ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ತುಂಟತನದ ಹಿಂದಿನ ದೊಡ್ಡ ಮನಸ್ಸು

ಹನುಮಂತನ ಗಾಯನ ಎಷ್ಟು ಶಕ್ತಿಯುತವಾಗಿತ್ತೆಂದರೆ, ಸುತ್ತಲಿನ ಪ್ರಕೃತಿಯೇ ಆನಂದದಿಂದ ಕರಗಿತು. ಅಲ್ಲಿದ್ದ ಪ್ರತಿಯೊಂದು ಕಲ್ಲೂ ಕರಗಿ ನೀರಾಗತೊಡಗಿತು. ಮರಗಳೆಲ್ಲವೂ ಪುಷ್ಪವೃಷ್ಟಿ ಮಾಡಿದವು. ಪ್ರಾಣಿಪಕ್ಷಿಗಳು ಸುತ್ತಲೂ ಕುಳಿತು ಕಣ್ಣುಮುಚ್ಚಿ ಆನಂದದಿಂದ ಆಲಿಸತೊಡಗಿದವು. ಹನುಮಂತನು ಇದಾವುದೂ ತಿಳಿಯದೇ ತನ್ನ ಪಾಡಿಗೆ ತಾನು ಹಾಡುತ್ತಿದ್ದನು.

ತುಂಟತನದ ಹಿಂದಿನ ದೊಡ್ಡ ಮನಸ್ಸು

-

Ashok Nayak Ashok Nayak Oct 23, 2025 8:53 AM

ಡಾ.ಬಿ.ಆರ್.ಸುಹಾಸ್‌, ಬೆಂಗಳೂರು

ಸಕಲವಿದ್ಯಾ ಪಾರಂಗತನಾದ ರಾಮಭಕ್ತ ಹನುಮಂತನು ಸಂಗೀತದಲ್ಲೂ ಪರಿಣತನೆಂದು ಹೇಳಲಾಗಿದೆ. ಸಂಗೀತಕ್ಕೆ ಸಂಬಂಧಿಸಿದಂತೆ ಹನುಮಂತನ ಸಾಕಷ್ಟು ದಂತಕಥೆಗಳಿವೆ. ಅದರ ಪೈಕಿ ಒಂದು ಹೀಗಿದೆ: ಒಮ್ಮೆ, ತನ್ನ ಆಶ್ರಮದಲ್ಲಿದ್ದ ಹನುಮಂತನಿಗೆ ಹತ್ತಿರದ ವೀಣಾವಾದನವಾದ ಸದ್ದು ಕೇಳಿಸಿತು. ಆ ನಾದಮಾಧುರ್ಯಕ್ಕೆ ಮನಸೋತ ಅವನು, ಸಂಗೀತದಲ್ಲಿ ಆಸಕ್ತಿ ತಾಳಿ, ಸಂಗೀತದ ಎಲ್ಲಾ ಪ್ರಕಾರಗಳನ್ನೂ ಕಲಿಯಬೇಕೆಂದು ಮನಸ್ಸು ಮಾಡಿದ.

ಹಾಗಾಗಿ, ಆ ವೀಣಾವಾದನ ಬರುತ್ತಿದ್ದ ದಿಕ್ಕಿಗೆ ಓಡಿದ! ಅಲ್ಲಿ ನೋಡಿದರೆ, ದೇವರ್ಷಿ ನಾರದರು ಭಕ್ತಿಯಲ್ಲಿ ಮೈಮರೆತು ವೀಣಾವಾದನ ಮಾಡುತ್ತಿದ್ದರು. ಕೂಡಲೇ ಹನುಮಂತನು ಅವರ ಪಾದಗಳನ್ನು ಹಿಡಿದು, ‘ನನಗೆ ದಯವಿಟ್ಟು ಸಂಗೀತ ಕಲಿಸಿ.

ನೀವು ಒಪ್ಪುವವರೆಗೂ ನಿಮ್ಮ ಪಾದ ಬಿಡುವುದಿಲ್ಲ’ ಎಂದು ಬೇಡಿಕೊಂಡನು. ನಾರದರು ಕೂಡಲೇ ಒಪ್ಪಿಕೊಂಡರು. ನಾರದರಿಂದ ಸಂಗೀತ ಪಾಠ ಹೇಳಿಸಿಕೊಳ್ಳತೊಡಗಿದ ಹನುಮಂತ, ಕೆಲವೇ ದಿನ ಗಳಲ್ಲಿ ಸಂಗೀತದ ಸಕಲಾಂಶ ಗಳಲ್ಲೂ ಪರಿಣತನಾದ. ಎಲ್ಲಾ ರಾಗಗಳನ್ನೂ ಸಿದ್ಧಿಸಿಕೊಂಡ. ಎಲ್ಲಾ ವಾದ್ಯಗಳನ್ನೂ ನುಡಿಸಬಲ್ಲವನಾದ. ಹೀಗೆ ಚೆನ್ನಾಗಿ ಸಂಗೀತ ಕಲಿತ ಹನುಮಂತನನ್ನು ನಾರದರು ಪರೀಕ್ಷಿಸಬಯಸಿದರು. ಅದಕ್ಕಾಗಿ ಅವನಿಗೆ ಕಷ್ಟಕರವಾದ ಒಂದು ರಾಗವನ್ನು ಹಾಡಲು ಹೇಳಿದರು. ಹನುಮಂತನು ಪದ್ಮಾಸನದಲ್ಲಿ ಕುಳಿತು ಸುಶ್ರಾವ್ಯವಾಗಿ ಹಾಡತೊಡಗಿದ. ಅವನ ಹಾಡು ಅದೆಷ್ಟು ಸೊಗಸಾಗಿ, ದಿವ್ಯವಾಗಿತ್ತೆಂದರೆ, ಅದನ್ನು ಕೇಳುತ್ತಾ ನಾರದರು ಮೈಮರೆತು ನಿಶ್ಚಲರಾಗಿಬಿಟ್ಟರು. ಅವರ ದಿವ್ಯದೇಹದ ಒಂದೊಂದು ಅಂಗವೂ ರೋಮಾಂಚನಗೊಂಡಿತು.

ಇದನ್ನೂ ಓದಿ: Prakash Raghavachar Column: ಆಳುಗರನ್ನು ಅಹಂಕಾರ, ಅಟ್ಟಹಾಸ ಅಮರಿಕೊಂಡರೆ...

ಕಂಗಳು ಆನಂದದಿಂದ ಮುಚ್ಚಿಕೊಂಡವು. ಸಂತೋಷದಿಂದ ಅವರು ತಲೆದೂಗತೊಡಗಿದರು. ಕ್ರಮೇಣ, ವೀಣೆಯನ್ನು ಹಿಡಿದಿದ್ದ ಅವರ ಕೈಬಿಗಿ ಸಡಿಲಗೊಂಡು, ವೀಣೆಯು ಅವರ ಕೈಯಿಂದ ಜಾರಿಹೋಯಿತು. ಆದರೆ ಅವರಿಗೆ ಅದು ತಿಳಿಯಲೇ ಇಲ್ಲ!

ಹನುಮಂತನ ಗಾಯನ ಎಷ್ಟು ಶಕ್ತಿಯುತವಾಗಿತ್ತೆಂದರೆ, ಸುತ್ತಲಿನ ಪ್ರಕೃತಿಯೇ ಆನಂದದಿಂದ ಕರಗಿತು. ಅಲ್ಲಿದ್ದ ಪ್ರತಿಯೊಂದು ಕಲ್ಲೂ ಕರಗಿ ನೀರಾಗತೊಡಗಿತು. ಮರಗಳೆಲ್ಲವೂ ಪುಷ್ಪವೃಷ್ಟಿ ಮಾಡಿದವು. ಪ್ರಾಣಿಪಕ್ಷಿಗಳು ಸುತ್ತಲೂ ಕುಳಿತು ಕಣ್ಣುಮುಚ್ಚಿ ಆನಂದದಿಂದ ಆಲಿಸತೊಡಗಿದವು. ಹನುಮಂತನು ಇದಾವುದೂ ತಿಳಿಯದೇ ತನ್ನ ಪಾಡಿಗೆ ತಾನು ಹಾಡುತ್ತಿದ್ದನು.

ಹೀಗೆ ಸ್ವಲ್ಪ ಹೊತ್ತು ಹಾಡಿ, ಅಂತೂ ತನ್ನ ಹಾಡನ್ನು ಮುಗಿಸಿದನು ಹನುಮಂತ. ಆಗ ಸುತ್ತಲಿನ ಪ್ರಕೃತಿ ಪುನಃ ಸಹಜ ಸ್ಥಿತಿಗೆ ಬಂದಿತು. ಪ್ರಾಣಿಪಕ್ಷಿಗಳೆಲ್ಲವೂ ತಮ್ಮ ಪಾಡಿಗೆ ತಾವು ಹೊರಟು ಹೋದವು. ಕರಗಿದ್ದ ಕಲ್ಲುಗಳೆಲ್ಲವೂ ಪುನಃ ಗಟ್ಟಿಯಾದವು. ಆಗ ನಾರದರು ಕಣ್ತೆರೆದು ಮಂದಹಾಸ ಬೀರುತ್ತಾ ತಮ್ಮ ವೀಣೆಯನ್ನು ತೆಗೆದುಕೊಳ್ಳಲು ಕೈಚಾಚಿದರು. ಆದರೆ ಅವರ ವೀಣೆ, ಪಕ್ಕದ ಬಂಡೆಯಲ್ಲಿ ಸಿಕ್ಕಿಕೊಂಡುಬಿಟ್ಟಿತ್ತು.

ಹನುಮಂತನು ಹಾಡಿದಾಗ, ನಾರದರ ಕೈಯಿಂದ ವೀಣೆಯು ಜಾರಿ ಆ ಬಂಡೆಯ ಮೇಲೆ ಬಿದ್ದು, ಆ ಬಂಡೆಯು ಕರಗಿ ಪುನಃ ಗಟ್ಟಿಯಾದಾಗ, ವೀಣೆಯು ಅದರಲ್ಲಿ ಸಿಕ್ಕಿಕೊಂಡುಬಿಟ್ಟಿತ್ತು. ನಾರದರು ಎಷ್ಟು ಪ್ರಯತ್ನಿಸಿದರೂ ಆ ವೀಣೆಯನ್ನು ಬಿಡಿಸಿಕೊಳ್ಳಲಾಗಲಿಲ್ಲ. ಅವರು ಬೆವರುತ್ತಾ, ತಾವೇ ಹಾಡಿದರು. ಆದರೆ ಹನುಮಂತನಂತೆ ಕಲ್ಲನ್ನು ಕರಗಿಸುವಂತೆ ಹಾಡಲಾಗಲಿಲ್ಲ.

ಕೊನೆಗೆ ಅವರು ಹನುಮಂತನನ್ನು ಪುನಃ ಹಾಡಲು ಕೇಳಿಕೊಂಡರು. ಆದರೆ ಹನುಮಂತನು ತುಂಟನಗೆ ಬೀರುತ್ತಾ ಹಿಂದೇಟು ಹಾಕಿದನು. ನಾರದರು ಅವನ ಹಿಂದೆ ಹೋಗಲು, ಅವನು ವೇಗವಾಗಿ ನಡೆಯತೊಡಗಿದನು. ನಾರದರೂ ಬೇಗಬೇಗನೆ ಅವನ ಹಿಂದೆ ನಡೆಯುತ್ತಾ ಹೋದರು. ಹನುಮಂತನು ಈಗ ವೇಗವಾಗಿ ಓಡತೊಡಗಿದನು. ನಾರದರೂ ಅವನ ಹಿಂದೆ ಓಡಿದರು.

ಹನುಮಂತನು ಸುತ್ತಲಿನ ಬೆಟ್ಟ, ಗುಡ್ಡ, ಕಾಡುಗಳ ಓಡಿದನು. ನಾರದರೂ ಅವನ ಹಿಂದೆ ಓಡಿದರು. ಹೀಗೆ ಬಹಳ ಹೊತ್ತು ಕಾಡಿಸಿ ಹನುಮಂತನು ಕೊನೆಗೆ ತನ್ನ ಮೊದಲಿನ ಸ್ಥಳದಲ್ಲಿ ಕುಳಿತನು. ನಾರದರು ಬಸವಳಿಯುತ್ತಾ ಬಂದು, ‘ಯಾಕಪ್ಪಾ ಹೀಗೆ ಮಾಡಿದೆ?’ ಎಂದು ಕೇಳಿದರು.

ಅದಕ್ಕೆ ಹನುಮಂತನು ವಿನಯದಿಂದ ಕೈಮುಗಿಯುತ್ತಾ, ‘ಗುರುಗಳೇ, ನೀವು ನನ್ನ ಪ್ರಭುವಿನ ಮಹಾಭಕ್ತರು. ಜತೆಗೆ ನನ್ನ ಗುರುಗಳು. ಆದ್ದರಿಂದ, ನಿಮ್ಮ ಪಾದಧೂಳಿ ಈ ಸ್ಥಳದ ಬಿದ್ದು, ಈ ಸ್ಥಳವೆ ಪಾವನವಾಗಲಿ ಎಂದು ಹೀಗೆ ಮಾಡಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಹೇಳಿ ಹಾಡತೊಡಗಿದನು. ಆಗ ಕಲ್ಲುಗಳು ಪುನಃ ಕರಗಿ ನೀರಾಗಲು, ನಾರದರ ವೀಣೆಯು ಬಿಡುಗಡೆಯಾಗಿ ಅವರು ಅದನ್ನು ಎತ್ತಿಕೊಂಡರು.

ಅನಂತರ ಅವರು, ‘ನಿನ್ನ ಸಂಗೀತ ನಿನ್ನ ಒಡೆಯನನ್ನು ಸದಾ ಮೆಚ್ಚಿಸಲಿ’ ಎಂದು ಹನುಮಂತ ನನ್ನು ಆಶೀರ್ವದಿಸಿ ಹೊರಟರು. ಹನುಮಂತನ ದೈವಭಕ್ತಿ, ಗುರುಭಕ್ತಿ, ಗಾಯನಪ್ರತಿಭೆಗಳು ಅವರನ್ನು ಮೂಕವಿಸ್ಮಿತವಾಗಿಸಿದ್ದವು. ಹನುಮಂತನ ತುಂಟತನದ ಹಿಂದೆ ಇಂಥ ದೊಡ್ಡ ಮನಸ್ಸಿದೆ ಎಂದು ಅರಿತು ಅವರು ತಲೆದೂಗಿದರು!