ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಮನುಕುಲ ರಚಿಸಿದ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಗ್ರೇಸ್‌ ಅನಾಟಮಿ

ಇದು ಉತ್ತಮ ಸಂಶೋಧಿತ ಬರಹ ಎಂದು ವಿದ್ವಾಂಸ ವಲಯದಲ್ಲಿ ಪ್ರಸಿದ್ಧವಾಗಿದೆ. ಹಾಗಾಗಿ ಈ ಪುಸ್ತಕದ ಸಾರಾಂಶವನ್ನು ಸ್ಥೂಲವಾಗಿ ನೋಡಬಹುದು. 1842. ಹೆನ್ರಿ ಗ್ರೇ, 15 ವರ್ಷದ ಹುಡುಗ ನಾಗಿದ್ದಾಗ ಸೈಂಟ್ ಜಾರ್ಜ್ ಆಸ್ಪತ್ರೆಯನ್ನು ಸೇರಿದ. ೧೦ ವರ್ಷಗಳ ಕಾಲ ಅಧ್ಯಯನ ಮಾಡಿದ. 25 ವರ್ಷವಾಗುವ ವೇಳೆಗೆ ಪ್ರಖ್ಯಾತ ವೈದ್ಯನಾದ. ಆ ವೇಳೆಗೆ ಸರ್ವ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾದ ಸಂಶೋಧನೆಗಳನ್ನು ಮಾಡಿ ಪ್ರಬಂಧಗಳನ್ನು ಪ್ರಕಟಿಸಿದ್ದ.

ಮನುಕುಲ ರಚಿಸಿದ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಗ್ರೇಸ್‌ ಅನಾಟಮಿ

-

ಹಿಂದಿರುಗಿ ನೋಡಿದಾಗ

ಪ್ರತಿಯೊಂದು ಧರ್ಮಕ್ಕೂ ಒಂದು ಪ್ರಮಾಣಗ್ರಂಥ ವಿರುತ್ತದೆ. ಹಿಂದೂ ಧರ್ಮಕ್ಕೆ ಭಗವದ್ಗೀತೆ, ಕ್ರೈಸ್ತಧರ್ಮಕ್ಕೆ ಬೈಬಲ್ ಹಾಗೂ ಇಸ್ಲಾಂ ಧರ್ಮಕ್ಕೆ ಕುರಾನ್! ಹಾಗೆಯೇ ವೈದ್ಯರಿಗೆ ಹಾಗೂ ಶಸ್ತ್ರ ವೈದ್ಯರಿಗೆ ಒಂದು ಪ್ರಮಾಣ ಗ್ರಂಥವಿದೆ. ಅದುವೇ ಹೆನ್ರಿ ಗ್ರೇ ಬರೆದ ‘ಅಂಗರಚನಾ ವಿಜ್ಞಾನ’ ಅಥವಾ ‘ಗ್ರೇಸ್ ಅನಾಟಮಿ’. ಈ ಗ್ರಂಥವು ರಚನೆಯಾಗಿ ಇಂದಿಗೆ 167 ವರ್ಷಗಳಾಗಿವೆ.

ಆದರೂ ಇಂದಿಗೂ, ಈ ಮಹಾನ್ ಗ್ರಂಥವು ತೂಕದಲ್ಲೂ ಹಾಗೂ ಮಹತ್ತಿನಲ್ಲೂ ಮಹಾ ಭಾರತದ ಹಾಗೆ ಸರ್ವಶ್ರೇಷ್ಠ ಗ್ರಂಥವಾಗಿ ಉಳಿದು ಬಂದಿದೆ. ಈ ಗ್ರಂಥದ ರಚನೆ ಹಾಗೂ ರಚನೆಕಾರರ ಏಕಾ ಗ್ರತೆ ಮತ್ತು ಶ್ರಮ ಅದ್ಬುತವಾದದ್ದು, ಅಸದೃಶವಾದದ್ದು.

1858ರಲ್ಲಿ ಹೆನ್ರಿ ಗ್ರೇ (1827-1861) ಬರೆದ ಹಾಗೂ ಹೆನ್ರಿ ವಾಂಡೈಕ್ ಕಾರ್ಟರ್ (1831-1897) ಚಿತ್ರ ಗಳನ್ನು ಬಿಡಿಸಿದ ‘ಗ್ರೇಸ್ ಅನಾಟಮಿ: ಡಿಸ್ಕ್ರಿಪ್ಟಿವ್ ಆಂಡ್ ಸರ್ಜಿಕಲ್’ ಎಂಬ ಕೃತಿಯು, ಜಗತ್ತಿ ನಲ್ಲಿ ಅದುವರೆಗೂ ಪ್ರಕಟವಾದ ಎಲ್ಲ ಅಂಗರಚನಾ ವಿಜ್ಞಾನಗಳ ಕೃತಿಯನ್ನು ಮೀರಿ ಜನಪ್ರಿಯ ವಾಯಿತು. ಅಂದಿನಿಂದ ಇಂದಿನವರೆಗೆ, ಇದು ವೈದ್ಯ ವಿದ್ಯಾರ್ಥಿಗಳ ಹಾಗೂ ಶಸ್ತ್ರವೈದ್ಯರ ಪರಾಮರ್ಶನ ಗ್ರಂಥವಾಗಿ ಭಾರತವನ್ನೂ ಒಳಗೊಂಡಂತೆ ಜಗತ್ತಿನಾದ್ಯಂತ ಪ್ರಚಲಿತದಲ್ಲಿದೆ.

ಹೆನ್ರಿ ಗ್ರೇ, ಓರ್ವ ಅಂಗರಚನಾ ವಿಜ್ಞಾನಿ, ಶಸ್ತ್ರವೈದ್ಯ ಹಾಗೂ ಲೇಖಕ. ಹೆನ್ರಿ ಕಾರ್ಟರ್, ಅಪೋ ಥೆಕರಿ ಸರ್ಜನ್, ವೈದ್ಯ ಮತ್ತು ಚಿತ್ರಕಾರನಾಗಿದ್ದ. ಇವರಿಬ್ಬರೂ ಸೇರಿ ಮೂಲ ಗ್ರೇಸ್ ಅನಾಟಮಿ ಯನ್ನು ರಚಿಸಿದರು. ಗ್ರೇಸ್ ಅನಾಟಮಿ ಪ್ರಕಟವಾಗಿ 150 ವರ್ಷಗಳಾದ ಸಂದರ್ಭದಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ರುತ್ ರಿಚರ್ಡಸನ್ ಎಂಬಾಕೆಯು ‘ದಿ ಮೇಕಿಂಗ್ ಆಫ್ ಮಿಸ್ಟರ್ ಗ್ರೇಸ್ ಅನಾಟಮಿ’ ಎಂಬ ಪುಸ್ತಕವನ್ನು ಬರೆದು, ಇಬ್ಬರು ಹೆನ್ರಿಗಳು ಸೇರಿಕೊಂಡು ಹೇಗೆ ಪುಸ್ತಕ‌ವನ್ನು ಬರೆದರು, ಹೇಗೆ ಪ್ರಕಟಿಸಿದರು ಹಾಗೂ ಹೇಗೆ ಮಾರಾಟ ಮಾಡಿದರು ಎಂಬ ವಿಚಾರಗಳ ಬಗ್ಗೆ ಸಮಗ್ರವಾದ ಒಂದು ಪುಸ್ತಕವನ್ನು ಬರೆದರು. ಇದು ಉತ್ತಮ ಸಂಶೋಧಿತ ಬರಹ ಎಂದು ವಿದ್ವಾಂಸ ವಲಯದಲ್ಲಿ ಪ್ರಸಿದ್ಧವಾಗಿದೆ. ಹಾಗಾಗಿ ಈ ಪುಸ್ತಕದ ಸಾರಾಂಶವನ್ನು ಸ್ಥೂಲವಾಗಿ ನೋಡಬಹುದು.

ಇದನ್ನೂ ಓದಿ: Dr N Someshwara Column: ನಿದ್ರೆಯಿಂದ ಕೋಮಾಕ್ಕೆ, ಕೋಮಾದಿಂದ ಸಾವಿನೆಡೆಗೆ

1842. ಹೆನ್ರಿ ಗ್ರೇ, 15 ವರ್ಷದ ಹುಡುಗ ನಾಗಿದ್ದಾಗ ಸೈಂಟ್ ಜಾರ್ಜ್ ಆಸ್ಪತ್ರೆಯನ್ನು ಸೇರಿದ. 10 ವರ್ಷಗಳ ಕಾಲ ಅಧ್ಯಯನ ಮಾಡಿದ. ೨೫ ವರ್ಷವಾಗುವ ವೇಳೆಗೆ ಪ್ರಖ್ಯಾತ ವೈದ್ಯನಾದ. ಆ ವೇಳೆಗೆ ಸರ್ವ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾದ ಸಂಶೋಧನೆಗಳನ್ನು ಮಾಡಿ ಪ್ರಬಂಧಗಳನ್ನು ಪ್ರಕಟಿಸಿದ್ದ.

‘ಫೆಲೋ ಆಫ್ ದಿ ರಾಯಲ್ ಸೊಸೈಟಿ’ಯಾಗಿ ಆಯ್ಕೆಯಾದ. ಹೆನ್ರಿ, ಮಧ್ಯಮ ಎತ್ತರದ, ಸುರದ್ರೂಪಿ ಹಾಗೂ ಅಲಂಕಾರ ಪ್ರಿಯ ವ್ಯಕ್ತಿಯಾಗಿದ್ದ, ಬುದ್ಧಿವಂತನಾಗಿದ್ದ, ಕಷ್ಟಪಟ್ಟು ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತಿದ್ದ, ಜಾಣನಾಗಿದ್ದ, ಮಹತ್ವಾಕಾಂಕ್ಷಿಯಾಗಿದ್ದ ಹಾಗೂ ವೃತ್ತಿಯಲ್ಲಿ ಅಸಾ ಧಾರಣವಾದದ್ದೇನಾದರೂ ಮಾಡಬೇಕೆಂದು ಹಂಬಲಿಸುತ್ತಿದ್ದ. ಹೆನ್ರಿ ಕಾರ್ಟರ್ ತದ್ವಿರುದ್ಧ ಸ್ವಭಾವದ ವನಾಗಿದ್ದ. ನಾಚಿಕೆಯ ಸ್ವಭಾವದವನಾಗಿದ್ದ.

ಬಡವನಾಗಿದ್ದ ಕಾರಣ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಆಗಲಿಲ್ಲ. ಬದಲಿಗೆ ‘ಅಪೋಥೆಕರಿ’ಗೆ (ಔಷಧಗಳನ್ನು ತಯಾರಿಸುವ ಸ್ಥಳ) ಸೇರಿಕೊಂಡ. ಆನಂತರ ಶಸ್ತ್ರಕ್ರಿಯಾ ಪರೀಕ್ಷೆಯಲ್ಲಿ ಉತ್ತೀರ್ಣ‌ ನಾಗಿ ‘ಅಪೋಥೆಕರಿ ಸರ್ಜನ್’ ಆದ. ಈ ಪದವಿಯನ್ನು ಪಡೆದವರು ಅಂದಿನ ಇಂಗ್ಲೆಂಡಿನಲ್ಲಿ ಕುಟುಂಬ ವೈದ್ಯರಾಗಿ ಕೆಲಸವನ್ನು ಮಾಡಬಹುದಿತ್ತು.

1848ರಲ್ಲಿ ಅವನಿಗೆ ೧೭ ವರ್ಷ. ಲಂಡನ್ನಿನಲ್ಲಿ ಹಿರಿಯ ವೈದ್ಯರೊಬ್ಬರ ಸಹಾಯಕನಾಗಿ ದುಡಿಯುತ್ತಾ ಸೈಂಟ್ ಜಾರ್ಜ್ ಆಸ್ಪತ್ರೆಯ ವೈದ್ಯಕೀಯ ವಿದ್ಯಾಲಯವನ್ನು ಸೇರಿದ. ಇಲ್ಲಿ ಇಬ್ಬರು ಹೆನ್ರಿಗಳು ಪರಸ್ಪರ ಭೇಟಿಯಾದರು. ಆಗ ಹೆನ್ರಿ ಗ್ರೇ 21 ವರ್ಷ ವಯಸ್ಸಿನವನು.

೧೮೫೮ರಲ್ಲಿ ‘ಅನಾಟಮಿ: ಡಿಸ್ಕ್ರಿಪ್ಟಿವ್ ಆಂಡ್ ಸರ್ಜಿಕಲ್’ ಎನ್ನುವ ಹೆಸರಿನಲ್ಲಿ ಈ ಉದ್ಗ್ರಂಥವು ಪ್ರಕಟವಾಯಿತು. ಅದುವರೆಗೂ ಲಭ್ಯವಿದ್ದ ಅಂಗರಚನಾ ಪುಸ್ತಕಗಳಿಗೆ ಹೋಲಿಸಿದರೆ, ಈ ಹೊಸ ಪುಸ್ತಕದಲ್ಲಿ ಎರಡು ವಿಶೇಷ ಲಕ್ಷಣಗಳು ಇದ್ದವು.

ಪುಸ್ತಕದ ಪ್ರತಿಯೊಂದು ಪುಟವು ಶಸ್ತ್ರಕ್ರಿಯೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಅಗತ್ಯ ವಿವರಣೆ ಗಳನ್ನು ನೀಡುತ್ತಿತ್ತು. ಇರುವ ವಿಚಾರವನ್ನು ಇರುವ ಹಾಗೆ ಒಪ್ಪಿಸದೆ, ಪ್ರತಿಯೊಂದು ಅಂಗವನ್ನು ಛೇದಿಸಿದಾಗ ಹೇಗಿರುತ್ತದೆ, ಉರಿಯೂತಕ್ಕೆ ಒಳಗಾದಾಗ ಏನು ಬದಲಾವಣೆಗಳಾಗುತ್ತವೆ ಹಾಗೂ ಪೆಟ್ಟು ಬಿದ್ದಾಗ ಅದರ ಸ್ವರೂಪದಲ್ಲಿ ಕಂಡುಬರುವ ವೈಪರೀತ್ಯಗಳೇನು ಎಂಬುದನ್ನೂ ಒಳಗೊಂಡಿತ್ತು.

ಈ ಪುಸ್ತಕದಲ್ಲಿರುವ ವರ್ಣನೆ ಹಾಗೂ ಚಿತ್ರಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಪರಸ್ಪರ ಪೂರಕವಾಗಿವೆ. ಇಂಥ ಲಕ್ಷಣವಿರುವ ವೈದ್ಯಕೀಯ ಪುಸ್ತಕ ಮತ್ತೊಂದಿಲ್ಲ. ಕಾರ್ಟರ್, ಶವಗಳನ್ನು ಸ್ವಯಂ ಛೇದಿಸಿ, ಪ್ರತಿಯೊಂದು ವಿವರವನ್ನು ಅಧ್ಯಯನ ಮಾಡಿ, ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ರಚಿಸಿದ. ಇದು ನಿಜಕ್ಕೂ ಒಂದು ಹೆಗ್ಗಳಿಕೆಯೇ ಸರಿ.

ಈ ಪುಸ್ತಕವು ಪ್ರಕಟಣೆಯಾದ ಅತ್ಯಲ್ಪ ಕಾಲದಲ್ಲಿಯೇ ಅಪಾರ ಜನಪ್ರಿಯತೆಯನ್ನು ಪಡೆಯಿತು. ಈ ಪುಸ್ತಕವು ಎಲ್ಲರ ಕೈಗೂ ಎಟುಕಲಿ ಎನ್ನುವ ಉದ್ದೇಶದಿಂದ ಕಡಿಮೆ ಬೆಲೆಯನ್ನು ಇಟ್ಟಿದ್ದರು. ಇದರ ಜತೆಗೆ ಪುಸ್ತಕದ ಭಾಷೆ ಹಾಗೂ ಚಿತ್ರಗಳನ್ನು ವೈದ್ಯ ವಿದ್ಯಾರ್ಥಿಗಳು ಮೆಚ್ಚಿಕೊಂಡಿದ್ದರು. ತ್ವರಿತವಾಗಿ ಮತ್ತೆರಡು ಆವೃತ್ತಿಗಳು ಪ್ರಕಟವಾದವು. ಪ್ರತಿ ಆವೃತ್ತಿಯಲ್ಲಿ ಹೊಸ ಹೊಸ ವಿಚಾರ ಗಳನ್ನು ಹಾಗೂ ಆಧುನಿಕ ಸಂಶೋಧನೆಗಳನ್ನು ಸೇರಿಸಿದರು. ಆದರೆ ದುರದೃಷ್ಟವಶಾತ್ ಹೆನ್ರಿ ಗ್ರೇ ತನ್ನ 34ನೆಯ ವಯಸ್ಸಿನಲ್ಲಿ ಸಿಡುಬು ಕಾಯಿಲೆಗೊಳಗಾಗಿ ಅಕಾಲ ಮೃತ್ಯುವಿಗೆ ತುತ್ತಾದ.

ಗ್ರೇಸ್ ಅನಾಟಮಿಯನ್ನು ಇದುವರೆಗೂ 14 ಸಂಪಾದಕರು ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಈಗ ಮಾರುಕಟ್ಟೆಯಲ್ಲಿ ಗ್ರೇಸ್ ಅನಾಟಮಿಯ 42ನೆಯ ಆವೃತ್ತಿ ಮಾರಾಟವಾಗುತ್ತಿದೆ. ೪೨ ಆವೃತ್ತಿಗಳು ಅಸಂಖ್ಯ ಮುದ್ರಣ ಮತ್ತು ಮರುಮುದ್ರಣಗಳನ್ನು ಕಂಡಿವೆ. ಎಷ್ಟು ಮರುಮುದ್ರಣಗಳನ್ನು ಕಂಡಿವೆ ಎನ್ನುವುದಕ್ಕೆ ಅಧಿಕೃತವಾದ ಅಂಕಿ-ಸಂಖ್ಯೆಗಳು ದೊರೆಯುತ್ತಿಲ್ಲ.

ಏಕೆಂದರೆ ಗ್ರೇಸ್ ಅನಾಟಮಿಯ ಪ್ರಕಾಶಕರು ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಹೋಗು ತ್ತಿದ್ದಾರೆ. ಹಾಗೆಯೇ ಬ್ರಿಟನ್ ಆವೃತ್ತಿ, ಅಮೆರಿಕನ್ ಆವೃತ್ತಿ ಹಾಗೂ ಇತರ ದೇಶಗಳ ಆವೃತ್ತಿಗಳು ಪ್ರಕಟವಾಗಿವೆ. ಒಂದು ಅಂದಾಜಿನಂತೆ ಇದುವರೆಗೂ ಸುಮಾರು 52 ಲಕ್ಷ ಪುಸ್ತಕಗಳು ಮಾರಾಟ ವಾಗಿವೆ ಎನ್ನಬಹುದು. ಗ್ರೇಸ್ ಅನಾಟಮಿ ಇಷ್ಟು ಜನಪ್ರಿಯವಾಗಲು ಕಾರಣವೇನು? ಅದು ಸ್ಪಷ್ಟ. ಇವರು ಎಷ್ಟು ಶ್ರಮ ಹಾಗೂ ಮುತುವರ್ಜಿಯನ್ನು ವಹಿಸಿ ಈ ಪುಸ್ತಕವನ್ನು ರಚಿಸಿದ್ದಾರೆ ಎನ್ನುವು ದನ್ನು ಪರಾಮರ್ಶಿಸುವುದು ಒಳಿತು. ಅದರ ಕಡೆ ಒಂದು ಪಕ್ಷಿನೋಟವನ್ನು ಹರಿಸೋಣ.

ಹೆನ್ರಿದ್ವಯರು ಪ್ರತಿಯೊಂದು ಅಂಗವನ್ನು ಸ್ವಯಂ ಅಧ್ಯಯನ ಮಾಡಿದರು. ಪ್ರತಿಯೊಂದು ಅಂಗವನ್ನು ಹಂತ ಹಂತವಾಗಿ ಛೇದಿಸಿ ವಿವರಗಳನ್ನು ಗ್ರಹಿಸಿ ದಾಖಲಿಸಿದರು. ಇದಕ್ಕಾಗಿ ವಿಚ್ಛೇದ ನಾಲಯದಲ್ಲಿ ಅವರು ಕಳೆದ ಹಗಲು ರಾತ್ರಿಗಳಿಗೆ ಕೊನೆಯೇ ಇಲ್ಲ.

ಒಬ್ಬ ಶಸ್ತ್ರವೈದ್ಯನು ಮನುಷ್ಯನ ಯಾವುದೇ ಅಂಗದ ಮೇಲೆ ಶಸ್ತ್ರಕ್ರಿಯೆಯನ್ನು ಮಾಡಿದರೆ, ಅವನ ಹಾದಿಯಲ್ಲಿ ಬರುವ ಪ್ರತಿಯೊಂದು ರಚನೆಗಳನ್ನು- ಚರ್ಮ, ಕೊಬ್ಬಿನ ಪದರ, ಸ್ನಾಯು, ರಕ್ತನಾಳ ಗಳು ಎಲ್ಲವನ್ನೂ- ಇರುವ ಹಾಗೆಯೇ ವಿವರಿಸಿದರು. ಈ ರೀತಿಯಾದ ಕ್ರಮಬದ್ಧ ತಿಳಿವನ್ನು ವಿಶ್ವ ಯಾವುದೇ ಪುಸ್ತಕ ಅದುವರೆಗೂ ನೀಡಿರಲಿಲ್ಲ.

ಕಾರ್ಟರ್, ಛೇದಿತ ಭಾಗ ಹೇಗೆ ಕಾಣುತ್ತದೆಯೋ ಹಾಗೆಯೇ ಚಿತ್ರವನ್ನು ಬರೆಯಲಿಲ್ಲ. ಪ್ರತಿಯೊಂದು ಅಂಗದಲ್ಲಿ ಹಲವು ಸ್ನಾಯುಗಳು, ನರಗಳು ಹಾಗೂ ರಕ್ತನಾಳಗಳು ಇರುತ್ತವೆ. ಹಾಗಾಗಿ ಪ್ರತಿಯೊಂದು ಭಾಗವನ್ನು ವಿವರಿಸುವಾಗ, ಅವುಗಳ ಸ್ಥಾನ, ಉಳಿದ ಭಾಗಗಳೊಡನೆ ಹೇಗೆ ಸಂಬಂಧಿತವಾಗಿವೆ, ಯಾವುದರ ನಂತರ ಯಾವುದು ಬರುತ್ತದೆ ಇತ್ಯಾದಿ ವಿವರಗಳನ್ನೆಲ್ಲ ಚಿತ್ರಮುಖೇನ ವಿವರಿಸಿದ.

ಒಂದು ಪುಟದಲ್ಲಿ ಬರೆಯಬಹುದಾದ ವಿವರಣೆಯನ್ನು ಒಂದು ಚಿತ್ರವು ಸಮರ್ಥವಾಗಿ ನೀಡುತ್ತದೆ ಎನ್ನುವ ಮಾತು ಅಕ್ಷರಶಃ ನಿಜವಾಯಿತು.

ಪುನರಾವರ್ತಿತ ಪರಿಷ್ಕರಣೆಯ ಪ್ರತೀಕ ಈ ಗ್ರಂಥ. ಇವರಿಬ್ಬರು ಗಮನಿಸಿದ ಅಂಶಗಳು ನಿಖರ ವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮತ್ತೆ ಮತ್ತೆ ಪರಾಮರ್ಶನ ಮಾಡಿ, ಅಗತ್ಯ ಬಿದ್ದರೆ ಪರಿಷ್ಕರಿಸಿ, ಅಂತಿಮ ಸ್ವರೂಪವನ್ನು ನೀಡಿರುವುದು ಈ ಪುಸ್ತಕದ ಹೆಗ್ಗಳಿಕೆಯಾಗಿದೆ.

ವೈದ್ಯಕೀಯ ವಿಜ್ಞಾನದಲ್ಲಿ ನಾಮದಾನಗಳು (ಎಪೋನಿಮ್ಸ್) ಅತ್ಯಧಿಕವಾಗಿವೆ. ಉದಾಹರಣೆಗೆ ಪ್ಯಾಲೋಪಿಯನ್ ಟ್ಯೂಬ್. ಇದು ಗರ್ಭಾಶಯಕ್ಕೆ ಹೊಂದಿಕೊಂಡಿರುವ ನಾಳ. ಇದನ್ನು ಮೊದಲ ಬಾರಿಗೆ ಗಮನಿಸಿ ವಿವರಿಸಿದವನು ‘ಗೇಬ್ರಿಯಲ್ ಫ್ಯಾಲೋಪಿಯೊ’ ಎಂಬ ಇಟಾಲಿಯನ್ ಅಂಗ ರಚನಾ ವಿಜ್ಞಾನಿ. ಆತನ ಗೌರವಾರ್ಥ ಈ ಅಂಗವನ್ನು ‘ಫ್ಯಾಲೋಪಿಯನ್ ಟ್ಯೂಬ್’ ಎಂದು ಕರೆದರು.

ಹೀಗೆ ವೈದ್ಯಕೀಯದಲ್ಲಿ ನಾಮದಾನಗಳ ಸಂಖ್ಯೆ ಅಸಂಖ್ಯ. ಅವನ್ನು ತಪ್ಪಿಸಿ, ವೈಜ್ಞಾನಿಕ ನಾಮಧೇಯವನ್ನು ನೀಡುವ ಪ್ರಯತ್ನಗಳು ಈ ಗ್ರಂಥದಲ್ಲಾಗಿದೆ. ಈಗ ಫ್ಯಾಲೋಪಿಯನ್ ಟ್ಯೂಬ್ ಎಂಬ ಪದಕ್ಕೆ ಬದಲಾಗಿ ‘ಯೂಟೆರೈನ್ ಟ್ಯೂಬ್’ ಎಂಬ ಪದವನ್ನು ಬಳಸುವ ಪದ್ಧತಿಯು ಆರಂಭ ವಾಗಿದೆ. ಹಾಗಾಗಿ ಕನ್ನಡದಲ್ಲಿ ‘ಫ್ಯಾಲೋಪಿಯನ್ ನಾಳ’ ಎನ್ನುವ ಬದಲು, ‘ಗರ್ಭನಾಳ’ ಎಂದು ಸರಳವಾಗಿ ಹೇಳಲು ಸಾಧ್ಯವಾಗಿದೆ.

ಈ ನಿಯಮದನ್ವಯ ಯುಸ್ಟೇಶಿಯನ್ ಟ್ಯೂಬ್- ಆಡಿಟರಿ ಟ್ಯೂಬ್ ಆಗಿದೆ. ಸರ್ಕಲ್ ಆಫ್ ವಿಲ್ಲಿಸ್- ಸೆರೆಬ್ರಲ್ ಆರ್ಟೀರಿಯಲ್ ಸರ್ಕಲ್ ಆಗಿದೆ. ಐಲೆಟ್ಸ್ ಆಫ್ ಲ್ಯಾಂಗರ್ಹಾನ್ಸ್- ಪ್ಯಾಂಕ್ರಿಯಾಟಿಕ್ ಐಲೆಟ್ಸ್ ಆಗಿದೆ... ಇತ್ಯಾದಿ. ‌

ಗ್ರೇ ಮೂಲಕೃತಿಯು ಪ್ರತಿ ಆವೃತ್ತಿಯಲ್ಲಿ ಸಮರ್ಥ ಸಂಪಾದಕರಿಂದ ವಿಸ್ತೃತವಾಗಿ ಪರಿಷ್ಕಾರಕ್ಕೆ ಒಳಗಾಗಿ ಪ್ರಕಟವಾಗುತ್ತಿದೆ. ವಿವಿಧ ಸಂಪಾದಕರು ಮಾಡಿದ ಕೆಲವು ಸುಧಾರಣೆಗಳು ಹೀಗಿವೆ:

ಪ್ರತಿಯೊಂದು ರಕ್ತನಾಳದ ಒಳಗೆ ಬಣ್ಣ ಬಣ್ಣದ ಮೇಣ ಇಲ್ಲವೇ ರಾಳವನ್ನು ಚುಚ್ಚಿದಾಗ, ಅದು ಆ ರಕ್ತನಾಳದ ಎಲ್ಲ ಕವಲು, ಉಪಕವಲುಗಳ ಮೂಲಕ ಸಾಗಿ, ಒಂದು ವೃಕ್ಷದ ರೂಪವನ್ನು ತಳೆಯಿತು. ಆಗ ರಕ್ತನಾಳದ ವ್ಯಾಪ್ತಿಯು ನಿಖರವಾಗಿ ಹಾಗೂ ನಿಚ್ಚಳವಾಗಿ ಕಂಡಿತು. ಹೀಗೆ ಎಲ್ಲ ರಕ್ತನಾಳಗಳನ್ನು ಅಧ್ಯಯನ ಮಾಡಿದರು.

ಪ್ರತಿಯೊಂದು ಅಂಗದ ವಿವಿಧ ಶ್ರೇಣಿಗಳನ್ನು ಪರಿಗಣಿಸಿ, ಅವನ್ನಷ್ಟೇ ಛೇದಿಸಿ, ಸೂಕ್ತ ವಿವರಣೆ ಯನ್ನು ಚಿತ್ರ ಸಮೇತ ನೀಡಿರುವುದು ನಿಜಕ್ಕೂ ಉಪಯುಕ್ತವಾಗಿದೆ. ಪದರ ಪದರವಾದ ವಿವರಣೆ ಗಳು, ಎಲ್ಲಿ ನಾರುಪಟ್ಟೆಯು (ಫೇಶಿಯ) ವಿಭಜನೆ ಯಾಗುತ್ತದೆ, ಎಲ್ಲಿ ನರರಕ್ತನಾಳಗಳ ಕಂತೆಯು (ನ್ಯೂರೋವ್ಯಾಸ್ಕ್ಯುಲಾರ್ ಬಂಡಲ್) ಸಾಗುತ್ತದೆ ಇತ್ಯಾದಿ ವಿವರಗಳು ಸಮಗ್ರವಾಗಿ ದೊರೆಯುವ ಕಾರಣ, ಅನೇಕ ಶಸ್ತ್ರಚಿಕಿತ್ಸೆಗಳನ್ನು ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸಲು ಸಾಧ್ಯ ವಾಗಿದೆ.

ಮನುಷ್ಯನ ದೇಹದಲ್ಲಿ ಯಾವತ್ತಿಗೂ ೨+೨=೪ ಆಗುವುದಿಲ್ಲ. ಒಂದು ರಕ್ತನಾಳವು ತನ್ನ ಸಹಜ ಸ್ಥಾನದಲ್ಲಿರದೆ ಮತ್ತೆಲ್ಲಿಗೋ ಸ್ಥಾನಾಂತರವಾಗಿರಬಹುದು. ಹೆಚ್ಚುವರಿ ರಕ್ತನಾಳವಿರಬಹುದು. ವೈಪರೀತ್ಯಗಳಿರಬಹುದು. ಅರೆಬರೆ ಬೆಳೆದಿರಬಹುದು. ಮುರುಟಿಹೋಗಿರಬಹುದು. ಹಾಗಾಗಿ ಗ್ರೇಸ್ ಅನಾಟಮಿಯ ಹೊಸ ಆವೃತ್ತಿಗಳಲ್ಲಿ ಸರ್ವೇಸಾಮಾನ್ಯ ವಿವರಣೆಯ ಜತೆಯಲ್ಲಿ, ಎಲ್ಲೆಲ್ಲಿ ವೈಪರೀತ್ಯಗಳು ಕಂಡುಬರಬಹುದೋ ಅಲ್ಲೆಲ್ಲ ಆ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ. ಇದು ಅತ್ಯುಪಯುಕ್ತ ಮಾಹಿತಿಯಾಗಿದೆ.

ಸ್ತನ, ತಲೆ, ಕುತ್ತಿಗೆ, ಜನನಾಂಗಗಳ ಕ್ಯಾನ್ಸರ್ ಹರಡುವುದನ್ನು ತಿಳಿಯಬೇಕಾದರೆ, ಆಯಾ ಅಂಗಗಳ ಕ್ಷೀರನಾಳ ವ್ಯವಸ್ಥೆಯು (ಲಿಂಫ್ಯಾಟಿಕ್ ಸಿಸ್ಟಮ್) ನಮಗೆ ತಿಳಿದಿರಬೇಕು. ಜತೆಗೆ ‘ಚೌಕೀದಾರ ಕ್ಷೀರ ಗಂಟಿನ’ (ಸೆಂಟಿನೆಲ್ ಲಿಂಫ್ ನೋಡ್; ಕಾನ್ಸರ್ ಕಣಗಳು ಇದರ ಕಣ್ಣು ತಪ್ಪಿಸಿ ಮುಂದೆ ಹೋಗ ಲಾರವು. ಹಾಗಾಗಿ ಕ್ಯಾನ್ಸರ್ ಹರಡುವಿಕೆಯನ್ನು ಪತ್ತೆಹಚ್ಚಲು ಈ ಗಂಟನ್ನು ಪರೀಕ್ಷಿಸುವು ದುಂಟು) ನಿಖರ ವಿವರಣೆಗಳು ಈಗ ಸಮಗ್ರವಾಗಿ ದೊರೆಯುತ್ತಿವೆ.

ಆಧುನಿಕ ವಿಜ್ಞಾನದ ಕೊಡುಗೆಗಳಾದ ಎಕ್ಸ್-ರೇ, ಸಿಟಿ ಸ್ಕ್ಯಾನ್, ಎಂಆರ್‌ಐ, ೩-ಡಿ ಚಿತ್ರಣಗಳು ಮನುಷ್ಯನ ಅಂಗಗಳ ಬಹುಮುಖ ಆಯಾಮಗಳನ್ನು ಸೊಗಸಾಗಿ ಚಿತ್ರಿಸಿವೆ. ೩-ಡಿ ಮಾಡಲ್ ಹಾಗೂ ೩-ಡಿ ಚಿತ್ರಣಗಳು ಇಂದು ಗ್ರೇಸ್ ಅನಾಟಮಿಗೆ ಪೂರಕವಾಗಿವೆ. ಹೊಸ ಆವೃತ್ತಿಗಳು ಈ ಎಲ್ಲ ಅರಿವನ್ನು ಒಳಗೊಂಡಿವೆ. ಈ ಡಿಜಿಟಲ್ ಯುಗದಲ್ಲಿಯೂ ಗ್ರೇಸ್ ಅನಾಟಮಿಯು ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ ಎನ್ನುವಾಗ ಇದರ ಮಹತ್ವವು ಅರಿವಾಗುತ್ತದೆ.

ಕಾಲಾಯ ತಸೆ ನಮಃ

ಗ್ರೇಸ್ ಅನಾಟಮಿಯು ಕೇವಲ ಮತ್ತೊಂದು ಪರಾಮರ್ಶನ ವೈದ್ಯಕೀಯ ಗ್ರಂಥವಲ್ಲ. ಇದು ಮನುಷ್ಯರು, ಮನುಷ್ಯರ ದೇಹರಚನೆಯ ಬಗ್ಗೆ ಬರೆದ ಜೀವಂತ ದಾಖಲೆ. ಮನುಷ್ಯನು ತನ್ನನ್ನು ತಾನು ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳಲು ನೆರವಾದ ಈ ಪುಸ್ತಕವನ್ನು ವಿದ್ವಾಂಸರು ಕಾಲಕಾಲ ಕ್ಕೆ ಪರಿಷ್ಕರಿಸುತ್ತಲೇ ಬಂದು, ಇದರ ಮೌಲ್ಯ ಮತ್ತು ಮಹತ್ವವನ್ನು ಹೆಚ್ಚಿಸಿದ್ದಾರೆ.

ಹಲವು ತಲೆಮಾರುಗಳ ಸಮರ್ಥ ಮಿದುಳುಗಳೆಲ್ಲವೂ ಸೇರಿ ರಚಿಸಿರುವ ಈ ಕೃತಿಯನ್ನು, ಮುಂದಿನ ತಲೆಮಾರುಗಳ ಪ್ರತಿಭಾವಂತರು ಮತ್ತೆ ಮತ್ತೆ ಪರಿಷ್ಕರಿಸಿ ಮಾನವನ ತಿಳಿವಳಿಕೆಯನ್ನು ಹೆಚ್ಚಿಸ ಲಿದ್ದಾರೆ. ಕೃತಕ ಬುದ್ಧಿಮತ್ತೆಯ (ಎಐ) ಯುಗದಲ್ಲೂ ಇಂಥ ಗೌರವಕ್ಕೆ ಪಾತ್ರವಾದ ಮತ್ತೊಂದು ವೈದ್ಯಕೀಯ ಪುಸ್ತಕವಿಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು.