Gururaj Gantihole Column: ಬೊಕ್ಕಸಕ್ಕೆ 45000 ಕೋಟಿ ರೂ ಅಬಕಾರಿ ಗುರಿ, ಅನ್ನದಾತನಿಗೆ 50 ರು..ಭಿಕ್ಷೆ !
ಕಬ್ಬಿನ ಉಪಉತ್ಪನ್ನಗಳ ಮೂಲದಿಂದಲೇ ರಾಜ್ಯದ ಖಜಾನೆಗೆ ಹರಿದು ಬರುವ ಸಾವಿರಾರು ಕೋಟಿ ರೂಪಾಯಿಗಳ ಆದಾಯದ ಸತ್ಯವೇನು, ಕೇಂದ್ರ ಸರ್ಕಾರದ ಕೊಡುಗೆ ಏನು ಮತ್ತು ರಾಜ್ಯ ಸರ್ಕಾರವು ಹೇಗೆ ಜಾಣತನದಿಂದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂಬ ನೈಜ ವಾಸ್ತವವನ್ನು ರಾಜ್ಯದ ಜನತೆಯ ಮುಂದೆ ಬಿಚ್ಚಿಡಬೇಕಿದೆ.
-
ಗಂಟಾಘೋಷ
ಕರ್ನಾಟಕದ ಕೃಷಿ ಆರ್ಥಿಕತೆಯ ಬೆನ್ನೆಲುಬಾಗಿರುವ ಕಬ್ಬು ಬೆಳೆಗಾರರು ಇಂದು ತಮ್ಮ ಬೆವರಿನ ಬೆಲೆಗಾಗಿ ಬೀದಿಗಿಳಿದು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯ ಪುರ, ಕಲಬುರಗಿ, ಯಾದಗಿರಿ ಮತ್ತು ಮಂಡ್ಯ ಸೇರಿದಂತೆ ನಾಡಿನಾದ್ಯಂತ ಹೆದ್ದಾರಿಗಳನ್ನು ತಡೆದು ಅನ್ನದಾತರು ತಮ್ಮ ನ್ಯಾಯಯುತ ಹಕ್ಕಿಗಾಗಿ ರಣಕಹಳೆ ಮೊಳಗಿಸಿದ್ದಾರೆ.
ಬಿಸಿಲು, ಮಳೆ ಎನ್ನದೆ ಮಣ್ಣಿನಲ್ಲಿ ಬೆವರು ಸುರಿಸಿ ಬೆಳೆದ ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಗಬೇಕು, ಕಟಾವು-ಸಾಗಾಣಿಕೆಯ ಹೆಸರಿನಲ್ಲಿ ನಡೆಯುತ್ತಿರುವ ಸುಲಿಗೆ ನಿಲ್ಲಬೇಕು ಎಂಬುದು ರೈತರ ನ್ಯಾಯಸಮ್ಮತ ಆಗ್ರಹವಾಗಿದೆ. ಆದರೆ, ರಾಜ್ಯ ಸರ್ಕಾರವು ರೈತರ ಈ ನ್ಯಾಯಯುತ ಸಂಕಷ್ಟವನ್ನು ಪರಿಹರಿಸುವ ಬದಲು, ತನ್ನ ಆಡಳಿತಾತ್ಮಕ ವೈಫಲ್ಯ ಮತ್ತು ಆರ್ಥಿಕ ದಿವಾಳಿತನವನ್ನು ಮುಚ್ಚಿ ಕೊಳ್ಳಲು ಕೇಂದ್ರ ಸರ್ಕಾರದತ್ತ ಬೆರಳು ತೋರಿಸುತ್ತಿರುವುದು ಅತ್ಯಂತ ಲಜ್ಜೆಗೆಟ್ಟ ರಾಜಕಾರಣ ವಾಗಿದೆ.
ಕಬ್ಬಿನ ಉಪಉತ್ಪನ್ನಗಳ ಮೂಲದಿಂದಲೇ ರಾಜ್ಯದ ಖಜಾನೆಗೆ ಹರಿದುಬರುವ ಸಾವಿರಾರು ಕೋಟಿ ರೂಪಾಯಿಗಳ ಆದಾಯದ ಸತ್ಯವೇನು, ಕೇಂದ್ರ ಸರ್ಕಾರದ ಕೊಡುಗೆ ಏನು ಮತ್ತು ರಾಜ್ಯ ಸರ್ಕಾರವು ಹೇಗೆ ಜಾಣತನದಿಂದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂಬ ನೈಜ ವಾಸ್ತವವನ್ನು ರಾಜ್ಯದ ಜನತೆಯ ಮುಂದೆ ಬಿಚ್ಚಿಡಬೇಕಿದೆ.
ಇದನ್ನೂ ಓದಿ: Gururaj Gantihole Column: ಎಲ್ʼನಿನೊ ತಂದ ಬರಗಾಲ ಮತ್ತು ಎಲ್ಲಿ ನೀರು ಎಂಬ ಎಚ್ಚರಿಕೆ
ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಐತಿಹಾಸಿಕ ಬದ್ಧತೆ : ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಸದಾ ಮುಂಚೂಣಿಯಲ್ಲಿದೆ. 2014ರಲ್ಲಿ ದೇಶಾದ್ಯಂತ ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾಗಿದ್ದ ಸುಮಾರು 23000 ಕೋಟಿಗಳಿಗೂ ಅಧಿಕ ಬೃಹತ್ ಬಾಕಿ ಮೊತ್ತವನ್ನು ವ್ಯವಸ್ಥಿತ ಸುಧಾರಣೆಗಳ ಮೂಲಕ ತೀರಿಸಿ ರೈತರ ಕಣ್ಣೀರು ಒರೆಸಿದ್ದು ಕೇಂದ್ರ ಸರ್ಕಾರ.
ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ (CACP) ಶಿಫಾರಸಿನಂತೆ, ಕೇಂದ್ರ ಸರ್ಕಾರವು ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (FRP) ಸತತವಾಗಿ ಏರಿಸುತ್ತಲೇ ಬಂದಿದೆ. 2026-27ನೇ ಸಾಲಿಗೆ ಕಬ್ಬಿನ ಅಂದಾಜು ಉತ್ಪಾದನಾ ವೆಚ್ಚ (A2+FL) ಪ್ರತಿ ಟನ್ಗೆ 1820 (ಕ್ವಿಂಟಾಲ್ಗೆ 182) ರಷ್ಟಿದೆ. ಆದರೆ ಕೇಂದ್ರ ಸಚಿವ ಸಂಪುಟವು ರೈತರ ಹಿತದೃಷ್ಟಿಯಿಂದ ಉತ್ಪಾದನಾ ವೆಚ್ಚಕ್ಕಿಂತ ಶೇಕಡಾ 100.5ರಷ್ಟು ಅಧಿಕವಾಗಿ, ಅಂದರೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿ ಪ್ರತಿ ಟನ್ಗೆ 3650 ರೂಪಾಯಿಗಳ ದರವನ್ನು ನಿಗದಿಪಡಿಸಿದೆ.
ಶೇಕಡಾ 10.25ರ ಸಕ್ಕರೆ ಇಳುವರಿಯನ್ನು ಮೂಲ ಮಾನದಂಡವನ್ನಾಗಿಸಿ, ಇಳುವರಿಯಲ್ಲಿನ ಪ್ರತಿ ಶೇ. 0.1ರಷ್ಟು ಹೆಚ್ಚಳಕ್ಕೂ ಪ್ರತಿ ಟನ್ಗೆ ಹೆಚ್ಚುವರಿಯಾಗಿ 35.60 ಪಾವತಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ. ಇಳುವರಿ ಶೇ.9.5ಕ್ಕಿಂತ ಕಡಿಮೆಯಾದರೂ ರೈತರಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಪ್ರತಿ ಟನ್ಗೆ ಕನಿಷ್ಠ 3383ರ ಭದ್ರತಾ ಕವಚವನ್ನೂ ಕೇಂದ್ರವೇ ಒದಗಿಸಿದೆ.
ಅಷ್ಟೇ ಅಲ್ಲದೆ, ಎಥೆನಾಲ್ ಮಿಶ್ರಣ ಯೋಜನೆಯನ್ನು ಕ್ರಾಂತಿಕಾರಿಯಾಗಿ ವಿಸ್ತರಿಸಿ ಸಕ್ಕರೆ ಕಾರ್ಖಾನೆಗಳಿಗೆ ನಿರಂತರ ಹಣದ ಹರಿವು ಬರುವಂತೆ ಮಾಡಿದ್ದರಿಂದಲೇ 2024-25ನೇ ಸಾಲಿನ 1,02,687 ಕೋಟಿ ಕಬ್ಬಿನ ಬಾಕಿಯಲ್ಲಿ ಶೇ.99.5ರಷ್ಟು ಹಣ ರೈತರ ಕೈಸೇರಿದೆ.
ಇನ್ನು ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಕುರಿತಂತೆ ರಾಜ್ಯ ಸರ್ಕಾರ ಮಾಡುತ್ತಿರುವ ಅಪಪ್ರಚಾರ ಹಾಸ್ಯಾಸ್ಪದ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸ್ಪಷ್ಟಪಡಿಸಿರುವಂತೆ, 31 ಎಂಬುದು ಕಾರ್ಖಾನೆಗಳು ನಷ್ಟಕ್ಕೀಡಾಗಬಾರದು ಎಂದು ನಿಗದಿಪಡಿಸಿದ ಕನಿಷ್ಠ ತಳಮಟ್ಟದ ಬೆಲೆಯೇ ಹೊರತು ಗರಿಷ್ಠ ಮಿತಿಯಲ್ಲ. ಇಂದು ಮಾರುಕಟ್ಟೆಯಲ್ಲಿ ಸಕ್ಕರೆಯು ಮುಕ್ತವಾಗಿ 44 ರಿಂದ 50ರ ದರದಲ್ಲಿ ಮಾರಾಟವಾಗುತ್ತಿದೆ. ಆದರೂ ರೈತರ ಹಿತದೃಷ್ಟಿಯಿಂದ ಎಂಎಸ್ಪಿ ಹಾಗೂ ಎಫ್ʼಆರ್ಪಿ ಸಮಗ್ರ ಪರಿಶೀಲನೆಗೆ ಕೇಂದ್ರ ಸರ್ಕಾರ ಈಗಾಗಲೇ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ಬಹುರಾಜ್ಯಗಳ ಮಾತುಕತೆಗೂ ಸದಾ ಬಾಗಿಲು ತೆರೆದಿದೆ.
ಎಲ್ಲಿ ಹೋಯಿತು ಅಬಕಾರಿ ಆದಾಯ?: ಈಗ ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕಾದ ಅತ್ಯಂತ ಮಹತ್ವದ ಆರ್ಥಿಕ ಸತ್ಯ ಇಲ್ಲಿದೆ. ಸಕ್ಕರೆ ಕಾರ್ಖಾನೆಗಳ ಮೂಲ ಆದಾಯ ಬರುವುದು ಕೇವಲ ಬಿಳಿ ಸಕ್ಕರೆಯಿಂದ ಮಾತ್ರವಲ್ಲ; ಕಬ್ಬನ್ನು ಅರೆದಾಗ ಸಿಗುವ ಮುಖ್ಯ ಉಪಉತ್ಪನ್ನ ‘ಮೊಲಾಸಿಸ್’ ( Molasses ). ಈ ಮೊಲಾಸಿಸ್ ಅನ್ನು ಸಂಸ್ಕರಿಸಿ ತಯಾರಿಸುವ ‘ಎಕ್ಸ್ಟ್ರಾ ನ್ಯೂಟ್ರಲ್ ಆಲ್ಕೋ ಹಾಲ್’ (ENA) ದೇಶದ ಮದ್ಯ ಉದ್ಯಮದ ಪ್ರಮುಖ ಜೀವಾಳ.
ಭಾರತೀಯ ಸಂವಿಧಾನದ ಪ್ರಕಾರ ಮಾನವ ಬಳಕೆಯ ಮದ್ಯದ ಮೇಲೆ ತೆರಿಗೆ ವಿಧಿಸುವ ಸಂಪೂರ್ಣ ಏಕಸ್ವಾಮ್ಯ ಸಾಂವಿಧಾನಿಕ ಅಧಿಕಾರ ಇರುವುದು ರಾಜ್ಯ ಸರ್ಕಾರಕ್ಕೆ ಮಾತ್ರ. 2025-26ರಲ್ಲಿ ಅಬಕಾರಿ ಇಲಾಖೆಯಿಂದ 36500 ಕೋಟಿಗೂ ಅಧಿಕ ತೆರಿಗೆ ಬಾಚಿಕೊಂಡ ಸಿದ್ದರಾಮಯ್ಯ ಸರ್ಕಾರ, 2026-27ನೇ ಸಾಲಿನ ಬಜೆಟ್ನಲ್ಲಿ ಬರೋಬ್ಬರಿ 45000 ಕೋಟಿ ರೂಪಾಯಿಗಳ ಅಬಕಾರಿ ಆದಾಯದ ಗುರಿ ನಿಗದಿಪಡಿಸಿದೆ!
ಮದ್ಯ ತಯಾರಿಕೆಯ ಕಚ್ಚಾವಸ್ತುವಿನಲ್ಲಿ ಸಿಂಹಪಾಲು (ಸುಮಾರು ಶೇ. 50ಕ್ಕೂ ಹೆಚ್ಚು) ನೇರವಾಗಿ ಕಬ್ಬಿನ ಮೊಲಾಸಿಸ್ನಿಂದಲೇ ಪೂರೈಕೆಯಾಗುತ್ತದೆ. ಇದಲ್ಲದೆ ಸಕ್ಕರೆ, ಮೊಲಾಸಿಸ್ ಮತ್ತು ಇಂಧನ ಎಥೆನಾಲ್ ಮಾರಾಟದ ಮೇಲೆ ರಾಜ್ಯ ಸರ್ಕಾರಕ್ಕೆ ಶೇ. 2.5ರಷ್ಟು ರಾಜ್ಯ ಜಿಎಸ್ಟಿ (SGST) ಸಿಗುತ್ತದೆ.
ಅಂದರೆ, ಕಬ್ಬು ಬೆಳೆಗಾರನ ಬೆವರಿನ ಉಪಉತ್ಪನ್ನಗಳನ್ನೇ ಆಧಾರವಾಗಿಟ್ಟುಕೊಂಡು ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿಗಳ ತೆರಿಗೆ ಸಂಪತ್ತನ್ನು ರಾಜ್ಯದ ಖಜಾನೆಗೆ ತುಂಬಿಸಿಕೊಳ್ಳುವ ರಾಜ್ಯ ಸರ್ಕಾರ, ಅದೇ ಕಬ್ಬು ಬೆಳೆದ ರೈತನಿಗೆ ಕೊಟ್ಟಿದ್ದೇನು? ಕಳೆದ ಸಾಲಿನಲ್ಲಿ ರೈತರು ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸಿದಾಗ, ಕಾಟಾಚಾರಕ್ಕೆಂಬಂತೆ ರಾಜ್ಯ ಬಜೆಟ್ನಿಂದ ಪ್ರತಿ ಟನ್ಗೆ ಕೇವಲ 50 ರೂಪಾಯಿಗಳ (ಒಟ್ಟು 300 ಕೋಟಿ) ಅಲ್ಪ ಸಹಾಯಧನ ಘೋಷಿಸಿ ಕೈತೊಳೆದು ಕೊಂಡಿತು!
ಇಡೀ ಕಬ್ಬಿನ ಮೌಲ್ಯವರ್ಧನೆಯಲ್ಲಿ ಸಾವಿರಾರು ಕೋಟಿ ಆದಾಯವನ್ನು ಬಾಚಿಕೊಳ್ಳುವ ರಾಜ್ಯ ಸರ್ಕಾರವು ರೈತರಿಗೆ ನ್ಯಾಯಯುತ ಬೆಲೆ ಕೊಡುವ ವಿಚಾರ ಬಂದಾಗ ಮಾತ್ರ ಕೇವಲ 50 ನೀಡಿ ಕೇಂದ್ರದತ್ತ ಬೊಟ್ಟು ಮಾಡುವುದು ರಾಜಕೀಯ ವಂಚನೆಯಲ್ಲವೇ?
ರಾಜ್ಯ ಸರ್ಕಾರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಏಕೆ?: ಕಬ್ಬಿನ ಬಿಕ್ಕಟ್ಟಿನಲ್ಲಿ ಕರ್ನಾಟಕ ಸರ್ಕಾರವು ಹೊಣೆಗಾರಿಕೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿರುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ: ಮೊದಲನೆಯದಾಗಿ, ಸರ್ಕಾರದ ಒಳಗಿರುವ ‘ಪ್ರಭಾವಿ ಸಕ್ಕರೆ ಲಾಬಿ’. ಕರ್ನಾಟಕದ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಒಡೆತನದಲ್ಲಿವೆ. ಅದರಲ್ಲೂ ಪ್ರಭಾವಿ ಸಚಿವರು, ಶಾಸಕರು ಮತ್ತು ಅವರ ಕುಟುಂಬಸ್ಥರೇ ಹಲವು ಬೃಹತ್ ಸಕ್ಕರೆ, ಡಿಸ್ಟಿಲರಿ ಮತ್ತು ಎಥೆನಾಲ್ ಕಾರ್ಖಾನೆಗಳ ಮಾಲೀಕರಾಗಿದ್ದಾರೆ.
2013ರ ಕರ್ನಾಟಕ ಕಬ್ಬು ನಿಯಂತ್ರಣ ಕಾಯ್ದೆಯ ಪ್ರಕಾರ (ರಂಗರಾಜನ್ ಸಮಿತಿ ಸೂತ್ರ), ಕಾರ್ಖಾನೆಗಳು ಸಕ್ಕರೆ ಮತ್ತು ಉಪಉತ್ಪನ್ನಗಳಿಂದ ಗಳಿಸುವ ಒಟ್ಟು ಆದಾಯದ ಶೇ.70ರಷ್ಟನ್ನು ರೈತರಿಗೆ ಹಂಚಿಕೆ ಮಾಡಬೇಕು. ಆದರೆ, ರಾಜ್ಯ ಸರ್ಕಾರದ ಅಧೀನದಲ್ಲಿರುವ ಕಬ್ಬು ನಿಯಂತ್ರಣ ಮಂಡಳಿಯು ಸಚಿವರಾದಿ ಯಾಗಿ ಪ್ರಭಾವಿಗಳ ಕಾರ್ಖಾನೆಗಳ ಪಾರದರ್ಶಕ ಲೆಕ್ಕಪರಿಶೋಧನೆ (Audit) ನಡೆಸಿ ರೈತರಿಗೆ ಲಾಭಾಂಶ ಕೊಡಿಸುವ ಗೋಜಿಗೆ ಹೋಗುತ್ತಿಲ್ಲ. ಎರಡನೆಯದಾಗಿ, ವ್ಯವಸ್ಥಿತ ಅಪಪ್ರಚಾರ ಮತ್ತು ಜಾಣ ಮೌನ.
ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವೇ ಸ್ಪಷ್ಟಪಡಿಸಿರುವಂತೆ, ಕೇಂದ್ರದ ಎಫ್ʼಆರ್ಪಿಗಿಂತ ಹೆಚ್ಚಿನ ದರವನ್ನು ‘ರಾಜ್ಯ ಸಲಹೆ ಬೆಲೆ’ (SAP) ಯಾಗಿ ಘೋಷಿಸಿ ಬಜೆಟ್ನಿಂದ ಹಣ ಕೊಡುವ ಸಂಪೂರ್ಣ ಅಧಿಕಾರ ರಾಜ್ಯಕ್ಕಿದೆ ಎಂಬ ಸತ್ಯವನ್ನು ಸರ್ಕಾರ ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆ.
ಪಂಜಾಬ್, ಹರಿಯಾಣ, ಯುಪಿ, ತಮಿಳುನಾಡು ನೀಡುವಾಗ ಕರ್ನಾಟಕಕ್ಕೆ ಬಂದ ರೋಗವೇನು?: ಇತರ ರಾಜ್ಯ ಸರ್ಕಾರಗಳು ರೈತರ ಸಂಕಷ್ಟಕ್ಕೆ ಮಿಡಿದು ಕೇಂದ್ರದ ಎಫ್ʼಆರ್ಪಿಗಿಂತ ಹೆಚ್ಚಿನ ರಾಜ್ಯ ಸಲಹೆ ಬೆಲೆ (SAP) ಹಾಗೂ ನೇರ ಸಬ್ಸಿಡಿಯನ್ನು ಘೋಷಿಸಿವೆ.
ಪಂಜಾಬ್: ಪ್ರತಿ ಟನ್ಗೆ 4160 ನಿಗದಿಪಡಿಸಿದ್ದು, ರೈತರಿಗೆ ಹೊರೆಯಾಗದಂತೆ ಪ್ರತಿ ಟನ್ಗೆ 685 ಮೊತ್ತವನ್ನು ಪಂಜಾಬ್ ಸರ್ಕಾರವೇ ತನ್ನ ರಾಜ್ಯ ಬಜೆಟ್ನಿಂದ ನೇರವಾಗಿ ಸಬ್ಸಿಡಿ ರೂಪದಲ್ಲಿ ಭರಿಸುತ್ತಿದೆ.
ಹರಿಯಾಣ: ಪ್ರತಿ ಟನ್ಗೆ 4150 ನಿಗದಿಪಡಿಸಿ ರಾಜ್ಯ ಬೊಕ್ಕಸದಿಂದ ಸಬ್ಸಿಡಿ ನೀಡುತ್ತಿದೆ.
ಉತ್ತರ ಪ್ರದೇಶ: ಪ್ರತಿ ಟನ್ಗೆ 4000 ಘೋಷಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ.
ತಮಿಳುನಾಡು: ಎಫ್ʼಆರ್ಪಿ ಜೊತೆಗೆ ರಾಜ್ಯ ಬಜೆಟ್ನಿಂದ 603.34 ಕೋಟಿ ಮಂಜೂರು ಮಾಡಿದ್ದು, ಪ್ರತಿ ಟನ್ಗೆ 709.50 ವಿಶೇಷ ಪ್ರೋತ್ಸಾಹಧನ ನೀಡುವ ಮೂಲಕ ರೈತರಿಗೆ ಟನ್ಗೆ 4000 ಸಿಗುವಂತೆ ಮಾಡಿದೆ. ಆದರೆ ಕರ್ನಾಟಕ ಸರ್ಕಾರ ಮಾಡಿದ್ದೇನು? ಈ ಹಿಂದೆ 2022ರಲ್ಲಿ ಎಥೆನಾಲ್ ಘಟಕ ಹೊಂದಿರುವ ಕಾರ್ಖಾನೆಗಳು ಪ್ರತಿ ಟನ್ಗೆ 150 ಹೆಚ್ಚುವರಿ ನೀಡಬೇಕೆಂದು ಹೊರಡಿಸಿದ್ದ ಆದೇಶದ ಬಾಕಿಯನ್ನು ಕಾರ್ಖಾನೆಗಳಿಂದ ವಸೂಲಿ ಮಾಡಿಕೊಡುವಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ. ಇನ್ನು ಕಳೆದ ವರ್ಷ ಬಜೆಟ್ನಿಂದ ಕೊಟ್ಟಿದ್ದು ಟನ್ಗೆ ಕೇವಲ 50 ಮಾತ್ರ!
ಕಟಾವು-ಸಾಗಾಣಿಕೆ ಸುಲಿಗೆಗೆ ಕಡಿವಾಣ ಹಾಕಿ, ಬಜೆಟ್ನಿಂದ ನೇರ ಪ್ಯಾಕೇಜ್ ನೀಡಿ: ಕರ್ನಾಟಕದಲ್ಲಿ ‘ಕಟಾವು ಮತ್ತು ಸಾಗಾಣಿಕೆ’ (HT) ಹೆಸರಿನಲ್ಲಿ ಸಕ್ಕರೆ ಕಾರ್ಖಾನೆಗಳು ರೈತರ ಬಿಲ್ನಲ್ಲಿ ಪ್ರತಿ ಟನ್ಗೆ 700 ರಿಂದ 950 ರವರೆಗೆ ನೇರವಾಗಿ ಮುರಿದುಕೊಳ್ಳುತ್ತಿವೆ. ಕಾರ್ಖಾನೆಗಳು ತೂಕದ ಯಂತ್ರಗಳ ವಂಚನೆ ಮತ್ತು ಅಕ್ರಮ ಕಡಿತವನ್ನು ಮಾಡುತ್ತಿದ್ದಾರೆ ಎಂದು ರೈತರು ಪದೇ ಪದೆ ಆರೋಪಿಸುತ್ತಿದ್ದಾರೆ. ಇದನ್ನು ಪರೀಕ್ಷಿಸಬೇಕಾದ ಜಿಲ್ಲಾಡಳಿತ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರು ಯಾವುದೇ ಪರಿಶೀಲನೆ ಮಾಡದೆ ಗಾಢ ನಿದ್ರೆಯಲ್ಲಿದ್ದಾರೆ ಎಂದೂ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರಕಾರವು ಉತ್ತರ ಪ್ರದೇಶ, ಪಂಜಾಬ್ ಮತ್ತು ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲೂ ತಕ್ಷಣವೇ ಪ್ರತಿ ಟನ್ಗೆ ಕನಿಷ್ಠ 4000 ದರ ಸಿಗುವಂತೆ ಅಧಿಕೃತ ರಾಜ್ಯ ಸಲಹೆ ಬೆಲೆ ಘೋಷಿಸಬೇಕು. 45000 ಕೋಟಿ ಅಬಕಾರಿ ಆದಾಯದ ಗುರಿ ಹೊಂದಿರುವ ರಾಜ್ಯ ಸರ್ಕಾರವು ಕೇವಲ 50 ಭಿಕ್ಷೆಯ ಬದಲು, ಪಂಜಾಬ್ ಮತ್ತು ತಮಿಳುನಾಡು ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ ಕನಿಷ್ಠ 500 ರಿಂದ 1000 ರೂಪಾಯಿಗಳ ವಿಶೇಷ ಪ್ರೋತ್ಸಾಹಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
ಮುಖ್ಯವಾಗಿ ಕಟಾವು ಮತ್ತು ಸಾಗಾಣಿಕೆ ವೆಚ್ಚದ ಸುಲಿಗೆಗೆ ತಕ್ಷಣವೇ ಇತಿಶ್ರೀ ಹಾಡಿ, ಸಕ್ಕರೆ ಕಾರ್ಖಾನೆಗಳ ಉಪಉತ್ಪನ್ನಗಳ ಲಾಭಾಂಶದ ಪಾರದರ್ಶಕ ಆಡಿಟ್ ನಡೆಸಿ ರೈತರಿಗೆ ಶೇ.70ರಷ್ಟು ನ್ಯಾಯಯುತ ಪಾಲು ಕೊಡಿಸಬೇಕು. ದೇಶಕ್ಕೆ ಅನ್ನ ನೀಡುವ ಕೃಷಿಕರು ಇಂದು ತಮ್ಮ ನ್ಯಾಯ ಯುತ ಹಕ್ಕಿಗಾಗಿ ರಸ್ತೆಗಿಳಿದು ಹೋರಾಡುತ್ತಿರುವುದು ರಾಜ್ಯದ ಆಡಳಿತ ವ್ಯವಸ್ಥೆಯ ಅತಿದೊಡ್ಡ ದುರಂತ.
ಕಬ್ಬಿನಿಂದ ಬರುವ ಸಾವಿರಾರು ಕೋಟಿ ತೆರಿಗೆಯನ್ನು ನುಂಗಿ ನೀರು ಕುಡಿಯುತ್ತಿರುವ ಸರ್ಕಾರ, ಸಕ್ಕರೆ ಕಾರ್ಖಾನೆಗಳ ಮಾಲೀಕರಾದ ಸಚಿವರು ಮತ್ತು ಶಾಸಕರ ಹಿತರಕ್ಷಣೆಗಾಗಿ ರೈತರ ಕುತ್ತಿಗೆ ಹಿಸುಕುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ರೈತರ ಹಿತ ಕಾಯಲು ನಿರಂತರವಾಗಿ ಬೆಲೆ ಹೆಚ್ಚಿಸುತ್ತಾ ಶ್ರಮಿಸುತ್ತಿದ್ದರೆ, ರಾಜ್ಯ ಸರ್ಕಾರ ಮಾತ್ರ ಕೇವಲ ಸುಳ್ಳು ನೆಪಗಳನ್ನು ಹೇಳಿಕೊಂಡು ಕಾಲಹರಣ ಮಾಡುತ್ತಿದೆ.
ಅನ್ನದಾತನ ಕಣ್ಣೀರಿನ ಶಾಪ ಯಾವುದೇ ಸರ್ಕಾರಕ್ಕೂ ಒಳಿತಲ್ಲ. ಮುಖ್ಯಮಂತ್ರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಮದ್ಯದಿಂದ ಬರುವ ಅಬಕಾರಿ ಆದಾಯದ ಒಂದು ಪಾಲನ್ನು ಕಬ್ಬು ಬೆಳೆಗಾರ ರಿಗೆ ವಿಶೇಷ ಪ್ರೋತ್ಸಾಹಧನವಾಗಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಇಲ್ಲದಿದ್ದರೆ, ತಮ್ಮ ಬೆವರಿನ ಬೆಲೆ ಕೇಳುತ್ತಿರುವ ರೈತರ ಈ ಸಿಡಿದೆದ್ದ ಆಕ್ರೋಶದ ಅಲೆಗೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ.