ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Roopa Gururaj Column: ಹರಿಭಕ್ತಿಸಾರ: ಲೋಕದ ನಿಂದನೆಗೆ ಕುಗ್ಗದ ಕನಕರ ಅಪರಿಮಿತ ಭಕ್ತಿ

ಕಾಗಿನೆಲೆಯಲ್ಲಿ ಆದಿಕೇಶವನ ಮೂರ್ತಿಯೇ ಭಕ್ತನಿಗಾಗಿ ನಡೆದು ಬಂದಾಗ, ಅಲ್ಲಿ ನೆರೆದಿದ್ದ ಇಡೀ ಜನಸಮೂಹ ಮೂಕವಿಸ್ಮಿತರಾಗಿ ನಿಂತರು. ಜಾತಿ ಮತ್ತು ಬಾಹ್ಯ ಆಚರಣೆಗಳನ್ನೇ ಧರ್ಮವೆಂದು ನಂಬಿದ್ದ ಅಹಂಕಾರಿಗಳ ಕಣ್ಣುಗಳು ಅಂದು ತೆರೆದವು. ದಾಸರನ್ನು ನಿಂದಿಸಿದವರೆಲ್ಲಾ ತಾವೇ ಮೈಲಿಗೆ ಯ ಮನಸ್ಸಿನವರೆಂಬುದನ್ನು ಅರಿತು ಅವರ ಕಾಲಿಗೆ ಬಿದ್ದರು.

ಹರಿಭಕ್ತಿಸಾರ: ಲೋಕದ ನಿಂದನೆಗೆ ಕುಗ್ಗದ ಕನಕರ ಅಪರಿಮಿತ ಭಕ್ತಿ

-

ಒಂದೊಳ್ಳೆ ಮಾತು

(ಭಾಗ-7)

ಕಾಗಿನೆಲೆಯಲ್ಲಿ ಆದಿಕೇಶವನ ಮೂರ್ತಿಯೇ ಭಕ್ತನಿಗಾಗಿ ನಡೆದು ಬಂದಾಗ, ಅಲ್ಲಿ ನೆರೆದಿದ್ದ ಇಡೀ ಜನಸಮೂಹ ಮೂಕವಿಸ್ಮಿತರಾಗಿ ನಿಂತರು. ಜಾತಿ ಮತ್ತು ಬಾಹ್ಯ ಆಚರಣೆಗಳನ್ನೇ ಧರ್ಮವೆಂದು ನಂಬಿದ್ದ ಅಹಂಕಾರಿಗಳ ಕಣ್ಣುಗಳು ಅಂದು ತೆರೆದವು. ದಾಸರನ್ನು ನಿಂದಿಸಿದವರೆಲ್ಲಾ ತಾವೇ ಮೈಲಿಗೆಯ ಮನಸ್ಸಿನವರೆಂಬುದನ್ನು ಅರಿತು ಅವರ ಕಾಲಿಗೆ ಬಿದ್ದರು. ಈ ಅದ್ಭುತ ಕ್ಷಣದಲ್ಲಿ ಕನಕದಾ ಸರ ಮನಸ್ಸಿನಲ್ಲಿ ಮೂಡಿದ ನಿರ್ಲಿಪ್ತತೆ ಮತ್ತು ಶರಣಾಗತಿಯ ಭಾವಕ್ಕೆ ಭಗವಂತನ ಕರುಣೆಯೇ ಸಾಕ್ಷಿಯಾಗಿತ್ತು. ಈ ನಿರ್ದಿಷ್ಟ ಸನ್ನಿವೇಶಕ್ಕೆ ಹಾಗೂ ಮನುಷ್ಯನ ಅಹಂಕಾರದ ಪತನಕ್ಕೆ ಹರಿ ಭಕ್ತಿಸಾರದ ಏಳನೇ ಷಟ್ಪದಿಯು ಅತ್ಯಂತ ಅರ್ಥಪೂರ್ಣವಾಗಿ ಒಪ್ಪುತ್ತದೆ.

ಏಳನೇ ಪದ್ಯ:

ಹಡೆದ ತಾಯಿಗಳೆರಡು ಮೂರಾ-

ಡಿದರು ಕಾಯ್ದು ಸಲಹುವರೆ ಜಗದೊಳು

ಪೊಡವಿಗೊಡೆಯನೆ ನೀನೆ ಕಾಯ್ದರೆ ಕಾಯೊ

ಕೊಲಲಾರೆ||

ನುಡಿಯಲೇಕಿನ್ನೊಬ್ಬರನು ನಾನ-

ಡರಿದು ನಿನ್ನನೆ ನಂಬಿ ಬಂದೆನು

ತೊಡಕ ಬಿಡಿಸೈ ಭವದ ಪಾಶವ

ಬಾಡದಾದಿಕೇಶ|| 7 ||

ಭಾವಾರ್ಥ: ಕಾಗಿನೆಲೆಯ ಆ ಘಟನೆಯಲ್ಲಿ ಕನಕದಾಸರನ್ನು ಜನರೆಲ್ಲರೂ ಕೀಳಾಗಿ ಕಂಡು ದೂಷಿಸಿದಾಗಲೂ ಅವರು ಯಾರ ಮೇಲೂ ಕೋಪಗೊಳ್ಳಲಿಲ್ಲ. ಏಕೆಂದರೆ ಅವರಿಗೆ ಲೌಕಿಕ ಜಗತ್ತಿನ ಸೀಮಿತ ಪ್ರೀತಿ ಮತ್ತು ಭಗವಂತನ ಅಪಾರ ಕರುಣೆಯ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ತಿಳಿದಿತ್ತು.

ಇದನ್ನೂ ಓದಿ: Roopa Gururaj Column: ಹರಿಭಕ್ತಿಸಾರ: ಕಾಗಿನೆಲೆಯ ಆದಿಕೇಶವನ ಸಾಕ್ಷಾತ್ಕಾರ

ಆ ಹಿನ್ನೆಲೆಯಲ್ಲಿ ಈ ಪದ್ಯದ ಸಾರ ಹೀಗಿದೆ: ‘ಈ ಜಗತ್ತಿನಲ್ಲಿ ನಮಗೆ ಜನ್ಮ ನೀಡಿದ ಹೆತ್ತ ತಾಯಿ ಗಿಂತ ದೊಡ್ಡ ಕರುಣಾಮಯಿ ಬೇರೆ ಯಾರೂ ಇರಲು ಸಾಧ್ಯವಿಲ್ಲ. ಆದರೆ, ಲೌಕಿಕ ಬಂಧನಗಳ ಲ್ಲಿರುವ ಆ ತಾಯಿಯಾದರೂ ಒಮ್ಮೊಮ್ಮೆ ಮಗುವಿನ ಮೇಲಿನ ಸಿಟ್ಟಿನಿಂದಲೋ ಅಥವಾ ಅಸಹಾಯಕತೆಯಿಂದಲೋ ಎರಡು ಕಟು ಮಾತುಗಳನ್ನು ಆಡಬಹುದು, ಇಲ್ಲವೇ ಕೈಬಿಡ ಬಹುದು.

ಆದರೆ, ಇಡೀ ಬ್ರಹ್ಮಾಂಡಕ್ಕೆ ಒಡೆಯನಾದ (ಪೊಡವಿಗೊಡೆಯ) ಆ ಪರಮಾತ್ಮ ಹಾಗಲ್ಲ. ಆತ ಸಕಲ ಜೀವರಾಶಿಯ ನಿಜವಾದ ಹೆತ್ತ ತಾಯಿ. ಅವನು ತನ್ನ ಭಕ್ತನನ್ನು ಎಂದಿಗೂ ಕೈಬಿಡುವುದಿಲ್ಲ.’ ಜನರು ತನ್ನನ್ನು ನಿಂದಿಸಿದಾಗ ಕನಕದಾಸರು ನನ್ನನ್ನು ಕಾಯಬೇಕೆಂದರೆ ಕಾಯಿ, ಕೊಲ್ಲ ಬೇಕೆಂದರೆ ಕೊಲ್ಲು; ನನ್ನ ಸರ್ವಸ್ವವೂ ನಿನ್ನದೇ ಎಂದು ಸಂಪೂರ್ಣವಾಗಿ ಭಗವಂತನಿಗೆ ಶರಣಾದರು.

ತನಗೆ ಕಷ್ಟ ಕೊಟ್ಟವರನ್ನು ದೂಷಿಸುತ್ತಾ ಕಾಲ ಕಳೆಯುವುದರಲ್ಲಿ ಅರ್ಥವಿಲ್ಲ ಎಂಬುದನ್ನು ಮನ ಗಂಡು, ನುಡಿಯಲೇಕಿನ್ನೊಬ್ಬರನು (ಇನ್ನೊಬ್ಬರನ್ನು ನಾನೇಕೆ ಹೀಯಾಳಿಸಲಿ?) ಎಂದು ಪ್ರಕಟಪ ಡಿಸುತ್ತಾರೆ. ಜಗತ್ತಿನ ಸತ್ಯವನ್ನು ಅರಿತು (ನಾನಡ ರಿದು) ಕೇವಲ ದೇವರನ್ನೇ ನಂಬಿ ಬಂದ ತನಗೆ, ಈ ಸಂಸಾರ ಮತ್ತು ಅಜ್ಞಾನದ ಬಿಗಿಯಾದ ಪಾಶವನ್ನು (ತೊಡಕನ್ನು) ಬಿಡಿಸಿ ಮುಕ್ತಿ ನೀಡಬೇಕೆಂದು ಬಾಡದ ಆದಿಕೇಶವನಲ್ಲಿ ಪ್ರಾರ್ಥಿಸುತ್ತಾರೆ.

ಇಂದಿನ ದಿನಗಳಲ್ಲಿ ನಾವು ತುಂಬಾ ದುರ್ಬಲನಾಗುತ್ತಿದ್ದೇವೆ. ಸಣ್ಣ ಕಷ್ಟ ಬಂದರೂ ಮಾನಸಿಕ ವಾಗಿ ಕುಗ್ಗಿ ಹೋಗುತ್ತೇವೆ ಅಥವಾ ಯಾರೋ ನಮ್ಮನ್ನು ಬಂದು ರಕ್ಷಿಸಲಿ ಎಂದು ಇತರರ ಮೇಲೆ (ಪೋಷಕರು, ಸ್ನೇಹಿತರು, ಸಮಾಜ) ಅತಿಯಾಗಿ ಅವಲಂಬಿತನಾಗುತ್ತೇವೆ. ಆದರೆ, ಲೋಕದ ಪ್ರೀತಿ ಮತ್ತು ಭರವಸೆಗಳಿಗೆ ಯಾವಾಗಲೂ ಸ್ವಾರ್ಥದ ಮಿತಿ ಇರುತ್ತದೆ ಎಂಬುದನ್ನು ಹಡೆದ ತಾಯಿ ಗಳೆರಡು ಮೂರಾಡಿದರು... ಎಂಬ ಸಾಲು ಧ್ವನಿಸುತ್ತದೆ.

ದುರಂತವೆನ್ನುವಂತೆ ಹೆತ್ತ ತಾಯಿಯೇ ಮಕ್ಕಳನ್ನು ದೂರ ಮಾಡಿಕೊಳ್ಳುವ, ಮಕ್ಕಳ ಜೀವವನ್ನು ಕಳೆಯುವ ಸುದ್ದಿಗಳನ್ನು ಕೂಡ ಇಂದಿನ ದಿನ ಓದುತ್ತಿದ್ದೇವೆ. ಇಂದಿನ ಪರಿಸ್ಥಿತಿಯಲ್ಲಿ ಮನುಷ್ಯ ತನ್ನ ಸ್ವಂತ ಅಸ್ತಿತ್ವವನ್ನು ಕಂಡುಕೊಳ್ಳಲು, ಹೊರಗಿನ ಜಗತ್ತಿನ ಕೃತಕ ಬೆಂಬಲದ ಹಿಂದೆ ಓಡುವು ದನ್ನು ಬಿಟ್ಟು, ತನ್ನೊಳಗಿನ ಆತ್ಮಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕು.

ಇದೇ ಮನಸ್ಥಿತಿಯನ್ನು ನಮ್ಮ ಮಕ್ಕಳಿಗೂ ಕೂಡ ಕಲ್ಪಿಸಿ ಕೊಡಬೇಕು. ಅವರು ಎಂತಹದ್ದೇ ಸಮ ಯದಲ್ಲಿ ಯಾರು ನಿಂದಿಸಿದರೂ, ತುಳಿಯಲು ಪ್ರಯತ್ನಿಸಿದರು ಧೃತಿಗೆಡದೆ ಆತ್ಮ ವಿಶ್ವಾಸದ ಮೇಲೆ ನಂಬಿಕೆ ಇಡಬೇಕು. ತಾವು ಯಾರು ಏನು ಎನ್ನುವ ಸೂಕ್ಷ್ಮ ಸತ್ಯ ಅವರಿಗೆ ಅರಿವಿದ್ದಾಗ ಯಾರೂ ಕೂಡ ಅವರನ್ನು ಕುಗ್ಗಿಸಲು ಸಾಧ್ಯವಾಗುವುದಿಲ್ಲ. ತಂದೆ- ತಾಯಿಯಾಗಿ ಇನ್ನಾವ ಆಸ್ತಿ ಇಲ್ಲದಿ ದ್ದರೂ, ನಮ್ಮ ಮಕ್ಕಳಲ್ಲಿ ಸಮಾಜದಲ್ಲಿ ಆತ್ಮಸ್ಥೈರ್ಯದಿಂದ ಬದುಕುವ ಸ್ವಾವಲಂಬಿಗಳಾಗಿ ಮುನ್ನಡೆಯುವ ವರ್ಚಸ್ಸು ಬೆಳೆಸಬೇಕು.