Vinayaka V Bhat Column: ಆತ್ಮಗೌರವವನ್ನೇ ಬಲಿಕೊಟ್ಟ ಮೇಲೆ, ಬದುಕಿದ್ದೂ ಸತ್ತಂತೆ
‘ವಿದ್ಯಾರ್ಥಿಗಳು ಮೌಲ್ಯವನ್ನ ಉಳಿಸಿಕೊಳ್ಳಬೇಕು’ ಎಂದು ಭಾಷಣಮಾಡುವ ಮಂತ್ರಿ ಮಹೋದಯರು ಗಳು, ಸದನದ ಕಲಾಪವನ್ನು ವೀಕ್ಷಿಸಲು ಶಾಲಾ ಕಾಲೇಜುಗಳ ಅದೇ ವಿದ್ಯಾರ್ಥಿ ಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಬಂದು ಕುಳಿತಿರುತ್ತಾರೆ ಎನ್ನುವುದನ್ನೂ ಮರೆತು ಬೇಜವಾಬ್ದಾರಿಯಿಂದ ವರ್ತಿಸುವುದು ನಿಜಕ್ಕೂ ಖೇದಕರ.


ವಿದ್ಯಮಾನ
vinayakavbhat@autoaxle.com
ಕೆಲವು ದಿನಗಳಿಂದ ಕರ್ನಾಟಕದಲ್ಲಿ ವಿಧಾನಸಭೆಯ ಮಳೆಗಾಲದ ಅಧಿವೇಶನ ನಡೆಯುತ್ತಿದೆ. ನಾವು ಬೇಡವೆಂದರೂ ವಾರ್ತೆಗಳನ್ನು ನೋಡುವಾಗ ಸದನದ ಕಲಾಪದ ತುಣುಕುಗಳು ನಮಗೆ ಸಿಕ್ಕಿಬಿಡುತ್ತವೆ. ಹಾಗೆ ನೋಡುವಾಗ ಈ ಬಾರಿಯ ಕಲಾಪದಲ್ಲಿ ನನಗೆ ವಿಶೇಷವಾಗಿ ಗೋಚರಿಸಿದ್ದು ಅಂದರೆ, ಬಹುತೇಕ ಎಲ್ಲರೂ ಹತ್ತಿರದ ನೆಂಟರ ಮನೆಯ ಮದುವೆಯಲ್ಲಿ ಮಾತಾಡಿಕೊಳ್ಳುವಂತೆ, ಪರಸ್ಪರ ಏಕವಚನದಲ್ಲಿ ಮಾತನಾಡಿಕೊಳ್ಳುತ್ತಿದ್ದುದು.
ಮೊದಲೆಲ್ಲ, ರಾಜ್ಯದ ಜನಪ್ರತಿನಿಧಿಗಳಲ್ಲಿ ಹಿರಿಯರು ಎಂದುಕೊಂಡ ಒಬ್ಬರಿಗೋ ಅಥವಾ ಇಬ್ಬರಿಗೋ ಈ ವ್ಯಾಧಿ ಇರುತ್ತಿತ್ತು. ಈಗ ಹಾಗಲ್ಲ, ಈ ವ್ಯಾಧಿ ಸಾಂಕ್ರಾಮಿಕವಾಗಿ ಸರ್ವರನ್ನೂ ಆವರಿಸಿಬಿಟ್ಟಿದೆ ಅಂತ ಅನಿಸಿತು. ಹಿರಿಕಿರಿಯರೆನ್ನದೇ ಪರಸ್ಪರ ಎಲ್ಲರೂ ಏಕವಚನದ ಮಾತನಾ ಡುವುದು ರಾಜ್ಯದ ರಾಜಕಾರಣಿಗಳಿಗೆ New normal ಆಗಿಬಿಟ್ಟಂತೆ ಕಂಡಿತು.
‘ಸಂಸರ್ಗಜಾಃ ದೋಷ ಗುಣಾಃ ಭವಂತಿ’ ಎನ್ನುವ ಮಾತು ನಿಜವೇ ಅಯಿತು. ಅಂದರೆ, ಗುಣ-ದೋಷಗಳೆರಡೂ ಸಹವಾಸದಿಂದ ಉಂಟಾಗುತ್ತವೆ ಅಂತ ಅರ್ಥ. ನಾವು ಯಾರನ್ನು ಪ್ರತಿನಿಧಿಸಿ ಇಲ್ಲಿ ಕುಳಿತುಕೊಂಡಿದ್ದೇವೆ, ನಮ್ಮ ಸ್ಥಾನಮಾನ ಏನು? ನೇರ ಪ್ರಸಾರದಿಂದಾಗಿ ಸಾರ್ವಜನಿಕರು ನಮ್ಮನ್ನು ಪರಾಂಬರಿಸುತ್ತಿರುತ್ತಾರೆ ಎನ್ನುವ ಯಾವ ಕಲ್ಪನೆಯೂ ಇಲ್ಲದೇ ವರ್ತಿಸುವುದನ್ನು ನೋಡುವಾಗ ಅವರಲ್ಲಿ ಮೌಲ್ಯಗಳು ಯಾವ ವೇಗದಲ್ಲಿ ಜಾರುತ್ತಿವೆ ಎನ್ನುವುದು ತಿಳಿಯುತ್ತದೆ.
ಇದನ್ನೂ ಓದಿ: Vinayaka V Bhat Column: ಸಭಾಮರ್ಯಾದೆಯನ್ನು ಸರ್ವಥಾ ಮರೆಯಬಾರದು
‘ವಿದ್ಯಾರ್ಥಿಗಳು ಮೌಲ್ಯವನ್ನ ಉಳಿಸಿಕೊಳ್ಳಬೇಕು’ ಎಂದು ಭಾಷಣಮಾಡುವ ಮಂತ್ರಿ ಮಹೋದ ಯರುಗಳು, ಸದನದ ಕಲಾಪವನ್ನು ವೀಕ್ಷಿಸಲು ಶಾಲಾ ಕಾಲೇಜುಗಳ ಅದೇ ವಿದ್ಯಾರ್ಥಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಬಂದು ಕುಳಿತಿರುತ್ತಾರೆ ಎನ್ನುವುದನ್ನೂ ಮರೆತು ಬೇಜವಾಬ್ದಾರಿ ಯಿಂದ ವರ್ತಿಸುವುದು ನಿಜಕ್ಕೂ ಖೇದಕರ.
ಖಾಸಗಿಯಾಗಿ ಇವರುಗಳು ಹೇಗೆ ಬೇಕಾದರೂ ಇರಲಿ, ಸಾರ್ವಜನಿಕವಾಗಿ ಅಗೌರವಸೂಚಕವಾದ ಏಕವಚನದ ಪದಪ್ರಯೋಗ ಮಾಡುವುದು ಸೌಜನ್ಯವಲ್ಲ ಎನ್ನುವ ಸಾಮಾನ್ಯ ಜ್ಞಾನವಾದರೂ ಬೇಕಲ್ಲ ಇವರುಗಳಿಗೆ. ಆಶ್ಚರ್ಯವೆಂದರೆ, ಹಾಗೆ ಏಕವಚನದಲ್ಲಿ ಕರೆಸಿಕೊಳ್ಳುವವರಿಗಾದರೂ ಆತ್ಮಗೌರವದ ಕಡೆಗೆ ಕಿಂಚಿತ್ತೂ ಗಮನವಿದ್ದಂತೆ ಕಾಣುವುದಿಲ್ಲ.
ಸದನದಲ್ಲಿ ಮಾತನಾಡಲು ಅನೇಕ ನಿಯಮಗಳಿರುತ್ತವೆ. ಯಾರಾದರೂ ಸದಸ್ಯರುಗಳು ಸದನದಲ್ಲಿ ಅಸಾಂವಿಧಾನಿಕ ಪದಗಳ ಬಳಕೆ ಮಾಡಿದರೆ ಅದನ್ನು ಕಡತದಿಂದ ತೆಗೆದುಹಾಕಲಾಗತ್ತದೆ. ಆದರೆ, ಸದಭಿರುಚಿಯಿಂದ ಕೂಡಿರದ ಹಾಗೂ ಸಮಾಜಕ್ಕೆ ಕೆಟ್ಟ ಸಂದೇಶ ಕೊಡುವ ಸದಸ್ಯರ ಏಕವಚನದ ಸಂಭಾಷಣೆಯ ಕುರಿತು ಸದನದ ನಿಯಮಗಳು ಏನು ಹೇಳುತ್ತವೆಯೋ ಗೊತ್ತಿಲ್ಲ.

ಸಭಾನಾಯಕರು ಇದಕ್ಕೆ ಮಾದರಿಯಾಗಿರಬೇಕು ಅಥವಾ ಸಭಾಪತಿಗಳಾದರೂ ಮಧ್ಯಪ್ರವೇಶಿಸಿ ಸದಸ್ಯರ ಭಾಷೆಯಲ್ಲಿ ಸುಸಂಸ್ಕಾರವನ್ನು ಮೂಡಿಸಬೇಕು. ದೊಡ್ಡವರೆನಿಸಿಕೊಂಡವರ ನಡವಳಿಕೆ ಯಂತೆ ಲೋಕವೂ ವರ್ತಿಸುತ್ತದೆ (ಯದ್ಯದಾಚರತಿ ಶ್ರೇಷ್ಠಃ... ಲೋಕಃಸ್ತದನುವರ್ತತೇ) ಎನ್ನುವ ತಿಳಿವಳಿಕೆಯನ್ನು ಹಿರಿಯರಾದರೂ ಅರಿಯಬೇಕು.
ಅದಾವುದೂ ಇತ್ತೀಚಿನ ಸದನ ಕಲಾಪಗಳಲ್ಲಿ ಕಂಡುಬರುತ್ತಿಲ್ಲ. ಈ ‘ನೀನು...ತಾನು’ ಎನ್ನುವ ಭಾಷಾಪ್ರಯೋಗವು ಮಾಡುವವರಿಗೂ ಮಾಡಿಸಿಕೊಳ್ಳುವವರಿಗೂ ಒಪ್ಪಿತವಾದಂತೆ ಕಂಡು ಬರುತ್ತಿದೆ. ಭಾಷೆಯಲ್ಲಿನ ವಚನವೈವಿಧ್ಯ ಎನ್ನುವುದು ರಾಜಕಾರಣಿಗಳಿಗೆ ಗೊತ್ತಿಲ್ಲವೆಂತಲ್ಲ.
ತಮ್ಮ ಮಕ್ಕಳ ಕುರಿತು ಮಾತನಾಡುವಾಗ ಬಹುವಚನವನ್ನು ಬಳಸಿಯೇ ಅವರುಗಳು ಮಾತನಾಡು ವುದು. ಆದರೆ ‘ಬೇರೆಯವರ ವಿಷಯದಲ್ಲಿ ಅಗೌರವ ತೋರುವ ಏಕವಚನಗಳ ಪದಪ್ರಯೋಗ ನಡೆಯುತ್ತೆ’ ಎನ್ನುವ ಭಾವನೆ ಇವರದ್ದು, ಅಷ್ಟೇ! ಬಹುಶಃ ವೀರಪ್ಪ ಮೊಯ್ಲಿಯವರು ಮುಖ್ಯ ಮಂತ್ರಿಯಾಗಿದ್ದ ಕಾಲವದು. ಸದನದಲ್ಲಿ ರಾಮಕೃಷ್ಣ ಹೆಗಡೆಯವರು ಮತ್ತು ಕಾಂಗ್ರೆಸ್ಸಿನ ರಮೇಶ್ ಎಂಬ ಮಂತ್ರಿಯ ಮಧ್ಯೆ, ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರಿಗೆ ಸಂಬಂಧಿಸಿದ ಯಾವುದೋ ವಿಷಯದ ಕುರಿತು ಏರಿದ ಧ್ವನಿಯಲ್ಲಿ ತಾಸುಗಟ್ಟಲೆ ವಾದ ವಿವಾದವಾಗುತ್ತಿತ್ತು.
ನಾನೂ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಕುತೂಹಲದಿಂದ ಇವರ ವಾದ ವಿವಾದಗಳನ್ನು ಕೇಳಿಸಿಕೊಳ್ಳುತ್ತಿz. ಆದರೆ ಒಂದೇ ಒಂದು ಅಪಶಬ್ದ ಆ ವಾದದಲ್ಲಿ ನನಗೆ ಕೇಳಿಬರಲಿಲ್ಲ. ಪರಸ್ಪರ ಬಹುವಚನದ ಪದಪ್ರಯೋಗವೇ ವಾದದುದ್ದಕ್ಕೂ ಕೇಳಿ ಬಂತು. ಈಗ ಹಾಗಲ್ಲ, ಎಲ್ಲರೂ ‘ನೀನು.. ತಾನು’ ಎಂದೇ ಮಾತನಾಡುತ್ತಾರೆ.
ನಾನು ಹಾಸನದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ನಾಗಿ ಕೆಲಸ ಮಾಡುತ್ತಿದ್ದಾಗ ಒಮ್ಮೆ, ಇದ್ದಕ್ಕಿದ್ದ ಹಾಗೆ ದೂರವಾಣಿ ಕರೆಯೊಂದು ಬಂತು. ನೋಡಿ ದರೆ, ಅತ್ತಕಡೆಯಿಂದ ಮಾಜಿ ಪ್ರಧಾನಿ ದೇವೇಗೌಡರಿದ್ದರು. ಸಾಮಾನ್ಯವಾಗಿ, ಮುಖ ಸಿಂಡರಿಸಿ ಕೊಂಡು, ಸಿಡುಕುತ್ತ ಅಸಹನೆಯಿಂದಲೇ ಮಾತನಾಡುವ ದೇವೇಗೌಡರನ್ನು ದೂರದರ್ಶನದಲ್ಲಿ ನಾವು ನೋಡಿದ್ದೇ ಹೆಚ್ಚು.
“ವಿನಾಯಕ ಭಟ್ಟರೇ ನಮಸ್ಕಾರ, ನಾನು ಮಾಜಿ ಪ್ರಧಾನಿ ದೇವೇಗೌಡ ಮಾತನಾಡುತ್ತಿರುವುದು. ನನ್ನ ಮಗ ರಾಜ್ಯದ ಮುಖ್ಯಮಂತ್ರಿಯಿzರೆ, ಇನ್ನೊಬ್ಬ ಮಗ ಮಂತ್ರಿಯಿದ್ದಾರೆ, ಹಾಗಾಗಿ ನಮ್ಮ ಊರಿನ ಜನ ಬಂದು ಏನಾದರೂ ಸಹಾಯ ಕೇಳುತ್ತಿರುತ್ತಾರೆ. ಹಾಗೆಯೇ ಒಬ್ಬಾತ ಹಾಸನದಿಂದ ನನ್ನಲ್ಲಿಗೆ ಬಂದುಬಿಟ್ಟಿzನೆ, ಅವನ ಮೊಮ್ಮಗನಿಗೆ ನಿಮ್ಮ ಕಂಪನಿಯಲ್ಲಿ ಕೆಲಸ ಕೊಡಿಸಿ ಎಂದು ಕೇಳುತ್ತಿzನೆ. ಅನ್ಯಥಾ ಭಾವಿಸಬೇಡಿ, ಸಾಧ್ಯವಾದರೆ ಆತನಿಗೊಂದು ಸಹಾಯ ಮಾಡಿ" ಎಂದು ಹೇಳಿ ಸಂಭಾಷಣೆ ಮುಗಿಸಿದ್ದರು.
ದೇವೇಗೌಡರೂ ಹೀಗೆ ಮಾತನಾಡಬಹುದು ಎಂದು ನಾನು ಖಂಡಿತ ಊಹಿಸಿರಲಿಲ್ಲ. ಆಗತಾನೇ ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಿಳಿದು ಬಂದಿದ್ದ ದೇವೇಗೌಡರು, “ನನ್ನ ಕ್ಷೇತ್ರದ ಮತದಾರನ ಮೊಮ್ಮಗನಿಗೆ ನೀನು ಕೆಲಸ ಕೊಡಲೇಬೇಕಪ್ಪಾ" ಎಂದು ಏಕವಚನದಲ್ಲಿ, ಕೇವಲ ಒಂದು ಸಂಸ್ಥೆ ಯ ಅಧಿಕಾರಿಯಾಗಿದ್ದ ನನಗೆ ಆಜ್ಞೆ ಮಾಡಬಹುದಿತ್ತು.
ಆದರೆ, ಅಂದು ದೇವೇಗೌಡರು ನನ್ನ ಜತೆಗೆ ಅತ್ಯಂತ ಗೌರವದಿಂದ, ಸೌಜನ್ಯದಿಂದ ನಡೆದು ಕೊಂಡಿದ್ದರು. ಈ ಒಂದು ಸೌಜನ್ಯಯುತ ಸಂಭಾಷಣೆಯಿಂದಾಗಿ, ದೇವೇಗೌಡರ ಕುರಿತಾಗಿ ನನಗಿದ್ದ ಅಭಿಪ್ರಾಯವೇ ಬದಲಾಗಿ ಹೋಯಿತು. ಎಲ್ಲ ರಾಜಕಾರಣಿಗಳೂ ಒಂದೇ ಥರ ಅಲ್ಲ ಎನ್ನುವುದನ್ನು ತಿಳಿಸಲು ಮತ್ತು ಒಂದು ಸೌಜನ್ಯಯುಕ್ತ ಪ್ರಿಯವಾಕ್ಯವು ರಾಜಕಾರಣಿಯೊಬ್ಬನ ಕುರಿತಾದ ಅಭಿಪ್ರಾಯವನ್ನೇ ಬದಲಿಸಲು ಕಾರಣವಾಗಿಬಿಡುತ್ತದೆ ಎನ್ನುವುದನ್ನು ಹೇಳಲು ಈ ಘಟನೆಯನ್ನು ಉಲ್ಲೇಖಿಸುತ್ತಿದ್ದೇನೆ.
ಹದಿನಾರು ವರ್ಷದ ನನ್ನ ಮಗ, ತನ್ನ ಆರನೇ ವಯಸ್ಸಿನಿಂದ ಮೈಸೂರಿನಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾನೆ. ಅವನು ತರಬೇತಿ ಪಡೆಯುವ ‘ಕ್ಲಬ್’ನಲ್ಲಿ ನೂರಾರು ಜನ ಸಣ್ಣ ಸಣ್ಣ ಮಕ್ಕಳು ತರಬೇತಿ ಪಡೆಯತ್ತಾರೆ. ಅಲ್ಲಿ ಗದಾಧರನ್ ಎಂಬ ಹಿರಿಯ ತರಬೇತುದಾರರು ಈ ಮಕ್ಕಳನ್ನು ಇಂದಿಗೂ “ರೀ ಸುಧನ್ವಾ ಬನ್ನಿ ಇಲ್ಲಿ, ಸರಿಯಾಗಿ ಕಾಲು ಮುಂದಿಟ್ಟು ಆಡಿ" ಎಂದು ಬಹುವಚನ ದಿಂದಲೇ ಸಂಬೋಧಿಸುತ್ತಾರೆ.
ಮಕ್ಕಳನ್ನು ಬೈದು ತಿದ್ದುವಾಗಲೂ ಅವರು ಯಾರನ್ನೂ ಏಕವಚನದಿಂದ ಕರೆದಿದ್ದನ್ನು ನಾನಂತೂ ನೋಡಿಲ್ಲ. ಹಾಗೇಕೆ ಎಂದು ಕೇಳಿದಾಗ, “ನಾನೇ ಸರಿಯಾಗಿ ಮಾತನಾಡದಿದ್ದರೆ, ನನ್ನ ಮಕ್ಕಳು ಕಲಿಯುವುದು ಯಾರಿಂದ..." ಎನ್ನುವ ಸರಳ ಉತ್ತರ ಗದಾಧರನ್ ಅವರಿಂದ ಬಂತು. ಸಮಾಜವನ್ನು ತಿದ್ದುವ ಜಾಗದಲ್ಲಿರುವವರಿಗೆ ಈ ಸೂಕ್ಷ್ಮಗಳು ಯಾಕೆ ಅರ್ಥವಾಗುವುದಿಲ್ಲವೋ ತಿಳಿಯದು.
ಇನ್ನು, ಕಂಡಕಂಡಲ್ಲಿ ರಾಜಕಾರಣಿಗಳ ಮುಂದೆ ಮೈಕು ಹಿಡಿಯುವ ಮಾಧ್ಯಮಗಳ ವರದಿ ಗಾರರನ್ನು ನಾವು ನಿತ್ಯ ನೋಡುತ್ತೇವೆ. ಹೀಗೆ ರಾಜಕಾರಣಿಗಳಿಂದ ‘ಬೈಟ್’ ತೆಗೆದುಕೊಳ್ಳುವ ಸಲು ವಾಗಿ ವಾಹಿನಿಗಳ ಹಿರಿಯರಾರೂ ಬರುವುದಿಲ್ಲ, ಎಳೆನಿಂಬೆಕಾಯಿಗಳು ಮಾತ್ರ ಇಂಥ ಸಂದರ್ಭ ಗಳಲ್ಲಿ ರಾಜಕಾರಣಿಗಳ ಮುಂದೆ ಬಂದು ನಿಲ್ಲುವುದು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ತಿಳಿಯು ತ್ತದೆ.
“ಸರ್, ನಿಮ್ಮ ವಿರುದ್ಧ ಭ್ರಷ್ಟಾಚಾರದ ಅಪವಾದ ಕೇಳಿಬರ್ತಿದೆ, ಅದಕ್ಕೆ ನೀವು ಏನು ಹೇಳುತ್ತೀರಿ?" ಎಂದು ಕೇಳುತ್ತಾರೆ. ಅದಕ್ಕೆ, “ಏಯ! ನೀನ್ಯಾರಯ್ಯಾ ಅದನ್ನು ಕೇಳುವುದಕ್ಕೆ? ಸುಮ್ಮನಿರಯ್ಯಾ" ಎನ್ನುವ ಉತ್ತರ ರಾಜಕಾರಣಿಗಳಿಂದ ಬರುತ್ತದೆ. ನಮ್ಮ ರಾಜ್ಯದ ಕೆಲ ರಾಜಕಾರಣಿಗಳು ಇಂಥ ಕಿರಿಯ ಪತ್ರಿಕಾ ವರದಿಗಾರರಿಗೆ, ಐಎಎಸ್/ಐಪಿಎಸ್ ಅಧಿಕಾರಿಗಳಿಗೆ ಏಕವಚನದ ಸಂಬೋಧಿಸು ವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ.
ಅದನ್ನು ನೋಡುವಾಗ, ಈ ಪತ್ರಕರ್ತಮಿತ್ರರಿಗೆ ಆತ್ಮಗೌರವ ಚುಚ್ಚುವುದಿಲ್ಲವೇ ಎಂದೆನಿಸುತ್ತದೆ. ದುರದೃಷ್ಟವೆಂದರೆ, ಈ ವರದಿಗಾರರು ತಮಗೆ ಹೀಗೆ ಏಕವಚನದಲ್ಲಿ ಸಂಬೋಧಿಸುವ ರಾಜಕಾರಣಿ ಗಳನ್ನು ಪ್ರತಿರೋಽಸುವುದೇ ಇಲ್ಲ. ಮಂತ್ರಿ ಮಹೋದಯರುಗಳು ತಮ್ಮ ಹತ್ತಿರ ಮಾತನಾಡಿದರು ಎನ್ನುವುದರ ಅವರು ತೃಪ್ತಿಗೊಂಡಂತೆ ಕಾಣುತ್ತದೆ.
ಮೊದಲನೆಯದಾಗಿ, ಪತ್ರಕರ್ತ ಅಥವಾ ಅಧಿಕಾರಿ ಅಂತಲ್ಲ, ಸಾಮಾನ್ಯ ವ್ಯಕ್ತಿಯೂ ಆತ್ಮಗೌರವ ವನ್ನು ಯಾವುದೇ ಸಂದರ್ಭದಲ್ಲಿ ತಗ್ಗಿಸಿಕೊಳ್ಳಬಾರದು. ಆತ್ಮಗೌರವವನ್ನೇ ಬಲಿಕೊಟ್ಟ ಮೇಲೆ ಇನ್ನು ಉಳಿಯುವುದು ಅಂತ ಏನೂ ಇರುವುದಿಲ್ಲ. ರಾಜಕಾರಣಿಗಳನ್ನು ತಿದ್ದಿತೀಡಿ, ಅವರ ಮುಖಕ್ಕೆ ಕನ್ನಡಿ ಹಿಡಿಯಬೇಕಾದ ಸ್ಥಾನದಲ್ಲಿರುವ ಪತ್ರಕರ್ತರೇ ರಾಜಕಾರಣಿಗಳ ಇಂಥ ಅನಾಗರಿಕ ವರ್ತನೆಗಳಿಗೆ ಪ್ರತಿರೋಧ ಒಡ್ಡದಿದ್ದರೆ, ಸಮಾಜದಲ್ಲಿ ಇನ್ಯಾರಿಂದ ಅದನ್ನು ನಿರೀಕ್ಷಿಸಲು ಸಾಧ್ಯ ಹೇಳಿ? ಒಬ್ಬ ವರದಿಗಾರ ಅಥವಾ ಹಿರಿಯ ಅಧಿಕಾರಿ ಧೈರ್ಯ ಮಾಡಿ, “ಸರ್, ಹೀಗೆ ಏಕವಚನದಲ್ಲಿ ಮಾತಾಡಬೇಡಿ, ನನಗೆ ಗೌರವಕೊಟ್ಟು ಮಾತನಾಡಿ" ಎಂದು ಒಮ್ಮೆ ಹೇಳಿ ನೋಡಲಿ!
ರಾತ್ರಿ ಬೆಳಗಾಗುವುದರೊಳಗೆ ರಾಜಕಾರಣಿಗಳು ಬದಲಾಗದಿದ್ದರೆ ಹೇಳಿ. ಆ ರಾಜಕಾರಣಿಗಳು ಈ ಯುವ ಪತ್ರಕರ್ತರನ್ನು ಪಾಲಿಸಿ ಪೋಷಿಸಿದವರಲ್ಲ, ವಿದ್ಯೆ ಕಲಿಸಿದ ಆಚಾರ್ಯರಲ್ಲ, ಸಂಬಳ ಕೊಡುವ ಉದ್ಯೋಗದಾತರೂ ಅಲ್ಲ. ಹಾಗಿದ್ದಾಗ, ಅವರಿಂದ ಏಕವಚನದಲ್ಲಿ ಕರೆಸಿಕೊಳ್ಳುವ ಅಗತ್ಯವಾದರೂ ಏನಿರುತ್ತದೆ ಇವರುಗಳಿಗೆ? ಇವರುಗಳ ಸ್ವಗೌರವ ಒಂದು ಕಡೆಯಾದರೆ, ಇವರು ಗಳು ಕೈಯಲ್ಲಿ ಹಿಡಿದಿರುವ ಮೈಕಿನ ಮೇಲೆ ಒಂದು ವಾಹಿನಿಯ ಮುದ್ರೆ ಒತ್ತಿರುತ್ತದೆ, ಆ ವಾಹಿನಿ ಯನ್ನು ಇವರುಗಳು ಪ್ರತಿನಿಧಿಸುತ್ತಿರುತ್ತಾರೆ.
ಹಾಗಾಗಿ, ತಮ್ಮ ಕೈಯಲ್ಲಿರುವುದು ಬರೀ ಒಂದು ಮೈಕಲ್ಲ, ಸ್ವಂತ ಮರ್ಯಾದೆ ಹಾಗೂ ತಾವು ಪ್ರತಿನಿಧಿಸುತ್ತಿರುವ ಸಂಸ್ಥೆಯ ಮರ್ಯಾದೆ ಎರಡೂ ತಮ್ಮ ಕೈಯಲ್ಲಿರುತ್ತದೆ ಎನ್ನುವ ಪರಿಜ್ಞಾನ ವಾದರೂ ಇಂಥ ಪತ್ರಕರ್ತರಿಗೆ ಇರಬೇಕು. ಇನ್ನು, ಇದನ್ನೆಲ್ಲ ನೋಡುವ ಆ ವಾಹಿನಿಗಳ ಮುಖ್ಯಸ್ಥರೂ ಸುಮ್ಮನಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ.
‘ಸಮಾಜದಲ್ಲಿ ನಾವು ಎಲ್ಲಕ್ಕೂ ಅತೀತರು, ನಾವು ಹೇಗೆ ಬೇಕಾದರೂ ನಡೆದುಕೊಳ್ಳಬಹುದು’ ಎಂದುಕೊಳ್ಳುವ ದೊಡ್ಡ ದೊಡ್ಡ ರಾಜಕಾರಣಿಗಳನ್ನು ಮಾತನಾಡಿಸುವಾಗ, ಅಲ್ಲಿಗೆ ಹಿರಿಯ ಪತ್ರಕರ್ತರನ್ನು ಕಳಿಸಬೇಕು. ಅದಲ್ಲದಿದ್ದರೆ, ತಮ್ಮ ವರದಿಗಾರರ ಕುರಿತ ರಾಜಕಾರಣಿಗಳ ಹಗುರವಾದ ವರ್ತನೆಗಳನ್ನು ವಾಹಿನಿಗಳ ಅಥವಾ ಪತ್ರಿಕೆಗಳ ಮುಖ್ಯಸ್ಥರುಗಳು ಖಡಾಖಂಡಿತ ವಾಗಿ ಖಂಡಿಸಿ ಅವರುಗಳಿಗೆ ಬಿಸಿಮುಟ್ಟಿಸಬೇಕು. ಈ ಎರಡನ್ನೂ ಮಾಡಲಾಗದಿದ್ದರೆ, ಮುಂದೆ ಪತ್ರಿಕಾ ಮರ್ಯಾದೆ ಎನ್ನುವುದು ಉಳಿಯುವುದಾದರೂ ಹೇಗೆ? ನಮ್ಮ ನಮ್ಮ ಸಂಸ್ಥೆಯ ಮರ್ಯಾದೆಯನ್ನು ನಾವೇ ಕಾಪಾಡಿಕೊಳ್ಳಲು ಪ್ರಯತ್ನಿಸದಿದ್ದರೆ, ಇನ್ನಾರು ಮಾಡಿಯಾರು ಆ ಕೆಲಸವನ್ನು ಹೇಳಿ? ರಾಜಕಾರಣಿಗಳನ್ನು, ಸಮಾಜವನ್ನು ತಿದ್ದುವ ಜವಾಬ್ದಾರಿಯಿರುವವರೇ ಅವರ ದರ್ಪಕ್ಕೆ ತಮ್ಮ ಕಿರಿಯ ಸಹೋದ್ಯೋಗಿಗಳ ಆತ್ಮಗೌರವವನ್ನು ಬಲಿಕೊಟ್ಟರೆ, ಮುಂದೆ ಆತ್ಮ ಗೌರವವನ್ನು ಹೊಂದಿರುವ ನಿರ್ಭೀತ ಪತ್ರಕರ್ತನನ್ನು ಸಮಾಜ ನಿರೀಕ್ಷೆ ಮಾಡಲು ಸಾಧ್ಯ ವಾದರೂ ಉಂಟೇ? ಈ ಮಟ್ಟದ ಸಂವೇದನಾರಾಹಿತ್ಯ ಒಬ್ಬ ಪತ್ರಕರ್ತನಿಗೆ ಅಥವಾ ಮಾಧ್ಯಮ ಸಮೂಹಕ್ಕೆ ಒಪ್ಪುವ ಲಕ್ಷಣವಲ್ಲ.
“ಒಮ್ಮೆ ಪತ್ರಕರ್ತನಾದವನು ಎಂದಿಗೂ ರಾಜಕಾರಣಿಗಳ ಕಾಲಿಗೆ ಬೀಳಬಾರದು" ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ಟರು, ಹಿಂದೆ ಪತ್ರಕರ್ತರಾಗಿ ಹೆಸರುಮಾಡಿದ್ದ, ಈಗ ರಾಜಕಾರಣಿ ಯಾಗಿರುವ ಪ್ರತಾಪ್ ಸಿಂಹ ಅವರಿಗೆ ಒಂದು ವೇದಿಕೆಯಲ್ಲಿ ಕಿವಿಮಾತು ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪತ್ರಿಕಾಧರ್ಮಕ್ಕೆ ಇರುವ ಪಾವಿತ್ರ್ಯ ಅಂಥದ್ದು.
ಈ ತರಹದ ಸೂಕ್ಷ್ಮ ಸಂವೇದನೆಗಳನ್ನು ಕಳೆದುಕೊಂಡ ಮೇಲೆ ಆತ ಖಂಡಿತ ಪತ್ರಕರ್ತನಾಗಿ ಉಳಿಯಲಾರ. ನಾವೆಲ್ಲರೂ ಎದರೂ ಒಂದುಕಡೆ ಕೆಲಸ ಮಾಡುವವರೇ ಆಗಿದ್ದೇವೆ. ಅದು ಕಾರ್ಖಾನೆಯಗಿರಬಹುದು, ಬ್ಯಾಂಕ್ ನಲ್ಲಾಗಿರಬಹುದು, ಸರಕಾರಿ ಕಚೇರಿಯಲ್ಲಿರಬಹುದು ಅಥವಾ ಮಾಧ್ಯಮಗಳಗಿರಬಹುದು. ಇನ್ನು, ಕೃಷಿ ಕೆಲಸಕ್ಕೆ ಅಥವಾ ಮನೆಗೆಲಸಕ್ಕೆ ಹೋಗು ವವರೂ ಇರುತ್ತಾರೆ.
ಸಾಮಾನ್ಯವಾಗಿ ಜನರು ಕೆಲಸಕ್ಕೆ ಹೋಗುವುದಕ್ಕೆ ಮುಖ್ಯಕಾರಣವೇನು ಎಂದು ನೋಡುವು ದಾದರೆ, ಅದು ಜೀವನ ನಿರ್ವಹಣೆಯೇ ಆಗಿರುತ್ತದೆ. ಹೊಟ್ಟೆಪಾಡು ಎಂಬುದು ಕೆಲಸಕ್ಕೆ ಹೋಗಲು ಮುಖ್ಯ ಪ್ರೇರಣೆಯಾಗಿರುತ್ತದೆಯೇ ಹೊರತು ಇನ್ನೇನಲ್ಲ. ಹಾಗೆ ದಿನಗೂಲಿಯಿಂದ ಹಿಡಿದು ಮನೆಗೆಲಸದವರವರೆಗೆ, ಕೆಲಸದ ಜಾಗದಲ್ಲಿ ಎಲ್ಲರೂ ಬಯಸುವುದು ಮರ್ಯಾದೆಯನ್ನು ಹಾಗೂ ಗೌರವವನ್ನು. ಸಂಬಳ ಸ್ವಲ್ಪ ಹೆಚ್ಚು ಕಡಿಮೆ ಆದರೂ ಹೊಂದಿಕೊಳ್ಳುತ್ತಾರೆ, ಆದರೆ ತಮ್ಮ ಆತ್ಮಗೌರವಕ್ಕೆ ಧಕ್ಕೆ ಬಂದರೆ ಮಾತ್ರ ಬಹುತೇಕವಾಗಿ ಯಾರೂ ಸಹಿಸುವುದಿಲ್ಲ.
ಆದರೆ, ಕಾರ್ಯಸ್ಥಳಗಳಲ್ಲಿ ಕಸಗುಡಿಸುವವರನ್ನು, ಭದ್ರತಾ ಸಿಬ್ಬಂದಿಯನ್ನು ಅಥವಾ ಕಿರಿಯ ಸಹೋದ್ಯೋಗಿ ಗಳನ್ನು ಉನ್ನತ ಹುzಯಲ್ಲಿರುವವರು ಈಗೀಗ ಸಂಬೋಧಿಸುವುದೇ ಏಕವಚನ ದಲ್ಲಿ. ‘ನಾವು ದೊಡ್ಡವರು, ನೀವು ಸಣ್ಣವರು’ ಎನ್ನುವ ಭಾವ ಇಂಥವರದ್ದು. ಸರಕಾರಿ ಕಚೇರಿ ಗಳಲ್ಲಂತೂ ಈ ಹುದ್ದೆಯಾಧಾರಿತ ಅಹಂಕಾರ ಎನ್ನುವುದು ಹೆಚ್ಚಾಗಿ ನೋಡಲು ಸಿಗುತ್ತದೆ. ಹಾಗೆ ಸಾರ್ವಜನಿಕವಾಗಿ ತಮ್ಮ ಮೇಲಧಿಕಾರಿಯಿಂದ ಅವಮಾನಕ್ಕೀಡಾದವರು ಖಂಡಿತ ಅವರಿಗೆ ಸಹಕಾರಿಯಾಗಿ ಕೆಲಸ ಮಾಡಲಾರರು, ಹಿಂದಿನಿಂದ ಕೆಟ್ಟ ಶಬ್ದಗಳಿಂದ ಮೇಲಽಕಾರಿಯನ್ನು ಬೈದುಕೊಳ್ಳದೇ ಇರಲಾರರು.
ನಮ್ಮ ಮನೆಗೆಲಸದವರಿಂದ ಹಿಡಿದು, ಕಚೇರಿಯಲ್ಲಿ ಕಸಗುಡಿಸುವವರವರೆಗೆ ಗೌರವದಿಂದ ಬಹುವಚನದಲ್ಲಿ ಸಂಬೋಧಿಸಲು ಶುರುಮಾಡಿ ನೋಡಿ. ಆಶ್ಚರ್ಯಕರ ಸಕಾರಾತ್ಮಕ ಪರಿಣಾಮ ವನ್ನು ನೀವೇ ನೋಡುತ್ತೀರಿ. ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗೆ ತೋರಿಸಬಹುದಾದ ಕನಿಷ್ಠ ಸೌಜನ್ಯವೆಂದರೆ- ಅವರನ್ನು ಬಹುವಚನದಿಂದ ಸಂಬೋಧಿಸುವುದು. ಹಾಗಾಗಿ, ನಮ್ಮ ಸಂಸ್ಕೃತಿ ಯಲ್ಲಿ ಮನೆಯಲ್ಲಿಯೂ ತಂದೆ-ತಾಯಿಯರಿಂದ ಹಿಡಿದು ಅತ್ತೆ-ಮಾವಂದಿರವರೆಗೆ ಎಲ್ಲರಿಗೂ ಬಹುವಚನದಿಂದಲೇ ಸಂಬೋಧಿಸುವ ರೂಢಿ ಮೊದಲಿನಿಂದಲೂ ಇದೆ.
ಕೆಲವರಂತೂ ‘ನಾವು ಅಲ್ಲಿಗೆ ಹೋಗುತ್ತೇವೆ... ನಾವು ಹಾಗೆ ಮಾಡಿದ್ದೇವೆ’ ಎಂದು ತಮಗೆ ತಾವೇ ‘ನಾವು’ ಎಂದು ಬಹುವಚನವನ್ನು ಬಳಸುವುದೂ ಇದೆ. ನಮ್ಮ ಆತ್ಮಕ್ಕೆ ಮೊದಲು ನಾವು ಗೌರವ ಕೊಡಬೇಕು, ಅದಕ್ಕೆ ಕಿಂಚಿತ್ತೂ ಅಗೌರವವಾಗುವುದನ್ನು ಸಹಿಸಬಾರದು. ಅಂಥ ಸಂದರ್ಭ ಬಂದೊದಗಿದಾಗ ಗಟ್ಟಿಯಾದ ಪ್ರತಿರೋಧವೊಡ್ಡುವುದನ್ನು ಕಲಿಯಬೇಕು.
ನಾವು ಕೂಡ ಯಾರಿಗೂ ಏಕವಚನ ಪ್ರಯೋಗ ಮಾಡಿ ಅಗೌರವ ತೋರಬಾರದು, ನಮ್ಮ ಕುರಿತು ಅನ್ಯರು ಹಾಗೆ ಮಾಡಿದರೆ ಸಹಿಸಿಕೊಳ್ಳಲೂಬಾರದು. ನಮ್ಮ ಮರ್ಯಾದೆಯ ಕುರಿತು ನಮಗೇ ಆಸ್ಥೆಯಿರದಿದ್ದರೆ, ಅನ್ಯರಿಂದ ಅದನ್ನು ನಿರೀಕ್ಷಿಸುವುದಾದರೂ ಹೇಗೆ? ನನ್ನ ಪ್ರಕಾರ, ಆತ್ಮಗೌರವದ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಸಾಗುವುದೆಂದರೆ, ಅದು ಬದುಕಿದ್ದೂ ಸತ್ತಂತೆ. ಪರಸ್ಪರರನ್ನು ಗೌರವಪೂರ್ವಕವಾಗಿ ಬಹುವಚನದಲ್ಲಿ ಸಂಬೋಧಿಸುವ ಈ ಒಂದು ಸಣ್ಣ ಬದಲಾವಣೆಯಿಂದ, ಸಮಾಜದಲ್ಲಿ ಸಂಸ್ಕಾರ ಮೂಡುತ್ತದೆ. ಆ ಅರಿವನ್ನು ಮೂಡಿಸುವುದಷ್ಟೇ ಈ ಅಂಕಣ ಬರಹದ ಆಶಯ.