Vishweshwar Bhat Column: ಮೊನೊಕಲ್ ಪತ್ರಿಕೆ ಕುರಿತು
ನಾನು ಮೊನೊಕಲ್ (Monocle) ಪತ್ರಿಕೆಯ ಖಾಯಂ ಓದುಗ. ಇದು ಜಾಗತಿಕ ವ್ಯವಹಾರಗಳು, ವಿನ್ಯಾಸ, ವ್ಯಾಪಾರ, ನಗರ ಸಂಸ್ಕೃತಿ ಮತ್ತು ಪ್ರಯಾಣದ ಕುರಿತು ಆಳವಾದ ಒಳನೋಟ ನೀಡುವ ವಿಶ್ವವಿಖ್ಯಾತ ಮುದ್ರಣ ನಿಯತಕಾಲಿಕೆ. ಡಿಜಿಟಲ್ ಮಾಧ್ಯಮದ ಭರಾಟೆಯಲ್ಲಿ ಮುದ್ರಣ ಪತ್ರಿಕೋದ್ಯಮ ಸಂಕಷ್ಟದಲ್ಲಿದೆ ಎನ್ನುವ ಕಾಲಘಟ್ಟದ, ಉತ್ಕೃಷ್ಟ ಗುಣಮಟ್ಟದ ಕಾಗದ, ಸೊಗಸಾದ ಮುದ್ರಣ ಹಾಗೂ ವಿಶಿಷ್ಟ ದೃಷ್ಟಿಕೋನದ ಮೂಲಕ ಈ ಮ್ಯಾಗಜಿನ್ ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಮೂಡಿಸಿತು.
-
ಸಂಪಾದಕರ ಸದ್ಯಶೋಧನೆ
ನಾನು ಮೊನೊಕಲ್ (Monocle) ಪತ್ರಿಕೆಯ ಖಾಯಂ ಓದುಗ. ಇದು ಜಾಗತಿಕ ವ್ಯವಹಾರಗಳು, ವಿನ್ಯಾಸ, ವ್ಯಾಪಾರ, ನಗರ ಸಂಸ್ಕೃತಿ ಮತ್ತು ಪ್ರಯಾಣದ ಕುರಿತು ಆಳವಾದ ಒಳನೋಟ ನೀಡುವ ವಿಶ್ವವಿಖ್ಯಾತ ಮುದ್ರಣ ನಿಯತಕಾಲಿಕೆ. ಡಿಜಿಟಲ್ ಮಾಧ್ಯಮದ ಭರಾಟೆಯಲ್ಲಿ ಮುದ್ರಣ ಪತ್ರಿಕೋದ್ಯಮ ಸಂಕಷ್ಟದಲ್ಲಿದೆ ಎನ್ನುವ ಕಾಲಘಟ್ಟದ, ಉತ್ಕೃಷ್ಟ ಗುಣಮಟ್ಟದ ಕಾಗದ, ಸೊಗಸಾದ ಮುದ್ರಣ ಹಾಗೂ ವಿಶಿಷ್ಟ ದೃಷ್ಟಿಕೋನದ ಮೂಲಕ ಈ ಮ್ಯಾಗಜಿನ್ ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಮೂಡಿಸಿತು.
ಗಡಿಗಳನ್ನು ಮೀರಿದ ಅಂತಾರಾಷ್ಟ್ರೀಯ ಪತ್ರಿಕೋದ್ಯಮಕ್ಕೆ ಹೊಸ ಲಕ್ಷಣ ತಂದುಕೊಟ್ಟ ಹಿರಿಮೆ ಇದರದ್ದು. ಈ ನಿಯತಕಾಲಿಕೆಯನ್ನು 2007ರಲ್ಲಿ ಕೆನಡಾ ಮೂಲದ ಖ್ಯಾತ ಪತ್ರಕರ್ತ ಮತ್ತು ಉದ್ಯಮಿ ಟೈಲರ್ ಬ್ರೂಲೆ ಸ್ಥಾಪಿಸಿದರು. ಇದಕ್ಕೂ ಮೊದಲು ಅತ್ಯಂತ ಯಶಸ್ವಿ ‘ವಾಲ್ಪೇಪರ್ ’ ಮ್ಯಾಗಜಿನ್ ಕಟ್ಟಿ ಬೆಳೆಸಿದ್ದ ಬ್ರೂಲೆ, ಜಾಗತಿಕ ಮಟ್ಟದಲ್ಲಿ ಸದಾ ಸಂಚರಿಸುವ, ಸಂಸ್ಕೃತಿ ಮತ್ತು ವಿನ್ಯಾಸದ ಬಗ್ಗೆ ಅಭಿರುಚಿಯುಳ್ಳ ಚಿಂತಕರು ಹಾಗೂ ಜಾಗತಿಕ ನಾಗರಿಕರಿಗಾಗಿ ಹೊಸತೊಂದು ಮಾಧ್ಯಮ ಬೇಕೆಂದು ನಿರ್ಧರಿಸಿ ಲಂಡನ್ ಕೇಂದ್ರವಾಗಿ ಮೊನೊಕಲ್ ಆರಂಭಿಸಿದರು.
ಇದರ ಪ್ರಧಾನ ಕಚೇರಿ ಲಂಡನ್ನಲ್ಲಿದ್ದರೂ, ಇದು ವಿಶ್ವದ ಬಹುತೇಕ ಪ್ರಮುಖ ನಗರಗಳಲ್ಲಿ ತನ್ನ ಜಾಲವನ್ನು ಹೊಂದಿದೆ. ಜ್ಯೂರಿಚ್, ಟೋಕಿಯೊ, ಹಾಂಕಾಂಗ್, ನ್ಯೂಯಾರ್ಕ್ ಮತ್ತು ಪ್ಯಾರಿಸ್ ನಂಥ ಕೇಂದ್ರಗಳಲ್ಲಿ ತನ್ನ ಬ್ಯೂರೋಗಳನ್ನು ಹೊಂದಿದ್ದು, ಸ್ಥಳೀಯ ವಿದ್ಯಮಾನಗಳನ್ನು ಜಾಗತಿಕ ದೃಷ್ಟಿಕೋನದಿಂದ ವಿಶ್ಲೇಷಿಸುತ್ತದೆ.
ಇದನ್ನೂ ಓದಿ: Vishweshwar Bhat Column: ಲೇಪಿಸ್ ಲಜುಲಿ
ಸ್ಥಳೀಯ ಆಡಳಿತ, ನಗರಾಭಿವೃದ್ಧಿ ಮತ್ತು ಸಣ್ಣ ಸಣ್ಣ ಸಾಂಸ್ಕೃತಿಕ ಬದಲಾವಣೆಗಳನ್ನು ಗುರುತಿಸಿ ಪ್ರಕಟಿಸುವುದು ಇದರ ಜಾಲದ ಬಲ. ಈ ಪತ್ರಿಕೆಯ ಪುಟ ವಿನ್ಯಾಸ ಮತ್ತು ಕವರೇಜ್ ಐದು ಪ್ರಮುಖ ವಿಭಾಗಗಳಾಗಿ (Affairs, Business, Culture, Design, Edits) ಹಂಚಿಹೋಗಿದೆ. ಜಾಗತಿಕ ರಾಜತಾಂತ್ರಿಕತೆ, ವಿದೇಶಾಂಗ ನೀತಿ ಹಾಗೂ ರಕ್ಷಣಾ ರಂಗದ ಬೆಳವಣಿಗೆಗಳು ಮುನ್ನೆಲೆಯಲ್ಲಿರು ತ್ತವೆ.
ಅದೇ ಹೊತ್ತಿಗೆ, ಹೊಸ ಮಾದರಿಯ ಸಣ್ಣ ವ್ಯಾಪಾರೋದ್ಯಮಗಳು, ಕರಕುಶಲ ಮತ್ತು ಸ್ವತಂತ್ರ ಬ್ರ್ಯಾಂಡ್ಗಳಿಗೆ ವಿಶೇಷ ಪ್ರಾಮುಖ್ಯ ನೀಡಿ ಪ್ರಸ್ತುತ ಪಡಿಸಲಾಗುತ್ತದೆ. ಕಲೆ, ವಾಸ್ತುಶಿಲ್ಪ ಹಾಗೂ ನಗರ ಯೋಜನೆಯ ವಿನ್ಯಾಸಕ್ಕೆ ಮೊನೊಕಲ್ ನೀಡುವ ಆದ್ಯತೆ ಸಾಟಿಯಿಲ್ಲದ್ದು. ಸುಸ್ಥಿರ ನಗರಗಳ ನಿರ್ಮಾಣ, ಸಾರ್ವಜನಿಕ ಸಾರಿಗೆಯ ಸೌಂದರ್ಯ, ಬೀದಿ ದೀಪಗಳಿಂದ ಹಿಡಿದು ಪಾರ್ಕ್ಗಳ ನಿರ್ವಹಣೆಯವರೆಗೆ ನಗರ ಜೀವನವನ್ನು ರೂಪಿಸುವ ಪ್ರತಿಯೊಂದು ಸೂಕ್ಷ್ಮ ಅಂಶವನ್ನೂ ಇದು ಚರ್ಚಿಸುತ್ತದೆ.
ಪ್ರತಿವರ್ಷ ಪ್ರಕಟವಾಗುವ ಇವರ ‘ಕ್ವಾಲಿಟಿ ಆಫ್ ಲೈಫ್ ಸರ್ವೆ’ ಮತ್ತು ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರಗಳ ಪಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮನ್ನಣೆ ಗಳಿಸಿದೆ. ಪ್ರಯಾಣ ಮತ್ತು ಆತಿಥ್ಯ ರಂಗದ ವರದಿಗಾರಿಕೆಯಲ್ಲಿ ಮೊನೊಕಲ್ ಸೃಷ್ಟಿಸಿರುವ ಶೈಲಿ ವಿಶಿಷ್ಟ. ಕೇವಲ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಪರಿಚಯಿಸದೇ, ಅಪರೂಪದ ಹೋಟೆಲ್ಗಳು, ಸ್ಥಳೀಯ ಕೆಫೆಗಳು, ವಿಮಾನ ನಿಲ್ದಾಣಗಳ ಕಾರ್ಯಕ್ಷಮತೆ ಮತ್ತು ರೈಲು ಪ್ರಯಾಣದ ಅನುಭವಗಳನ್ನು ಆಪ್ತವಾಗಿ ಕಟ್ಟಿಕೊಡುತ್ತದೆ.
ಓದುಗರನ್ನು ಪ್ರವಾಸಿಗರಂತೆ ಕಾಣದೇ, ಜಾಗತಿಕ ಅನ್ವೇಷಕರಂತೆ ಭಾವಿಸಿ ಬರೆಯುವುದು ಇದರ ಶೈಲಿ. ಮುದ್ರಣ ಗುಣಮಟ್ಟ ಮತ್ತು ಕಲಾತ್ಮಕ ವಿನ್ಯಾಸ ಮೊನೊಕಲ್ ನ ಅತಿ ದೊಡ್ಡ ಆಕರ್ಷಣೆ. ದಪ್ಪನೆಯ, ಮ್ಯಾಟ್ ಫಿನಿಶ್ನ ಗುಣಮಟ್ಟದ ಕಾಗದ, ಕಣ್ಣಿಗೆ ತಂಪು ನೀಡುವ ಸೊಗಸಾದ ಟೈಪೋಗ್ರಫಿ, ಅತ್ಯುತ್ತಮ ಛಾಯಾಗ್ರಹಣ ಹಾಗೂ ಚಿಂತನಶೀಲ ರೇಖಾಚಿತ್ರಗಳು ಪ್ರತಿ ಸಂಚಿಕೆ ಯನ್ನೂ ಸಂಗ್ರಹಯೋಗ್ಯ ಕೃತಿ ಆಗಿ ಪರಿವರ್ತಿಸುತ್ತವೆ. ಮುದ್ರಣ ಮಾಧ್ಯಮದ ಸ್ಪರ್ಶಾನುಭವಕ್ಕೆ ಜನರು ಬೆಲೆ ಕಟ್ಟುತ್ತಾರೆ ಎಂಬುದನ್ನು ಇದು ಪ್ರಾಯೋಗಿಕವಾಗಿ ಸಾಬೀತುಪಡಿಸಿದೆ.
ಕೇವಲ ಮ್ಯಾಗಜಿನ್ಗೆ ಸೀಮಿತವಾಗದೇ, ಮೊನೊಕಲ್ ಒಂದು ಪ್ರಬಲ ‘ಲೈಫ್ ಸ್ಟೈಲ್ ಬ್ರ್ಯಾಂಡ್’ ಆಗಿ ಬೆಳೆದಿದೆ. 2011ರಲ್ಲಿ ‘Monocle 24’ ಎಂಬ 24 ಗಂಟೆಗಳ ರೇಡಿಯೊ/ಪಾಡ್ಕ್ಯಾಸ್ಟ್ ಸೇವೆಯನ್ನು ಆರಂಭಿಸಿ ಧ್ವನಿ ಮಾಧ್ಯಮದಲ್ಲೂ ಹೆಜ್ಜೆಗುರುತು ಮೂಡಿಸಿತು. ಇದಲ್ಲದೆ ಜಾಗತಿಕ ನಗರಗಳ ಮಾರ್ಗದರ್ಶಿ ಪುಸ್ತಕ ಗಳು (Monocle Travel Guide Series) ಹಾಗೂ ಜೀವನಶೈಲಿ, ವ್ಯಾಪಾರ ಕುರಿತ ವಿಶೇಷ ಪುಸ್ತಕಗಳನ್ನು ಪ್ರಕಟಿಸುತ್ತಾ ಪ್ರಕಾಶನ ರಂಗದಲ್ಲೂ ಯಶಸ್ವಿಯಾಗಿದೆ