ಜನರ ಬಳಿಗೆ ಆಡಳಿತ, ಅಭಿವೃದ್ಧಿಗೆ ಹೊಸ ದಿಕ್ಕು
ನೂರು ದಿನಗಳು ದೊಡ್ಡ ಸಾಧನೆಗಳನ್ನು ಅಳೆಯುವ ಅಂತಿಮ ಮಾನದಂಡವಲ್ಲ. ಆದರೆ ಸರಕಾರದ ಮನಸ್ಥಿತಿ, ಆದ್ಯತೆ ಮತ್ತು ಕಾರ್ಯಶೈಲಿಯನ್ನು ಅರ್ಥಮಾಡಿಕೊಳ್ಳಲು ಇದು ಮಹತ್ವದ ಆರಂಭಿಕ ಅವಧಿ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದು, ಈ ಹೊಸ ಆಡಳಿತದ ವೇಗಕ್ಕೆ ಒಂದು ಉದಾಹರಣೆ.
-
ದಿನೇಶ್ ಗೂಳಿಗೌಡ
(ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರು)
ಡಿಕೆಶಿ ಅವರ ದೂರದೃಷ್ಟಿ ಹೆಜ್ಜೆ
ಶತದಿನಗಳಲ್ಲಿ ಜನಪರ ಆಡಳಿತ
ಆರಂಭದಲ್ಲೇ ಆದ್ಯತೆಗಳ ಸ್ಪಷ್ಟ ಸಂದೇಶ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರಕಾರ ನೂರು ದಿನಗಳನ್ನು ಪೂರೈಸು ತ್ತಿರುವ ಈ ಸಂದರ್ಭದಲ್ಲಿ, ಈ ಅವಧಿಯನ್ನು ಹಿಂದಿರುಗಿ ನೋಡಿದಾಗ ನನಗೆ ಪ್ರಮುಖವಾಗಿ ಕಾಣುವುದು ಆಡಳಿತದ ವೇಗಕ್ಕಿಂತಲೂ ಅದರ ದಿಕ್ಕು. ಅಧಿಕಾರ ವಹಿಸಿಕೊಂಡ ದಿನದಿಂದಲೇ ಜನರ ಬದುಕಿಗೆ ನೇರವಾಗಿ ಸಂಬಂಧಿಸುವ ವಿಚಾರಗಳಿಗೆ ಆದ್ಯತೆ ನೀಡುವ ಪ್ರಯತ್ನವನ್ನು ಮುಖ್ಯಮಂತ್ರಿ ಮಾಡಿದ್ದಾರೆ.
ನೂರು ದಿನಗಳು ದೊಡ್ಡ ಸಾಧನೆಗಳನ್ನು ಅಳೆಯುವ ಅಂತಿಮ ಮಾನದಂಡವಲ್ಲ. ಆದರೆ ಸರಕಾರದ ಮನಸ್ಥಿತಿ, ಆದ್ಯತೆ ಮತ್ತು ಕಾರ್ಯಶೈಲಿಯನ್ನು ಅರ್ಥಮಾಡಿಕೊಳ್ಳಲು ಇದು ಮಹತ್ವದ ಆರಂಭಿಕ ಅವಧಿ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದು, ಈ ಹೊಸ ಆಡಳಿತದ ವೇಗಕ್ಕೆ ಒಂದು ಉದಾಹರಣೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್, ಖಾಸಗಿ ವಲಯದ ಉದ್ಯೋಗಾವಕಾಶ ಗಳನ್ನು ಒದಗಿಸಲು ಉದ್ಯೋಗ ವಿನಿಮಯ ವ್ಯವಸ್ಥೆ, 56 ಸಾವಿರ ಸರಕಾರಿ ಹುದ್ದೆಗಳ ನೇಮಕಾತಿಗೆ ಕ್ರಮ, ರಾಜ್ಯಾದ್ಯಂತ 10 ಸಾವಿರ ಭಾರತ್ ಜೋಡೋ ಯುವ ಸಂಘಗಳ ರಚನೆ, ಆಸ್ತಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡುವ ಕ್ರಮಗಳು ಮತ್ತು ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ಸೇರಿದಂತೆ ಆರು ಪ್ರಮುಖ ಅಂಶಗಳು ಮೊದಲ ದಿನವೇ ಸರಕಾರದ ಆದ್ಯತೆ ಗಳನ್ನು ಸ್ಪಷ್ಟಪಡಿಸಿದವು.
ಇದನ್ನೂ ಓದಿ: Vishweshwar Bhat Column: ಅಪ್ಪನ ಕೊನೆಯುಸಿರ ಹಾದಿಯಲ್ಲಿ ಮಗನ ಜತೆ ಭಾವಪೂರ್ಣ ಪಯಣ
ವಿಶೇಷವಾಗಿ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವ ನಿರ್ಧಾರವನ್ನು ನಾನು ಮಹತ್ವದ ಜನಪರ ಹೆಜ್ಜೆಯಾಗಿ ನೋಡುತ್ತೇನೆ. ಶಿಕ್ಷಣ ಪಡೆಯಲು ಪ್ರತಿದಿನ ಸಂಚರಿಸುವ ಸಾವಿರಾರು ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಇದು ಕಡಿಮೆ ಮಾಡುತ್ತದೆ. ಹೆಣ್ಣುಮಕ್ಕಳಿಗೆ ಮಾತ್ರ ಇದ್ದ ಉಚಿತ ಪ್ರಯಾಣದ ಸೌಲಭ್ಯವನ್ನು ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸುವ ನಿರ್ಧಾರವು ಶಿಕ್ಷಣದ ಅವಕಾಶವನ್ನು ಸಮಾನ ಗೊಳಿಸುವ ದೃಷ್ಟಿಯಿಂದಲೂ ಗಮನಾರ್ಹ.
ಯುವಜನರ ಭವಿಷ್ಯದ ಬಗ್ಗೆ ಸರಕಾರ ಹೊಂದಿರುವ ಕಾಳಜಿ ಕೇವಲ ಬಸ್‌ಪಾಸ್‌ಗೆ ಸೀಮಿತ ವಾಗಿಲ್ಲ. ಖಾಸಗಿ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸುವ ಉದ್ಯೋಗ ವಿನಿಮಯ ವ್ಯವಸ್ಥೆ, ಸರಕಾರಿ ನೇಮಕಾತಿಗೆ ವೇಳಾಪಟ್ಟಿ ರೂಪಿಸುವ ಪ್ರಯತ್ನ ಹಾಗೂ ಗ್ರಾಮ ಪಂಚಾಯಿತಿ ಮತ್ತು ನಗರ ವಾರ್ಡ್ ಮಟ್ಟದಲ್ಲಿ ಯುವ ಸಂಘಟನೆಗಳನ್ನು ರೂಪಿಸುವ ನಿರ್ಧಾರ ಗಳು ಯುವಶಕ್ತಿಯನ್ನು ಅಭಿವೃದ್ಧಿಯ ಭಾಗವಾಗಿಸುವ ಉದ್ದೇಶವನ್ನು ತೋರಿಸುತ್ತವೆ. 10 ಸಾವಿರ ಭಾರತ್ ಜೋಡೋ ಯುವ ಸಂಘಗಳಿಗೆ ಆರ್ಥಿಕ ನೆರವು ನೀಡುವ ನಿರ್ಧಾರವೂ ಇದೇ ಆಶಯದ ಭಾಗವಾಗಿದೆ.
ಇದರ ಜತೆಗೆ, ಬೆಂಗಳೂರಿನ ಅಭಿವೃದ್ಧಿಯತ್ತಲೂ ಸರಕಾರ ಗಮನ ಹರಿಸಿದೆ. ರಸ್ತೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಸಾವಿರಾರು ಕೋಟಿ ರುಪಾಯಿಗಳ ಪ್ಯಾಕೇಜ್ ಘೋಷಿಸುವ ಮೂಲಕ ನಗರದ ಬೆಳವಣಿಗೆಗೆ ಅಗತ್ಯವಾದ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಬೆಂಗಳೂರು ರಾಜ್ಯದ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿರುವುದರಿಂದ ಅದರ ಮೂಲಸೌಕರ್ಯ ವನ್ನು ಬಲಪಡಿಸುವುದು ಇಡೀ ಕರ್ನಾಟಕದ ಆರ್ಥಿಕತೆಗೆ ಮುಖ್ಯ. ಆದರೆ ಇದರ ಜತೆಗೆ ರಾಜ್ಯದ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ಅಭಿವೃದ್ಧಿಯ ಅವಕಾಶಗಳು ವಿಸ್ತರಿಸಬೇಕು ಎಂಬ ನಿರೀಕ್ಷೆಯೂ ಸಹಜ. ಈ ನಿಟ್ಟಿನಲ್ಲೂ ಮುಖ್ಯಮಂತ್ರಿಗಳು ಅನೇಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದಾರೆ ಎಂಬುದು ಗಮನಾರ್ಹ.
ಎಐ ಶಿಕ್ಷಣಕ್ಕೆ ಹೊಸ ದಿಕ್ಕು: ಕೃತಕ ಬುದ್ಧಿಮತ್ತೆಯ ವೇಗದ ಬೆಳವಣಿಗೆಯನ್ನು ಗಮನದಲ್ಲಿಟ್ಟು ಕೊಂಡು ಬೆಂಗಳೂರಿನಲ್ಲಿ ಎಐ ಯೂನಿವರ್ಸಿಟಿ (AI University) ಸ್ಥಾಪಿಸುವ ಘೋಷಣೆಯೂ ಭವಿಷ್ಯದ ಕರ್ನಾಟಕದ ಬಗ್ಗೆ ಸರಕಾರ ಹೊಂದಿರುವ ದೂರದೃಷ್ಟಿಯನ್ನು ತೋರಿಸುತ್ತದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಅವಕಾಶಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಯುವಕರಿಗೆ ಹೊಸ ತಲೆಮಾರಿನ ಕೌಶಲಗಳನ್ನು ಕಲಿಯಲು ಅಗತ್ಯವಾದ ಶೈಕ್ಷಣಿಕ ವಾತಾವರಣ ನಿರ್ಮಿಸುವುದು ಮುಖ್ಯ. ಬೆಂಗಳೂರಿನ ತಂತ್ರಜ್ಞಾನ ಪರಿಸರ, ಉದ್ಯಮ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ಸಾಮರ್ಥ್ಯ ವನ್ನು ಒಟ್ಟುಗೂಡಿಸಿ ಅಐ ಶಿಕ್ಷಣ ಮತ್ತು ಸಂಶೋಧನೆಗೆ ಒತ್ತು ನೀಡಿದರೆ, ರಾಜ್ಯದ ಯುವಜನತೆಗೆ ದೇಶ- ವಿದೇಶಗಳಲ್ಲಿ ಹೊಸ ಉದ್ಯೋಗಾವಕಾಶಗಳು ತೆರೆದುಕೊಳ್ಳ ಬಹುದು.
íM ಕೇವಲ ಬೆಂಗಳೂರಿನಲ್ಲೇ ಸೀಮಿತವಾಗದೆ ರಾಜ್ಯದ ಇತರ ಭಾಗಗಳಿಗೂ ತಲುಪುವಂತೆ ಕೌಶಲಾಭಿ ವೃದ್ಧಿ ಕಾರ್ಯಕ್ರಮಗಳನ್ನು ವಿಸ್ತರಿಸುವ ಗುರಿಯನ್ನು ಮುಖ್ಯಮಂತ್ರಿಗಳು ಹಾಕಿ ಕೊಂಡಿದ್ದಾರೆ. ಮುಖ್ಯಮಂತ್ರಿಗಳ ಆಡಳಿತದ ಮತ್ತೊಂದು ಗಮನಾರ್ಹ ಅಂಶವೆಂದರೆ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸುವ ಪ್ರಯತ್ನ. ಇತ್ತೀಚೆಗೆ ಆರಂಭಿಸಿರುವ ಪ್ರಜಾಸೇವಾ ಅಭಿಯಾನ ಈ ದೃಷ್ಟಿಯಿಂದ ಮಹತ್ವದ್ದು. ಜನರು ತಮ್ಮ ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಬದಲು, ಜನರ ಬಳಿಗೇ ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ತೆರಳಿ ಅಹವಾಲುಗಳನ್ನು ಸ್ವೀಕರಿಸುವ ವ್ಯವಸ್ಥೆ ರೂಪಿಸಲಾಗಿದೆ.
ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜನರ ಸಮಸ್ಯೆಗಳನ್ನು ಆಲಿಸುವ ವ್ಯವಸ್ಥೆ ರೂಪಿಸಿರುವುದು ಆಡಳಿತವನ್ನು ವಿಕೇಂದ್ರೀಕರಿಸುವ ಪ್ರಯತ್ನವಾಗಿದೆ. ನಾಡಿನ ದೊರೆ ಎನ್ನುವುದಕ್ಕಿಂತ ಪ್ರಜಾಸೇವಕ ಎಂದು ಕರೆಯಿರಿ ಎಂಬ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾತು ಕೂಡ ಈ ಆಡಳಿತದ ಆಶಯವನ್ನು ಪ್ರತಿಬಿಂಬಿಸುತ್ತದೆ.
ಅಧಿಕಾರವೆಂದರೆ ಜನರಿಂದ ದೂರ ಉಳಿಯುವ ಸ್ಥಾನವಲ್ಲ. ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಜವಾಬ್ದಾರಿ ಎಂಬ ಸಂದೇಶ ಇದರಲ್ಲಿ ಅಡಗಿದೆ. ಈ ಮನೋಭಾವ ಆಡಳಿತದ ಕಾರ್ಯವೈಖರಿಯಲ್ಲೂ ಕಾಣಿಸಿಕೊಂಡರೆ ಅದಕ್ಕಿಂತ ದೊಡ್ಡ ಬದಲಾವಣೆ ಮತ್ತೊಂದಿಲ್ಲ. ಇತ್ತೀಚಿನ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶಿಕ್ಷಕರು ತಮ್ಮ ಹೆಸರಿನ ಮುಂದೆ ಖಿಡಿ. ಎಂಬ ಗೌರವಸೂಚಕ ಪದವನ್ನು ಬಳಸಲು ಅವಕಾಶ ನೀಡಿರುವ ನಿರ್ಧಾರವೂ ವಿಭಿನ್ನವಾದದ್ದು.
ಇದು ಯಾವುದೇ ಶೈಕ್ಷಣಿಕ ಪದವಿ ಅಲ್ಲ. ಆದರೆ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರಕ್ಕೆ ಗೌರವ ಸೂಚಿಸುವ ಸಾಂಕೇತಿಕ ಕ್ರಮ. ರಾಜ್ಯದ ಸುಮಾರು 4.5 ಲಕ್ಷ ಶಿಕ್ಷಕರ ಸೇವೆಯನ್ನು ಗುರುತಿಸುವ ಪ್ರಯತ್ನವಾಗಿ ಇದನ್ನು ನೋಡಬಹುದು. ಶಿಕ್ಷಕರ ಗೌರವವನ್ನು ಹೆಚ್ಚಿಸುವುದರ ಜತೆಗೆ ಅವರ ಕೆಲಸದ ಪರಿಸ್ಥಿತಿಗಳು, ಶಿಕ್ಷಣದ ಗುಣಮಟ್ಟ ಮತ್ತು ಸರಕಾರಿ ಶಾಲೆಗಳ ಬಲವರ್ಧನೆಯತ್ತಲೂ ಸಮಾನ ಗಮನ ಮುಂದುವರಿಯಬೇಕೆಂಬುದು ನನ್ನ ಆಶಯ.
ಸ್ವಾತಂತ್ರ್ಯ ದಿನದಂದು ಮುಖ್ಯಮಂತ್ರಿ ಘೋಷಿಸಿದ ಉದ್ಯೋಗ, ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಮತ್ತು ಬೆಂಗಳೂರು ಹೊರತಾದ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಕೋನವೂ ಭವಿಷ್ಯದ ಕರ್ನಾಟಕದ ಬಗ್ಗೆ ಸರಕಾರ ಹೊಂದಿರುವ ಚಿಂತನೆಗೆ ಸಾಕ್ಷಿಯಾಗಿದೆ. ತಂತ್ರಜ್ಞಾನದ ಬೆಳವಣಿಗೆ ಬೆಂಗಳೂರಿನಲ್ಲೇ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳು ಮತ್ತು ಪ್ರದೇಶಗಳಿಗೆ ತಲುಪಬೇಕು. ಯುವಕರಿಗೆ ಹೊಸ ಕೌಶಲ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು ಎಂಬುದು ಇಂದಿನ ಅಗತ್ಯ.
ನೂರು ದಿನಗಳಲ್ಲಿ ತೆಗೆದುಕೊಂಡ ನಿರ್ಧಾರಗಳು ನೆಲಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಾಗ ಮಾತ್ರ ಅವುಗಳ ನಿಜವಾದ ಫಲ ಜನರಿಗೆ ತಲುಪಲಿದೆ. ಇದಕ್ಕೆ ಮುಖ್ಯ ಮಂತ್ರಿಗಳ ವೇಗಕ್ಕೆ ತಕ್ಕಂತೆ ಎಲ್ಲರೂ ಹೆಜ್ಜೆ ಹಾಕಬೇಕಿದೆ. ಆದರೆ ಆರಂಭವನ್ನು ನೋಡಿದಾಗ ಒಂದು ಸಂಗತಿ ಸ್ಪಷ್ಟವಾಗಿದೆ. ಆಡಳಿತ ಜನರ ಬಳಿಗೆ ಹೋಗಬೇಕು, ಯುವಕರಿಗೆ ಅವಕಾಶ ಸಿಗಬೇಕು, ವಿದ್ಯಾರ್ಥಿಗಳಿಗೆ ಬೆಂಬಲ ದೊರೆಯಬೇಕು, ದುಡಿಯುವ ವರ್ಗಕ್ಕೆ ಗೌರವ ಸಿಗಬೇಕು ಮತ್ತು ಅಭಿವೃದ್ಧಿಯ ಫಲ ರಾಜ್ಯದ ಎಲ್ಲ ಭಾಗಗಳಿಗೂ ತಲುಪಬೇಕು ಎಂಬ ಆಶಯಕ್ಕೆ ಸರಕಾರ ಒತ್ತು ನೀಡುತ್ತಿದೆ.
ನೂರು ದಿನಗಳು ಒಂದು ಆರಂಭ ಮಾತ್ರ. ಈ ಆರಂಭವನ್ನು ಇನ್ನಷ್ಟು ಪರಿಣಾಮಕಾರಿ ಆಡಳಿತ ವಾಗಿ ಪರಿವರ್ತಿಸುವ ಜವಾಬ್ದಾರಿ ಈಗ ಸರಕಾರದ ಮುಂದಿದೆ. ಜನರ ವಿಶ್ವಾಸವನ್ನು ಉಳಿಸಿ ಕೊಂಡು, ಘೋಷಣೆಗಳನ್ನು ಅನುಷ್ಠಾನಕ್ಕೆ ತಂದು, ಕರ್ನಾಟಕವನ್ನು ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಜನಪರ ಆಡಳಿತದ ಸಮನ್ವಯದ ಮಾದರಿ ರಾಜ್ಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರಕಾರ ಮುಂದುವರಿಯಲಿದೆ ಎಂಬ ವಿಶ್ವಾಸ ಈಗ ಜನರಿಗೂ ಬಂದಿದೆ.