ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Ramanand Sharma Column: ಬ್ಯಾಂಕುಗಳಲ್ಲಿ ಭಾಷಾ ಸಂಘರ್ಷ

ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಸ್ಥಳೀಯ ಭಾಷೆ ಕಲಿಸುವುದರ ಬಗೆಗೆ ಮತ್ತು ಪ್ರತಿ ಶಾಖೆಗೆ ಸ್ಥಳೀಯ ಭಾಷಾ ಅಧಿಕಾರಿಗಳನ್ನು ನೇಮಿಸುವುದರ ಬಗೆಗೆ ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಸಮಸ್ಯೆ ಎಲ್ಲಿದ್ದೀಯಾ ಬಡವ ಎಂದರೆ, ಮಡಗಿದ ಇದ್ದೀನಿ ಎನ್ನುವಂತಿದೆ. ಸಂವಿಧಾನದ ಪ್ರಕಾರ ಪ್ರತಿ ನಾಗರಿಕನಿಗೂ ದೇಶದ ಯಾವುದೇ ಭಾಗದಲ್ಲಿ ವಾಸಿಸುವ, ಉದ್ಯೋಗ- ವ್ಯವಹಾರ ಮಾಡುವ ಅಧಿಕಾರ ಇದೆ.

ಬ್ಯಾಂಕುಗಳಲ್ಲಿ ಭಾಷಾ ಸಂಘರ್ಷ

-

Profile
Ashok Nayak Nov 21, 2026 6:25 PM

ಸಕಾಲಿಕ

ರಮಾನಂದ ಶರ್ಮಾ

ಬ್ಯಾಂಕುಗಳಲ್ಲಿ ಸಿಬ್ಬಂದಿಗಳು ಮತ್ತು ಗ್ರಾಹಕರ ನಡುವೆ ಭಾಷಾ ಸಂಘರ್ಷಕ್ಕೆ ಸುದೀರ್ಘ ಇತಿಹಾಸ ವಿದೆ. ದಿನಗಳು ಕಳೆದಂತೆ ಸಮಸ್ಯೆ ತಾರ್ಕಿಕ ಅಂತ್ಯ ಕಾಣದೇ ಬಿಗಡಾಯಿಸುತ್ತಿದೆ. ಈ ನಿಟ್ಟಿನಲ್ಲಿ ಲೆಕ್ಕವಿಲ್ಲದಷ್ಟು ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಮತ್ತು ಹೋರಾಟವಾಗಿದೆ. ಈ ಸಂಘರ್ಷ ರಾಷ್ಟ್ರೀಯ ಮಾಧ್ಯಮದಲ್ಲಿ ಸದ್ದು ಮಾಡಿದಾಗ ವಿತ್ತ ಸಚಿವರು ಮತ್ತು ಹಣಕಾಸು ಸಚಿವಾಲಯ ಬ್ಯಾಂಕುಗಳಲ್ಲಿ ಸ್ಥಳೀಯ ಭಾಷಿಕರಿಗೆ ಆದ್ಯತೆ ಕೊಡುವ ಬಗೆಗೆ ಮಾತನಾಡುತ್ತಾರೆ ಮತ್ತು ಈ ನಿಟ್ಟಿನಲ್ಲಿ ಬ್ಯಾಂಕುಗಳಿಗೆ ನಿರ್ದೇಶನ ನೀಡಿರುವುದನ್ನು ನೆನಪಿಸುತ್ತಾರೆ.

ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಸ್ಥಳೀಯ ಭಾಷೆ ಕಲಿಸುವುದರ ಬಗೆಗೆ ಮತ್ತು ಪ್ರತಿ ಶಾಖೆಗೆ ಸ್ಥಳೀಯ ಭಾಷಾ ಅಧಿಕಾರಿಗಳನ್ನು ನೇಮಿಸುವುದರ ಬಗೆಗೆ ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಸಮಸ್ಯೆ ಎಲ್ಲಿದ್ದೀಯಾ ಬಡವ ಎಂದರೆ, ಮಡಗಿದ ಇದ್ದೀನಿ ಎನ್ನುವಂತಿದೆ. ಸಂವಿಧಾನದ ಪ್ರಕಾರ ಪ್ರತಿ ನಾಗರಿಕನಿಗೂ ದೇಶದ ಯಾವುದೇ ಭಾಗದಲ್ಲಿ ವಾಸಿಸುವ, ಉದ್ಯೋಗ- ವ್ಯವಹಾರ ಮಾಡುವ ಅಧಿಕಾರ ಇದೆ.

ಅಂತೆಯೇ ಪರಭಾಷಿಕರನ್ನು ತಡೆಯಲಾಗದು. ಆದರೆ, ಬಂದವರು ತಮ್ಮ ಭಾಷೆಯನ್ನು ಸ್ಥಳೀಯರ ಮೇಲೆ ಹೇರದೆ, ಸ್ಥಳೀಯ ಭಾಷೆಗೆ ಸ್ಪಂದಿಸಿ ವ್ಯವಹರಿಸಿದರೆ ಭಾಷಾ ಸಂಘರ್ಷಕ್ಕೆ ಅವಕಾಶ ಇರುವುದಿಲ್ಲ. ಬದಲಿಗೆ ಸ್ಥಳೀಯರೇ ತಮ್ಮ ಭಾಷೆ ಕಲಿಯಬೇಕು ಎನ್ನುವ ಮನೋಭಾವ ಯಾವ ಮಾನದಂಡದಲ್ಲೂ ಸ್ವೀಕಾರಾರ್ಹವಲ್ಲ. ಪರಭಾಷಿಕರಿಗೆ ದಿನ ಬೆಳಗಾಗುವುದರೊಳಗಾಗಿ ಸ್ಥಳೀಯ ಭಾಷೆಯನ್ನು ಕಲಿಯಬೇಕೆಂದು ಯಾರೂ ಒತ್ತಾಯಿಸುವುದಿಲ್ಲ.

ಇದನ್ನೂ ಓದಿ: Ramanand Sharma Column: ಮಕ್ಕಳಿರಲವ್ವ ಮನೆ ತುಂಬಾ ಎನ್ನುತ್ತಿರುವ ನಾಯ್ಡುಗಾರು

ಒಂದು ನಿರ್ದಿಷ್ಟ ಸಮಯ ಪರಿಮಿತಿಯಲ್ಲಿ ಕಲಿಯದಿದ್ದರೆ, ಕಲಿಯಲು ಪ್ರಯತ್ನಿಸದಿದ್ದರೆ, ಕಲಿಯದಿರಲು ನೆವ ಹೇಳಿದರೆ, ಸಮಸ್ಯೆ ತೆಗೆದುಕೊಳ್ಳುವ ತಿರುವೇ ಬೇರೆ. ಸದ್ಯ ಬ್ಯಾಂಕುಗಳಲ್ಲಿ ನಡೆಯುತ್ತಿರುವ ಭಾಷಾ ಸಂಘರ್ಷಕ್ಕೆ ಇದೇ ಮನೋಭಾವ ಕಾರಣ.

ದಕ್ಷಿಣ ರಾಜ್ಯಗಳಿಂದ ಬಂದವರು ಸ್ವಲ್ಪವಾದರೂ ಕಾಂಪ್ರಮೈಸ್ ಮಾಡಿಕೊಳ್ಳುತ್ತಾರೆ. ಆದರೆ ಉತ್ತರದಿಂದ ಬಂದವರು, ಹಿಂದಿ ರಾಷ್ಟ್ರಭಾಷೆಯಾಗಿದ್ದು ಸ್ಥಳೀಯರೇ ತಮ್ಮ ಭಾಷೆಯನ್ನು ಕಲಿಯಬೇಕು ಎಂದು ಧಮಕಿ ಹಾಕುತ್ತಾರೆ. ಪ್ರತಿಯೊಬ್ಬರೂ ತಮ್ಮ ಚಿಂತನೆಯಂತೆ ವಾದಿಸುವುದು ಸಹಜ. ಬ್ಯಾಂಕ್ ಸಿಬ್ಬಂದಿಗಳಿಗೆ ನೀಡುವ ಉದ್ಯೋಗ ಆದೇಶದಲ್ಲಿ ವರ್ಗಾವಣೆ ಅನ್ವಯ ಇರುತ್ತಿದ್ದು, ಅವರ ತಲೆಯ ಮೇಲೆ ವರ್ಗಾವರ್ಗಿಯ ಕತ್ತಿ ತೂಗುತ್ತಲೇ ಇರುತ್ತದೆ.

ಕರ್ತವ್ಯಕ್ಕೆ ಹಾಜರಾಗಿ 6 ತಿಂಗಳಿನಲ್ಲಿ ಸ್ಥಳೀಯ ಭಾಷೆ ಕಲಿಯಬೇಕು ಎನ್ನುವ ನಿಬಂಧನೆಯು ನೇಮಕಾತಿ ಅದೇಶದಲ್ಲಿ ಇದ್ದರೂ, ಹೊಸ ಸ್ಥಳಕ್ಕೆ ಹೊಂದಿಕೊಳ್ಳುವ ಧಾವಂತದಲ್ಲಿ, ಗೊಂದಲ ದಲ್ಲಿ ಮತ್ತು ಅವಸರದಲ್ಲಿ ಅದು ಸಾಧ್ಯವಾಗುತ್ತಿಲ್ಲ. ದುರ್ದೈವವೆಂದರೆ ಸ್ಥಳೀಯ ಭಾಷಾ ಸಿಬ್ಬಂದಿಗಳು (ಕನ್ನಡಿಗರು) ಪರಭಾಷಿಕ ಸಿಬ್ಬಂದಿಗಳಿಗೆ ತಮ್ಮ ಭಾಷೆಯನ್ನು ಅವರಿಗೆ ಕಲಿಸಲು ಪ್ರಯತ್ನಿಸದೇ ಅವರ ಭಾಷೆಯಲ್ಲಿಯೇ ಸಂವಹನ ಮಾಡಿ ಅವರಿಂದ ಭೇಷ್ ಎನಿಸಿಕೊಳ್ಳುತ್ತಾರಂತೆ. ಕೆಲವು ಗ್ರಾಹಕರೂ ಇದೇ ಮಾರ್ಗ ಅನುಸರಿಸುತ್ತಾರೆ.

ತಮಿಳರು ಮತ್ತು ಮರಾಠಿಗರಂತೆ ಕನ್ನಡಿಗರೂ ತಮ್ಮ ಭಾಷಾಭಿಮಾನ ತೋರಿಸಿದ್ದರೆ ಬ್ಯಾಂಕು ಗಳಲ್ಲಿ ಭಾಷಾ ಸಂಘರ್ಷ ನಡೆಯುತ್ತಿರಲಿಲ್ಲ. ವಿಪರ್ಯಾಸವೆಂದರೆ ಕನ್ನಡಿಗರು ಈ ರೀತಿ ಹೊರ ರಾಜ್ಯಗಳಿಗೆ ಹೋದರೆ, ಹಿಂತಿರುಗಿ ಬರುವಾಗ ಆ ರಾಜ್ಯಗಳ ಭಾಷೆಯಲ್ಲಿ ಪಂಡಿತರಾಗಿ ಬರುತ್ತಾರೆ. ಬ್ಯಾಂಕುಗಳಲ್ಲಿ ಈ ಭಾಷಾ ಕಲಿಕೆಯ ವಿಶೇಷವೆಂದರೆ ಸ್ಥಳೀಯ ಭಾಷೆಯನ್ನು ಕಲಿತು ಗ್ರಾಹಕ ರೊಂದಿಗೆ ಸಂವಹನ ಅರಂಭಿಸುವ ಹೊತ್ತಿಗೆ, ಅವರ ಎತ್ತಂಗಡಿ ಪ್ರಕ್ರಿಯೆ ಶುರುವಾಗಿ, ಅವರ ಭಾಷಾ ಕಲಿಕೆ ಹೊಳೆಯಲ್ಲಿ ಹೋಮ ಮಾಡಿದಂತೆ ಆಗುತ್ತದೆ. ಈ ಪ್ರಹಸನವನ್ನು ಸಿಬ್ಬಂದಿಗಳು ಕ್ರಿಮಿನಲ್ ವೇಸ್ಟ್ ಎಂದು ಬಣ್ಣಿಸುತ್ತಾರೆ.

ತಮಗೆ ಪ್ರತಿ 2-3 ವರ್ಷಗಳಿಗೆ ದೇಶಾದ್ಯಂತ ವರ್ಗಾವರ್ಗಿ ಆಗುತ್ತಿದ್ದು, ತಮ್ಮ 35-40 ವರ್ಷಗಳ ಸೇವೆಯಲ್ಲಿ ಎಷ್ಟು ಭಾಷೆಗಳನ್ನು ಕಲಿಯಬೇಕು ಎಂದು ಪ್ರಶ್ನಿಸುತ್ತಾರೆ. ಅವರ ಮಾತಿನಲ್ಲಿ ಅರ್ಥ ವಿಲ್ಲದಿಲ್ಲ. ಆದರೆ, ಈ ಭಾಷಾ ಕಲಿಯುವಿಕೆ ದಿನನಿತ್ಯದ ವ್ಯವಹಾರದಲ್ಲಿ ಅವಶ್ಯ ಇರುವ ಬೇಸಿಕ್ ತಿಳುವಳಿಕೆಗೆ ಸೀಮಿತವಾಗಿದೆ ವಿನಾ, ಆ ಭಾಷೆಯಲ್ಲಿ ಪಂಡಿತರಾಗಲು ಅಲ್ಲ ಎನ್ನುವ ಸತ್ಯವನ್ನು ಇಲ್ಲಿ ಮರೆಮಾಚಲಾಗುತ್ತಿದೆ.

ಒಂದು ಕಾಲಕ್ಕೆ ಬ್ಯಾಂಕುಗಳಲ್ಲಿ ನೇಮಕಾತಿ ಮಾಡುವಾಗ ದೇಸಾಯಿ ಅವಾರ್ಡ್ ಅನ್ವಯ ಅಭ್ಯರ್ಥಿಗಳನ್ನು ನಾನ್ ಲಾಂಗ್ವೇಜ್ ಪ್ರದೇಶಗಳಿಗೆ ಕೆಳಗಿನ ಶ್ರೇಣಿ ಉದ್ಯೋಗಿಗಳನ್ನು ನಿಯುಕ್ತಿ ಮಾಡುತ್ತಿರಲಿಲ್ಲ. ನಂತರ ನಿಯುಕ್ತಿಯಾಗಿ 6 ತಿಂಗಳಲ್ಲಿ ಸ್ಥಳೀಯ ಭಾಷೆಯನ್ನು ಕಲಿತುಕೊಳ್ಳ ಬೇಕು ಎನ್ನುವ ನಿಬಂಧನೆಯೊಂದಿಗೆ ಅಭ್ಯರ್ಥಿಗಳನ್ನು ದೇಶಾದ್ಯಂತ ನಿಯುಕ್ತಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಈ ನಿಬಂಧನೆಗಳು ಹೇಗೆ ಕಾರ್ಯಗತವಾಗಿವೆ, ಎಲ್ಲಿ, ಯಾರು ಕಾರ್ಯಗತಗೊಳಿಸಬೇಕು, ಎಷ್ಟರಮಟ್ಟಿಗೆ ಕಾರ್ಯಗತವಾಗಿದೆ ಎನ್ನುವುದನ್ನು ನೋಡುವ ವ್ಯವಸ್ಥೆಯೇ ಇಲ್ಲ.

ಸಾರ್ವಜನಿಕ ಸಂಪರ್ಕ ಇರುವ ಕಚೇರಿಗಳಲ್ಲಿ ಲೋಕಲ್ ವೋಕಲ್ ಇದ್ದು ಮತ್ತು ಮಣ್ಣಿನ ಮಕ್ಕಳು ಪರಿಕಲ್ಪನೆಯ ಕಾವು ಕೂಡಾ ಏರುತ್ತಿದ್ದು, ಬ್ಯಾಂಕುಗಳಲ್ಲಿ ಭಾಷಾ ಸಂಘರ್ಷ ನಿತ್ಯಸುದ್ದಿ ಯಾಗುತ್ತಿದೆ. ಮಹಾರಾಷ್ಟ್ರದಲ್ಲಂತೂ ಇದು ದೈಹಿಕ ಹಯವರೆಗೂ ತಲುಪಿದೆ. ಈ ಭಾಷಾ ಸಂಘರ್ಷದಿಂದಾಗಿ ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವುದು ಕಷ್ಟದಾಯಕವಾಗಿದೆ ಎನ್ನಲಾಗು ತ್ತಿದೆ.

ಇದೇ ಕಾರಣಕ್ಕೆ ಗ್ರಾಹಕರು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಬೈ ಹೇಳಿ ಸ್ಥಳೀಯ ಭಾಷಿಕರೇ ಹೆಚ್ಚು ಇರುವ ಅರ್ಬನ್ ಮತ್ತು ಸಹಕಾರಿ ಬ್ಯಾಂಕುಗಳತ್ತ ತೆರಳುತ್ತಿದ್ದಾರೆ ಎಂದು ರಾಷ್ಟ್ರೀಕೃತ ಬ್ಯಾಂಕು ಗಳ ಮ್ಯಾನೇಜರ್‌ಗಳು ಅಲವತ್ತುಕೊಳ್ಳುತ್ತಿದ್ದಾರಂತೆ. ಬ್ಯಾಂಕುಗಳಲ್ಲಿ ನಡೆಯುವ ಈ ಭಾಷಾ ಸಂಘರ್ಷ ರಾಷ್ಟ್ರೀಯ ವಾಹಿನಿಗಳಲ್ಲಿ ಹೆಚ್ಚು ಸುದ್ದಿ ಮಾಡದಿದ್ದರೂ ಲೋಕಲ್ ಮಾಧ್ಯಮಗಳಲ್ಲಿ ಮತ್ತು ಜಾಲತಾಣಗಳಲ್ಲಿ ನಿರಂತರವಾಗಿ ಕಾಣುತ್ತವೆ. ಈ ಭಾಷಾ ಸಂಘರ್ಷದ ನಿಟ್ಟಿನಲ್ಲಿ ದೊರೆಯತನಕ ದೂರುಗಳು ದಶಕಗಳಿಂದ ಹೋಗುತ್ತಲೇ ಇದೆ. ಆದರೆ, ಈ ವಿಷಯದಲ್ಲಿ ಸಮಸ್ಯೆ ಯ ಆಳವನ್ನು ನೋಡದೇ, ಅಳೆಯದೇ ಸಂತೆಗೊಂದು ಮೊಳ ನೇಯ್ದಂತೆ ಪರಿಹಾರ ಸೂಚಿಸ ಲಾಗುತ್ತಿದೆ.

ದೂರದ ಬಿಹಾರ, ಅಸ್ಸಾಂ, ರಾಜಸ್ಥಾನ ಮುಂತಾದ ರಾಜ್ಯಗಳಿಂದ ಅಭ್ಯರ್ಥಿಗಳನ್ನು ಕರೆದು ತಂದು ಅವರಿಗೆ ಸ್ಥಳೀಯ ಭಾಷೆ ಕಲಿಸಿ ಕೆಲಸ ಮಾಡಿಸುವುದಕ್ಕಿಂತ, ಸ್ಥಳೀಯರನ್ನೇ ನಿಯುಕ್ತಿ ಮಾಡಬ ಹುದಲ್ಲ? ಸಿಬ್ಬಂದಿ ವರ್ಗಾವರ್ಗಿಗೆ ವ್ಯಯಿಸುವ ಸಾವಿರಾರು ಕೋಟಿಯನ್ನು ಉಳಿಸಬಹುದಲ್ಲ ಎನ್ನುವ ವಾದದಲ್ಲಿ ಅರ್ಥವಿದೆ. ಬ್ಯಾಂಕಿಂಗ್ ಉದ್ಯಮ ತನ್ನ ಸಿಬ್ಬಂದಿಗಳ ವರ್ಗಾವರ್ಗಿಗೆ ಪ್ರತಿವರ್ಷ ಸಾವಿರಾರು ಕೋಟಿ ಖರ್ಚು ಮಾಡುತ್ತದೆ.

ವಿಚಿತ್ರವೆಂದರೆ ಪ್ರತಿ ಶಾಖೆಯಲ್ಲೂ ಸ್ಥಳೀಯ ಬಾಷೆ ಬಲ್ಲವರು ಇರಬೇಕು ಎನ್ನುವ ಬೇಡಿಕೆಗೆ ಬದಲಾಗಿ ಪ್ರತಿ ಶಾಖೆಯಲ್ಲೂ ಸ್ಥಳೀಯ ಭಾಷಾ ಅಧಿಕಾರಿಯನ್ನು ನೇಮಕ ಮಾಡುವ ವದಂತಿ ಹರಡುತ್ತಿದೆ. ಇದು ಸಮಸ್ಯೆಗೆ ಪರಿಹಾರವಾಗದೇ ಸಮಸ್ಯೆಗೆ ಇನ್ನೊಂದು ರೂಪ ಕೊಡುತ್ತದೆ. ಈ ಸಮಸ್ಯೆಗೆ ಪರಿಹಾರ, ಕಟ್ಟುನಿಟ್ಟಾಗಿ ಈಗಿರುವ ನಿಯಾವಳಿಯನ್ನು ಜಾರಿಗೊಳಿಸಬೇಕು ಅಥವಾ ಕನ್ನಡಿಗರನ್ನು ಹೆಚ್ಚು ಪ್ರಮಾಣದಲ್ಲಿ ನೇಮಿಸಬೇಕು.