ಸ್ವಾತಂತ್ರ್ಯದ ಒಡಲಿನೊಳಗೆ ಸಮಸ್ಯೆಗಳ ಸಂಭ್ರಮ!
ಜಾತ್ಯತೀತ ದೇಶವೆಂದು ಹೇಳಿ ಜಾತಿಯನ್ನು ಬಲಿಷ್ಠ ಮಾಡುತ್ತಿದ್ದೇವೆ. ಯುವ ಸಮುದಾಯವನ್ನು ಧರ್ಮದ ಆಧಾರದಲ್ಲಿ ರಾಜಕಾರಣಿಗಳು ಬಲಿಕೊಡುತ್ತಿದ್ದಾರೆ. ಮಠಮಾನ್ಯಗಳು ಜಾಗೃತಾವಸ್ಥೆ ಯಲ್ಲಿರದೆ ಜಾತಿಯ ಕೂಪಗಳಾಗಿವೆ. ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಬಂಡವಾಳಶಾಹಿಗಳು, ಸಿನಿಮಾ ನಟರು, ಸಾಮಾಜಿಕ ಜಾಲತಾಣಗಳು ಯುವಕರ ವಿಚಾರಗಳಿಗೆ ಮನೋವೈಕಲ್ಯದ ಸೋಂಕು ತಗುಲಿಸುತ್ತಿದ್ದಾರೆ.
-
ಪ್ರಸ್ತುತ
ರಾಜೇಂದ್ರ ಕುಮಾರ್ ಎನ್.ಮುದ್ನಾಳ್
ಭಾರತ ಸ್ವತಂತ್ರಗೊಂಡು 80 ವರ್ಷವಾಗುತ್ತಿದೆ. ಬ್ರಿಟಿಷರಿಂದ ಬಿಡುಗಡೆಗೊಂಡ ಭಾರತ ಹಲವು ಕನಸುಗಳೊಂದಿಗೆ ತನ್ನ ಹೆಜ್ಜೆಗಳನ್ನು ಹಾಕಿತು. ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ಬಲಿ ನೀಡಿದ ಮಹನೀಯರನ್ನು ನೆನೆಯುವ ಸುದಿನ. ಅವರ ತ್ಯಾಗ ಬಲಿದಾನಕ್ಕೆ ನಾವು ಗೌರವ ಸಲ್ಲಿಸುತ್ತಿದ್ದೇವೆಯೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.
ರಾಜಕೀಯವಾಗಿ, ಭೌತಿಕವಾಗಿ ನಾವು ಸ್ವತಂತ್ರಗೊಂಡೆವು. ಆದರೂ ಬೌದ್ಧಿಕವಾಗಿ, ಮಾನಸಿಕವಾಗಿ, ಸಾಂಸ್ಕೃತಿಕವಾಗಿ ನಾವು ಸ್ವತಂತ್ರರಾಗಿದ್ದೇವೆಯೇ ಎಂದು ಪುನರ್ಮನನ ಮಾಡಿಕೊಳ್ಳುವುದಕ್ಕೆ ಇದು ಸಕಾಲ. ಏಕೆಂದರೆ ಹಲವು ಸಮಸ್ಯೆಗಳು ಭಾರತವನ್ನು ಕಾಡುತ್ತಿದೆ.
ಹಸಿವು, ನಿರುದ್ಯೋಗ, ಮಹಿಳಾ ಪೀಡನೆ, ಧಾರ್ಮಿಕ ಮೂಢನಂಬಿಕೆಗಳು, ವಂಶಾಡಳಿತಕ್ಕೆ ಜೋತುಬಿದ್ದ ಪ್ರಜಾಪ್ರಭುತ್ವ, ಜನಸಾಮಾನ್ಯರಲ್ಲಿ ವೈಚಾರಿಕತೆಯ ಕೊರತೆ, ಹಳ್ಳಿಗರು ಗುಳೆ ಹೋಗುವ ಸಮಸ್ಯೆ, ಶಾಲಾ ಶೈಕ್ಷಣಿಕ ವ್ಯವಸ್ಥೆಯಲ್ಲಿ ಗೊಂದಲಗಳು, ಭ್ರಷ್ಟಾಚಾರ, ಮೂಲಭೂತ ಸೌಕರ್ಯಗಳ ಕೊರತೆ, ರೈತರ ಆತ್ಮಹತ್ಯೆ, ನನ್ನ ಪಕ್ಷವೇ ಅಧಿಕಾರಕ್ಕೆ ಬರಬೇಕೆಂಬ ದುರಾಸೆ, ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ಹಪಹಪಿ, ಸ್ವ ಜಾತಿ ವ್ಯಾಮೋಹದ ಪರಾಕಾಷ್ಠೆ ಇತ್ಯಾದಿ ಅಂಶಗಳಿಂದ ಭಾರತ ಸ್ವತಂತ್ರಗೊಳ್ಳುವುದು ಯಾವಾಗ? ಬೇರೆಯವರಿಗೆ ಗುಲಾಮರಾಗಿದ್ದ ನಾವು, ನಮ್ಮವರಿಗೆ ಗುಲಾಮರಾಗಿದ್ದೇವೆ ಎನಿಸುವುದಿಲ್ಲವೇ? ಇಷ್ಟೆಲ್ಲ ಆತಂಕಗಳ ನಡುವೆ ಭಾರತ ಜೀವಿಸುತ್ತಿದೆ ಹೊರತು ಉಸಿರಾಡಲು ಆಗುತ್ತಿಲ್ಲ.
ಇದನ್ನೂ ಓದಿ: Mohan Vishwa Column: 1947ರ ವಿಭಜನೆಯ ರಕ್ತಸಿಕ್ತ ಅಧ್ಯಾಯ
ಈ ಪುರುಷಾರ್ಥಕ್ಕಾಗಿ ನಮಗೆ ಸ್ವಾತಂತ್ರ್ಯದ ಅವಶ್ಯಕತೆ ಇತ್ತೇ ಎಂದು ಶ್ರೀರಂಗರು ಪ್ರಶ್ನಿಸುತ್ತಾರೆ. ‘ಗತಿಗೆಟ್ಟ ಬಡವರನು ಮತಿಗೆಟ್ಟ ತರುಣರನು, ಧೃತಿಗೆಟ್ಟ ಶ್ರದ್ಧಾಳುಗಳ ವಂಚಿಸಿ, ಜಾತಿ ಪಂಗಡ ಪಕ್ಷಗಳನು ಕಟ್ಟುತ ಮೆರೆವ, ಮುಂದಾಳುಗಳಿಗೇಕೆ ಸ್ವಾತಂತ್ರ್ಯವು?’ ಎಂದು ಕವಿವಾಣಿ. ಭಾರತ ಸಮಸ್ಯೆಗಳ ಸ್ವಾತಂತ್ರ್ಯವನ್ನು ಬಯಸುತ್ತಿದೆಯೋ? ಅಥವಾ ಸಮಸ್ಯೆಗಳ ಬಿಡುಗಡೆಗಾಗಿ ಮತ್ತೊಂದು ಸ್ವಾತಂತ್ರ್ಯದ ಹೋರಾಟ ನಡೆಸುತ್ತಿದೆಯೋ ತಿಳಿಯದಾಗಿದೆ.
ಜಾತ್ಯತೀತ ದೇಶವೆಂದು ಹೇಳಿ ಜಾತಿಯನ್ನು ಬಲಿಷ್ಠ ಮಾಡುತ್ತಿದ್ದೇವೆ. ಯುವ ಸಮುದಾಯವನ್ನು ಧರ್ಮದ ಆಧಾರದಲ್ಲಿ ರಾಜಕಾರಣಿಗಳು ಬಲಿಕೊಡುತ್ತಿದ್ದಾರೆ. ಮಠಮಾನ್ಯಗಳು ಜಾಗೃತಾವಸ್ಥೆ ಯಲ್ಲಿರದೆ ಜಾತಿಯ ಕೂಪಗಳಾಗಿವೆ. ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದ ಆತ್ಮ ಹತ್ಯೆಯ ದಾರಿ ಹಿಡಿದಿದ್ದಾರೆ. ಬಂಡವಾಳಶಾಹಿಗಳು, ಸಿನಿಮಾ ನಟರು, ಸಾಮಾಜಿಕ ಜಾಲತಾಣಗಳು ಯುವಕರ ವಿಚಾರಗಳಿಗೆ ಮನೋವೈಕಲ್ಯದ ಸೋಂಕು ತಗುಲಿಸುತ್ತಿದ್ದಾರೆ.
‘ತರುಣರಿರ, ಎದ್ದೇಳಿ!’ ಕವಿತೆಯಲ್ಲಿ ಕುವೆಂಪು ಅವರು ಯುವ ಮನಸ್ಸುಗಳನ್ನು ಎಚ್ಚರಿಸುತ್ತಿದ್ದಾರೆ. ‘ಹೊಸ ಬಾಳ ಗೀತೆಯನ್ನು ದಿಕ್ಕುದೆಸೆ ಬಿರಿವಂತೆ, ಕೊರಳೆತ್ತಿ ಕೈಯೆತ್ತಿ ದನಿಯೆತ್ತಿ ಹಾಡಿ. ಸೇರಿ ನಡೆದರೆ ನಿಮ್ಮ ತಡೆಯುವವರಾರಿಲ್ಲ, ಜಗವೇ ಹಿಂಜರಿಯುವುದು ನಿಡುದಾರಿ ನೀಡಿ. ತರುಣರಿರ, ಎದ್ದೇಳಿ!’ ಎಂದು ಕರೆ ಕೊಟ್ಟ ಕುವೆಂಪು ವಿಚಾರಗಳಿಗೆ ಯುವಜನತೆ ಕಿವಿ ಕೊಡಬೇಕಿದೆ. ಕೇವಲ ನಮ್ಮ ಸ್ವಹಿತಾಸಕ್ತಿಗಳಿಗೆ ಹೋರಾಡದೆ ಸಮಷ್ಟಿ ಹಿತಕ್ಕಾಗಿ ಮನ ಮಿಡಿಯಬೇಕಾಗಿದೆ.
‘ಹರ್ ಘರ್ ತಿರಂಗ್’ ಅಭಿಯಾನದಂತೆ ಪ್ರತಿ ಮನೆಯ ಊರಿನ ಸಮಸ್ಯೆ ಬಗೆಹರಿಸುವುದು ಆಡಳಿತ ವ್ಯವಸ್ಥೆಯ ಕರ್ತವ್ಯವಲ್ಲವೇ? ಸರಕಾರಿ ನೌಕರರಿಗೆ ನಿವೃತ್ತಿ ವಯಸ್ಸನ್ನು ಗೊತ್ತು ಪಡಿಸಿದಂತೆ ಪ್ರಜಾಪ್ರತಿನಿಧಿಗಳಿಗೆ ಕೂಡ ವಯಸ್ಸಿನ ಮಿತಿಯನ್ನು ಕಡ್ಡಾಯಗೊಳಿಸುವುದು, ಸಂವಿಧಾನದ ಭಾಗವಾಗಲಿ. ಉದ್ಯಮಿಗಳು ರಾಜಕಾರಣಿಗಳಾದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವೇ? ಚುನಾವಣೆಯಲ್ಲಿ ಗೆದ್ದ ವ್ಯಕ್ತಿ ಎರಡು ಬಾರಿ ಮಾತ್ರ ಚುನಾವಣೆಗೆ ಸ್ಪರ್ಧಿಸುವಂತೆ ಸಂವಿಧಾನ ತಿದ್ದುಪಡಿಯಾಗಬೇಕು. ವಂಶಪರಂಪರೆಯ ಪ್ರಜಾಪ್ರಭುತ್ವ ಓಟಕ್ಕೆ ಕಡಿವಾಣ ಹಾಕುವ ಕಾನೂನು ಬರಬೇಕು. ಇಲ್ಲದಿದ್ದರೆ ಮತ್ತೊಂದು ಅರಸೊತ್ತಿಗೆ ಪ್ರಜಾಪ್ರಭುತ್ವ ವಿಜೃಂಭಿಸಿ ಬಡವರ ಬಿನ್ನಪವನ್ನು ಯಾರು ಕೇಳುವುದೇ ಇಲ್ಲ.