Dr Sadhanashree Column: ಡಾಕ್ಟರ್, ಯಾವ ಮಾತ್ರೆ ಕೊಡ್ತೀರಾ?
ರೋಗಗಳ ಕಾರಣಗಳು ವಿಭಿನ್ನವಾಗಿದ್ದರೆ ಚಿಕಿತ್ಸೆಯೂ ವಿಭಿನ್ನವಾಗಬೇಕು. ಆಯುರ್ವೇದದಲ್ಲಿ ಚಿಕಿತ್ಸೆ ಯನ್ನು ಕೇವಲ ಔಷಧಿ ನೀಡುವುದೆಂದು ಪರಿಗಣಿಸಲಾಗುವುದಿಲ್ಲ. ರೋಗ ಯಾವ ಕಾರಣದಿಂದ ಉಂಟಾಗಿದೆ ಎಂಬುದನ್ನು ಸೂಕ್ಷ ವಾಗಿ ವಿಶ್ಲೇಷಿಸಿ, ಅದಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ಆಯ್ಕೆ ಮಾಡಬೇಕು ಎಂದು ಆಚಾರ್ಯರು ಹೇಳಿzರೆ. ಅದಕ್ಕಾಗಿಯೇ ಆಯುರ್ವೇದದಲ್ಲಿ ತ್ರಿವಿಧ ಚಿಕಿತ್ಸೆಯನ್ನು ವಿವರಿಸಲಾಗಿದೆ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
‘ಡಾಕ್ಟರ್, ಇನ್ನೇನು ಔಷಧಿ ಕೊಡುತ್ತೀರಾ?’ ಪ್ರತಿದಿನ ವೈದ್ಯನಾಗಿ ನಾನು ರೋಗಿಗಳಿಂದ ಹೆಚ್ಚು ಕೇಳುವ ಪ್ರಶ್ನೆ ಇದು. ರೋಗಿಯೊಬ್ಬರು ವೈದ್ಯರ ಬಳಿಗೆ ಬಂದಾಗ, ಚಿಕಿತ್ಸೆ ಎಂದರೆ ಒಂದು ಮಾತ್ರೆ, ಒಂದು ಕಷಾಯ, ಒಂದು ಇಂಜೆಕ್ಷನ್, ಅಥವಾ ಒಂದು ಶಸ್ತ್ರಚಿಕಿತ್ಸೆ ಎಂಬ ಕಲ್ಪನೆ ನಮ್ಮಲ್ಲಿ ಬಹುತೇಕ ಎಲ್ಲರಿಗೂ ಇದೆ. ರೋಗವಿದ್ದರೆ ಔಷಧಿ ಇರಬೇಕು. ನೋವಿದ್ದರೆ ನೋವು ನಿವಾರಕ ಇರಬೇಕು. ಜ್ವರವಿದ್ದರೆ ಜ್ವರ ಇಳಿಸುವ ಮಾತ್ರೆ ಇರಬೇಕು. ಚಿಕಿತ್ಸೆ ಎಂದರೆ ಔಷಧಿಯೇ ಎಂಬ ಭಾವನೆ ನಮ್ಮ ಜೀವನದ ಭಾಗವಾಗಿದೆ.
ಆದರೆ ಸಾವಿರಾರು ವರ್ಷಗಳ ಹಿಂದೆ ಆಯುರ್ವೇದವು ಚಿಕಿತ್ಸೆಯನ್ನು ಇಷ್ಟು ಚಿಕ್ಕ ಚೌಕಟ್ಟಿನಲ್ಲಿ ನೋಡಲಿಲ್ಲ. ಕಳೆದ ವಾರದ ಲೇಖನದಲ್ಲಿ ನಾವು ನೋಡಿದ ಒಂದು ಮಹತ್ವದ ವಿಷಯ- ರೋಗವೆಂದರೆ ಕೇವಲ ವೈರಸ್, ಬ್ಯಾಕ್ಟೀರಿಯಾ ಅಥವಾ ಹೊರಗಿನಿಂದ ಬರುವ ಕಾರಣಗಳ ಫಲವಲ್ಲ ಎಂಬುದು. ಆಚಾರ್ಯರು ರೋಗದ ಕಾರಣಗಳನ್ನು ಆಧಿಭೌತಿಕ, ಆಧ್ಯಾತ್ಮಿಕ ಮತ್ತು ಆಧಿದೈವಿಕ ಎಂಬ ಮೂರು ಆಯಾಮಗಳಲ್ಲಿ ವಿವರಿಸಿದ್ದಾರೆ. ಹೊರಗಿನ ಕಾರಣಗಳಷ್ಟೇ ಅಲ್ಲ, ಜೀವನಶೈಲಿ, ಮನಸ್ಸು, ಪ್ರಜ್ಞೆಪರಾಧ, ಹಾಗೂ ಕೆಲವೊಮ್ಮೆ ನಮ್ಮ ಅರಿವಿಗೂ ಮೀರಿದ ಸೂಕ್ಷ ಕಾರಣಗಳೂ ರೋಗದ ಹಿಂದೆ ಕೆಲಸ ಮಾಡಬಹುದು ಎಂದು ಆಯುರ್ವೇದ ಹೇಳುತ್ತದೆ.
ಹಾಗಾದರೆ ಪ್ರಶ್ನೆ- ರೋಗದ ಕಾರಣಗಳು ಇಷ್ಟು ವಿಶಾಲವಾಗಿದ್ದರೆ, ಚಿಕಿತ್ಸೆಯೂ ಕೇವಲ ಒಂದು ಮಾತ್ರೆ ಯಾಗಿರಲು ಸಾಧ್ಯವೇ? ಬಹುಶಃ ಅದಕ್ಕಾಗಿಯೇ ಆಯುರ್ವೇದದಲ್ಲಿ ಚಿಕಿತ್ಸೆ ಎಂಬ ಪದಕ್ಕೆ ಅನೇಕ ಸಮಾನಾರ್ಥಕ ಪದಗಳನ್ನು ಬಳಸಲಾಗಿದೆ. ಒಂದು ಪ್ರಸಿದ್ಧ ವಾಕ್ಯ ಹೀಗಿದೆ- ‘ಚಿಕಿತ್ಸಿತಂ ವ್ಯಾಧಿಹರಂ ಪಥ್ಯಂ ಸಾಧನಮೌಷಧಮ್ | ಪ್ರಾಯಶ್ಚಿತ್ತಂ ಪ್ರಶಮನಂ ಪ್ರಕೃತಿಸ್ಥಾಪನಂ ಹಿತಮ್’
ಈ ಒಂದು ಶ್ಲೋಕವೇ ಆಯುರ್ವೇದದ ಚಿಕಿತ್ಸಾ ತತ್ವವನ್ನು ಅದ್ಭುತವಾಗಿ ತೆರೆದಿಡುತ್ತದೆ. ವ್ಯಾಧಿ ಹರಂ- ರೋಗವನ್ನು ನಿವಾರಿಸುವುದು ಚಿಕಿತ್ಸೆ. ಪಥ್ಯಂ-ಆರೋಗ್ಯಕ್ಕೆ ಅನುಕೂಲವಾಗಿರುವ ಆಹಾರ, ವಿಹಾರ ಮತ್ತು ಜೀವನಶೈಲಿಯೇ ಚಿಕಿತ್ಸೆ. ಸಾಧನಂ- ರೋಗದ ಕಾರಣವನ್ನೂ, ಅದರ ಪರಿಣಾಮವನ್ನೂ ಕಡಿಮೆ ಮಾಡುವ ಯಾವುದೇ ಕ್ರಮ ಚಿಕಿತ್ಸೆಯೇ. ಔಷಧಂ- ರೋಗವನ್ನು ನಿವಾರಿಸುವ ದ್ರವ್ಯವೂ ಚಿಕಿತ್ಸೆಯೇ. ಇಲ್ಲಿಯವರೆಗೆ ನಮಗೆ ಎಲ್ಲವೂ ಸಹಜವಾಗಿ ಅರ್ಥವಾಗುತ್ತದೆ. ಆದರೆ ಮುಂದಿನ ಪದ ನಮ್ಮನ್ನು ಕ್ಷಣಕಾಲ ನಿಲ್ಲಿಸಿ ಯೋಚಿಸುವಂತೆ ಮಾಡುತ್ತದೆ. ಪ್ರಾಯಶ್ಚಿತ್ತಂ. ಪ್ರಾಯಶ್ಚಿತ್ತವೂ ಚಿಕಿತ್ಸೆಯೇ? ಹೌದು. ಇದೇ ಆಯುರ್ವೇದದ ವಿಶಾಲತೆ.
ಇದನ್ನೂ ಓದಿ: Dr Sadhanashree Column: ದೇಹದ ಶತ್ರು ಹೊರಗಲ್ಲ, ಒಳಗೇ ಇದೆ!
ಇಲ್ಲಿ ಪ್ರಾಯಶ್ಚಿತ್ತ ಎಂದರೆ ಕೇವಲ ಧಾರ್ಮಿಕ ಆಚರಣೆ ಅಲ್ಲ. ತಪ್ಪನ್ನು ಅರಿತು, ಅದನ್ನು ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ. ಜೀವನದಲ್ಲಿ ಅಸಮತೋಲನ ಉಂಟುಮಾಡಿದ ಕಾರಣ ಗಳನ್ನು ಸರಿಪಡಿಸುವ ಆಂತರಿಕ ಪರಿವರ್ತನೆ. ಮನಸ್ಸಿನಲ್ಲಿರುವ ಅಪರಾಧಬೋಧ, ಭಯ, ಪಶ್ಚಾತ್ತಾಪ ಮತ್ತು ಒಳಗಿನ ಭಾರ ವನ್ನು ಕರಗಿಸುವ ಪ್ರಕ್ರಿಯೆ. ರೋಗದ ಹಿಂದೆ ಮನಸ್ಸು ಅಥವಾ ಕರ್ಮದ ಆಯಾಮವೂ ಇದ್ದರೆ, ಅದರ ಶುದ್ಧೀಕರಣವೂ ಚಿಕಿತ್ಸೆಯ ಭಾಗವಾಗಬೇಕು ಎಂಬ ಸಂದೇಶವನ್ನು ಆಯುರ್ವೇದ ನೀಡುತ್ತದೆ.
ಇದರ ನಂತರ ಶ್ಲೋಕವು ಇನ್ನೆರಡು ಅಮೂಲ್ಯ ಪದಗಳನ್ನು ಹೇಳುತ್ತದೆ. ಪ್ರಶಮನಂ- ರೋಗ ಲಕ್ಷಣಗಳನ್ನು ಶಮನಗೊಳಿಸುವುದು ಚಿಕಿತ್ಸೆ. ಪ್ರಕೃತಿಸ್ಥಾಪನಂ- ದೇಹವನ್ನು ತನ್ನ ಸಹಜ ಸಮತೋಲನಕ್ಕೆ ಮರಳಿಸುವುದು ಚಿಕಿತ್ಸೆ. ಗಮನಿಸಿ. ಆಯುರ್ವೇದದ ಗುರಿ ಕೇವಲ ಜ್ವರ ಇಳಿಸುವು ದಲ್ಲ; ಜ್ವರ ಬರದಂತಹ ಸಮತೋಲನವನ್ನು ಮರುಸ್ಥಾಪಿಸುವುದು. ಕೇವಲ ನೋವನ್ನು ಕಡಿಮೆ ಮಾಡುವುದಲ್ಲ; ನೋವು ಹುಟ್ಟುವ ನೆಲೆಯನ್ನು ಬದಲಿಸುವುದು. ಕೇವಲ ರೋಗವನ್ನು ದೂರ ಮಾಡುವುದಲ್ಲ; ಆರೋಗ್ಯವನ್ನು ಮರುಸ್ಥಾಪಿಸುವುದು.
ಕೊನೆಯ ಪದ ಹಿತಂ. ದೇಹಕ್ಕೂ, ಮನಸ್ಸಿಗೂ, ಜೀವನಕ್ಕೂ ಹಿತಕರವಾದದ್ದು- ಅದೇ ಚಿಕಿತ್ಸೆ. ಎಷ್ಟು ವಿಶಾಲವಾದ ವ್ಯಾಖ್ಯಾನ! ಈ ಒಂದು ಶ್ಲೋಕವನ್ನು ಓದಿದಾಗಲೇ ಒಂದು ವಿಷಯ ಸ್ಪಷ್ಟವಾಗುತ್ತದೆ. ಆಯುರ್ವೇದದಲ್ಲಿ ಚಿಕಿತ್ಸೆ ಎಂದರೆ ಕೇವಲ ಔಷಧಿ ಅಲ್ಲ. ಅದು ಆಹಾರ, ಆಚರಣೆ, ಚಿಂತನೆ, ಜೀವನಶೈಲಿ, ಮನಸ್ಸಿನ ಶುದ್ಧೀಕರಣ, ಅದು ದೇಹವನ್ನು ಮತ್ತೆ ತನ್ನ ಸಹಜ ಸ್ಥಿತಿಗೆ ಕರೆತರುವ ಪ್ರಕ್ರಿಯೆ.
ಹಾಗಾದರೆ ಇಂತಹ ವಿಶಾಲ ಚಿಕಿತ್ಸೆಯನ್ನು ಆಯುರ್ವೇದ ಹೇಗೆ ಅನುಷ್ಠಾನಗೊಳಿಸುತ್ತದೆ? ಆಯುರ್ವೇದವು ಅದರ ಉತ್ತರವನ್ನು ಮೂರು ಮಹತ್ವದ ಚಿಕಿತ್ಸಾ ಮಾರ್ಗಗಳಲ್ಲಿ ನೀಡಿದೆ. 1. ಯುಕ್ತಿವ್ಯಪಾಶ್ರಯ ಚಿಕಿತ್ಸೆ. 2. ದೈವವ್ಯಪಾಶ್ರಯ ಚಿಕಿತ್ಸೆ. 3. ಸತ್ವಾವಜಯ ಚಿಕಿತ್ಸೆ. ಈ ಮೂರು ಸೇರಿ ಆಯುರ್ವೇದದ ಚಿಕಿತ್ಸಾ ತತ್ವದ ತ್ರಿವೇಣಿಯನ್ನು ನಿರ್ಮಿಸುತ್ತವೆ.
ರೋಗಗಳ ಕಾರಣಗಳು ವಿಭಿನ್ನವಾಗಿದ್ದರೆ ಚಿಕಿತ್ಸೆಯೂ ವಿಭಿನ್ನವಾಗಬೇಕು. ಆಯುರ್ವೇದದಲ್ಲಿ ಚಿಕಿತ್ಸೆ ಯನ್ನು ಕೇವಲ ಔಷಧಿ ನೀಡುವುದೆಂದು ಪರಿಗಣಿಸಲಾಗುವುದಿಲ್ಲ. ರೋಗ ಯಾವ ಕಾರಣ ದಿಂದ ಉಂಟಾಗಿದೆ ಎಂಬುದನ್ನು ಸೂಕ್ಷ ವಾಗಿ ವಿಶ್ಲೇಷಿಸಿ, ಅದಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ಆಯ್ಕೆ ಮಾಡಬೇಕು ಎಂದು ಆಚಾರ್ಯರು ಹೇಳಿzರೆ. ಅದಕ್ಕಾಗಿಯೇ ಆಯುರ್ವೇದದಲ್ಲಿ ತ್ರಿವಿಧ ಚಿಕಿತ್ಸೆಯನ್ನು ವಿವರಿಸಲಾಗಿದೆ.
ಯುಕ್ತಿವ್ಯಪಾಶ್ರಯ ಚಿಕಿತ್ಸೆ
ಇದು ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತವಾದ ಚಿಕಿತ್ಸಾ ವಿಧಾನ. ಔಷಧಿ, ಆಹಾರ, ಪಂಚಕರ್ಮ, ದಿನಚರ್ಯೆ, ಋತುಚರ್ಯೆ, ವ್ಯಾಯಾಮ, ವಿಶ್ರಾಂತಿ - ಇವೆಲ್ಲವೂ ಇದರ ವ್ಯಾಪ್ತಿಗೆ ಬರುತ್ತವೆ.
ಆದರೆ ‘ಯುಕ್ತಿ’ ಎಂದರೆ ಕೇವಲ ಔಷಧಿ ಕೊಡುವುದಲ್ಲ; ಯೋಜನೆ ಎಂಬುದು ಅದರ ನಿಜವಾದ ಅರ್ಥ. ರೋಗಿಯ ದೇಶ, ಕಾಲ, ವಯಸ್ಸು, ಪ್ರಕೃತಿ, ವಿಕೃತಿ, ರೋಗದ ಕಾರಣ, ಲಕ್ಷಣಗಳು, ಹಂತ, ಬಲ, ಅಗ್ನಿ, ದೋಷ-ದೂಷ್ಯಗಳ ಸ್ಥಿತಿ, ರೋಗದ ಸಾಧ್ಯಾಸಾಧ್ಯತೆ- ಇವೆಲ್ಲವನ್ನೂ ಪರಿಗಣಿಸಿ ಯಾವ ಆಹಾರ, ಯಾವ ಔಷಧಿ, ಎಷ್ಟು ಪ್ರಮಾಣದಲ್ಲಿ, ಯಾವ ಸಮಯದಲ್ಲಿ, ಎಷ್ಟು ದಿನ ನೀಡಬೇಕು ಎಂಬುದನ್ನು ಯುಕ್ತಿಪೂರ್ವಕವಾಗಿ ನಿರ್ಧರಿಸುವುದೇ ಯುಕ್ತಿವ್ಯಪಾಶ್ರಯ ಚಿಕಿತ್ಸೆ. ಒಂದೇ ರೋಗಕ್ಕೆ ಎಲ್ಲರಿಗೂ ಒಂದೇ ಔಷಧಿ ಎನ್ನುವುದು ಆಯುರ್ವೇದದ ದೃಷ್ಟಿಯಲ್ಲ.
ಸತ್ವಾವಜಯ ಚಿಕಿತ್ಸೆ
ಕೆಲವು ರೋಗಗಳ ಮೂಲ ದೇಹದಲ್ಲಿರುವುದಿಲ್ಲ; ಮನಸ್ಸಿನಲ್ಲಿರುತ್ತದೆ. ಅಂತಹ ಸಂದರ್ಭಗಳಲ್ಲಿ ಕೇವಲ ಔಷಽ ಸಾಕಾಗುವುದಿಲ್ಲ. ಆಯುರ್ವೇದ ಆಚಾರ್ಯರು ಈ ಕಾರಣಕ್ಕಾಗಿಯೇ ಸತ್ವಾವಜಯ ಚಿಕಿತ್ಸೆಯನ್ನು ಪ್ರತಿಪಾದಿಸಿದ್ದಾರೆ. ‘ಸತ್ವ’ ಎಂದರೆ ಮನಸ್ಸಿನ ಶುದ್ಧತೆ, ಸ್ಥೈರ್ಯ ಮತ್ತು ವಿವೇಕ. ‘ಅವಜಯ’ ಎಂದರೆ ಜಯಿಸುವುದು ಅಥವಾ ನಿಯಂತ್ರಿಸುವುದು. ಅಂದರೆ ಮನಸ್ಸನ್ನು ಅಶುಭ ವಿಚಾರಗಳಿಂದ, ಅತಿಯಾದ ಆಸೆಗಳಿಂದ, ಭಯ, ಶೋಕ, ಕೋಪ, ಮೋಹ ಮುಂತಾದ ಮಾನಸಿಕ ಅಸ್ಥಿರತೆಗಳಿಂದ ಹೊರತೆಗೆದು, ಸತ್ವಗುಣವನ್ನು ಬಲಪಡಿಸುವುದೇ ಸತ್ವಾವಜಯ ಚಿಕಿತ್ಸೆ. ಈ ಚಿಕಿತ್ಸೆಯ ಪ್ರಮುಖ ಸಾಧನಗಳಾಗಿ ಜ್ಞಾನ, ವಿಜ್ಞಾನ, ಧೈರ್ಯ, ಸ್ಮೃತಿ, ಹರ್ಷಣ ಮತ್ತು ಆಶ್ವಾಸನ ಗಳನ್ನು ಉಲ್ಲೇಖಿಸಲಾಗಿದೆ.
ಅಂದರೆ ರೋಗಿಗೆ ಸರಿಯಾದ ಜ್ಞಾನ ನೀಡುವುದು, ವಾಸ್ತವವನ್ನು ಅರ್ಥಮಾಡಿಸುವುದು, ಧೈರ್ಯ ತುಂಬು ವುದು, ಉತ್ತಮ ನೆನಪುಗಳು ಮತ್ತು ಮೌಲ್ಯಗಳನ್ನು ಜಾಗೃತಗೊಳಿಸುವುದು, ಮನಸ್ಸಿಗೆ ಸಂತೋಷ ನೀಡುವುದು, ಆತ್ಮವಿಶ್ವಾಸವನ್ನು ಬೆಳೆಸುವುದು- ಇವೆಲ್ಲವೂ ಚಿಕಿತ್ಸೆಯ ಭಾಗವೇ ಆಗಿವೆ.
ಯೋಗ, ಪ್ರಾಣಾಯಾಮ, ಧ್ಯಾನ, ಆತ್ಮಪರಿಶೀಲನೆ, ಸತ್ಸಂಗ, ಭಕ್ತಿ, ಸಮಾಲೋಚನೆ ಹಾಗೂ ಮನಸ್ಸನ್ನು ಸತ್ಪ್ರವೃತ್ತಿಗಳ ಕಡೆಗೆ ಕೊಂಡೊಯ್ಯುವ ಎಲ್ಲ ವಿಧಾನಗಳೂ ಸತ್ವಾವಜಯ ಚಿಕಿತ್ಸೆಯ ವ್ಯಾಪ್ತಿಯಲ್ಲಿ ಬರುತ್ತವೆ.
ದೈವವ್ಯಪಾಶ್ರಯ ಚಿಕಿತ್ಸೆ
ಆಯುರ್ವೇದದಲ್ಲಿ ಅತ್ಯಂತ ವಿಶಿಷ್ಟವಾದ ಚಿಕಿತ್ಸಾ ವಿಧಾನವೆಂದರೆ ದೈವವ್ಯಪಾಶ್ರಯ ಚಿಕಿತ್ಸೆ. ‘ದೈವ’ ಎಂಬ ಪದವು ಇಲ್ಲಿ ದೇವತಾರಾಧನೆ ಎಂಬ ಒಂದು ಸೀಮಿತ ಅರ್ಥವನ್ನಷ್ಟೇ ಸೂಚಿಸುವು ದಿಲ್ಲ. ಮಾನವನ ತರ್ಕಕ್ಕೆ ತಕ್ಷಣ ಸಿಗದ, ಕೇವಲ ಭೌತಿಕ ಕಾರಣಗಳಿಂದ ಮಾತ್ರ ವಿವರಿಸಲಾಗದ ಅಥವಾ ವ್ಯಕ್ತಿಯ ನಿಯಂತ್ರಣಕ್ಕೆ ಸಂಪೂರ್ಣವಾಗಿ ಒಳಪಡುವುದಿಲ್ಲದ ಜೀವನದ ಆಯಾಮ ಗಳನ್ನೂ ಇದು ಒಳಗೊಂಡಿದೆ.
‘ವ್ಯಪಾಶ್ರಯ’ ಎಂದರೆ ಆಶ್ರಯ ಪಡೆಯುವುದು. ಅಂದರೆ ಅಂತಹ ಸೂಕ್ಷ್ಮ ಕಾರಣಗಳನ್ನು ಸಮತೋಲನಗೊಳಿಸಲು ಅನುಸರಿಸುವ ಚಿಕಿತ್ಸೆಯೇ ದೈವವ್ಯಪಾಶ್ರಯ ಚಿಕಿತ್ಸೆ.
ಚರಕ ಸಂಹಿತೆಯಲ್ಲಿ ಇದರ ಅಂಗಗಳಾಗಿ ಮಂತ್ರ, ಔಷಧ (ತಾಯಿತ, ರಕ್ಷಾಸೂತ್ರ ಮೊದಲಾದ ರಕ್ಷಣಾತ್ಮಕ ಉಪಾಯಗಳು), ಮಣಿ ಧಾರಣೆ, ಮಂಗಳಕರ್ಮ, ಬಲಿ, ಉಪಹಾರ, ಹೋಮ, ನಿಯಮ ಪಾಲನೆ, ಪ್ರಾಯಶ್ಚಿತ್ತ, ಉಪವಾಸ, ಸ್ವಸ್ತಿವಾಚನ, ಪ್ರಣಿಪಾತ ಮತ್ತು ತೀರ್ಥಯಾತ್ರೆಗಳನ್ನು ಉಲ್ಲೇಖಿಸಲಾಗಿದೆ.
ಇವುಗಳನ್ನು ಕೇವಲ ಧಾರ್ಮಿಕ ಆಚರಣೆಗಳೆಂದು ನೋಡುವುದು ಅಪೂರ್ಣ ಅರ್ಥೈಸುವಿಕೆ ಯಾಗುತ್ತದೆ. ವ್ಯಕ್ತಿಯ ಜೀವನದಲ್ಲಿ ವಿನಯ, ಶ್ರದ್ಧೆ, ಆತ್ಮಶುದ್ಧಿ, ಸಕಾರಾತ್ಮಕ ಸಂಕಲ್ಪ ಮತ್ತು ಅಂತರಂಗದ ಪರಿವರ್ತನೆಯನ್ನು ಬೆಳೆಸುವ ಸಾಧನಗಳಾಗಿ ಆಯುರ್ವೇದವು ಇವುಗಳನ್ನು ಪರಿಗಣಿಸುತ್ತದೆ.
ಸಮಗ್ರ ಚಿಕಿತ್ಸೆಯೇ ಆಯುರ್ವೇದ
ಇಂದು ನಾವು ಹೆಚ್ಚಿನ ಸಂದರ್ಭಗಳಲ್ಲಿ ಔಷಧಿಯನ್ನೇ ಚಿಕಿತ್ಸೆಯ ಸಂಪೂರ್ಣ ರೂಪವೆಂದು ಭಾವಿಸು ತ್ತೇವೆ. ಆದರೆ ಆಯುರ್ವೇದ ಹೇಳುವುದು ಬೇರೆ. ರೋಗವು ಭೌತಿಕ ಕಾರಣಗಳಿಂದ ಉಂಟಾ ಗಿದ್ದರೆ ಯುಕ್ತಿವ್ಯಪಾಶ್ರಯ ಚಿಕಿತ್ಸೆಗೆ ಆದ್ಯತೆ. ಮನಸ್ಸಿನ ಅಸಮತೋಲನ ಪ್ರಮುಖ ಕಾರಣವಾಗಿ ದ್ದರೆ ಸತ್ವಾವಜಯ ಚಿಕಿತ್ಸೆಯ ಅಗತ್ಯ. ಜೀವನದ ಸೂಕ್ಷ್ಮ ಆಯಾಮಗಳು ಅಥವಾ ಆಧಿದೈವಿಕ ಕಾರಣಗಳು ಸಂಬಂಧಿಸಿದ್ದರೆ ದೈವವ್ಯಪಾಶ್ರಯ ಚಿಕಿತ್ಸೆಯೂ ಚಿಕಿತ್ಸೆಯ ಒಂದು ಅಂಗವಾಗುತ್ತದೆ.
ಹೀಗಾಗಿ, ಈ ಮೂರು ಚಿಕಿತ್ಸೆಗಳು ಪರಸ್ಪರ ವಿರುದ್ಧವಾದವುಗಳಲ್ಲ; ಪರಸ್ಪರ ಪೂರಕವಾದವುಗಳು. ಒಬ್ಬ ಸಮರ್ಥ ಆಯುರ್ವೇದ ವೈದ್ಯನು ರೋಗಿಯ ಸ್ಥಿತಿಯನ್ನು ಅರಿತು, ಈ ಮೂರನ್ನೂ ಸೂಕ್ತ ವಾಗಿ ಸಂಯೋಜಿಸಿದಾಗ ಮಾತ್ರ ನಿಜವಾದ ಸಮಗ್ರ ಚಿಕಿತ್ಸೆ ಸಾಧ್ಯವಾಗುತ್ತದೆ.
ಈ ಮೂರು ಚಿಕಿತ್ಸಾ ವಿಧಾನಗಳನ್ನು ಗಮನಿಸಿದಾಗ ಆಯುರ್ವೇದದ ಒಂದು ಅಪೂರ್ವ ವೈಶಿಷ್ಟ್ಯ ನಮ್ಮ ಗಮನಕ್ಕೆ ಬರುತ್ತದೆ. ಇಲ್ಲಿ ಚಿಕಿತ್ಸೆಯ ಗುರಿ ಕೇವಲ ರೋಗವನ್ನು ನಿಗ್ರಹಿಸುವುದಲ್ಲ; ರೋಗಿಯ ಸ್ವಾಸ್ಥ್ಯವನ್ನು ಪುನಃ ಸ್ಥಾಪಿಸುವುದು.
ಇಂದು ನಾವು ಅನೇಕ ಬಾರಿ ಚಿಕಿತ್ಸೆಯ ಯಶಸ್ಸನ್ನು ಒಂದು ವರದಿಯ ಸಂಖ್ಯೆಗಳು ಸಹಜವಾಗಿ ವೆಯೇ, ಜ್ವರ ಇಳಿದಿದೆಯೇ, ನೋವು ಕಡಿಮೆಯಾಗಿದೆಯೇ ಎಂಬ ಮಾನದಂಡಗಳಿಂದ ಅಳೆಯು ತ್ತೇವೆ. ಆದರೆ ಆಯುರ್ವೇದ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗುತ್ತದೆ. ಅದರ ದೃಷ್ಟಿಯಲ್ಲಿ ರೋಗಲಕ್ಷಣಗಳು ಶಮನವಾಗುವುದು ಚಿಕಿತ್ಸೆಯ ಅಂತ್ಯವಲ್ಲ; ಅದು ಆರಂಭ ಮಾತ್ರ. ನಿಜವಾದ ಚಿಕಿತ್ಸೆಯು ದೇಹವು ತನ್ನ ಸಹಜ ಸಮತೋಲನವನ್ನು ಮರಳಿ ಪಡೆಯುವಾಗ ಪೂರ್ಣವಾಗುತ್ತದೆ. ಅದಕ್ಕಾಗಿಯೇ ಆಚಾರ್ಯರು ಪ್ರಕೃತಿಸ್ಥಾಪನ ಎಂಬ ಪದವನ್ನು ಚಿಕಿತ್ಸೆಯ ಸಮಾನಾರ್ಥಕವಾಗಿ ಬಳಸಿzರೆ.
ಒಬ್ಬ ರೋಗಿಗೆ ರಕ್ತದೊತ್ತಡದ ಮಾತ್ರೆಯನ್ನು ಕೊಟ್ಟರೆ ಸಂಖ್ಯೆಗಳು ಕಡಿಮೆಯಾಗಬಹುದು. ಆದರೆ ಅವನ ಆತಂಕ, ಅತಿಯಾದ ಒತ್ತಡ, ಅಸಮರ್ಪಕ ಆಹಾರ, ನಿದ್ರಾಹೀನತೆ ಮತ್ತು ಅಸ್ತವ್ಯಸ್ತ ಜೀವನ ಶೈಲಿ ಹಾಗೆಯೇ ಮುಂದುವರಿದರೆ, ನಾವು ರೋಗವನ್ನು ನಿಯಂತ್ರಿಸಿರಬಹುದು; ಆದರೆ ಆರೋಗ್ಯ ವನ್ನು ನಿರ್ಮಿಸಿಲ್ಲ. ಇದೇ ಮಾತು ಮಧುಮೇಹ, ಸ್ಥೌಲ್ಯ, ಚರ್ಮರೋಗ, ಮಾನಸಿಕ ಒತ್ತಡ ಮತ್ತು ಅನೇಕ ದೀರ್ಘಕಾಲೀನ ಕಾಯಿಲೆಗಳಿಗೂ ಅನ್ವಯಿಸುತ್ತದೆ.
ಆದ್ದರಿಂದ ಆಯುರ್ವೇದದ ಚಿಕಿತ್ಸೆ ಕೇವಲ ದೇಹವನ್ನು ಗುರಿಯಾಗಿಸಿಕೊಳ್ಳುವುದಿಲ್ಲ. ಅದು ವ್ಯಕ್ತಿಯ ಆಹಾರ, ವಿಹಾರ, ಆಚಾರ, ವಿಚಾರ ಮತ್ತು ಆತ್ಮಬಲ- ಈ ಐದು ಆಯಾಮಗಳಲ್ಲೂ ಸಮತೋಲನವನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತದೆ.
ಒಬ್ಬ ವೈದ್ಯನ ಕೈಯಲ್ಲಿ ಔಷಧಿ ಇರುವುದು ಮುಖ್ಯ. ಆದರೆ ರೋಗಿಯ ಕೈಯಲ್ಲಿ ಪಥ್ಯ, ಶಿಸ್ತು, ಧೈರ್ಯ ಮತ್ತು ಬದಲಾವಣೆಯ ಸಂಕಲ್ಪ ಇರದಿದ್ದರೆ ಚಿಕಿತ್ಸೆಯ ಫಲ ಸಂಪೂರ್ಣವಾಗುವುದಿಲ್ಲ. ಆಯುರ್ವೇದ ದಲ್ಲಿ ವೈದ್ಯ, ಔಷಧಿ, ಪರಿಚಾರಕ ಮತ್ತು ರೋಗಿ - ಈ ನಾಲ್ಕು ಪಾದಗಳು ಸಮಾನ ವಾಗಿ ಮಹತ್ವ ಪಡೆದಿರುವುದೂ ಇದೇ ಕಾರಣಕ್ಕೆ.
ಬಹುಶಃ ಅದಕ್ಕಾಗಿಯೇ ಆಯುರ್ವೇದದಲ್ಲಿ ವೈದ್ಯನನ್ನು ಕೇವಲ ಔಷಧಿ ನೀಡುವ ವ್ಯಕ್ತಿಯಾಗಿ ನೋಡಿಲ್ಲ. ಜೀವನವನ್ನು ಮತ್ತೆ ಸಂಪೂರ್ಣ ಸ್ವಾಸ್ಥ್ಯದ ದಿಕ್ಕಿನಲ್ಲಿ ನಡೆಸುವ ಮಾರ್ಗದರ್ಶಿಯಾಗಿ ಕಂಡಿದೆ.
ಇಂದು ವಿeನವು ನಮಗೆ ಅದ್ಭುತವಾದ ಔಷಧಿಗಳನ್ನು ನೀಡಿದೆ. ಅವುಗಳ ಮಹತ್ವವನ್ನು ಯಾವ ರೀತಿಯಲ್ಲೂ ಕಡಿಮೆ ಮಾಡಲಾಗುವುದಿಲ್ಲ. ಆದರೆ ಔಷಧಿ ಎಷ್ಟು ಶ್ರೇಷ್ಠವಾಗಿದ್ದರೂ, ಅದು ನಮ್ಮ ಪರವಾಗಿ ಸರಿಯಾದ ಆಹಾರವನ್ನು ಸೇವಿಸಲು ಸಾಧ್ಯವಿಲ್ಲ. ನಮ್ಮ ಪರವಾಗಿ ನಿದ್ರೆ ಮಾಡಲು ಸಾಧ್ಯವಿಲ್ಲ. ನಮ್ಮ ಪರವಾಗಿ ಕ್ಷಮಿಸಲು, ಕೋಪವನ್ನು ಬಿಡಲು, ಧ್ಯಾನ ಮಾಡಲು ಅಥವಾ ಧರ್ಮಸಮ್ಮತ ಜೀವನವನ್ನು ನಡೆಸಲು ಸಾಧ್ಯವಿಲ್ಲ.
ಆ ಕೆಲಸವನ್ನು ನಾವು ತಾವೇ ಮಾಡಬೇಕು. ಬಹುಶಃ ಅದುವೇ ಆಯುರ್ವೇದದ ಅತ್ಯಂತ ದೊಡ್ಡ ಸಂದೇಶ. ಮಾತ್ರೆಗಳು ರೋಗವನ್ನು ಕಡಿಮೆ ಮಾಡಬಹುದು. ಆದರೆ ಬದುಕನ್ನು ಬದಲಾಯಿಸು ವುದು ನಮ್ಮ ಕೈಯಲ್ಲಿದೆ. ಔಷಧಿ ದೇಹಕ್ಕೆ ಶಕ್ತಿ ನೀಡಬಹುದು. ಆದರೆ ಮನಸ್ಸಿಗೆ ಶಾಂತಿ, ಜೀವನಕ್ಕೆ ಅರ್ಥ ಮತ್ತು ಆತ್ಮಕ್ಕೆ ಸಮತೋಲನವನ್ನು ನಾವು ಸ್ವತಃ ಬೆಳೆಸಿಕೊಳ್ಳಬೇಕು.
ಆದ್ದರಿಂದ ಮುಂದಿನ ಬಾರಿ ವೈದ್ಯರ ಬಳಿಗೆ ಹೋದಾಗ ಕೇವಲ ‘ಡಾಕ್ಟರ್, ಯಾವ ಮಾತ್ರೆ ತೆಗೆದುಕೊಳ್ಳ ಬೇಕು?’ ಎಂಬ ಪ್ರಶ್ನೆಯನ್ನಷ್ಟೇ ಕೇಳಬೇಡಿ. ಅದರ ಜೊತೆಗೆ ಇನ್ನೊಂದು ಪ್ರಶ್ನೆ ಯನ್ನೂ ಕೇಳಿ- ನನ್ನ ಆರೋಗ್ಯವನ್ನು ಮರಳಿ ಪಡೆಯಲು ನಾನು ಏನು ಬದಲಿಸಬೇಕು? ಬಹುಶಃ ಆ ಪ್ರಶ್ನೆಯೇ ನಿಜವಾದ ಚಿಕಿತ್ಸೆಯ ಮೊದಲ ಹೆಜ್ಜೆಯಾಗಬಹುದು.
ಏಕೆಂದರೆ ಆಯುರ್ವೇದದ ದೃಷ್ಟಿಯಲ್ಲಿ ಚಿಕಿತ್ಸೆ ಎಂದರೆ ಕೇವಲ ರೋಗವನ್ನು ಹೋಗಲಾಡಿಸುವು ದಲ್ಲ. ದೇಹವನ್ನು ಪ್ರಕೃತಿಯಲ್ಲಿ ಸ್ಥಾಪಿಸುವುದು. ಮನಸ್ಸನ್ನು ಸತ್ವದಲ್ಲಿ ಸ್ಥಾಪಿಸುವುದು. ಜೀವನ ವನ್ನು ಧರ್ಮದಲ್ಲಿ ಸ್ಥಾಪಿಸುವುದು. ಮನುಷ್ಯನು ಈ ಮೂರು ಆಯಾಮಗಳಲ್ಲಿ ಸಮತೋಲನ ವನ್ನು ಸಾಧಿಸಿದಾಗ ಮಾತ್ರ ಸಂಪೂರ್ಣ ಆರೋಗ್ಯ ಸಾಧ್ಯ. ಅದಕ್ಕಾಗಿಯೇ ಸಾವಿರಾರು ವರ್ಷಗಳ ಹಿಂದೆ ಆಚಾರ್ಯರು ಹೇಳಿದ ಸಂದೇಶ ಇಂದಿಗೂ ಅಷ್ಟೇ ಪ್ರಸ್ತುತವಾಗಿದೆ- ಚಿಕಿತ್ಸೆ ಎಂದರೆ ಕೇವಲ ಮಾತ್ರೆಯಲ್ಲ, ಅದು ಸ್ವಾಸ್ಥ್ಯದತ್ತ ಸಾಗುವ ಸಮಗ್ರ ಜೀವನಯಾತ್ರೆ.