ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vinayaka Mathapathy Column: ಜಗತ್ತನ್ನು ಕತ್ತಲೆಗೆ ದೂಡಿ, ಬಾಯಾರಿಕೆ ತರಿಸುವುದಾ ಎಐ ?

ಯಾವುದೇ ಹೊಸ ತಂತ್ರಜ್ಞಾನ ಅಥವಾ ಆವಿಷ್ಕಾರಕ್ಕೆ ಅದರದ್ದೇ ಆದ ಪರಸ್ಪರ ವಿರುದ್ಧ ಧ್ರುವಗಳಿರುತ್ತವೆ. ಇವೆರಡರ ನಡುವಿನ ಉತ್ತಮವಾದ ಅಂಶಗಳನ್ನು ಬಳಸಿಕೊಳ್ಳುವು ದರಲ್ಲೇ ಮನುಷ್ಯನ ಬುದ್ಧಿವಂತಿಕೆಯಿದೆ. ಅದನ್ನು ಬಿಟ್ಟು, ಅನುಪಯುಕ್ತ ಅಂಶಗಳನ್ನು ತಲೆಯಲ್ಲಿ ಟ್ಟುಕೊಂಡು ‘ಇಡೀ ತಂತ್ರಜ್ಞಾನವೇ ಸರಿಯಿಲ್ಲ’ ಎಂಬ ನಿರ್ಧಾರಕ್ಕೆ ಬಂದರೆ, ಅದು ನಮಗೆ ನಾವೇ ಮಾಡಿಕೊಂಡ ಮೋಸವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಜಗತ್ತನ್ನು ಕತ್ತಲೆಗೆ ದೂಡಿ, ಬಾಯಾರಿಕೆ ತರಿಸುವುದಾ ಎಐ ?

-

Ashok Nayak
Ashok Nayak Mar 8, 2026 6:42 AM

ರಾಜಬೀದಿ

ವಿನಾಯಕ ಮಠಪತಿ

‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಜಾಣನುಡಿಯಂತೆ ‘ಕೃತಕ ಬುದ್ಧಿಮತ್ತೆಯು ಹೆಜ್ಜೆಯಿಡದ ಜಾಗವಿಲ್ಲ’ ಎಂಬ ಪರಿಸ್ಥಿತಿಯು ಮುಂದಿನ ದಿನಗಳಲ್ಲಿ ರೂಪು ಗೊಂಡರೂ ಅಚ್ಚರಿಯಿಲ್ಲ. ಹೀಗಾಗಿ, ‘ಎಐ’ ತಂತ್ರಜ್ಞಾನವನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಿದ್ದೇವೆ ಎಂಬುದರ ಮೇಲೆ ಮುಂದಿನ ಭವಿಷ್ಯ ರೂಪಿತವಾಗ ಲಿದೆ ಎಂಬುದಂತೂ ಸತ್ಯ.

ಸದ್ಯ ಎಲ್ಲೆಡೆಯೂ ‘ಕೃತಕ ಬುದ್ಧಿಮತ್ತೆ’ (ಎಐ) ಕುರಿತಾದ ಚರ್ಚೆಗಳು ನಡೆಯುತ್ತಿವೆ. ಕೆಲವರಿಗೆ ತಮ್ಮ ಭವಿಷ್ಯದ ಕುರಿತಾದ ಚಿಂತೆಯಾದರೆ, ಇನ್ನು ಹಲವರಿಗೆ ಬದಲಾದ ಕಾಲಘಟ್ಟದಲ್ಲಿ ನಾವು ಪರಿಣಾಮಕಾರಿಯಾಗಿ ಹೊಂದಿಕೊಳ್ಳುತ್ತೇವಾ? ಎಂಬ ಜಿಜ್ಞಾಸೆ.

ಹಾಗಾದರೆ ‘ಎಐ’ ಎಂಬುದು ದೊಡ್ಡ ರಾಕ್ಷಸನಾ? ಅದು ಅಷ್ಟೊಂದು ಹಾನಿಕಾರಕ ತಂತ್ರ ಜ್ಞಾನವಾ? ಅತ್ಯಂತ ಬುದ್ಧಿವಂತ ಜೀವಿ ಎಂದೇ ಕರೆಯಲ್ಪಡುವ ಮನುಷ್ಯನಿಂದ ನಿರ್ಮಿತ ವಾದ ತಂತ್ರಜ್ಞಾನವೊಂದು ತನ್ನ ನಿರ್ಮಾತೃವನ್ನೇ ಮೀರಿಸುವ ಮಟ್ಟಿಗೆ ಬೆಳೆದು ನಿಲ್ಲುವು ದಾ? ಎಂಬುದು ಹಲವರನ್ನು ಕಾಡುತ್ತಿರುವ ಯಕ್ಷಪ್ರಶ್ನೆಗಳು.

ಆದರೆ ‘ಎಐ’ ತಜ್ಞರು ಹೇಳುವುದೇ ಬೇರೆ. ‘ಎಐ ಎಂಬುದೊಂದು ವಿಭಿನ್ನ ತಂತ್ರಜ್ಞಾನ ವಾಗಿದ್ದು, ಬದಲಾದ ಕಾಲಘಟ್ಟದಲ್ಲಿ ಇದನ್ನು ಸಮರ್ಪಕವಾಗಿ ಬಳಸಿಕೊಂಡು ಬದುಕು ಸಾಗಿಸಿದರಾಯಿತು’ ಎಂಬ ಸಮಜಾಯಿಷಿ ಅಥವಾ ವಾದವನ್ನು ಅವರು ಮುಂದಿಡುತ್ತಾರೆ.

ಯಾವುದೇ ಹೊಸ ತಂತ್ರಜ್ಞಾನ ಅಥವಾ ಆವಿಷ್ಕಾರಕ್ಕೆ ಅದರದ್ದೇ ಆದ ಪರಸ್ಪರ ವಿರುದ್ಧ ಧ್ರುವಗಳಿರುತ್ತವೆ. ಇವೆರಡರ ನಡುವಿನ ಉತ್ತಮವಾದ ಅಂಶಗಳನ್ನು ಬಳಸಿಕೊಳ್ಳುವು ದರಲ್ಲೇ ಮನುಷ್ಯನ ಬುದ್ಧಿವಂತಿಕೆಯಿದೆ. ಅದನ್ನು ಬಿಟ್ಟು, ಅನುಪಯುಕ್ತ ಅಂಶಗಳನ್ನು ತಲೆಯಲ್ಲಿಟ್ಟುಕೊಂಡು ‘ಇಡೀ ತಂತ್ರಜ್ಞಾನವೇ ಸರಿಯಿಲ್ಲ’ ಎಂಬ ನಿರ್ಧಾರಕ್ಕೆ ಬಂದರೆ, ಅದು ನಮಗೆ ನಾವೇ ಮಾಡಿಕೊಂಡ ಮೋಸವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: Vinayaka Mathapathy Column: ಬದಲಾಗುವುದೇ ಮಹಾರಾಷ್ಟ್ರ ರಾಜಕೀಯ ಸಮೀಕರಣ ?

ಆದರೆ ಒಂದು ಹೊಸ ಆವಿಷ್ಕಾರದಿಂದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಯಾವೆಲ್ಲ ಪರಿಣಾಮವಾಗುತ್ತದೆ ಎಂಬುದರ ಸೂಕ್ಷ್ಮತೆ ಪ್ರತಿಯೊಬ್ಬರಿಗೂ ಇರಬೇಕಾಗುತ್ತದೆ. ತಂತ್ರಜ್ಞಾನವೊಂದು ದೊಡ್ಡ ಪ್ರಮಾಣದಲ್ಲಿ ಎಲ್ಲಾ ರಂಗದಲ್ಲಿ ವ್ಯಾಪಿಸಿದಷ್ಟು ಅದನ್ನು ನಿರ್ವಹಣೆ ಮಾಡುವುದು ಸುಲಭದ ಮಾತಾಗುವುದಿಲ್ಲ.

‘ಎಐ’ ತಂತ್ರಜ್ಞಾನ ನಿರ್ವಹಿಸುವ ಚಿಪ್‌ಗಳು ಸಾಮಾನ್ಯ ಸರ್ವರ್‌ಗಿಂತ ಹೆಚ್ಚು ಪರಿಣಾಮ ಕಾರಿ. ಇವುಗಳಿಂದ ಉತ್ಪಾದನೆಯಾಗುವ ಶಾಖವೂ ಅಧಿಕ. ಸದ್ಯ, ‘ಎಐ ತಂತ್ರಜ್ಞಾನದಿಂದ ನೀರು ಹಾಗೂ ವಿದ್ಯುತ್‌ನ ಅಭಾವ ಸೃಷ್ಟಿಯಾಗುತ್ತದೆಯಾ?’ ಎಂಬ ಪ್ರಶ್ನೆ ಹಲವರಲ್ಲಿ ಉದ್ಭವಿಸಿದೆ.

ಏಕೆಂದರೆ, ಲಭ್ಯ ಮಾಹಿತಿಯ ಪ್ರಕಾರ, ‘ಎಐ’ ಎಂಬ ದೈತ್ಯ ತಂತ್ರಜ್ಞಾನ ಎಲ್ಲೆಡೆ ವ್ಯಾಪಿಸಿದರೆ, ಅವುಗಳ ಡೇಟಾ ಸೆಂಟರ್ ಗಳ ನಿರ್ವಹಣೆಗೆ ಹೇರಳ ಪ್ರಮಾಣದ ನೀರು, ವಿದ್ಯುಚ್ಛಕ್ತಿ ಹಾಗೂ ಇತರ ಸಂಪನ್ಮೂಲಗಳ ಅವಶ್ಯಕತೆ ಎದುರಾಗುತ್ತದೆ. ಭಾರತದ ಅನೇಕ ಮಹಾನಗರಗಳಲ್ಲಿ ಈಗಾಗಲೇ ನೀರಿನ ಅಭಾವ ಅಧಿಕವಾಗಿದ್ದು, ‘ಎಐ’ ಎಂಬುದು ಮುಂದೆ ಕಾಲಿಟ್ಟ ಜಾಗದಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾದರೂ ಅಚ್ಚರಿಯಿಲ್ಲ.

ಬಲ್ಲವರು ಹೇಳುವಂತೆ, ಒಂದು ಸಾಮಾನ್ಯ ಸರ್ವರ್ ಸ್ಟೇಷನ್ 5 ರಿಂದ 15 ಕಿಲೋ ವ್ಯಾಟ್‌ನಷ್ಟು ವಿದ್ಯುತ್ ಬಳಸಿದರೆ, ಅದೇ ‘ಎಐ ಡೇಟಾ ಸೆಂಟರ್’ ನಿರ್ವಹಣೆಗೆ 40ರಿಂದ 120 ಕಿಲೋವ್ಯಾಟ್ ವಿದ್ಯುತ್ ಬೇಕಾಗುತ್ತದೆ. ಜಾಗತಿಕ ಮಟ್ಟದಲ್ಲಿ ಇದನ್ನು ತುಲನೆ ಮಾಡಿ ದರೆ, ಡೇಟಾ ಸೆಂಟರ್‌ಗಳ ನಿರ್ವಹಣೆಗಾಗಿನ ವಿದ್ಯುತ್ ಬಳಕೆಯು 1 ಸಾವಿರ ‘ಟೆರಾವ್ಯಾಟ್ ಅವರ್ಸ್’ ದಾಟುವ ಸಾಧ್ಯತೆ ಇದೆ.

ಮುಂಬೈ ನಗರವೊಂದೇ ಪ್ರತಿವರ್ಷ 4 ಸಾವಿರ ಮೆಗಾವ್ಯಾಟ್‌ಗಿಂತಲೂ ಅಧಿಕ ವಿದ್ಯುಚ್ಛಕ್ತಿ ಯನ್ನು ಬಳಸುತ್ತದೆ. ಅಮೆರಿಕದಂಥ ದೇಶಗಳು ದತ್ತಾಂಶ ಕೇಂದ್ರಗಳ ನಿರ್ವಹಣೆಗೆ ನೈಸರ್ಗಿಕ ಇಂಧನವನ್ನು ಬಳಕೆ ಮಾಡಿಕೊಳ್ಳುತ್ತವೆ. ಈ ದೇಶಗಳಲ್ಲಿ ಇಂಧನ ಸಂಪನ್ಮೂಲ ಹೇರಳವಾಗಿದೆ. ಆದರೆ ಭಾರತದಂಥ ದೇಶವು ವಿದ್ಯುತ್ತನ್ನೇ ಅವಲಂಬಿಸ ಬೇಕಾಗುತ್ತದೆ. ಇದರಿಂದ ಮುಂದೆ ಸೃಷ್ಟಿಯಾಗುವ ಸಮಸ್ಯೆಗಳು ಅಷ್ಟಿಷ್ಟಲ್ಲ.

AI ok

ಸದ್ಯ ‘ಎಐ’ ತಂತ್ರಜ್ಞಾನದ ಬೆನ್ನುಬಿದ್ದಿರುವ ಬಂಡವಾಳಶಾಹಿಗಳು ಟ್ರಿಲಿಯನ್‌ಗಟ್ಟಲೆ ಡಾಲರ್ ಹಣ ಹೂಡಿಕೆ ಮಾಡಿದ್ದಾರೆ. ಅದೇ ರೀತಿಯಲ್ಲಿ, ವಿವಿಧ ರಂಗದಲ್ಲಿ ಅನ್ವೇಷಣೆಗೆ ಮುಂದಾಗುತ್ತಿರುವ ‘ಎಐ’ ತಂತ್ರಜ್ಞಾನ ಸದ್ಯಕ್ಕೆ ಎಲ್ಲರ ಆಕರ್ಷಣೆಯ ತಾಣ ಎಂಬು ದಂತೂ ಸ್ಪಷ್ಟ.

ಪ್ರಸ್ತುತ ಒಂದು ವಿಶಿಷ್ಟ ‘ಎಐ’ ಡೇಟಾ ನಿರ್ವಹಣೆ ಕೇಂದ್ರವು 1 ಲಕ್ಷ ಮನೆಗಳಿಗೆ ಬಳಸು ವಷ್ಟು ವಿದ್ಯುತ್ತನ್ನು ಉಪಯೋಗಿಸುತ್ತಿದೆ. ಮುಂದೆ ಇದರ ಪ್ರಭಾವ ಹೆಚ್ಚಾಗುತ್ತಾ ಹೋದಂತೆ, 2030ರ ವೇಳೆಗೆ ಈ ಡೇಟಾ ಸೆಂಟರ್‌ಗಳ ವಿದ್ಯುತ್ ಬಳಕೆಯಲ್ಲಿ ಗಣನೀಯ ಹೆಚ್ಚಳವಾಗಲಿದೆ. ಅದು ಸರಿಸುಮಾರು 945 ‘ಟೆರಾವ್ಯಾಟ್ ಅವರ್ಸ್’ವರೆಗೆ ತಲುಪ ಬಹುದು.

ಜಪಾನ್ ದೇಶವು ಬಳಸುವ ಒಟ್ಟು ವಿದ್ಯುತ್ ಪ್ರಮಾಣಕ್ಕಿಂತಲೂ ಇದು ಅಽಕವಾಗಲಿದೆ. ಜತೆಗೆ ಡೇಟಾ ಸೆಂಟರ್‌ನ ತಾಪಮಾನವನ್ನು ಕಡಿಮೆ ಮಾಡಿ ತಂಪಾಗಿರಿಸಲು ಹೆಚ್ಚಿನ ಪ್ರಮಾಣದ ನೀರಿನ ಅವಶ್ಯಕತೆ ಎದುರಾಗುತ್ತದೆ. ತಜ್ಞರು ಅಭಿಪ್ರಾಯಪಡುವಂತೆ, 2027ರ ಹೊತ್ತಿಗೆ ‘ಎಐ’ ಸಂಬಂಧಿತ ನೀರಿನ ಬೇಡಿಕೆಯು 4.2ರಿಂದ 6.6 ಬಿಲಿಯನ್ ಕ್ಯೂಬಿಕ್ ಮೀಟರ್‌ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ದೈನಂದಿನ ಬಳಕೆ ಕುರಿತು ಬೆಳಕು ಚೆಲ್ಲುವುದಾದರೆ, ಒಂದು ದೊಡ್ಡ ‘ಎಐ’ ಸೆಂಟರ್ ದಿನಕ್ಕೆ 10ರಿಂದ 50 ಲಕ್ಷ ಗ್ಯಾಲನ್‌ನಷ್ಟು ನೀರನ್ನು ಬಳಸಬಹುದು. ಇದು ಸುಮಾರು 10ರಿಂದ 50 ಸಾವಿರ ಜನಸಂಖ್ಯೆ ಇರುವ ಪಟ್ಟಣಕ್ಕೆ ಬೇಕಾಗುವ ನೀರಿನ ಪ್ರಮಾಣವಾಗಿದೆ.

ಬೆಂಗಳೂರು ನಗರಕ್ಕೆ ಪ್ರತಿದಿನ ಸುಮಾರು 3600 ದಶಲಕ್ಷ ಲೀಟರ್ ನೀರು ಬೇಕಾಗುತ್ತದೆ; ಹೀಗಾಗಿ ದೈತ್ಯಗಾತ್ರದ ‘ಎಐ’ ಡೇಟಾ ಸೆಂಟರ್‌ಗಳಿಗೆ ನೀರು ಒದಗಿಸುವುದೇ ಒಂದು ದೊಡ್ಡ ಸಮಸ್ಯೆಯಾದರೂ ಅಚ್ಚರಿಯಿಲ್ಲ. ತಾಪಮಾನ ಏರಿಕೆ ಸೇರಿದಂತೆ ಈಗಾಗಲೇ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಜಗತ್ತಿಗೆ ಈಗ ‘ಎಐ’ ಡೇಟಾ ಸೆಂಟರ್‌ಗಳ ನಿರ್ವಹಣೆ ಸಂಬಂಧಿತ ಸಮಸ್ಯೆಗಳೂ ಸೇರಿಕೊಂಡರೆ ಏನಾಗಬಹುದು? ಎಂಬುದು ಕೆಲವರ ಪ್ರಶ್ನೆ. ಆದರೆ ಇಲ್ಲೊಂದು ‘ಟ್ವಿಸ್ಟ್’ ಕೂಡ ಇದೆ.

ಅದೆಂದರೆ, ಈಗಾಗಲೇ ಕೆಲ ಡೇಟಾ ಸೆಂಟರ್‌ಗಳು ಕುಡಿಯುವ ನೀರಿನ ಬದಲಾಗಿ ತ್ಯಾಜ್ಯ ನೀರಿನ ಬಳಕೆಗೆ ಹೆಚ್ಚು ಒತ್ತುನೀಡುತ್ತಿವೆಯಂತೆ. ಮತ್ತೆ ಕೆಲವು ಸಂಸ್ಥೆಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಮುದ್ರದ ನಡುವೆ/ಆಳದಲ್ಲಿ ಡೇಟಾ ಸೆಂಟರ್‌ಗಳನ್ನು ನಿರ್ಮಿ ಸುವ ಮೂಲಕ ‘ಕೂಲಿಂಗ್ ವ್ಯವಸ್ಥೆ’ಯನ್ನು ಕಲ್ಪಿಸುವ ಪ್ರಯೋಗದಲ್ಲಿ ತೊಡಗಿಸಿ ಕೊಂಡಿವೆಯಂತೆ.

ಇದು ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ವಿದ್ಯುತ್ ಮತ್ತು ನೀರಿನ ಬಳಕೆಯ ಸುತ್ತ ಹುಟ್ಟಿಕೊಂಡಿರುವ ಆತಂಕಗಳು ಕಡಿಮೆಯಾಗಬಹುದು/ಇಲ್ಲವಾಗಬಹುದು. ಇನ್ನು, ಕೆಲವು ದೇಶಗಳು ‘ಎಐ’ ತಂತ್ರಜ್ಞಾನವನ್ನು ಬಳಸಿಕೊಂಡು ಯುದ್ಧ ಮಾಡುವ ಮಟ್ಟಿಗೆ ಮುಂದುವರಿದಿರುವುದು ವಿಷಾದನೀಯ.

ಸದ್ಯ ಅಮೆರಿಕವು ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ‘ಆಂಥ್ರೋಪಿಕ್’ ಸಂಸ್ಥೆಯ ‘ಕ್ಲಾಡ್’ ಕೃತಕ ಬುದ್ಧಿಮತ್ತೆ ಸಾಧನವನ್ನು ಬಳಸಿದೆ ಎಂದು ಒಂದಿಷ್ಟು ಅಂತಾ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಆಂಥ್ರೋಪಿಕ್ ಸಂಸ್ಥೆಯ ಜತೆಗಿನ ಒಪ್ಪಂದವನ್ನು ರದ್ದುಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲ ದಿನಗಳ ಹಿಂದಷ್ಟೇ ಹೇಳಿಕೊಂಡಿದ್ದರು; ಆದರೆ, ಈಗ ಇರಾನ್ ಮೇಲಿನ ದಾಳಿಯಲ್ಲಿ ಇದೇ ತಂತ್ರಜ್ಞಾನದ ಬಳಕೆಯಾಗಿದೆ ಎಂದು ವರದಿಯಾಗಿರುವುದು ಜನಸಾಮಾನ್ಯರಲ್ಲಿ ಒಂದಿಷ್ಟು ಗೊಂದಲಗಳನ್ನು ಹುಟ್ಟುಹಾಕಿದೆ.

ಹಾಗೆ ನೋಡಿದರೆ, ಗುಪ್ತಚರ ಮಾಹಿತಿ ಸಂಗ್ರಹಕ್ಕೆ ಮಾತ್ರವಲ್ಲದೆ ವಿರೋಧಿ ರಾಷ್ಟ್ರದ ಮೇಲಿನ ದಾಳಿಗೂ ಮುನ್ನ ಸ್ಥಳದ ಗುರುತಿಸುವಿಕೆ ಮತ್ತು ಯುದ್ಧಭೂಮಿಯ ಚಿತ್ರಣ ವನ್ನು ಸಿದ್ಧಪಡಿಸುವ ಸಲುವಾಗಿಯೂ ‘ಎಐ’ ತಂತ್ರಜ್ಞಾನದ ಬಳಕೆಯಾಗುತ್ತಿದೆ ಎನ್ನಲಾಗುತ್ತದೆ.

ಅಂತೆಯೇ, ಅಮೆರಿಕವು ಇದೇ ಕೆಲಸಕ್ಕಾಗಿ ‘ಕ್ಲಾಡ್’ ಕೃತಕ ಬುದ್ಧಿಮತ್ತೆ ಸಾಧನವನ್ನು ಬಳಸಿದೆ ಎಂಬುದು ಲಭ್ಯ ಮಾಹಿತಿ. ಒಟ್ಟಿನಲ್ಲಿ, ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬ ಜಾಣನುಡಿಯಂತೆ ‘ಕೃತಕ ಬುದ್ಧಿಮತ್ತೆಯು ಹೆಜ್ಜೆಯಿಡದ ಜಾಗವಿಲ್ಲ’ ಎಂಬ ಪರಿಸ್ಥಿತಿಯು ಮುಂದಿನ ದಿನಗಳಲ್ಲಿ ರೂಪುಗೊಂಡರೂ ಅಚ್ಚರಿಯಿಲ್ಲ.

ಹೀಗಾಗಿ, ‘ಎಐ’ ತಂತ್ರಜ್ಞಾನವನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಿದ್ದೇವೆ ಎಂಬುದರ ಮೇಲೆ ಮುಂದಿನ ಭವಿಷ್ಯ ರೂಪಿತವಾಗಲಿದೆ ಎಂಬುದಂತೂ ಸತ್ಯ. ಕೊನೆಯ ದಾಗಿ ಹೇಳುವುದಾದರೆ, ಮನುಷ್ಯನ ಜೀವನ ಮಟ್ಟವನ್ನು ಸುಧಾರಿಸುವುದೇ ಹೊಸ ಆವಿಷ್ಕಾರಗಳ ಗುರಿಯಾಗಿರುತ್ತದೆ; ಹಾಗೆಂದ ಮಾತ್ರಕ್ಕೆ, ಈ ಗುರಿಸಾಧನೆಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಬಲಿಕೊಡುವಂತಾಗಬಾರದು.

ಪ್ರಕೃತಿಯನ್ನು ಉಳಿಸಿ ಬೆಳೆಸುವುದು ಮನುಷ್ಯಜೀವಿಯ ಆದ್ಯಕರ್ತವ್ಯವಾಗಬೇಕು. ಇಲ್ಲವಾ ದಲ್ಲಿ, ಮನುಕುಲದ ಅಸ್ತಿತ್ವಕ್ಕೇ ಸಂಚಕಾರ ಒದಗುವುದು ನಿಶ್ಚಿತ.

(ಲೇಖಕರು ಪತ್ರಕರ್ತರು)