Raghav Sharma Nidle Column: ಬಿಹಾರ ಜೆಡಿಯು ಕಚೇರಿಯೊಳಗೆ ಕಾಪುವಿನ ಹುಡುಗ !
ಮಂಗಳೂರು ಮೂಲದವರಾಗಿದ್ದು 10 ಬಾರಿ ಸಂಸದರಾಗಿದ್ದ, ಮಾಜಿ ಕೇಂದ್ರ ಸಚಿವ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಒಡನಾಡಿಯಾಗಿದ್ದ ಅನಿಲ್ ಹೆಗ್ಡೆ, ಜನತಾದಳದ ದಿನಗಳಿಂದಲೇ ನಿತೀಶ್ ಕುಮಾರ್‌ಗೆ ಪರಿಚಿತರು. ಜಾರ್ಜ್ ಅವರಿಗೆ ಅನಾರೋಗ್ಯ ಉಂಟಾಗಿ, ನಂತರ ಅವರ ಪತ್ನಿ ಲೈಲಾ ಕಬೀರ್ ನೋಡಿಕೊಳ್ಳುತ್ತಿದ್ದಾಗ, ನಿತೀಶ್ ಕುಮಾರ್ ಅವರು ಕರೆ ಮಾಡಿ, ನೀನು ನನ್ನೊಂದಿಗೆ ಇರಬೇಕು ಎಂದು ಹೇಳಿದ್ದರಿಂದ, ನಂತರ ಹೆಗ್ಡೆಯವರಿಗೆ ಪಟನಾದ ಜೆಡಿಯು ಕಚೇರಿಯೇ ಮನೆಯಾಗಿ ಬಿಟ್ಟಿತು.
-
Ashok Nayak
Nov 5, 2025 6:08 AM
ಜನಪಥ
ರಾಘವ ಶರ್ಮ ನಿಡ್ಲೆ
ಬಿಹಾರದಲ್ಲಿ 20 ವರ್ಷಗಳಿಂದ ಜೆಡಿಯು ಅಧಿಕಾರದಲ್ಲಿದ್ದರೂ, ತಮಗಾಗಿ ಪ್ರತ್ಯೇಕ ಮನೆ-ಬಂಗಲೆಗಳನ್ನು ಕಟ್ಟಿಕೊಳ್ಳದೆ, ಅದೇ ಸಣ್ಣ ಕೋಣೆಯಲ್ಲಿ ನಿತ್ಯಕ್ಕೆ ಬೇಕಾಗುವ ಬಟ್ಟೆ-ಸಾಮಗ್ರಿಗಳನ್ನಿಟ್ಟುಕೊಂಡು ಪಕ್ಷ ಮತ್ತು ಜನಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ ಅನಿಲ್ ಪ್ರಸಾದ್ ಹೆಗ್ಡೆ. ಅವರ ಪ್ರಾಮಾಣಿಕತೆ, ಸರಳತೆಯೇ ರಾಜಕೀಯದಲ್ಲಿ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.
ಆಗ ರಾತ್ರಿ ೯ ಗಂಟೆ ಆಗಿತ್ತು. ತಮ್ಮ ಬಲಭುಜದ ಮೇಲೆ ಬ್ಯಾಗ್ ಏರಿಸಿಕೊಂಡು ಬಂದ ವ್ಯಕ್ತಿ, “ತಡವಾಯಿತು. ಬೇಸರ ಮಾಡಿಕೊಳ್ಳಬೇಡಿ. ಇಡೀ ಬಿಹಾರವೇ ಛಟ್ ಪೂಜೆ ಸಂಭ್ರಮದಲ್ಲಿದೆ. ಪೂಜೆಯಲ್ಲಿ ಭಾಗಿಯಾಗಲು ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ" ಎನ್ನುತ್ತಾ ಪಟನಾದ ವೀರ್ ಚಂದ್ ಪಟೇಲ್ ಮಾರ್ಗದಲ್ಲಿರುವ ಜೆಡಿಯು ಕೇಂದ್ರ ಕಚೇರಿಯ ತಮ್ಮ ಕೋಣೆಗೆ ನನ್ನನ್ನು ಕರೆದುಕೊಂಡು ಹೋದರು.
ತಿಳಿ ಹಸಿರು ಬಣ್ಣದ ಕುರ್ತಾ ಮತ್ತು ಕೊಂಚ ಕಡು ಹಸಿರು ಬಣ್ಣದ ಪ್ಯಾಂಟ್ ಏರಿಸಿಕೊಂಡಿದ್ದ, ಕುರುಚಲು ಗಡ್ಡದ, ಸಾಮಾನ್ಯ ಕಾರ್ಯಕರ್ತನಂತೆ ಕಾಣುತ್ತಿದ್ದ, ಸಿಎಂ ನಿತೀಶ್ ಕುಮಾರ್‌ಗೆ ಅತ್ಯಂತ ಆಪ್ತರಾಗಿರುವ ಅವರು ಮತ್ಯಾರೂ ಅಲ್ಲ- ಕನ್ನಡಿಗ ಅನಿಲ್ ಪ್ರಸಾದ್ ಹೆಗ್ಡೆ. ಈಚೆಗಷ್ಟೇ ತಮ್ಮ ರಾಜ್ಯಸಭೆ ಅವಧಿ ಪೂರ್ಣಗೊಂಡಿದ್ದರಿಂದ ಮತ್ತೆ ಜೆಡಿಯು ಕಚೇರಿಯ ಸಣ್ಣ ಕೊಠಡಿಯೇ ಅವರ ವಾಸಸ್ಥಾನವಾಗಿ ಬಿಟ್ಟಿದೆ.
ಸದ್ಯ ಪಕ್ಷದ ಚುನಾವಣಾ ರಿಟರ್ನಿಂಗ್ ಆಫೀಸರ್ ಆಗಿರುವ ಅನಿಲ್ ಹೆಗ್ಡೆ, ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ಮತ್ತು ಜೆಡಿಯುನ ಸ್ಥಾಪಕ ಪ್ರಧಾನ ಕಾರ್ಯದರ್ಶಿಯೂ ಹೌದು. ಬಿಹಾರದಲ್ಲಿ 20 ವರ್ಷಗಳಿಂದ ಜೆಡಿಯು ಅಧಿಕಾರದಲ್ಲಿದ್ದರೂ, ತಮಗಾಗಿ ಪ್ರತ್ಯೇಕ ಮನೆ-ಬಂಗಲೆಗಳನ್ನು ಕಟ್ಟಿಕೊಳ್ಳದೆ, ಅದೇ ಸಣ್ಣ ಕೋಣೆಯಲ್ಲಿ ನಿತ್ಯಕ್ಕೆ ಬೇಕಾಗುವ ಬಟ್ಟೆ-ಸಾಮಗ್ರಿ ಗಳನ್ನಿಟ್ಟುಕೊಂಡು ಪಕ್ಷ ಮತ್ತು ಜನಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ತಮ್ಮ ಹೆಸರಲ್ಲಿ ಒಂದು ವಾಹನವನ್ನೂ ನೋಂದಾಯಿಸಿಕೊಂಡಿಲ್ಲ.
ಇದನ್ನೂ ಓದಿ: Raghav Sharma Nidle Column: ಪಾಸ್ವಾನ್ ಭದ್ರಕೋಟೆಯಲ್ಲಿ ಪರಿವರ್ತನೆಗೆ ಮತವೇ ?
ದೆಹಲಿಯಲ್ಲಿದ್ದಾಗ ಸೋದರ ಕಳುಹಿಸಿಕೊಟ್ಟಿದ್ದ ಕಾರನ್ನು ಬಳಸುತ್ತಿದ್ದರು. ಅವರ ಪ್ರಾಮಾಣಿಕತೆ, ಬದ್ಧತೆ, ಸರಳತೆಯೇ ರಾಜಕೀಯದಲ್ಲಿ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಮತ್ತು ಪಕ್ಷದ ಅಧ್ಯಕ್ಷರಿಂದ ಹಿಡಿದು ಎಲ್ಲಾ ವರ್ಗದ ನಾಯಕರ ವಿಶ್ವಾಸ ಗಳಿಸಲು ಈ ನಡೆಗಳೇ ಕಾರಣ.
ಮಂಗಳೂರು ಮೂಲದವರಾಗಿದ್ದು 10 ಬಾರಿ ಸಂಸದರಾಗಿದ್ದ, ಮಾಜಿ ಕೇಂದ್ರ ಸಚಿವ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಒಡನಾಡಿಯಾಗಿದ್ದ ಅನಿಲ್ ಹೆಗ್ಡೆ, ಜನತಾದಳದ ದಿನಗಳಿಂದಲೇ ನಿತೀಶ್ ಕುಮಾರ್‌ಗೆ ಪರಿಚಿತರು. ಜಾರ್ಜ್ ಅವರಿಗೆ ಅನಾರೋಗ್ಯ ಉಂಟಾಗಿ, ನಂತರ ಅವರ ಪತ್ನಿ ಲೈಲಾ ಕಬೀರ್ ನೋಡಿಕೊಳ್ಳುತ್ತಿದ್ದಾಗ, ನಿತೀಶ್ ಕುಮಾರ್ ಅವರು ಕರೆ ಮಾಡಿ, ನೀನು ನನ್ನೊಂದಿಗೆ ಇರಬೇಕು ಎಂದು ಹೇಳಿದ್ದರಿಂದ, ನಂತರ ಹೆಗ್ಡೆಯವರಿಗೆ ಪಟನಾದ ಜೆಡಿಯು ಕಚೇರಿಯೇ ಮನೆಯಾಗಿ ಬಿಟ್ಟಿತು.
೩ ವರ್ಷಗಳ ಹಿಂದೆ ಅನಿಲ್ ಹೆಗ್ಡೆ ತಮ್ಮ ಕೋಣೆಯಲ್ಲಿದ್ದಾಗ ನಿತೀಶರು ಕರೆ ಮಾಡಿ, “ಹೆಗ್ಡೆ ಜೀ, ರಾಜ್ಯಸಭೆ ಸೀಟು ಒಂದು ಖಾಲಿ ಇದೆ. ನಿಮ್ಮನ್ನು ಅಲ್ಲಿಗೆ ಕಳುಹಿಸೋಣ ಎಂದುಕೊಂಡಿದ್ದೇವೆ ಮತ್ತು ಪಕ್ಷವೂ ಅದನ್ನು ನಿರ್ಣಯಿಸಿದೆ" ಎಂದು ಹೇಳಿದರಂತೆ. ಯಾವತ್ತಿಗೂ ಹುದ್ದೆ, ಸ್ಥಾನಮಾನ ಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಎಲೆಮರೆಯ ಕಾಯಿಯಂತಿದ್ದ ಅನಿಲ್ ಪ್ರಸಾದ್ ಹೆಗ್ಡೆ, ಪಕ್ಷದ ತೀರ್ಮಾನಕ್ಕೆ ಸಮ್ಮತಿಸಿದರು.
೩ ವರ್ಷ ರಾಜ್ಯಸಭೆ ಸದಸ್ಯರಾಗಿ ದಿಲ್ಲಿ-ಬಿಹಾರಗಳಲ್ಲಿ ಓಡಾಡಿ ಬಂದಿರುವ ಅವರು, ಈಗ ವಿಧಾನ ಸಭೆ ಚುನಾವಣೆಗೆ ರಣನೀತಿ ರೂಪಿಸುವುದು, ಪ್ರಚಾರಕಾರ್ಯದ ರೂಪುರೇಷೆ, ಚುನಾವಣಾ ಆಯೋಗದೊಂದಿಗಿನ ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.
“ರಾಜ್ಯಸಭೆ ಸದಸ್ಯತ್ವ ಮುಂದುವರಿಕೆಗೆ ನಿತೀಶರಲ್ಲಿ ಮಾತನಾಡುವ ಅವಕಾಶವಿತ್ತಲ್ಲ. ನೀವು ಯಾಕೆ ಕೇಳಲಿಲ್ಲ?" ಎಂದು ನಾನು ಕೇಳಿದ್ದಕ್ಕೆ, “ರಾಜ್ಯಸಭೆಗೆ ಹೋಗಬೇಕು. ಅಧಿಕಾರ ಅನುಭವಿಸ ಬೇಕು ಎಂದು ಯೋಚಿಸಿದವನಲ್ಲ. ಅಂದು ನಿತೀಶರು ಫೋನ್ ಮಾಡಿದರು. ರಾಜ್ಯಸಭೆಗೆ ಹೋದೆ. ಈಗ ಮತ್ತೆ ಮನೆಗೆ ಬಂದಿದ್ದೇನೆ" ಎಂದು ನಕ್ಕರು ಅನಿಲ್ ಹೆಗ್ಡೆ.
ದೇಶದ ರೈತ, ಚಮ್ಮಾರ, ನೇಕಾರ ಸೇರಿದಂತೆ ಸಾಂಪ್ರದಾಯಿಕ ಕುಶಲಕರ್ಮಿಗಳ ಬಗ್ಗೆ ಅತೀವ ಕಾಳಜಿ ಹೊಂದಿರುವ ಅನಿಲ್ ಹೆಗ್ಡೆ, ದೇಸಿ ಉತ್ಪನ್ನಗಳನ್ನು ಖರೀದಿಸಿ, ನಿಜಾರ್ಥದಲ್ಲಿ ಈ ಸಮು ದಾಯಗಳ ರಕ್ಷಣೆಗೆ ನಿಂತಿದ್ದಾರೆ. ನಂಬಿದ ಸಿದ್ಧಾಂತಕ್ಕೆ ತಕ್ಕಂತೆ ಬದುಕುತ್ತಿರುವ ಅವರು, ಕಳೆದ 40 ವರ್ಷಗಳಿಂದ ಕೈಯಿಂದ ನೂಲು ತೆಗೆದು, ನೇಕಾರರು ನೇಯ್ದ ಬಟ್ಟೆಗಳನ್ನಷ್ಟೇ ಧರಿಸು ತ್ತಿದ್ದಾರೆ. ಚಮ್ಮಾರರು ಮಾಡಿದ ಚಪ್ಪಲಿ ಅಥವಾ ಶೂಗಳನ್ನಷ್ಟೇ ಧರಿಸುತ್ತಾರೆ.
‘ಪಾಶ್ಚಿಮಾತ್ಯರ ಉತ್ಪನ್ನಗಳನ್ನು ಖರೀದಿಸಿದರೆ ಕುಲಕಸುಬುಗಳನ್ನು ನಂಬಿ ಬೀಜದಷ್ಟೇ ಇದೆ ಎಂದು ಗೊತ್ತಾದಾಗ, ಅನಿಲ್ ಹೆಗ್ಡೆ ದೇಸಿ ಬೀಜಗಳನ್ನು ಬೇರೆಯವರಿಂದ ಖರೀದಿ ಮಾಡಿ ರೈತರಿಗೆ ನೀಡಲು ಶುರು ಮಾಡಿದರು. ಆಗ ಶೇ.98ರಷ್ಟು ವಿದೇಶಿ ಹತ್ತಿ ಬೀಜಗಳು ಭಾರತದ ರೈತ ಸಮುದಾಯ ವನ್ನು ಆವರಿಸಿಕೊಂಡಾಗಿತ್ತು.
ಅಂದರೆ, ದೇಸಿ ಬೀಜಗಳ ಪ್ರಮಾಣ ಉಳಿದಿದ್ದದ್ದು ಶೇ.೨ರಷ್ಟು ಮಾತ್ರ. ಈ ಪ್ರಮಾಣ ಡಬಲ್ ಆಗದಿದ್ದರೆ ದೇಸಿ ಬೀಜಗಳಿಗೆ ಉಳಿಗಾಲ ಇಲ್ಲ ಎಂದು ಯೋಚಿಸಿದ ಹೆಗ್ಡೆ, ಜೈವಿಕ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದ ತಮಿಳುನಾಡಿನ ತುಲಾ ಎಂಬ ಸಂಸ್ಥೆಯನ್ನು ಸಂಪರ್ಕಿಸಿ, ಅವರಿಗೆ ದೇಸಿ ಬೀಜಗಳನ್ನು ಹಂಚಿದರು. ಅದೇ ರೀತಿ, ಪಂಜಾಬ್ ಮತ್ತು ಉತ್ತರ ಭಾರತದ ಕೆಲ ರೈತರಿಗೂ ಉಚಿತವಾಗಿ ಹಂಚಿದರು.
ಫಸಲು ಬಂದ ಹತ್ತಿಯನ್ನು ನೂಲು ತೆಗೆಯುವವರಿಗೆ ನೀಡಿ, ಆ ನೂಲನ್ನು ನೇಕಾರರಿಗೆ ನೇಯ್ಗೆಗೆ ನೀಡಲಾಯಿತು. ಅದರಿಂದ ಬಟ್ಟೆಗಳನ್ನು ತಯಾರು ಮಾಡಿದರು. ಅನಿಲ್ ಹೆಗ್ಡೆ ಧರಿಸುತ್ತಿರುವುದು ಈ ಬಟ್ಟೆಗಳನ್ನೇ. ಇದಕ್ಕೂ ಮುನ್ನ ಅನಿಲ್ ಹೆಗ್ಡೆ, ತಮ್ಮ ಚಿಂತನೆಗಳಿಗೆ ಪೂರಕವಾಗಿ ಯೋಚಿಸು ವವರು ಅಮೆರಿಕದ ವರ್ಜೀನಿಯಾದಲ್ಲಿ ಇದ್ದಾರೆ ಎಂಬುದನ್ನು ತಿಳಿದು, ಸ್ವಂತ ಖರ್ಚಿನಲ್ಲಿ ವರ್ಜೀನಿಯಾಕ್ಕೆ ಹೋದರು.
ಅಲ್ಲಿ ಕೃಷಿ ವಿಜ್ಞಾನಿ ಡಾ.ಕೇಶವ ಕ್ರಾಂತಿಯವರನ್ನು ಭೇಟಿ ಮಾಡಿ, ನಾಂದೇಡ್‌ನ ಪ್ರದೇಶ ವೊಂದರಲ್ಲಿ ದೇಸಿ ಹತ್ತಿ ಬೀಜಗಳು ಲಭ್ಯವಿರುವ ಬಗ್ಗೆ ತಿಳಿದುಕೊಂಡರು. ನಾಂದೇಡ್‌ಗೆ ತೆರಳಿ ರು. 25 ಸಾವಿರಕ್ಕೆ 81 ಕಿಲೋ ಹತ್ತಿಕೊಂಡವರು ಏನು ಮಾಡಬೇಕು?’ ಎಂದು ಪ್ರಶ್ನಿಸುತ್ತಾರೆ.
ಭಾರತದಲ್ಲಿ ಅಮೆರಿಕನ್ ಕಂಪನಿಗಳ (ತಳೀಯವಾಗಿ ಮಾರ್ಪಡಿಸಿದ) ‘ಬಿಟಿ’ ಹತ್ತಿಗಳನ್ನು ಬಳಸಲು ರೈತರಿಗೆ ಉತ್ತೇಜಿಸಿದ್ದರಿಂದ ದೇಸಿ ಹತ್ತಿ ಬೀಜದ ಬಳಕೆ ಕಡಿಮೆಯಾಗಿತ್ತು. ಇಲ್ಲಿ ‘ಬಿಟಿ’ ಹತ್ತಿ ಬೀಜಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದ ಅಮೆರಿಕದ ಮೊನ್ಸೆಂಟೋ ಕಂಪನಿ, ಈ ಬೀಜಗಳನ್ನು ಒಂದು ಪ್ಯಾಕಿಗೆ ರು.800ರಂತೆ ಮಾರಾಟ ಮಾಡುತ್ತಿತ್ತು.
ಆದರೆ, ಯಾವಾಗ ಭಾರತೀಯ ರೈತರು ತಮ್ಮನ್ನು ಪೂರ್ತಿ ಅವಲಂಬಿಸಿದ್ದಾರೆ ಎಂಬುದು ಈ ಕಂಪನಿಯವರಿಗೆ ಗೊತ್ತಾಯಿತೋ, ಆಗ ಬೆಲೆಯನ್ನು ರು. 2700ಕ್ಕೆ ಏರಿಸಿದರು. ರೈತರು ಆಕ್ರೋಶ ಗೊಂಡರು. ಅಂದಿನ ಮಹಾರಾಷ್ಟ್ರ ಸರಕಾರ ಕೂಡ ಹೋರಾಟ ಗಮನಿಸಿ, ವಿದೇಶಿ ಬೀಜಗಳನ್ನು ನಿಷೇಧಿಸಿತು. ಕೇಸು ಕೋರ್ಟ್ ಮೆಟ್ಟಿಲೇರಿತು. ಆದರೆ ಕೋರ್ಟು ಬೆಲೆ ಕಡಿಮೆ ಮಾಡುವಂತೆ ಆದೇಶಿಸಿದ್ದರಿಂದ ದರ ತಗ್ಗಿತು.
ಬಿಹಾರದಲ್ಲಿ ನಿತೀಶ್ ಕುಮಾರ್ ಕೂಡ ಬಿಟಿ ಹತ್ತಿ ಮತ್ತು ‘ಜಿಎಂ’ ಮಸ್ಟರ್ಡ್ (ತಳೀಯವಾಗಿ ಮಾರ್ಪಡಿಸಿದ ಸಾಸಿವೆ) ವಿರುದ್ಧ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಾ, ಹೋರಾಟಕ್ಕೆ ಕೈಜೋಡಿಸಿ ದ್ದರು. 2011ರ ವೇಳೆ, ಬಿಟಿ ಹತ್ತಿ ಬೀಜದ ಇಳುವರಿ ಕೂಡ ದೇಸಿ ಬೀಜಗಳನ್ನು ಖರೀದಿಸಿ ರೈತರಿಗೆ ಉಚಿತವಾಗಿ ವಿತರಿಸಿದರು.
“ಸಮಾಜದಲ್ಲಿನ ಎಲ್ಲಾ ಪಿಡುಗುಗಳಿಗೆ ನಿರುದ್ಯೋಗ ದೊಡ್ಡ ಕಾರಣವೆಂಬುದು ನನ್ನ ನಂಬಿಕೆ. ಕೇವಲ ಗುಡಿಕೈಗಾರಿಕೆಗೆ ಒತ್ತು ನೀಡುವ ಗಾಂಧಿ ಪ್ರಣೀತ ಅರ್ಥಶಾಸ್ತ್ರದ ಅನುಕರಣೆ-ಆಚರಣೆ ಯಿಂದ ಮಾತ್ರ ಉದ್ಯೋಗ ಸೃಷ್ಟಿ, ನಿರುದ್ಯೋಗ ನಿವಾರಣೆ ಸಾಧ್ಯವೆಂಬುದನ್ನು 1984ರಲ್ಲಿ ಮಂಗಳೂರಿನಲ್ಲಿ ಸರಕಾರಿ ಕಾಲೇಜಿನಲ್ಲಿ ಓದುತ್ತಿರುವಾಗ, ಜನತಾ ಪಾರ್ಟಿ ಸೇರಿ ಪಕ್ಷದ ತರಬೇತಿ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾಗ ಮನವರಿಕೆಯಾಗಿತ್ತು.
ಆಗಿನಿಂದ ಈವರೆಗೆ ಈ ಕಾರಣಕ್ಕಾಗಿ ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಶುದ್ಧ ಖಾದಿ ಬಟ್ಟೆ, ಕೈಯಿಂದ ತಯಾರು ಮಾಡಿದ ಶೂ ಹೊರತುಪಡಿಸಿ ಬೇರೆಯದನ್ನು ನಾನು ತೊಡುವುದಿಲ್ಲ. ನಾವು ಹಿಂದುಳಿದವರ, ಪರಿಶಿಷ್ಟ ಜಾತಿ ಜನಾಂಗದವರ, ಮಹಿಳೆಯರ, ಅಲ್ಪಸಂಖ್ಯಾತರ ಸಬಲೀ ಕರಣದ ಬಗ್ಗೆ ನರೇಟಿವ್ ಹೆಣೆಯುತ್ತೇವೆ.
ನಿರುದ್ಯೋಗ ನಿವಾರಣೆಯ ಜತೆಜತೆಗೆ ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತೇವೆ. ಗುಡಿ ಕೈಗಾರಿಕೆ ಗಳಲ್ಲಿ ಈ ವರ್ಗದ ಜನರಿಂದ ತಯಾರಿಸಲಾದ ವಸ್ತು, ಬಟ್ಟೆ, ಚಪ್ಪಲಿ ಇತ್ಯಾದಿ ಬಳಸುವ ಮೂಲಕ ಅದಕ್ಕೆ ಪ್ರೋತ್ಸಾಹ ನೀಡಿ ಈ ವರ್ಗದವರನ್ನು ಸಶಕ್ತರನ್ನಾಗಿ ಮಾಡಲು ಹಿಂದೇಟು ಹಾಕುತ್ತೇವೆ.
ಒಂದು ಮೀಟರ್ ಖಾದಿ ಬಟ್ಟೆ ಉತ್ಪಾದನೆ ಮಾಡಲು ೩ ಲೀ. ನೀರು ಬೇಕಾದರೆ, ಅಷ್ಟೇ ಪ್ರಮಾಣದ ಬಟ್ಟೆಯು ಗಿರಣಿಯಲ್ಲಿ ತಯಾರಾದರೆ 55 ಲೀ. ನೀರು ಅಗತ್ಯ. ಗುಡಿ ಕೈಗಾರಿಕೆಯ ವಸ್ತು, ಖಾದಿ ಬಳಕೆಯಿಂದ 40 ಪಟ್ಟು ಹೆಚ್ಚು ಉದ್ಯೋಗ ಸೃಷ್ಟಿ ಯಾಗುವುದಲ್ಲದೇ, ಈ ವರ್ಗಗಳ ಸಬಲೀಕರಣ ದ ಜತೆಗೆ ಪರಿಸರ ಕಾಪಾಡುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲು ಸಾಧ್ಯ" ಎಂದು ಹೇಳುತ್ತಾರೆ ಅನಿಲ್ ಹೆಗ್ಡೆ.
ಜೆಡಿಯು, ಕಾಂಗ್ರೆಸ್ ಪಕ್ಷ ಸೇರಬೇಕೆಂದು ಬಯಸುವವರು, ‘ದೇಸಿ ನೇಕಾರರು ನೂಲಿನಿಂದ ನೇಯ್ದ ಸಿದ್ಧಪಡಿಸಿದ ಬಟ್ಟೆಗಳನ್ನೇ ಧರಿಸುತ್ತೇವೆ’ ಎಂದು ಪ್ರಮಾಣ ಮಾಡಿದ ಮೇಲಷ್ಟೇ ಅವರಿಗೆ ಪ್ರಾಥಮಿಕ ಸದಸ್ಯತ್ವ ನೀಡಲಾಗುತ್ತಿತ್ತು. ಈಗಲೂ ಈ ಪಕ್ಷಗಳಲ್ಲಿ ಈ ನಿಯಮ ಇದೆ. ಬಹುಶಃ ಅನೇಕರಿಗೆ ಇಂಥದ್ದೊಂದು ನಿಯಮ ಇದೆ ಎನ್ನುವುದೇ ಗೊತ್ತಿರಲಿಕ್ಕಿಲ್ಲ. ಆದರೆ, ಹೆಗ್ಡೆ ಉಳಿದವ ರಂತೆ ಅಲ್ಲ. ಆ ನಿಯಮವನ್ನು ಚಾಚೂ ತಪ್ಪದೆ ಪಾಲಿಸಿದ್ದಾರೆ.
ಅನಿಲ್ ಹೆಗ್ಡೆ ಬೆಂಗಳೂರಿನಲ್ಲಿದ್ದಾಗ ಬ್ರಿಗೇಡ್ ರೋಡ್ ಪಕ್ಕದಲ್ಲಿರುವ ವಾರ್ಡೀಸ್ ಎಂಬ 150 ವರ್ಷ ಹಳೆಯ ಚಪ್ಪಲಿ ಅಂಗಡಿಯವರಿಗೆ ಚಮ್ಮಾರರು ಮಾಡಿದ ಚಪ್ಪಲಿಗಳನ್ನು ತರಿಸಲು ಹೇಳಿ, ಅದನ್ನು ಖರೀದಿ ಮಾಡುತ್ತಿದ್ದರಂತೆ. ದೆಹಲಿಯಲ್ಲಿದ್ದಾಗ ಕೊನಾಟ್ ಪ್ಲೇಸ್‌ನಲ್ಲಿದ್ದ ಮೋಚಿಗಳಿಂದ (ಚಮ್ಮಾರರು), ಬಿಹಾರದ ಪಟನಾ ರೈಲ್ವೆ ಸ್ಟೇಷನ್‌ನಲ್ಲಿ ಕೂರುತ್ತಿದ್ದ ಚಮ್ಮಾರ ಡೊಮನ್ ದಾಸ್ ರಿಂದ ಚಪ್ಪಲಿ ಖರೀದಿ ಮಾಡುತ್ತಿದ್ದರು.
ಡೊಮನ್ ದಾಸ್ ನಿಧನದ ನಂತರ ಬಿಹಾರದ ಸಮಸ್ತಿಪುರದ ರಾಜೇಂದ್ರ ರಾಮ್ ಎಂಬ ಚಮ್ಮಾರ ನಿಂದ ಖರೀದಿ ಮಾಡುತ್ತಿzರೆ. ಈ ಚಪ್ಪಲಿ ಅಥವಾ ಶೂಗಳು ರು. 500ಕ್ಕೆ ಲಭ್ಯ. ಸಂಸದರಾಗುವ ಮುನ್ನ ತಾವು ಸಂಪಾದಿಸುತ್ತಿದ್ದ ಹಣವನ್ನು ಅವರು ರೈತರು ಮತ್ತು ಕುಶಲ ಕರ್ಮಿಗಳ ಏಳಿಗೆಗಾಗಿ ಬಳಸಿದರು. ಸಂಸದ ನಿಧಿಯಲ್ಲೂ ಕೊಂಚ ಪ್ರಮಾಣವನ್ನು ಅವರಿಗೆಂದು ಮೀಸಲಿಟ್ಟಿದ್ದರು.
“ನೀವೀಗ ಬಿಹಾರದವರೇ ಆಗಿ ಹೋಗಿದ್ದರೂ, ಕನ್ನಡಿಗರು, ತುಳು ಭಾಷಿಕರು ನಿಮಗೆ ಇಷ್ಟ ಎಂದು ಕೇಳಿದ್ದೆ. ಹೌದೇ?" ಎಂದು ನಾನು ಕೇಳಿದ್ದಕ್ಕೆ, “ರಾಜಕಾರಣಿಗಳು ಜನರ ಮುಲಾಜಿನಲ್ಲಿ ಇರಬೇಕು, ಜನರು ರಾಜಕಾರಣಿಗಳ ಮುಲಾಜಿನಲ್ಲಿ ಅಲ್ಲ. ಎಲ್ಲಿಯವರೆಗೆ ಜನರು ರಾಜಕಾರಣಿಗಳ ಮುಲಾಜಿ ನಲ್ಲಿ ಇರುತ್ತಾರೋ ಅಲ್ಲಿಯವರೆಗೆ ಯಾವುದೇ ಭಾಷೆಯವರನ್ನಾಗಲೀ ಪ್ರದೇಶದವರನ್ನಾಗಲೀ ಒಳ್ಳೆಯವರು, ಕೆಟ್ಟವರು ಎಂದು ಪರಿಗಣಿಸುವುದು ನನ್ನ ಪ್ರಕಾರ ತಪ್ಪು ಮತ್ತು ಆತ್ಮವಂಚನೆ" ಎಂದರು ಹೆಗ್ಡೆ.
ಲೋಕಸಭೆಯ ಮಾಜಿ ಸದಸ್ಯ ಜಯಪ್ರಕಾಶ್ ಹೆಗ್ಡೆಯವರ ಸೋದರ ಸಂಬಂಧಿಯಾಗಿರುವ ಅನಿಲ್ ಪ್ರಸಾದ್ ಹೆಗ್ಡೆ, ಕುಂದಾಪುರದ ಸಲ್ವಾಡಿಯವರು. ಆದರೆ ಅವರು ಹುಟ್ಟಿದ್ದು ಉಡುಪಿಯ ಕಾಪು ವಿನಲ್ಲಿ ಮತ್ತು ಅವರ ಮಾತೃಭಾಷೆ ತುಳು. ಹೆಗ್ಡೆಯವರ ತಾಯಿಗೆ 86 ವರ್ಷವಾಗಿದ್ದು, ಸಲ್ವಾಡಿಯ ಮನೆಯಲ್ಲಿ ನರ್ಸ್ ಒಬ್ಬರು ನೋಡಿಕೊಳ್ಳುತ್ತಿದ್ದಾರೆ.
ಹೆಗ್ಡೆಯವರಿಗೆ ಇಬ್ಬರು ಸೋದರರಿದ್ದಾರೆ. ೨ ತಿಂಗಳಿಗೊಮ್ಮೆ ತಮ್ಮ ಸಲ್ವಾಡಿಯ ಮನೆಗೆ ಭೇಟಿ ನೀಡುವ ಅನಿಲ್ ಪ್ರಸಾದ್ ಹೆಗ್ಡೆ, ತಾಯಿಯೊಂದಿಗೆ ಕೆಲ ದಿನಗಳನ್ನು ಕಳೆದು ಮತ್ತೆ ಬಿಹಾರದ ಕರ್ಮಭೂಮಿಗೆ ವಾಪಸಾಗುತ್ತಾರೆ.
“ನೀವ್ಯಾಕೆ ಮದುವೆ ಆಗಲಿಲ್ಲ?" ಎಂದು ನಾನು ಕೇಳಿದ್ದಕ್ಕೆ, “ಸಮಾಜವಾದ ಸಿದ್ಧಾಂತ-ತತ್ವ ಹಾಗೂ ವಿಶಾಲ ಉದ್ದೇಶವನ್ನು ಮೈಗೂಡಿಸಿಕೊಂಡು, ನಾನು ನಾಳೆಯ ಬಗ್ಗೆ, ವೈಯಕ್ತಿಕ ಬೇಕು/ಬೇಡಗಳ ಬಗ್ಗೆ ಯೋಚಿಸುತ್ತಾ ಕುಳಿತರೆ ಜನರ ಪರ ಕೆಲಸ ಮಾಡಲು ಸಾಧ್ಯವಾಗುತ್ತದೆಯೇ? ಹೀಗಾಗಿ, ಮದುವೆ ಬಗ್ಗೆ ಆಲೋಚನೆಯನ್ನೇ ಮಾಡಲಿಲ್ಲ" ಎಂದು ನಗುತ್ತಾ ಮಾತು ಮುಗಿಸಿದರು ಹೆಗ್ಡೆ.
(ಲೇಖಕರು ಹಿರಿಯ ಪತ್ರಕರ್ತರು)