ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

D G Lakshman Column: ಭಕ್ತಿಮಾರ್ಗದ ಪ್ರಬಲ ಪ್ರತಿಪಾದಕ

ಪರಕೀಯರ ಆಕ್ರಮಣ, ರಾಜಕೀಯ ಮತ್ತು ಸಾಮಾಜಿಕ ದೌರ್ಜನ್ಯ ಹಾಗೂ ಸಂಘರ್ಷ ಭಾರತಕ್ಕೂ ಹೊಸತೇನಲ್ಲ. ಇಂದಿನ ಭಯೋತ್ಪಾದನೆ, ಆಂತರಿಕ ಮತ್ತು ಬಾಹ್ಯ ಬೆದರಿಕೆ ಗಳು ಹಿಂದೆಯೂ ಇರಲಿಲ್ಲವೆಂದಲ್ಲ. ಕಾಲಕಾಲಕ್ಕೆ ಅವುಗಳ ಸ್ವರೂಪ, ಅವುಗಳನ್ನೆದು ರಿಸಿದ ರೀತಿ ಮಾತ್ರ ಭಿನ್ನವಾಗಿತ್ತು, ಅಷ್ಟೇ. ಆದರೆ ಭರತಭೂಮಿ ಅವುಗಳನ್ನೆಲ್ಲ ಎದುರಿಸಿ ಅಜೇಯವಾಗಿ ಮುನ್ನಡೆದಿರುವುದಕ್ಕೆ ಈ ನೆಲದ ಸತ್ವ, ಸ್ವತ್ವ, ಮತ್ತು ಸ್ವಾಭಿಮಾನಗಳೇ ಕಾರಣ.

D G Lakshman Column: ಭಕ್ತಿಮಾರ್ಗದ ಪ್ರಬಲ ಪ್ರತಿಪಾದಕ

-

Ashok Nayak
Ashok Nayak Mar 3, 2026 10:31 AM

ತನ್ನಿಮಿತ್ತ

ದು.ಗು.ಲಕ್ಷ್ಮಣ

ಜಗತ್ತಿನಲ್ಲಿ ಯುದ್ಧೋನ್ಮಾದ ಇನ್ನೂ ಕಡಿಮೆ ಯಾಗಿಲ್ಲ. ರಷ್ಯಾದ ಯುದ್ಧೋನ್ಮಾ ದದಿಂದಾಗಿ ಉಕ್ರೇನ್ ಸ್ಮಶಾನಸ ದೃಶವಾಗಿದೆ. ಸಾಮ್ರಾಜ್ಯ ವಿಸ್ತರಣಾ ದಾಹ, ಇತರರನ್ನು ನೆಮ್ಮದಿಯಿಂದ ಬದುಕಲು ಬಿಡಕೂ ಡದೆಂಬ ಹಠ, ಎಲ್ಲದಕ್ಕೂ ಮಿಗಿಲಾಗಿ ದುರಹಂಕಾರ, ಸ್ವಾರ್ಥಲಾಲಸೆಗಳು ಇಂಥ ಸನ್ನಿವೇಶವನ್ನು ಅನಗತ್ಯವಾಗಿ ಸೃಷ್ಟಿಸುತ್ತವೆಂಬುದು ಎಲ್ಲ ಕಾಲಕ್ಕೂ ಸತ್ಯ.

ಪರಕೀಯರ ಆಕ್ರಮಣ, ರಾಜಕೀಯ ಮತ್ತು ಸಾಮಾಜಿಕ ದೌರ್ಜನ್ಯ ಹಾಗೂ ಸಂಘರ್ಷ ಭಾರತಕ್ಕೂ ಹೊಸತೇನಲ್ಲ. ಇಂದಿನ ಭಯೋತ್ಪಾದನೆ, ಆಂತರಿಕ ಮತ್ತು ಬಾಹ್ಯ ಬೆದರಿಕೆ ಗಳು ಹಿಂದೆಯೂ ಇರಲಿಲ್ಲವೆಂದಲ್ಲ. ಕಾಲಕಾಲಕ್ಕೆ ಅವುಗಳ ಸ್ವರೂಪ, ಅವುಗಳನ್ನೆದು ರಿಸಿದ ರೀತಿ ಮಾತ್ರ ಭಿನ್ನವಾಗಿತ್ತು, ಅಷ್ಟೇ. ಆದರೆ ಭರತಭೂಮಿ ಅವುಗಳನ್ನೆಲ್ಲ ಎದುರಿಸಿ ಅಜೇಯವಾಗಿ ಮುನ್ನಡೆದಿರುವುದಕ್ಕೆ ಈ ನೆಲದ ಸತ್ವ, ಸ್ವತ್ವ, ಮತ್ತು ಸ್ವಾಭಿಮಾನಗಳೇ ಕಾರಣ.

ಹದಿನೈದನೇ ಶತಮಾನದಲ್ಲೂ ಪರಕೀಯರ ಆಕ್ರಮಣ, ರಾಜಕೀಯ ಮತ್ತು ಸಾಮಾಜಿಕ ದೌರ್ಜನ್ಯ, ದಬ್ಬಾಳಿಕೆ ಭಾರತೀಯ ಸಮಾಜವನ್ನು ನಲುಗಿಸಿಬಿಟ್ಟಿತ್ತು. ಭಾರತದಲ್ಲಿ ಧರ್ಮಗ್ಲಾನಿಯಾದಾಗಲೆಲ್ಲ ನಾನು ಅದರ ಉದ್ಧಾರಕ್ಕಾಗಿ ಅವತರಿಸುವೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಸಾರಿರುವುದು ಸುಳ್ಳಾಗಲಿಲ್ಲ.

ಇದನ್ನೂ ಓದಿ: Prakash Hegde Column: ಮೊಬೈಲ್‌, ಎಐ ಮತ್ತು ರಕ್ಷಣಾ ವ್ಯವಸ್ಥೆಗಳ ಬೆನ್ನೆಲುಬು

ಇನ್ನೇನು ದೇಶ ಸರ್ವನಾಶದ ಅಂಚಿಗೆ ತಲಪಿತೆನ್ನುವಾಗ ಆಯಾ ಕಾಲಘಟ್ಟದಲ್ಲಿ ಒಬ್ಬರಲ್ಲ ಒಬ್ಬರು ವೀರಪುರುಷರು, ಸಂತರು, ಮಹಾನುಭಾವರು ಮೇಲೆದ್ದು ಬಂದು ಭಾರತದ ಗೌರವವನ್ನು, ಸನಾತನ ಧರ್ಮಸಂಸ್ಕೃತಿಯನ್ನು ಪೊರೆದ ನಿದರ್ಶನಗಳು ಸಾಕಷ್ಟು ಇವೆ.

ಚೈತನ್ಯ ಮಹಾಪ್ರಭುಗಳ ಅವತಾರ ನಿಜಕ್ಕೂ ಭಗವಂತನ ಉದ್ದೇಶಿತ ಕಾರ್ಯವಾಗಿತ್ತು. ಏಕೆಂದರೆ, ಭಯದಿಂದ ಕಂಗಾಲಾಗಿದ್ದ ಜನಮಾನಸದಲ್ಲಿ ಕೃಷ್ಣಭಕ್ತಿಯ ಸಂಕೀರ್ತನೆಯ ಮೂಲಕ ಅವರು ಭರವಸೆಯ ಬೆಳಕನ್ನು ಚೆಲ್ಲಿದರು. ಚೈತನ್ಯರು ಆಧ್ಯಾತ್ಮಿಕ ಒರತೆಯನ್ನು ಚಿಮ್ಮಿಸಿದ ಶ್ರೇಷ್ಠ ದಾರ್ಶನಿಕರು.

ಮಧ್ಯಕಾಲೀನ ಭಾರತದಲ್ಲಿ ಭಕ್ತಿಮಾರ್ಗವನ್ನು ಸಮರ್ಥವಾಗಿ ಮುನ್ನಡೆಸಿದ ಹಿರಿಮೆಯೂ ಚೈತನ್ಯ ಮಹಾಪ್ರಭುಗಳದ್ದೇ. ಹಾಗೆಂದೇ ಅವರನ್ನು ಶ್ರೀಕೃಷ್ಣನ ಅವತಾರವೆಂದು ಆಗಿನ ಕಾಲದಲ್ಲಿ ಅವರ ಅನುಯಾಯಿಗಳು ತಿಳಿದಿದ್ದರು.

ಚೈತನ್ಯ ಮಹಾಪ್ರಭುಗಳು (1486-1534) ಜನಿಸಿದ್ದು ಬಂಗಾಳದ ನವದ್ವೀಪದಲ್ಲಿ. ಜಗನ್ನಾಥ ಮಿಶ್ರಾ ಮತ್ತು ಶಚೀದೇವಿ ದಂಪತಿಯ ಮಗನಾಗಿ ಅವರು ಕಹಿಬೇವಿನ ಮರದ ಬುಡದಲ್ಲಿ ಜನಿಸಿದ್ದರಿಂದ ಅವರನ್ನು ಪ್ರೀತಿಯಿಂದ ‘ನಿಮಾಯಿ’ ಎಂದೂ ಕರೆಯಲಾಗುತ್ತಿತ್ತು.

-ಲ್ಗುಣ ಪೌರ್ಣಿಮೆಯಂದು ಜನಿಸಿದ್ದರಿಂದ ಹಾಗೂ ಬೆಳ್ಳಗೆ ಸುಂದರ ತ್ವಚೆಯವನಾಗಿದ್ದು ದರಿಂದ ಅವರನ್ನು ‘ಗೌರಾಂಗ’ ಎಂದೂ ಕರೆಯಲಾಗುತ್ತಿತ್ತು. ತಂದೆ-ತಾಯಿಗೆ ಹತ್ತನೆಯ ಮಗನಾದ ವಿಶ್ವಂಭರ ಮುಂದೆ ನಿಮಾಯಿ ಪಂಡಿತನಾಗಿ, ಸನ್ಯಾಸಾಶ್ರಮ ಸ್ವೀಕರಿಸಿದ ಬಳಿಕ ಭಗವಾನ್ ಶ್ರೀಚೈತನ್ಯ ಮಹಾಪ್ರಭುವಾಗಿ ವಿಖ್ಯಾತರಾದದ್ದು ಒಂದು ರೋಚಕ ಕಥೆ.

48 ವರ್ಷಗಳ ತಮ್ಮ ಅಲ್ಪ ಜೀವಿತಾವಧಿಯಲ್ಲಿ ಚೈತನ್ಯ ಮಹಾಪ್ರಭುಗಳು ಕಂಡ ಏರಿಳಿತ ಗಳು ಬೆರಗು ಹುಟ್ಟಿಸುವಂಥದ್ದು. ತಮ್ಮ ಜೀವನದ 24 ವರ್ಷಗಳವರೆಗೆ ವಿದ್ಯಾರ್ಥಿಯಾಗಿ ಮತ್ತು ಗೃಹಸ್ಥರಾಗಿ ಚೈತನ್ಯರು ವಾಸವಾಗಿದ್ದಿದ್ದು ನವದ್ವೀಪದಲ್ಲಿ. ಮೊದಲ ಪತ್ನಿ ಚಿಕ್ಕ ವಯಸ್ಸಿನ ತೀರಿಕೊಂಡಾಗ ತಾಯಿಯ ಅಪೇಕ್ಷೆಯಂತೆ ಎರಡನೇ ವಿವಾಹವಾದರು. ಆದರೆ ಎರಡನೇ ಪತ್ನಿಗೆ ಇನ್ನೂ ಹದಿನಾರರ ಪ್ರಾಯವಿದ್ದಾಗಲೇ ಚೈತನ್ಯರು ಸನ್ಯಾಸಾಶ್ರಮ ಸ್ವೀಕರಿಸಿದರು.

ಅದಾದ ಬಳಿಕ ಅವರ ಕಾರ್ಯಕ್ಷೇತ್ರದ ಕೇಂದ್ರವು ಒಡಿಶಾದ ಜಗನ್ನಾಥಪುರಿಗೆ ಸ್ಥಳಾಂತರ ಗೊಂಡಿತು. ಈ ಅವಧಿಯಲ್ಲಿ ಆರು ವರ್ಷಗಳ ಕಾಲ ಸತತವಾಗಿ ಶ್ರೀಮದ್ಭಾಗ ವತವನ್ನು ಬೋಧಿಸುತ್ತಾ ಭಾರತದಾದ್ಯಂತ- ವಿಶೇಷವಾಗಿ ದಕ್ಷಿಣ ಭಾರತದಲ್ಲಿ- ಸಂಚರಿಸಿದ್ದರು. ದಕ್ಷಿಣ ಭಾರತದಲ್ಲಿ ತಮಿಳುನಾಡಿನ ಶ್ರೀರಂಗಂ, ಕರ್ನಾಟಕದ ಉಡುಪಿ ಮತ್ತು ಕನ್ಯಾಕುಮಾರಿಯವರೆಗೂ ಪಯಣಿಸಿ ಕೃಷ್ಣಪ್ರಜ್ಞೆಯ ಬೋಧನೆಯನ್ನು ಮಾಡಿದರು.

ಚೈತನ್ಯ ಪ್ರಭುಗಳು ಯಾವುದೇ ಜಾತಿ, ಮತ, ಧರ್ಮಗಳ ಚೌಕಟ್ಟಿಗೆ ಅಂಟಿಕೊಂಡಿರಲಿಲ್ಲ. ಅವರು ನೋಡುತ್ತಿದ್ದುದು- ವ್ಯಕ್ತಿಯ ಅಂತರಂಗದಲ್ಲಿ ದೇವರ ಬಗೆಗಿರುವ ಗಾಢವಾದ ತುಡಿತ ಮತ್ತು ಭಕ್ತಿಯನ್ನು ಮಾತ್ರ. ಹಾಗಾಗಿ ಆಗಿನ ಕಾಲಘಟ್ಟದಲ್ಲಿ ಇದೊಂದು ಸಾಮಾಜಿಕ ಸಮಾನತೆ, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ರಾಂತಿಯಾಗಿತ್ತೆಂದರೆ ಉತ್ಪ್ರೇಕ್ಷೆ ಯಲ್ಲ. ಅನ್ಯಧರ್ಮದ ಅನೇಕ ಭಕ್ತರು ಇವರ ಅನುಯಾಯಿಗಳಾಗಿದ್ದರು.

ಮಹಮ್ಮದೀಯ ಕುಟುಂಬದಿಂದ ಬಂದ ಹರಿದಾಸ-ಠಾಕುರ್ ಅವರು ಪ್ರಭುಗಳ ಭಕ್ತಿ ಮಾರ್ಗದ ಸಾಂಗತ್ಯದಿಂದ ‘ನಾಮಾಚಾರ್ಯ’ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದರು. ಚೈತನ್ಯರು ವೃಂದಾವನವನ್ನು ಸಂದರ್ಶಿಸಿ, ಪ್ರಯಾಗಕ್ಕೆ ಬಂದ ಸಂದರ್ಭದಲ್ಲಿ ಧರ್ಮಾಂಧ ಮುಸ್ಲಿಂ ಸೈನಿಕರು ಎದುರಾದಾಗ ಅವರು ಧೃತಿಗೆಡಲಿಲ್ಲ.

ಅವರಿಗೆಲ್ಲ ಇಸ್ಲಾಂ ಧರ್ಮಗ್ರಂಥ ಕುರ್‌ಆನ್ ಬಗ್ಗೆ ಪ್ರವಚನ ನೀಡಿ, ಅದರಲ್ಲಿನ ನ್ಯೂನತೆ ಗಳನ್ನು ಎತ್ತಿ ಹಿಡಿದು ಅಪಾರ ಸಂಖ್ಯೆಯ ಧರ್ಮಾಂಧ ಮುಸ್ಲಿಮರನ್ನು ವೈಷ್ಣವ ಪಂಥಕ್ಕೆ ಬರಮಾಡಿಕೊಂಡರು. ಇಂದಿಗೂ ಅವರ ವಂಶಸ್ಥರು ತಮ್ಮನ್ನು ‘ಪಠಾಣ ವೈಷ್ಣವರು’ ಎಂದು ಗುರುತಿಸಿಕೊಳ್ಳುತ್ತಾರೆ.

ಭಗವಂತನ ಪುಣ್ಯ ನಾಮಸ್ಮರಣೆಯನ್ನು ಎಂಥ ಮನಃಸ್ಥಿತಿಯಲ್ಲಿ ಮಾಡಲು ಸಾಧ್ಯ? ಚೈತನ್ಯರೇ ರಚಿಸಿರುವ ಶಿಕ್ಷಾಷ್ಟಕ ಶ್ಲೋಕವೊಂದರಲ್ಲಿ ಇದನ್ನು ಸುಂದರವಾಗಿ ವ್ಯಾಖ್ಯಾನಿಸಲಾಗಿದೆ. ‘ತೃಣಾದಪಿ ಸುನೀಚೇನ ತರೋರಪಿ ಸಹಿಷ್ಣುನಾ| ಅಮಾನಿನಾ ಮಾನದೇನ ಕೀರ್ತನೀಯಃ ಸದಾ ಹರಿಃ||’- ಅಂದರೆ, ಪ್ರತಿಯೊಬ್ಬನೂ ತಾನು ಬೀದಿಯಲ್ಲಿನ ಒಂದು ಹುಲ್ಲುಕಡ್ಡಿಗಿಂತಲೂ ಕನಿಷ್ಠನೆಂಬ ಭಾವನೆಯಿಂದ, ವಿನಯಶೀಲನಾಗಿ ಭಗವಂತನ ಪವಿತ್ರನಾಮವನ್ನು ಪಠಿಸಬೇಕು.

ಎಲ್ಲ ಸುಳ್ಳು ಪ್ರತಿಷ್ಠೆಗಳನ್ನು ಬದಿಗಿಟ್ಟು ಮರಕ್ಕಿಂತಲೂ ಹೆಚ್ಚು ಸಹನಾಶೀಲನಾಗಬೇಕು. ಇಂಥ ಮನಃಸ್ಥಿತಿಯಲ್ಲಿ ಭಗವಂತನ ಪುಣ್ಯ ನಾಮಸ್ಮರಣೆಯನ್ನು ಸತತವಾಗಿ ಮಾಡಲು ಸಾಧ್ಯ ಎಂದರ್ಥ. ಶಿಕ್ಷಾಷ್ಟಕದ ಇನ್ನೊಂದು ಶ್ಲೋಕದಲ್ಲಿ ‘ನ ಧನಂ ನ ಜನಂ ನ ಸುಂದರೀಮ್..’- ಅಂದರೆ ನನಗೆ ಸಂಪತ್ತನ್ನು ಸಂಗ್ರಹಿಸುವ ಲಾಲಸೆಯಿಲ್ಲ. ಚೆಲುವೆಯರ ಬಯಕೆಯಿಲ್ಲ. ಅಥವಾ ಅನೇಕ ಮಂದಿ ಶಿಷ್ಯರೂ ಬೇಕಾಗಿಲ್ಲ.

ನನಗೆ ಬೇಕಾಗಿರುವುದು- ಜನ್ಮ ಜನ್ಮಗಳಲ್ಲೂ ನಿನ್ನ ನಿಷ್ಕಾರಣ ಭಕ್ತಿಸೇವೆ ಮಾತ್ರ ಎಂದು ಚೈತನ್ಯರು ವ್ಯಾಖ್ಯಾನಿಸಿದ್ದಾರೆ. ಮೋಕ್ಷ ಸಂಪಾದನೆಗೆ ಜ್ಞಾನಮಾರ್ಗ, ಭಕ್ತಿಮಾರ್ಗ ಮತ್ತು ಕರ್ಮಮಾರ್ಗ- ಹೀಗೆ ಮೂರು ಮಾರ್ಗಗಳನ್ನು ಭಾರತೀಯ ದಾರ್ಶನಿಕರು ಸೂಚಿಸಿದ್ದಾರೆ.

ಆದಿಶಂಕರರು ಜ್ಞಾನಮಾರ್ಗ, ಬಸವಣ್ಣನವರು ಕರ್ಮಮಾರ್ಗಕ್ಕೆ ಸಂಕೇತವಾಗಿದ್ದರೆ ಚೈತನ್ಯರು ಭಕ್ತಿಮಾರ್ಗದ ಹರಿಕಾರರಾಗಿ ಗುರುತಿಸಲ್ಪಡುತ್ತಾರೆ. ಹೊಡೆದಾಟ, ಜಗಳ, ಅಂತಃಕಲಹ, ಕಟಿಪಿಟಿ, ಕಿರಿಕಿರಿ, ಸಣ್ಣಪುಟ್ಟ ವಿಚಾರಗಳಿಗೂ ಕಾಲುಕೆರೆದು ಜಗಳ ತೆಗೆವ ಈ ಕಲಿಯುಗದಲ್ಲಿ ಅಂಥ ಉಪದ್ವ್ಯಾಪಗಳಿಂದ ಜನರನ್ನು ವಿಮುಖರನ್ನಾಗಿಸಿ ದೈವೀಚಿಂತನೆಯಲ್ಲಿ ಮನಸ್ಸು ಕೇಂದ್ರೀಕರಿಸುವಂತಾಗಬೇಕಾದರೆ ಭಜನೆ, ಸಂಕೀರ್ತನೆ ಮಾತ್ರ ವಿಹಿತವಾದ ಹಾದಿ ಎನಿಸುತ್ತದೆ.

ಇದನ್ನರಿತೇ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞೆ ಸಂಘಟನೆಯ (ಇಸ್ಕಾನ್) ಸಂಸ್ಥಾಪಕರಾದ ಶ್ರೀಲಪ್ರಭುಪಾದರು ಚೈತನ್ಯರ ತತ್ವಾದರ್ಶಗಳಿಂದ ಪ್ರಭಾವಿತರಾಗಿ, ಪ್ರೇರಣೆ ಪಡೆದು ಭಕ್ತಿ ಮಾರ್ಗದ ಮೂಲಕ ಪ್ರಾಪಂಚಿಕರ ಹೃದಯ ಕಲ್ಮಷ ತೊಳೆಯುವ ಮಹತ್ತರ ಕಾರ್ಯಕ್ಕೆ ನಾಂದಿ ಹಾಡಿದ್ದು. ಅದೇ ಈಗ ಇಸ್ಕಾನ್ ಸಂಸ್ಥೆಯ ಮೂಲಕ ಜಗತ್ತಿನಾದ್ಯಂತ ಒಂದು ಮಹಾನ್ ಸಾಮಾಜಿಕ ಮತ್ತು ಧಾರ್ಮಿಕ ಆಂದೋಲನವಾಗಿ ಜನರನ್ನಾಕರ್ಷಿಸುತ್ತಿದೆ.

ಐನೂರು ವರ್ಷಗಳ ಹಿಂದೆ ಚೈತನ್ಯರು ಬಿತ್ತಿದ ಬೀಜ ಗಿಡವಾಗಿ, ಮರವಾಗಿ ಈಗ ಫಲಭರಿತವಾಗಿದೆ. ಪ್ರತಿಯೊಬ್ಬನ ಮನದಲ್ಲಡಗಿರುವ ದುಷ್ಟತನದ ನಾನಾರೂಪಗಳನ್ನು ಕ್ರಮಶಃ ಮನಸ್ಸಿನಿಂದ ಹೊರಹಾಕಲು ಭಕ್ತಿಯೊಂದೇ ಸಾಧನ ಎಂಬ ಸಂದೇಶವನ್ನು ಚೈತನ್ಯರು ತಮ್ಮ ಶ್ರೇಷ್ಠ ಬದುಕಿನ ಮೂಲಕ ರವಾನಿಸಿದ್ದಾರೆ.

ಚೈತನ್ಯರು ಅಂಥ ಮಹಾನ್ ವ್ಯಕ್ತಿ ಆಗಿದ್ದರೆಂದೇ ಕುವೆಂಪು ರಚಿಸಿದ ನಾಡಗೀತೆಯಲ್ಲೂ ಚೈತನ್ಯರ ಹೆಸರು ಪ್ರಸ್ತಾಪಿಸಲ್ಪಟ್ಟಿದೆ. ಖ್ಯಾತ ಸಾಹಿತಿ ಡಾ.ನಾ.ಮೊಗಸಾಲೆ ಅವರು ‘ವಿಶ್ವಂಭರ’ ಎಂಬ 640 ಪುಟಗಳ ಬೃಹತ್ ಕಾದಂಬರಿಯನ್ನೇ ರಚಿಸಿದ್ದಾರೆ.

ಬೆಂಗಳೂರಿನ ‘ಟಚ್ ಸ್ಟೋನ್ ಫೌಂಡೇಷನ್’ ಅದನ್ನು ಪ್ರಕಟಿಸಿದೆ. ಚೈತನ್ಯರ ಭಕ್ತಿ ಪ್ರವಾಹದ ಆಂದೋಲನಕ್ಕೆ ಜಾತಿ-ಮತಗಳ ಅಂತರವಿಲ್ಲ. ಬಡವ- ಬಲ್ಲಿದರೆಂಬ ಚೌಕಟ್ಟಿಲ್ಲ. ಸಮಸ್ತರನ್ನೂ ಈ ಚಳವಳಿ ತನ್ನ ತೆಕ್ಕೆಗೆ ತೆಗೆದುಕೊಂಡಿರುವುದರಿಂದ ಅದು ಗಡಿದಾಟಿ ಜಾಗತಿಕವಾಗಿ ವ್ಯಾಪಕವಾಗುತ್ತಿದೆ.

ಚೈತನ್ಯರ ಬದುಕು-ಬೋಧನೆ ದೊಡ್ಡ ದೊಡ್ಡ ಸಾಫ್ಟ್‌ʼವೇರ್ ಕಂಪನಿಗಳ ಕೈತುಂಬ ವೇತನ ಪಡೆಯುವ ಟೆಕ್ಕಿಗಳನ್ನೂ ಪ್ರೇರೇಪಿಸಿದೆ. ಎಲ್ಲರ ಮನಸ್ಸುಗಳ ಮೇಲೆ ಅಲೌಕಿಕ ಬೆಳಕು ಬೀರಿದೆ. ಸಂಘರ್ಷವಿಲ್ಲದೆ ಸಾಮಾಜಿಕ ಸಾಮರಸ್ಯ ಸಾಧಿಸುವ ತಂತ್ರಗಾರಿಕೆಯನ್ನು ತೆರೆದಿಟ್ಟಿದೆ. ಯುದ್ಧವಿಲ್ಲದ, ಸ್ನೇಹದ ಬದ್ಧತೆ ಸಾರುವ ಸಂದೇಶ ರವಾನಿಸಿದೆ.

‘ಬಂಗಾಳ ಇಂದು ಯೋಚಿಸಿದ್ದನ್ನು ಭಾರತ ನಾಳೆ ಯೋಚಿಸಲಿದೆ’ ಎಂದು ಹಿಂದೆ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹೇಳಲಾಗುತ್ತಿತ್ತು. ಬಂಗಾಳದ ಚೈತನ್ಯರು ಹದಿನೈದನೇ ಶತಮಾನದಲ್ಲಿ ಯೋಚಿಸಿದ್ದನ್ನು ಇಡೀ ಜಗತ್ತು ಇಪ್ಪತ್ತೊಂದನೇ ಶತಮಾನ ದಲ್ಲಿ ಕೃತಿರೂಪಕ್ಕಿಳಿಸುತ್ತಿದೆ ಎಂದರೆ ಚೈತನ್ಯರ ವಿಚಾರಧಾರೆಯ ತಾಕತ್ತು ಎಂಥದು ಎಂಬುದು ಯಾರಿಗಾದರೂ ವೇದ್ಯವಾಗಬಹುದು.

ಭಕ್ತಿ ಚಳವಳಿಯ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಳ್ಳಬೇಕಾದುದು ಇಂದಿನ ಯುವಪೀಳಿಗೆಯ ಹೊಣೆಗಾರಿಕೆಯಾಗಿದೆ ಎಂಬುದನ್ನು ಮರೆಯದಿರೋಣ.

(ಲೇಖಕರು ಹಿರಿಯ ಪತ್ರಕರ್ತರು)