ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Rohit Kumar H G Column: Antibioticʼಗಳಿಗೂ ಮಣಿಯದ ಬ್ಯಾಕ್ಟೀರಿಯಾಗಳಿಗೆ ʼಎಐʼ ಬಾಣ !

ಸಾಮಾನ್ಯ ಸೋಂಕು, ಅದರ ಔಷಧದಿಂದ ಗುಣವಾಗದೆ ಜೀವಕ್ಕೆ ಕುತ್ತಾಗುವ ಈ ‘ಮೌನ ಮಹಾಮಾರಿ’ ಯ ನಿವಾರಣೆ ಪ್ರಸ್ತುತ ಬೃಹತ್ ಸವಾಲಾಗಿ ಪರಿಣಮಿಸಿದೆ. ೫ ದಶಕಗಳ ಕಾಲ ಸತತ ಪರಿಶ್ರಮದ ಹೊರತಾಗಿಯೂ ಕತ್ತಲ ಉಳಿದಿದ್ದ ಪರಿಹಾರವನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಕಂಡುಕೊಳ್ಳುವ ಪ್ರಯತ್ನವನ್ನು ವಿಜ್ಞಾನಿಗಳು ನಡೆಸಿದ್ದಾರೆ.

Antibioticʼಗಳಿಗೂ ಮಣಿಯದ ಬ್ಯಾಕ್ಟೀರಿಯಾಗಳಿಗೆ ʼಎಐʼ ಬಾಣ !

-

Ashok Nayak Ashok Nayak Oct 11, 2025 7:57 AM

ವೈದ್ಯನಿಧಿ

ಡಾ.ರೋಹಿತ್‌ ಕುಮಾರ್‌ ಎಚ್‌.ಜಿ.

ಹುಷಾರಿಲ್ಲ ಎಂದ ಕೂಡಲೇ ನಿಮಗೆ ಗೊತ್ತಿರುವ ಅಥವಾ ಹಿಂದೆ ತೆಗೆದುಕೊಂಡಿದ್ದ ಅಥವಾ ಅವರಿವರು ಹೇಳಿದ Antibiotic ಒಂದನ್ನು ನೀವು ಎಂದಾದರೂ ಸೇವಿಸಿದ್ದೀರಾ? ಎರಡು ದಿನಕ್ಕೆ ಸುಸ್ತು ಜ್ವರವೆರಡೂ ಕಡಿಮೆಯಾಗುತ್ತಿದ್ದಂತೆ ‘ಡಾಕ್ಟರ್ ಹೇಳ್ತಾರೆ ಅಂತ ಆರಾಮಾದ ಮೇಲೂ ಸುಮ್ಮನೇಕೆ ಮಾತ್ರೆ ತಿನ್ನುವುದು’ ಎಂದು ಮಾತ್ರೆಯನ್ನು ನಡುವ ನಿಲ್ಲಿಸಿದ್ದೀರಾ? ಹಾಗಿದ್ದರೆ, ಪ್ರಪಂಚದಾದ್ಯಂತ ವರ್ಷಕ್ಕೆ ಸುಮಾರು ೫೦ ಲಕ್ಷ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ‘Antibiotic ರೆಸಿಸ್ಟ್’ (ಪ್ರತಿಜೀವಕ ಪ್ರತಿರೋಧ) ಎಂಬ ಜಾಗತಿಕ ಅರೋಗ್ಯ ಸಮಸ್ಯೆಗೆ ನೀವು ಕೊಡುಗೆ ನೀಡುತ್ತಿದ್ದೀರಿ. ‌

ಸಾಮಾನ್ಯ ಸೋಂಕು, ಅದರ ಔಷಧದಿಂದ ಗುಣವಾಗದೆ ಜೀವಕ್ಕೆ ಕುತ್ತಾಗುವ ಈ ‘ಮೌನ ಮಹಾ ಮಾರಿ’ಯ ನಿವಾರಣೆ ಪ್ರಸ್ತುತ ಬೃಹತ್ ಸವಾಲಾಗಿ ಪರಿಣಮಿಸಿದೆ. ೫ ದಶಕಗಳ ಕಾಲ ಸತತ ಪರಿಶ್ರಮದ ಹೊರತಾಗಿಯೂ ಕತ್ತಲ ಉಳಿದಿದ್ದ ಪರಿಹಾರವನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಕಂಡುಕೊಳ್ಳುವ ಪ್ರಯತ್ನವನ್ನು ವಿಜ್ಞಾನಿಗಳು ನಡೆಸಿದ್ದಾರೆ.

ಇತ್ತೀಚಿಗೆ ಪ್ರಕಟಗೊಂಡ ಎರಡು ಪ್ರತ್ಯೇಕ ಅಧ್ಯಯನಗಳು ವೈದ್ಯಕೀಯ ವಿಜ್ಞಾನದಲ್ಲಿ ಹೇಗೆ ‘ಎಐ’ ಜೀವರಕ್ಷಕನಾಗಬಹುದು ಎಂಬುದನ್ನು ನಿರೂಪಿಸಿವೆ. Antibiotics ಎಂಬ ಜೀವರಕ್ಷಕ‌ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ತಯಾರಿಸಲಾದ ಔಷಧಕ್ಕೆ ಆಂಟಿ ಬಯೋಟಿಕ್ಸ್ ಅಥವಾ ಪ್ರತಿಜೀವಕ ಎಂದು ಹೆಸರು. ಪೆನಿಸಿಲಿನ್ ಜಗತ್ತಿನಲ್ಲಿ ಮೊಟ್ಟ‌ ಮೊದಲು ಕಂಡುಹಿಡಿಯಲಾದ Antibiotic.

ಒಂದು ಆಕಸ್ಮಿಕ ಘಟನೆ ಹೇಗೆ ಜಗತ್ತನ್ನು ಬದಲಾಯಿಸಬಲ್ಲ ಸಂಶೋಧನೆಗೆ ಕಾರಣವಾಗಬಹುದು ಎಂಬುದಕ್ಕೆ ಪೆನಿಸಿಲಿನ್ ಆವಿಷ್ಕಾರದ ಕಥೆ ಒಂದು ನೈಜ ಉದಾಹರಣೆ. 1928ರಲ್ಲಿ, ಸ್ಕಾಟ್ಲೆಂಡ್‌ನ ಅಲೆಕ್ಸಾಂಡರ್ ಫ್ಲೆಮಿಂಗ್ ಎಂಬ ವಿಜ್ಞಾನಿ, ಲಂಡನ್‌ನ ಸೆಂಟ್ ಮೇರಿ ಆಸ್ಪತ್ರೆಯ ತನ್ನ ಪ್ರಯೋಗಾಲಯದಲ್ಲಿ ರೋಗಕಾರಕ ಬ್ಯಾಕ್ಟೀರಿಯಾಗಳ ಮೇಲೆ ಅಧ್ಯಯನ ನಡೆಸುತ್ತಿದ್ದರು.

ಇದನ್ನೂ ಓದಿ: Dr Rohith Kumar H G Column: ರಾಸಾಯನಿಕ ಎಂದ ಮಾತ್ರಕ್ಕೇ ವಿಷವಲ್ಲ, ಅದು ಬದುಕಿನ ಮೂಲ...

ಅವರು ಒಮ್ಮೆ ರಜೆಗೆ ತೆರಳುವಾಗ, ಕೆಲವು ಬ್ಯಾಕ್ಟೀರಿಯಾ ತುಂಬಿದ ಪೆಟ್ರಿ ಡಿಶ್ ಎನ್ನಲಾಗುವ ಗಾಜಿನ ತಟ್ಟೆಗಳನ್ನು ಮೇಜಿನ ಮೇಲೆ ಬಿಟ್ಟುಹೋದರು. ರಜೆಯಿಂದ ಮರಳಿದಾಗ, ಒಂದು ತಟ್ಟೆಯಲ್ಲಿ ಫಂಗಸ್ (ಶಿಲೀಂಧ್ರ) ಹಿಡಿದಿರುವುದನ್ನು ಫ್ಲೆಮಿಂಗ್ ಗಮನಿಸಿದರು.

ಸೂಕ್ಷ್ಮವಾಗಿ ನೋಡಿದಾಗ ಆ ಫಂಗಸ್‌ನ ಸುತ್ತಲೂ ಬ್ಯಾಕ್ಟೀರಿಯಾಗಳು ನಾಶವಾಗಿದ್ದು ಕಾಣಿಸಿತು. ಅಂದರೆ, ಆ ಶಿಲೀಂಧ್ರದಿಂದ ಉತ್ಪತ್ತಿಯಾಗುವ ಯಾವುದೋ ಅಂಶಕ್ಕೆ ಸೋಂಕು ತರುವ ಬ್ಯಾಕ್ಟೀರಿ ಯಾಗಳನ್ನು ಕೊಲ್ಲುವ ಶಕ್ತಿ ಇದೆ ಎನ್ನುವುದು ತಿಳಿಯಿತು. ಆ ಫಂಗಸ್ ಪೆನಿಸಿಲಿಯಮ್ ತಳಿಗೆ ಸೇರಿದ್ದ ಕಾರಣ, ಆ ಅಂಶಕ್ಕೆ ‘ಪೆನಿಸಿಲಿನ್’ ಎಂಬ ಹೆಸರಿಟ್ಟರು.

ಕಾಲಕ್ರಮೇಣ, ಇತರ ವಿಜ್ಞಾನಿಗಳ ಅಧ್ಯಯನಗಳಿಂದಾಗಿ ಮುಂದೆ ಪೆನಿಸಿಲಿನ್ ಜಗತ್ತಿನ ಮೊದಲ Antibiotic ಆಗಿ ಪ್ರಸಿದ್ಧವಾಗಿ, ಅನೇಕ ಪ್ರಾಣಾಂತಿಕ ಬ್ಯಾಕ್ಟೀರಿಯಾ ಸೋಂಕುಗಳನ್ನು ಗುಣಪಡಿ ಸುವ ಔಷಧಿಯಾಯಿತು. ಈ ಮಹತ್ತರ ಸಂಶೋಧನೆಗೆ ೧೯೪೫ರಲ್ಲಿ ಫ್ಲೆಮಿಂಗ್ ಮತ್ತು ಇತರೆ ಇಬ್ಬರು ವಿeನಿಗಳಿಗೆ ನೊಬೆಲ್ ಪಾರಿತೋಷಕವೂ ಸಿಕ್ಕಿತು.

೧೯೪೦ರಿಂದ ೧೯೬೦ರ ಮಧ್ಯದವರೆಗಿನ ಅವಧಿಯನ್ನು ‘ಆಂಟಿಬಯೋಟಿಕ್‌ಗಳ ಸುವರ್ಣಯುಗ’ ಎನ್ನುವಷ್ಟರ ಮಟ್ಟಿಗೆ ಹಲವಾರು ಪ್ರತಿಜೀವಕಗಳು ಅಭಿವೃದ್ಧಿಗೊಂಡವು. ಇವುಗಳಿಂದಾಗಿ ನ್ಯುಮೋನಿಯಾ, ಕ್ಷಯದಂಥ ಹಲವು ಗಂಭೀರ ಸೋಂಕುಗಳಿಗೆ ಚಿಕಿತ್ಸೆ ದೊರೆತು Antibiotic ಗಳು ಜೀವರಕ್ಷಕಗಳಾದವು.

ಏನಿದು ಆಂಟಿಮೈಕ್ರೋಬಿಯಲ್ ರೆಸಿಸ್ಟೆ?

ಬ್ಯಾಕ್ಟೀರಿಯಾ, ಶಿಲೀಂಧ್ರ ಅಥವಾ ವೈರಸ್‌ಗಳು ಅವುಗಳನ್ನು ಕೊಲ್ಲಲೆಂದು ರೂಪಿಸಲಾದ ಔಷಧ ಗಳ ವಿರುದ್ಧ ತಾವೇ ತಾವು ಬದುಕಿಕೊಳ್ಳುವ ಸಾಮರ್ಥ್ಯವನ್ನು ಹೊಂದುವುದನ್ನು ಆಂಟಿ ಮೈಕ್ರೋ ಬಿಯಲ್ ರೆಸಿಸ್ಟೆ (ಎಎಂಆರ್) ಎಂದು ಕರೆಯುತ್ತಾರೆ. ಒಂದು ಬ್ಯಾಕ್ಟೀರಿಯಾ, ತನ್ನ ಕೊಲ್ಲಲು ವಿನ್ಯಾಸಗೊಳಿಸಿದ ಪ್ರತಿಜೀವಕವನ್ನು ಮೀರಿಸಿ ಬದುಕುಳಿಯುವ ಶಕ್ತಿ ಹೊಂದಿದರೆ ಅದನ್ನು ನಿರ್ದಿಷ್ಟವಾಗಿ ಪ್ರತಿಜೀವಕ ಪ್ರತಿರೋಧ ಅಥವಾ Antibiotic ರೆಸಿಸ್ಟೆನ್ಸ್ ಎನ್ನುವರು.

ವಿವಿಧ ಸೂಕ್ಷ್ಮಜೀವಿಗಳ ವಿರುದ್ಧ ಈ ರೀತಿಯ ಔಷಧಿಗಳು (Antibiotics, ಆಂಟಿ ಫಂಗಲ್ಸ್, ಆಂಟಿ ವೈರಲ್ಸ್) ಅಭಿವೃದ್ಧಿಗೊಂಡ ಬೆನ್ನ ಔಷಧಿಗಳ ವಿರುದ್ಧ ಪ್ರತಿರೋಧವೂ ಕಾಣಿಸಿಕೊಂಡವು. ೧೯೪೫ರಲ್ಲಿ ಅಲೆಕ್ಸಾಂಡರ್ ಫ್ಲೆಮಿಂಗ್‌ರವರು ತಮ್ಮ ನೊಬೆಲ್ ಭಾಷಣದಲ್ಲಿಯೇ ‘ಮುಂದೊಂದು ದಿನ ಪೆನಿಸಿಲಿನ್ ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ ಸಮಯ ಬರಲಿದೆ. ಆಗ ಸರಿಯಾದ ಪ್ರಮಾಣದಲ್ಲಿ ಈ ಔಷಧವನ್ನು ಸೇವಿಸದೇ ನಿರ್ಲಕ್ಷಿಸಿದಲ್ಲಿ, ಅದು ಪ್ರತಿಜೀವಕ ಪ್ರತಿರೋಧಕ್ಕೆ ಕಾರಣವಾಗಬಹುದು’ ಎಂದು ಎಚ್ಚರಿಸಿದ್ದರು.

ಅದು ಹಾಗೆಯೇ ಆಯಿತು. 1950ರ ದಶಕದ ಆರಂಭದ ಪೆನಿಸಿಲಿನ್ ಹಾಗೂ ಇತರೆ ಔಷಧಿಗಳ ವಿರುದ್ಧ ವ್ಯಾಪಕ ಪ್ರತಿರೋಧ ಕಾಣಿಸಿಕೊಂಡಿತು. ಹಾಗಾಗಿ, ಮೆಥಿಸಿಲಿನ್ ಮುಂತಾದ ಹೊಸ Antibiotic ಗಳನ್ನು ಅಭಿವೃದ್ಧಿಪಡಿಸಲಾಯಿತು. ೧೯೫೯ರಲ್ಲಿ ಹೊರಬಂದ ಮೆಥಿಸಿಲಿನ್‌ಗೆ ಒಂದೇ ವರ್ಷದೊಳಗೆ ಅಂದರೆ ೧೯೬೦ರ ಪ್ರತಿರೋಧ ಬೆಳೆದು ನ್ಯುಮೋನಿಯಾ ಮುಂತಾದ ಸೋಂಕಿಗೆ ಕಾರಣವಾಗುವ ಮೆಥಿಸಿಲಿನ್ ಪ್ರತಿರೋಧಕ ಸ್ಟಾಫಿಲೋಕಾಕಸ್ ಓರಿಯಸ್ ( MRSA ) ಹೊರ ಬಂದಿತು. ಅಂದು ಪ್ರಾರಂಭಗೊಂಡ ‘ಪ್ರತಿಜೀವಕ ಪ್ರತಿರೋಧದ ಸಮಸ್ಯೆ’ ನಂತರವೂ ಹೆಚ್ಚುತ್ತಲೇ ಮುಂದುವರಿಯಿತು.

ಹೇಗೆ ಉಂಟಾಗುತ್ತದೆ?

ಔಷಧಿಗಳ ವಿರುದ್ಧ ಸೂಕ್ಷ್ಮಜೀವಿಗಳು ಬೆಳೆಸಿಕೊಳ್ಳುವ ಪ್ರತಿರೋಧವು ಒಂದು ಸ್ವಾಭಾವಿಕವಾದ ಪ್ರಕ್ರಿಯೆಯಾದರೂ, ಮಾನ ವನ ಕ್ರಿಯೆಗಳು ಇದನ್ನು ವೇಗಗೊಳಿಸುತ್ತವೆ. ಸೋಂಕಿಗೊಳಗಾದ ವ್ಯಕ್ತಿಯು ಪ್ರತಿಜೀವಕ ಔಷಧಿಗಳನ್ನು ಸೇವಿಸಿದಾಗ ದೇಹದಲ್ಲಿರುವ ಬಹುತೇಕ ದುರ್ಬಲ ರೋಗಾಣುಗಳು ಸಾವನ್ನಪ್ಪುತ್ತವೆ. ಆದರೆ ಕೆಲವು ಜೀವಿಗಳು ಅವುಗಳ ಡಿಎನ್‌ಎಯಗುವ ಬದಲಾವಣೆಗಳಿಂದ ಪ್ರತಿರೋಧಕ ಗುಣಗಳನ್ನು ಬೆಳೆಸಿಕೊಂಡು, ಬದುಕಿ ಉಳಿಯುತ್ತವೆ.

ಹೀಗೆ ಬದುಕುಳಿಯುವ ಬ್ಯಾಕ್ಟೀರಿಯಾಗಳು ತಮ್ಮೊಳಗೆ ಔಷಧವು ಪ್ರವೇಶಿಸದಂತೆ ತಡೆಯಬಹುದು, ತಮ್ಮೊಳಗೆ ಪ್ರವೇಶಿಸಿದ ಪ್ರತಿಜೀವಕವನ್ನು ಹೊರಹಾಕಬಹುದು ಅಥವಾ ಸುರಕ್ಷಿತ ಮತ್ತು ನಿಷ್ಕ್ರಿಯ ಉತ್ಪನ್ನಗಳಾಗಿ ವಿಭಜಿಸಬಹುದು. ಇಲ್ಲವೇ, Antibiotic ಗಳು ತಮ್ಮಲ್ಲಿ ಗುರುತಿಸುವ ಪ್ರದೇಶವನ್ನು ಬದಲಾಯಿಸಿಕೊಂಡು ಅವುಗಳಿಂದ ತಪ್ಪಿಸಿಕೊಳ್ಳಲೂಬಹುದು.

ಈ ಎಲ್ಲಾ ಬದಲಾವಣೆಗಳಿಂದ ರೋಗಾಣುವು ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಔಷಧಿಗಳಿಗೆ ಪ್ರತಿರೋಧವನ್ನು ಬೆಳೆಸಿಕೊಂಡು, ಔಷಧಿಗಳು ಫಲಕಾರಿಯಾಗದೆ ಸೋಂಕು ಉಲ್ಬಣಗೊಳ್ಳುತ್ತದೆ. ಈ ರೀತಿಯ ಸೋಂಕುಗಳಿಗೆ ಚಿಕಿತ್ಸೆ ನೀಡುವುದು ತುಂಬಾ ಕಷ್ಟವಾಗುತ್ತದೆ ಅಥವಾ ಕೆಲವೊಮ್ಮೆ ಅಸಾಧ್ಯವಾಗುತ್ತದೆ. ಇದರಿಂದ ಸಮಾನ್ಯವಾಗಿ ಕಂಡುಬರುವ ಶ್ವಾಸಕೋಶ, ಮೂತ್ರನಾಳ, ರಕ್ತ, ಚರ್ಮ ಸೋಂಕುಗಳನ್ನು ಸಹ ಗುಣಪಡಿಸಲಾಗದೆ ಜೀವಕ್ಕೆ ನೇರವಾಗಿ ತೊಂದರೆಯಾಗುತ್ತದೆ.

ಇಲ್ಲವೇ, ಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ, ಹೆರಿಗೆ, ಕ್ಯಾನ್ಸರ್ ಚಿಕಿತ್ಸೆ ಮತ್ತು ಇತರೆ ಸಾಮಾನ್ಯ ವೈದ್ಯಕೀಯ ವಿಧಾನಗಳ ಸಂದರ್ಭಗಳಲ್ಲಿ ಸಹ ರೋಗಿಗಳು ಅಪಾಯಕ್ಕೆ ಒಳಗಾಗುತ್ತಾರೆ. ಸೂಕ್ಷ್ಮಾಣುಗಳಲ್ಲಿ ಪ್ರತಿರೋಧ ಬೆಳವಣಿಗೆಗೆ ಕೆಲವೊಂದು ಅಂಶಗಳು ಪೂರಕವಾಗುತ್ತವೆ. ಹಲವರು ತಮಗೆ ವೈದ್ಯರು ಸೂಚಿಸಿದ ಪ್ರತಿಜೀವಕ ಔಷಧಿಗಳನ್ನು ಪೂರ್ಣವಾಗಿ ತೆಗೆದುಕೊಳ್ಳುವು‌ ದಿಲ್ಲ.

ದಿನಕ್ಕೆರಡರಂತೆ ಐದು ದಿನಗಳಿಗೆ ನೀಡಿದ ಮಾತ್ರೆಯಲ್ಲಿ, ಎರಡೋ ಮೂರು ದಿನ ಮಾತ್ರ ತೆಗೆದುಕೊಂಡು ಕೊಂಚ ಆರಾಮಾದಂತೆ ಅನಿಸಿದೊಡನೆ ‘ಆರಾಮಾಗಿದ್ದೀನಲ್ಲ, ಸುಮ್ಮನೆ ಯಾಕೆ ಮಾತ್ರ ತಿನ್ನುವುದು?’ ಎಂಬ ಧೋರಣೆ ತಳೆದು ನಿಲ್ಲಿಸಿ ಬಿಡುತ್ತಾರೆ. ಇದರಿಂದ ಔಷಧಿಯ ರುಚಿ ಕಂಡು ದೇಹದೊಳಗೆ ಬದುಕುಳಿದ ರೋಗಾಣುಗಳು ಮೇಲೆ ಪಟ್ಟಿ ಮಾಡಿದ ಗುಣ ತರುವ ಡಿಎನ್‌ಎ ಬದಲಾವಣೆಗಳಿಂದ ಪ್ರತಿರೋಧಕ ಗುಣಗಳನ್ನು ಬೆಳೆಸಿಕೊಳ್ಳುತ್ತವೆ.

ಇದರ ಜತೆಯಲ್ಲಿ, ರೋಗವನ್ನು ತಡವಾಗಿ ಅಥವಾ ತಪ್ಪಾಗಿ ಪತ್ತೆ ಮಾಡುವುದು, ಸೂಕ್ತವಾದ ಔಷಽ ನೀಡದೇ ಇರುವುದು, ಕಳಪೆ ಗುಣಮಟ್ಟದ ಔಷಧಿಗಳ ಬಳಕೆ ಸಹ ಪ್ರತಿರೋಧಕತೆಗೆ ಕಾರಣವಾಗುತ್ತವೆ.

ಜಾಗತಿಕ ಬಾಧೆ

Antibiotic ರೆಸಿಸ್ಟೆನ್ಸ್ ಜಗತ್ತಿನಲ್ಲಿ ಬೃಹತ್ ಸಮಸ್ಯೆಯನ್ನೇ ತಂದಿಟ್ಟಿದೆ. ೨೦೨೧ರಲ್ಲಿ ವಿಶ್ವದಾದ್ಯಂತ ಅಂದಾಜು ೧೧.೪‌ ಲಕ್ಷ ಜನರು Antibiotic ಗಳ ಎದುರು ಬ್ಯಾಕ್ಟೀರಿಯಾಗಳಲ್ಲಿ ಬೆಳೆದ ಪ್ರತಿರೋಧ ದಿಂದಾಗಿಯೇ ಸಾವನ್ನಪ್ಪಿದ್ದಾರೆ. ಈ ಸಾವಿನ ಸಂಖ್ಯೆ ವಾರ್ಷಿಕ ಪ್ರತಿಶತ 67.5ರಷ್ಟು ಏರಿಕೆಯಾಗಿ ೨೦೫೦ರ ಹೊತ್ತಿಗೆ ಸುಮಾರು ೧೯.೧ ಲಕ್ಷವಾಗಲಿದೆ ಎಂದು ಅಧ್ಯಯನಗಳು ಸೂಚಿಸಿವೆ.

ಇದರ ಜತೆಯಲ್ಲಿ ೨೦೨೧ರಲ್ಲಿ ಒಟ್ಟು ೪೭.೧ ಲಕ್ಷ ಜನರ ಸಾವಿನಲ್ಲಿ ಪ್ರತಿಜೀವಕ ಪ್ರತಿರೋಧ ಕಾರಣೀಭೂತ ಅಂಶವಾಗಿದೆ. ಇದು ಕೂಡ ೨೦೫೦ರ ವೇಳೆಗೆ ೮೨.೨ ಲಕ್ಷಕ್ಕೆ ಏರುವ ಸೂಚನೆಯಿದೆ. ವಿಶ್ವದಲ್ಲಿ ಭಾರತವೇ ಅತಿ ಹೆಚ್ಚು ಬಾಧಿತ ದೇಶವಾಗಿದೆ. ಉದಾಹರಣೆಗೆ ಬಹುಔಷಧಿ ಪ್ರತಿರೋಧ ಕ್ಷಯರೋಗದ ಸಮಸ್ಯೆ ಭಾರತದಲ್ಲಿ ಅತಿ ಹೆಚ್ಚಿದ್ದು, ಜಗತ್ತಿನ ಶೇ.೨೭ರಷ್ಟು ಪ್ರಕರಣಗಳು ನಮ್ಮ ದೇಶದಲ್ಲಿ ದಾಖಲಾಗುತ್ತಿವೆ.

ಒಟ್ಟಾರೆ ಅಂಕಿ-ಅಂಶಗಳನ್ನು ನೋಡುವುದಾದರೆ, ‘ಅಮೆರಿಕದ ಇನ್ ಸ್ಟಿಟ್ಯೂಟ್ ಫಾರ್ ಹೆಲ್ತ್‌ ಆಂಡ್ ಮೆಟ್ರಿಕ್ಸ್‌ ಎವ್ಯಾಲ್ಯೂಯೇಷನ್’ನ ವರದಿಯ ಪ್ರಕಾರ ೨೦೨೧ರಲ್ಲಿ ಭಾರತದ ಅಂದಾಜು ೨.೬೭ ಲಕ್ಷ ಜನರ ಸಾವಿಗೆ Antibiotic ಪ್ರತಿರೋಧವು ನೇರ ಕಾರಣವಾಗಿದೆ. ಸುಮಾರು ೯.೮೭ ಲಕ್ಷ ಜನರ ಸಾವಿನಲ್ಲಿ ಇದು ಕಾರಣೀಭೂತ ಅಂಶವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ, ಪ್ರಸ್ತುತ ಈ ಸಮಸ್ಯೆಯನ್ನು ಜಾಗತಿಕ ಆರೋಗ್ಯಕ್ಕೆ ಎದುರಾಗಿರುವ ದೊಡ್ಡ ಆತಂಕವೆಂದು ಪರಿಗಣಿಸಲಾಗಿದೆ.

ಇವೆಲ್ಲದರ ಜತೆಗೆ, ಗಾಯದ ಮೇಲೆ ಬರೆ ಎಳೆದಂತೆ ಕಳೆದ ೪೫ ವರ್ಷಗಳಿಂದ ಕೆಲವೇ ಕೆಲವು ಹೊಸ ಎಫ್‌ ಡಿಎ ಅನುಮೋದಿತ Antibiotic ಗಳು ಅಭಿವೃದ್ಧಿಯಾಗಿವೆ. ಇವುಗಳಲ್ಲಿ ಹೆಚ್ಚಿನವು ಈ ಹಿಂದೆಯಿದ್ದ ಪ್ರತಿಜೀವಕಗಳೊಂದಿಗೆ ಸಾಮ್ಯತೆ ಹೊಂದಿರುವುದರಿಂದ ಮತ್ತೊಮ್ಮೆ ಪ್ರತಿರೋಧ ಎದುರಾಗುವ ಸಂಭವ ಇರುವಂಥವು.

ಹೀಗಾಗಿ, ಈ ಸಮಸ್ಯೆಯ ಪರಿಹಾರಕ್ಕೆ ಹೊಸ ಮತ್ತು ಪರಿಣಾಮಕಾರಿ ಔಷಧಗಳ ಅಭಿವೃದ್ಧಿಗೆ ವೇಗವಾಗಿ ಸಂಶೋಧನೆ ಕೈಗೊಳ್ಳುವ ಅವಶ್ಯಕತೆಯಿದೆ. ಇದಕ್ಕೆ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅಥವಾ ಅಭಿವೃದ್ಧಿಪಡಿಸುವ ಅನಿವಾರ್ಯತೆ ಹಿಂದೆಂದಿಗಿಂತ ಹೆಚ್ಚಿದೆ.

ಹೊಸ ಬೆಳಕು

ಈಗೀಗ ನಾವು ನಮ್ಮೆ ಪ್ರಶ್ನೆಗಳಿಗೆ ‘ಎಐ’ ಮೊರೆ ಹೊಕ್ಕಂತೆ, ಈ ಜಾಗತಿಕ ಆರೋಗ್ಯ ಸಮಸ್ಯೆಗೆ ಕೃತಕ ಬುದ್ದಿಮತ್ತೆಯಲ್ಲಿ ಉತ್ತರವಿದೆಯೇ ಎಂದು ವಿಜ್ಷಾನಿಗಳು ಹುಡುಕಲಾರಂಭಿಸಿದ್ದಾರೆ. ಇತ್ತೀಚಿಗೆ ಪ್ರಕಟಗೊಂಡ ಎರಡು ಅಧ್ಯಯನಗಳು ‘ಎಐ’ ಹೇಗೆ ವೈದ್ಯಕೀಯ ಮತ್ತು ಜೀವಶಾಸ್ತ್ರವನ್ನು ಪರಿವರ್ತಿಸಬಲ್ಲದು ಎಂಬುದನ್ನು ನಿರೂಪಿಸಿವೆ.

೨೦೨೫ರ ಆಗ ೧೪ರಂದು ‘ಸೆಲ’ ಪತ್ರಿಕೆಯಲ್ಲಿ ಪ್ರಕಟಿತ ಅಧ್ಯಯನದಲ್ಲಿ ಅಮೆರಿಕದ ಎಂಐಟಿ ಸಂಸ್ಥೆಯ ಆರತಿ ಕೃಷ್ಣನ್ ಮತ್ತು ವಿಜ್ಞಾನಿಗಳ ತಂಡ ಔಷಧಿಗಳಿಗೆ ಪ್ರತಿರೋಧ ಹೊಂದಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ಹೊಚ್ಚ ಹೊಸ ಪ್ರತಿಜೀವಕ ಸಂಯುಕ್ತಗಳನ್ನು ವಿನ್ಯಾಸ ಗೊಳಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಿದ್ದಾರೆ. ಈ ವರದಿಯಲ್ಲಿ ಚಿಕಿತ್ಸೆ ನೀಡಲು ಕಷ್ಟಕರ ವಾದ ಎರಡು ಸೋಂಕುಗಳಾದ ಔಷಧ-ನಿರೋಧಕ ಗೊನೊರಿಯಾ (ನೀಸೇರಿಯಾ ಗೊನೊರಿಯಾ) ಮತ್ತು ಮೆಥಿಸಿಲಿನ್-ನಿರೋಧಕ ಸ್ಟಾಫಿಲೋಕಾಕಸ್ ಓರಿಯಸ್ ಮೇಲೆ ಅಧ್ಯಯನ ಕೈಗೊಂಡಿzರೆ. ಮೊದಲಿಗೆ ‘ಎಐ’ ಮಾದರಿಯನ್ನು ಬಳಸಿ ಈ ಎರಡು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ವಿರಬಹುದಾದ ಒಟ್ಟು ೩.೬ ಕೋಟಿ ಆಂಟಿಬಯೋಟಿಕ್ ಸಂಯುಕ್ತಗಳನ್ನು ಕಂಪ್ಯೂಟರ್‌ನಲ್ಲಿ ವಿನ್ಯಾಸಗೊಳಿಸಿದರು.

ಅವುಗಳಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಪ್ರತಿಜೀವಕಗಳಿಗಿಂತ ಭಿನ್ನವಾಗಿರುವ ಸಂಯುಕ್ತಗಳನ್ನು ಮಾತ್ರ ಆಯ್ಕೆಮಾಡಲಾಯಿತು. ನಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುವ ವಿಷಕಾರಿ ಅಂಶಗಳಿರುವ ಸಂಯುಕ್ತಗಳನ್ನು ಹೊರಗಿಡಲಾಯಿತು. ಇದೇ ರೀತಿ ಹಲವು ಫಿಲ್ಟರ್‌ಗಳನ್ನು ಬಳಸಿ ಮತ್ತಷ್ಟು ಸ್ಕ್ರೀನಿಂಗ್ ಮಾಡಿದಾಗ ಕೆಲವೇ ಕೆಲವು ಸಂಯುಕ್ತಗಳು ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತ ವಾಗಿರುವುದು ತಿಳಿದುಬಂದಿತು. ಇವುಗಳಲ್ಲಿ ರಾಸಾಯನಿಕವಾಗಿ ಸಂಶ್ಲೇಷಿಸಬಹುದಾದ ಸಂಯುಕ್ತಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಿ, ಬ್ಯಾಕ್ಟೀರಿಯಾಗಳ ವಿರುದ್ಧ ಅವುಗಳ ಸಾಮರ್ಥ್ಯ ವನ್ನು ಪರೀಕ್ಷಿಸಲಾಯಿತು.

ಹೀಗೆ ಗೊನೊರಿಯಾ ಹಾಗೂ ಓರಿಯಸ್ ವಿರುದ್ಧ ಕ್ರಮವಾಗಿ ೨ ಮತ್ತು ೨೨ ಸಂಯುಕ್ತಗಳನ್ನು ಸಂಶ್ಲೇಷಿಸಲಾಯಿತು. ಅವುಗಳಲ್ಲಿ ಗೊನೊರಿಯಾ ವಿರುದ್ಧ ಒಂದು ಹಾಗೂ ಓರಿಯಸ್ ವಿರುದ್ಧ ಆರು ರಾಸಾಯನಿಕಗಳು ಬ್ಯಾಕ್ಟೀರಿಯಾಗಳ ಕೋಶಪೊರೆಯ ಮೇಲೆ ಆಕ್ರಮಣ ಮಾಡುವ ಮೂಲಕ ಅವುಗಳನ್ನು ಕೊಲ್ಲಲು ಯಶಸ್ವಿಯಾದವು.

ಕೋಟ್ಯಂತರ ರಾಸಾಯನಿಕ ರಚನೆ ವಿನ್ಯಾಸಗೊಳಿಸುವ ಸಾಧ್ಯತೆಗಳಿರುವಾಗ ಒಂದೊಂದಾಗಿ ಅವುಗಳನ್ನು ಪರೀಕ್ಷಿಸುವ ನಿಧಾನ ಗತಿಯ ಅಧ್ಯಯನಕ್ಕಿಂತ ತಂತ್ರಜ್ಞಾನದ ಸಹಾಯದಿಂದ ವೇಗವಾಗಿ ಪರಿಣಾಮಕಾರಿಯಾದ ಪ್ರತಿಜೀವಕಗಳನ್ನು ಕಂಡುಹಿಡಿಯಬಹುದು ಎಂಬುದನ್ನು ಈ ಅಧ್ಯಯನ ತಿಳಿಸಿತು.

‘ಎಐ’ ರಚಿತ ವೈರಸ್!

ಆಂಟಿಬಯೋಟಿಕ್‌ಗಳಿಗೂ ಸಾಯದ ಮಾರಕ ಬ್ಯಾಕ್ಟೀರಿಯಾ ಗಳನ್ನು ‘ಎಐ’ ಬಳಸಿ ಮಟ್ಟ ಹಾಕಿದ ಮತ್ತೊಂದು ಪ್ರತ್ಯೇಕ ಅಧ್ಯಯನವನ್ನು ಕಿಂಗ್ ಹೀ ನೇತೃತ್ವದ ಅಮೆರಿಕದ ಆರ್ಕ್ ಇನ್ ಸ್ಟಿಟ್ಯೂಟ್ ಮತ್ತು ಸ್ಟಾನ್-ಫೋರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಕೈಗೊಂಡಿದೆ. ಇದೇ ಅಕ್ಟೋಬರ್ ೨ರಂದು ಪ್ರತಿಷ್ಠಿತ ‘ನೇಚರ್’ ಪತ್ರಿಕೆಯಲ್ಲಿ ಸುದ್ದಿಯಾಗಿ ಬಿತ್ತರಗೊಂಡ ಈ ಅಧ್ಯಯನದಲ್ಲಿ ವಿಜ್ಞಾನಿಗಳು ಪ್ರಪಂಚದಲ್ಲಿಯೇ ಪ್ರಪ್ರಥಮ ಬಾರಿಗೆ ‘ಎಐ’ ತಂತ್ರeನದ ಸಹಾಯದಿಂದ ಪ್ರತಿರೋಧ ಹೊಂದಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ವೈರಸ್ ಅನ್ನು ವಿನ್ಯಾಸಗೊಳಿಸಿದ್ದಾರೆ.

ಬ್ಯಾಕ್ಟೀರಿಯೊಫೇಜ್ ಅಥವಾ ‘ಫೇಜ್’ ಎಂದು ಕರೆಯಲ್ಪಡುವ ಈ ವಿಶೇಷ ವೈರಸ್‌ಗಳು ನೈಸರ್ಗಿಕ ವಾಗಿ ಬ್ಯಾಕ್ಟೀರಿಯಾಗಳ ಮೇಲೆ ದಾಳಿಮಾಡುತ್ತವೆ. ಈ ಹಿಂದೆ, ಫೇಜ್ಗಳಲ್ಲಿ ಯಾವುದು ಬ್ಯಾಕ್ಟೀರಿಯಾಗಳನ್ನು ಸಾಯಿಸಬಲ್ಲವು ಎಂದು ತಿಳಿಯಲು ಪ್ರತಿಯೊಂದು ವೈರಸ್‌ಗಳನ್ನು ಬ್ಯಾಕ್ಟೀರಿಯಾಗಳ ಮೇಲೆ ಪರೀಕ್ಷಿಸಬೇಕಾಗಿತ್ತು. ಈ ವಿಧಾನ ನಿಧಾನವೂ ದುಬಾರಿಯೂ ಆಗಿತ್ತು.

ಪ್ರಸ್ತುತ ಅಧ್ಯಯನದಲ್ಲಿ ಸಂಶೋಧಕರು ವಿಜ್ಞಾನ ಲೋಕಕ್ಕೆತಿಳಿದಿರುವ ಎಲ್ಲಾ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳ ಆನುವಂಶಿಕ ದತ್ತಾಂಶದಿಂದ Evo 1 ಮತ್ತು Evo 2 ಎಂಬ ಕಂಪ್ಯೂಟರ್ ಮಾದರಿಗಳಿಗೆ ಮೊದಲು ತರಬೇತಿ ನೀಡಿದರು. ಇದರಿಂದ ಯಾವ ಆನುವಂಶಿಕ ಅಂಶಗಳಿದ್ದರೆ ವೈರಸ್‌ಗೆ ಇಂಥ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಬರಬಹುದು ಎಂಬ ಅರಿವು ‘ಎಐ’ಗೆ ಸಿಕ್ಕಿತು. ಇದನ್ನು ಬಳಸಿಕೊಂಡು, ನಿರ್ದಿಷ್ಟ ಬ್ಯಾಕ್ಟೀರಿಯಾದ ತಳಿಯ ಮೇಲೆ ದಾಳಿ ಮಾಡಬಹು ದಾದ ವೈರಸ್‌ನ ಆನುವಂಶಿಕ ರಚನೆಯನ್ನು ಅದು ಊಹಿಸಿತು.

ಹೀಗೆ ಊಹಿಸಿದ ಸಾವಿರಾರು ರಚನೆಗಳಲ್ಲಿ ೩೦೨ ಫೇಜ್ಗಳನ್ನು ವಿಜ್ಞಾನಿಗಳು ರಚಿಸಿ, ಪರೀಕ್ಷೆ ಗೊಳಪಡಿಸಿದಾಗ ಅವುಗಳಲ್ಲಿ ೧೬ ವೈರಸ್‌ಗಳು ಅಧ್ಯಯನದಲ್ಲಿ ಬಳಸಿದ ಎಸ್ಚರೀಶಿಯ ಕೋಲಿ ಎಂಬ ಬ್ಯಾಕ್ಟೀರಿಯಾವನ್ನು ಯಶಸ್ವಿಯಾಗಿ ನಾಶಪಡಿಸಿತು. ಆನುವಂಶಿಕ ರಚನೆಯ ಆಧಾರದ ಮೇಲೆ ಬ್ಯಾಕ್ಟೀರಿಯಾ ಗಳನ್ನು ಸಾಯಿಸುವ ಶಕ್ತಿಯಿರುವ ಹೊಸ ವೈರಸ್‌ಗಳನ್ನು ರಚಿಸುವ ಈ ಅಧ್ಯಯನವು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಯುಗವನ್ನೇ ಹುಟ್ಟುಹಾಕಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದರಿಂದ ಮುಂದೊಂದು ದಿನ, ಯಾವುದೇ ಔಷಧದಿಂದ ಗುಣಪಡಿಸಲಾಗದ ಸೋಂಕುಗಳಿಗೆ ಕೃತಕ ಬುದ್ಧಿಮತ್ತೆಯಿಂದ ವೈಯುಕ್ತೀಕರಿಸಿದ ಫೇಜ್ಗಳನ್ನು ತಯಾರಿಸಿ, ಜೀವಗಳನ್ನು ಉಳಿಸ ಬಹುದಾಗಿದೆ.

ಕೊನೆ ಮಾತು

‘ಎಐ’ ಅಂದರೆ ಕೇವಲ ಚಾಟ್ ಜಿಪಿಟಿ ಅಲ್ಲ. ಬರಿಯ ನಿಮ್ಮ ಇಮೇಲ್ ತಿದ್ದುವ ತಂತ್ರಾಂಶವೂ ಅಲ್ಲ. ‘ಎಐ’ ಅಂದರೆ ಅಪರಿಮಿತ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಡುವ ತಂತ್ರಜ್ಞಾನ. ಇದು ವಿವಿಧ ಕ್ಷೇತ್ರಗಳಾಚೆ ತನ್ನ ಕಾರ್ಯಹಸ್ತ ಚಾಚಿ ನಿಂತಿರುವ ತಂತ್ರಜ್ಞಾನ. ಅದು, ಬರೆದ ಸಾಲಿನಲ್ಲಿ ರುವ ಸಣ್ಣ ವ್ಯಾಕರಣ ದೋಷವನ್ನು ಸರಿಪಡಿಸುವುದೂ ಆಗಬಹುದು, ಹೊಸ ವೈರಸ್ ಅನ್ನು ಅಥವಾ ಔಷಧವನ್ನು ತಯಾರಿಸುವುದೂ ಆಗಬಹುದು!

ಈ ಅಧ್ಯಯನಗಳು ಆರೋಗ್ಯ ವಿಜ್ಞಾನದಲ್ಲಿ ಕೃತಕ ಬುದ್ಧಿಮತ್ತೆಯ ಬೆಳೆಯುತ್ತಿರುವ ಪಾತ್ರವನ್ನು ಎತ್ತಿ ತೋರಿಸುತ್ತವೆ. ‘ಎಐ’ ತಂತ್ರಜ್ಞಾನದಿಂದ ಪ್ರತಿಜೀವಕಗಳ ಆವಿಷ್ಕಾರವನ್ನು ಶೀಘ್ರವಾಗಿ ನಡೆಸ ಬಹುದು ಎಂಬುದಕ್ಕೆ ಈ ಎರಡೂ ಅಧ್ಯಯನಗಳು ಪುರಾವೆ ಒದಗಿಸಿವೆ. ಇದರಿಂದ ಔಷಧ ಹೊರತರಲು ತಗಲುವ ಸಮಯವನ್ನು ತಗ್ಗುವ ಜತೆಗೆ ಅದರ ವೆಚ್ಚವೂ ಗಣನೀಯವಾಗಿ ಕಡಿಮೆ ಯಾಗಬಲ್ಲದು.

ಪ್ರಪಂಚದಾದ್ಯಂತ ಪ್ರತಿಜೀವಕ ಪ್ರತಿರೋಧವು ವೇಗವಾಗಿ ಬೆಳೆಯುತ್ತಿರುವುದರಿಂದ, ಲಕ್ಷಾಂತರ ಸಾವುಗಳಿಗೆ ಕಾರಣವಾಗುತ್ತಿರುವ ಈ ಸೂಪರ್‌ಬಗ್‌ಗಳ ವಿರುದ್ಧದ ಹೋರಾಟದಲ್ಲಿ ಕೃತಕ ಬುದ್ಧಿಮತ್ತೆ ದಾರಿದೀಪವಾಗಿದೆ.

(ಲೇಖಕರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗ್ರ್ಯಾಂಟ್ಸ್ ಮ್ಯಾನೇಜರ್)