Nadoja Mahesh Joshi Interview: ಟೀಕೆಗೆ ಹೆದರಿ, ಕೆಲಸದಿಂದ ಹಿಂಜರಿಯುವುದಿಲ್ಲ
ಸಂಸ್ಥೆ ಮತ್ತು ಅದರ ಆಡಳಿತ ನಿಂತ ನೀರಲ್ಲ. ನಿರಂತರವಾಗಿ ಹರಿಯುತ್ತಿರುವ ಜೀವನದಿ. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಸಾಮರ್ಥ್ಯ, ಪಾರದರ್ಶಕತೆ, ಹೊಸ ಕಾನೂನಿನ ಅಳವಡಿಕೆ ಹಾಗೂ ನ್ಯಾಯಾಲಯಗಳ ತೀರ್ಪುಗಳ ಹಿನ್ನೆಲೆಯಲ್ಲಿ ಹಾಗೂ ಕಾಲ ಧರ್ಮಕ್ಕೆ ತಕ್ಕಂತೆ ಪರಿವರ್ತನೆಯ ಬದಲಾವಣೆ ಅಭಿವೃದ್ಧಿ ತರುವ ಕೆಲಸಕ್ಕೆ ಕೈ ಹಾಕಿದಾಗ ಕೆಲವು ವ್ಯಕ್ತಿಗಳಿಂದ ಅದರಲ್ಲೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಿರೋಧ ಸಹಜ


ಸಂದರ್ಶನ: ರಂಜಿತ್ ಎಚ್.ಅಶ್ವತ್ಥ
ಕನ್ನಡ-ಕನ್ನಡಿಗ-ಕರ್ನಾಟಕದ ರಕ್ಷಣೆ, ಪ್ರಸಾರ ಹಾಗೂ ಅಭಿವೃದ್ಧಿ ಕೈಗೊಳ್ಳುವುದು ನನ್ನ ಕರ್ತವ್ಯ
ಸಂಸ್ಥೆ ಮತ್ತು ಅದರ ಆಡಳಿತ ನಿಂತ ನೀರಲ್ಲ. ನಿರಂತರವಾಗಿ ಹರಿಯುತ್ತಿರುವ ಜೀವನದಿ. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಸಾಮರ್ಥ್ಯ, ಪಾರದರ್ಶಕತೆ, ಹೊಸ ಕಾನೂನಿನ ಅಳವಡಿಕೆ ಹಾಗೂ ನ್ಯಾಯಾಲಯಗಳ ತೀರ್ಪುಗಳ ಹಿನ್ನೆಲೆಯಲ್ಲಿ ಹಾಗೂ ಕಾಲ ಧರ್ಮಕ್ಕೆ ತಕ್ಕಂತೆ ಪರಿವರ್ತನೆಯ ಬದಲಾವಣೆ ಅಭಿವೃದ್ಧಿ ತರುವ ಕೆಲಸಕ್ಕೆ ಕೈ ಹಾಕಿದಾಗ ಕೆಲವು ವ್ಯಕ್ತಿಗಳಿಂದ ಅದರಲ್ಲೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಿರೋಧ ಸಹಜ. ಕೆಲವರ ಟೀಕೆಗೆ ಹೆದರಿ ಓಡಿ ಹೋಗುವ ಹೇಡಿಯಲ್ಲ. ಕನ್ನಡ-ಕನ್ನಡಿಗ-ಕರ್ನಾಟಕದ ರಕ್ಷಣೆ, ಪ್ರಸಾರ ಹಾಗೂ ಅಭಿವೃದ್ಧಿಯನ್ನು ಕೈಗೊಳ್ಳುವುದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾದ ನನ್ನ ಕರ್ತವ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಸ್ಪಷ್ಟಪಡಿಸಿದ್ದಾರೆ.
ಬೈಲಾ ತಿದ್ದುಪಡಿ, ನಾಮನಿರ್ದೇಶನ ಗೊಂದಲ ಸೇರಿದಂತೆ ವಿವಿಧ ವಿಷಯದಲ್ಲಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವವಾಣಿಗೆ ನೀಡಿದ ಸಂದರ್ಶನದಲ್ಲಿ ಸುವಿಸ್ತಾರವಾಗಿ ಮಾತನಾಡಿ ದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಕೆಲವರು ನಿಮ್ಮ ವಿರುದ್ಧ ಪದೇಪದೆ ಧ್ವನಿ ಎತ್ತುತ್ತಿದ್ದಾರಲ್ಲ?
ನನ್ನ ವಿರುದ್ಧದ ಈ ಕೂಗು ಇದೇ ಮೊದಲಲ್ಲ. ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿದ ದಿನದಿಂದಲೂ ಇದೇ ವ್ಯಕ್ತಿಗಳಿಂದ ‘ಕೂಗಿದೆ’. 2021ರ ಚುನಾವಣೆಯಲ್ಲಿ ಇವರ ಕೂಗನ್ನು ನಿಲ್ಲಿಸಿ, ಕೂಗಿದವರ ಧ್ವನಿಪೆಟ್ಟಿಗೆಯನ್ನೇ ಕಿತ್ತು ಹಾಕಿದವರು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾನ್ವಿತ ಕನ್ನಡದ ಮತದಾರರು. ಯಾವುದೇ ವ್ಯವಸ್ಥೆಯಲ್ಲಿ ಬದಲಾವಣೆ, ಪಾರದರ್ಶಕತೆಗೆ ತರಲು ಮುಂದಾದರೆ, ಈ ರೀತಿಯ ವಿರೋಧಗಳು ಬರುವುದು ಸಹಜ.
ಇದನ್ನೂ ಓದಿ: T A Sharavana Interview: ಆಯಸ್ಸಿನ ರೀತಿಯೇ, ಬಂಗಾರದ ಬೆಲೆಯೂ ಕಡಿಮೆಯಾಗಲ್ಲ
ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಳ್ಳುವುದಕ್ಕೆ ಸಮಯವಿಲ್ಲ. ಕಸಾಪ ಚುನಾವಣೆಯಲ್ಲಿ ಇವರು ಯಾವ ಯಾವ ಸ್ಪರ್ಧಿಗಳಿಗೆ ಬೆಂಬಲಿಸಿದ್ದಾರೋ ಅವರೆಲ್ಲಾ ಠೇವಣಿ ಕಳೆದುಕೊಂಡು ಇತಿಹಾಸ ಪುಟದಲ್ಲಿ ಸೇರಿದ್ದಾರೆ. ಈ ವಾಸ್ತವಿಕತೆಯನ್ನು ಅರಗಿಸಿಕೊಳ್ಳದೇ ಊಹಾಪೋಹಾಗಳನ್ನು ಸೃಷ್ಟಿ ಮಾಡಿ ಚುನಾಯಿತ ಕಾರ್ಯಕಾರಿ ಸಮಿತಿಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಕನ್ನಡಿಗರಿಗೆ ತೋರುವ ಅಪಮಾನ ಹಾಗೂ ಅವಮಾನ. ಕರ್ನಾಟಕದ ಸಾಕ್ಷಿಪ್ರಜ್ಞೆ ಎನಿಸಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ರಾಜ್ಯದ ಮೂಲೆ ಮೂಲೆಯಿಂದ ಕನ್ನಡಿಗರು ನನಗೆ ನೀಡಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಕಸಾಪಕ್ಕೆ, ಭಾಷೆ, ನಾಡು-ನುಡಿಗೆ ಏನೆಲ್ಲ ಕೊಡುಗೆ ನೀಡಲು ಸಾಧ್ಯವೋ ಅದನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ.
ನಿಮ್ಮನ್ನು ಕೆಲವರು ‘ಸರ್ವಾಧಿಕಾರಿ’ ಎನ್ನುತ್ತಿದ್ದಾರೆ? ಇದ್ಯಾಕೇ?
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶಿಸ್ತು, ಘನತೆ, ಗೌರವ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಹಿತ್ಯ ಪರಿಷತ್ತಿಗೆ ಇರಬೇಕಾದ ಬದ್ಧತೆಯನ್ನು ತರಲು ಮುಂದಾಗಿರುವುದಕ್ಕಾಗಿಯೋ ಅಥವಾ ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ.ಜಯಪ್ರಕಾಶಗೌಡ ಅವರು ಕಟ್ಟಡ ನಿರ್ಮಾಣಕ್ಕೆ ಕೇಳಿದ ಹಣ ಸಹಾಯವನ್ನು, ಮಂಡ್ಯ ಸಮ್ಮೇಳನಕ್ಕೆ ನೀಡಿದ ಅನುದಾನದಲ್ಲಿ ಕೊಡಲಿಲ್ಲ ಎಂಬ ಕಾರಣಕ್ಕೊ ಅಥವಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಕ್ಕೆ ಧಕ್ಕೆ ತಂದು ಪರಿಷತ್ತಿನ ಗೋಡೆಗಳ ಮೇಲೆ ಭಿತ್ತಿ ಚಿತ್ರಗಳನ್ನು ಅಂಟಿಸಿ, ಕೋರ್ಟ್ ಹೋಗಿ ದಂಡ ಕಟ್ಟಿಸಿರುವ ಹಿನ್ನೆಲೆಯಲ್ಲಿ, ಆ ಮನಸ್ಥಿತಿಯಿಂದ ಹೊರಗಡೆ ಬರದೆ ಇರುವವರಾದ ಸಿ.ಕೆ.ರಾಮೇಗೌಡ, ಶಂಕರ ಹೂಗಾರ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳಲ್ಲಿ ಸೇರಿಸಿಕೊಳ್ಳದಿರುವುದಕ್ಕೋ ಅಥವಾ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜವಾಬ್ದಾರಿಯುತ ಗೌರವ ಕಾರ್ಯದರ್ಶಿ ಸ್ಥಾನದಲ್ಲಿರುವ ಎಲ್ ಹರ್ಷ ಅವರು ಕೇಂದ್ರ ಪರಿಷತ್ತಿನ ಗೌರವ ಕಾರ್ಯದರ್ಶಿಯವರಾದ ನೇ.ಭ. ರಾಮಲಿಂಗ ಶೆಟ್ಟಿ ಅವರ ಮಾತುಗಳನ್ನು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ ಪ್ರಕಾಶಮೂರ್ತಿ ಅವರ ಆದೇಶ ಮೇರೆಗೆ ಕಾನೂನು ಬಾಹಿರವಾಗಿ ರೆಕಾರ್ಡ್ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಂಡಿರುವುದಕ್ಕೆ ಸರ್ವಾಧಿ ಕಾರಿಯೇ?. ಈ ಎಲ್ಲವನ್ನು ನ್ಯಾಯಾಲಯದಲ್ಲಿ ನಾನು ಪ್ರಶ್ನಿಸುತ್ತೇನೆ. ಯಾರು ನನ್ನನ್ನು ಸರ್ವಾಧಿ ಕಾರಿ ಎಂದು ಕರೆದಿದ್ದಾರೆ ಅದರಲ್ಲೂ ಅವರು ಏನೂ ಹೇಳುತ್ತಾರೆ ಎಂಬುದನ್ನು ಕಾದು ನೋಡೋಣ.
ಕಸಾಪ ರಾಜ್ಯಾಧ್ಯಕ್ಷನಾಗಿ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡುವ ಅಧಿಕಾರವಿದೆ. ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಬಾರದು ಎಂದರೆ, ಕೇಂದ್ರ ಘಟಕಕ್ಕೆ ಗೌರವ, ಘನತೆ, ಆಡಳಿತ ಉಳಿಯಲು ಸಾಧ್ಯ ವೇ? ಮುಖ್ಯಮಂತ್ರಿಯಾದವರು ಸಚಿವರಿಗೆ ಸೂಚನೆ ನೀಡುವುದೇ ಸರ್ವಾಧಿಕಾರಿತನ ಎಂದರೆ ಹೇಗೆ? ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಅವರು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪದೇ ಪದೇ ತೋರುವ ಅಗೌರವವನ್ನು ತೋರಿದಾಗ ಅವರಿಗೆ ಶಿಸ್ತು ಕ್ರಮದ ಮೂಲಕ ತಿದ್ದುವ ಕೆಲಸ ಮಾಡುವುದು ಅಪಚಾರವೇ? ಆರೋಪಗಳು ಸತ್ಯವಾಗಿರುವುದಿಲ್ಲ.
ಮಂಡ್ಯ ಸಮ್ಮೇಳನದ ಲೆಕ್ಕ ಕೊಡುತ್ತಿಲ್ಲ ಎನ್ನುವ ಆರೋಪ ಮಾಡಿದ್ದಾರೆ, ಅಲ್ಲವೇ?
ಸರಕಾರ ಸಮ್ಮೇಳನಕ್ಕೆಂದೆ ನೀಡಲಾದ ಧನ ಸಹಾಯದಿಂದ, ಮಂಡ್ಯ ಜಿಲ್ಲಾಧಿಕಾರಿಗಳಿಂದ ಪಡೆದ ಹಣದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಪಾರಂಪರಿಕ ಕಾರ್ಯಚಟುವಟಿಕೆಗಳಿಗೆ ಸಂಬಂಧಿಸಿದಂತೆ ಖರ್ಚು-ವೆಚ್ಚಗಳನ್ನು ನಿಬಂಧನೆ ಅಡಿಯಲ್ಲಿರುವ “ಹಣಕಾಸು ಸಮಿತಿ" ಸಭೆಯಲ್ಲಿ ನೀಡಿ, ವಿವರ ಗಳನ್ನು ಚರ್ಚಿಸಿ, ನಂತರ ಆಡಿಟ್ ಮಾಡಿಸಿ, ಸರಕಾರಕ್ಕೆ ಸಲ್ಲಿಸುತ್ತೇವೆಯೇ ಹೊರತು ಜಿಲ್ಲಾಧಿಕಾರಿ ಗಳಿಗಲ್ಲ. ಈ ರೀತಿಯ ಆರೋಪ ಮಾಡುತ್ತಿರುವವರು ಸರಿಯಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಬೈಲಾ ಓದಿಲ್ಲ ಎನ್ನುವುದು ಸ್ಪಷ್ಟ. ನನ್ನ ಅವಧಿಯಲ್ಲಿ ನಾನು ಕೇಂದ್ರ ಸರಕಾರ, ರಾಜ್ಯ ಸರಕಾರದ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ದುರುದ್ದೇಶ ದಿಂದ ನನ್ನ ಮೇಲೆ ಸಿಬಿಐನವರು ಮೊಕ್ಕದ್ದಮೆ ಹಾಕಿದಾಗ ಅದರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹಾಕಿ ಮೊದಲನೆ ಬಾರಿಗೆ ಅಧಿಕಾರಿಗಳು ನನಗೆ ಪರಿಹಾರ ಧನ ನೀಡಬೇಕೆಂದು ಆದೇಶ ಮಾಡಿರುವುದು ಐತಿಹಾಸಿಕ. ಆರ್ಥಿಕವಾಗಿ ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಚಾರಿತ್ರ್ಯ ಹೊಂದಿರುವನಾದ ಹಿನ್ನೆಲೆಯಲ್ಲಿ ಈ ಧೈರ್ಯ ಬಂದಿದೆ. ನನ್ನ ಮೇಲೆ ಆರೋಪ ಮಾಡುವವರ, ಸಂಪೂರ್ಣ ಇತಿಹಾಸ ನನ್ನ ಬಳಿಯಿದೆ. ನ್ಯಾಯಾಲಯದಲ್ಲಿ ಅವರುಗಳ ಆರ್ಥಿಕ ಅಪ್ರಾಮಾಣಿಕತೆಯ ಇತಿಹಾಸವನ್ನು ದಾಖಲೆಗಳ ಸಮೇತ ನೀಡುತ್ತೇನೆ. ಕರ್ನಾಟಕ ಜನತೆ ಇವರ ನಿಜವಾದ ಬಣ್ಣ ಹಾಗೂ ವ್ಯಕ್ತಿತ್ವವನ್ನು ತಿಳಿಯುತ್ತಾರೆ.
ಪದೇಪದೆ ಬೈಲಾ ತಿದ್ದುಪಡಿಯಾಗುತ್ತಿದೆ ಎನ್ನುವ ಆರೋಪವಿದೆ?
1973ರಲ್ಲಿ ಜಿ.ನಾರಾಯಣ ಅವರು ಅಧ್ಯಕ್ಷರಾಗಿದ್ದಾಗ, ಹಂಪನಾ ಅವರ ಅವಧಿಯಲ್ಲಿ, ಪ್ರೊ. ಜಿ.ಎಸ್.ಸಿದ್ಧಲಿಂಗಯ್ಯ ಅವರ ಅವಧಿಯಲ್ಲಿ 2 ಬಾರಿ, ಸಾ.ಶಿ. ಮರುಳಯ್ಯ ಅವರ ಅವಧಿಯಲ್ಲಿ 2 ಬಾರಿ ಹಾಗೂ ಇದಕ್ಕಿಂತ ಮುಂಚಿತವಾಗಿ ಎಂ.ವಿಠ್ಠಲಮೂರ್ತಿ ಅವರು ಆಡಳಿತಾಧಿಕಾರಿಯಾಗಿದ್ದ ಸಮಯದಲ್ಲಿ ತಿದ್ದುಪಡಿ ಆಗಿದೆ. ಬೈಲಾ ತಿದ್ದುಪಡಿ ಇದೇ ಮೊದಲಲ್ಲ. ಬಹುತೇಕ ಸಂಘ-ಸಂಸ್ಥೆಗಳ ಬೈಲಾವನ್ನು ಆಯಾ ಕಾಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಲು ಕಾನೂನಿನಲ್ಲಿಯೇ ಅವಕಾಶ ನೀಡಲಾಗಿದೆ. ಹಾಗೇ ನೋಡಿದರೆ, ಭಾರತದ ಪ್ರಜಾಪ್ರಭುತ್ವ ನಿಂತಿರುವ ಸಂವಿಧಾನವೇ 106 ಬಾರಿ ತಿದ್ದುಪಡಿಯಾಗಿದೆ. ಹೀಗಿರುವಾಗ ಕಸಾಪ ಬೈಲಾ ತಿದ್ದುಪಡಿಯಾಗಬಾರದು ಎಂದರೆ ತಪ್ಪೇನು? ಅಷ್ಟಕ್ಕೂ ನಾವು ತಿದ್ದುಪಡಿ ತಂದಿರುವುದು ಕನ್ನಡ ಸಾಹಿತ್ಯ ಪರಿಷತ್ತಿನ ಹಿತಾಸಕ್ತಿಯ ಮೇರೆಗೆ ಹಾಗೂ ಕಾನೂನಿನಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸುವ ಕಾರಣಕ್ಕೆ. ಪ್ರಮುಖವಾಗಿ ಯಾವುದೇ ಜಿಲ್ಲಾಧ್ಯಕ್ಷರು ಮೃತಪಟ್ಟರೆ ಆ ಜಾಗಕ್ಕೆ ನಾಮನಿರ್ದೇಶನ ಮಾಡಲು ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ. ಒಂದು ವೇಳೆ ಇದನ್ನು ಮಾಡದೇ ಹೋದರೆ, ಜಿಲ್ಲಾ ಧ್ಯಕ್ಷ ಸ್ಥಾನದಲ್ಲಿರುವರು ಅಕಾಲಿಕ ಮೃತಪಟ್ಟರೆ ಏನು ಮಾಡಬೇಕು? ಮುಂದಿನ ಚುನಾವಣೆ ತನಕ ಆ ಜಿಲ್ಲೆಯ ಪರಿಷತ್‌ಗೆ ಅಧ್ಯಕ್ಷರೇ ಇರಬಾರದೇ? ಇದೇ ರೀತಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಒಂದು ವರ್ಷದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿ ಖರ್ಚು-ವೆಚ್ಚ ಮಾಹಿತಿ ನೀಡಬೇಕು ಎನ್ನುವ ನಿಯಮ ಸೇರಿಸಲಾಗಿದೆ. ಅನೇಕ ಜಿಲ್ಲಾಧಿಕಾರಿಗಳು ಇಲ್ಲಿಯವರೆಗೂ ಲೆಕ್ಕಪತ್ರಗಳನ್ನು ಕೊಡದೇ ಇರುವ ಹಿನ್ನೆಲೆಯಲ್ಲಿ, ಈ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ತಿದ್ದುಪಡಿ ತರಲಾಗಿದೆಯೇ ಹೊರತು ವೈಯಕ್ತಿಕ ಹಿತಾಸಕ್ತಿಯಿಂದಲ್ಲ.
ನಾಮನಿರ್ದೇಶನ ಮಾಡಿದವರನ್ನು ಏಕಾಏಕಿ ಕಿತ್ತುಹಾಕುವುದು ಸರಿಯೇ?
“ನಾಮನಿರ್ದೇಶನ" ಹೊಂದಿರುವವರಿಗೆ “ಮುಂದಿನ ಆದೇಶದವರೆಗೆ" ಎಂದು ನೀಡಲಾದ ಆದೇಶ ದಲ್ಲಿ ಯಾವುದೇ ನಿಗದಿತ ಅವಧಿ ಇರುವುದಿಲ್ಲ. ಅವರು ಆನಂದದ ಸಿದ್ಧಾಂತದ ಆಧಾರದಲ್ಲಿಯೇ ಕೆಲಸ ಮಾಡಬೇಕು. ಇದರ ಬಗ್ಗೆ ಹೈಕೋರ್ಟ್ ಸ್ಪಷ್ಟವಾದ ತೀರ್ಪನ್ನು ರಿಟ್ ಪಿಟಿಷನ್ ಸಂಖ್ಯೆ 617/2021 ರಲ್ಲಿ ನೀಡಿದೆ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿಯೇ ನಾಮ ನಿರ್ದೇಶನಗೊಂಡಿದ್ದ ಹರ್ಷ ವಿ ಪಣ್ಣೇದೊಡ್ಡಿ ಎಂಬ ವ್ಯಕ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಮತ್ತು ಗೌರವಕ್ಕೆ ಧಕ್ಕೆ ತಂದಾಗ ಅವರ ಸದಸ್ಯತ್ವವನ್ನು ಕಾನೂನಿನ ಅನುಸಾರವಾಗಿ ಮುಂದಿನ ಆದೇಶದವರೆಗೆ “ಅಮಾನತ್ತಿ"ನಲ್ಲಿರಿದ್ದೇನೆ. ನಿಬಂಧನೆಯಲ್ಲಿಯೇ ನನಗೆ ಅಧಿಕಾರ ನೀಡಿರುವ ಹಿನ್ನೆಲೆಯಲ್ಲಿ, ನನ್ನ ಈ ಕರ್ತವ್ಯ ನಿರ್ವಹಿಸುವಲ್ಲಿ ತಪ್ಪೇನೆದೇ.
ಪರಿಷತ್‌ನ ಆಸ್ತಿ ಜಿಲ್ಲಾಧ್ಯಕ್ಷ ಹೆಸರಲ್ಲಿದ್ದರೆ ತಪ್ಪೇನು?
ಕಸಾಪಕ್ಕೆ ಸೇರಿದ ಆಸ್ತಿಯೂ ಕೇಂದ್ರ ಪರಿಷತ್ತಿನ ಅಧ್ಯಕ್ಷರ ಪದನಾಮದಲ್ಲಿರಬೇಕೆ ಹೊರತು ಅವರ ವೈಯಕ್ತಿಕ ಹೆಸರಿನಲ್ಲಲ್ಲ. ಕೇಂದ್ರ ಪರಿಷತ್ತಿನ ಅಧ್ಯಕ್ಷರ ಪದನಾಮದ ಹೆಸರಿನಲ್ಲಿ ನೋಂದಾಯಿಸ ಬೇಕು ಎನ್ನುವುದರ ಹಿಂದೆ ಪ್ರಮುಖ ಕಾರಣವಿದೆ. ಕೆಲ ವರ್ಷಗಳ ಹಿಂದೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್ ಖರೀದಿಸಿದ್ದ ಜಾಗವನ್ನು ಅಲ್ಲಿನ ‘ಜಿಲ್ಲಾಧ್ಯಕ್ಷ’ ಪದನಾಮದ ಬದಲು ಅಂದಿನ ಅಧ್ಯಕ್ಷರು ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದರು. ಇದರಿಂದ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿ ಕಸಾಪ ಕೈಬಿಟ್ಟು ಹೋಗಿದೆ. ಇದು ಅಕ್ರಮಕ್ಕೆ ಬ್ರೇಕ್ಹಾಕಲು ಸಾಧ್ಯವಾಗುತ್ತದೆ.
ಚುನಾವಣೆಯಲ್ಲಿಯೂ ಬದಲಾವಣೆ ತರಲು ಬಯಸಿದ್ದೀರಾ?
ಅಧ್ಯಕ್ಷನಾಗುತ್ತಿದ್ದಂತೆ ಕಸಾಪ ಚುನಾವಣೆಯಲ್ಲಿ ಪಾರದರ್ಶಕತೆ ಹಾಗೂ ಬದಲಾವಣೆ ತರುವುದಾಗಿ ಹೇಳಿದ್ದೆ. ಇದರ ಭಾಗವಾಗಿ 2026ರಲ್ಲಿ ನಡೆಯಲಿರುವ ಕಸಾಪ ಚುನಾವಣೆಯನ್ನು ಸಂಪೂರ್ಣ ವಾಗಿ ಆನ್‌ಲೈನ್ ಮೂಲಕ ನಡೆಸಲು ಪ್ರಯತ್ನಿಸಲಾಗುವುದು. ಮೊಬೈಲ್‌ನಲ್ಲಿ ಇದಕ್ಕಾಗಿ ಆಪ್ ಸಿದ್ಧಪಡಿಸಿ, ಸಾಹಿತ್ಯ ಪರಿಷತ್‌ನ ಸದಸ್ಯರು ಒಟಿಪಿಯ ಮೂಲಕ ಮತದಾನ ಮಾಡಲು ಅವಕಾಶ ನೀಡಬೇಕಿದೆ. ಇದರಿಂದ ಸರಕಾರದ ಹಣ ಮತ್ತು ಸಮಯ ಉಳಿಯಲಿದೆ. ಇದರೊಂದಿಗೆ ಕಸಾಪ ಆರಂಭಗೊಂಡು 110 ವರ್ಷ ಕಳೆದರೂ ಈವರೆಗೆ ಮಹಿಳಾ ಅಧ್ಯಕ್ಷರಾಗಿಲ್ಲ ಎನ್ನುವ ಕೊರಗಿದೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಚರ್ಚೆಯಾಗಬೇಕಾಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸು ವಂತೆ, ತಾಲೂಕು ಅಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಸಬೇಕು, ಎಂಬ ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಈ ವಿಚಾರವು ಚರ್ಚೆಯಾಗಬೇಕಾಗಿರುತ್ತದೆ.
2 ಬಾರಿ ಗೆದ್ದಿರುವ ವ್ಯಕ್ತಿಗಳಿಗೆ ಮತ್ತೇ 3ನೇ ಬಾರಿ ಅವಕಾಶ ನೀಡದೇ, ಹೊಸಬರಿಗೆ ಅವಕಾಶ ನೀಡಲು ಅದರಲ್ಲೂ ಯುವಕರಿಂದ ಬೇಡಿಕೆ ಬಂದಿದೆ. ಇದೇ ರೀತಿ ಯುವಕರಿಗೆ ಹೆಚ್ಚಿನ ಅವಕಾಶ ನೀಡಲು 70 ವರ್ಷ ದಾಟಿದ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ನಿರ್ಬಂಧ ಹಾಕಬೇಕೆಂಬ ಅನೇಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇವೆಲ್ಲವೂ ಸಾರ್ವಜನಿಕವಾಗಿ ಚರ್ಚೆಯಾಗ ಬೇಕೆಂಬುದು ನನ್ನ ಉದ್ದೇಶ.
ಕಸಾಪಗೆ ಆಡಳಿತಾಧಿಕಾರಿಗಳ ನೇಮಕ?
ಈಗಾಗಲೇ ಸಮಾನ ಸಮಸ್ಕರ ವೇದಿಕೆಯ, ವಿರುದ್ಧ ಬೆಂಗಳೂರು ನಗರ ಜಿಲ್ಲಾ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿರುತ್ತದೆ. ಇದರಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಸಿ.ಕೆ.ರಾಮೇಗೌಡ ಹಾಗೂ ಆರ್.ಜಿ. ಹಳ್ಳಿ ನಾಗರಾಜ್ ಅವರಿಗೆ ಮಾಹಿತಿಯಿದ್ದರೂ, ಸಮಿತಿಯಲ್ಲಿ ಭಾಗವಹಿಸಿ, ನನ್ನ ವಿರುದ್ಧ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವಿರುದ್ಧ ಅವಹೇಳನಕಾರಿ ಮಾತನಾಡಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದು ಅವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರ್ಥಿಸಲಾಗುವುದು. ಗಾಂಧಿಭವನದಲ್ಲಿ ನಡೆದ ಸಮಾನ ಮನಸ್ಕರ ಸಭೆಗೆ ಸೇರಿದವರಿಗೆ ಉದ್ದೇಶ ಪೂರ್ವಕವಾಗಿಯೇ ಈ ವಿಷಯ ತಿಳಿಸದೇ, ಅವರಿಂದಲೂ ಸಹ ನ್ಯಾಯನಿಂದನೆ ಮಾಡಿಸಿರುತ್ತಾರೆ. ಕಸಾಪ ಸ್ವಾಯತ್ತತೆ ಸಂಸ್ಥೆಯಾಗಿದ್ದು, ಪರಿಷತ್ತಿನ ಅಧ್ಯಕ್ಷರು/ಜಿಲ್ಲಾಧ್ಯಕ್ಷರು ಕನ್ನಡದ ಮತದಾರರಿಂದ ಚುನಾಯಿತ ರಾಗಿದ್ದಾರೆ. ಸರಕಾರದಿಂದ ನಾಮನಿರ್ದೇಶನದಿಂದ ಅಧಿಕಾರಕ್ಕೆ ಬಂದವರಲ್ಲ. ಈ ಬಗ್ಗೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಆಡಳಿತಾಧಿಕಾರಿಯನ್ನು ನೇಮಿಸುವವರ ವಿರುದ್ಧ ಖಂಡನೆ ಮಾಡಿ, ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು ಎಂದು ತಿಳಿಸಿ, ಅನೇಕ ಐತಿಹಾಸಿಕ ತೀರ್ಪು ಗಳನ್ನು ನೀಡಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕನ್ನಡ ಜಾಗೃತ ಸಮಿತಿಯ ಅಧ್ಯಕ್ಷರಾಗಿ ಕನ್ನಡದ ಅಸ್ಮಿತೆಯನ್ನು ಉಳಿಸಿ, ಕನ್ನಡವನ್ನು ಯಾವಾಗಲೂ ಬೆಂಬಲಿಸುವ ಕನ್ನಡದ ಮುಖ್ಯಮಂತ್ರಿಗಳಾಗಿದ್ದಾರೆ. ಯಾರೋ 4 ಜನ ಕೆಲಸಕ್ಕೆ ಬಾರದವರೂ ಆರೋಪ ಮಾಡುತ್ತಾರೆ, ಅವರ ಆರೋಪಗಳ ಮೇಲೆ ಆಡಳಿತಾಧಿಕಾರಿಗಳನ್ನು ಮುಖ್ಯಮಂತ್ರಿಗಳು ನೇಮಕ ಮಾಡುತ್ತಾರೆ ಎಂಬ ಸಮಾನ ಮನಸ್ಕರ ಭ್ರಮೆಗೆ ಉತ್ತರವನ್ನು ನಾನು ಕಾದು ನೋಡುತ್ತೇನೆ.
*
2026 ನವೆಂಬರ್ 23ರಂದು ನಮ್ಮ ಕಾರ್ಯಕಾರಿ ಸಮಿತಿಯ ಅವಧಿಯು ಮುಗಿದ ನಂತರ ಆರು ತಿಂಗಳ ಕಾಲ ಅವಕಾಶವಿದ್ದರೂ ಅದನ್ನು ವಿಸ್ತರಿಸದೇ, ಕೂಡಲೇ ಚುನಾವಣೆಗೆ ಹೋಗಬೇಕು ಎಂಬುದು ನನ್ನ ಧ್ಯೇಯವಾಗಿದೆ. ಆದರೆ ಈ ವಿಷಯದಲ್ಲಿ ನಾನೊಬ್ಬನೇ ತೀರ್ಮಾನ ತೆಗೆದು ಕೊಂಡರೆ ಮತ್ತೆ ‘ಸರ್ವಾಧಿಕಾರಿ’ ಎನ್ನುತ್ತಾರೆ. ಆದ್ದರಿಂದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ, ಅಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ.
- ನಾಡೋಜ ಮಹೇಶ್ ಜೋಶಿ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್