ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Maithri Bhat Column: ಬಿಸಿ ಕಾಫಿ, ಖುಷಿ ಕ್ಷಣ

ಒಂದು ಕಪ್ ಕಾಫಿ ನಮ್ಮ ಕಣ್ಣ ಮುಂದೆ ಬಂದಾಗ ನಾವು ಅದರ ರುಚಿಯನ್ನಷ್ಟೇ ಅನುಭವಿಸು ತ್ತೇವೆ. ಆದರೆ ಅದರೊಳಗೆ ಕಾಣದ ಹಲವು ಕಥೆಗಳಿವೆ. ದೂರದ ಬೆಟ್ಟವೊಂದರಲ್ಲಿ ಮಳೆಯನ್ನು ಕಾಯುತ್ತ ನಿಂತ ಕಾಫಿ ಗಿಡವಿದೆ. ಅದರ ನಡುವೆ ದುಡಿದ ರೈತನ ಕೈಗಳಿವೆ. ಹಣ್ಣು ಕೀಳುವ ಕಾರ್ಮಿಕನ ಶ್ರಮವಿದೆ. ಹುರಿಯುವ ಬೆಂಕಿಯಿದೆ. ಮಾರುಕಟ್ಟೆಯ ಏರಿಳಿತವಿದೆ.

Dr Maithri Bhat Column: ಬಿಸಿ ಕಾಫಿ, ಖುಷಿ ಕ್ಷಣ

-

Profile
Ashok Nayak Oct 1, 2026 11:38 AM

ಡಾ.ಮೈತ್ರಿ ಭಟ್ ‌

ಇಂದು (ಅ.1) ವಿಶ್ವ ಕಾಫಿ ದಿನ. ತೋಟದಿಂದ ನಮ್ಮ ತುಟಿಯವರೆಗೆ ಹಲವು ಹಂತಗಳನ್ನು ದಾಟಿ ಬರುವ ಆ ಬಿಸಿ ಪಾನೀಯದ ಜಗತ್ತನ್ನು ನೋಡೋಣ.

ಕೆಲವು ವಸ್ತುಗಳು ನಮ್ಮ ಬದುಕಿನಲ್ಲಿ ಹೇಗೆ ಇಷ್ಟು ಸಹಜವಾಗಿ ಬೆರೆತುಕೊಂಡವು ಎಂಬುದೇ ಗೊತ್ತಾಗುವುದಿಲ್ಲ. ಕಾಫಿಯೂ ಅಂಥದ್ದೇ. ಬೆಳಗ್ಗೆ ಎದ್ದೊಡನೆ ಕಾಫಿ ಬೇಕೆನ್ನಿಸುವುದು ಯಾವಾಗ ಅಭ್ಯಾಸವಾಯಿತು? ಕಾಫಿಯ ಕಪ್ ಕೈಗೆ ಸಿಕ್ಕಾಗಲೇ ದಿನ ಆರಂಭವಾಯಿತೆನ್ನಿಸುವ ಭಾವ ಯಾವಾಗ ಬಂತು? ಬಹುಶಃ ಅದಕ್ಕೆ ನಿಖರವಾದ ಉತ್ತರ ನಮ್ಮಲ್ಲಿರಲಾರದು. ಆದರೆ ಕಾಫಿ ನಮ್ಮ ದಿನಚರಿಯೊಳಗೆ ಮಾತ್ರವಲ್ಲ, ನಮ್ಮ ಮಾತುಕತೆ, ಆತಿಥ್ಯ, ನೆನಪು ಮತ್ತು ಜೀವನಶೈಲಿಯೊಳಗೂ ಬೆರೆತುಹೋಗಿದೆ.

ಒಂದು ಕಪ್ ಕಾಫಿ ನಮ್ಮ ಕಣ್ಣಮುಂದೆ ಬಂದಾಗ ನಾವು ಅದರ ರುಚಿಯನ್ನಷ್ಟೇ ಅನುಭವಿಸು ತ್ತೇವೆ. ಆದರೆ ಅದರೊಳಗೆ ಕಾಣದ ಹಲವು ಕಥೆಗಳಿವೆ. ದೂರದ ಬೆಟ್ಟವೊಂದರಲ್ಲಿ ಮಳೆಯನ್ನು ಕಾಯುತ್ತ ನಿಂತ ಕಾಫಿ ಗಿಡವಿದೆ. ಅದರ ನಡುವೆ ದುಡಿದ ರೈತನ ಕೈಗಳಿವೆ. ಹಣ್ಣು ಕೀಳುವ ಕಾರ್ಮಿಕನ ಶ್ರಮವಿದೆ. ಹುರಿಯುವ ಬೆಂಕಿಯಿದೆ. ಮಾರುಕಟ್ಟೆಯ ಏರಿಳಿತವಿದೆ.

ಇದನ್ನೂ ಓದಿ: Dr Maithri Bhat Column: ಕಾಡುವ ಹೆಪಟೈಟಿಸ್: ಜಾಗೃತಿಯೇ ಜೀವ ರಕ್ಷಕ

ಕೊನೆಗೆ ನಮ್ಮ ಅಡುಗೆಮನೆಯವರೆಗೆ ಬಂದ ಒಂದು ದೀರ್ಘ ಪಯಣವಿದೆ. ಆದುದರಿಂದಲೇ ಕಾಫಿ ಕಪ್‌ನಲ್ಲಿ ಮಣ್ಣು, ಮಳೆ, ಮನುಷ್ಯ ಮತ್ತು ಕಾಲವೂ ಬೆರೆತಿದೆ. ಬೆಳಗ್ಗೆ ಎದ್ದಾಗ ಮೊದಲು ನೆನಪಾಗುವುದು ಕಾಫಿಯೇ ಎನ್ನುವವರು ನಮ್ಮ ನಡುವೆ ಬಹಳ ಮಂದಿ. ನಿದ್ದೆಯ ಮಂಪರು ಇನ್ನೂ ಕಣ್ಣಲ್ಲಿರುವಾಗ ಬಿಸಿ ಕಾಫಿ ಕಪ್ ಕೈಗೆ ಸಿಕ್ಕರೆ ದಿನವೇ ಆರಂಭವಾದ ಅನುಭವ. ಕೆಲವರಿಗೆ ಅದು ಅಭ್ಯಾಸ.

ಕೆಲವರಿಗೆ ಚೈತನ್ಯ. ಮತ್ತೆ ಕೆಲವರಿಗೆ ಕಾಫಿ ಕುಡಿಯುವುದಕ್ಕಿಂತ ಅದರ ಪರಿಮಳ, ಕಪ್ ಹಿಡಿದು ಕುಳಿತುಕೊಳ್ಳುವ ಆ ಕೆಲವು ನಿಮಿಷಗಳೇ ಹೆಚ್ಚು ಮುಖ್ಯ. ಮನೆಗೆ ಯಾರಾದರೂ ಅತಿಥಿಗಳು ಬಂದಾಗಲೂ ನಮ್ಮ ಆತಿಥ್ಯದ ಮೊದಲ ಮಾತುಗಳಲ್ಲಿ ಕಾಫಿ ಇರುತ್ತದೆ. ಕಾಫಿ ಮಾಡಲಾ? ಎನ್ನುವ ಸರಳ ಪ್ರಶ್ನೆಯಲ್ಲಿಯೇ ನಮ್ಮ ಮನೆಯ ಆತ್ಮೀಯತೆ ಅಡಗಿರುತ್ತದೆ. ಗೆಳೆಯರ ಭೇಟಿ ಯಲ್ಲೂ ಕಾಫಿ.

Screenshot_5 ok

ಮಾತುಕತೆಯಲ್ಲೂ ಕಾಫಿ. ಕೆಲಸದ ನಡುವಿನ ವಿರಾಮದಲ್ಲೂ ಕಾಫಿ. ಹೀಗೆ ನೋಡಿದರೆ ಕಾಫಿ ನಮ್ಮ ದಿನಚರಿಯ ಒಂದು ಸಣ್ಣ ಭಾಗವಾಗಿ ಕಾಣುತ್ತದೆ. ಆದರೆ ಅದರ ಹಿಂದೆ ಇರುವ ಜಗತ್ತು ಮಾತ್ರ ಸಣ್ಣದಲ್ಲ. ನಾವು ಕಪ್‌ನಲ್ಲಿ ಕಾಣುವುದು ಕಾಫಿ ಪುಡಿ. ಅದರ ಹಿಂದೆ ಒಂದು ಗಿಡವಿದೆ. ಆ ಗಿಡದ ಹಿಂದೆ ಒಂದು ಮಣ್ಣಿದೆ. ಮಣ್ಣಿಗೆ ಮಳೆ ಬೇಕು, ನೆರಳು ಬೇಕು, ಸರಿಯಾದ ಹವಾಮಾನ ಬೇಕು. ಆ ಗಿಡವನ್ನು ಬೆಳೆಸುವ ರೈತನ, ಕೀಳುವ ಕಾರ್ಮಿಕರ ಶ್ರಮ ಬೇಕು.

ಸಂಸ್ಕರಣೆ, ಒಣಗಿಸುವಿಕೆ, ಹುರಿಯುವಿಕೆ, ಪುಡಿಮಾಡುವಿಕೆ ಹೀಗೆ ಹಲವು ಹಂತಗಳನ್ನು ದಾಟಿದ ಮೇಲಷ್ಟೇ ಆ ಕಾಫಿ ನಮ್ಮ ಕಪ್ ತಲುಪುತ್ತದೆ. ಹೀಗೆ ನಾವು ಬೆಳಿಗ್ಗೆ ಕುಡಿಯುವ ಒಂದು ಕಪ್ ಕಾಫಿಯ ಹಿಂದೆ, ನಮಗೆ ಕಾಣದಷ್ಟು ದೊಡ್ಡ ಶ್ರಮವಿದೆ. ಇಂತಹ ಕಾಫಿಯ ಕಥೆಯೂ ಅಷ್ಟೇ ಕುತೂಹಲಕರ. ಇಥಿಯೋಪಿಯಾದಿಂದ ಆರಂಭವಾದ ಕಾಫಿಯ ಪಯಣ ಯೆಮನ್ ಮೂಲಕ ಅರಬ್ ಜಗತ್ತಿಗೆ, ಅಲ್ಲಿಂದ ಯುರೋಪ್ ಮತ್ತು ಜಗತ್ತಿನ ಹಲವು ಭಾಗಗಳಿಗೆ ಹರಡಿತು. ಮುಂದೆ ಭಾರತಕ್ಕೂ ಅದು ಬಂದು ನೆಲೆ ಕಂಡುಕೊಂಡಿತು.

ವಿಶೇಷವಾಗಿ, ಪಶ್ಚಿಮ ಘಟ್ಟಗಳ ಮಳೆ, ಮಂಜು ಮತ್ತು ನೆರಳಿನ ವಾತಾವರಣ ಕಾಫಿಗೆ ಒಳ್ಳೆಯ ನೆಲೆಯಾಯಿತು. ಇಂದು ಕರ್ನಾಟಕದ ಕೊಡಗು, ಚಿಕ್ಕಮಗಳೂರು, ಹಾಸನದಂತಹ ಪ್ರದೇಶಗಳ ಹೆಸರು ಕೇಳಿದಾಗ ಕಾಫಿಯ ನೆನಪೂ ಬರುವುದು ಅದಕ್ಕೇ. ಆದರೆ ಹವಾಮಾನ ಬದಲಾಗುತ್ತಿದೆ. ಮಳೆಯ ಸ್ವರೂಪ ಬದಲಾಗುತ್ತಿದೆ. ತಾಪಮಾನ ಏರುತ್ತಿದೆ. ಕೀಟ ಮತ್ತು ರೋಗಗಳ ಸಮಸ್ಯೆಗಳು ಕೃಷಿಯನ್ನು ಕಾಡುತ್ತಿವೆ. ಇದರ ಪರಿಣಾಮ ಕಾಫಿ ಬೆಳೆಯ ಮೇಲೂ ಬೀಳುತ್ತಿದೆ.

ಹೀಗಾಗಿ ಕಾಫಿಯ ಕಥೆ ಕೃಷಿಯ ಕಥೆಯೂ ಹೌದು; ಕೃಷಿಯ ಕಥೆ ಪರಿಸರದ ಕಥೆಯೂ ಹೌದು. ಇನ್ನೊಂದು ಕಡೆ, ಕಾಫಿ ಕುಡಿಯುವ ನಮ್ಮ ಅಭ್ಯಾಸವೂ ಬದಲಾಗುತ್ತಿದೆ. ಮನೆಯ ಫಿಲ್ಟರ್ ಕಾಫಿಯಿಂದ ಹಿಡಿದು ಎಸ್ಪ್ರೆಸೊ, ಕ್ಯಾಪುಚಿನೊ, ಕೋಲ್ಡ ಬ್ರೂವರೆಗೆ ಕಾಫಿಯ ರೂಪಗಳು ಬದಲಾಗಿವೆ.

ಕಾಫಿಯ ಬೀಜ ಯಾವ ಪ್ರದೇಶದ್ದು, ಅದನ್ನು ಹೇಗೆ ಹುರಿಯಲಾಗಿದೆ, ಹೇಗೆ ತಯಾರಿಸಲಾಗಿದೆ ಎನ್ನುವುದರ ಬಗ್ಗೆಯೂ ಇಂದು ಆಸಕ್ತಿ ಹೆಚ್ಚಾಗಿದೆ. ಒಂದು ಕಾಲದಲ್ಲಿ ಕಾಫಿ ಬೇಕಾ? ಎಂಬ ಪ್ರಶ್ನೆ ಸಾಕಾಗಿತ್ತು. ಈಗ ಯಾವ ಕಾಫಿ? ಎನ್ನುವ ಪ್ರಶ್ನೆಯೂ ಎದುರಾಗುತ್ತಿದೆ. ಹೀಗಾಗಿ, ವಿಶ್ವ ಕಾಫಿ ದಿನವೆಂದರೆ ಆ ರುಚಿ ನಮ್ಮ ಕಪ್‌ಗೆ ಬರಲು ಕಾರಣವಾದ ರೈತನನ್ನು ನೆನಪಿಸಿಕೊಳ್ಳುವ ದಿನವೂ ಹೌದು.

ಕಾಫಿ ಬೆಳೆಯುವ ಮಣ್ಣನ್ನು, ಆ ಮಣ್ಣಿಗೆ ಜೀವ ಕೊಡುವ ಮಳೆಯನ್ನು, ಅದನ್ನು ಬೆಳೆಸುವ ಕೈಗಳನ್ನು ಗೌರವಿಸುವ ಸಂದರ್ಭವೂ ಹೌದು. ಕಾಫಿ ಕಹಿಯಾಗಿರಬಹುದು. ಆದರೆ ಅದರ ಕಥೆ ಯಲ್ಲಿ ಮನುಷ್ಯನ ಪರಿಶ್ರಮದ ಸಿಹಿಯಿದೆ. ಕಾಫಿ ಕುಡಿಯುವಾಗ ನಾವು ಬಹಳ ಸಲ ಅದರ ರುಚಿಯ ಬಗ್ಗೆ ಮಾತ್ರ ಯೋಚಿಸುತ್ತೇವೆ. ಕಹಿ ಎಷ್ಟು, ಸಿಹಿ ಎಷ್ಟು, ಪರಿಮಳ ಹೇಗಿದೆ ಎಂಬುದಷ್ಟೇ ನಮ್ಮ ಗಮನಕ್ಕೆ ಬರುತ್ತದೆ. ಆದರೆ ಕಾಫಿ ಇಷ್ಟೊಂದು ವರ್ಷಗಳಿಂದ ಮನುಷ್ಯನ ಬದುಕಿನಲ್ಲಿ ಉಳಿದುಕೊಂಡಿರುವುದಕ್ಕೆ ಕಾರಣ ಅದರ ರುಚಿ ಮಾತ್ರವಲ್ಲ.

ಅದು ಮನುಷ್ಯನ ದಿನಚರಿಯೊಂದಿಗೆ ಬೆರೆತುಹೋಗಿರುವ ಒಂದು ಅನುಭವ. ಒಂದು ಕಪ್ ಕಾಫಿ ಕೆಲವೊಮ್ಮೆ ಬೆಳಗಿನ ಆರಂಭ, ಕೆಲವೊಮ್ಮೆ ದಣಿದ ಮನಸ್ಸಿಗೆ ವಿರಾಮ, ಇನ್ನೊಮ್ಮೆ ಮಾತು ಆರಂಭಿಸುವ ನೆಪ. ಅದಕ್ಕಾಗಿಯೇ ಕಾಫಿಯ ಕಪ್ ಖಾಲಿಯಾದರೂ ಅದರೊಂದಿಗೆ ಕಳೆದ ಕ್ಷಣ ಖಾಲಿಯಾಗುವುದಿಲ್ಲ. ಜಗತ್ತು ವೇಗವಾಗಿ ಓಡುತ್ತಿರುವಾಗ, ಕೈಯಲ್ಲಿರುವ ಬಿಸಿ ಕಪ್ ಮಾತ್ರ ನಮ್ಮನ್ನು ಕ್ಷಣಕಾಲ ನಿಲ್ಲಿಸುತ್ತದೆ. ಇಂದು ಕಾಫಿ ಒಂದು ಜಾಗತಿಕ ವಾಣಿಜ್ಯ ಬೆಳೆ.

ದೊಡ್ಡ ಉದ್ಯಮ. ಲಕ್ಷಾಂತರ ಜನರ ಜೀವನೋಪಾಯ. ಅದು ಮನುಷ್ಯನ ಬದುಕಿನ ಬದಲಾವಣೆ ಗಳನ್ನು ತನ್ನೊಳಗೆ ದಾಖಲಿಸಿಕೊಂಡಿರುವ ಒಂದು ಸಣ್ಣ ಸಾಕ್ಷಿಯೂ ಹೌದು. ಕಾಫಿ ಪ್ರತಿದಿನದ ಬದುಕಿನ ನಡುವೆ ಸ್ವಲ್ಪ ಹೊತ್ತು ನಮ್ಮನ್ನೇ ನಾವು ಭೇಟಿಯಾಗಲು ಒಂದು ಅವಕಾಶವನ್ನು ಒದಗಿಸಿ ಕೊಡುತ್ತದೆ. ಮುಂದಿನ ಬಾರಿ ಕಾಫಿಯ ಕಪ್ ಕೈಗೆ ಬಂದಾಗ, ಅದನ್ನು ಬೇಗನೆ ಮುಗಿಸುವ ಬದಲು ಒಂದೆರಡು ನಿಮಿಷ ನಿಧಾನವಾಗಿ ಕುಡಿಯೋಣ. ರುಚಿಯನ್ನು ಮಾತ್ರವಲ್ಲ, ಅದರೊಂದಿಗೆ ಬಂದಿರುವ ಸಮಯವನ್ನೂ ಸವಿಯೋಣ