪರಿಸರ ವಿರೋಧಿ ಯೋಜನೆಗಳು ಮತ್ತು ಕಾಮಗಾರಿಗಳ ವಿವರ ಕಂಡಾಗ ಇಂತಹದೊಂದು ಅನುಮಾನ ಹುಟ್ಟುತ್ತಿದೆ.

ಹಾಗಿದ್ದರೆ ಇದಕ್ಕೆ ಪರಿಹಾರವೇನು? ಎಂಬ ಪ್ರಶ್ನೆ ಉದಿಸಬಹುದು. ಉತ್ತರ ಸರಳ, ಆದರೆ ಆಚರಣೆಯು ತುಸು ಕಠಿಣ; ಸರಳ ಉತ್ತರವೆಂದರೆ, ಈಗ ಉಳಿದಿರುವ ಪರಿಸರವನ್ನು ಹೀಗೆಯೇ ಉಳಿಸಿಕೊಂಡು, ಅಭಿವೃದ್ಧಿಯನ್ನು ಸಾಧಿಸಬೇಕು. ಆದರೆ ಇದನ್ನು ಆಚರಣೆಗೆ ತರಲು, ಹೆಚ್ಚು ಸಂಪನ್ಮೂಲವೇ ಮತ್ತು ವೈಜ್ಞಾನಿಕ ಚಿಂತನೆ ಅಗತ್ಯ. ರಸ್ತೆ ವಿಸ್ತರಣೆಗೆ ಕಾಡನ್ನು ಕಡಿಯುವ ಬದಲು, ಪರ್ಯಾಯ ಮಾರ್ಗಗಳನ್ನು ಜಾರಿಗೆ ತರಬೇಕು.

ಆ ಮೂಲಕ, ಈಗ ಇರುವ ಪರಿಸರ ಸಂಪತ್ತನ್ನುಉಳಿಸಿಕೊಳ್ಳಬೇಕು, ಬದುಕಿಕೊಂಡಿರುವ ಜೀವವೈವಿಧ್ಯವನ್ನು ಕಾಪಾಡಬೇಕು. ನಾಗರಿಕ ಮಾನವನಾಗಿ, ಎ.ಐ. ಅಂತಹ ಆಧುನಿಕ ವ್ಯವಸ್ಥೆಯನ್ನು ಕಂಡುಹಿಡಿದ ಬುದ್ಧಿವಂತ ಮಾನವನಾಗಿ, ಅಷ್ಟರ ಮಟ್ಟಿಗಿನ ಜವಾಬ್ದಾರಿ ಯನ್ನು ನಾವು ಹೊರಲು ಸಿದ್ಧರಾಗಬೇಕು, ಹೊರಬೇಕು.

ಪರಿಸರ ರಕ್ಷಣೆಯು ಸರಕಾರ ಮುದ್ರಿಸುವ ಪಠ್ಯಪುಸ್ತಕಗಳಲ್ಲಿ ಮಾತ್ರ ಒಂದು ‘ಪಾಠ’ವಾಗಿ ಬಂಧಿಯಾಗಿದ್ದರೆ ಉಪಯೋಗವಿಲ್ಲ, ಅದು ಬದುಕಿನ ಪಾಠವಾಗಬೇಕು. ಆಗುಂಬೆ ಸರಹದ್ದಿನ ಕಾಡನ್ನು ಈಗ ಇರುವಂತೆಯೇ ಇರಗೊಡಬೇಕು, ಅದುವೇ ನಿಜ ವಾದ ಪರಿಸರ ರಕ್ಷಣೆ. ಇದು ನಮ್ಮ ಮತ್ತು ನಮ್ಮ ಮುಂದಿನ ಪೀಳಿಗೆ ಹಿತಕ್ಕಾಗಿ ಮಾತ್ರ!