Roopa Gururaj Column: ವಯಸ್ಸು ದೇಹಕ್ಕಷ್ಟೇ, ಮನಸ್ಸಿಗಲ್ಲ !
ದಿನಗಳು ಕಳೆದವು. ಸ್ವೀಡನ್‌ನ ದಕ್ಷಿಣ ತುದಿಯ ಇಸ್ತಾಡ್ (Ystad) ನಗರದಲ್ಲಿ ಜನರು ಅಧಿಕೃತ ವಿಜೇತ ರಿಗಾಗಿ ಕಾಯುತ್ತಿದ್ದರು. ಆದರೆ, ಅಲ್ಲಿಗೆ ಮೊದಲು ತಲುಪಿದ್ದು ಯಾರು ಗೊತ್ತೇ? ಇಡೀ ದೇಶವೇ ಆಶ್ಚರ್ಯಚಕಿತರಾಗುವಂತೆ, ಯಾವುದೇ ಅಧಿಕೃತ ಸೌಲಭ್ಯವಿಲ್ಲದ, ನಿದ್ದೆಯಿಲ್ಲದೆ ಸೈಕಲ್ ತುಳಿದಿದ್ದ ಆ ಬಿಳಿ ಗಡ್ಡದ ತಾತ!
-
ಒಂದೊಳ್ಳೆ ಮಾತು
1951ರ ಜುಲೈ ತಿಂಗಳ ಮುಂಜಾನೆ, ಸ್ವೀಡನ್‌ನ ಉತ್ತರ ತುದಿಯ ಹಪರಾಂಡಾದಲ್ಲಿ ಚಳಿಯ ಗಾಳಿ ಬೀಸುತ್ತಿತ್ತು. ಅಲ್ಲಿ ದೇಶದ ಅತ್ಯಂತ ಕಠಿಣ, 1764 ಕಿಲೋ ಮೀಟರ್ ಉದ್ದದ ‘ಸ್ವೆರಿಗಲೋಪೆಟ್’ ಸೈಕಲ್ ಪಂದ್ಯಾವಳಿ ಆರಂಭವಾಗಲು ಕ್ಷಣಗಣನೆ ನಡೆದಿತ್ತು. ಯುವ, ಬಲಿಷ್ಠ ಕ್ರೀಡಾಪಟುಗಳು ಪಂದ್ಯದ ಉತ್ಸಾಹದಲ್ಲಿ ನಿಂತಿದ್ದರು. ಆದರೆ, ಆ ಗುಂಪಿನಿಂದ ಸ್ವಲ್ಪ ದೂರದಲ್ಲಿ, ಬಿಳಿ ಗಡ್ಡದ, 66 ವರ್ಷದ ವೃದ್ಧರೊಬ್ಬರು ತಮ್ಮ ಹಳೆಯ ಸೈಕಲ್ ಹಿಡಿದು ಶಾಂತವಾಗಿ ನಿಂತಿದ್ದರು. ಅವರೇ ಗುಸ್ತಾ- ಹಾಕನ್ಸನ್.
ವಯಸ್ಸು 40 ದಾಟಿದೆ ಎಂಬ ಒಂದೇ ಕಾರಣಕ್ಕೆ ಸಂಘಟಕರು ಅವರಿಗೆ ಸ್ಪರ್ಧಿಸಲು ಅವಕಾಶ ನಿರಾ ಕರಿಸಿದ್ದರು. ನಿಮಗೆ ವಯಸ್ಸಾಗಿದೆ, ಈ ದೂರವನ್ನು ಕ್ರಮಿಸುವುದು ನಿಮ್ಮ ಕೈಲಾಗದ ಕೆಲಸ ಎಂದು ಜಗತ್ತು ಅವರ ಮುಖಕ್ಕೆ ಹೊಡೆದಂತೆ ಹೇಳಿತ್ತು. ಆದರೆ ಗುಸ್ತಾ- ಅವರ ಮನಸ್ಸಿನ ಗಟ್ಟಿ ಸಂಕಲ್ಪ ವನ್ನು ತಡೆಯಲು ಆ ನಿಯಮಗಳಿಗೆ ಸಾಧ್ಯವಿರಲಿಲ್ಲ. ಅವರು ಮನೆಗೆ ಮರಳಲಿಲ್ಲ.
ಬದಲಿಗೆ, ಅವರ ಪತ್ನಿ ಪ್ರೀತಿಯಿಂದ ಕೈಯಾರೆ ಹೊಲಿದು ಕೊಟ್ಟಿದ್ದ ಬಿಳಿ ಬಟ್ಟೆಯ ಮೇಲೆ ಕೆಂಪು ಬಣ್ಣದಲ್ಲಿ ಸೊನ್ನೆ ಎಂಬ ಸಂಖ್ಯೆಯನ್ನು ಬರೆದು ತಮ್ಮ ಅಂಗಿಗೆ ಸಿಕ್ಕಿಸಿಕೊಂಡರು. ಜಗತ್ತು ಅವರನ್ನು ಶೂನ್ಯ ಎಂದು ಪರಿಗಣಿಸಿದ್ದರೆ, ಅವರು ಅದನ್ನೇ ತಮ್ಮ ಹೆಮ್ಮೆಯ ಗುರುತಾಗಿ ಸ್ವೀಕರಿಸಿದ್ದರು.
ಇದನ್ನೂ ಓದಿ: Roopa Gururaj Column: ಮಹಾತಾಯಿ ಯುಲಿಯಾನಾಳ ಮಹಾ ಪಯಣ
ಕೊನೆಯ ಅಧಿಕೃತ ಸೈಕಲ್ ಸವಾರ ಹೊರಟ ಒಂದು ನಿಮಿಷದ ನಂತರ, ಗುಸ್ತಾ- ತಮ್ಮ ಹಳೆಯ, ಮಡ್‌ಗಾರ್ಡ್‌ಗಳಿದ್ದ ಭಾರೀ ಸೈಕಲ್ ತುಳಿಯಲು ಆರಂಭಿಸಿದರು. ಅವರ ಬಳಿ ಯಾವುದೇ ಆಧುನಿಕ ಕ್ರೀಡಾ ಸೈಕಲ್ ಇರಲಿಲ್ಲ, ಕೇವಲ ಒಂದು ಸಣ್ಣ ದೀಪವಿತ್ತು.
ಸ್ಪರ್ಧೆ ಮುಂದುವರಿದಂತೆ, ಯುವ ಸವಾರರು ರಾತ್ರಿಯಾಗುತ್ತಿದ್ದಂತೆ ಆಯಾಸಗೊಂಡು, ವಿಶ್ರಾಂತಿ ಗೃಹಗಳಲ್ಲಿ ಮಲಗುತ್ತಿದ್ದರು. ಆದರೆ ಗುಸ್ತಾ- ನಿಲ್ಲಲಿಲ್ಲ. ಇಡೀ ದೇಶವೇ ನಿದ್ರಿಸುತ್ತಿರುವಾಗ, ಕತ್ತಲ ಹಾದಿಯಲ್ಲಿ ಆ ಸಣ್ಣ ದೀಪದ ಬೆಳಕಿನಲ್ಲಿ ಅವರು ಸೈಕಲ್ ತುಳಿಯುತ್ತಲೇ ಇದ್ದರು.
ದಣಿವಾರಿಸಿಕೊಳ್ಳಲು ರಸ್ತೆಬದಿಯಲ್ಲಿ ಕೆಲವೇ ನಿಮಿಷಗಳು ಕಣ್ಣು ಮುಚ್ಚುತ್ತಿದ್ದರು, ನಂತರ ಮತ್ತೆ ಪಯಣ ಮುಂದುವರಿಸುತ್ತಿದ್ದರು. ವಯಸ್ಸಿನ ಮಿತಿಯನ್ನು ಹೇರಿದ ಸಮಾಜಕ್ಕೆ, ತನು ಮುಪ್ಪಾ ದರೂ ಮನಸ್ಸು ಮುಪ್ಪಾಗುವುದಿಲ್ಲ ಎಂಬುದನ್ನು ಅವರು ಸಾಬೀತುಪಡಿಸಬೇಕಿತ್ತು.
ದಿನಗಳು ಕಳೆದವು. ಸ್ವೀಡನ್‌ನ ದಕ್ಷಿಣ ತುದಿಯ ಇಸ್ತಾಡ್ (Ystad) ನಗರದಲ್ಲಿ ಜನರು ಅಧಿಕೃತ ವಿಜೇತರಿಗಾಗಿ ಕಾಯುತ್ತಿದ್ದರು. ಆದರೆ, ಅಲ್ಲಿಗೆ ಮೊದಲು ತಲುಪಿದ್ದು ಯಾರು ಗೊತ್ತೇ? ಇಡೀ ದೇಶವೇ ಆಶ್ಚರ್ಯಚಕಿತರಾಗುವಂತೆ, ಯಾವುದೇ ಅಧಿಕೃತ ಸೌಲಭ್ಯವಿಲ್ಲದ, ನಿದ್ದೆಯಿಲ್ಲದೆ ಸೈಕಲ್ ತುಳಿದಿದ್ದ ಆ ಬಿಳಿ ಗಡ್ಡದ ತಾತ!
6 ದಿನಗಳು, 14 ಗಂಟೆಗಳು ಮತ್ತು 20 ನಿಮಿಷಗಳ ಸತತ ಸೈಕಲಿಂಗ್ ನಂತರ, ಗುಸ್ತಾಫ್ ಹಾಕನ್ಸನ್ ಯುವ ಸ್ಪರ್ಧಿಗಳಿಗಿಂತ ಇಡೀ ಒಂದು ದಿನ (24 ಗಂಟೆಗಳು) ಮುಂಚಿತವಾಗಿಯೇ ಗುರಿ ತಲುಪಿದ್ದರು. ಅಂದು ಇಸ್ತಾಡ್ ನಗರದಲ್ಲಿ ನೆರೆದಿದ್ದ ಸಹಸ್ರಾರು ಜನರ ಕಣ್ಣುಗಳಲ್ಲಿ ಆನಂದ ಬಾಷ್ಪವಿತ್ತು.
ಇಡೀ ದೇಶವೇ ಅವರನ್ನು ಸ್ಟಾಫಾರ್ಫರ್ ಉಕ್ಕಿನ ತಾತ ಎಂದು ಪ್ರೀತಿಯಿಂದ ಕರೆದು ಸಂಭ್ರಮಿ ಸಿತು. ಪತ್ರಿಕೆಗಳು ಅವರ ಸಾಹಸವನ್ನು ಕೊಂಡಾಡಿದವು, ಸ್ವೀಡನ್ ದೇಶದ ರಾಜ ಆರನೇ ಗುಸ್ತಾಫ್ ಅಡಾಲ್ಫ್ ಅವರೇ ಸ್ವತಃ ಈ ಮಹಾನ್ ಚೇತನವನ್ನು ಆಹ್ವಾನಿಸಿ ಗೌರವಿಸಿದರು.
ಗುಸ್ತಾಫ್ ಕೇವಲ ಒಂದು ಸೈಕಲ್ ಪಂದ್ಯವನ್ನು ಗೆಲ್ಲಲಿಲ್ಲ, ಬದಲಿಗೆ ವಯಸ್ಸಿನ ಹೆಸರಿನಲ್ಲಿ ಮನುಷ್ಯನ ಕನಸುಗಳಿಗೆ ಬೇಲಿ ಹಾಕುವ ಸಮಾಜದ ಕಲ್ಪನೆಯನ್ನು ಗೆದ್ದರು. ಅವರು ತಮ್ಮ 100ರ ಹರೆಯದಲ್ಲೂ ಸೈಕಲ್ ತುಳಿಯುವುದನ್ನು ನಿಲ್ಲಿಸಲಿಲ್ಲ. ತಮ್ಮ 102ನೇ ಹುಟ್ಟುಹಬ್ಬದ ಕೆಲವೇ ದಿನಗಳ ಮುನ್ನ ಅವರು ಜಗತ್ತನ್ನು ತೊರೆದರು.
ನಮ್ಮ ಕನಸುಗಳನ್ನು ಬೆನ್ನಟ್ಟಲು ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ಮನಸ್ಸಿನಲ್ಲಿ ಛಲವಿದ್ದರೆ, ಜಗತ್ತು ಮುಗಿಯಿತು ಅಂದುಕೊಂಡ ಕಡೆಯಿಂದಲೇ ನಾವು ಹೊಸ ಇತಿಹಾಸವನ್ನು ಸೃಷ್ಟಿಸಬಹುದು. ದಿನನಿತ್ಯದ ವ್ಯಾಯಾಮ ಮಾಡಲು, ಹೊಸ ವಿಚಾರ, ಒಂದನ್ನು ಕಲೆ ಯೊಂದನ್ನು ಕಲಿಯಲು ಸದಾ ನಾವು ನೂರು ನೆಪಗಳನ್ನು ಹುಡುಕುತ್ತೇವೆ.
ಆದರೆ ನಮ್ಮ ಒಬ್ಬರು ವಯಸ್ಸಿನ ಹಂಗಿಲ್ಲದೆ ಸಾಧಿಸಿ ತೋರಿಸಿದಾಗ ಬೆರಗಾಗುತ್ತೇವೆ. ವಯಸ್ಸು ದೇಹಕ್ಕೆ ಮಾತ್ರ ಮನಸ್ಸಿಗೆ ಅಲ್ಲ. ಅದನ್ನು ಅರಿತಾಗ ನಮಗೆ ಯಾವ ಮಿತಿಯೂ ಇರುವುದಿಲ್ಲ.