ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Harish Kera Column: ಇತಿಹಾಸ ಬದಲಿಸಿದ ಒಂದು ವಾಕಿಂಗ್

ವಾಕಿಂಗ್'ಗೆ ಸಾಮಾಜಿಕ, ಹೋರಾಟದ ಆಯಾಮವನ್ನು ಸೇರಿಸಿದ ಯಾತ್ರೆಯಾಗಿ ಇತಿಹಾಸ ಬರೆದದ್ದು ಮಹಾತ್ಮ ಗಾಂಧಿ ನಡೆಸಿದ ದಂಡಿ ಯಾತ್ರೆ. ಗಾಂಧಿ 60 ವರ್ಷ ವಯಸ್ಸು ದಾಟಿದ ನಂತರ ಕೈಗೊಂಡ ನಡಿಗೆಯದು. ಗಾಂಧಿಯನ್ನು ಭಾರತ ಸ್ವಾತಂತ್ರ್ಯ ಹೋರಾಟದ ಪ್ರಶ್ನಾತೀತ ನಾಯಕನಾಗಿ ಸ್ಥಾಪಿಸಿದ ನಡಿಗೆ. ದೇಶದ ಫ್ರೀಡಂ ಫೈಟ್‌ಗೆ ವಿದೇಶಗಳ ಪತ್ರಿಕೆಗಳಲ್ಲಿ ಸಾಕಷ್ಟು ಸುದ್ದಿ ಜಾಗವನ್ನು ಒದಗಿಸಿದ ಯಾತ್ರೆ.

Harish Kera Column: ಇತಿಹಾಸ ಬದಲಿಸಿದ ಒಂದು ವಾಕಿಂಗ್

-

ಹರೀಶ್‌ ಕೇರ
ಹರೀಶ್‌ ಕೇರ Oct 1, 2026 8:13 AM

ಕಾಡುದಾರಿ

ವಾಕಿಂಗ್‌ಗೆ ಅಂತಃಕರಣದ ಸ್ಪರ್ಶ ಆದಾಗ ಅದು ಅಂತರಂಗದ ನಡಿಗೆಯಾಗುತ್ತದೆ. ಭಕ್ತಿಯ ಸ್ಪರ್ಶ ಆದಾಗ ಪಾದಯಾತ್ರೆಯಾಗುತ್ತದೆ. ಪಾದಯಾತ್ರೆಯ ಹೆಸರಿನಲ್ಲಿ ನಡೆಯುವ ರಾಜಕೀಯದ ತಮಾಷಾ ಬೇರೆ. ಬಂಗಾಳದಲ್ಲಿ ಚೈತನ್ಯರು ಮಾಡಿದ ಪಾದ ಯಾತ್ರೆ, ಶಂಕರಾಚಾರ್ಯರ ಇಡೀ ಭಾರತದ ಧರ್ಮ ಯಾತ್ರೆ- ಇವೆಲ್ಲ ಅಪ್ಪಟ ಕಾಲ್ನಡಿಗೆಯಲ್ಲೇ ಆದವು. ಪಂಢರಾಪುರಕ್ಕೆ ವಿಠಲನ ಭಕ್ತರು ನಡೆಸುವ ವಾರಕರಿ, ಶ್ರೀಶೈಲ ಮೊದಲಾದೆಡೆಗೆ ಭಕ್ತರು ನಡೆಸುವ ಯಾತ್ರೆಗಳು ಈಗಲೂ ನಡೆಯುವಂಥವು.

ವಾಕಿಂಗ್'ಗೆ ಸಾಮಾಜಿಕ, ಹೋರಾಟದ ಆಯಾಮವನ್ನು ಸೇರಿಸಿದ ಯಾತ್ರೆಯಾಗಿ ಇತಿಹಾಸ ಬರೆದದ್ದು ಮಹಾತ್ಮ ಗಾಂಧಿ ನಡೆಸಿದ ದಂಡಿ ಯಾತ್ರೆ. ಗಾಂಧಿ 60 ವರ್ಷ ವಯಸ್ಸು ದಾಟಿದ ನಂತರ ಕೈಗೊಂಡ ನಡಿಗೆಯದು. ಗಾಂಧಿಯನ್ನು ಭಾರತ ಸ್ವಾತಂತ್ರ್ಯ ಹೋರಾಟದ ಪ್ರಶ್ನಾತೀತ ನಾಯಕನಾಗಿ ಸ್ಥಾಪಿಸಿದ ನಡಿಗೆ. ದೇಶದ ಫ್ರೀಡಂ ಫೈಟ್‌ಗೆ ವಿದೇಶಗಳ ಪತ್ರಿಕೆಗಳಲ್ಲಿ ಸಾಕಷ್ಟು ಸುದ್ದಿ ಜಾಗವನ್ನು ಒದಗಿಸಿದ ಯಾತ್ರೆ.

ದಂಡಿಯ ಸಮುದ್ರ ತೀರದಲ್ಲಿ ನಿಂತು ಮಹಾತ್ಮ ಒಂದು ಹಿಡಿ ಉಪ್ಪುಮಿಶ್ರಿತ ಮಣ್ಣನ್ನು ಹಿಡಿದೆತ್ತಿ ‘ಇಲ್ಲಿಂದ ಬ್ರಿಟಿಷ್ ಸಾಮ್ರಾಜ್ಯದ ಪತನ ಆರಂಭ’ ಎಂದು ಘೋಷಿಸಿದ ಸುದ್ದಿಯನ್ನು ಮೀಡಿ ಯಾ ರೂಮ್‌ಗಳಿಗೆ ತಿಳಿಸುವ 700 ಟೆಲಿಗ್ರಾಂಗಳು ಅಂದು ದಂಡಿಯ ಸಮೀಪದ ಜಲಾಲ್‌ಪುರದ ಪೋಸ್ಟ್ ಆಫೀಸ್‌ನಿಂದ ಹೋದವು ಎಂದರೆ, ಊಹಿಸಿಕೊಳ್ಳಿ.

ಇದನ್ನೂ ಓದಿ: Harish Kera Column: ಚಿಪ್ಸ್‌ ತಿನ್ನುವ ಮಂಗ, ಚಿಲ್ಲರೆ ಹೆಕ್ಕುವ ಆನೆ

ಗಾಂಧೀಜಿಗೆ ಇದ್ದ ನಡಿಗೆಯ ನಂಟು ತುಂಬ ಹಿಂದಿನದು. ಅವರು ತಮ್ಮ ವಯಸ್ಕ ಜೀವನದ ಬಹುತೇಕ ಅವಧಿಯಲ್ಲಿ ಹೊಂದಿದ್ದ ದೇಹತೂಕ ಸುಮಾರು 45 ಕಿಲೋ ಮಾತ್ರ. ಅವರ ಎತ್ತರ ಐದು ಅಡಿ ಐದು ಇಂಚು. ಆಗಿನ ಕಪ್ಪು-ಬಿಳುಪು ಛಾಯಾ ಚಿತ್ರಗಳನ್ನು ನೋಡಿದರೆ ಅವರು ದೈಹಿಕವಾಗಿ ಬಹಳ ದುರ್ಬಲರಾಗಿದ್ದರು ಎಂಬ ಭಾವನೆ ಮೂಡಬಹುದು. ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಾಗಿತ್ತು.

ಜೀವನದುದ್ದಕ್ಕೂ ಅವರು ಅತ್ಯಂತ ಕಠಿಣ ದಿನಚರಿ ಪಾಲಿಸುತ್ತಿದ್ದರು. ಗಾಂಧಿ ನಿರಂತರವಾಗಿ ಪ್ರಯಾಣಿಸುತ್ತಿದ್ದರು. ರೈಲು ಮತ್ತು ಕಾಲ್ನಡಿಗೆಯ ಮೂಲಕ ದೇಶದ ಮೂಲೆಮೂಲೆ ಸುತ್ತುತ್ತಿದ್ದರು. ಅಸಂಖ್ಯಾತ ಜನರನ್ನು ಭೇಟಿಯಾ ಗುತ್ತಿದ್ದರು ಮತ್ತು ಅವರೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದರು.

ಯಂಗ್ ಇಂಡಿಯಾ, ನವಜೀವನ್, ಹರಿಜನ್ ಪತ್ರಿಕೆಗಳನ್ನು ಸಂಪಾದಿಸುತ್ತಿದ್ದರು ಮತ್ತು ನಿಯಮಿತ ವಾಗಿ ಬರೆಯುತ್ತಿದ್ದರು. ಇವೆಲ್ಲದರ ಜೊತೆಗೆ ಬ್ರಿಟಿಷರ ವಿರುದ್ಧ ಜನಾಂದೋಲನಗಳನ್ನು ಮುನ್ನಡೆಸುತ್ತಿದ್ದರು. ಕಠಿಣ ಉಪವಾಸಗಳನ್ನು ಸಹಿಸಿಕೊಳ್ಳುತ್ತಿದ್ದರು. ಕನಿಷ್ಠ 10 ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.

ಇಷ್ಟೆಲ್ಲವನ್ನೂ ಮಾಡಲು ಅಪಾರ ಸಹಿಷ್ಣುತೆ ಮತ್ತು ದೈಹಿಕ ಸಾಮರ್ಥ್ಯ ಅಗತ್ಯವಾಗಿತ್ತು. ಸರಳವಾದ ಪಂಚೆ ಧರಿಸುತ್ತಿದ್ದ ಆ ತೆಳ್ಳನೆಯ ದೇಹ ವಾಸ್ತವದಲ್ಲಿ ಅತ್ಯಂತ ಗಟ್ಟಿಮುಟ್ಟಾಗಿತ್ತು. ಗಾಂಧೀಜಿಯವರೊಂದಿಗೆ ನಿರಂತರವಾಗಿ ಪತ್ರ ವ್ಯವಹಾರ ನಡೆಸಿದ್ದ ಫ್ರೆಂಚ್ ಬರಹಗಾರ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ರೊಮಾ ರೊಲಾ, ಗಾಂಧಿ ಬಗ್ಗೆ ಒಂದು ಕಡೆ, ‘ನೋಡಲು ಬಹಳ ದುರ್ಬಲವಾಗಿ ಕಾಣುವ ಈ ಪುಟ್ಟ ಮನುಷ್ಯನಿಗೆ ದಣಿವು ಎಂಬುದೇ ಇಲ್ಲ. ಆಯಾಸ ಎಂಬ ಪದವೇ ಅವರ ಶಬ್ದಕೋಶದಲ್ಲಿಲ್ಲ’ ಎಂದು ಬರೆಯುತ್ತಾರೆ.

M gandhi

ಈ ದೈಹಿಕ ಶಕ್ತಿಯ ಹಿಂದೆ ಜೀವನಪೂರ್ತಿ ಅನುಸರಿಸಿದ ಸರಳ ಆಹಾರ ಪದ್ಧತಿ, ನಿಯಮಿತ ದೈಹಿಕ ವ್ಯಾಯಾಮ, ವಿಶೇಷವಾಗಿ ವಾಕಿಂಗ್ ಪ್ರಮುಖ ಪಾತ್ರ ವಹಿಸಿತ್ತು. ನಾವು 10000 ಸ್ಟೆಪ್ಸ್ ಎಂಬ ಲೆಕ್ಕಾಚಾರ ಹಾಕಿಕೊಂಡು, ಅದನ್ನು ಮುಗಿಸುವುದರಲ್ಲಿ ಸುಸ್ತಾಗುತ್ತೇವೆ. ಆದರೆ ಗಾಂಧಿ ಪ್ರತಿದಿನ ಸರಾಸರಿ 18 ಕಿ.ಮೀ. ನಡೆಯುತ್ತಿದ್ದರು. ಅಂದರೆ ಸುಮಾರು 24000 ಹೆಜ್ಜೆ. ಸುಮಾರು 40 ವರ್ಷ ಈ ಅಭ್ಯಾಸವನ್ನು ಮುಂದುವರಿಸಿದ್ದರು.

1914ರಿಂದ 1948ರವರೆಗೆ ತಮ್ಮ ವಿವಿಧ ಚಳವಳಿಗಳು ಮತ್ತು ಪ್ರವಾಸಗಳ ಸಂದರ್ಭದಲ್ಲಿ ಅವರು 79000 ಕಿ.ಮೀ. ನಡೆದಿದ್ದಾರೆ ಎಂಬ ಅಂದಾಜು. ಇದು ಭೂಮಿಯನ್ನು ಎರಡು ಬಾರಿ ಸುತ್ತಿದಷ್ಟೇ ದೂರ! ಒಮ್ಮೆ ತಮ್ಮ ಮಾರ್ಗದರ್ಶಕರಂತಿದ್ದ ಹಿರಿಯ ನಾಯಕ ಗೋಪಾಲಕೃಷ್ಣ ಗೋಖಲೆ ಯವರಿಗೂ ಗಾಂಧೀಜಿ ನಡಿಗೆಯ ಮಹತ್ವವನ್ನು ತಿಳಿಸಿದ್ದರು.

ಗೋಖಲೆ ಅವರು ಸರಿಯಾಗಿ ನಡೆಯುವುದಿಲ್ಲ ಎಂಬುದನ್ನು ಗಮನಿಸಿದ ಗಾಂಧೀಜಿ, ‘ನೀವು ಹೊರಗೆ ಹೋಗಿ ನಡೆಯುವುದೂ ಇಲ್ಲ. ಹೀಗಿರುವಾಗ ನೀವು ಯಾವಾಗಲೂ ಅನಾರೋಗ್ಯದಿಂದ ಬಳಲುವುದರಲ್ಲಿ ಆಶ್ಚರ್ಯವೇನು? ಸಾರ್ವಜನಿಕ ಕೆಲಸದ ನಡುವೆ ದೈಹಿಕ ವ್ಯಾಯಾಮಕ್ಕೂ ಸಮಯವಿಲ್ಲವೇ?’ ಎಂದು ಕೇಳಿದ್ದರು. ಸಮಯವಿಲ್ಲ ಎಂದು ಗೋಖಲೆ ನೀಡಿದ ಉತ್ತರ ಗಾಂಧೀಜಿಗೆ ಸಮಾಧಾನ ತಂದಿರಲಿಲ್ಲ.

ತಾವು ಎಲ್ಲಾ ಇದ್ದರೂ, ಎಷ್ಟೇ ಕೆಲಸವಿದ್ದರೂ ಗಾಂಧೀಜಿ ತಮ್ಮ ನಡಿಗೆಯನ್ನು ಮಾತ್ರ ಎಂದಿಗೂ ತಪ್ಪಿಸುತ್ತಿರಲಿಲ್ಲ. ನಡಿಗೆಯ ಮಹತ್ವವನ್ನು ಅವರು ಜೀವನದ ಆರಂಭದ ಅರಿತುಕೊಂಡಿದ್ದರು. 1888ರಿಂದ 1891ರವರೆಗೆ ಇಂಗ್ಲೆಂಡ್‌ನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾಗ, ಆರಂಭದಲ್ಲಿ ಅವರು ಇಂಗ್ಲಿಷ್ ಕುಟುಂಬವೊಂದರ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. ಅಲ್ಲಿ ಹಣದ ಕೊರತೆ ಎದುರಾದಾಗ ತಮ್ಮ ಖರ್ಚನ್ನು ಅರ್ಧಕ್ಕೆ ಇಳಿಸಿಕೊಳ್ಳಲು ನಿರ್ಧರಿಸಿದರು.

ಕೆಲಸದ ಸ್ಥಳಕ್ಕೆ ಅರ್ಧ ಗಂಟೆಯಲ್ಲಿ ನಡೆದುಕೊಂಡು ಹೋಗಬಹುದಾದಷ್ಟು ಹತ್ತಿರದಲ್ಲಿ ಒಂದು ಕೊಠಡಿ ಬಾಡಿಗೆಗೆ ತೆಗೆದುಕೊಂಡರು. ಈ ಕುರಿತು ತಮ್ಮ ಆತ್ಮಕಥೆಯಲ್ಲಿ ಹೀಗೆ ಬರೆದಿದ್ದಾರೆ: ಹೊಸ ವ್ಯವಸ್ಥೆಯಿಂದ ನಡಿಗೆ ಮತ್ತು ಉಳಿತಾಯ ಎರಡೂ ಸಾಧ್ಯವಾಯಿತು. ಪ್ರಯಾಣದ ವೆಚ್ಚ ಉಳಿಯುವುದರ ಜೊತೆಗೆ ಪ್ರತಿದಿನ ಎಂಟರಿಂದ ಹತ್ತು ಮೈಲು ನಡೆಯುವ ಅವಕಾಶ ಸಿಕ್ಕಿತು.

ದೀರ್ಘ ನಡಿಗೆಯ ಈ ಅಭ್ಯಾಸವೇ ಇಂಗ್ಲೆಂಡ್‌ನಲ್ಲಿದ್ದ ಅವಽಯಲ್ಲಿ ನನ್ನನ್ನು ಬಹುತೇಕ ಅನಾರೋಗ್ಯದಿಂದ ದೂರವಿಟ್ಟಿತು ಮತ್ತು ದೇಹವನ್ನು ಸಾಕಷ್ಟು ಗಟ್ಟಿಗೊಳಿಸಿತು. ಲಂಡನ್‌ನಿಂದ ಭಾರತಕ್ಕೆ ಮರಳಿ ಬಾಂಬೆಗೆ ಬಂದ ನಂತರ ಅವರು ಗಿರ್ಗಾಂವ್‌ನಲ್ಲಿ ವಾಸಿಸುತ್ತಿದ್ದರು. ಆದರೆ ಅಲ್ಲಿಂದ ಹೈಕೋರ್ಟ್‌ಗೆ ಹೋಗಲು ಅವರು ಬಹಳ ಅಪರೂಪವಾಗಿ ಕುದುರೆಗಾಡಿ ಅಥವಾ ಟ್ರಾಮ್ ಬಳಸುತ್ತಿದ್ದರು. ಬದಲಿಗೆ ಕಾಲ್ನಡಿಗೆಯ ಹೋಗುತ್ತಿದ್ದರು.

ಹೈಕೋರ್ಟ್ ತಲುಪಲು ಸುಮಾರು 45 ನಿಮಿಷ ಬೇಕಾಗುತ್ತಿತ್ತು. ಮರಳುವಾಗಲೂ ನಡೆದುಕೊಂಡೇ ಬರುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಹೆಚ್ಚಿನ ಕಾನೂನು ಪ್ರಕರಣಗಳು ಸಿಗದಿದ್ದರಿಂದ ಈ ನಡಿಗೆ ಹಣವನ್ನೂ ಉಳಿಸುತ್ತಿತ್ತು. ಈ ನಿಯಮಿತ ನಡಿಗೆಯಿಂದಾಗಿ ತಾನು ಅನಾರೋಗ್ಯಕ್ಕೆ ಒಳಗಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್‌ನ ತಂಪಾದ ವಾತಾವರಣದಲ್ಲಿ ನಡೆಯುವುದನ್ನು ಬಹಳ ಇಷ್ಟಪಡುತ್ತಿದ್ದ ಗಾಂಧಿ, ಬಾಂಬೆಯ ಬಿಸಿಲಿಗೂ ತಮ್ಮ ದೇಹವನ್ನು ಕ್ರಮೇಣ ಒಗ್ಗಿಸಿಕೊಂಡರು. ನಾನು ಹಣ ಸಂಪಾದಿಸಲು ಆರಂಭಿಸಿದ ನಂತರವೂ ನಡಿಗೆಯ ಅಭ್ಯಾಸವನ್ನು ಮುಂದುವರಿಸಿದೆ ಎಂದು ಅವರು ಬರೆದಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿzಗಲೂ ತಮ್ಮ ಸ್ನೇಹಿತ ಹರ್ಮನ್ ಕನ್‌ಬಾಕ್ ಅವರೊಂದಿಗೆ ಗಾಂಧೀಜಿ ನಿಯಮಿ ತವಾಗಿ ನಡಿಗೆ ಹೋಗುತ್ತಿದ್ದರು. ಅಲ್ಲಿನ ಸತ್ಯಾಗ್ರಹದ ಸಂದರ್ಭದಲ್ಲಿ ಗಣಿಗಾರಿಕೆ ಮತ್ತು ತೋಟಗಳ ಮಾಲೀಕರಾದ ಶ್ವೇತವರ್ಣೀಯರಿಂದ ತಪ್ಪಿಸಿಕೊಳ್ಳಲು ಮುಷ್ಕರ ನಿರತ ಕಾರ್ಮಿಕ ರನ್ನು ಮುನ್ನಡೆಸುತ್ತಾ ಸುಮಾರು 35 ಮೈಲು ದೂರ ಕಾಲ್ನಡಿಗೆಯಲ್ಲಿ ಸಾಗಿದ್ದರು. ನಂತರದ ಜೀವನದಲ್ಲಿಯೂ ನಡಿಗೆ ಅವರ ದಿನಚರಿಯ ಅವಿಭಾಜ್ಯ ಅಂಗವಾಗಿತ್ತು.

ಅಹಮದಾಬಾದಿನ ಸಬರಮತಿ ಆಶ್ರಮ, ಸೇವಾಗ್ರಾಮ ಆಶ್ರಮ, ಅಥವಾ ಬೇರೆಡೆ ಇದ್ದರೂ ಅವರು ನಡಿಗೆ ಬಿಡುತ್ತಿರಲಿಲ್ಲ. 1924ರಲ್ಲಿ ಬಾಂಬೆಯಲ್ಲಿ ಅಪೆಂಡಿ ಸೈಟಿಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದ ಸಂದರ್ಭದಲ್ಲೂ ಪ್ರತಿದಿನ ಜುಹು ಸಮುದ್ರತೀರದಲ್ಲಿ ಸುಮಾರು 40 ನಿಮಿಷ ನಡೆಯುತ್ತಿದ್ದರು.

1931ರಲ್ಲಿ ದುಂಡುಮೇಜಿನ ಸಮ್ಮೇಳನಕ್ಕೆ ಲಂಡನ್‌ಗೆ ತೆರಳಿದಾಗಲೂ ಅವರ ದಿನಚರಿ ಬದಲಾಗಲಿಲ್ಲ. ಬೆಳಗಿನ 4 ಗಂಟೆಗೆ ಎದ್ದು ಒಂದು ಗಂಟೆ ಪ್ರಾರ್ಥನೆ ಮಾಡಿ, ನಂತರ ನಗರದ ನಿರ್ಜನ ರಸ್ತೆಗಳಲ್ಲಿ ನಡಿಗೆಗೆ ತೆರಳುತ್ತಿದ್ದರು. ಗಾಂಧೀಜಿಯ ದೂರದ ನಡಿಗೆಯ ಸಾಮರ್ಥ್ಯಕ್ಕೆ ಮತ್ತೊಂದು ಆಯಾಮವೂ ಇತ್ತು. 1899ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬೋಯರ್‌ಗಳು ಮತ್ತು ಬ್ರಿಟಿಷರ ನಡುವೆ ಯುದ್ಧ ಆರಂಭವಾದಾಗ ಅವರು ನೇಟಲ್ ನಲ್ಲಿದ್ದರು.

ಡಚ್ ಮೂಲದ ಬೋಯರ್‌ಗಳು ಬ್ರಿಟಿಷರ ಆಳ್ವಿಕೆಯಲ್ಲಿದ್ದ ನೇಟಲ್‌ನ ಪಕ್ಕದಲ್ಲಿರುವ ಟ್ರಾನ್ಸ್‌ವಾಲ್ ಪ್ರದೇಶದಲ್ಲಿ ನೆಲೆಸಿದ್ದರು. ಟ್ರಾನ್ ವಾಲ್‌ನಲ್ಲಿ ಚಿನ್ನ ಪತ್ತೆಯಾದ ನಂತರ ಅವರ ಮತ್ತು ಬ್ರಿಟಿಷರ ನಡುವಿನ ಸಂಘರ್ಷ ತೀವ್ರಗೊಂಡಿತು. ಆಗ ಗಾಂಧೀಜಿ ಸುಮಾರು 500 ಭಾರತೀಯರೊಂದಿಗೆ ಆಂಬ್ಯುಲೆನ್ಸ್ ಪಡೆಯೊಂದರಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಮುಂದಾದರು. ‌

ಗಾಯಾಳುಗಳನ್ನು ಸ್ಟ್ರೆಚರ್‌ಗಳಲ್ಲಿ ಹೊತ್ತುಕೊಂಡು ಅವರು ಅನೇಕ ಬಾರಿ ದಿನಕ್ಕೆ 20 ರಿಂದ 25 ಮೈಲುಗಳಷ್ಟು ನಡೆಯುತ್ತಿದ್ದರು. ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ, ಕೆಲವೊಮ್ಮೆ ತಾವು ಮತ್ತು ಸ್ವಯಂಸೇವಕರು ಭುಜದ ಮೇಲೆ ಸ್ಟ್ರೆಚರ್ ಹೊತ್ತುಕೊಂಡೇ ದಿನಕ್ಕೆ 40 ಮೈಲುಗಳವರೆಗೆ ನಡೆದಿzವು ಎಂದು ಬರೆದಿದ್ದಾರೆ.

ಅದೊಂದು ಅಪಾಯಕಾರಿ ಕೆಲಸ. ಕೆಲ ಸಂದರ್ಭಗಳಲ್ಲಿ ಅವರು ಮತ್ತು ಸಹಚರರು ನೇರವಾಗಿ ಗುಂಡಿನ ದಾಳಿಯ ವ್ಯಾಪ್ತಿಯ ಕೆಲಸ ಮಾಡಬೇಕಾಗಿತ್ತು. ಸುತ್ತಮುತ್ತ ಶೆಲ್‌ಗಳು ಸಿಡಿಯುತ್ತಿದ್ದರೂ ಗಾಯಾಳುಗಳನ್ನು ಹೊತ್ತು ಸಾಗಬೇಕಾಗುತ್ತಿತ್ತು. 1906ರಲ್ಲಿ ಜುಲು ಜನರು ಅನ್ಯಾಯದ ತೆರಿಗೆ ವಿರೋಧಿಸಿ ಬ್ರಿಟಿಷರ ವಿರುದ್ಧ ನಡೆಸಿದ ದಂಗೆಯ ಸಂದರ್ಭದಲ್ಲೂ ಗಾಂಧಿ ಮತ್ತೊಮ್ಮೆ ಆಂಬ್ಯುಲೆನ್ಸ್ ಪಡೆಯ ಭಾಗವಾಗಿದ್ದರು. ‌

ಗಾಂಧಿಯ ಸಹಾನುಭೂತಿ ಜುಲು ಜನರ ಕಡೆಗಿತ್ತು. ಬಿಳಿಯರು ಗಾಯಗೊಂಡ ಜುಲು ಜನರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದರು. ಬಹುತೇಕ ಗಾಯಗಳು ಜುಲು ಕೈದಿಗಳಿಗೆ ನೀಡಲಾಗಿದ್ದ ಥಳಿತದಿಂದ ಉಂಟಾಗಿದ್ದವು. ಯಾರೂ ಚಿಕಿತ್ಸೆ ನೀಡದ ಕಾರಣ ಆ ಗಾಯಗಳು ಮತ್ತಷ್ಟು ಉಲ್ಬಣಗೊಂಡಿದ್ದವು. ಗಾಂಧಿ ಮತ್ತು ಗೆಳೆಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದರು.

ಇಂಥ ಅಂಥಕರಣ, ಕಕ್ಕುಲಾತಿಗಳು ಜೊತೆಗೂಡಿದ, ಜೊತೆವಾಸಿಗಳನ್ನು ಆದರಿಸಿಕೊಂಡೇ ಜೊತೆಗೊಯ್ಯುವ ಮಮತೆ ಅವರ ದೈನಂದಿನ ನಡಿಗೆಯ ಭಾಗವಾಗಿತ್ತು. ಅದು ಸ್ವಾತಂತ್ರ್ಯ ಹೋರಾಟಕ್ಕೂ ವಿಸ್ತರಿಸಿತು. ದಂಡಿ ಯಾತ್ರೆಯಲ್ಲೂ ಇದನ್ನು ಕಾಣಬಹುದಾಗಿತ್ತು. ‘ನಾವು ಈಗ ಬದುಕು ಮತ್ತು ಸಾವಿನ ನಡುವಿನ ಹೋರಾಟಕ್ಕೆ, ಒಂದು ಪವಿತ್ರ ಯುದ್ಧಕ್ಕೆ ಪ್ರವೇಶಿಸುತ್ತಿದ್ದೇವೆ. ನಾವು ಎಲ್ಲವನ್ನೂ ಒಳಗೊಂಡ ತ್ಯಾಗವನ್ನು ನೆರವೇರಿಸುತ್ತಿದ್ದು, ಆ ತ್ಯಾಗದಲ್ಲಿ ನಮ್ಮನ್ನೇ ಆಹುತಿಯಾಗಿ ಅರ್ಪಿಸಿಕೊಳ್ಳಲು ಬಯಸುತ್ತೇವೆ’ ಎಂದು ನಾಟಕೀ ಯವಾಗಿ ಘೋಷಿಸಿ ಯಾತ್ರೆ ಶುರು ಮಾಡಿದರು.

ದಂಡಿ ಯಾತ್ರೆಯಲ್ಲಿ ಭಾಗವಹಿಸುವವರಿಗೆ ಕಠಿಣ ಶಿಸ್ತು, ಸತ್ಯಾಗ್ರಹ ಮತ್ತು ಅಹಿಂಸೆಯ ನಿಯಮ ಪಾಲನೆ ಮಾಡಬೇಕು ಎಂದು ಗಾಂಧಿ ಕಟ್ಟುನಿಟ್ಟು ಮಾಡಿದ್ದರು. ಅದಕ್ಕೆ ತಮ್ಮದೇ ಆಶ್ರಮದ ನಿವಾಸಿಗಳನ್ನು ಆಯ್ಕೆ ಮಾಡಿಕೊಂಡು, ಕಠಿಣ ಶಿಸ್ತಿನ ತರಬೇತಿ ನೀಡಿದ್ದರು. 24 ದಿನಗಳ ಈ ಪಾದಯಾತ್ರೆ 4 ಜಿಲ್ಲೆಗಳು ಮತ್ತು 48 ಗ್ರಾಮಗಳ ಮೂಲಕ ಸಾಗಬೇಕಿತ್ತು.

1930ರ ಮಾರ್ಚ್ 12ರಂದು ಗಾಂಧಿ ಮತ್ತು 78 ಸತ್ಯಾಗ್ರಹಿಗಳು ಸಬರಮತಿ ಆಶ್ರಮದಿಂದ ಕಾಲ್ನಡಿಗೆಯಲ್ಲಿ ದಂಡಿಯತ್ತ ಹೊರಟರು. ಭಾರತದ ಬಹುತೇಕ ಎಲ್ಲ ಪ್ರದೇಶ, ಜಾತಿ, ಧರ್ಮ ಮತ್ತು ಸಮುದಾಯಗಳನ್ನು ಪ್ರತಿನಿಧಿಸುವ ಜನರು ಈ ತಂಡದಲ್ಲಿದ್ದರು. ಗುಜರಾತ್‌ನ ನವಸಾರಿ ಜಿಲ್ಲೆಯ ಕರಾವಳಿ ಗ್ರಾಮವಾದ ದಂಡಿ, ಸಬರಮತಿ ಆಶ್ರಮದಿಂದ 385 ಕಿ.ಮೀ. ದೂರದಲ್ಲಿತ್ತು. ಬಿಳಿ ಖಾದಿ ಬಟ್ಟೆಗಳನ್ನು ಧರಿಸಿದ್ದ ಸಾವಿರಾರು ಜನ ಯಾತ್ರೆಗೆ ಸೇರುತ್ತಾ ಹೋದರು.

ಮೆರವಣಿಗೆ ದೂರದಿಂದ ನೋಡಲು ಬಿಳಿಯ ನದಿಯಂತೆ ಕಾಣುತ್ತಿತ್ತು. ಅದಕ್ಕೇ ದಂಡಿ ಯಾತ್ರೆಗೆ ‘ಬಿಳಿಯ ನದಿ’ ಎಂಬ ಹೆಸರೂ ಬಂತು. ಯಾತ್ರೆ ಸಾಗಿದ ಗ್ರಾಮಗಳಲ್ಲಿ ಸ್ವಯಂಸೇವಕರು ದೇಣಿಗೆ ಸಂಗ್ರಹಿಸುತ್ತಿದ್ದರು. ಹೊಸ ಸತ್ಯಾಗ್ರಹಿಗಳ ಹೆಸರು ನೋಂದಾಯಿಸುತ್ತಿದ್ದರು. ಬ್ರಿಟಿಷ್ ಆಡಳಿತದೊಂದಿಗೆ ಸಹಕಾರ ಕೊನೆಗೊಳಿಸಲು ನಿರ್ಧರಿಸಿದ ಗ್ರಾಮಾಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದರು.

ಪ್ರತಿ ಗ್ರಾಮಕ್ಕೆ ಯಾತ್ರಿಕರು ಪ್ರವೇಶಿಸುತ್ತಿದ್ದಂತೆ ಜನ ಅವರನ್ನು ಡೊಳ್ಳು, ತಾಳ ಮತ್ತಿತರ ವಾದ್ಯಗಳ ನಾದದೊಂದಿಗೆ ಬರಮಾಡಿಕೊಳ್ಳುತ್ತಿದ್ದರು. ಗಾಂಧೀಜಿ ತಮ್ಮ ಭಾಷಣಗಳಲ್ಲಿ ಉಪ್ಪಿನ ತೆರಿಗೆಯನ್ನು ಅಮಾನವೀಯ ಎಂದು ಟೀಕಿಸುತ್ತಿದ್ದರು. ಉಪ್ಪಿನ ಸತ್ಯಾಗ್ರಹವನ್ನು ಬಡವರ ಹೋರಾಟ ಎಂದು ಬಣ್ಣಿಸುತ್ತಿದ್ದರು. ಪ್ರತಿ ರಾತ್ರಿ ಸತ್ಯಾಗ್ರಹಿಗಳು ಬಹುತೇಕ ಹೊರಾಂಗಣದ ಮಲಗುತ್ತಿದ್ದರು. ಗ್ರಾಮಸ್ಥರಿಂದ ಅವರು ಕೇಳುತ್ತಿದ್ದದ್ದು ಆಹಾರ ಮತ್ತು ತೊಳೆಯಲು ಬೇಕಾದ ನೀರು ಮಾತ್ರ. ಬಡವರನ್ನೂ ಸ್ವರಾಜ್ಯದ, ಸ್ವಾಡಳಿತದ ಹೋರಾಟದೊಂದಿಗೆ ಬೆಸೆಯುವುದು ಅತ್ಯಂತ ಮುಖ್ಯ, ಜನಸಾಮಾನ್ಯರ ವ್ಯಾಪಕ ಭಾಗವಹಿಸುವಿಕೆಯೇ ಹೋರಾಟದ ಯಶಸ್ಸು ಎಂದು ಗಾಂಧೀಜಿ ನಂಬಿದ್ದರು. ಯಾತ್ರೆ ಮುಂದುವರಿದಂತೆ ಸಾವಿರಾರು ಸತ್ಯಾಗ್ರ ಹಿಗಳು ಮತ್ತು ನಾಯಕರು ಗಾಂಧೀಜಿಯೊಂದಿಗೆ ಸೇರಿಕೊಂಡರು.

ದಿನದಿಂದ ದಿನಕ್ಕೆ ಜನರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಒಂದು ಹಂತದಲ್ಲಿ ಮೆರವಣಿಗೆಯ ಉದ್ದವೇ ಸುಮಾರು 3 ಕಿ.ಮೀ. ಇತ್ತು. ಯಾತ್ರೆಯ ಸಂದರ್ಭದಲ್ಲಿ ಸತ್ಯಾಗ್ರಹಿಗಳ ಉತ್ಸಾಹ ಕಾಪಾಡಿಕೊಳ್ಳಲು ‘ರಘುಪತಿ ರಾಘವ ರಾಜಾರಾಮ’ ಭಜನೆ ಹಾಡುತ್ತಿದ್ದರು. ಸೂರತ್ ತಲುಪಿದಾಗ ಸುಮಾರು 30000 ಜನರು ಅವರನ್ನು ಸ್ವಾಗತಿಸಿದರು.

ದಂಡಿಯ ಸಮೀಪ ತಲುಪುವ ವೇಳೆಗೆ 50000ಕ್ಕೂ ಹೆಚ್ಚು ಜನ ಅಲ್ಲಿ ಸೇರಿದ್ದರು ಎಂದು ದಾಖಲೆಗಳು ಹೇಳುತ್ತವೆ. ಯಾತ್ರೆಯುದ್ದಕ್ಕೂ ಗಾಂಧೀಜಿ ಪತ್ರಕರ್ತರಿಗೆ ಸಂದರ್ಶನಗಳನ್ನು ನೀಡುತ್ತಿದ್ದರು ಮತ್ತು ಲೇಖನಗಳನ್ನು ಬರೆಯುತ್ತಿದ್ದರು. ವಿದೇಶಿ ಪತ್ರಕರ್ತರು ಹಾಗೂ ಬಾಂಬೆಯ ಮೂರು ಚಲನಚಿತ್ರ ಸಂಸ್ಥೆಗಳು ಈ ಐತಿಹಾಸಿಕ ಯಾತ್ರೆಯ ದೃಶ್ಯಗಳನ್ನು ಚಿತ್ರೀಕರಿಸಿದವು. ಇದರಿಂದ ಗಾಂಧೀಜಿಯ ಹೋರಾಟದ ಸುದ್ದಿ ಯುರೋಪ್ ಮತ್ತು ಅಮೆರಿಕದಲ್ಲಿಯೂ ವ್ಯಾಪಕವಾಗಿ ಹರಡಿತು.

ನ್ಯೂಯಾರ್ಕ್ ಟೈಮ್ಸ ಪತ್ರಿಕೆ ದಂಡಿ ಯಾತ್ರೆಯ ಕುರಿತು ಬಹುತೇಕ ಪ್ರತಿದಿನ ವರದಿ ಮಾಡಿತು. ಯಾತ್ರೆಯ ಕುರಿತು ಮುಖಪುಟದ ವರದಿಗಳೂ ಪ್ರಕಟವಾದವು. ಸಮುದ್ರತೀರದಲ್ಲಿ ಉಪ್ಪಿನಿಂದ ಕೂಡಿದ ಕೆಸರು ಕೈಗೆತ್ತಿಕೊಂಡು ‘ಇದರೊಂದಿಗೆ ನಾನು ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ನಡುಗಿಸುತ್ತಿದ್ದೇನೆ’ ಎಂದು ಘೋಷಿಸುವಾಗ ಆ ಬಡಕಲು ಶರೀರದ ಮನುಷ್ಯನಲ್ಲಿ ಎಂಥ ದೃಢತೆ, ಕೆಚ್ಚು ಇದ್ದಿರಬೇಡ!

ಸಾಮಾನ್ಯವಾಗಿ ನಿರ್ಜನ, ಅತ್ಯಂತ ಸರಳವಾದ ಮೀನುಗಾರರ ಗ್ರಾಮವಾಗಿದ್ದ ದಂಡಿ ಆ ವೇಳೆಗೆ ಸಂಪೂರ್ಣ ಬದಲಾಗಿತ್ತು. ಕಣ್ಣಿಗೆ ಕಾಣುವಷ್ಟು ದೂರವೂ ಸತ್ಯಾಗ್ರಹಿಗಳು ಮತ್ತು ಯಾತ್ರಿಕರಿಂದ ತುಂಬಿತ್ತು. ಮುಂದೆ ದೇಶಾದ್ಯಂತ ಉಪ್ಪಿನ ಸತ್ಯಾಗ್ರಹ ವ್ಯಾಪಿಸಿದ್ದು ಇತಿಹಾಸ. ಈ ಇತಿಹಾಸದ ಹಿಂದೆ ಇದ್ದದ್ದು ಒಂದು ವಾಕಿಂಗ್. ಸಣಕಲು ಮನುಷ್ಯನೊಬ್ಬನ ಸಾತ್ವಿಕ, ತಾತ್ವಿಕ, ದೃಢ ನಿಲುಮೆಯ ನಡಿಗೆ.