Karnataka Weather: ಬೀದರ್, ಕಲಬುರಗಿಯಲ್ಲಿ ಬೀಸಲಿದೆ ಮೈ ಕೊರೆವ ಶೀತ ಗಾಳಿ; ಯೆಲ್ಲೋ ಅಲರ್ಟ್ ಘೋಷಣೆ
ಕರ್ನಾಟಕ ಹವಾಮಾನ ವರದಿ: ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಶೀತ ಅಲೆಯು ಮೇಲುಗೈ ಸಾಧಿಸಲಿದ್ದು, ಇದು ಮುಂದಿನ ಒಂದು ವಾರ ಕಾಲ ಹೀಗೆಯೇ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗುರುವಾರ ರಾಜ್ಯದ ಉತ್ತರ ಒಳನಾಡಿನ ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಶೀತ ಗಾಳಿ ಬೀಸುವ ಸಾಧ್ಯತೆ ಇದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಡಿ. 25: ರಾಜ್ಯದಲ್ಲಿ ಚಳಿಯ ವಾತಾವರಣ ಮತ್ತು ಒಣ ಹವೆ ಗುರುವಾರವೂ (ಡಿಸೆಂಬರ್ 25) ಮುಂದುವರಿಯಲಿದೆ. ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಶೀತ ಅಲೆಯು ಮೇಲುಗೈ ಸಾಧಿಸಲಿದ್ದು, ಇದು ಮುಂದಿನ ಒಂದು ವಾರ ಕಾಲ ಹೀಗೆಯೇ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಶುಭ್ರ ಆಕಾಶ ಗೋಚರವಾಗಲಿದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು/ಮಂಜು ಕವಿದ ವಾತಾವರಣ ಇರಲಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 15 ಡಿಗ್ರಿ ಸೆಲ್ಸಿಯಸ್ ಮತ್ತು 27 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಬುಧವಾರ ರಾಜ್ಯದ ಸಮತಟ್ಟಾದ ಪ್ರದೇಶದಲ್ಲಿ ಅತಿ ಕನಿಷ್ಠ ತಾಪಮಾನ ಬೀದರ್‌ನಲ್ಲಿ 9.5 ಡಿಗ್ರಿ ಸೆಲ್ಸಿಯಸ್ ಕಂಡುಬಂತು. ಉತ್ತರ ಒಳನಾಡಿನ ಬೀದರ್‌ನಿಂದ ರಾಯಚೂರುವರೆಗೆ ಶೀತ ಗಾಳಿ ಬೀಸಿದೆ.
ಶೀತ ಗಾಳಿಯ ಎಚ್ಚರಿಕೆ
ಹವಾಮಾನ ಇಲಾಖೆಯು ಗುರುವಾರ ರಾಜ್ಯದ ಉತ್ತರ ಒಳನಾಡಿನ ಬೀದರ್ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಶೀತ ಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಹವಾಮಾನ ಇಲಾಖೆಯ ಮುನ್ನೆಚ್ಚರಿಕೆ:
ಇಂದು #ಶೀತ #ಗಾಳಿ #ಎಚ್ಚರಿಕೆ @Indiametdept ಯಿಂದ #ಎಲ್ಲೋಅಲರ್ಟ್ ನೀಡಲಾಗಿದೆ.@Indiametdept - #ColdWave #warning for today #yellow #Alert issued.@DCKalaburagi @bidar_dc #KSNDMC #WINTER pic.twitter.com/Up0ktv6nkd
— Karnataka State Natural Disaster Monitoring Centre (@KarnatakaSNDMC) December 24, 2025
ಗಡಗಡ ನಡುಗಿದ ರಾಜ್ಯ
ಬುಧವಾರ ಉತ್ತರ ಒಳನಾಡಿನ ಬೀದರ್, ರಾಯಚೂರು ಮತ್ತು ದಕ್ಷಿಣ ಒಳನಾಡಿನ ಹಾಸನದಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗಿತ್ತು. ಉತ್ತರ ಒಳನಾಡಿನ ಗದಗ, ಧಾರವಾಡ ಮತ್ತು ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಚಿಂತಾಮಣಿ, ದಾವಣಗೆರೆ, ಶಿವಮೊಗ್ಗದಲ್ಲಿ ಸಾಮಾನ್ಯಕ್ಕಿಂತ ಕುಸಿತ ದಾಖಲಿಸಿತ್ತು. ಕರಾವಳಿಯ ಮಂಗಳೂರು ವಿಮಾನ ನಿಲ್ದಾಣ ಬಳಿ ತಾಪಮಾನ ಕೊಂಚ ಏರಿಕೆಯಾಗಿತ್ತು.
ರಾಜ್ಯದಲ್ಲಿ ಶೀತಗಾಳಿ ಉಲ್ಬಣ, ಇನ್ನೂ ಒಂದು ವಾರ ಗಡಗಡ!
ಸದ್ಯ ಮಳೆ ಕಡಿಮೆಯಾಗಿದ್ದು, ಎಲ್ಲಡೆ ಒಣಹವೆ ಕಂಡು ಬರುತ್ತಿದೆ. ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ. ಚಳಿಗಾಲದಲ್ಲಿ ಇನ್ಫ್ಲುಯೆಂಜಾ ಕಾಯಿಲೆಗಳು, ಉಸಿರಾಟದ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇದೆ. ಶೀತ, ಚಳಿ, ಜ್ವರ, ಕೆಮ್ಮು ಹಾಗೂ ಇನ್ನಿತರ ಉಸಿರಾಟದ ತೊಂದರೆಗಳು ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.