ಗಡಿನಾಡಿನಲ್ಲಿ ಕನ್ನಡದ ದುಸ್ಥಿತಿ: ಭಾಷಾ ಬೆಳವಣಿಗೆಗೆ ಸವಾಲು
ಕಾಸರಗೋಡು ಮಾತ್ರ ಅಲ್ಲ, ರಾಜ್ಯದ ಗಡಿನಾಡು ಪ್ರದೇಶಗಳ ಪರಿಸ್ಥಿತಿಗಳೆಲ್ಲವೂ ಹಾಗೆ. ಗಡಿನಾಡಿ ನಲ್ಲಿ ದಿನೇ ದಿನೇ ಕನ್ನಡ ಅಸ್ಮಿತೆ ಮಂಕಾಗುತ್ತಿದೆ ಎಂಬುದಂತೂ ಸುಳ್ಳಲ್ಲ. ನಮ್ಮ ದೇಶದಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಆದಾಗ ಅದೊಂದು ಸಮರ್ಪಕ ಪ್ರಕ್ರಿಯೆ ಆಗಿಲ್ಲ ಎಂಬುದನ್ನು ಹೆಚ್ಚಿನವರು ಒಪ್ಪಿರುವ ವಿಷಯ.
-
Ashok Nayak
Nov 1, 2025 8:42 AM
ನರೇಂದ್ರ ಪಾರೆಕಟ್
1956ರಲ್ಲಿ ಭಾಷಾವಾರು ಪ್ರಾಂತ್ಯ ವಿಭಜನೆಯ ಸಂದರ್ಭದಲ್ಲಿ ಆದ ಅನ್ಯಾಯವನ್ನು ಸರಿಪಡಿ ಸಲು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಗಡಿ ವಿವಾದ ಪರಿಹರಿಸುವ ಆಯೋಗ ರಚನೆಯೂ ಆಗಿತ್ತು. ಕೇರಳ-ಕರ್ನಾಟಕ ನಡುವಿನ ಕಾಸರಗೋಡು ಗಡಿ ವಿವಾದ ಮತ್ತು ಬೆಳಗಾವಿ ಗಡಿ ವಿವಾದದ ಎಲ್ಲಾ ಅಂಶಗಳನ್ನೂ ಮಹಾಜನ್ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಮಹಾಜನ್ ವರದಿ ಸರ್ವಾನುಮತದಿಂದ ಜಾರಿಗೆ ಬರದೆ ಇರುವುದು ಕರ್ನಾಟಕದ ಪಾಲಿಗಂತೂ ತುಂಬಲಾರದ ನಷ್ಟ.
ನರೇಂದ್ರ ಪಾರೆಕಟ್ ಇದು ಏಳು ವರ್ಷಗಳ ಹಿಂದಿನ ಮಾತು.. ‘ಸಂಸತ್ತಿಗೆ ಸಂಸದರು ಬರೋದಿಲ್ಲ ಎಂದು ಪಾರ್ಲಿ ಮೆಂಟನ್ನು ಮುಚ್ಚೋಲ್ಲ, ಐಸಿಯುಗೆ ರೋಗಿಗಳು ಬರೋದಿಲ್ಲ ಎಂದು ಅದನ್ನು ಮುಚ್ಚೋಕೆ ಆಗೋದಿಲ್ಲ. ಅದೇ ರೀತಿ ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಯಲ್ಲಿ ಒಂದು ಮಗು ಇದ್ದರೂ ಅಲ್ಲಿ ಕನ್ನಡಿಗ ಶಿಕ್ಷಕರು ಬೇಕು, ಅದನ್ನು ಬಿಟ್ಟು ಶಾಲೆ ಮುಚ್ಚೋದನ್ನು ಯೋಚಿಸುವುದು ಯಾವ ಸೀಮೆ ನ್ಯಾಯ...?’ ಈ ಸಿನಿಮಾ ಸಂಭಾಷಣೆ ಥಿಯೇಟರ್‌ಗಳಲ್ಲಿ ಕೇಳಿದ ಲಕ್ಷಾಂತರ ಕನ್ನಡಿಗರ ಚಪ್ಪಾಳೆ ಮುಗಿಲು ಮುಟ್ಟಿತು.
ಕನ್ನಡಿಗರ ಸ್ವಾಭಿಮಾನದ ಕಿಚ್ಚು ಹೀಗಿರಬೇಕು ಎಂದು ಒಂದೆರಡು ತಿಂಗಳು ಪರಸ್ಪರ ಮಾತಾಡಿ ಕೊಂಡರು, ಸೋಶಿಯಲ್ ಮೀಡಿಯಾಗಳಲ್ಲಿ ಕಾಸರಗೋಡಿನ ಕುರಿತಾದ ಕನ್ನಡ ಸಾಹಿತ್ಯದ ಮಹಾಪೂರವೂ ಹರಿದು ಬಂತು. ಆದರೆ ಆದದ್ದು ಅಷ್ಟೇ, ಬೆರಳೆಣಿಕೆಯ ತಿಂಗಳಲ್ಲೇ ಬಹುತೇಕ ಕನ್ನಡಿಗರು ಆ ಸಂಭಾಷಣೆಯನ್ನು ಮರೆತರು. ಸರಕಾರವೇ ಇರಲಿ, ಯಾವುದೇ ಕನ್ನಡ ಪರ ಸಂಘಟನೆಯೇ ಆಗಿರಲಿ ಆ ಕುರಿತು ಪ್ರಬಲವಾದ ಅಭಿಯಾನ ಬಿಡಿ, ಯಾವುದೇ ದೊಡ್ಡ ಮಟ್ಟಿಗಿನ ಧ್ವನಿಯೂ ಹೊರ ಬಂದಿಲ್ಲ.
ಇದನ್ನೂ ಓದಿ: Narendra Parekat Column: ಭಾರತ-ಪಾಕ್ ಸರ್ ಕ್ರೀಕ್ ವಿವಾದ: ಏನಿದು ಸಮಸ್ಯೆ? ಭಾರತ ಕೊಟ್ಟ ಎಚ್ಚರಿಕೆ ಏನು?
ಸಿನಿಮಾ ಸಂಭಾಷಣೆಯೇ ಬೇರೆ, ವಾಸ್ತವವೇ ಬೇರೆ. ಈ ವಿಷಯ ಕಾಸರಗೋಡಿನವರಿಗೂ ಚೆನ್ನಾ ಗಿಯೇ ಅರಿವಿತ್ತು. ಹಾಗಾಗಿ ತಮ್ಮೂರಿನಲ್ಲಿ ಕನ್ನಡ ಉಳಿವಿಗಾಗಿ ನಮ್ಮ ಜತೆ ಪ್ರಬಲರಾಗಿ ಕೈಜೋಡಿಸುವವರು ಖಂಡಿತಾ ಇಲ್ಲ ಎಂದು ತಿಳಿದಿದ್ದರಿಂದ ಅಲ್ಲಿನವರೂ ಚಾತಕಪಕ್ಷಿಯಂತೆ ಯಾರಿಗೂ ಕಾಯದೆ ಸುಮ್ಮನಾದರು.
ಕಾಸರಗೋಡು ಮಾತ್ರ ಅಲ್ಲ, ರಾಜ್ಯದ ಗಡಿನಾಡು ಪ್ರದೇಶಗಳ ಪರಿಸ್ಥಿತಿಗಳೆಲ್ಲವೂ ಹಾಗೆ. ಗಡಿನಾಡಿ ನಲ್ಲಿ ದಿನೇ ದಿನೇ ಕನ್ನಡ ಅಸ್ಮಿತೆ ಮಂಕಾಗುತ್ತಿದೆ ಎಂಬುದಂತೂ ಸುಳ್ಳಲ್ಲ. ನಮ್ಮ ದೇಶದಲ್ಲಿ ಭಾಷಾವಾರು ಪ್ರಾಂತ್ಯ ರಚನೆ ಆದಾಗ ಅದೊಂದು ಸಮರ್ಪಕ ಪ್ರಕ್ರಿಯೆ ಆಗಿಲ್ಲ ಎಂಬುದನ್ನು ಹೆಚ್ಚಿನವರು ಒಪ್ಪಿರುವ ವಿಷಯ. ಆ ಕಾರಣಕ್ಕಾಗಿ ಈ ಹಿಂದಿನ ಮೈಸೂರು ಪ್ರಾಂತ್ಯದಲ್ಲಿನ ಕಾಸರಗೋಡು ಭೌಗೋಳಿಕವಾಗಿ ಕೇರಳ ಸೇರುವಂತಾಯಿತು, ಹಾಗೆಯೇ ಬೆಳಗಾವಿಯ ಕೆಲವು ಪ್ರದೇಶಗಳೂ ವಿವಾದ ಪ್ರದೇಶಗಳೆನಿಸಿದವು.
ನಮ್ಮ ರಾಜ್ಯದ ದ.ಕ ಜಿಲ್ಲೆಯ ಮಂಗಳೂರಿಗೆ ಹೊಂದಿಕೊಂಡಿರುವ ಕಾಸರಗೋಡಿನಲ್ಲಿ ಹತ್ತಾರು ಮಾತೃಭಾಷೆಯನ್ನಾಡುವ ಜನರಿದ್ದಾರೆ, ಆದರೆ ಅಲ್ಲಿನ ಹೆಚ್ಚಿನವರ ಹೃದಯದ ಭಾಷೆ ಕನ್ನಡ. ಅವರೆಲ್ಲರೂ ತಮ್ಮ ನೆಲದಲ್ಲಿ ಕನ್ನಡ ವಿದ್ಯಾರ್ಜನೆಗೈದು ಉದ್ಯೋಗವನ್ನರಸುತ್ತಿರುವುದು ಕರ್ನಾಟಕದಲ್ಲೇ ಎಂಬುವುದೂ ಕೂಡಾ ಸತ್ಯ.
ಕಳೆದ 70 ವರ್ಷಗಳಲ್ಲಿ ಕಾಸರಗೋಡಿನಲ್ಲಿ ಕನ್ನಡದ ಪರಿಸ್ಥಿತಿ ಯಾವ ರೀತಿ ಮಂಕಾಗಿದೆ ಎಂಬು ವುದು ಅವಲೋಕಿಸಬೇಕಾದುದು ಒಂದು ಪ್ರಮುಖ ವಿಷಯ. ಕರ್ನಾಟಕದ ಗಡಿ ಪ್ರದೇಶ ವಾದ ಮಂಜೇಶ್ವರದಿಂದ ಕಾಸರಗೋಡು ಜಿಲ್ಲೆಯ ಕಾಂಞಂಗಾಡಿನ ವರೆಗೂ ಕನ್ನಡ ಆಗಲೂ ಇದೆ, ಈಗಲೂ ಇದೆ ಎಂಬುವುದರಲ್ಲಿ ಸಂಶಯ ಏನಿಲ್ಲ, ಆದರೆ ಅದರ ಪ್ರಮಾಣದ ಬಗ್ಗೆಯೇ ಪ್ರಚಲಿತ ಚರ್ಚೆ ಮತ್ತು ಕುತೂಹಲ.
ಕನ್ನಡ ಮಾಧ್ಯಮ ಶಾಲೆಗಳ ಪಾತ್ರ ಕಾಸರಗೋಡಿನಲ್ಲಿ ಕನ್ನಡ ಉಳಿಯಲು ಕಾರಣವಾಗಿರುವುದಕ್ಕೆ ಪ್ರಮುಖ ಕಾರಣ ಕನ್ನಡ ಮಾಧ್ಯಮ ಶಾಲೆಗಳು. 25 ವರ್ಷಗಳ ಹಿಂದಿನವರೆಗೂ ಒಂದು ಶಾಲೆ ಯಲ್ಲಿ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಕನ್ನಡ ವಿದ್ಯಾರ್ಥಿಗಳಿದ್ದರು, ಆದರೆ ಈಗ ಆ ಸಂಖ್ಯೆ ನೂರಕ್ಕೆ ಇಳಿದಿದೆ ಎಂಬುದು ಆಘಾತಕರ ಮಾಹಿತಿ. ಕನ್ನಡ ಭಾಷೆ ಓದಿದರೆ ಸರಕಾರಿ ಉದ್ಯೋಗಾವ ಕಾಶ ಸಾಧ್ಯತೆ ಇಲ್ಲ ಎಂದೇ ಒಲ್ಲದ ಮನಸ್ಸಿನಿಂದಲೇ ಮಲೆಯಾಳಂ ಭಾಷೆ ಓದಿ ಕೇರಳದಲ್ಲಿ ಹೇಗಾದರೂ ಉದ್ಯೋಗ ಪಡೆಯಲು ಪ್ರಯತ್ನಿಸಬಹುದೆಂಬ ಯೋಚನೆ ಹಲವರದ್ದಾ ಗಿದೆ.
ಕಾಸರಗೋಡಿನ ನಾಡಕವಿ, ಹಿರಿಯ ಹೋರಾಟಗಾರರಾಗಿದ್ದ ಕಯ್ಯಾರ ಕಿಂಞಣ್ಣ ರೈಗಳ ‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಹಾಡು ಕರ್ನಾಟಕದ ಮನೆ-ಮನದೊಳಕ್ಕೆ ತಲುಪಿದ್ದರೂ ಅದಕ್ಕೆ ದೊರೆತ ಸ್ಪಂದನೆ ಜಾಣಮೌನ. ಬೆಳಗಾವಿ ಗಡಿಯಲ್ಲಿ ಕನ್ನಡದ ಪರಿಸ್ಥಿತಿ ಕಾಸರಗೋಡಿನಲ್ಲಿ ಹೇಗೆ ಕನ್ನಡಕ್ಕೆ ದುರ್ಗತಿ ಬಂದಿದೆಯೋ, ಬೆಳಗಾವಿ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಅದಕ್ಕಿಂತಲೂ ವಿಭಿನ್ನ ವಾದುದೇನಲ್ಲ. ಅಲ್ಲಿ ಕೆಲವು ಪ್ರದೇಶಗಳಲ್ಲಿ ಕನ್ನಡ ಭಾಷೆ ಇದ್ದೂ ಇಲ್ಲದ ಪರಿಸ್ಥಿತಿ ಒಂದೆಡೆ ಯಾದರೆ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿರುವ ಕನ್ನಡಿಗರಿಗೆ ತಾವು ಆದಷ್ಟು ಬೇಗ ಕರ್ನಾಟಕ ರಾಜ್ಯದವರಾಗಬೇಕೆಂಬ ತವಕದ ಕನಸು.
1956ರಲ್ಲಿ ಭಾಷಾವಾರು ಪ್ರಾಂತ್ಯ ವಿಭಜನೆಯ ಸಂದರ್ಭದಲ್ಲಿ ಆದ ಅನ್ಯಾಯವನ್ನು ಸರಿಪಡಿ ಸಲು ಸವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಗಡಿ ವಿವಾದ ಪರಿಹರಿಸುವ ಆಯೋಗ ರಚನೆಯೂ ಆಗಿತ್ತು. ಆ ವರದಿಯಂತೆ ಬೆಳಗಾವಿಯ ಸುತ್ತಮುತ್ತಲ ದಕ್ಷಿಣ ಸೊಲ್ಲಾಪುರದ 65 ಹಳ್ಳಿಗಳು, ಇಡೀ ಅಕ್ಕಲಕೋಟೆ ತಾಲೂಕು, ಜತ್ತ ತಾಲೂಕಿನ ಹಳ್ಳಿ, ಗಡಹಿಂಗ್ಗಜ ತಾಲೂಕಿನ ೧೫ ಹಳ್ಳಿಗಳು ಕರ್ನಾಟಕ ಸುರ್ಪದಿಗೆ ಬರಬೇಕೆಂಬ ಶಿಫಾರಸನ್ನೂ ನೀಡಲಾಯಿತು.
ಆದರೆ ಬೆಳಗಾವಿ ನಗರ ತನಗೆ ಸಿಗುವುದಿಲ್ಲ ಎಂದು ಗೊತ್ತಾದಾಗ ಮಹಾರಾಷ್ಟ್ರ ಮಹಾಜನ ಆಯೋಗದ ವರದಿಯನ್ನು ಒಪ್ಪಿಕೊಳ್ಳದೆ ಅನಗತ್ಯ ಗಡಿ ವಿವಾದಗಳನ್ನೂ ಹುಟ್ಟು ಹಾಕಿತು ಎಂಬುವುದು ನಿಸ್ಸಂಶಯ. ಆ ವಿಷಯ ಸದ್ಯ ಸುಪ್ರೀಂ ಕೋರ್ಟಿನ ಅಂಗಳದಲ್ಲಿದೆ. ಆದರೂ ರಾಜಕೀಯ ಲಾಭಕ್ಕಾಗಿ ಈಗಲೂ ಮಹಾರಾಷ್ಟ್ರ ವಿಧಾನಸಭೆಯ ಪ್ರತಿಯೊಂದು ವಿಧಾನಸಭಾ ಅಧಿವೇಶನದಲ್ಲೂ ವಿಷಯ ಪ್ರಸ್ತಾಪವಾಗಿ ನಿರ್ಣಯ, ಮಂಡನೆಗಳೂ ಆಗುತ್ತಿವೆ.
ಅಷ್ಟೇ ಅಲ್ಲದೆ, ಗಡಿ ಪ್ರದೇಶದಲ್ಲಿ ಕನ್ನಡಿಗರ ಮೇಲೆ ಮರಾಠಿ ಭಾಷಿಗರಿಂದ ಹಲ್ಲೆಗಳೂ ಆಗುತ್ತಿವೆ. ಕರ್ನಾಟಕದ ಬಸ್‌ಗಳ ಮೇಲೆ ಕಲ್ಲು ತೂರಾಟ ಸೇರಿದಂತೆ ಬೇರೆ ಬೇರೆ ರೀತಿಯ ಪ್ರತಿಭಟನೆಗಳೂ ಮುಂದುವರಿಯುತ್ತಿರುವುದಂತೂ ಸುಳ್ಳಲ್ಲ. ಕರ್ನಾಟಕದ ಭಾಲ್ಕಿ, ಬೀದರ್, ನಿಪ್ಪಾಣಿ ಸೇರಿದಂತೆ ಹಲವೆಡೆ ಮರಾಠಿ ಭಾಷಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಹಾಗಾಗಿ ಆ ಪ್ರದೇಶವೆಲ್ಲವೂ ಮಹಾ ರಾಷ್ಟ್ರಕ್ಕೆ ಸೇರಬೇಕು ಎಂಬುದು ಗಡಿಪ್ರದೇಶದ ಬಗ್ಗೆ ಆಗಾಗ ವಿವಾದ ಎಬ್ಬಿಸುತ್ತಿರುವ ಮಹಾ ರಾಷ್ಟ್ರ ಏಕೀಕರಣ ಸಮಿತಿಯ ವಿವಾದಾತ್ಮಕ ವಾದ.
ಒಟ್ಟಾರೆಯಾಗಿ ವಿಶ್ಲೇಷಿಸುವುದಾದರೆ ನಮ್ಮನಾಳಿದ, ನಮ್ಮನಾಳುವ ಸರಕಾರಗಳ ಇಚ್ಛಾಶಕ್ತಿಯ ಕೊರತೆ ಗಡಿ ಸಮಸ್ಯೆಗಳಿಗೆಲ್ಲಾ ಮೂಲ ಕಾರಣ. ಸಾಮಾನ್ಯವಾಗಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಗೆಲುವು ಸಾಽಸಲು ವೋಟ್ ಬ್ಯಾಂಕೇ ಪ್ರಮುಖ ಅಸ್ತ್ರ.
ಗಡಿಪ್ರದೇಶದಲ್ಲಿ ಇರುವ ಮಂದಿಯ ಅಲ್ಪ ಸಂಖ್ಯಾತರ ಮತಗಳು ವೋಟ್ ಬ್ಯಾಂಕ್‌ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ ಸರಕಾರ ಗಡಿ ಸಮಸ್ಯೆ, ಅಲ್ಲಿನ ಭಾಷಾ ಸಮಸ್ಯೆ ಯನ್ನು ಕೇವಲ ಜೀವಂತವಾಗಿ ಇಟ್ಟಿದೆಯೇ ವಿನ: ಪರಿಹರಿಸಲು ಮುಂದಾಗಿಲ್ಲ ಎನ್ನುವುದೂ ವಾಸ್ತವದ ವಿಷಯ.
ಕಾಸರಗೋಡು ಕನ್ನಡಿಗರ ಪಾಲಿನ ಕರಾಳ
ಶಾಸನ ಕನ್ನಡಿಗರ ಧ್ವನಿಯನ್ನು ಸದ್ದಡಗಿಸಲು ಕಾಸರಗೋಡಿನ ಎಲ್ಲಾ ಶಾಲೆಗಳಲ್ಲೂ ಮಲೆ ಯಾಳಂ ಭಾಷಾ ಕಲಿಕೆ ಕಡ್ಡಾಯ ಮಾಡುವುದಕ್ಕೆ ಕೇರಳ ಸರಕಾರ ಹಿಂದಿನಿಂದಲೂ ಪ್ರಯತ್ನಾ ಮಾಡುತ್ತಾ ಇದೆ. ಕಳೆದ ಮೇ ತಿಂಗಳಿನಲ್ಲಿ ಅದನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ರಾಷ್ಟ್ರಪತಿಗೆ ಕಳಿಸಿ ಕೊಡಲಾಯಿತು. ಆದರೆ ರಾಷ್ಟ್ರಪತಿಯವರು ಅದರ ಸಾಧಕ-ಭಾದಕಗಳನ್ನು ನೋಡಿ ತಿರಸ್ಕರಿಸಿದ್ದರು. ತನ್ನ ಮುಖಭಂಗ ತಪ್ಪಿಸಲು ಕೇರಳ ಸರಕಾರ ಮತ್ತೊಮ್ಮೆ ಅದನ್ನು ಕಳುಹಿಸಿಕೊಟ್ಟು ಶಾಸನ ಜಾರಿ ಮಾಡಲು ಮುಂದಾಗಿದೆ. ಆ ನಂತರವಂತೂ ಕಾಸರಗೋಡಿನಲ್ಲಿ ಕನ್ನಡ ಕಲಿಯುವ ವಿದ್ಯಾರ್ಥಿಗಳ ಪರಿಸ್ಥಿತಿ ತ್ರಿಶಂಕು ಸ್ವರ್ಗ ಎಂಬುದಂತೂ ಸತ್ಯ.
ನೀರು ಕೊಡಿ ಇಲ್ಲವಾದರೆ ಕರ್ನಾಟಕಕ್ಕೇ ಹೋಗುತ್ತೇವೆ..
ಕಳೆದ ಒಂದೆರಡು ವರ್ಷಗಳ ಹಿಂದೆ ಮಹಾರಾಷ್ಟ್ರದ ಜತ್ ತಾಲೂಕಿನ ಜನರಿಗೆ ಕುಡಿಯುವ ನೀರಿನ ಅಭಾವ ಎದುರಾಯಿತು. ನಮಗೆ ನೀರು ಕೊಡಿ ಇಲ್ಲವಾದರೆ ಕರ್ನಾಟಕಕ್ಕೆ ಹೋಗುತ್ತೇ ವೆಂದು ತಾಲೂಕಿನ ಉಮದಿ ಗ್ರಾಮದ ಜನ ಆಗ ಆಕ್ರೋಶ ಹೊರ ಹಾಕಿದ್ದರು. ಜತ್ ತಾಲೂಕು ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಜತ್ ತಾಲೂಕಿನ 42 ಹಳ್ಳಿಗಳ ಜನರು ಉಮದಿ ಗ್ರಾಮದಲ್ಲಿ ಸಭೆ ಸೇರಿ, ಮಹಾರಾಷ್ಟ್ರ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ನಾಲ್ಕು ಪ್ರತ್ಯೇಕ ಅಧ್ಯಯನಗಳು ವರದಿಗಳು ೧. ಗಡಿನಾಡು ವರದಿ-2000 (ಡಿ.ಎಂ. ನಂಜುಂಡಪ್ಪ) ೨. ಗಡಿನಾಡು ಮಧ್ಯಂತರ ವರದಿ-2000 (ವಾಟಾಳ್ ನಾಗರಾಜ್) ೩. ಗಡಿನಾಡು ಅಧ್ಯಯನ ವರದಿ-2002 (ಪ್ರೊ. ಬರಗೂರು ರಾಮಚಂದ್ರ ಪ್ಪ) ೪. ಗಡಿ ಕನ್ನಡಿಗರ ಕಥೆ/ವ್ಯಥೆ-2006 (ಮುಖ್ಯಮಂತ್ರಿ ಚಂದ್ರು).