ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr N Someshwara Column: ಸಿಟಿ ಸ್ಕ್ಯಾನ್: ದೇಹವನ್ನು ತೆಳುವಾದ ಹೋಳುಗಳಾಗಿ ʼಹೆಚ್ಚಿದರುʼ !

ದೇಹದ ಸಾಮಾನ್ಯ ಎಕ್ಸ್-ರೇ ಚಿತ್ರದಲ್ಲಿಯೂ ಇದೇ ರೀತಿಯ ಸಮಸ್ಯೆಯಿರುತ್ತದೆ. ದೇಹದ ವಿವಿಧ ಆಳ ಗಳಲ್ಲಿರುವ ಮೂಳೆಗಳು, ಸ್ನಾಯುಗಳು ಮತ್ತು ಇತರ ಅಂಗಾಂಶಗಳ ಚಿತ್ರಗಳು ಒಂದರ ಮೇಲೊಂದು ಆವರಿಸ ಬಹುದು. ವಿಶೇಷವಾಗಿ ಮೆದುಳಿನಂತಹ ಅಂಗಗಳ ಮೃದು ಅಂಗಾಂಶಗಳ ನಡುವೆ ಇರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಗುರುತಿಸುವುದು ಕಷ್ಟವಾಗಬಹುದು.

ಸಿಟಿ ಸ್ಕ್ಯಾನ್: ದೇಹವನ್ನು ತೆಳುವಾದ ಹೋಳುಗಳಾಗಿ ʼಹೆಚ್ಚಿದರುʼ !

-

ಹಿಂದಿರುಗಿ ನೋಡಿದಾಗ (ಭಾಗ-1)

1971ರ ಅಕ್ಟೋಬರ್ 1. ಇಂಗ್ಲೆಂಡಿನ ಲಂಡನ್ ನಗರದ ಅಟ್ಕಿನ್ಸನ್ ಮಾರ್ಲಿ ಆಸ್ಪತ್ರೆಯಲ್ಲಿ ಸುಮಾರು 41 ವರ್ಷದ ಮಹಿಳೆಯೊಬ್ಬಳು ವೈದ್ಯಕೀಯ ಪರೀಕ್ಷೆಗೆ ಬಂದಿದ್ದಳು. ಆಕೆಯ ಮೆದುಳಿ ನಲ್ಲಿ ಗಡ್ಡೆಯಿರಬಹುದೆಂದು ವೈದ್ಯರು ಅನುಮಾನಿಸಿದ್ದರು. ಆ ಕಾಲದಲ್ಲಿ ಮೆದುಳಿನ ಒಳಗಿನ ರಚನೆಯನ್ನು ಸ್ಪಷ್ಟವಾಗಿ ಪರಿಶೀಲಿಸುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು. ‌

ಎಕ್ಸ್-ರೇ ನೆರವಿನಿಂದ ತಲೆಬುರುಡೆಯ ಚಿತ್ರಗಳನ್ನು ಪಡೆಯಬಹುದಾಗಿತ್ತು. ಆದರೆ ಅವು ಮೆದುಳಿನ ಮೃದು ಅಂಗಾಂಶಗಳ ವಿವರಗಳನ್ನು ನಿಚ್ಚಳವಾಗಿ ತೋರಿಸುತ್ತಿರಲಿಲ್ಲ. ಕೆಲವು ಸಂದರ್ಭಗಳಲ್ಲಿ ಮೆದುಳಿನ ಒಳಗಿನ ಸಮಸ್ಯೆಗಳನ್ನು ತಿಳಿದುಕೊಳ್ಳಲು, ರೋಗಿಗೆ ಅಪಾಯ ಸಂಭವ ಸಾಧ್ಯತೆಯಿರುವ ಪರೀಕ್ಷೆಗಳನ್ನು ನಡೆಸಬೇಕಾಗುತ್ತಿತ್ತು. ಆದರೆ ಆ ದಿನ ಆ ಮಹಿಳೆಯನ್ನು ಒಂದು ವಿಚಿತ್ರ ವಾದ ಯಂತ್ರದೊಳಗೆ ಮಲಗಿಸಿದರು.

ಆಕೆಯ ತಲೆಯ ಸುತ್ತಲೂ ವಿಶೇಷವಾದ ಎಕ್ಸ್-ಕಿರಣಗಳ ವ್ಯವಸ್ಥೆಯು ನಿಧಾನವಾಗಿ ಚಲಿಸುತ್ತಿತ್ತು. ಯಂತ್ರವು ವಿವಿಧ ದಿಕ್ಕುಗಳಿಂದ ಮೆದುಳಿನ ಮೂಲಕ ಹಾದುಹೋಗುವ ಕಿರಣಗಳ ಮಾಹಿತಿ ಯನ್ನು ದಾಖಲಿಸುತ್ತಿತ್ತು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಪರೀಕ್ಷೆ ನಡೆ ಯಿತು. ಪರೀಕ್ಷೆ ಮುಗಿದ ಕೂಡಲೇ ವೈದ್ಯರಿಗೆ ಚಿತ್ರಗಳು ದೊರೆಯಲಿಲ್ಲ. ಸಂಗ್ರಹಿಸಿದ ಮಾಹಿತಿಯನ್ನು ಗಣಕ ಯಂತ್ರದ ನೆರವಿನಿಂದ ವಿಶ್ಲೇಷಿಸಿ ಚಿತ್ರಗಳನ್ನು ರೂಪಿಸಲು ಇನ್ನೂ ಎರಡು ದಿನಗಳು ಬೇಕಾದವು. ಕೊನೆಗೂ ಚಿತ್ರಗಳು ದೊರೆತವು. ಆ ಚಿತ್ರಗಳಲ್ಲಿ ಮಹಿಳೆಯ ಮೆದುಳಿನ ಮುಂಭಾಗದಲ್ಲಿ ದ್ರವದಿಂದ ತುಂಬಿದ ಗಡ್ಡೆಯಂತಹ ರಚನೆಯು ಸ್ಪಷ್ಟವಾಗಿ ಕಾಣಿಸುತ್ತಿತ್ತು!

ವೈದ್ಯರು ಆಶ್ಚರ್ಯಚಕಿತರಾದರು. ಇದುವರೆಗೆ ಜೀವಂತ ವ್ಯಕ್ತಿಯ ಮೆದುಳಿನ ಒಳಗಿನ ಮೃದು ಅಂಗಾಂಶ ಗಳನ್ನು ಇಷ್ಟು ಸ್ಪಷ್ಟವಾಗಿ, ತಲೆಬುರುಡೆಯನ್ನು ತೆರೆಯ ದೆಯೇ ನೋಡುವುದು ಸಾಧ್ಯವಾಗಿರ ಲಿಲ್ಲ. ವೈದ್ಯ ವಿಜ್ಞಾನದ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭ ವಾಗಿತ್ತು. ಅದುವೇ ಗಣಕೀಕೃತ ಅಡ್ಡಪದರ ಚಿತ್ರಣ ಅಥವಾ ಕಂಪ್ಯೂಟೆಡ್ ಟೋಮೋಗ್ರಾಫಿ! ಈಗ ಜನಸಾಮಾನ್ಯರಿಗೆ ಸಿಟಿ ಸ್ಕ್ಯಾನ್ ಎಂದು ಪರಿಚಿತ ವಾಗಿರುವ ವೈದ್ಯಕೀಯ ತಪಾಸಣಾ ಯಂತ್ರ.‌

ಇದನ್ನೂ ಓದಿ: Dr N Someshwara Column: ಇಸಿಜಿ: ಹೃದಯದ ವಿದ್ಯುತ್‌ ಭಾಷೆ !

ಎಕ್ಸ್-ರೇ ಇದ್ದರೂ ಸಿಟಿ ಸ್ಕ್ಯಾನ್ ಏಕೆ ಬೇಕಾಯಿತು?: 895ರಲ್ಲಿ ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್ ಎಕ್ಸ್-ಕಿರಣ ಗಳನ್ನು ಕಂಡುಹಿಡಿದ ನಂತರ ವೈದ್ಯಕೀಯ ರೋಗ ನಿರ್ಣಯದಲ್ಲಿ ಕ್ರಾಂತಿಕಾರಿ ಯಾದ ಬದಲಾವಣೆ ಸಂಭವಿಸಿತ್ತು. ದೇಹವನ್ನು ಕತ್ತರಿಸದೆಯೇ ಮೂಳೆಗಳ ಚಿತ್ರಗಳನ್ನು ಪಡೆಯಲು ಸಾಧ್ಯವಾಗಿತ್ತು. ಮೂಳೆಮುರಿತ ಗಳು, ದೇಹದೊಳಗಿನ ಕೆಲವು ಅನ್ಯವಸ್ತುಗಳು ಮತ್ತು ಎದೆಯ ಕೆಲವು ಕಾಯಿಲೆಗಳನ್ನು ಗುರುತಿಸುವುದು ಸುಲಭವಾಯಿತು. ಆದರೆ ಸಾಮಾನ್ಯ ಎಕ್ಸ್-ರೇ ಚಿತ್ರಕ್ಕೆ ಒಂದು ಪ್ರಮುಖವಾದ ಮಿತಿಯಿತ್ತು. ಅದು ದೇಹದ ವಿವಿಧ ಭಾಗಗಳ ನೆರಳುಗಳನ್ನು ಒಂದೇ ಸಮತಲದ ಚಿತ್ರದ ಮೇಲೆ ದಾಖಲಿಸುತ್ತಿತ್ತು. ಉದಾಹರಣೆಗೆ, ದಪ್ಪವಾದ ಒಂದು ಪುಸ್ತಕ ವನ್ನು ಕಲ್ಪಿಸಿಕೊಳ್ಳಿ. ಆ ಪುಸ್ತಕದಲ್ಲಿ ನೂರು ಪುಟಗಳಿವೆ. ಈಗ ಪುಸ್ತಕವನ್ನು ಮುಚ್ಚಿದ ಸ್ಥಿತಿ ಯಲ್ಲಿಯೇ ಅದರ ಎಲ್ಲ ಪುಟಗಳಲ್ಲಿರುವ ಅಕ್ಷರಗಳನ್ನು ಒಂದೇ ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಿ ದರೆ ಏನಾಗಬಹುದು? ವಿವಿಧ ಪುಟಗಳಲ್ಲಿರುವ ಅಕ್ಷರಗಳು ಒಂದರ ಮೇಲೊಂದು ಬಿದ್ದಂತೆ ಕಾಣಿಸಬಹುದು. ಯಾವ ಅಕ್ಷರವು ಯಾವ ಪುಟದಲ್ಲಿದೆ ಎಂಬುದನ್ನು ಗುರುತಿಸುವುದು ಕಷ್ಟವಾಗಬಹುದು. ‌

ದೇಹದ ಸಾಮಾನ್ಯ ಎಕ್ಸ್-ರೇ ಚಿತ್ರದಲ್ಲಿಯೂ ಇದೇ ರೀತಿಯ ಸಮಸ್ಯೆಯಿರುತ್ತದೆ. ದೇಹದ ವಿವಿಧ ಆಳ ಗಳಲ್ಲಿರುವ ಮೂಳೆಗಳು, ಸ್ನಾಯುಗಳು ಮತ್ತು ಇತರ ಅಂಗಾಂಶಗಳ ಚಿತ್ರಗಳು ಒಂದರ ಮೇಲೊಂದು ಆವರಿಸಬಹುದು. ವಿಶೇಷವಾಗಿ ಮೆದುಳಿನಂತಹ ಅಂಗಗಳ ಮೃದು ಅಂಗಾಂಶಗಳ ನಡುವೆ ಇರುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಗುರುತಿಸುವುದು ಕಷ್ಟವಾಗಬಹುದು. ಹಾಗಾದರೆ ದೇಹವನ್ನು ತೆಳುವಾದ ಪದರಗಳಾಗಿ ‘ಹೆಚ್ಚಿ’, ಪ್ರತಿಯೊಂದು ಪದರದ ಪ್ರತ್ಯೇಕ ಚಿತ್ರವನ್ನು ಪಡೆಯಲು ಸಾಧ್ಯವಿಲ್ಲವೇ? ಈ ಪ್ರಶ್ನೆಯೇ ಸಿಟಿ ಸ್ಕ್ಯಾನ್‌ನ ಬೆಳವಣಿಗೆಗೆ ಕಾರಣವಾಯಿತು. ‌

ಬ್ರೆಡ್ ತುಂಡುಗಳಂತೆ ದೇಹದ ಚಿತ್ರಗಳು!: ಒಂದು ಬ್ರೆಡ್‌ನ್ನು ಕಲ್ಪಿಸಿಕೊಳ್ಳಿ. ಬ್ರೆಡ್ಡಿನ ಹೊರಗಿನ ಭಾಗವನ್ನು ಮಾತ್ರ ನೋಡಿದರೆ ಅದರ ಒಳಗಿನ ರಚನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಅದನ್ನು ತೆಳುವಾದ ತುಂಡುಗಳಾಗಿ ಕತ್ತರಿಸಿದರೆ ಪ್ರತಿಯೊಂದು ತುಂಡಿನ ಒಳಗಿನ ರಚನೆಯನ್ನು ಪ್ರತ್ಯೇಕ ವಾಗಿ ನೋಡಬಹುದು. ಸಿಟಿ ಸ್ಕ್ಯಾನ್‌ನ ತತ್ವವನ್ನು ಇದೇ ಉದಾಹರಣೆಯಿಂದ ಅರ್ಥಮಾಡಿ ಕೊಳ್ಳಬಹುದು. ಆದರೆ ಇಲ್ಲಿ ಒಂದು ಮಹತ್ವದ ವ್ಯತ್ಯಾಸವಿದೆ. ಸಿಟಿ ಸ್ಕ್ಯಾನ್‌ನಲ್ಲಿ ಮಾನವದೇಹ ವನ್ನು ನಿಜವಾಗಿಯೂ ಕತ್ತರಿಸುವುದಿಲ್ಲ!

ಬದಲಿಗೆ ಎಕ್ಸ್-ಕಿರಣಗಳನ್ನು ವಿವಿಧ ದಿಕ್ಕುಗಳಿಂದ ದೇಹದ ಮೂಲಕ ಹಾಯಿಸಲಾಗುತ್ತದೆ. ಆ ಕಿರಣಗಳು ದೇಹದ ವಿವಿಧ ಅಂಗಾಂಶಗಳನ್ನು ದಾಟುವಾಗ ಅವುಗಳ ತೀವ್ರತೆಯಲ್ಲಿ ಸಂಭವಿಸುವ ಬದಲಾವಣೆ ಗಳನ್ನು ದಾಖಲಿಸಲಾಗುತ್ತದೆ. ಈ ಮಾಹಿತಿಯನ್ನು ಗಣಕ ಯಂತ್ರವು ವಿಶೇಷವಾದ ಗಣಿತ ವಿಧಾನಗಳ ನೆರವಿನಿಂದ ವಿಶ್ಲೇಷಿಸುತ್ತದೆ. ಹೀಗೆ ದೇಹದ ನಿರ್ದಿಷ್ಟ ಅಡ್ಡಪದರದ ಚಿತ್ರವನ್ನು ರೂಪಿಸಲಾಗುತ್ತದೆ. ಇಂತಹ ಅನೇಕ ಚಿತ್ರ ಗಳನ್ನು ಪಡೆದು ದೇಹದ ಒಳಗಿನ ಅಂಗಗಳನ್ನು ವಿವಿಧ ಮಟ್ಟಗಳಲ್ಲಿ ಪರಿಶೀಲಿಸಬಹುದು. ಇದನ್ನು ಗಣಕೀಕೃತ ಅಡ್ಡಪದರ ಚಿತ್ರಣ ಎಂದು ಕರೆಯುತ್ತೇವೆ. ಅಂದರೆ ಸಿಟಿ ಸ್ಕ್ಯಾನ್‌ನ ಮಹತ್ವವು ಕೇವಲ ಎಕ್ಸ್-ಕಿರಣಗಳನ್ನು ಬಳಸುವುದರಲ್ಲಿ ಇರಲಿಲ್ಲ. ‌

ವಿವಿಧ ದಿಕ್ಕುಗಳಿಂದ ದೊರೆತ ಮಾಹಿತಿಯನ್ನು ಗಣಿತ ಮತ್ತು ಗಣಕಯಂತ್ರಗಳ ನೆರವಿನಿಂದ ದೇಹದ ಒಳಗಿನ ಪ್ರತ್ಯೇಕ ಪದರಗಳ ಚಿತ್ರಗಳಾಗಿ ಪರಿವರ್ತಿಸುವುದೇ ಅದರ ನಿಜವಾದ ವಿಶೇಷತೆ ಯಾಗಿತ್ತು.

ಅಲನ್ ಕಾರ್ಮ್ಯಾಕ್- ಹೊಸ ಚಿತ್ರಣದ ಗಣಿತ: ಸಿಟಿ ಸ್ಕ್ಯಾನ್‌ನ ಇತಿಹಾಸವನ್ನು ತಿಳಿದು ಕೊಳ್ಳಲು ಇಬ್ಬರು ವಿಜ್ಞಾನಿಗಳ ಕೊಡುಗೆಗಳನ್ನು ನೆನಪಿಸಿಕೊಳ್ಳಬೇಕು. ಮೊದಲನೆಯವನು ಅಲನ್ ಮ್ಯಾಕ್ಲಿಯೋಡ್ ಕಾರ್ಮ್ಯಾಕ್ (1924-1998). ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಕಾರ್ಮ್ಯಾಕ್ ಭೌತವಿಜ್ಞಾನಿಯಾಗಿದ್ದ. 1950ರ ದಶಕದಲ್ಲಿ ಆತ ಕೇಪ್‌ಟೌನ್‌ನ ಗ್ರೂಟ್ ಶೂರ್ ಆಸ್ಪತ್ರೆ ಯಲ್ಲಿ ವೈದ್ಯಕೀಯ ಭೌತವಿಜ್ಞಾನಕ್ಕೆ ಸಂಬಂಧಿಸಿದ ಕೆಲಸ ಗಳಲ್ಲಿ ಭಾಗವಹಿಸಿದ್ದ. ಆ ಸಮಯದಲ್ಲಿ ವೈದ್ಯಕೀಯ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಎಕ್ಸ್-ಕಿರಣಗಳು ಹಾಗೂ ಇತರ ವಿಕಿರಣ ಗಳನ್ನು ಬಳಸುವ ವಿಧಾನಗಳು ಅವನ ಗಮನ ಸೆಳೆದವು. ಆತನಿಗೆ ಒಂದು ಮಹತ್ವದ ಪ್ರಶ್ನೆ ಎದುರಾಯಿತು. ‌

ಒಂದು ವಸ್ತುವಿನೊಳಗೆ ಎಕ್ಸ್-ಕಿರಣಗಳನ್ನು ವಿವಿಧ ದಿಕ್ಕುಗಳಿಂದ ಹಾಯಿಸಿದಾಗ, ಕಿರಣಗಳು ಎಷ್ಟು ಪ್ರಮಾಣದಲ್ಲಿ ದುರ್ಬಲಗೊಂಡಿವೆ ಎಂಬ ಮಾಹಿತಿಯನ್ನು ಪಡೆಯಬಹುದು. ಹಾಗಿದ್ದರೆ ಆ ಮಾಹಿತಿಯಿಂದ ವಸ್ತುವಿನ ಒಳಗಿನ ರಚನೆಯನ್ನು ಗಣಿತದ ಮೂಲಕ ಮರು ರೂಪಿಸಲು ಸಾಧ್ಯವಿಲ್ಲವೇ? ಇದು ಅತ್ಯಂತ ಸಂಕೀರ್ಣವಾದ ಗಣಿತದ ಸಮಸ್ಯೆಯಾಗಿತ್ತು. ಕಿರಣಗಳು ಒಂದು ವಸ್ತುವಿನ ಮೂಲಕ ಹಾದುಹೋಗುವಾಗ ಅವುಗಳ ತೀವ್ರತೆ ಕಡಿಮೆಯಾಗುತ್ತದೆ. ‌

ವಸ್ತುವಿನ ಸಾಂದ್ರತೆ ಮತ್ತು ಇತರ ಗುಣಲಕ್ಷಣಗಳನ್ನು ಅವಲಂಬಿಸಿ ಈ ಬದಲಾವಣೆ ಸಂಭವಿಸು ತ್ತದೆ. ಆದರೆ ಒಂದು ದಿಕ್ಕಿನಲ್ಲಿ ಕಿರಣಗಳು ದುರ್ಬಲಗೊಂಡ ಪ್ರಮಾಣವನ್ನು ತಿಳಿದುಕೊಂಡ ಮಾತ್ರಕ್ಕೆ ವಸ್ತುವಿನ ಒಳಗಿನ ಪ್ರತಿಯೊಂದು ಭಾಗದ ವಿವರವನ್ನು ತಿಳಿಯಲು ಸಾಧ್ಯವಿಲ್ಲ. ವಿವಿಧ ದಿಕ್ಕುಗಳಿಂದ ದೊರೆತ ಮಾಹಿತಿಯನ್ನು ಒಟ್ಟುಗೂಡಿಸಿ, ಒಳಗಿನ ಪ್ರತಿಯೊಂದು ಸಣ್ಣ ಭಾಗದ ಗುಣಲಕ್ಷಣಗಳನ್ನು ಲೆಕ್ಕ ಹಾಕಬೇಕಾಗುತ್ತದೆ. ಕಾರ್ಮ್ಯಾಕ್ ಈ ಸಮಸ್ಯೆಯನ್ನು ಗಣಿತದ ನೆರವಿನಿಂದ ಪರಿಹರಿಸುವ ವಿಧಾನಗಳನ್ನು ಅಧ್ಯಯನ ಮಾಡಿದ.

1963 ಮತ್ತು 1964ರಲ್ಲಿ ಆತ ತನ್ನ ಸಂಶೋಧನೆಗಳನ್ನು ಪ್ರಕಟಿಸಿದ. ಈ ಸಂಶೋಧನೆಗಳು ಸಿಟಿ ಸ್ಕ್ಯಾನ್‌ನ ಗಣಿತೀಯ ಅಡಿಪಾಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವು. ಆದರೆ ಕಾರ್ಮ್ಯಾಕ್‌ನ ಸಂಶೋಧನೆಯು ತಕ್ಷಣವೇ ಆಸ್ಪತ್ರೆಗಳಲ್ಲಿ ಬಳಸಬಹುದಾದ ಸಿಟಿ ಸ್ಕ್ಯಾನ್ ಯಂತ್ರವಾಗಿ ಪರಿವರ್ತನೆ ಯಾಗಲಿಲ್ಲ. ಅದಕ್ಕಾಗಿ ಇನ್ನೊಬ್ಬ ವಿಜ್ಞಾನಿಯ ಎಂಜಿನಿಯರಿಂಗ್ ಪ್ರತಿಭೆ ಮತ್ತು ಗಣಕಯಂತ್ರಗಳ ಬೆಳವಣಿಗೆಯ ಅಗತ್ಯವಿತ್ತು.

ಗಾಡ್ರಿ ಹೌನ್ಸ್‌ಫೀಲ್ಡ್- ವೈದ್ಯನಲ್ಲದ ವೈದ್ಯಕೀಯ ಕ್ರಾಂತಿಕಾರಿ: ಗಾಡ್ರಿ ನ್ಯೂಬೋಲ್ಡ್ ಹೌನ್ಸ್‌ ಫೀಲ್ಡ್ (1919-204) ಬ್ರಿಟನ್ನಿನ ಎಂಜಿನಿಯರ್ ಆಗಿದ್ದ. ಆತ ವೈದ್ಯನಾಗಿರಲಿಲ್ಲ. ವೈದ್ಯಕೀಯ ಪದವಿಯನ್ನೂ ಪಡೆದಿರಲಿಲ್ಲ. ಆತನಿಗೆ ಎಲೆಕ್ಟ್ರಾನಿಕ್ಸ್, ಗಣಕಯಂತ್ರಗಳು ಮತ್ತು ಎಂಜಿನಿಯ ರಿಂಗ್ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ವಿಶೇಷವಾದ ಆಸಕ್ತಿಯಿತ್ತು. ‌

ಹೌನ್ಸ್‌ಫೀಲ್ಡ್ ಬ್ರಿಟನ್ನಿನ ಇಎಂಐ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಈ ಸಂಸ್ಥೆಯು ಸಂಗೀತದ ಧ್ವನಿಮುದ್ರಣ ಮತ್ತು ವಿದ್ಯುನ್ಮಾನ ಉಪಕರಣಗಳಿಗೆ ಸಂಬಂಧಿಸಿದ ಉದ್ಯಮಗಳಿಂದ ಪ್ರಸಿದ್ಧವಾಗಿತ್ತು. ಆದರೆ ಇದೇ ಸಂಸ್ಥೆಯ ಪ್ರಯೋಗ ಶಾಲೆಯಲ್ಲಿ ವೈದ್ಯಕೀಯ ಇತಿಹಾಸವನ್ನು ಬದಲಿಸುವ ಆವಿಷ್ಕಾರವೊಂದು ರೂಪುಗೊಳ್ಳಲಿತ್ತು!

ಹೌನ್ಸ್‌ಫೀಲ್ಡ್‌ʼಗೆ ಒಂದು ಪ್ರಶ್ನೆ ಎದುರಾಯಿತು. ಒಂದು ವಸ್ತುವಿನೊಳಗೆ ಎಕ್ಸ್-ಕಿರಣಗಳನ್ನು ವಿವಿಧ ದಿಕ್ಕುಗಳಿಂದ ಹಾಯಿಸಿ, ಕಿರಣಗಳ ತೀವ್ರತೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ದಾಖಲಿಸಿ, ಗಣಕ ಯಂತ್ರದ ನೆರವಿನಿಂದ ಅದರ ಒಳಗಿನ ರಚನೆಯನ್ನು ಗುರುತಿಸಲು ಸಾಧ್ಯವಿರಬಹುದೇ? ಆತ ಈ ಕಲ್ಪನೆಯನ್ನು ಪರೀಕ್ಷಿಸಲು ಆರಂಭಿಸಿದ. ಆರಂಭದಲ್ಲಿ ಸರಳವಾದ ವಸ್ತುಗಳನ್ನು ಬಳಸಿದ. ನಂತರ ಪ್ರಾಣಿಗಳ ಮೆದುಳಿನ ಮಾದರಿಗಳನ್ನು ಪರಿಶೀಲಿಸಲು ಪ್ರಯತ್ನಿಸಿದ. ಈ ಪ್ರಯೋಗಗಳಲ್ಲಿ ವಸ್ತುಗಳ ಒಳಗಿನ ಕೆಲವು ರಚನೆಗಳನ್ನು ಚಿತ್ರಗಳ ರೂಪದಲ್ಲಿ ಗುರುತಿಸಲು ಸಾಧ್ಯವಾಯಿತು. ಆದರೆ ಆರಂಭಿಕ ಪ್ರಯೋಗಗಳು ಅತ್ಯಂತ ನಿಧಾನವಾಗಿದ್ದವು. ಕೆಲವು ಪ್ರಯೋಗಗಳಿಗೆ ಅನೇಕ ದಿನಗಳು ಬೇಕಾಗುತ್ತಿದ್ದವು. ‌

ಚಿತ್ರಗಳನ್ನು ರೂಪಿ ಸಲು ಗಣಕಯಂತ್ರವು ಸಾವಿರಾರು ಲೆಕ್ಕಾಚಾರಗಳನ್ನು ಮಾಡಬೇಕಾಗುತ್ತಿತ್ತು. ಹೌನ್ಸ್‌ಫೀಲ್ಡ್ ತನ್ನ ಉಪಕರಣಗಳನ್ನು ಕ್ರಮೇಣ ಸುಧಾರಿಸಿದ. ಹೆಚ್ಚಿನ ಮಾಹಿತಿಯನ್ನು ಹೆಚ್ಚು ವೇಗವಾಗಿ ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ವಿಧಾನಗಳನ್ನು ರೂಪಿಸಿದ. ಆತನಿಗೆ ಈಗ ಮಾನವನ ಮೆದುಳಿನ ಚಿತ್ರವನ್ನು ಪಡೆಯುವ ಸಾಧ್ಯತೆ ಕಾಣಿಸಿತು. ಆದರೆ ಇದನ್ನು ನಿಜವಾದ ರೋಗಿಗಳಲ್ಲಿ ಬಳಸಬೇಕಾದರೆ ವೈದ್ಯರ ಸಹಕಾರ ಅಗತ್ಯವಾಗಿತ್ತು. ‌

ಜೇಮ್ಸ್ ಆಂಬ್ರೋಸ್- ಪ್ರಯೋಗಶಾಲೆಯಿಂದ ಆಸ್ಪತ್ರೆಗೆ: ಹೌನ್ಸ್‌ಫೀಲ್ಡ್ ತನ್ನ ಹೊಸ ವಿಧಾನವನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸಲು ವೈದ್ಯಕೀಯ ತಜ್ಞರ ನೆರವನ್ನು ಹುಡುಕಲಾರಂಭಿಸಿದ. ಆರಂಭದಲ್ಲಿ ಕೆಲವು ವೈದ್ಯರು ಈ ಹೊಸ ಕಲ್ಪನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಎಕ್ಸ್ -ರೇ ಚಿತ್ರಗಳನ್ನು ಪಡೆಯುವ ವಿಧಾನಗಳು ಆಗಲೇ ಲಭ್ಯವಿದ್ದವು. ಹಾಗಿದ್ದರೆ ಹೆಚ್ಚು ಸಮಯ ತೆಗೆದುಕೊಳ್ಳುವ ಮತ್ತು ಸಂಕೀರ್ಣವಾದ ಗಣಕಯಂತ್ರದ ಅಗತ್ಯವಿರುವ ಹೊಸ ವಿಧಾನವು ನಿಜವಾಗಿಯೂ ಪ್ರಯೋಜನಕಾರಿಯಾಗಬಹುದೇ? ಆದರೆ ಲಂಡನ್ನಿನ ಅಟ್ಕಿನ್ಸನ್ ಮಾರ್ಲಿ ಆಸ್ಪತ್ರೆಯ ವಿಕಿರಣ ಚಿತ್ರಣ ತಜ್ಞ ಜೇಮ್ಸ್ ಆಂಬ್ರೋಸ್ (1923-2006) ಈ ವಿಧಾನದಲ್ಲಿ ಆಸಕ್ತಿ ತೋರಿಸಿದ. ‌

ಆರಂಭದಲ್ಲಿ ಆತ ಹೌನ್ಸ್‌ಫೀಲ್ಡ್‌ʼನ ಕಲ್ಪನೆಯ ಬಗ್ಗೆ ಸಂದೇಹ ಹೊಂದಿದ್ದರೂ, ಅವನು ತೋರಿಸಿದ ಪ್ರಯೋಗಾತ್ಮಕ ಚಿತ್ರಗಳು ಆಂಬ್ರೋಸ್‌ನ ಗಮನ ಸೆಳೆದವು. ಮೆದುಳಿನ ಮೃದು ಅಂಗಾಂಶಗಳ ನಡುವಿನ ವ್ಯತ್ಯಾಸಗಳನ್ನು ಹೊಸ ವಿಧಾನದಿಂದ ಗುರುತಿಸಲು ಸಾಧ್ಯವಾಗುತ್ತದೆ ಎಂಬುದು ಸ್ಪಷ್ಟವಾಯಿತು. ಇವರಿಬ್ಬರೂ ಸೇರಿ ಮಾನವರ ಪರೀಕ್ಷೆಗೆ ಸೂಕ್ತವಾದ ಸಿಟಿ ಸ್ಕ್ಯಾನ್ ವ್ಯವಸ್ಥೆ ಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದರು. ಈ ಸಹಯೋಗದ ಫಲವಾಗಿ 1971ರ ಅಕ್ಟೋಬರ್ 1ರಂದು ಮೊದಲ ರೋಗಿಯ ಮೆದುಳಿನ ಸಿಟಿ ಸ್ಕ್ಯಾನ್ ನಡೆಸಲಾಯಿತು.

ಪರೀಕ್ಷೆಯ ನಂತರ ಗಣಕಯಂತ್ರವು ರೂಪಿಸಿದ ಚಿತ್ರದಲ್ಲಿ ಮೆದುಳಿನ ಮುಂದಿನ ಭಾಗದಲ್ಲಿದ್ದ ದ್ರವ ದಿಂದ ತುಂಬಿದ ಗಡ್ಡೆಯಂತಹ ರಚನೆ ಕಾಣಿಸಿಕೊಂಡಾಗ ವಿಜ್ಞಾನಿಗಳು ಮತ್ತು ವೈದ್ಯರು ಅಪಾರವಾದ ಸಂತೋಷವನ್ನು ಅನುಭವಿಸಿದರು. ತಮ್ಮ ತಂಡವು ಫುಟ್ಬಾಲ್ ಪಂದ್ಯದಲ್ಲಿ ಗೆಲುವಿನ ಗೋಲು ಹೊಡೆದ ಆಟಗಾರರಂತೆ ಸಂತೋಷಪಟ್ಟಿತು ಎಂದು ಆಂಬ್ರೋಸ್ ನಂತರ ನೆನಪಿಸಿಕೊಂಡಿದ್ದ. ಇದು ಕೇವಲ ಹೊಸ ಯಂತ್ರದ ಯಶಸ್ಸಾಗಿರಲಿಲ್ಲ. ವೈದ್ಯಕೀಯ ರೋಗ ನಿರ್ಣಯದಲ್ಲಿ ಹಿಂದೆ ಅಸಾಧ್ಯವೆಂದು ಭಾವಿಸಿದ್ದ ಒಂದು ಸಾಮರ್ಥ್ಯವು ವಾಸ್ತವವಾಗಿತ್ತು.

1972- ಜಗತ್ತಿನ ಗಮನ ಸೆಳೆದ ಹೊಸ ಚಿತ್ರಗಳು: 1972ರ ಏಪ್ರಿಲ್ 20ರಂದು ಲಂಡನ್ನಿನಲ್ಲಿ ನಡೆದ ಬ್ರಿಟಿಷ್ ಇನ್ಸ್ಟಿಟ್ಯೂಟ್ ಆಫ್ ರೇಡಿಯಾಲಜಿಯ ಸಭೆಯಲ್ಲಿ ಹೊಸ ಸಿಟಿ ಸ್ಕ್ಯಾನ್‌ನ ಫಲಿತಾಂಶಗಳನ್ನು ವೈದ್ಯಕೀಯ ಸಮುದಾಯದ ಮುಂದೆ ಪ್ರದರ್ಶಿಸಲಾಯಿತು. ಅಲ್ಲಿ ಸೇರಿದ್ದ ವೈದ್ಯರಿಗೆ ಮೆದುಳಿನ ಅಡ್ಡಪದರಗಳ ಚಿತ್ರಗಳನ್ನು ತೋರಿಸಲಾಯಿತು. ಮೆದುಳಿನೊಳಗಿನ ಗಡ್ಡೆಗಳು, ರಕ್ತಸ್ರಾವಗಳು ಮತ್ತು ಇತರ ಕೆಲವು ಬದಲಾವಣೆಗಳನ್ನು ಚಿತ್ರಗಳ ಮೂಲಕ ಗುರುತಿಸಲು ಸಾಧ್ಯವಾಗುತ್ತಿತ್ತು. ಇದು ಅಂದಿನ ವೈದ್ಯಕೀಯ ಲೋಕಕ್ಕೆ ಅತ್ಯಂತ ಆಶ್ಚರ್ಯಕರ ವಾದ ಸಂಗತಿಯಾಗಿತ್ತು.

ಹೊಸ ಸಾಧನದ ಬಗ್ಗೆ ಆರಂಭದಲ್ಲಿ ಅನುಮಾನ ವ್ಯಕ್ತಪಡಿಸಿದ್ದ ಅನೇಕ ವೈದ್ಯರು ಅದರ ಸಾಮರ್ಥ್ಯವನ್ನು ಗುರುತಿಸಲಾರಂಭಿಸಿದರು. ಮುಂದಿನ ವರ್ಷಗಳಲ್ಲಿ ಸಿಟಿ ಸ್ಕ್ಯಾನ್ ಯಂತ್ರಗಳು ವಿವಿಧ ಆಸ್ಪತ್ರೆಗಳಿಗೆ ತಲುಪಿದವು. ಆರಂಭಿಕ ಸಿಟಿ ಯಂತ್ರಗಳು ಮುಖ್ಯವಾಗಿ ಮೆದುಳಿನ ಚಿತ್ರಗಳನ್ನು ಪಡೆಯಲು ರೂಪುಗೊಂಡಿದ್ದವು. ನಂತರ ದೇಹದ ಇತರ ಭಾಗಗಳನ್ನೂ ಪರಿಶೀಲಿಸ ಬಹುದಾದ ಯಂತ್ರಗಳು ಅಭಿವೃದ್ಧಿಯಾದವು.

ಎದೆ, ಹೊಟ್ಟೆ, ಶ್ರೋಣಿಪ್ರದೇಶ, ಬೆನ್ನುಮೂಳೆ ಮತ್ತು ಇತರ ಅಂಗಗಳ ಪರೀಕ್ಷೆಗೂ ಸಿಟಿ ಸ್ಕ್ಯಾನ್ ಬಳಸಲಾಯಿತು. ಹೀಗೆ ಆರಂಭದಲ್ಲಿ ಮೆದುಳಿನ ಕಾಯಿಲೆಗಳನ್ನು ಗುರುತಿಸಲು ಅಭಿವೃದ್ಧಿಯಾದ ವಿಧಾನವು ಕ್ರಮೇಣ ವೈದ್ಯಕೀಯದ ಅನೇಕ ವಿಭಾಗಗಳಲ್ಲಿ ಅತ್ಯಂತ ಮುಖ್ಯವಾದ ಸಾಧನ ವಾಯಿತು.

ಒಂದು ಪದರದ ಚಿತ್ರ ಹೇಗೆ ರೂಪುಗೊಳ್ಳುತ್ತದೆ?: ಸಿಟಿ ಸ್ಕ್ಯಾನ್‌ನ ತತ್ವವನ್ನು ಇನ್ನಷ್ಟು ಸರಳವಾಗಿ ಅರ್ಥ ಮಾಡಿ ಕೊಳ್ಳೋಣ. ಒಂದು ದುಂಡಾದ ಹಣ್ಣನ್ನು ಕಲ್ಪಿಸಿಕೊಳ್ಳಿ. ಆ ಹಣ್ಣಿನ ಹೊರಗಿನ ಭಾಗವನ್ನು ನೋಡಿದಾಗ ಅದರ ಒಳಗೆ ಬೀಜಗಳು ಎಲ್ಲಿವೆ ಎಂಬುದು ತಿಳಿಯುವುದಿಲ್ಲ. ಆದರೆ ವಿವಿಧ ದಿಕ್ಕುಗಳಿಂದ ಹಣ್ಣಿನ ಒಳಗಿನ ರಚನೆಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಗಣಿತದ ನೆರವಿನಿಂದ ಅದರ ಅಡ್ಡಪದರದ ಚಿತ್ರವನ್ನು ರೂಪಿಸಲು ಸಾಧ್ಯವಾದರೆ? ಸಿಟಿ ಸ್ಕ್ಯಾನ್ ಇದೇ ರೀತಿಯ ತತ್ವವನ್ನು ಬಳಸುತ್ತದೆ. ರೋಗಿ ಮಲಗಿದ ಮೇಜು ಯಂತ್ರದ ದೊಡ್ಡ ದುಂಡಾದ ತೆರವಿ ನೊಳಗೆ ಸಾಗುತ್ತದೆ. ಆ ತೆರವಿನ ಸುತ್ತಲಿರುವ ವ್ಯವಸ್ಥೆಯಲ್ಲಿ ಎಕ್ಸ್-ಕಿರಣಗಳನ್ನು ಉತ್ಪಾದಿಸುವ ನಳಿಕೆ ಮತ್ತು ಕಿರಣಗಳನ್ನು ಗುರುತಿಸುವ ಸಾಧನಗಳಿರುತ್ತವೆ. ‌

ಎಕ್ಸ್-ಕಿರಣಗಳ ನಳಿಕೆಯು ರೋಗಿಯ ಸುತ್ತಲೂ ತಿರುಗುತ್ತದೆ. ವಿವಿಧ ದಿಕ್ಕುಗಳಿಂದ ದೇಹದ ಮೂಲಕ ಕಿರಣಗಳನ್ನು ಹಾಯಿಸುತ್ತದೆ. ಈ ಕಿರಣಗಳು ದೇಹದ ಮೂಲಕ ಸಾಗುವಾಗ ಮೂಳೆ, ಸ್ನಾಯು, ಕೊಬ್ಬು, ರಕ್ತ ಮತ್ತು ಇತರ ಅಂಗಾಂಶಗಳು ಅವುಗಳನ್ನು ಬೇರೆಬೇರೆ ಪ್ರಮಾಣದಲ್ಲಿ ತಡೆಯುತ್ತವೆ. ದೇಹದ ಮೂಲಕ ಹಾದು ಹೋಗಿ ಬಂದ ಕಿರಣಗಳನ್ನು ವಿಶೇಷವಾದ ಸಂವೇದಕಗಳು ದಾಖಲಿಸುತ್ತವೆ. ‌

ಗಣಕಯಂತ್ರವು ಈ ಮಾಹಿತಿಯನ್ನು ವಿಶ್ಲೇಷಿಸಿ ದೇಹದ ಒಂದು ಅಡ್ಡಪದರದ ಚಿತ್ರವನ್ನು ರೂಪಿಸುತ್ತದೆ. ಹೀಗೆ ಅನೇಕ ಅಡ್ಡಪದರಗಳ ಚಿತ್ರಗಳನ್ನು ಸಂಗ್ರಹಿಸಿ, ದೇಹದ ಒಳಗಿನ ರಚನೆ ಯನ್ನು ವಿವಿಧ ದಿಕ್ಕು ಗಳಿಂದ ಪರಿಶೀಲಿಸಲು ಸಾಧ್ಯವಾಗುತ್ತದೆ. ಅಗತ್ಯವಿದ್ದರೆ ಈ ಮಾಹಿತಿಯಿಂದ ಮೂರು ಆಯಾಮಗಳ ಚಿತ್ರಗಳನ್ನೂ ರೂಪಿಸಬಹುದು. ಇಲ್ಲಿ ಮತ್ತೊಂದು ವಿಷಯವನ್ನು ಗಮನಿಸಬೇಕು. ಸಿಟಿ ಸ್ಕ್ಯಾನ್ ದೇಹವನ್ನು ನಿಜವಾಗಿಯೂ ತೆಳುವಾದ ಪದರ ಗಳಾಗಿ ಕತ್ತರಿಸುವುದಿಲ್ಲ. ಅದು ಗಣಿತದ ನೆರವಿನಿಂದ ಅಡ್ಡಪದರಗಳ ಚಿತ್ರಗಳನ್ನು ರೂಪಿಸುತ್ತದೆ. ಇದೇ ಅದರ ಅದ್ಭುತವಾದ ಸಾಮರ್ಥ್ಯ.

ಕಪ್ಪು, ಬಿಳಿ ಮತ್ತು ಬೂದುಬಣ್ಣಗಳು ಏನನ್ನು ಸೂಚಿಸುತ್ತವೆ?: ಸಿಟಿ ಸ್ಕ್ಯಾನ್‌ನಲ್ಲಿ ಚಿತ್ರಗಳು ಸಾಮಾನ್ಯವಾಗಿ ಕಪ್ಪು, ಬಿಳಿ ಮತ್ತು ವಿವಿಧ ಬೂದುಬಣ್ಣಗಳ ಛಾಯೆಗಳಲ್ಲಿ ಕಾಣಿಸುತ್ತವೆ. ಇವುಗಳ ಹಿಂದೆ ಒಂದು ವೈಜ್ಞಾನಿಕ ತತ್ವವಿದೆ. ದೇಹದ ವಿವಿಧ ಅಂಗಾಂಶಗಳು ಎಕ್ಸ್-ಕಿರಣಗಳನ್ನು ಬೇರೆಬೇರೆ ಪ್ರಮಾಣದಲ್ಲಿ ತಡೆಯುತ್ತವೆ. ಗಾಳಿಯು ಕಿರಣಗಳನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ತಡೆಯುತ್ತದೆ. ಆದ್ದರಿಂದ ಅದು ಚಿತ್ರದಲ್ಲಿ ಸಾಮಾನ್ಯವಾಗಿ ಕಪ್ಪಾಗಿ ಕಾಣಿಸುತ್ತದೆ. ಮೂಳೆಗಳು ಕಿರಣಗಳನ್ನು ಹೆಚ್ಚು ತಡೆಯುತ್ತವೆ. ಆದ್ದರಿಂದ ಅವು ಸಾಮಾನ್ಯವಾಗಿ ಬಿಳಿ ಅಥವಾ ತಿಳಿಯಾದ ಬಣ್ಣದಲ್ಲಿ ಕಾಣಿಸುತ್ತವೆ. ‌

ಮೆದುಳು, ಸ್ನಾಯುಗಳು, ಯಕೃತ್ತು ಮತ್ತು ಇತರ ಮೃದು ಅಂಗಾಂಶಗಳು ವಿವಿಧ ಬೂದುಬಣ್ಣಗಳ ಛಾಯೆಗಳಲ್ಲಿ ಕಾಣಿಸುತ್ತವೆ. ಈ ವ್ಯತ್ಯಾಸಗಳನ್ನು ಗಣಕಯಂತ್ರವು ಸಂಖ್ಯೆಗಳ ರೂಪದಲ್ಲಿಯೂ ದಾಖಲಿಸುತ್ತದೆ. ಈ ಸಂಖ್ಯೆಗಳನ್ನು ಹೌನ್ಸ್‌ಫೀಲ್ಡ್ ಘಟಕಗಳು (Hounsfield Units-HU) ಎಂದು ಕರೆಯು ತ್ತೇವೆ. ಈ ಮಾಪಕದಲ್ಲಿ ನೀರಿಗೆ ಸಾಮಾನ್ಯವಾಗಿ ಶೂನ್ಯ ಎಂಬ ಮೌಲ್ಯವನ್ನು ನೀಡಲಾಗುತ್ತದೆ. ಗಾಳಿಗೆ ಸುಮಾರು ಮೈನಸ್ ಒಂದು ಸಾವಿರ ಎಂಬ ಮೌಲ್ಯವಿರುತ್ತದೆ. ‌

ಮೂಳೆಗಳಂತಹ ಹೆಚ್ಚಿನ ಸಾಂದ್ರತೆಯ ರಚನೆಗಳಿಗೆ ಧನಾತ್ಮಕವಾದ ಹೆಚ್ಚಿನ ಮೌಲ್ಯಗಳಿರುತ್ತವೆ. ಇದರಿಂದ ವೈದ್ಯರು ಕೇವಲ ಚಿತ್ರವನ್ನು ನೋಡುವುದಷ್ಟೇ ಅಲ್ಲದೆ, ಕೆಲವು ಅಂಗಾಂಶಗಳ ನಡುವಿನ ವ್ಯತ್ಯಾಸಗಳನ್ನು ಸಂಖ್ಯೆ ಗಳ ಆಧಾರದ ಮೇಲೆಯೂ ಪರಿಶೀಲಿಸಬಹುದು. ಆದರೆ ಒಂದು ಅಂಗದ ಸಾಂದ್ರತೆಯ ಮೌಲ್ಯವೊಂದೇ ಕಾಯಿಲೆ ಯನ್ನು ಖಚಿತಪಡಿಸುವುದಿಲ್ಲ. ಅದರ ಆಕಾರ, ಸ್ಥಾನ, ಸುತ್ತಲಿನ ರಚನೆಗಳು ಮತ್ತು ಇತರ ಮಾಹಿತಿಗಳನ್ನೂ ಪರಿಗಣಿಸಬೇಕು.