ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Naveen Sagar Column: ನವರಾತ್ರಿಯ ಸಂಜೆಯಲ್ಲಿ ಮೊದಲ ರಾತ್ರಿಯ ಹಾಡು

ಪುಣ್ಯಕ್ಕೆ, ಟೀಚರ್ಸ್ ಡೇ ದಿನ ‘ಹಳ್ಳಿಮೇಷ್ಟ್ರೇ ಹಳ್ಳಿಮೇಷ್ಟ್ರೇ...’ ಗೀತೆ ಪ್ರಸಾರ ಮಾಡೋದಿಲ್ಲ ಎಂಬುದು ಸಮಾಧಾನಕರ ಸಂಗತಿ! ನವರಾತ್ರಿ ಸಮಯದಲ್ಲಿ ರೇಡಿಯೋದಲ್ಲಿ ಪ್ರಸಾರವಾಗುವ ಒಂದು ಕಾಮನ್ ಗೀತೆ ಅಂದರೆ ಎರಡು ರೇಖೆಗಳು ಚಿತ್ರದ ‘ನವರಾತ್ರಿ ಸಂಜೆಯಲಿ...’. ಈ ಗೀತೆಯೂ ಕೂಡ ಶುರುವಾಗುವುದು ನವರಾತ್ರಿ ಎಂಬ ಪದದಿಂದ ಅಷ್ಟೆ. ಮುಂದೆ ಕಥೆಯೇ ಬೇರೆ.

ನವರಾತ್ರಿಯ ಸಂಜೆಯಲ್ಲಿ ಮೊದಲ ರಾತ್ರಿಯ ಹಾಡು

-

ಪದಸಾಗರ

ಕನ್ನಡ ಚಿತ್ರಗೀತೆಗಳ ವಿಶೇಷ ಏನೆಂದರೆ, ಪ್ರತಿ ಹಬ್ಬದ ಹೆಸರಲ್ಲೂ ಚಿತ್ರಸಾಹಿತಿಗಳು ಹಾಡು ಬರೆದಿದ್ದಾರೆ ಅಥವಾ ಕವಿ ಸಾಲುಗಳನ್ನು ಚಿತ್ರಗೀತೆಯಾಗಿ ಬಳಸಿಕೊಳ್ಳಲಾಗಿದೆ. ಬೇಂದ್ರೆಯವರ ‘ಯುಗಯುಗಾದಿ ಕಳೆದರೂ...’ ಗೀತೆಯಿಂದ ಶುರುವಾಗಿ ಮುದ್ದಿನಮಾವ ಚಿತ್ರದ ‘ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ’ ತನಕ ಪ್ರತಿ ಹಬ್ಬಕ್ಕೂ, ವಿಶೇಷ ಸಂದರ್ಭಕ್ಕೂ ನಮ್ಮಲ್ಲಿ ಗೀತೆಗಳಿವೆ.

ಇಂಥ ಹಾಡುಗಳನ್ನು ಕೊಟ್ಟಿರುವವರಲ್ಲಿ ಹಂಸಲೇಖರದ್ದು ಸಿಂಹಪಾಲು. ಆದರೆ ಹಂಸಲೇಖ ಬರೆದ ಗೀತೆಗಳಲ್ಲಿ ಕೆಲವು ಕೇವಲ ಹಬ್ಬದ ಹೆಸರು ಉಲ್ಲೇಖಿಸಿದ್ದಕ್ಕೆ, ಆಫಿಷಿಯಲ್ ಹಬ್ಬದ ಗೀತೆ ಆಗಿಬಿಟ್ಟಿದೆ. ಉದಾಹರಣೆಗೆ ಹಳ್ಳಿ ಮೇಷ್ಟ್ರು ಚಿತ್ರದ ‘ಸಂಕ್ರಾಂತಿ ಬಂತು ರತ್ತೋ ರತ್ತೋ..’ ಈ ಗೀತೆಯಲ್ಲಿ ಮೊದಲ ಎರಡು ಸಾಲುಗಳನ್ನು ಹೊರತುಪಡಿಸಿದರೆ, ಸಂಕ್ರಾಂತಿಗೆ ಸಂಬಂಧಿಸಿದ ಯಾವ ವಿಷಯವೂ ಇಲ್ಲ. ಆದರೂ ರೇಡಿಯೋ ಮತ್ತು ಟಿವಿಗಳಲ್ಲಿ ಆ ದಿನ ಈ ಹಾಡು ಪ್ರಸಾರ ವಾಗುತ್ತದೆ.

ಪುಣ್ಯಕ್ಕೆ, ಟೀಚರ್ಸ್ ಡೇ ದಿನ ‘ಹಳ್ಳಿಮೇಷ್ಟ್ರೇ ಹಳ್ಳಿಮೇಷ್ಟ್ರೇ...’ ಗೀತೆ ಪ್ರಸಾರ ಮಾಡೋದಿಲ್ಲ ಎಂಬುದು ಸಮಾಧಾನಕರ ಸಂಗತಿ! ನವರಾತ್ರಿ ಸಮಯದಲ್ಲಿ ರೇಡಿಯೋದಲ್ಲಿ ಪ್ರಸಾರವಾಗುವ ಒಂದು ಕಾಮನ್ ಗೀತೆ ಅಂದರೆ ಎರಡು ರೇಖೆಗಳು ಚಿತ್ರದ ‘ನವರಾತ್ರಿ ಸಂಜೆಯಲಿ...’. ಈ ಗೀತೆಯೂ ಕೂಡ ಶುರುವಾಗುವುದು ನವರಾತ್ರಿ ಎಂಬ ಪದದಿಂದ ಅಷ್ಟೆ. ಮುಂದೆ ಕಥೆಯೇ ಬೇರೆ.

ಇದನ್ನೂ ಓದಿ: Naveen Sagar Column: ಧಾರಾವಾಹಿ ಬಿಟ್ಟು ಸಿನೆಮಾ ನೋಡೋಕೆ ಬಂದ್ರು..!

ಹಾಡಿನ ಚಿತ್ರಣದಲ್ಲಿ ನವರಾತ್ರಿಯ ಬೊಂಬೆಗಳಿವೆಯಾದ್ದರಿಂದ ನವರಾತ್ರಿಗೆ ನ್ಯಾಯ ಸಿಕ್ಕಿದೆ ಎನ್ನಬಹುದು. ಆದರೆ ನನಗೆ ಅಚ್ಚರಿ ಅನಿಸಿದ್ದು, ಬೊಂಬೆ ಹಬ್ಬದ ದಿನ, ಅಣ್ಣಯ್ಯ ಚಿತ್ರದ ‘ಬೊಂಬೆ ಬೊಂಬೆ ಬೊಂಬೆ... ನಿನ್ನ ಮುದ್ದಾಡಬೇಕು ನರ ಬೊಂಬೆ’ ಹಾಡು ಪ್ರಸಾರವಾಗಿದ್ದು!

ನಗು, ಸಿಟ್ಟು ಎಲ್ಲದರ ಜೊತೆಜೊತೆಗೆ ನನ್ನ ಆಲೋಚನೆಗಳು ಈ ಹಾಡಿನ ಹಿಂದೆ ನನ್ನ ನೆನಪಿನ ದೋಣಿ ತೇಲಿ ಹಿಂದೆ ಹಿಂದೆ ಹೋಗತೊಡಗಿತು. ಧಕ್ ಧಕ್ ಕರ್ ನೇ ಲಗಾ...ಇದು ಹಿಂದಿಯ ಬೇಟಾ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್- ಅನಿಲ್ ಕಪೂರ್ ಜೋಡಿ ಹಾಡಿ ಕುಣಿಯೋ ಗೀತೆ. ಅದೊಂದು ಮಾದಕ ಶೃಂಗಾರ ಮಯ ಡ್ಯುಯೆಟ್. ಆದರೆ ಆ ಕಾಲಕ್ಕೆ ಮಾಧುರಿಯ ನೃತ್ಯ ಭಂಗಿಗಳನ್ನು ಅಶ್ಲೀಲ ಎಂದು ವಿಮರ್ಶಕರು ಎಗರಾಡಿದ್ದರು. ಅಷ್ಟಕ್ಕೂ ಅದರನು ಅಶ್ಲೀಲ ಕಾಣಿಸಿತ್ತೋ ಗೊತ್ತಿಲ್ಲ. ‌

ಮಾಧುರಿಯ ಉಡುಗೆಯಲ್ಲಿ ತೀರಾ ಎಕ್ಸ್‌ʼಪೋಸ್ ಆಗುವಂಥದ್ದೇನೂ ಇರಲಿಲ್ಲ. ಎಂದಿನ ಬಾಲಿವುಡ್ ಮತ್ತು ತೆಲುಗು ಚಿತ್ರರಂಗ ತೋರಿಸುತ್ತಿದ್ದ ಸುಂದರ ಸೊಂಟ ಮತ್ತು ಕೊಂಚ ಕ್ಲಿವೇಜ್ ಅಷ್ಟೇ ಇದ್ದದ್ದು. ಅದೂ ಚೆಂದವೆನಿಸೋ ಹಾಗೆ ಎಕ್ಸ್‌ʼಪೋಸ್ ಆಗಿತ್ತೇ ಹೊರತು ಅಶ್ಲೀಲ ಅನಿಸುವಂತಿರಲಿಲ್ಲ. ಧಕ್ ಧಕ್ ಅನ್ನುವ ಪದಗಳಿಗೆ ಮಾಧುರಿ ಎದೆ ಹಿಗ್ಗಿಸಿ ಸ್ಟೆಪ್ ಹಾಕಿದ್ದು ಆ ಸೆನ್ಶುಯಲ್ ಸಾಹಿತ್ಯಕ್ಕೆ ನ್ಯಾಯ ಒದಗಿಸಲಿಕ್ಕೆಂದು ಅನಿಸಿತ್ತೇ ಹೊರತೂ ಇವತ್ತಿಗೂ ಅದು ಅಶ್ಲೀಲ ಅನಿಸಿಲ್ಲ.

Annaya

ಅದ್ಯಾಕೆ ವಿಮರ್ಶಕರು ಆ ಹಾಡನ್ನು ನೃತ್ಯವನ್ನು ಅಷ್ಟು ಟಾರ್ಗೆಟ್ ಮಾಡಿದ್ದರೋ ಕಾಣೆ. ಸಿನಿ ಪತ್ರಕರ್ತರ ಮನೋರಾಜಕೀಯಗಳು, ಪಕ್ಷಪಾ ತಗಳು, ಪೂರ್ವಗ್ರಹಗಳು ಸುಲಭಕ್ಕೆ ಅರ್ಥವಾಗು ವಂಥದ್ದಲ್ಲ. ಬೇಟಾ ಚಿತ್ರದ ಆಲ್ಬಂ ಇವತ್ತಿಗೂ ಅದ್ಭುತ ಅನಿಸುವುದು ಧಕ್ ಧಕ್ ಮತ್ತು ಕೋಯಲ್ ಸಿ ತೇರಿ ಬೋಲಿ ಗೀತೆಗಳಿಂದ. ಕೋಯಲ್ ಸಿ ತೇರಿ.. ಗೀತೆಯಲ್ಲಂತೂ ಮಾಧುರಿ ಅಕ್ಷರಶಃ ನವಿಲೇ ಆಗಿ ಬಿಟ್ಟಿದ್ದಳು.

ಬೆಳ್ಳಿಯಂಥ ಹಲ್ಲುಗಳು.. ಆ ನಗು.. ಆ ಎಕ್ಸ್‌ʼಪ್ರೆಶ.. ಅಷ್ಟು ಸುಲಲಿತ ನೃತ್ಯ ಇನ್ನೊಬ್ಬ ಬಾಲಿವುಡ್ ನಟಿಗೆ ಒಲಿಯಲಿಲ್ಲ. ವಿಶೇಷ ಅಂದ್ರೆ ಎಲ್ಲರಿಗೂ ಗೊತ್ತಿರುವ ಹಾಗೆ, ಹಿಂದಿಯ ‘ಬೇಟಾ’ ಚಿತ್ರಕ್ಕೆ ಕನ್ನಡದ ‘ಮಲ್ಲಮ್ಮನ ಪವಾಡ’ಸ್ಫೂರ್ತಿ. ಅಂತೆಯೇ ಬೇಟಾ ಚಿತ್ರದ ಎರಡೂ ಹಿಟ್ ಹಾಡುಗಳು ತೆಲುಗಿನಿಂದ ಮತ್ತು ತಮಿಳಿನಿಂದ ಎತ್ತಿಕೊಂಡದ್ದು. ಧಕ್‌ಧಕ್ ಟ್ಯೂನ್ ಮತ್ತು ಕೋಯಲ್ ಸಿ ತೇರಿ ಟ್ಯೂನ್‌ಗಳು, ‘ಧಕ್‌ಧಕ್’ ಗೀತೆ ‘ಜಗದೇಕವೀರುಡು ಅತಿಲೋಕ ಸುಂದರಿ’ ಚಿತ್ರದ್ದು ಹಾಗೂ ‘ಕೋಯಲ್ ಸಿ ತೇರಿ..’ಯ ಮೂಲ ತಮಿಳಿನ ‘ಎಂಗ ಚಿನ್ನ ರಾಸ’ ಚಿತ್ರದಲ್ಲಿದೆ.

ಬೇಟಾ ರೀಮೇಕ್ ಆಗಿದ್ದು ಭಾಗ್ಯರಾಜರ ಇದೇ ‘ಎಂಗ ಚಿನ್ನ ರಾಸ’ ಚಿತ್ರದಿಂದ. ‘ಮಲ್ಲಮ್ಮನ ಪವಾಡ’ ಕಾದಂಬರಿಯು ಸಿನಿಮಾ ಆದ ಬಳಿಕ ಬಹುತೇಕ ಎಲ್ಲ ಭಾಷೆಗಳಲ್ಲೂ ಈ ಸಿನಿಮಾದ ಕಥೆ ಬಂದು ಹೋಗಿತ್ತು. ಆದರೆ ಭಾಗ್ಯರಾಜ್ ಆಗ ಇಂಥ ಫ್ಯಾಮಿಲಿ ಕಥೆಗಳನ್ನು ಕೊಂಚ ಶೃಂಗಾರ, ಪೋಲಿತನ, ಕಣ್ಣೀರು ಎಲ್ಲವನ್ನೂ ಹದವಾಗಿ ಮಿಕ್ಸ್ ಮಾಡಿ ಕೊಡುವುದರಲ್ಲಿ ಎಕ್ಸ್‌ಪರ್ಟ್ ಇದ್ದರು.

ಅವರ ಚಿತ್ರಗಳನ್ನು ಇಡೀ ಭಾರತೀಯ ಸಿನಿಮಾ ಗಮನಿಸುತ್ತಾ ಇರುತ್ತಿತ್ತು. ಅದನ್ನು ಎತ್ಕೊಂಡು ತಾವು ಸಿನಿಮಾ ಮಾಡಲು. ಹಾಗೆ ಆಗಿದ್ದೇ ಬೇಟಾ! ‘ಎಂಗ ಚಿನ್ನ ರಾಸ’ ರೀಮೇಕ್ ಮಾಡಿದ ಬಾಲಿವುಡ್ ಅದನ್ನು ಇನ್ನಷ್ಟು ಕ್ಲಾಸ್ ಮತ್ತು ಮಾಸ್ ಆಗಿಸಿ, ಮಾಧುರಿಯ ಸೌಂದರ್ಯ ಮತ್ತು ನಟನೆ ಎಲ್ಲವನ್ನೂ ತುಂಬಿಸಿ ಸೂಪರ್ ಡೂಪರ್ ಚಿತ್ರವನ್ನಾಗಿಸಿತು. ‌

ಆನಂತರ ಇದು ಕನ್ನಡಕ್ಕೆ ಅಣ್ಣಯ್ಯನಾಗಿ ಬಂದಿದ್ದು. ಹಾಗೆಯೇ ಅಬ್ಬಾಯಿಗಾರು ಆಗಿ ತೆಲುಗಿಗೆ ಹೋಗಿದ್ದು. ಬೇಟಾ ರೀಮೇಕ್ ಆಗ್ತಿದೆ ಕನ್ನಡಕ್ಕೆ ಅಂದಾಗ, ರವಿಚಂದ್ರನ್ ರೀಮೇಕ್ ಮಾಡ್ತಾರೆ ಅಂದಾಗ, ಕನ್ನಡ ಪ್ರೇಕ್ಷಕರಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಮಾಧುರಿಯನ್ನೇ ಕರೆದುಕೊಂಡು ಬರುವ ಪ್ರಯತ್ನ ನಡೆಯುತ್ತಿದೆ ಎಂದೆಲ್ಲ ಪತ್ರಿಕೆಗಳಲ್ಲಿ ಓದಿದ ಪಡ್ಡೆಗಳಿಗಂತೂ ಇನ್ನಿಲ್ಲದ ರೋಮಾಂಚನ. ಕನ್ನಡಕ್ಕೆ ಮಾಧುರಿ ದೀಕ್ಷಿತ್..!

ರವಿಚಂದ್ರನ್‌ರಂಥ ರವಿಚಂದ್ರನ್ ಕೈಗೆ ಮಾಧುರಿಯಂಥ ಮಾಧುರಿ ಸಿಕ್ಕರೆ, ಅಕ್ಷರಶಃ ಶೃಂಗಾರ ಕಾವ್ಯ. ಸ್ಕ್ರೀನ್ ಮೇಲೆ ಮಾಧುರಿಯನ್ನು ಹೇಗೆಲ್ಲ ತೋರಿಸಬಹುದು. ರವಿಚಂದ್ರನ್ ಆಕೆಯೊಂದಿಗೆ ಯಾವ್ಯಾವ ರೀತಿಯೆಲ್ಲ ಸರಸವಾಡಬಹುದು ಎಂಬ ಕಲ್ಪನೆಯೋ ಕಲ್ಪನೆ. ಹಾಡುಗಳ ಬಗ್ಗೆಯೂ ಇಮ್ಯಾಜಿನೇಷನ್. ಹಂಸಲೇಖ ಧಕ್ ಧಕ್ ಹಾಡಿಗೆ ಅದೇ ಟ್ಯೂನ್ ಇಟ್ಕೊಂಡು ಕನ್ನಡ ಸಾಂಗ್ ಬರೀಬಹುದಾ? ಕುಕ್ಕುಕುಕ್ಕೂ ಗೀತೆಗೆ ಪರ್ಯಾಯವಾಗಿ ಯಾವ ಗೀತೆ ಬರಬಹುದು? ಹಾಡುಗಳು ಹೇಗಿರಬಹುದು? ಖಂಡಿತ ಹಿಂದಿ ಗೀತೆಗಳನ್ನು ಮೀರಿಸುವಂತೆ ಇರುತ್ತದೆ ಎಂಬುದು ನಮ್ಮೆಲ್ಲರ ನಿರೀಕ್ಷೆಯಾಗಿತ್ತು. ಆದರೆ ಕೊನೆಗೆ ಅಣ್ಣಯ್ಯ ಸಿನಿಮಾಗೆ ಆಯ್ಕೆ ಆಗಿದ್ದು ಮಧುಬಾಲಾ. ಕನ್ನಡದಲ್ಲಿ ಬರೀ ಮಧೂ.

ಫೂಲ್ ಔರ್ ಕಾಂಟೇ, ರೋಜಾ ಚಿತ್ರದಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದ ಮಧೂ. ರೋಜಾದಲ್ಲಿ ಅವಾರ್ಡ್ ಗೆದ್ದಿದ್ದ ಆಕೆ, ಅಣ್ಣಯ್ಯ ಚಿತ್ರಕ್ಕೆ ಹೀರೋಯಿನ್ ಎಂದಾಗ ವೈಯಕ್ತಿಕವಾಗಿ ನನಗೆ ನಿರಾಸೆ ಮೂಡಿಸಿತ್ತು. ಆಕೆ ರವಿಚಂದ್ರನ್ ಬ್ಯೂಟಿಮಾಪನದಲ್ಲಿ ಮಾರ್ಕ್ಸ್ ತಗೊಳೋ ನಟಿ ಅಲ್ಲವೇ ಇಲ್ಲ ಎಂದನಿಸಿಬಿಟ್ಟಿತ್ತು. ‌

ಅಣ್ಣಯ್ಯ ಚಿತ್ರದಲ್ಲಿ ಆಕೆಯ ಅಸಾಧಾರಣ ಅಭಿನಯ, ಧಾರಾಳ ಎಕ್ಸ್‌ಪೋಸ್.. ಬಿಸಿಬಿಸಿ ದೃಶ್ಯ ಎಲ್ಲವೂ ಇತ್ತು. ಆದರೆ ಮನಸ್ಸು ಬೇಡವೆಂದರೂ ಮಾಧುರಿ ಜೊತೆ ಕಂಪೇರ್ ಮಾಡಿಕೊಳ್ತಿತ್ತಲ್ಲ. ಹಾಗಾಗಿ ಮಧೂ ರುಚಿಸಲೇ ಇಲ್ಲ. ಅಣ್ಣಯ್ಯ ಚಿತ್ರದ ಹಾಡುಗಳಿಗೆ ಹಂಸಲೇಖ-ರವಿ ಕಾಂಬಿನೇಷನ್ ಎಂದಿನಂತೆಯೇ ನಿರೀಕ್ಷೆ ಹುಟ್ಟು ಹಾಕಿತ್ತು.

ಕ್ಯಾಸೆಟ್ ಅಂಗಡಿಗಳ ಮುಂದೆ ಪದೇಪದೆ ಹೋಗಿ ‘ಕ್ಯಾಸೆಟ್ ರಿಲೀಸ್ ಆಯ್ತಾ?’ ಎಂದು ಕೇಳುವ ಅಭಿಮಾನಿಗಳಿದ್ದರು. ಗಡಿಬಿಡಿ ಗಂಡ ಚಿತ್ರದ ಕಾಂಬಿನೇಷನ್ ಆಗಿ ಅಣ್ಣಯ್ಯ ಕ್ಯಾಸೆಟ್ ಹೊರಬಂದಿತ್ತು. ತಮಾಷೆಯೆಂದರೆ, ಅಣ್ಣಯ್ಯ ಚಿತ್ರದ ಹಾಡಿಗಾಗಿ ಕಾದಿದ್ದ ನನಗೆ ಗಡಿಬಿಡಿ ಗಂಡ ಆಲ್ಬಮ್ ಸರ್ಪ್ರೈಸ್ ಕೊಟ್ಟಿತ್ತು.

‘ನೀನು ನೀನೇ ಇಲ್ಲಿ ನಾನು ನಾನೇ..’ ‘ಮುದ್ದಾಡೆಂದಿದೆ ಮಲ್ಲಿಗೆ ಹೂ..’ ‘ಗಡಿಬಿಡಿ ಗಂಡ ನೀನು..’ ‘ಬಿದ್ದೆ ಬಿದ್ದೆ ಬಾತ್ ರೂಮಲ್ಲಿ...’ ಇವು ಟಿಪಿಕಲ್ ರವಿ-ಹಂಸ್ ಕಾಂಬಿನೇಷನ್ ಸಾಂಗ್ಸ್ ಆಗಿದ್ದವು. ಆದರೆ ಅಣ್ಣಯ್ಯ ಗೀತೆಗಳು ಭ್ರಮನಿರಸನ ಮಾಡಿದ್ದವು. ಕಾರಣ ಬೇಟಾ ಚಿತ್ರದ ಟಾಪ್ ಕ್ಲಾಸ್ ಗೀತೆಗಳು. ದಿನ ಕಳೆದಂತೆ, ಅಣ್ಣಯ್ಯ ಚಿತ್ರದ ಗೀತೆಗಳೂ ಇಷ್ಟವಾಗ್ತಾ ಹೋದವು. ಹಿಟ್ ಆದವು, ಬಾಯಿಪಾಠವೂ ಆಯ್ತು. ‌

ಇಂದಿಗೆ ಅವು ಕಲ್ಟ್ ಹಿಟ್ ಗೀತೆಗಳೇ. ಆದರೂ ಬೇಟಾ ಮತ್ತು ಅಣ್ಣಯ್ಯ ಆಲ್ಬಮ್ ಅಕ್ಕಪಕ್ಕ ಇಟ್ಟರೆ, ನನ್ನ ಆಯ್ಕೆ ಬೇಟಾ. ರೀಮೇಕ್ ಚಿತ್ರವೇ ಆದರೂ, ಅಣ್ಣಯ್ಯ ಚಿತ್ರಕ್ಕೆ ಎಲ್ಲವೂ ಒರಿಜಿನಲ್ ಟ್ಯೂನ್‌ಗಳನ್ನೇ ಕೊಟ್ಟಿದ್ದ ಹಂಸಲೇಖ, ಸಾಹಿತ್ಯದಲ್ಲಿ ಕೊಂಚ ಹೆಚ್ಚೇ ಡಬಲ್ ಮೀನಿಂಗ್ ತುಂಬಿದ್ದರು. ಶೃಂಗಾರಕ್ಕೂ ಮೀರಿದ ಪೋಲಿತನ ತುಂಬಿಸಿ ಕೊಟ್ಟಿದ್ದ ಹಂಸಲೇಖರ ಗೀತೆಗಳಿಗೆ ಇನ್ನಷ್ಟು ರಸಿಕತೆ ತುಂಬಿಸಿದ್ದು ರವಿಚಂದ್ರನ್‌ರ ಚಿತ್ರೀಕರಣ. ‌

ಹಾಡುಗಳಲ್ಲಿ ನಾಯಕಿ ಮಧೂ ಅವರ ಮೈತುಂಬ ಯಥೇಚ್ಛವಾಗಿ ಕೈಬಿಟ್ಟು, ಎದೆ ಸೊಂಟ ಎಲ್ಲವನ್ನೂ ಆಟದ ಸಾಮಾನುಗಳೆಂಬಂತೆ ಆಡಿದ್ದ ಅಣ್ಣಯ್ಯ. ಹಾಗಿದ್ದೂ, ಬೇಟಾದ ಆ ಗೀತೆಗಳ ಎದುರು ಈ ಗೀತೆಗಳದ್ದು ಸೋಲೇ. ಧಕ್ ಧಕ್ ಗೀತೆಗೆ ಮಾಧುರಿ ಹಾಕಿದ್ದಂಥದ್ದೇ ಬಟ್ಟೆ ಈ ಚಿತ್ರದಲ್ಲಿ ಮಧೂಗೂ ಹಾಕಲಾಗಿತ್ತು. ಆದರೆ ಅದು ಮಾಧುರಿಗೆ ಒಪ್ಪಿದಂತೆ ಮಧೂಗೆ ಒಪ್ಪಲೇ ಇಲ್ಲ. ಆ ಮಾದಕತೆ ಈಕೆಯಲ್ಲಿ ಕಾಣಿಸಲೇ ಇಲ್ಲ. ರವಿಚಂದ್ರನ್ ಅಂತೂ ಹಾಡಿನಲ್ಲಿ ಕೂಡ ಪಂಚೆ ಚುಂಗು ಬಿಡಲಿಲ್ಲ. ಅದನ್ನ ಹಿಡಿದೇ ಡ್ಯಾನ್ಸು, ಅದನ್ನು ಹಿಡಿದೇ ಫೈಟು.

ರವಿಚಂದ್ರನ್ ಈ ಚಿತ್ರದ ಆ ವಿಶೇಷ ಗೀತೆಗೆಂದೇ ಒಂದು ಅದ್ಭುತ ಸೆಟ್ ಹಾಕಿಸಿದ್ದರು. ರವಿಚಂದ್ರನ್ ಸೆಟ್ ಹಾಕಿಸಿದ್ರೆ ಆ ಸೆಟ್‌ಗಾಗಿ ಬೇರೆ ಸಿನಿಮಾದವ್ರು ಕಾಯ್ಕೊಂಡು ಇರುತ್ತಿದ್ದರು. ಅದೇ ಸೆಟ್ ಬಳಸಿಕೊಂಡು ತಾವೂ ಒಂದು ಹಾಡು ಶೂಟ್ ಮಾಡಿಕೊಳ್ಳುತ್ತಿದ್ದರು. ‘ಬೊಂಬೆ ಬೊಂಬೆ..’ ಗೀತೆಗೆ ಹಾಕಿದ ಸೆಟ್‌ನಲ್ಲಿ ಅಳೀಮಯ್ಯ ಚಿತ್ರದ ಗೀತೆಯನ್ನೂ ಶೂಟ್ ಮಾಡಿಕೊಂಡಿದ್ದರು.

ಇನ್ನು ಕೆಲವು ಗೀತೆಗಳೂ ಶೂಟ್ ಆಗಿದ್ದವು. ಇಂತಿಪ್ಪ ‘ಬೊಂಬೆ ಬೊಂಬೆ..’ ಗೀತೆ ನವರಾತ್ರಿ ಸಮಯಕ್ಕೆ ಉಚಿತವಾದ ಗೀತೆಯಾ? ಖಂಡಿತ ಅಲ್ಲ. ಅದು ಮೊದಲ ರಾತ್ರಿಗೆ ಹೊಂದಬಲ್ಲ ಗೀತೆ. ಹೌದು ಹಂಸಲೇಖರ ಆ ಗೀತೆಯಲ್ಲಿ ಎಲ್ಲ ಶೃಂಗಾರರಸ, ಕಾಮರಸಗಳೂ ಹದಮೀರಿ ಬಳಕೆಯಾಗಿವೆ. ಆದರೆ ಮೊದಲ ಕೇಳುವಿಕೆಯಲ್ಲಿ ಅಶ್ಲೀಲವೆನಿಸದಂತೆ,

ಎರಡನೇ ಕೇಳುವಿಕೆಯಲ್ಲಿ ‘ಅರೇ ತುಂಟಾ’ ಅನಿಸುವಂತೆ, ಮೂರನೇ ಕೇಳುವಿಕೆಯಲ್ಲಿ ‘ಅಬ್ಬಬ್ಬಾ ಪೋಲಿ’ ಎಂದು ತುಸು ನಾಚಿಕೆಯ ಗದರುವಂತೆ, ಇನ್ನೂ ಡೀಪಾಗಿ ಹೋದಂತೆಲ್ಲ ‘ಕಿಲಾಡಿ ಗುರೂ ಈ ಹಂಸಲೇಖ’ ಅನಿಸುವಂತೆ ಹಾಡಿಗೆ ಪದಪದರಗಳನ್ನು ಸೃಷ್ಟಿಸಿದ್ದಾರೆ ಹಂಸಲೇಖ. ಬೊಂಬೆ ಬೊಂಬೆ ಬೊಂಬೆ.. ಬೊಂಬೆ ಬೊಂಬೆ ಬೊಂಬೆ.. ನಿನ್ನ ಮುದ್ದಾಡಬೇಕು ನರ ಬೊಂಬೆ..ನಿನ್ನ ಚೆಂಡಾಡಬೇಕು ನರ ಬೊಂಬೆ!

ನಿನ್ನ ಕೊಂಡಾಡಬೇಕು ನರ ಬೊಂಬೆ.. ಜೊತೆ ಉಂಡಾಡಬೇಕು ನರ ಬೊಂಬೆ.. ‘ರುಂಡ ಚೆಂಡಾಡೋದು’ ಅಂತ ಹೇಳೋವಾಗ ಈ ಚೆಂಡಾಡು ಎಂಬ ಪದ ಬಳಕೆ ಸಾಮಾನ್ಯ. ಆದರೆ ಶೃಂಗಾರ ಗೀತೆಯಲ್ಲಿ ಚೆಂಡಾಡೋದರ ಉಖದ ಔಚಿತ್ಯ? ಹಂಸಲೇಖರ ಚೇಷ್ಟೆ ಇರೋದೇ ಇಲ್ಲಿ. ಚೆಂಡಾಡೋದು, ಉಂಡಾಡೋದು ಎಲ್ಲವೂ ಶೃಂಗಾರದಲ್ಲಿ ಬೇರೆಯದೇ ಅರ್ಥ ಪಡೆಯುತ್ತವೆ. ಹಂಸಲೇಖ ಅಲ್ಲಿಗೇ ನಿಲ್ಲಿಸುವುದಿಲ್ಲ.

‘ಬೊಂಬೆಯೊಳಗೆ ಬೊಂಬೆಯ ಮಾಡುವೆ ಅನ್ನೋ ಬೊಂಬೆ ಈ ಮಣ್ಣು ಬೊಂಬೆ..’ ಎಂದು ಬರೆಯುತ್ತಾ, ಮಿಲನಕ್ರಿಯೆ ಮತ್ತು ಸೃಷ್ಟಿಕ್ರಿಯೆಗಳನ್ನು ಒಂದೇ ಸಾಲಿನಲ್ಲಿ ವಿವರಿಸಿಬಿಡುತ್ತಾರೆ. ‘ಕಾಂತ ಶಿಲೆ ಬೊಂಬೆ ದೃಷ್ಟಿಗೊಂದು ನಿಂಬೆ’ ಅಂತ ಬರೆಯುತ್ತಾ ವಿಪರೀತಕ್ಕೂ ಹೋಗುತ್ತಾರೆ. ಹಂಸಲೇಖ ವಿಶೇಷ ಆಗೋದೇ ಹೀಗೆ. ಮೊದಲ ಪದರದಲ್ಲಿ ಅವರ ಗೀತೆ ಕೊಡುವ ಅರ್ಥ ಮಾಧುರ್ಯವೇ ಬೇರೆ. ಮತ್ತೆ ಮತ್ತೆ ಕೇಳಿದಾಗ ಸಿಗುವ ವಿಶೇಷ ಅರ್ಥಗಳೇ ಬೇರೆ.

ಇನ್ನೂ ಕೇಳ್ತಾ ಹೋದ್ರೆ ಇನ್ಯಾವುದೋ ಫಿಲಾಸಫಿಯೂ ಕಾಣಿಸಿಬಿಡಬಹುದು. ಸ್ಪಿರಿಚ್ಯುಯಾಲಿಟಿ ಯೂ ಕಾಣಿಸಿಬಿಡಬಹುದು. ಅವರು ನಿಜಕ್ಕೂ ಇಷ್ಟು ಲೇಯರ್ ಇಟ್ಟು ಬರೆದರೋ ಅಥವಾ ಕೇಳುವ ನಮಗೆ, ನಮ್ಮ ಭಾವ.. ವಯಸ್ಸು.. ಗ್ರಹಿಕೆಗೆ ತಕ್ಕಂತೆ ಪದಗಳಿಂದ ಪದರಗಳು ಸೃಷ್ಟಿಯಾದವೋ ಹಂಸಲೇಖರೇ ಹೇಳಬೇಕು. ಈಗ ಹೇಳಿ.. ಇದು ನವರಾತ್ರಿ ಪ್ರಯುಕ್ತ ಪ್ರಸಾರ ಮಾಡುವ ಗೀತೆಯಾ? ಆದರೂ ಹಂಸಲೇಖ ಗೀತೆಗಳು ಕನ್ನಡಿಗರ ಬದುಕಿನ ಅವಿಭಾಜ್ಯ ಅಂಗವಾಗಿರುವುದಂತೂ ಸತ್ಯ.

ಸಂದರ್ಭವಲ್ಲದ ಸಂದರ್ಭದಲ್ಲೂ, ಹೊತ್ತಲ್ಲದ ಹೊತ್ತಲ್ಲೂ ಕಾಡುವ, ಗುನುಗಿಸಿ ಕೊಳ್ಳುವ, ಹೆಜ್ಜೆ ಹಾಕಿಸುವಂಥ ಗೀತೆಗಳ ರಾಶಿಯನ್ನೇ ನಮ್ಮೆದುರು ಗುಡ್ಡೆ ಹಾಕಿಟ್ಟಿರುವಾಗ, ಪಾರಾಗುವುದಾದರೂ ಹೇಗೆ?