ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಲವ್‌ ಸೀಸನ್ಸ್‌ʼ ಸಿನಿಮಾದ ಹೀರೋ ಆದ ರಂಗಭೂಮಿ ನಟ ಮುಕುಂದ ರಾಮಸ್ವಾಮಿ; ಜೂನ್‌ನಲ್ಲಿ ತೆರೆಗೆ ಬರುವುದು ಫಿಕ್ಸ್

Love Seasons Movie: ಹೊಸ ಪ್ರತಿಭೆಗಳ ಸಮಾಗಮದಲ್ಲಿ ಸಿದ್ಧವಾಗಿರುವ 'ಲವ್ ಸೀಸನ್ಸ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಕೃತ್ವಿಕ್ ನಿರ್ದೇಶನದ ಈ ಚಿತ್ರದಲ್ಲಿ ರಂಗಭೂಮಿ ಕಲಾವಿದ ಮುಕುಂದ ರಾಮಸ್ವಾಮಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

‌ರಂಗಭೂಮಿ ಕಲಾವಿದರ ʻಲವ್‌ ಸೀಸನ್ಸ್‌ʼ ಸಿನಿಮಾ ಟೀಸರ್‌ ರಿಲೀಸ್‌

-

Avinash GR
Avinash GR Apr 15, 2026 9:06 PM

ಹೊಸಬರ ತಂಡವೊಂದು ಸೇರಿಕೊಂಡು ತಯಾರಿಸಿರುವ ʻಲವ್ ಸೀಸನ್ಸ್ʼ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದ್ದು, ಈಚೆಗೆ ಈ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ. ಅನುಭವಿ ಕಲಾವಿದ ರಾಜೇಶ್ ನಟರಂಗ ಈ ಚಿತ್ರದ ಬಹುಮುಖ್ಯ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. "ನಿರ್ದೇಶಕರ ಕಸುಬುದಾರಿಕೆ ಚೆನ್ನಾಗಿದೆ. ನಾನು ಈ ಸಿನಿಮಾದಲ್ಲಿ ಜವಾಬ್ದಾರಿಯುತ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರೀತಿಯೆಂಬುದು ಯಾವ ಕಾಲಕ್ಕೂ ಹಳತಾಗದ ವಿಚಾರ. ಇದರ ತಳಹದಿ ಮೇಲೆ ಈ ಸಿನಿಮಾ ರೂಪುಗೊಂಡಿದೆ" ಎನ್ನುತ್ತಾರೆ ರಾಜೇಶ್‌ ನಟರಂಗ.

ಹೀರೋ ಆದ ಮುಕುಂದ ರಾಮಸ್ವಾಮಿ

ಲವ್‌ ಸೀಸನ್ಸ್‌ ಚಿತ್ರವನ್ನು ಎನ್ ಆರ್ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಾಣ ಮಾಡಿದ್ದಾರೆ. ರಂಗಭೂಮಿ ಅನುಭವದ ಜೊತೆಗೆ ಕ್ಷತ್ರಿಯ, ಬುದ್ಧಿವಂತ 2, ಗುರುದೇವ ಹೊಯ್ಸಳ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿರುವ ಕೃತ್ವಿಕ್ ʻಲವ್ ಸೀಸನ್ಸ್ʼ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ರಂಗಭೂಮಿ ಕಲಾವಿದ ಮುಕುಂದ ರಾಮಸ್ವಾಮಿ ಲವ್‌ ಸೀಸನ್ಸ್‌ಗೆ ನಾಯಕ. ಈ ಚಿತ್ರದಲ್ಲಿ ನಾಯಕಿಯರಾಗಿ ದಿಯಾ ಕೀರ್ತಿ ಮತ್ತು ಚಂದನಾ ಗೌಡ ನಟಿಸಿದ್ದಾರೆ.

ನಂಬಿಕೆಯ ಸುತ್ತ ಹೊಸೆಯಲ್ಪಟ್ಟ ವಿಶಿಷ್ಟ ಪ್ರೇಮಕಥೆ; ಶೂಟಿಂಗ್‌ ಮುಗಿಸಿದ ರಂಗಭೂಮಿ ಕಲಾವಿದರ ʻಲವ್‌ ಸೀಸನ್ಸ್‌ʼ ಸಿನಿಮಾ

ಜೂನ್‌ನಲ್ಲಿ ತೆರೆಗೆ ಬರಲಿದೆ ಲವ್‌ ಸೀಸನ್ಸ್‌

ʻಲವ್ ಸೀಸನ್ಸ್ʼ ಚಿತ್ರವು ಜೂನ್ ತಿಂಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಮೊದಲನೆಯದಾಗಿ ಈಗ ಟೀಸರ್ ಬಿಡುಗಡೆಗೊಂಡಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಾಡುಗಳು ಮತ್ತು ಟ್ರೇಲರ್‌ ಬಿಡುಗಡೆಗೊಳ್ಳಲಿದೆ. "ಇದು ಯಾರು ಯಾರನ್ನೂ ನಂಬಲು ಕಷ್ಟವಾಗುವಂಥ ಕಾಲಮಾನ. ನಂಬಿಕೆಯೆಂಬ ಚುಂಬಕ ಶಕ್ತಿಯ ಸುತ್ತ ಹೊಸೆಯಲ್ಪಟ್ಟಿರುವ, ಪ್ರೇಮದ ಪರಾಗ ಮೆತ್ತಿಕೊಂಡಿರುವ ಕಥೆ ʻಲವ್ ಸೀಸನ್ಸ್ʼ ಸಿನಿಮಾದಲ್ಲಿದೆ. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ" ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಸೀತಾ ರಾಮ ಧಾರಾವಾಹಿಯ ರಿತು ಸಿಂಗ್‌ ನಟನೆ

ಈ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ವೀರ್ ಸಮರ್ಥ್ ಮಾಡಿದ್ದಾರೆ. ಕೆ. ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್‌ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಶ್ವೇತಾ ಕೊಗ್ಲೂರು, ಮಂಡ್ಯ ರಮೇಶ್, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರು ನಟಿಸಿದ್ದಾರೆ.