ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ ಮುನ್ಸೂಚನೆ
ರಾಜ್ಯದ ಹಲವೆಡೆ ಮುಂಗಾರು ಚುರುಕುಗೊಂಡಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಮಳೆ ಅಬ್ಬರಿಸುತ್ತಿದೆ. ಮುಂದಿನ 4 ದಿನವೂ ಕರಾವಳಿಯ ಜಿಲ್ಲೆಗಳಲ್ಲಿ ಭಾರೀ ಮಳೆಯ ಸೂಚನ ಇದ್ದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಜೂನ್ 25 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಚುರುಕು ಪಡೆಯಲಿದೆ.
ಸಂಗ್ರಹ ಚಿತ್ರ -
ಬೆಂಗೂರು: ರಾಜ್ಯದ ಹಲವೆಡೆ ಮುಂಗಾರು ಚುರುಕುಗೊಂಡಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ (Karnataka Weather) ಮಳೆ ಅಬ್ಬರಿಸುತ್ತಿದೆ. ಮುಂದಿನ 4 ದಿನವೂ ಕರಾವಳಿಯ ಜಿಲ್ಲೆಗಳಲ್ಲಿ ಭಾರೀ ಮಳೆಯ ಸೂಚನ ಇದ್ದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಜೂನ್ 25 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಚುರುಕು ಪಡೆಯಲಿದೆ. ಪ್ರಮುಖವಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಹಾಗೂ ಅತ್ಯಂತ ಭಾರಿ ಮಳೆಯ ಮುನ್ಸೂಚನೆ ಇದ್ದರೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಜೂನ್ 24 ಮತ್ತು 25 ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ (Heavy Rain) ಸಾಧ್ಯತೆಯಿದೆ. ಜೂನ್ 26 ಮತ್ತು 27 ರ ಈ ಎರಡು ದಿನಗಳು ಕರಾವಳಿಗೆ ಅತ್ಯಂತ ನಿರ್ಣಾಯಕವಾಗಿದ್ದು, ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಇಂದ ಅತ್ಯಂತ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಗಳಲ್ಲಿ ಮಳೆಯ ಹಂಚಿಕೆ ಸಾಧಾರಣದಿಂದ ವ್ಯಾಪಕವಾಗಿರಲಿದೆ. ಜೂನ್ 24 ಮತ್ತು 25 ರ ಈ ಅವಧಿಯಲ್ಲಿ ಗಂಟೆಗೆ 30-40 ಕಿಮೀ ವೇಗದಲ್ಲಿ ಬೀಸುವ ಬಲವಾದ ಗಾಳಿ ಹಾಗೂ ಗುಡುಗು ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಒಳನಾಡಿನಲ್ಲಿ ಮಿಶ್ರ ಹವಾಮಾನ ಇರಲಿದೆ. ಜೂನ್ 24 ಮತ್ತು 25 ರಂದು ಕರಾವಳಿಗೆ ಹೊಂದಿಕೊಂಡಿರುವ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಹಗುರ ಮಳೆಯೊಂದಿಗೆ ಗಂಟೆಗೆ 30-40 ಕಿಮೀ ವೇಗದ ಗಾಳಿ ಬೀಸಲಿದೆ.