Vinayak M Bhat Column : ಮರುನಾಮಕರಣಕ್ಕೆ ಕನ್ನಡದ ಪದವೇಕೆ ದೊರಕಲಿಲ್ಲ ?
ಕರ್ನಾಟಕ ಎಂಬ ಹೆಸರನ್ನು ಭಾರತದಾದ್ಯಂತ ಅತ್ಯಂತ ಜನಪ್ರಿಯಗೊಳಿಸಿದ ಮತ್ತು ಅದಕ್ಕೆ ಸೈನಿಕ ಶಕ್ತಿಯ ಗೌರವ ತಂದುಕೊಟ್ಟ ಕೀರ್ತಿ ಬಾದಾಮಿ ಚಾಲುಕ್ಯರಿಗೆ ಸಲ್ಲುತ್ತದೆ. ಚಾಲುಕ್ಯರ ಸೈನ್ಯವನ್ನು ರಾಷ್ಟ್ರಕೂಟ ಹಾಗೂ ಪಲ್ಲವ ರಾಜರ ಶಾಸನಗಳಲ್ಲಿ ‘ಕರ್ಣಾಟ ಬಲ’ ಎಂದೇ ಕರೆಯಲಾಗಿದೆ.
-
ವಿದ್ಯಮಾನ
ತಮಿಳುನಾಡು ಅಂದರೆ, ತಮಿಳು ಭಾಷಿಕರು ವಾಸಿಸುವ ಪ್ರದೇಶ, ಉತ್ತರಪ್ರದೇಶ, ದೇಶದ ಉತ್ತರ ಭಾಗದಲ್ಲಿರುವ ಪ್ರದೇಶ, ಮಧ್ಯಪ್ರದೇಶ, ದೇಶದ ಮಧ್ಯಭಾಗದಲ್ಲಿರುವ ಪ್ರದೇಶ, ಗೋದಾವರಿ ಹಾಗೂ ಕೃಷ್ಣಾ ನದಿಗಳ ನಡುವೆ ವಾಸಿಸುತ್ತಿದ್ದ ಶಕ್ತಿಶಾಲಿ ಬುಡಕಟ್ಟು ಜನಾಂಗವನ್ನು ‘ಆಂಧ್ರರು’ ಎಂದು ಉಲ್ಲೇ ಖಿಸಲಾಗಿದೆ. ಹಾಗಾಗಿ ಆಂಧ್ರರು ವಾಸಿಸುವ ಪ್ರದೇಶ ಆಂಧ್ರಪ್ರದೇಶ.
ಹೀಗೆ ನಮ್ಮ ದೇಶದ ಬಹುತೇಕ ರಾಜ್ಯಗಳ ಹೆಸರುಗಳಿಗೆ ಒಂದು ಸರಳವಾದ ನಂಟನ್ನು ಗುರುತಿಸಲು ಸಾಧ್ಯವಿದೆ. ಆದರೆ ನಮ್ಮ ರಾಜ್ಯದ ಹೆಸರು ಮಾತ್ರ ಬಹಳ ಭಿನ್ನವಾಗಿದೆ ಅಂತ ನನಗಂತೂ ಅನಿಸುತ್ತೆ. ಕರುನಾಡು, ಕನ್ನಡಿಗರಬೀಡು, ಹೊನ್ನಿನನಾಡು, ಗಂಧದಬೀಡು ಅಥವಾ ಇನ್ನೂ ಸರಳವಾಗಿ ಕನ್ನಡನಾಡು ಮುಂತಾಗಿ ಇಲ್ಲಿಯ ಜನ ಆಡುವ ಭಾಷೆಯ ಆಧಾರವನ್ನಿಟ್ಟು ಕೊಂಡು, ಇಲ್ಲಿಯ ಬಂಗಾರದ ಗಣಿ, ಶ್ರೀಗಂಧದ ಕಾಡುಗಳು ಹೀಗೆ ನಾಡಿನ ಹೆಗ್ಗರುತುಗಳ ಸ್ಮರಣಭೂಯಿಷ್ಠವಾಗಿ ರಾಜ್ಯಕ್ಕೆ ನಾಮಕರಣ ಮಾಡಬಹುದಿತ್ತು. ಅದೆಲ್ಲ ಬಿಟ್ಟು ‘ಕರ್ನಾಟಕ’ ಅಂತ ಇಟ್ಟುಬಿಟ್ರಲ್ಲ!
ಅದು ಯಾಕೆ? ಕರ್ನಾಟಕ ಎನ್ನುವ ಪದದ ಅರ್ಥವೇನು? ಅದರ ಮೂಲ ಯಾವುದು ಎನ್ನುವ ಕುತೂಹಲ ಬಹಳದಿನಗಳಿಂದ ಇದೆ. ಐತಿಹಾಸಿಕ ಶಾಸನಗಳು ಮತ್ತು ಪ್ರಾಚೀನ ಸಾಹಿತ್ಯಗಳನ್ನು ಅವಲೋಕಿಸಿದಾಗ, ‘ಕರ್ನಾಟಕ’ ಎಂಬ ಹೆಸರನ್ನು ಈ ಭೂಭಾಗವನ್ನು ಆಳಿದ ರಾಜವಂಶಗಳು ಬಳಸಿಕೊಂಡಿರುವುದು ನಮಗೆ ತಿಳಿದು ಬರುತ್ತೆ. ಕನ್ನಡದ ಮೊದಲ ರಾಜವಂಶವಾದ ಕದಂಬರ ರಾಜ ವಿಷ್ಣುವರ್ಮನ ಕಾಲದ ಬೀರೂರು ಶಾಸನದಲ್ಲಿ, ತನ್ನ ತಂದೆ ಶಂತಿವರ್ಮನನ್ನು ‘ಸಮಗ್ರ ಕರ್ನಾಟಕ ಭೂಮಂಡಲದ ಒಡೆಯ’ ಎಂದು ವರ್ಣಿಸಲಾಗಿದೆ. ಇದು ಈ ಪ್ರದೇಶಕ್ಕೆ ಕರ್ನಾಟಕ ಎಂದು ಬಳಸಿದ ಅತ್ಯಂತ ಹಳೆಯ ಶಾಸನಾಧಾರವಾಗಿದೆ.
ಕರ್ನಾಟಕ ಎಂಬ ಹೆಸರನ್ನು ಭಾರತದಾದ್ಯಂತ ಅತ್ಯಂತ ಜನಪ್ರಿಯಗೊಳಿಸಿದ ಮತ್ತು ಅದಕ್ಕೆ ಸೈನಿಕ ಶಕ್ತಿಯ ಗೌರವ ತಂದುಕೊಟ್ಟ ಕೀರ್ತಿ ಬಾದಾಮಿ ಚಾಲುಕ್ಯರಿಗೆ ಸಲ್ಲುತ್ತದೆ. ಚಾಲುಕ್ಯರ ಸೈನ್ಯವನ್ನು ರಾಷ್ಟ್ರಕೂಟ ಹಾಗೂ ಪಲ್ಲವ ರಾಜರ ಶಾಸನಗಳಲ್ಲಿ ‘ಕರ್ಣಾಟ ಬಲ’ ಎಂದೇ ಕರೆಯಲಾಗಿದೆ.
ಇದನ್ನೂ ಓದಿ: Vinayaka M Bhat Column: ಬಿಜೆಪಿ ಭೀಷ್ಮ ಪಿತಾಮಹನ ಸಾರ್ಥಕ ಶತಾಯುಷ್ಯ
ಚಾಲುಕ್ಯರು ತಮ್ಮನ್ನು ತಾವು ಹೆಮ್ಮೆಯಿಂದ ‘ಕರ್ಣಾಟರು’ ಎಂದು ಕರೆದುಕೊಳ್ಳುತ್ತಿದ್ದರಂತೆ. ನಾವು ಯಾವುದನ್ನು ‘ವಿಜಯನಗರ ಸಾಮ್ರಾಜ್ಯ’ ಎಂದು ಕರೆಯುತ್ತೇವೆಯೋ, ಆ ಕಾಲದ ಶಾಸನಗಳಲ್ಲಿ ಅದರ ಅಧಿಕೃತ ಹೆಸರು ‘ಕರ್ನಾಟಕ ಸಾಮ್ರಾಜ್ಯ’ ಎಂದೇ ಇತ್ತು. ಹರಿಹರ ಮತ್ತು ಬುಕ್ಕರಾಯರು ಸ್ಥಾಪಿಸಿದ ಈ ಸಾಮ್ರಾಜ್ಯದ ಶಾಸನಗಳಲ್ಲಿ ರಾಜರನ್ನು ‘ಕರ್ನಾಟಕ ಸಿಂಹಾಸನಾ ಧೀಶ್ವರ’ ಎಂದು ಘೋಷಿಸಿಕೊಳ್ಳಲಾಗಿತ್ತು.
ಹಾಗಾದರೆ ಈ ರಾಜರಿಗಿಂತ ಮೊದಲು ಯಾರೂ ಈ ಭೂಪ್ರದೇಶವನ್ನು ಕರ್ನಾಟಕ ಅಂತ ಗುರುತಿಸಿರಲಿಲ್ವಾ? ಇ ಅಂತ ಹೇಳಿದರೆ ತಪ್ಪಾಗುತ್ತೆ. ಶ್ರೀಮದ್ ಭಾಗವತದ ಮಹಾಪುರಾಣದ ಆರಂಭದಲ್ಲಿ ಒಂದು ಸ್ವಾರಸ್ಯಕರ ಕಥೆ ಬರುತ್ತೆ, ದ್ವಾಪರಯುಗ ಮುಗಿದು ಕಲಿಯುಗ ಆರಂಭ ವಾದಾಗ ಭೂಮಿಯ ಮೇಲೆ ಅಧರ್ಮ ತಲೆ ಎತ್ತಲು ಪ್ರಾರಂಭ ವಾಗಿತ್ತು, ಆ ಸಂದರ್ಭದಲ್ಲಿ ಒಮ್ಮೆ ನಾರದ ಮಹರ್ಷಿಗಳು ಯಮುನಾ ತೀರದಲ್ಲಿ ಸಂಚರಿಸುವಾಗ ಒಬ್ಬ ಸುಂದರ ಯುವತಿ ಯೋರ್ವಳು ತನ್ನ ಪಕ್ಕದಲ್ಲಿ ಮಲಗಿದ್ದ ಇಬ್ಬರು ವೃದ್ಧರನ್ನು ಎಬ್ಬಿಸಲು ವ್ಯರ್ಥಪ್ರಯತ್ನ ಮಾಡುತ್ತಾ ದುಃಖದಿಂದ ರೋದಿಸುತ್ತಿರುವುದನ್ನು ಕಾಣುತ್ತಾರೆ.
ಆಕೆಯ ದುಃಖಕ್ಕೆ ಕಾರಣವೇನೆಂದು ನಾರದರು ವಿಚಾರಿಸಿದಾಗ, ಆ ಯುವತಿ ತನ್ನ ಹೆಸರು ‘ಭಕ್ತಿ’ ಎಂದೂ, ಚಿಕ್ಕ ವಯಸ್ಸಿನ ಏಳಲಾರದಷ್ಟು ವೃದ್ಧರಾಗಿರುವ ತನ್ನ ಮಕ್ಕಳಾದ ‘ಜ್ಞಾನ’ ಮತ್ತು ‘ವೈರಾಗ್ಯ’ ಎಂದೂ ಪರಿಚಯಿಸಿಕೊಳ್ಳುತ್ತಾ ತನ್ನ ಕಥೆಯನ್ನು ವಿವರಿಸುತ್ತಾಳೆ, ‘ಉತ್ಪನ್ನಾ ದ್ರಾವಿಡೇ ಸಾಹಂ ವೃದ್ಧಿಂ ಕರ್ಣಾಟಕೇ ಗತಾ, ಕ್ವಚಿತ್ ಕ್ವಚಿನ್ಮಹಾರಾಷ್ಟ್ರೇ ಗುರ್ಜರೇ ಜೀರ್ಣತಾಂ ಗತ’ ನಾನು ದ್ರಾವಿಡ ದೇಶದಲ್ಲಿ ಜನಿಸಿದೆ, ಕರ್ನಾಟಕದಲ್ಲಿ ಪ್ರವರ್ಧಮಾನಕ್ಕೆ ಬಂದೆ ಎಂದು ಭಕ್ತಿ ದೇವಿ ಹೆಮ್ಮೆಯಿಂದ ಹೇಳುತ್ತಾಳೆ.
ನಂತರ ಮಹಾರಾಷ್ಟ್ರದಲ್ಲಿ ಅಲ್ಲಲ್ಲಿ ಗೌರವಿಸಲ್ಪಟ್ಟು ಗುಜರಾತ್ ತಲುಪುವಷ್ಟರಲ್ಲಿ ಕಲಿಯುಗದ ಪ್ರಭಾವದಿಂದ ಅಕಾಲವೃದ್ಧಾಪ್ಯ ಪ್ರಾಪ್ತಿಯಾಯಿತು ಎಂದು ಆಕೆ ತನ್ನ ಜೀವನ ಪಯಣವನ್ನು ವಿವರಿಸುತ್ತಾಳೆ. ಭಕ್ತಿ ಚಳವಳಿಗೆ ತಾತ್ವಿಕ, ಸಾಮಾಜಿಕ ಮತ್ತು ಸಾಹಿತ್ಯಿಕ ಶಕ್ತಿ ತುಂಬಿ, ಅದನ್ನು ದೇಶದಾದ್ಯಂತ ಪಸರಿಸಿದ್ದ ಕರ್ನಾಟಕದಲ್ಲಿ ಬೆಳೆದೆ ಅಂತ ಭಕ್ತಿ ಕನ್ನಿಕೆಯ ಮುಖದಿಂದ ಭಗವಾನ ವೇದವ್ಯಾಸರು ಹೇಳಿಸಿರುವುದನ್ನು ಕೇಳುವಾಗ ನಮಗೆ ಸಂತೋಷವಾಗುತ್ತೆ, ಅಷ್ಟೇ ಅಲ್ಲದೇ, ಈ ಭೂಭಾಗಕ್ಕೆ ಶ್ರೀಮದ್ ಭಾಗವತದ ಕಾಲದಿಂದಲೂ ಕರ್ನಾಟಕ ಅಂತ ಹೆಸರಿತ್ತು ಎನ್ನುವುದೂ ನಮಗೆ ತಿಳಿದು ಬರುತ್ತೆ. ಭಾಗವತದ ಕಾಲಕ್ಕೂ ಹಿಂದೆ ಮಹಾಭಾರತ ಕಾಲದಲ್ಲಿಯೂ ಈ ಭೂ ಪ್ರದೇಶವನ್ನು ಕರ್ನಾಟಕ ಎಂದೇ ಗುರುತಿಸಲಾಗಿತ್ತಂತೆ.
ಹಾಗಾಗಿ, ನಮ್ಮ ರಾಜ್ಯಕ್ಕೆ ಕರ್ನಾಟಕ ಎನ್ನುವ ಹೆಸರು ಪುನರ್ನಾಮಕರಣ ಮಾಡುವಾಗ ಸಂಶೋಧಿಸಿ ಇಟ್ಟ ಹೊಸ ಹೆಸರಲ್ಲ, ಪ್ರಾಚೀನ ಕಾಲದಿಂದಲೇ ಈ ಪ್ರದೇಶಕ್ಕೆ ಇದ್ದ ಹೆಸರನ್ನು ಆಯ್ಕೆಮಾಡಲಾಗಿತ್ತು ಎನ್ನುವುದು ಅರ್ಥವಾಗುತ್ತದೆ. ಆದರೆ, ಕರ್ನಾಟಕ ಅಂದರೆ ಏನು? ಆ ಪದದ ವ್ಯುತ್ಪತ್ತಿ ಹೇಗೆ? ಕರ್ನಾಟಕದೊಳಗೆ ಅಡಕವಾಗಿರುವ ‘ನಾಟಕಕ್ಕೆ’ ಏನು ಅರ್ಥ ಎನ್ನುವುದು ಮಾತ್ರ ತಿಳಿಯುತ್ತಿಲ್ಲ.
ಪಕ್ಕದ ತಮಿಳುನಾಡಿನಂತೆ ಭಾಷೆಗೆ ಪ್ರಾಧಾನ್ಯತೆ ನೀಡಿ ನಮ್ಮ ರಾಜ್ಯಕ್ಕೂ ಕನ್ನಡನಾಡು ಅಂತ ನಾಮಕರಣ ಮಾಡಬಹುದಿತ್ತು. ಅದು ಕೇಳಲೂ ಚಂದವಾಗೇ ಇರುತ್ತಿತ್ತು. ಸಂಸ್ಕೃತದ ಕರ್ನಾಟಕ ಎಂಬ ಹೆಸರನ್ನೇ 1973ರಲ್ಲಿ ಮರುನಾಮಕರಣಕ್ಕೆ ಸರಕಾರ ಬಳಸಿರುವುದು ಏಕೆ ಎನ್ನುವುದು ಮಾತ್ರ ತಿಳಿಯುತ್ತಿಲ್ಲ. ‘ಕರುನಾಡು’ ಎನ್ನುವ ಕನ್ನಡ ಪದವೇ ಮುಂದೆ ಸಂಸ್ಕೃತೀಕರಣವಾಗುವಾಗ ‘ಕರ್ನಾಟ’ ಅಥವಾ ಕರ್ಣಾಟಕ’ ಎಂಬ ರೂಪಗಳನ್ನು ಪಡೆಯಿತು ಎಂದು ಕೆಲವು ಭಾಷಾತಜ್ಞರು ಅಭಿಪ್ರಾಯಪಡುತ್ತಾರೆ.
‘ಕರು’ ಎಂದರೆ ಎತ್ತರ ಅಥವಾ ಶ್ರೇಷ್ಠವಾದದ್ದು, ಕಪ್ಪಗಿರುವುದು ಹಾಗೂ ಉತ್ತಮ ಕಂಪಿನಿಂದ ಕೂಡಿದ್ದು ಎನ್ನುವ ಅರ್ಥವಿದೆಯಂತೆ. ‘ನಾಡು’ ಎಂದರೆ ಪ್ರದೇಶ ಎಂಬ ಅರ್ಥದಲ್ಲಿ ಇದನ್ನು ‘ಎತ್ತರದ ನಾಡು’ ಎಂದೂ, ಉತ್ತರ ಮತ್ತು ಮಧ್ಯ ಕರ್ನಾಟಕದ ಬಯಲುಸೀಮೆ ಪ್ರದೇಶಗಳಲ್ಲಿ ಕಂಡುಬರುವ ಕಪ್ಪುಮಣ್ಣಿನಿಂದಾಗಿ ಈ ಹೆಸರು ಬಂದಿದೆ ಎಂದು ಕೆಲವು ವಿದ್ವಾಂಸರು ವ್ಯಾಖ್ಯಾನಿಸಿದ್ದಾರೆ.
ಕರು ಎನ್ನುವುದು ಕನ್ನಡದಲ್ಲಿ ಮರಿ, ಮಗು ಎನ್ನುವ ಅರ್ಥವನ್ನು ಸಾಮಾನ್ಯವಾಗಿ ಕೊಡುತ್ತದೆ ಉದಾಹರಣೆಗೆ, ಆಕಳ ಕರು ಎಮ್ಮೆಕರು ಇತ್ಯಾದಿ. ‘ಕನ್ನಡ ಗೋವಿನ ಓ ಮುದ್ದಿನ ಕರು’ ಎಂದು ಕುವೆಂಪು ಅವರೂ ಇದೇ ಅರ್ಥದಲ್ಲಿ ‘ಕರು’ ಎನ್ನುವ ಪದ ಬಳಕೆ ಮಾಡಿದ್ದಾರೆ. ಸರಿ, ಕರುವನ್ನು ಒಪ್ಪಿಕೊಳ್ಳೋಣ, ನಾಟಕವೆಲ್ಲಿಂದ ಬಂತು ಎನ್ನುವ ಪ್ರಶ್ನೆ ಹಾಗೆ ಉಳಿದೇ ಹೋಯಿತಲ್ಲ. ಸಾಮಾನ್ಯವಾಗಿ ‘ನಾಟಕವನ್ನು’ ನಾವು ರಂಗಪ್ರಕ್ರಿಯೆಗೆ ಸಮೀಕರಿಸುತ್ತೇವೆ. ಆದರೆ ಕರ್ನಾಟಕ ಎಂಬ ಹೆಸರಿನಲ್ಲಿರುವ ‘ನಾಟಕ’ ಪದಕ್ಕೂ ರಂಗಭೂಮಿಗೂ ಯಾವುದೇ ಸಂಬಂಧವಿಲ್ಲ, ಇದು ಕೇವಲ ಭಾಷಾಂತರ ಮತ್ತು ವ್ಯಾಕರಣದ ಪ್ರಕ್ರಿಯೆಯಿಂದಾಗಿ ರೂಪುಗೊಂಡಿರುವ ಶಬ್ದವಾಗಿದೆಯಂತೆ.
ಮೂಲ ದ್ರಾವಿಡ ಭಾಷೆಯ ‘ನಾಡು’ ಎಂಬ ಪದವನ್ನು ಸಂಸ್ಕೃತಕ್ಕೆ ತರುವಾಗ ಅದು ವ್ಯಾಕರಣ ನಿಯಮಗಳ ಪ್ರಕಾರ ‘ನಾಟ’ ಅಥವಾ ‘ನಾಟಕ್’ ಎಂದು ರೂಪಾಂತರಗೊಂಡಿತು. ಅಂದರೆ, ಕರು+ನಾಡು ಎನ್ನುವುದು ಸಂಸ್ಕೃತದಲ್ಲಿ ‘ಕರ್ಣಾ-ಟ’ ಅಥವಾ ‘ಕರ್ಣಾ-ಟಕ’ ಎಂದಾಯಿತು. ಇಲ್ಲಿ ‘ಟಕ’ ಅಥವಾ ‘ನಾಟ’ ಎಂದರೆ ದೇಶ, ಭೂಮಿ ಅಥವಾ ಪ್ರಾಂತ್ಯ ಎಂದಷ್ಟೇ ಭಾವಿಸಬೇಕು ಎನ್ನುವುದು ತಜ್ಞರ ನಿರೀಕ್ಷೆ.
ಪ್ರಾಚೀನ ಕಾಲದಲ್ಲಿ ಕನ್ನಡಿಗರನ್ನು ಮತ್ತು ಕನ್ನಡ ಭಾಷೆಯನ್ನು ತಮಿಳರು ‘ಕರುನಾಟರ’ ಎಂದು ಕರೆಯುತ್ತಿದ್ದರು, ಇದನ್ನು ಸಂಸ್ಕೃತದ ಕವಿಗಳು ತಮ್ಮ ಗ್ರಂಥಗಳಲ್ಲಿ ಬಳಸುವಾಗ ‘ಕರ್ಣಾಟ’ ಎಂದು ಬರೆದರು ಹಾಗೂ ಆ ಪದಕ್ಕೆ ಪೂರ್ಣತೆಯನ್ನು ನೀಡಲು ಕೊನೆಯಲ್ಲಿ ‘ಕ’ ಪ್ರತ್ಯಯವನ್ನು ಸೇರಿಸಿ ‘ಕರ್ನಾಟಕ’ವಾಗಿಸಿದರು ಎಂದು ಹೇಳುವರಿದ್ದಾರೆ. ಪ್ರಾಚೀನ ದ್ರಾವಿಡ ಬುಡಕಟ್ಟಿನ ‘ಕಳವರು’ ಎಂಬ ಜನಾಂಗವೇ ಮುಂದೆ ‘ಕಣ್ಣರು’ ಅಥವಾ ‘ಕನ್ನರು’ ಎನಿಸಿಕೊಂಡಿತು.
ಕನ್ನರು ವಾಸಿಸುತ್ತಿದ್ದ ನಾಡು ‘ಕನ್ನಾಡು’ ಆಗಿ, ಅದು ‘ಕನ್ನಡ’ ಮತ್ತು ಸಂಸ್ಕೃತದಲ್ಲಿ ‘ಕರ್ಣಾಟ’ ಆಯಿತು ಎಂದು ಕೆಲವು ಸಂಶೋಧಕರು ಪ್ರತಿಪಾದಿಸುತ್ತಾರೆ. ಈ ಪ್ರದೇಶದಲ್ಲಿ ಪ್ರಾಚೀನ ಕಾಲದಲ್ಲಿ ವಾಸಿಸುತ್ತಿದ್ದ ‘ಕರ್ಣ’ ಮತ್ತು ‘ನಾಟ’ ಎಂಬ ಎರಡು ಬುಡಕಟ್ಟು ಜನಾಂಗಗಳ ಹೆಸರುಗಳು ಒಂದಾಗಿ ‘ಕರ್ನಾಟ’ ಎಂಬ ಹೆಸರು ಬಂದಿರಬಹುದು ಎಂಬ ವಾದವೂ ಇದೆ. ಕರ್ಣಾಟ(ಕ) ಎಂಬ ಪದಕ್ಕೆ ಸಂಸ್ಕೃತ ಮೂಲವಾಗಿ ನಿಷ್ಪತ್ತಿಯನ್ನು ಕೊಡುವುದಾದರೆ ‘ಕರ್ಣೇಷು ಅಟತಿ- ಪ್ರಭೂತ ಯಶಸ್ವಿನಃ ಏತದ್ದೇಶಸ್ಯ ರಾಜ್ಞೆ ಗುಣಾದಿ ಕೀರ್ತನೇನ ಸರ್ವೇಷಾಂ ಕರ್ಣೇಷು ಭ್ರಮತೀತಿ’ ಯಾವ ದೇಶದ ರಾಜನ ಕೀರ್ತಿ ಎಲ್ಲರ ಕಿವಿಯಲ್ಲಿಯೂ ಮೊಳಗುತ್ತಿರುವುದೊ, ಆ ದೇಶ ಇದು ಎಂದು ಶಬ್ದರತ್ನಾವಲಿಯಲ್ಲಿ ಹೇಳಲಾಗಿದೆಯಂತೆ.
ಜೈನ ಪಂಡಿತನೊಬ್ಬನ ಪ್ರಕಾರ ಭೇದನಾರ್ಥಕವಾದ ಕರ್ಣ ಧಾತುವಿನಿಂದ ಕರ್ಣಾಟ ಪದವಾಯಿತು. ‘ಕರ್ಣಾಟ ದೇಶೋ ಯಃ ಪುರ್ವಂ ಕರ್ಣದೇಶಮಭೂಷಯಾತ್ ಸ ಏಷ ಸಾಂಪ್ರತಂ ಪಶ್ಯ ಚಕ್ಷುಷೋರ್ಭೂಷಣಾಯತೇ’ ಎಂದೂ ‘ಕರ್ಣಯೋಃ ಅಟತೀತಿ ಕರ್ಣಾಟಃ ಅಟ ಗತೌ ಇತಿಧಾತೋಃ ನಿಷ್ಪನ್ನಶ್ಯಬ್ದಃ’ ಎಂದೂ ಕೆಲವುಕಡೆಗಳಲ್ಲಿ ನಿರೂಪಣೆಯಿದೆ. ಸ್ಕಂದಪುರಾಣದ ಪ್ರಕಾರ ಕರ್ಣಾಟನೆಂಬ ರಾಕ್ಷಸನಿಂದ ನಾಡಿಗೆ ಈ ಹೆಸರಾಯಿತಂತೆ.
ಸಾಮಾನ್ಯರಾದ ನಮಗೆ ಈ ಎಲ್ಲ ಸ್ಪಷ್ಟೀಕರಣಗಳು ಬಾದರಾಯಣ ಸಂಬಂಧದಂತೆ ತೋರುತ್ತದೆ ಬಿಟ್ಟರೆ ಪೂರ್ತಿ ಸಮಾಧಾನ ಕೊಡುವುದಿಲ್ಲ. 1956ರಲ್ಲಿ ಏಕೀಕರಣವಾದರೂ ರಾಜ್ಯಕ್ಕೆ ‘ಮೈಸೂರು ರಾಜ್ಯ’ ಎಂಬ ಹೆಸರನ್ನೇ ಉಳಿಸಿಕೊಳ್ಳಲಾಗಿತ್ತು. ಇದು ಹಳೆಯ ಮೈಸೂರು ಸಂಸ್ಥಾನಕ್ಕೆ ಮಾತ್ರ ಸೀಮಿತವಾದ ಹೆಸರಾಗಿದೆ ಎಂದು ಉತ್ತರ ಕರ್ನಾಟಕ ಭಾಗದ ಜನರು ಹಾಗೂ ಸಾಹಿತಿಗಳು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು. ಆದ್ದರಿಂದ ಮರುನಾಮಕರಣದ ಕೂಗು ಶುರುವಾಗಿತ್ತು.
ಪ್ರಾಚೀನ ಇತಿಹಾಸ ಹೊಂದಿರುವ ‘ಕರ್ನಾಟಕ’ ಎಂಬ ಹೆಸರನ್ನೇ ಇಡಬೇಕೆಂದು ಅನೇಕ ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರು ವರಾತ ಮಾಡುತ್ತಲೇ ಇದ್ದರು.
1972ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ, ರಾಜ್ಯದ ಹೆಸರನ್ನು ಬದಲಾಯಿಸುವ ಐತಿಹಾಸಿಕ ನಿರ್ಣಯವನ್ನು ವಿಧಾನಮಂಡಲದಲ್ಲಿ ಮಂಡಿಸಿದರು. ನಂತರ ಕೇಂದ್ರ ಸರ್ಕಾರವು ‘ಮೈಸೂರು ರಾಜ್ಯ (ಹೆಸರು ಬದಲಾವಣೆ) ಕಾಯ್ದೆ, 1973’ ಅನ್ನು ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರ ನೀಡಿತು. ಆದರೆ, 1890ರ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆಯಾಗಿರುವುದು, 1912ರಲ್ಲಿ ಕರ್ನಾಟಕ ಗತವೈಭವ ಕೃತಿ ರಚನೆಯಾಗಿರುವುದನ್ನು ನೋಡುವಾಗ, 1973ಕ್ಕಿಂತಲೂ ಬಹಳ ಮೊದಲೇ ಕರ್ನಾಟಕ ಎನ್ನುವ ಪದ ಬಳಕೆಯಲ್ಲಿತ್ತು, ಅನೇಕ ಸಾಹಿತಿಗಳು ಕರ್ನಾಟಕವನ್ನು ಆಗಲೇ ಮನಸಾರೆ ಒಪ್ಪಿಕೊಂಡು ಬಿಟ್ಟಿದ್ದರು ಎನ್ನುವುದು ತಿಳಿದು ಬರುತ್ತೆ.
ಕನ್ನಡನಾಡಿನಲ್ಲಿ ನಾಟಕ ಸೇರಿಕೊಂಡಂತೆ, ಕನ್ನಡ ಕನ್ನಡಿಯಾದ ಬಗೆಯನ್ನು ಸ್ವಲ್ಪ ನೋಡೋಣ, ಸಾಮಾನ್ಯವಾಗಿ ಕನ್ನಡ ಮಾತನಾಡುವವರನ್ನು, ಕರ್ನಾಟಕದಲ್ಲಿ ವಾಸಿಸುವವ ರನ್ನು ಕನ್ನಡಿಗರು ಎನ್ನುವ ರೂಢಿಯಿದೆ ತಾನೆ? ಹಾಗೆ ಕನ್ನಡ ನಾಡಿನ ಜನರು ಕನ್ನಡಿ+ಗರು ಆದದ್ದು ಹೇಗೆ ಎಂದು ನೋಡಬೇಕಲ್ಲ! ಕನ್ನಡದವನು ಎಂದು ಸರಳವಾಗಿ ಕರೆಯಬಹುದಿತ್ತು, ಕನ್ನಡಭಾಷಿಕ ಎಂದು ಕರೆಯಬಹುದಿತ್ತು.
ಹಾಗಾಗದೇ ಕನ್ನಡಿಗ ಎಂದು ಕರೆಯಲ್ಪಟ್ಟಿತು. ಭಟ್ಟರ ಮನೆಯೊಡತಿ ಭಡ್ತಿ’, ಹೆಗಡೆಯವರ ಮನೆಯೊಡತಿ ಹೆಗಡ್ತಿ’, ಗೌಡರ ಮನೆಯೊಡತಿ ಗೌಡ್ತಿ’ ಅಂತ ಮಾಡಿದ ಮೇಲೆ, ಕುಲಕರ್ಣಿ, ಪಾಟೀಲ, ಜೋಯಿಸ ಹಾಗೂ ಉಪಾದ್ಯ ಮುಂತಾದವರ ಮನೆಯೊಡತಿಯರಿಗೆ ಏನಂತ ಕರೆಯೋದು? ಅದೇ ರೀತಿ, ಕನ್ನಡ ಮಾತನಾಡುವವರನ್ನು ಕನ್ನಡಕ್ಕೆ ‘ಇಗ’ ಪ್ರತ್ಯಯವನ್ನು ಸೇರಿಸಿ ಕನ್ನಡಿಗ ಅಂತ ಗುರುತಿಸಿದ ಮೇಲೆ ಅದೇ ನ್ಯಾಯವನ್ನು ಅನ್ಯಭಾಷಿಕರಿಗೆ ಬಳಸಿದರೆ ಹೇಗಿರುತ್ತೆ? ತಮಿಳಿಗ, ಮರಾಠಿಗ, ಹಿಂದಿಗ, ಕೊಂಕಣಿಗ ಅಥವಾ ತೆಲುಗಿಗ ಅಂತ ಮಾಡಿದರೆ ಸರಿಯಾದೀತಾ? ಅಥವಾ ಒಂದು ಪ್ರದೇಶದವರು ಎನ್ನುವುದನ್ನು ತೋರಿಸಲು ‘ಇಯ’ ಪ್ರತ್ಯಯವನ್ನು ಬಳಸುವ ಪದ್ಧತಿ ಇದ್ದೇ ಇದೆಯಲ್ಲ, ಉದಾಹರಣೆಗೆ ಭಾರತದಲ್ಲಿ ವಾಸಿಸುವವನನ್ನು ಭಾರತೀಯ ಎಂದಂತೆ, ಕರ್ನಟಕದಲ್ಲಿ ವಾಸಿಸುವವನಿಗೆ ಭಾಷೆಯ ಕಾರಣದಿಂದ ‘ಕನ್ನಡಿಗ’ ಎನ್ನುವುದರ ಬದಲಿಗೆ ಪ್ರದೇಶದ ಆಧಾರದಲ್ಲಿ ‘ಕರ್ನಾಟಕೀಯ’ ಅಂತ ಬಳಸಬಹುದಾ? ಅಂತ ಕೇಳಿದರೆ, ವ್ಯಾಕರಣದ ರೀತ್ಯಾ ತಪ್ಪೇನಾಗುವುದಿಲ್ಲ ಎನ್ನುತ್ತಾರೆ ತಜ್ಞರು.
ಇರಲಿ, ಮರಳಿ ‘ಕರ್ನಾಟಕ’ದತ್ತ ಬರೋಣ. ರಾಜ್ಯದ ಹೆಸರು ಬದಲಾವಣೆ ಮಾಡುವ ಕಾಲಕ್ಕೆ, ‘ಕರ್ನಾಟಕ’ ದ ಜೊತೆಗೆ ಬೇರೆ ಯಾವುದಾದರೂ ಹೆಸರುಗಳ ಪ್ರಸ್ತಾಪವಿತ್ತಾ ಅಂತ ಕೇಳಿದರೆ, ‘ಮೈಸೂರು ಕರ್ನಾಟಕ’, ‘ಕನ್ನಡ ನಾಡು’ ಮತ್ತು ‘ವಿಶಾಲ ಮೈಸೂರು’ ಎಂಬ ಪ್ರಸ್ತಾಪಗಳೂ ಇದ್ದವಂತೆ. ಆದರೆ ಈ ಹೆಸರುಗಳಿಗೆ ಹೆಚ್ಚಿನ ಬೆಂಬಲ ಸಿಗಲಿಲ್ಲವಂತೆ. ಭಾಷಾವಾರು ಪ್ರಾಂತ್ಯವಾದ ಕಾರಣ ರಾಜ್ಯಕ್ಕೆ ಅಪ್ಪಟ ಕನ್ನಡದ ‘ಕನ್ನಡ ನಾಡು’ ಎಂಬ ಹೆಸರನ್ನೇ ಇಡಬೇಕೆನ್ನುವ ಪ್ರಸ್ತಾಪಕ್ಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇವಲ 9 ಮತಗಳು ಮಾತ್ರ ಸಿಕ್ಕಿದ್ದವು ಎಂದರೆ ಅಚ್ಚರಿಯಾಗ ಬಹುದು.
ಕರ್ನಾಟಕದಲ್ಲಿ ಪ್ರಧಾನವಾಗಿ ಕನ್ನಡ ಬಳಕೆಯಲ್ಲಿದ್ದರೂ, ಜೊತೆಗೆ ತುಳು, ಕೊಡವ, ಕೊಂಕಣಿ, ಬ್ಯಾರಿ ಮುಂತಾದ ಭಾಷೆಗಳನ್ನು ಮಾತನಾಡುವ ಮೂಲ ನಿವಾಸಿಗಳಿzರೆ. ಹಾಗಾಗಿ ಭಾಷೆಯ ಬದಲಾಗಿ ಪ್ರಾದೇಶಿಕವಾಗಿ ಗುರುತಿಸುವ, ಎಲ್ಲರನ್ನೂ ಒಳಗೊಳ್ಳುವ ಒಂದು ಹೆಸರಾಗಿ ‘ಕರ್ನಾಟಕ’ ಎಂದು ನಾಮಕರಣಮಾಡಲಾಯಿತು ಎನ್ನುವ ಸಮರ್ಥನೆಗಳಿವೆ.
ಕನ್ನಡ ಜನರ ಸಂವೇದನೆಗಳು ರಾಜ್ಯಕ್ಕಿಂತ ಮಾತೃಭಾಷೆಯ ಕಡೆಗೆ ಹೆಚ್ಚಿದೆ, ಅದಕ್ಕೇ ನೋಡಿ, ರಾಜ್ಯದ ಹೆಸರಿನಲ್ಲಿ ಉತ್ಸವವನ್ನು ಆಚರಿಸಬೇಕಾಗಿತ್ತು ಆದರೆ ನಾವು ಕರ್ನಾಟಕ ರಾಜ್ಯೋತ್ಸವ ಎನ್ನುವ ಬದಲಿಗೆ ಕನ್ನಡ ರಾಜ್ಯೋತ್ಸವ ಅಂತಲೇ ಇವತ್ತಿಗೂ ಕರೆಯುತ್ತೇವೆ. ಹೀಗೆ, ಒಂದು ಕಡೆ ಕನ್ನಡಾ ಕನ್ನಡಾ ಅಂತ ಭಾಷಾಭಿಮಾನದಿಂದ ನಾವು ಬೊಬ್ಬಿರಿಯುತ್ತಿರುವಾಗ, ನಮ್ಮ ರಾಜ್ಯದ ಹೆಸರೇ ಕನ್ನಡದ್ದಾಗಲಿಲ್ಲವಲ್ಲ ಎನ್ನುವ ಕೊರಗು ನನ್ನದು.
ಕರ್ನಾಟಕ ಎನ್ನುವ ಪದವನ್ನು ಭಗವಾನ್ ವೇದವ್ಯಾಸರು ಮುಂತಾದ ಪ್ರಾಚೀನರು ಬಳಸಿದ್ದಾರೆ ಅಂತಾದ ಮೇಲೆ ಆ ಶಬ್ದ ಕನ್ನಡಮೂಲದ್ದಾಗಿರಲು ಸಾಧ್ಯವೇ ಇಲ್ಲ, ಸಂಸ್ಕೃತದ್ದೇ ಆಗಿರಬೇಕು. ಸಂಸ್ಕೃತ ಭಾಷೆ ಬೇಡವೇ ಬೇಡ ಅಥವಾ ಮಾತೃಭಾಷೆ ಕನ್ನಡದಷ್ಟು ಬೇಡ ಅಂತ ಹೋರಾಟ ಮಾಡಿದವರು ನಾವು, ಆದರೆ ಕನ್ನಡ ಭಾಷಿಕರ ರಾಜ್ಯಕ್ಕೆ ಹೆಸರಿಡುವಾಗ ಸಂಸ್ಕೃತದ ಪದವೇ ಆಗಬೇಕಾಗಿತ್ತಾ? ಶುದ್ಧ ಕನ್ನಡದ ಯಾವ ಹೆಸರೂ ಸಿಗಲಿಲ್ಲವೇಕೆ ಎನ್ನವ ಸಖೇದಾಶ್ಚರ್ಯ ನನ್ನದು.