ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

T A Sharavana Interview: ಆಯಸ್ಸಿನ ರೀತಿಯೇ, ಬಂಗಾರದ ಬೆಲೆಯೂ ಕಡಿಮೆಯಾಗಲ್ಲ

ಮನುಷ್ಯ ಆಯುಷ್ಯ ಹೇಗೆ ಕಡಿಮೆಯಾಗುವುದಿಲ್ಲವೋ, ಅದೇ ರೀತಿ ಬಂಗಾರದ ಮೌಲ್ಯವೂ ಕುಸಿಯುವು‌ ದಿಲ್ಲ. ಕುಸಿದರೂ 200ರಿಂದ 300 ರುಪಾಯಿ ಮಾತ್ರ ಕುಸಿಯಬಹುದು. ಆದರೆ ಭವಿಷ್ಯದ ಆಲೋಚನೆ ಹಾಗೂ ಸಂಕಷ್ಟದ ಸಮಯಕ್ಕೆ ಅನುಕೂಲವಾಗಲು ಬಂಗಾರ ಖರೀದಿಸಿರಬೇಕು. ಈ ವಿಷಯದಲ್ಲಿ ಜನರು ಹಿಂಜರಿಯಬಾರದು

ಆಯಸ್ಸಿನ ರೀತಿಯೇ, ಬಂಗಾರದ ಬೆಲೆಯೂ ಕಡಿಮೆಯಾಗಲ್ಲ

Profile Ashok Nayak Apr 20, 2025 12:30 PM

ವಿಶ್ವವಾಣಿ ಸಂದರ್ಶನ: ಜಯಂತ್‌ ಬಸವರಾಜ್

ಆಪತ್ತಿನ ಕಾಲದಲ್ಲಿ ಹಳದಿ ಲೋಹವೇ ಸಂಕಟ ಪರಿಹಾರಕ್ಕೆ ಸಹಕಾರಿ

ಬಂಗಾರ ಖರೀದಿಗೆ ಹಿಂಜರಿಕೆ ಬೇಡ

ರಾಜಕೀಯವಾಗಿ ಎಲ್ಲವೂ ಸಿಕ್ಕಿದೆ; ಮುಂದೊಂದು ದಿನ ಜೆಡಿಎಸ್ ಅಧಿಕಾರಕ್ಕೆ ಬರಲಿದೆ

ಮನುಷ್ಯ ಆಯುಷ್ಯ ಹೇಗೆ ಕಡಿಮೆಯಾಗುವುದಿಲ್ಲವೋ, ಅದೇ ರೀತಿ ಬಂಗಾರದ ಮೌಲ್ಯವೂ ಕುಸಿಯುವುದಿಲ್ಲ. ಕುಸಿದರೂ 200ರಿಂದ 300 ರುಪಾಯಿ ಮಾತ್ರ ಕುಸಿಯಬಹುದು. ಆದರೆ ಭವಿಷ್ಯದ ಆಲೋಚನೆ ಹಾಗೂ ಸಂಕಷ್ಟದ ಸಮಯಕ್ಕೆ ಅನುಕೂಲವಾಗಲು ಬಂಗಾರ ಖರೀದಿಸಿರಬೇಕು. ಈ
ವಿಷಯದಲ್ಲಿ ಜನರು ಹಿಂಜರಿಯಬಾರದು ಎಂದು ಶ್ರೀ ಸಾಯಿ ಗೋಲ್ಡ್ ಮುಖ್ಯಸ್ಥ, ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ ಸಲಹೆ ನೀಡಿದ್ದಾರೆ.

ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ಏಳನೇ ಶಾಖೆಯನ್ನು ಮಲ್ಲೇಶ್ವರದಲ್ಲಿ ಆರಂಭಿಸಿರುವ ಶರವಣ ಅವರು, ಸಾಯಿ ಗೋಲ್ಡ್ ಪ್ಯಾಲೇಸ್ ಆರಂಭದ ದಿನಗಳು, ಬಂಗಾರದ ಖರೀದಿ, ಬಂಗಾರದ ಭವಿಷ್ಯ, ತಮ್ಮ ರಾಜಕೀಯ ಜೀವನ ಸೇರಿದಂತೆ ಹಲವು ವಿಷಯಗಳ ಬಗ್ಗೆ ‘ವಿಶ್ವವಾಣಿ’ಯೊಂದಿಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಬಂಗಾರದ ಬೆಲೆ ಏರಿಕೆಗೆ ಕಾರಣವೇನು?

ಬಂಗಾರದ ಬೆಲೆ ದಿನೇ ದಿನೇ ಹೆಚ್ಚಾಗಲು ಹಲವು ಕಾರಣಗಳಿವೆ. ಪ್ರಮುಖವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ದೇಶದ ಆರ್ಥಿಕತೆ ಬಲಿಷ್ಠ ಮಾಡುವ ನಿಟ್ಟಿನಲ್ಲಿ ಇತರ ದೇಶಗಳ ಮೇಲೆ ವಿಧಿಸುತ್ತಿರುವ ಸುಂಕ ನೀತಿ. ಇದರಿಂದಾಗಿ ಅಮೆರಿಕ ಮತ್ತು ಚೀನಾ ನಡುವೆ ತೆರಿಗೆ ಯುದ್ಧ ವಾಗಬಹುದು. ಆದರೆ ಎಲ್ಲಾ ದೇಶಗಳು ತಮ್ಮ ಆರ್ಥಿಕ ಭದ್ರತೆಗೆ ನಗದನ್ನು ಠೇವಣಿಯಾಗಿಡುವ ಬದಲಾಗಿ, ಬಂಗಾರದ ಮೇಲೆ ಬಂಡವಾಳ ಹೂಡಿಕೆ ಮಾಡುತ್ತಿವೆ. ಬಂಗಾರದ ಮೇಲೆ ಬಂಡವಾಳ ಹೂಡಿಕೆ ಮಾಡುವಲ್ಲಿ ಭಾರತ ಎರಡನೆಯ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಬಂಗಾರ ಉತ್ಪಾದನಾ ಕೇಂದ್ರಗಳಿಲ್ಲ, ನೆರೆ ದೇಶಗಳಿಂದ ನಾವು ಆಮದು ಮಾಡಿಕೊಳ್ಳುತ್ತಿದ್ದೇವೆ. ಜನರಲ್ಲಿ ಬಂಗಾರದ ಮೇಲೆ ಬಂಡವಾಳ ಹೂಡಿದರೆ ನಷ್ಟವಿಲ್ಲ ಎಂದು ಅರಿವಾಗಿದೆ ಆದ್ದರಿಂದ ಬೇಡಿಕೆ ಹೆಚ್ಚಿದಂತೆ ಬೆಲೆಯೂ ಹೆಚ್ಚಿದೆ.

ಇದನ್ನೂ ಓದಿ: Lifestyle Interview: ಮೇರುನಟ ಡಾ. ರಾಜ್‌ಕುಮಾರ್‌ರಿಂದ ಪ್ರಶಂಸೆ ಗಳಿಸಿದ್ದ ಸಬೀಹಾ ಬಾನು

ಸಾಯಿ ಗೋಲ್ಡ್ ಪ್ಯಾಲೇಸ್‌ನ ನೂತನ ಮಳಿಗೆ ವಿಶೇಷತೆಯೇನು?

1995ರಲ್ಲಿ ಬಸವನಗುಡಿಯಲ್ಲಿ ಸಣ್ಣದಾಗಿ ಆರಂಭವಾದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಳಿಗೆಯಿಂದ ಪ್ರಾರಂಭವಾದ ಈ ಪಯಣ ಈಗ 35 ವರ್ಷಗಳನ್ನು ಪೂರ್ಣಗೊಳಿಸಿದೆ. ಹಂತ ಹಂತವಾಗಿ ಗ್ರಾಹಕರ ಸೇವೆಯಲ್ಲಿ ತೊಡಗಿಸಿಕೊಂಡಿ ದಕ್ಕೆ ಗ್ರಾಹಕರು ನನ್ನ ಮೇಲೆ ಹೆಚ್ಚಿನ ನಂಬಿಕೆಯಿಟ್ಟಿದ್ದಾರೆ. ಸಾಯಿ ಗೋಲ್ಡ್ ಉತ್ಪನ್ನಗಳು ಬೆಂಗಳೂರಿನ ಪ್ರತೀ ಮೂಲೆಯಲ್ಲೂ ಸಿಗುವಂತಾಗಬೇಕು. ಗ್ರಾಹಕರಿರುವ ಜಾಗದಲ್ಲೇ ಬಂದು ಬಂಗಾರ ಕೊಳ್ಳಬೇಕೆಂಬುದು ನನ್ನ ಉದ್ದೇಶದಿಂದ ಮಲ್ಲೇಶ್ವರದ ನೂತನ ಮಳಿಗೆ ಆರಂಭಿಸಿದ್ದೇವೆ.

ನಿಮ್ಮ ಅಂಗಡಿ ಬಗ್ಗೆ ಗ್ರಾಹಕರ ಭರವಸೆವೇನು?

ಮಳಿಗೆ ಪ್ರಾರಂಭಿಸಿದ ದಿನಗಳಲ್ಲಿ ಖುದ್ದು ಗ್ರಾಹಕರಿಗೆ ಕೈಯಾರೆ ಬಂಗಾರ ನೀಡುತ್ತಿದ್ದೆ. ಆಗ ಬಂಗಾರ ಕೊಂಡೊಯ್ದ ಗ್ರಾಹಕರು ನಿಮ್ಮ ಕೈಗುಣ ಚೆನ್ನಾಗಿದೆ, ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ಚಿನ್ನ ಖರೀದಿಸಿದ ನಂತರ ನಮಗೆ ಒಳ್ಳೆಯದಾಗಿದೆ ಎನ್ನುತ್ತಿದ್ದರು.

ಗ್ರಾಹಕರ ಬೇಡಿಕೆಯೇನು?

ಗುಣಮಟ್ಟ, ಬೆಲೆ, ಅವುಗಳ ಪೂರೈಕೆಗಳ ಮೇಲೆ ನಾವು ಹೆಚ್ಚಿನ ಗಮನ ಹರಿಸಿ ಅವರಿಗೆ ಬೇಕಾದ ವಿವಿಧ ರೀತಿಯ ವಿನ್ಯಾಸಗಳಲ್ಲಿ ಎಲ್ಲಾ ರೀತಿ ಆಭರಣ ತಯಾರಿಸುತ್ತೇವೆ. ಅದರ ಜತೆಗೆ ಬಂಗಾರದ ಶುದ್ಧತೆಗೆ ನಮ್ಮ ಮೊದಲ ಆದ್ಯತೆಯಾಗಿದೆ. 25 ವರ್ಷದ ಹಿಂದೆಯೇ ಹಾಲ್ ಮಾರ್ಕ್ 916 ಬಂಗಾರವನ್ನು ನಾವು ಗ್ರಾಹಕರಿಗೆ ನೀಡಿದೆವು. ಇದು ಕೇವಲ ಬಂಗಾರದ ಮಳಿಗೆಯಲ್ಲ ಇದು ಸಾಯಿ ಮಂದಿರ, ಇಲ್ಲಿ ಗ್ರಾಹಕರಿಗೆ ಏನು ಸಲ್ಲಬೇಕೋ ಅದನ್ನು ಪ್ರಾಮಾಣಿಕವಾಗಿ, ನಗುಮೊಗ ದಲ್ಲೇ ನೀಡುತ್ತಾ ಬಂದಿದ್ದೇವೆ. ಆದ್ದರಿಂದ ಗ್ರಾಹಕರು ಬಂಗಾರದ ಖರೀದಿಸಿದರೆ ಅದು ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ಎಂದು ಹೇಳುತ್ತಾರೆ.

ಮಧ್ಯಮ ವರ್ಗಕ್ಕೆ ಕೈಗಟುಕದಷ್ಟು ಬಂಗಾರ ಏರಿದೆಯಲ್ಲವೇ?

ಬಂಗಾರ ಬಲು ಭಾರವಾಗಿದೆ. ಆದರೆ ಚಿನ್ನ ಬಲು ಚೆನ್ನವೇ, ಹಳದಿ ಲೋಹ ಹಿಂದೆಂದಿಗೂ ಕಾಣದ ಮಟ್ಟಿಗೆ ಬೆಲೆ ಏರಿದೆ. ನಮ್ಮ ವಯಸ್ಸು ಹೇಗೆ ಕಡಿಮೆಯಾಗುವುದಿಲ್ಲವೋ ಹಾಗೆ ಬಂಗಾರದ ಬೆಲೆಯೂ ಕಡಿಮೆಯಾಗುವುದಿಲ್ಲ. ಬಂಗಾರದ ಮೇಲೆ ನಾವು ಬಂಡವಾಳ ಹೂಡುವಾಗ ಭವಿಷ್ಯದ ಬಗ್ಗೆ ಯೋಚಿಸಬೇಕು. ಈಗ ಕೊಳ್ಳುವಾಗ ಬೆಲೆ ಹೆಚ್ಚಿದೆ ಅಂದಾದರೆ ಕೆಲ ವರ್ಷಗಳು ಕಳೆದ ಮೇಲೆ ಈಗ ಕೊಂಡ ಬೆಲೆಯ ದುಪ್ಪಟ್ಟು ಬೆಲೆ ಸಿಗುತ್ತದೆ. ಯಾವುದೇ ಬ್ಯಾಂಕಿನಲ್ಲಿ ಹಣವಿಟ್ಟರೂ ಇಷ್ಟರ ಮಟ್ಟಿಗೆ ಬಡ್ಡಿ ಬರುವುದಿಲ್ಲ. ಬಂಗಾರದ ಎನ್ನುವುದು ಕೇವಲ ಅಲಂಕಾರಿಕ ವಸ್ತುವಲ್ಲ, ಅದೊಂದು ಆಸ್ತಿ. ಜೀವನದಲ್ಲಿ ಸಂಕಟ ಬಂದರೆ ಚಿನ್ನದ ರಮಣ. ಬೇರೆ ಆಸ್ತಿಗಳನ್ನು ಅಡಮಾನ ಇಡಬೇಕಾದರೆ ಎಷ್ಟೋ ಪ್ರಕ್ರಿಯೆ ಪಾಲಿಸಬೇಕು ಆದರೆ ತತ್‌ಕ್ಷಣ ಅಡಮಾನ ಇಟ್ಟು ಕಷ್ಟ ತೀರಿಸಿ ಕೊಳ್ಳಬಹುದಾದ ಮಾರ್ಗ ಬಂಗಾರ ಒಂದೇ ಆಗಿದೆ. ಆದ್ದರಿಂದ ಬಂಗಾರಕೊಳ್ಳಲು ಹಿಂಜರಿಯ ಬಾರದು.

ಏರಿರುವ ಬಂಗಾರ ಕಡಿಮೆಯಾಗಬಹುದೇ?

ಕಳೆದ ವರ್ಷ ಬಂಗಾರದ ಬೆಲೆ ಗ್ರಾಂಗೆ ಸುಮಾರು ಆರು ಸಾವಿರಗಳಿದ್ದಿರಬಹುದು, ಆದರೆ ಇಂದು ಸುಮಾರು ಹತ್ತು ಸಾವಿರ ಆಸು ಪಾಸಿನಲ್ಲಿದೆ. ಬಂಗಾರದ ಬೆಲೆ ಎಂದಿಗೂ ಕುಸಿಯುವುದಿಲ್ಲ. ಕೇವಲ 100 ರಿಂದ 200 ರು.ಗಳ ವ್ಯತ್ಯಾಸವಾಗಬಗಹುದಷ್ಟೆ, ಆದರೆ ಅದನ್ನು ಬೆಲೆ ಕಡಿಮೆ ಎನ್ನಲಾಗದು. ಬಂಗಾರವು ಒಂದು ಬಂಡವಾಳ ಉದ್ಯಮವಾಗಿದೆ. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ ಕುಸಿತ ವಾಗಿರುವುದನ್ನುನಾವು ಗಮನಿಸಬಹುದು, ಆದರೆ ಎಂದಾದರೂ ಬಂಗಾರದ ಬೆಲೆಯಲ್ಲಿ ಕುಸಿತವಗಿ ದೆಯಾ? ಇಲ್ಲ. ಇಂದಿನ ದರ ನೋಡುವವರು ಮುಂದಿನ ದರದ ಬಗ್ಗೆ ಯೋಚಿಸಬೇಕು. ಇಂದಿನ ಬೆಲೆಗಿಂತ ನೂರರಷ್ಟು ಬಂಗಾರದ ಬೆಲೆ ಏರಲಿದೆ ಹೊರತು ಕಡಿಮೆಯಾಗುವುದಿಲ್ಲ.

ರಾಜಕೀಯ ಜೀವನದ ಸವಾಲುಗಳೇನು?

ಸಮಸ್ಯೆಯೇ ಜೀವನ, ಜೀವನದಲ್ಲಿ ಸಮಸ್ಯೆಗಳು ಬರುತ್ತಿರುತ್ತವೆ. ಅವು ಬಂದಾಗ ಕುಗ್ಗುವ ಮನಸ್ಥಿತಿಯೇ ನನ್ನದಲ್ಲ. ನಾನು ರಾಜಕೀಯ ರಂಗ ಪ್ರವೇಶಿಸಿದ್ದೇ ಜೀವನದಲ್ಲಿ ನಡೆದ ಒಂದು ಘಟನೆಯಿಂದಾಗಿ. ನನ್ನ ಆರಂಭದ ದಿನಗಳಲ್ಲಿ ಕೆಲವು ರಾಜಕಾರಣಿಗಳಿಂದಾಗಿ ನನಗೆ ತುಂಬಾ ತೊಂದರೆ ಉಂಟಾಯಿತು. ನಾನು ಆಗ ಯೋಚಿಸಿದೆ ನಾನು ಒಬ್ಬ ರಾಜಕಾರಣಿಯಾದರೆ ಈ ಸಮಸ್ಯೆಗಳನ್ನು ಎದುರಿಸಬಹುದು ಹಾಗೆಯೇ ನನ್ನಂತೆ ತೊಂದರೆಗಳಿಗೆ ಒಳಗಾದವರನ್ನು ನಾನು ಕಾಪಾಡಬಹುದಲ್ಲ ಎಂದು ಯೋಚಿಸಿ ರಾಜಕೀಯ ರಂಗ ಪ್ರವೇಶಿಸಿದೆ. ನನ್ನ ಶಕ್ತಿ, ಸಮಯ, ಹಣ ಎಲ್ಲವನ್ನು ವ್ಯಯಿಸಿ ನಾನು ರಾಜಕಾರಣಕ್ಕೆ ಬಂದು ಜನರ ಸೇವೆ ಮಾಡುತ್ತಿದ್ದೇನೆ.

ಜನರಿಂದಲೂ ಸಹ ಅದೇ ರೀತಿಯ ಗೌರವ ದೊರೆಯುತ್ತಿದೆ. ಸಾಯಿ ಗೋಲ್ಡ್ ಎಷ್ಟು ಹೆಸರು ಮಾಡಿತೋ, ಅಷ್ಟೇ ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದೆ. ಬಡತನದಿಂದ ಬಂದವರಿಗೆ ಹಸಿವಿನ ಬೆಲೆ ತಿಳಿದಿರುತ್ತದೆ, ಈ ಹಸಿವು ತಿಳಿದ ನಾನು ಬಡ ಜನರ ಸೇವೆ ಮಾಡುತ್ತಿದ್ದೇನೆ.

ದೇವೇಗೌಡರ ಜತೆಗಿನ ನಿಮ್ಮ ಒಡನಾಟ ಹೇಗಿದೆ?

ಬಹಳ ಜನ ನನ್ನನ್ನು ದೇವೇಗೌಡರ ದತ್ತು ಪುತ್ರ ಎಂದೇ ಭಾವಿಸಿದ್ದಾರೆ. ಅವರಿಗೀಗ 93 ಮೂರು ವರ್ಷ. ಈಗಲೂ ಅವರು ರಾಜ್ಯಸಭೆಯಲ್ಲಿ ರೈತರ ಪರವಾಗಿ ಸತತವಾಗಿ ಧ್ವನಿ ಎತ್ತುತ್ತಾರೆ. ನೀರಾವರಿ ವಿಷಯಕ್ಕೆ ಸಂಬಂಧಿಸಿದಂತೆ ದೀರ್ಘ ಭಾಷಣ ಮಾಡುತ್ತಾರೆ, ಆ ರೀತಿಯಾದ ಬದ್ಧತೆ, ಕಳಂಕ ರಹಿತವಾದ ರಾಜಕಾರಣಿ ಅಂದರೆ ಅದು ದೇವೇಗೌಡರು. ಅವರನ್ನು ಬಹಳ ಹತ್ತಿರದಿಂದ ನಾನು ನೋಡಿದ್ದೇನೆ. ಕಾವೇರಿ ಹೋರಾಟದ ಸಮಯದಲ್ಲಿ ಅವರು ಉಪವಾಸ ಸತ್ಯಾಗ್ರಹ ನಡೆಸಲು ಮುಂದಾದರು. ಆಗ ಎಷ್ಟು ಜನ ಅವರ ಆರೋಗ್ಯದೃಷ್ಟಿಯಿಂದ ಮನ ಒಲಿಸಲು ಪ್ರಯತ್ನಿಸಿದರೂ ಅವರು ಒಪ್ಪಲಿಲ್ಲ. ಕೊನೆಗೆ ಕೇಂದ್ರ ಸರಕಾರದ ಕಚೇರಿಯಿಂದ ಭರವಸೆಯ ಪತ್ರ ಬಂದ ನಂತರವೇ ಅವರು ಉಪವಾಸ ಮುರಿದದ್ದು. ಅವರ ಈ ಬದ್ಧತೆ ನೋಡಿ ನಾವು ಅವರ ಅನುಯಾಯಿ ಆದವರು. ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷದ ಅಗತ್ಯವಿದೆ. ರಾಷ್ಟ್ರೀಯ ಪಕ್ಷದ ರಾಜ್ಯ ನಾಯಕರು ಪ್ರಾದೇಶಿಕ ಸಮಸ್ಯಗಳ ಬಗ್ಗೆ ಧ್ವನಿ ಎತ್ತುವುದಿಲ್ಲ. ಪ್ರಾದೇಶಿಕ ಪಕ್ಷದವರು ಜನರ ಪರವಾಗಿ ಧ್ವನಿ ಎತ್ತಿ ಸಮಸ್ಯೆಗೆ ಪರಿಹಾರ ಪಡೆಯಬಹುದು. ಅಂತಹ ಕೆಲಸವನ್ನು ನಮ್ಮ ಪಕ್ಷ ಸತತವಾಗಿ ಮಾಡಿಕೊಂಡು ಬಂದಿದೆ. ಆದರೆ ಜನ ನಮ್ಮ ಕೈ ಹಿಡಿಯಲಿಲ್ಲ. ಎರಡು ಬಾರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಾದರು ರೈತರ ಸಾಲಮನ್ನಾ ಮಾಡಿದರು, ನೀರಾವರಿ ಯೋಜನೆಗಳನ್ನು ತಂದರೂ ಜನ ಅವರನ್ನು ಮರೆತುಬಿಟ್ಟರು. ರಾಜಕೀಯ ನಿಂತ ನೀರಲ್ಲ ಹರಿ ಯುವ ನೀರು ಬದಲಾವಣೆ ಆಗಲೇ ಬೇಕು ಮುಂದೆ ನೋಡೋಣ ಜನ ಏನು ಮಾಡುತ್ತಾರೆ ಎಂದು.

ರಾಜಕೀಯದಲ್ಲಿ ನೀವಂದುಕೊಂಡ ಎಲ್ಲ ಸ್ಥಾನಮಾನ ಸಿಕ್ಕಿವೆಯೇ?

ನಾನು ಆರ್ಯ ವೈಶ್ಯ ಎಂಬ ಒಂದು ಸಣ್ಣ ಸಮಾಜದಿಂದ ಬಂದವನು. ನನ್ನ ಸಮಾಜದ ಮುನ್ನಲೆಗೆ ತಂದು ರಾಜಕೀಯವಾಗಿ ಕೆಲವು ಜವಾಬ್ದಾರಿಗಳನ್ನು ನೀಡಿ, ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ ತಾನೇ ನಮಗೂ ಸ್ಥಾನ ಸಿಗುವುದು. ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲಾ ನನಗೆ ಅವಕಾಶ ಮಾಡಿಕೊಟ್ಟಿದೆ. ಪಕ್ಷ ಅಧಿಕಾರದಲ್ಲಿದ್ದಾಗ ಮಾತ್ರ ನನ್ನದು ಇಲ್ಲವೆಂದರೆ ಅಧಿಕಾರ ಇರುವ ಪಕ್ಷಕ್ಕೆ ಎಗರುವ ಜಯಮಾನ ನನ್ನದಲ್ಲ. ಪಕ್ಷ ತಾಯಿ ಇದ್ದಹಾಗೆ, ಪಕ್ಷಕ್ಕೆ ದ್ರೋಹ ಬಗೆಯುವುದು ತಾಯಿಗೆ ದ್ರೋಹ ಬಗೆಯುವುದು ಎರಡೂ ಒಂದೇ. ಯಾವುದೇ ಕಾರಣಕ್ಕೂ ನನ್ನ ನಿಯತ್ತಿನಲ್ಲಿ ಬದಲಾವಣೆಗಳಿಲ್ಲ. ಕೊಟ್ಟ ಜವಾಬ್ದಾರಿ ನಿರ್ವಹಿಸಿ ಕೊಂಡು ಹೋಗುತ್ತೇನೆ.

*

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಇಂದು ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಆಡಳಿತ ನಡೆಸುತ್ತಿದೆ. ಆದರೆ ಪ್ರಾರಂಭದಲ್ಲಿ ಕೇವಲ ಎರಡೇ ಸಂಸದರು ಬಿಜೆಪಿಯಲ್ಲಿ ಇದದ್ದು, ಇಂದು 275 ಸೀಟು ಪಡೆದು ಬೇರೆ ಪಕ್ಷಗಳ ಜತೆಗೂಡಿ ದೇಶದ ಚುಕ್ಕಾಣಿ ಹಿಡಿದು 3 ನೇ ಬಾರಿಗೆ ಅಧಿಕಾರ ನಡೆಸುತ್ತಿಲ್ಲವಾ. ರಾಜಕೀಯ ಎಂಬುದೇ ಹಾಗೆ ಯಾವಾಗ ಏನಾಗುತ್ತದೆ ಎಂದು ಹೇಳಲಾಗುವುದಿಲ್ಲ, ಬದಲಾವಣೆ ಜಗದ ನಿಯಮ, ಒಂದಲ್ಲ ಒಂದು ದಿನ ಎಲ್ಲವೂ ಬದಲಾಗಲೇಬೇಕು. ಮತ್ತೆ ಜನರ ಆಶೀರ್ವಾದ ಪಡೆದು ನಮ್ಮ ಪಕ್ಷ ಆಡಳಿತಕ್ಕೇ ಬಂದೇ ಬರುತ್ತದೆ.

-ಟಿ.ಎ. ಶರವಣ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮುಖ್ಯಸ್ಥ, ವಿಧಾನಪರಿಷತ್ ಸದಸ್ಯ