Raghava Sharma Nidle Column: ಅಷ್ಟಕ್ಕೂ ʼರೆಜೀಮ್ ಚೇಂಜ್ʼ ಯಾರಿಗೆ ಬೇಕಿದೆ ?
ರಾಜಕೀಯ ಪರಿಭಾಷೆಯಲ್ಲಿ Change of Government ಮತ್ತು Regime Change ಪದಗಳು ಎಲ್ಲ ಸಂದರ್ಭ ಗಳಲ್ಲಿಯೂ ಒಂದೇ ಅರ್ಥ ನೀಡುವುದಿಲ್ಲ. ಚುನಾವಣೆಯಲ್ಲಿ ಒಂದು ಪಕ್ಷ ಸೋತು ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದರೆ ಅದು ಸರ್ಕಾರ ಬದಲಾವಣೆ. ಆದರೆ ರೆಜೀಮ್ ಚೇಂಜ್ ಎಂಬ ಪದ ಹಲವು ಸಂದರ್ಭಗಳಲ್ಲಿ ಆಡಳಿತದ ಮೂಲ ಸ್ವರೂಪ,
-
ಜನಪಥ
ಸುಪ್ರೀಂ ಕೋರ್ಟ್ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ‘ರೆಜೀಮ್ ಚೇಂಜ್’ ಹೇಳಿಕೆ, ಯುವ ಹೋರಾಟಗಾರ್ತಿ, ಎಡಪಂಥೀಯ ಎಐಎಸ್ಎ ಸಂಘಟನೆಯ ಅಧ್ಯಕ್ಷೆ ನೇಹಾ ಬೋರಾ ಅವರ ಬಾಂಗ್ಲಾದೇಶ ಮಾದರಿಯ ಪ್ರಸ್ತಾಪ, ರಾಹುಲ್ ಗಾಂಧಿಯವರ ಚುನಾವಣಾ ಆಯೋಗದ ವಿರುದ್ಧದ ಹೋರಾಟ ಹಾಗೂ ನೇಪಾಳ-ಬಾಂಗ್ಲಾದೇಶದಲ್ಲಿ ನಡೆದ ಅಧಿಕಾರ ಬದಲಾವಣೆಗಳು ಇದೀಗ ಭಾರತದ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
ಸರ್ಕಾರವನ್ನು ಚುನಾವಣೆಯಲ್ಲಿ ಸೋಲಿಸುವುದಕ್ಕೂ, ಅಸ್ತಿತ್ವದಲ್ಲಿರುವ ರಾಜಕೀಯ ವ್ಯವಸ್ಥೆ ಯನ್ನೇ ಬದಲಿಸುವುದಕ್ಕೂ ಇರುವ ವ್ಯತ್ಯಾಸ ಈ ಚರ್ಚೆಯ ಕೇಂದ್ರಬಿಂದು. ಭಾರತದಲ್ಲೂ ಬಾಂಗ್ಲಾ, ನೇಪಾಳ ಮಾದರಿಯಲ್ಲಿ ಅಧಿಕಾರದ ಬದಲಾವಣೆಯಾಗಬೇಕು ಎಂಬ ಆಶಯ ಒಳಗೊಳಗೇ ಮೋದಿ ವಿರೋಧಿ ಮನಸ್ಸುಗಳಲ್ಲಿ ಜೋರಾಗತೊಡಗಿದೆ. ಆದರೆ, ಭಾರತದಂತಹ ಪ್ರಜಾತಾಂತ್ರಿಕ ವ್ಯವಸ್ಥೆ, ಜಾಗೃತ ಮತದಾರ ಹಾಗೂ ಪ್ರಜ್ಞಾವಂತ ನಾಗರಿಕ ವ್ಯವಸ್ಥೆಯನ್ನು ಬೇಧಿಸಿ ಅದನ್ನು ನಿಜ ಮಾಡುವುದು ಕಷ್ಟದ ಮಾತೇ ಸರಿ.
ಸರ್ಕಾರದ ವಿರುದ್ಧ ಪ್ರತಿಭಟಿಸುವುದು ಭಾರತೀಯ ಪ್ರಜಾಪ್ರಭುತ್ವದಲ್ಲಿ ಹೊಸ ಬೆಳವಣಿಗೆಯಲ್ಲ. ಸ್ವಾತಂತ್ರ್ಯ ಹೋರಾಟದಿಂದ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯವರೆಗೆ, ಅಸ್ಸಾಂ ವಿದ್ಯಾರ್ಥಿ ಹೋರಾಟದಿಂದ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದವರೆಗೆ ಜನರ ಅಸಮಾಧಾನವು ದೇಶದ ರಾಜಕೀಯ ದಿಕ್ಕನ್ನು ಹಲವು ಬಾರಿ ಬದಲಿಸಿದೆ. ಆದರೆ ಇತ್ತೀಚೆಗೆ ರಾಜಕೀಯ ಚರ್ಚೆಯಲ್ಲಿ ಮುನ್ನೆಲೆಗೆ ಬಂದಿರುವ ‘ರೆಜೀಮ್ ಚೇಂಜ್’ (ಆಡಳಿತ ಸರ್ಕಾರದ ಬದಲಾವಣೆ) ಎಂಬ ಪದವು ಸರ್ಕಾರ ಬದಲಾವಣೆಯ ಪ್ರಶ್ನೆಯನ್ನು ಮೀರಿ ಹೊಸ ವಿವಾದ ಸೃಷ್ಟಿಸಿದೆ.
ಇದನ್ನೂ ಓದಿ: Raghava Sharma Nidle Column: ವೋಟ್ ಚೋರಿ ಅಸ್ತ್ರವೂ, ರಾಜಕೀಯ ಲೆಕ್ಕವೂ
ಅ.15ರಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆಡಳಿತ ಬದಲಾವಣೆಯ ಕುರಿತು ಬಹಿರಂಗ ವಾಗಿ ಮಾತನಾಡಿದರು. ಸರ್ಕಾರ ಬದಲಾವಣೆಗೆ ಆಗ್ರಹಿಸುವುದರಲ್ಲಿ ತಪ್ಪೇನಿದೆ ಎಂಬ ಪ್ರಶ್ನೆ ಯನ್ನೂ ಮುಂದಿಟ್ಟರು. ಅಖಿಲ ಭಾರತ ವಿದ್ಯಾರ್ಥಿಗಳ ಸಂಘಟನೆಯ ಅಧ್ಯಕ್ಷೆ ನೇಹಾ ಬೋರಾ ಬಾಂಗ್ಲಾದೇಶದ ಯುವಜನರ ಹೋರಾಟವನ್ನು ಭಾರತದ ಯುವಕರಿಗೆ ಪ್ರೇರಣೆಯೆಂದು ಬಣ್ಣಿಸಿದರು.
ಅಲ್ಲಿನ ಯುವಜನರ ಹೋರಾಟವು ದಾರಿ ತೋರಿಸಿದೆ. ಬಾಂಗ್ಲಾ ಯುವಜನರ ಚಳವಳಿಯಿಂದ ಸೂರ್ತಿ ಮತ್ತು ಪಾಠಗಳನ್ನು ಪಡೆಯುವುದಾಗಿ ತಿಳಿಸಿ, ಭಾರತದ ಯುವಕರ ಹೋರಾಟವನ್ನೂ ಪ್ರಜಾಸತ್ತಾತ್ಮಕ ಹಾಗೂ ಮತದಾನದ ಹಕ್ಕುಗಳ ರಕ್ಷಣೆಯೊಂದಿಗೆ ಜೋಡಿಸಿದ್ದರು. ಬಿಜೆಪಿ ನಾಯಕರು ಈ ಹೇಳಿಕೆಗಳನ್ನು ಬಾಂಗ್ಲಾದೇಶ ಮಾದರಿಯ ಅಧಕಾರ ಬದಲಾವಣೆಗೆ ನಡೆಯುತ್ತಿರುವ ಪ್ರಯತ್ನವೆಂದು ಟೀಕಿಸಿದರು.
ಹಾಗಾದರೆ ಭಾರತದಲ್ಲಿ ನಡೆಯುತ್ತಿರುವುದು ಚುನಾವಣಾ ವ್ಯವಸ್ಥೆಯ ಸುಧಾರಣೆಗಾಗಿ ಹೋರಾಟವೇ? ಕೇಂದ್ರ ಸರ್ಕಾರವನ್ನು ರಾಜಕೀಯವಾಗಿ ಸೋಲಿಸುವ ಪ್ರಯತ್ನವೇ? ಅಥವಾ ಸಂವಿಧಾನಾತ್ಮಕ ವ್ಯವಸ್ಥೆಯ ಹೊರಗೆ ಅಧಿಕಾರ ಬದಲಾವಣೆಗೆ ನೆಲೆ ಸಿದ್ಧಪಡಿಸುವ ಯತ್ನವೇ? ಆಡಳಿತ ವ್ಯವಸ್ಥೆ ವಿರುದ್ಧ ಸಿಡಿದೆದ್ದಿರುವ ಒಬ್ಬೊಬ್ಬರ ಹೇಳಿಕೆಗಳನ್ನು ಗಮನಿಸಿದರೆ ಈ ಮೂರೂ ಆಶಯಗಳು ಇರುವುದು ಎದ್ದು ಕಾಣುತ್ತದೆ.
ರಾಜಕೀಯ ಪರಿಭಾಷೆಯಲ್ಲಿ Change of Government ಮತ್ತು Regime Change ಪದಗಳು ಎಲ್ಲ ಸಂದರ್ಭ ಗಳಲ್ಲಿಯೂ ಒಂದೇ ಅರ್ಥ ನೀಡುವುದಿಲ್ಲ. ಚುನಾವಣೆಯಲ್ಲಿ ಒಂದು ಪಕ್ಷ ಸೋತು ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದರೆ ಅದು ಸರ್ಕಾರ ಬದಲಾವಣೆ. ಆದರೆ ರೆಜೀಮ್ ಚೇಂಜ್ ಎಂಬ ಪದ ಹಲವು ಸಂದರ್ಭಗಳಲ್ಲಿ ಆಡಳಿತದ ಮೂಲ ಸ್ವರೂಪ, ಅಧಿಕಾರದ ರಚನೆ ಅಥವಾ ರಾಜಕೀಯ ವ್ಯವಸ್ಥೆ ಯಲ್ಲಿಯೇ ಮಹತ್ವದ ಬದಲಾವಣೆಯನ್ನು ಸೂಚಿಸುತ್ತದೆ. ಕ್ರಾಂತಿ, ಜನದಂಗೆ, ಸೇನಾ ದಂಗೆ ಮತ್ತು ವಿದೇಶಿ ಹಸ್ತಕ್ಷೇಪದ ಮೂಲಕ ಸಂಭವಿಸಿದ ಬದಲಾವಣೆಗಳನ್ನು ವಿವರಿಸಲು ಈ ಪದವನ್ನು ಬಳಸಲಾಗುತ್ತದೆ.
ಶಾಂತಿಯುತ ಪ್ರಜಾಸತ್ತಾತ್ಮಕ ಪರಿವರ್ತನೆಯನ್ನೂ ಕೆಲವು ರಾಜಕೀಯ ಅಧ್ಯಯನಗಳಲ್ಲಿ ಇದೇ ಪದದಿಂದ ಗುರುತಿಸಲಾಗುತ್ತದೆ. ಹೀಗಾಗಿ ಈ ಪದವು ಪ್ರತಿ ಸಂದರ್ಭದಲ್ಲಿಯೂ ಹಿಂಸಾತ್ಮಕ ಕ್ರಾಂತಿಯನ್ನೇ ಸೂಚಿಸುತ್ತದೆ ಎನ್ನಲಾಗುವುದಿಲ್ಲ. ಆದರೆ ಬಾಂಗ್ಲಾದೇಶ ಅಥವಾ ನೇಪಾಳದಂತಹ ಸಂಘರ್ಷಪೂರ್ಣ ಅಧಿಕಾರ ಬದಲಾವಣೆಗಳನ್ನು ಉಲ್ಲೇಖಿಸುವಾಗ ಅದರ ರಾಜಕೀಯ ಸೂಚ್ಯಾರ್ಥ ಗಂಭೀರವಾಗುತ್ತದೆ. ಇದೇ ಕಾರಣಕ್ಕೆ, ನೇಹಾ ಬೋರಾ ಮತ್ತು ಪ್ರಶಾಂತ್ ಭೂಷಣ್ರ ಮಾತುಗಳ ವಿರುದ್ಧ ಕೆಂಡಕಾರಿರುವ ಮೋದಿ ಬೆಂಬಲಿಗರು, ಇದು ಹೋರಾಟಗಾರರ ನಿಜ ಬಣ್ಣ ಬಯಲು ಮಾಡಿದೆ ಎಂದು ಕಿಡಿಕಾರುತ್ತಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದಿರುವ ಯುವಕರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವುದರಿಂದ, ಅರಾಜಕ ವಾತಾವರಣ ನಿರ್ಮಾಣ ಮಾಡಿ ದೇಶದೆಲ್ಲೆಡೆ ಗೊಂದಲ ಸೃಷ್ಟಿಸುವುದು ರಾಹುಲ್ ಉದ್ದೇಶ ಎಂದು ಬಿಜೆಪಿ ಟೀಕಿಸುತ್ತಿದೆ. ಏತನ್ಮಧ್ಯೆ, ಅಲ್ಬೇನಿಯಾದಲ್ಲಿ ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ಗೆ ಬೆಂಕಿ ಹಚ್ಚಿ ನಾಶಮಾಡಿದ್ದನ್ನು ಉಲ್ಲೇಖಿಸಿದ ಶಿವಸೇನೆ (ಉದ್ಧವ್ ಸೇನಾ) ನಾಯಕ ಸಂಜಯ್ ರಾವತ್, ಭ್ರಷ್ಟ ಪ್ರಧಾನಮಂತ್ರಿಗಳಿಗೆ ನ್ಯಾಯಾಲಯ ನೆರವಾಗುತ್ತಿದೆ ಎಂಬ ಆಕ್ರೋಶದಿಂದ ಜನರು ಹೀಗೆ ಮಾಡಿದ್ದಾರೆ.
ಸಂಸತ್ತು, ಸರ್ಕಾರಿ ಕಚೇರಿಗಳು ಮತ್ತು ಸಚಿವರ ಮನೆಗಳ ಮೇಲೂ ದಾಳಿ ನಡೆದಿದೆ. ಇಂತಹ ಘಟನೆ ಗಳಿಂದ ಎಲ್ಲ ದೇಶಗಳು, ವಿಶೇಷವಾಗಿ ಭಾರತ ಪಾಠ ಕಲಿಯಬೇಕೆಂದು ಸಾಮಾಜಿಕ ಜಾಲತಾಣ ದಲ್ಲಿ ಬರೆದು ಕಿಡಿ ಹೊತ್ತಿಸಿದ್ದಾರೆ. ಪ್ರಶಾಂತ್ ಭೂಷಣ್, ನೇಹಾ ಬೋರಾ ಹೇಳಿಕೆಗಳ ನಂತರ ಸಂಜಯ್ ರಾವತ್ ಕೂಡ ಆಡಳಿತ ಬದಲಾವಣೆಗೆ ಕರೆ ನೀಡಿರುವುದು ವಿವಾದಕ್ಕೆ ಹೊಸ ಆಯಾಮ ನೀಡಿದೆ. ಹಾಗಂತ, ರಾವತ್ ಹೇಳಿಕೆಯನ್ನು ಅವರದ್ದೇ ಪಕ್ಷದ ನಾಯಕಿ ಪ್ರಿಯಾಂಕಾ ಚತುರ್ವೇದಿ ವಿರೋಧಿಸಿರುವುದರಿಂದ ರಿಜೀಮ್ ಚೇಂಜ್ ವಿಷಯದಲ್ಲಿ ಪ್ರತಿಪಕ್ಷಗಳ ಒಳಗೂ ಭಿನ್ನಾಭಿಪ್ರಾಯವಿರುವುದು ಸ್ಪಷ್ಟ.
ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಚಳವಳಿಗಳು ಒಂದೇ ರೀತಿಯವುಗಳಲ್ಲ. ಬಾಂಗ್ಲಾದೇಶ ದಲ್ಲಿ ಚುನಾವಣಾ ಸ್ಪರ್ಧೆಯ ಮೇಲಿನ ನಿರ್ಬಂಧಗಳು ಮತ್ತು ಅಧಿಕಾರ ಕೇಂದ್ರೀಕರಣ ಪ್ರಮುಖ ಹಿನ್ನೆಲೆಯಾಗಿದ್ದರೆ, ನೇಪಾಳದಲ್ಲಿ ಭ್ರಷ್ಟಾಚಾರ ವಿರೋಧಿ ಅಸಮಾಧಾನ ಮತ್ತು ರಾಜಕೀಯ ನಾಯಕತ್ವದ ವಿರುದ್ಧದ ಆಕ್ರೋಶ ಪ್ರಮುಖವಾಗಿತ್ತು. ಈಗ ಎರಡೂ ದೇಶಗಳ ನಂತರದ ರಾಜಕೀಯ ಬೆಳವಣಿಗೆಗಳೂ ವಿಭಿನ್ನವಾಗಿವೆ. ಎರಡೂ ದೇಶಗಳ ಘಟನೆಗಳು ಭಾರತಕ್ಕೆ ಎಚ್ಚರಿಕೆ ಯಿಂದಿರಲು ಪಾಠವಾಗಬಹುದು. ಆದರೆ, ಅವುಗಳನ್ನು ಭಾರತದ ರಾಜಕೀಯ ಪರಿಸ್ಥಿತಿಗೆ ನೇರವಾಗಿ ಅನ್ವಯಿಸುವ ಮೊದಲು ದೇಶಗಳ ಸಾಂಸ್ಥಿಕ ಮತ್ತು ಸಾಮಾಜಿಕ ವ್ಯತ್ಯಾಸಗಳನ್ನೂ ಗಮನಿಸಬೇಕು.
ಭಾರತ, ಬಾಂಗ್ಲಾದೇಶ ಮತ್ತು ನೇಪಾಳ ಭೌಗೋಳಿಕವಾಗಿ ಸಮೀಪದಲ್ಲಿದ್ದರೂ ರಾಜಕೀಯ ವ್ಯವಸ್ಥೆ, ಜನಸಂಖ್ಯೆ, ಆಡಳಿತ ರಚನೆ ಮತ್ತು ಚುನಾವಣಾ ಸಂಸ್ಕೃತಿಯಲ್ಲಿ ಹಲವು ವ್ಯತ್ಯಾಸಗಳಿವೆ. ಭಾರತದಲ್ಲಿ ಕೇಂದ್ರ ಸರ್ಕಾರದ ಜೊತೆಗೆ ಸ್ವತಂತ್ರ ರಾಜಕೀಯ ಅಧಿಕಾರ ಹೊಂದಿರುವ ರಾಜ್ಯ ಸರ್ಕಾರಗಳು, ವಿಧಾನಸಭೆಗಳು, ನ್ಯಾಯಾಂಗ, ಸಂಸತ್ತು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳಿವೆ. ದೇಶದ ವಿವಿಧ ರಾಜ್ಯಗಳಲ್ಲಿ ವಿಭಿನ್ನ ಪಕ್ಷಗಳು ಅಧಿಕಾರ ನಡೆಸುತ್ತಿವೆ.
ಚುನಾವಣೆಗಳ ಮೂಲಕ ಆಡಳಿತ ಪಕ್ಷಗಳನ್ನು ಸೋಲಿಸಿದ ಹಲವು ಉದಾಹರಣೆಗಳೂ ಇವೆ. ಹಾಗಂತ ನಮ್ಮಲ್ಲಿ ಆಡಳಿತ ವ್ಯವಸ್ಥೆಯ ಬಗ್ಗೆ ಯಾವುದೇ ಅಸಮಾಧಾನವಿಲ್ಲ ಎಂದು ಹೇಳಲಾಗದು. ನಿರುದ್ಯೋಗ, ಪರೀಕ್ಷಾ ಅಕ್ರಮಗಳ ಆರೋಪ, ಶಿಕ್ಷಣದ ಸಮಸ್ಯೆಗಳು, ಮಹಿಳೆಯರ ಸುರಕ್ಷತೆ ಹಾಗೂ ಚುನಾವಣಾ ಪಾರದರ್ಶಕತೆ ಕುರಿತ ಪ್ರಶ್ನೆಗಳು ಯುವಜನರ ಪ್ರತಿಭಟನೆಗಳಿಗೆ ಕಾರಣವಾಗಿರುವುದನ್ನು ನಾವು ನೋಡುತ್ತಿದ್ದೇವೆ. ಯಾವುದೇ ಪ್ರಜಾಪ್ರಭುತ್ವದಲ್ಲಿಯೂ ಜನರ ಅಸಮಾಧಾನವನ್ನು ನಿರ್ಲಕ್ಷಿಸುವುದು ಅಥವಾ ಶಾಂತಿಯುತ ಪ್ರತಿಭಟನೆಗಳನ್ನು ಅನಗತ್ಯವಾಗಿ ಹತ್ತಿಕ್ಕುವುದು ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಬಹುದು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೋರಾಟ ವಿಷಯದಲ್ಲಿ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಲಿದೆ ಎಂಬುದನ್ನು ಮನಗಂಡ ಸರ್ಕಾರ ಕೇಂದ್ರ ಸಚಿವರ ರಾಜೀನಾಮೆ ಪಡೆದು, ಪರಿಸ್ಥಿತಿಯನ್ನು ಶಾಂತಗೊಳಿಸಿತು. ಚುನಾವಣಾ ಆಯೋಗದ ವಿರುದ್ಧದ ಹೋರಾಟದಲ್ಲಿ ಮಾತ್ರ ಕೇಂದ್ರ ಸರ್ಕಾರ ವಿಪಕ್ಷಗಳು ಹಾಗೂ ಯುವಕರ ಪ್ರತಿಭಟನೆಗಳಿಗೆ ಮಣಿದಿಲ್ಲ. ವೋಟ್ಚೋರಿ ನಡೆದಿಲ್ಲ ಮತ್ತು ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಆಂತರಿಕ ಭಿನ್ನಾಭಿಪ್ರಾಯ ಗಳ ನಡುವೆಯೂ ಚುನಾವಣಾ ಆಯೋಗ ಎಸ್ಐಆರ್ ಪ್ರಕ್ರಿಯೆಗಳನ್ನು ಸಮರ್ಥಿಸಿಕೊಂಡಿದೆ.
ಸರ್ಕಾರಗಳನ್ನು ಬದಲಾಯಿಸಲು ಅಥವಾ ಸರ್ಕಾರಗಳ ಬಗ್ಗೆ ಜನರಲ್ಲಿ ವ್ಯಾಪಕ ಅಸಮಾಧಾನ ಸೃಷ್ಟಿಯಾಗಲು ಸಕಾರಣಗಳು ಬೇಕಾಗುತ್ತವೆ ಮತ್ತು ಹೋರಾಟಗಳು ಜನಾಂದೋಲಗಳಾಗಿ ರೂಪುಗೊಂಡಾಗ ಮಾತ್ರ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಚುನಾವಣಾ ಆಯೋಗದ ವಿರುದ್ಧದ ಹೋರಾಟ ಜನಾಂದೋಲನವಾಗಿ ರೂಪುಗೊಂಡಿಲ್ಲ. ರೆಜೀಮ್ ಚೇಂಜ್ ಹೇಳಿಕೆ ಹೊರಬಿದ್ದ ನಂತರವಂತೂ ಹೋರಾಟದ ಉದ್ದೇಶವನ್ನೇ ಪ್ರಶ್ನಿಸಲಾಗುತ್ತಿದೆ.
70ರ ದಶಕದಲ್ಲಿ ಜೆಪಿ ಚಳವಳಿ ವಿದ್ಯಾರ್ಥಿಗಳಿಂದ ಆರಂಭವಾದರೂ ವಿವಿಧ ರಾಜಕೀಯ ಮತ್ತು ಸಾಮಾಜಿಕ ವರ್ಗಗಳನ್ನು ಒಳಗೊಂಡಿತ್ತು. 1977ರ ಚುನಾವಣೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಜನಾಕ್ರೋಶ ವ್ಯಕ್ತವಾಯಿತು. 1974ರ ಗುಜರಾತ್ ನವನಿರ್ಮಾಣ ಚಳವಳಿಯಲ್ಲಿ ವಿದ್ಯಾರ್ಥಿಗಳ ಹಾಸ್ಟೆಲ್ ಶುಲ್ಕ ಹೆಚ್ಚಳದ ವಿರುದ್ಧಆರಂಭವಾದ ಹೋರಾಟ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರ ವಿರೋಧಿ ಚಳವಳಿಯಾಗಿ ವಿಸ್ತರಿಸಿತು.
ಮುಖ್ಯಮಂತ್ರಿ ಚಿಮನ್ ಭಾಯಿ ಪಟೇಲ್ ರಾಜೀನಾಮೆ ನೀಡಿದರು. ವಿಧಾನಸಭೆ ವಿಸರ್ಜನೆಯಾಗಿ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. 2010ರಲ್ಲಿ ಲೋಕಪಾಲ್ ವಿಧೇಯಕಕ್ಕಾಗಿ ಅಣ್ಣಾ ಹಜಾರೆ ಚಳವಳಿಗೆ ದೇಶದೆಡೆ ಜನಬೆಂಬಲ ವ್ಯಕ್ತವಾಗಿ, ನಂತರ ಹೋರಾಟದ ಒಂದು ವಿಭಾಗ ರಾಜಕೀಯ ಪಕ್ಷವಾಗಿ ರೂಪಾಂತರಗೊಂಡಿತು. ಅಸ್ಸಾಂ ವಿದ್ಯಾರ್ಥಿ ಚಳವಳಿಯ ನಾಯಕರು ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿಯೂ ಭ್ರಷ್ಟಾಚಾರ ವಿರೋಧಿ ಜನಾಕ್ರೋಶವು ರಾಜಕೀಯ ವಾತಾವರಣದ ಒಂದು ಭಾಗವಾಗಿತ್ತು. ಆದರೆ ಅಧಿಕಾರ ಬದಲಾವಣೆ ನಡೆದದ್ದು ಚುನಾವಣೆಯ ಮೂಲಕ. ಬಿಜೆಪಿ ನೇತೃತ್ವದ ಎನ್ಡಿಎ ಬಹುಮತ ಪಡೆದು ಸರ್ಕಾರ ರಚಿಸಿತು. ಹೀಗಾಗಿ ಭಾರತದಲ್ಲಿ ಜನಾಂದೋಲನಗಳು ರಾಜಕೀಯ ಬದಲಾವಣೆಗೆ ಕಾರಣವಾಗಿರುವ ಇತಿಹಾಸ ವಿದ್ದರೂ, ಅವುಗಳ ಪರಿಣಾಮ ಬಹುತೇಕ ಚುನಾವಣೆ, ಕಾನೂನು ಸುಧಾರಣೆ, ನೀತಿ ಬದಲಾವಣೆ ಅಥವಾ ರಾಜ್ಯ ಪುನರ್ರಚನೆಯ (ಆಂಧ್ರ-ತೆಲಂಗಾಣ) ರೂಪದಲ್ಲಿ ವ್ಯಕ್ತವಾಗಿದೆ.
ಜನಾಂದೋಲನ ಸರ್ಕಾರದ ವಿರುದ್ಧ ಅಸಮಾಧಾನ ರೂಪಿಸಬಹುದು. ಆದರೆ ಆ ಅಸಮಾಧಾನ ವನ್ನು ಚುನಾವಣೆ ಮೂಲಕ ಅಧಿಕಾರದ ಬದಲಾವಣೆಯಾಗಿ ಪರಿವರ್ತಿಸಲು ವಿಶ್ವಾಸಾರ್ಹ ರಾಜಕೀಯ ಪರ್ಯಾಯವೂ ಅಗತ್ಯವಾಗುತ್ತದೆ. ರಾಹುಲ್ ಗಾಂಧಿ ಅಥವಾ ಅವರನ್ನು ಬೆಂಬಲಿಸು ತ್ತಿರುವ ವಿಪಕ್ಷಗಳಲ್ಲಿ ಆ ವಿಶ್ವಾಸಾರ್ಹತೆ ಇದೆಯೇ ಎನ್ನುವುದು ಪ್ರಶ್ನೆ.
ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವುದು, ರಾಜೀನಾಮೆಗೆ ಒತ್ತಾಯಿಸುವುದು, ಚುನಾವಣಾ ಸುಧಾರಣೆಗಳನ್ನು ಆಗ್ರಹಿಸುವುದು ಮತ್ತು ಶಾಂತಿಯುತ ಪ್ರತಿಭಟನೆ ನಡೆಸುವುದು ಕಾನೂನುಬದ್ಧ ರಾಜಕೀಯ ಚಟುವಟಿಕೆಗಳಾಗಬಹುದು. ಆದರೆ ಹಿಂಸಾಚಾರಕ್ಕೆ ಪ್ರಚೋದಿಸು ವುದು ಅಥವಾ ಬಲಪ್ರಯೋಗದ ಮೂಲಕ ಸಂವಿಧಾನಾತ್ಮಕ ವ್ಯವಸ್ಥೆಯನ್ನು ಉರುಳಿಸುವ ಪ್ರಯತ್ನಗಳನ್ನು ಅದೇ ರೀತಿಯಲ್ಲಿ ಪರಿಗಣಿಸಲಾಗುವುದಿಲ್ಲ.
ಭಾರತದಲ್ಲಿ ಅಂತಹ ಮಾತುಗಳನ್ನಾಡಿದರೆ ಬಹುಶಃ ಜನರೇ ಬಡಿಗೆ ಹಿಡಿದು ಬಾರಿಸಿದರೂ ಅಚ್ಚರಿ ಇಲ್ಲ. ಆದರೂ ಭಾರತದ ಜನಾಂದೋಲನಗಳ ಇತಿಹಾಸದಲ್ಲಿ ಮಹತ್ವದ ಸಂಗತಿ ಸ್ಪಷ್ಟವಾಗು ತ್ತದೆ. ಏನೆಂದರೆ; ಜನರ ಪ್ರತಿಭಟನೆಗಳು ಸರ್ಕಾರಗಳನ್ನು ಬದಲಿಸಿವೆ, ಕಾನೂನುಗಳನ್ನು ಬದಲಿಸಿವೆ, ಹೊಸ ರಾಜಕೀಯ ಪಕ್ಷಗಳನ್ನು ಹುಟ್ಟುಹಾಕಿವೆ ಮತ್ತು ಕೆಲವೊಮ್ಮೆ ಇಡೀ ರಾಜಕೀಯ ವ್ಯವಸ್ಥೆಯ ದಿಕ್ಕನ್ನೇ ಬದಲಿಸಿವೆ.
ಈಗ ಪ್ರತಿಪಕ್ಷಗಳ ನೇತೃತ್ವದಲ್ಲಿ ನಡೆಯುತ್ತಿರುವ ಆಂದೋಲನದ ಗುರಿ ಸರ್ಕಾರವನ್ನು ಚುನಾವಣೆ ಯಲ್ಲಿ ಸೋಲಿಸುವುದೇ? ನಿರ್ದಿಷ್ಟ ಕಾನೂನನ್ನು ಬದಲಿಸುವುದೇ? ಸಂವಿಧಾನಾತ್ಮಕ ಸಂಸ್ಥೆಗಳ ಸುಧಾರಣೆಯೇ? ಅಥವಾ ಸಂವಿಧಾನೇತರ ಮಾರ್ಗದಲ್ಲಿ ಆಡಳಿತವನ್ನು ಉರುಳಿಸುವುದೇ? ಸಮಸ್ಯೆಗಳ ಕುರಿತು ಯುವಕರು ಸಂಘಟಿತರಾಗಿ ಪ್ರತಿಭಟಿಸುವುದು ಪ್ರಜಾಪ್ರಭುತ್ವದ ಭಾಗ. ಆದರೆ ರಾಜಕೀಯ ಪಕ್ಷಗಳು ಅಥವಾ ಇತರ ಸಂಘಟನೆಗಳು ಯುವಜನರ ಅಸಮಾಧಾನವನ್ನು ತಮ್ಮ ಅಧಿಕಾರದ ಹಿತಾಸಕ್ತಿಗಾಗಿ ಬಳಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ.
ಯುವಕರ ಪ್ರತಿಯೊಂದು ಪ್ರತಿಭಟನೆಯನ್ನೂ ರಾಜಕೀಯ ಕುಮ್ಮಕ್ಕಿನ ಫಲಿತಾಂಶವೆಂದು ತಳ್ಳಿಹಾಕಿದರೆ ಅವರ ನೈಜ ಸಮಸ್ಯೆಗಳು ಗಮನಕ್ಕೆ ಬರುವುದಿಲ್ಲ. ಆದ್ದರಿಂದಲೇ ‘ರೆಜೀಮ್ ಚೇಂಜ’ ಎಂಬ ಪದವನ್ನು ಬಳಸುವವರು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಅವರು ಚುನಾವಣೆಯ ಮೂಲಕ ಸರ್ಕಾರ ಬದಲಾವಣೆ ಬಯಸುತ್ತಿದ್ದಾರೆಯೇ? ಸಂವಿಧಾನಾತ್ಮಕ ಸಂಸ್ಥೆಗಳಲ್ಲಿ ಸುಧಾರಣೆ ಬಯಸುತ್ತಿದ್ದಾರೆಯೇ? ಅಥವಾ ರಾಜಕೀಯ ವ್ಯವಸ್ಥೆಯ ಮೂಲ ರಚನೆಯನ್ನೇ ಬದಲಿಸುವ ಉದ್ದೇಶ ಹೊಂದಿದ್ದಾರೆಯೇ? ಭಾರತದ ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಯಾವುದೇ ಒಂದು ಸರ್ಕಾರ ಶಾಶ್ವತವಾಗಿ ಅಧಿಕಾರದಲ್ಲಿರುವುದಲ್ಲ; ಜನರು ಬಯಸಿದಾಗ ಶಾಂತಿಯುತವಾಗಿ ಸರ್ಕಾರವನ್ನು ಬದಲಾಯಿಸುವ ಅವಕಾಶ ಶಾಶ್ವತವಾಗಿ ಉಳಿಸಿಕೊಳ್ಳುವು ದರಲ್ಲಿದೆ.
ಸದ್ಯಕ್ಕೆ ಇರುವ ಪ್ರಶ್ನೆ ಏನೆಂದರೆ; ರೆಜೀಮ್ ಚೇಂಜ್ ಬಯಸಿರುವುದು ಜನರೋ, ಸೈದ್ಧಾಂತಿಕ ವಿರೋಧಿಗಳೋ ಅಥವಾ ರಾಜಕೀಯ ಪಕ್ಷಗಳೋ ಎನ್ನುವುದು.