ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಅಮೃತ ಸಮಾನವೀ ಆಚಾರ ರಸಾಯನ...

ನಿತ್ಯವೂ ಜಪ ಮಾಡುವುದು ರಸಾಯನದ ಒಂದು ಮುಖ್ಯವಾದ ತತ್ವ. ‘ಜಪ’ಎಂದರೆ ಯಾವುದೋ ವಿಷಯದ, ಸರಿಯಾದ ಸತತವಾದ ಹೇಳುವಿಕೆ ಎನ್ನಬಹುದಾದರೂ, ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಏಕಾಗ್ರತೆಯಿಂದ ವಿಧಿಪೂರ್ವಕವಾಗಿ ಆ ಕಾರ್ಯವನ್ನು ಸಂಪನ್ನಗೊಳಿಸುವುದು ಎಂಬುದು ಇದರ ಸಂಪೂರ್ಣ ಅರ್ಥ. ಇದೇ ಯೋಗ , ಇದೇ ರಸಾಯನ!

ಅಮೃತ ಸಮಾನವೀ ಆಚಾರ ರಸಾಯನ...

-

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ನಿತ್ಯವೂ ಜಪ ಮಾಡುವುದು ರಸಾಯನದ ಒಂದು ಮುಖ್ಯವಾದ ತತ್ವ. ‘ಜಪ’ಎಂದರೆ ಯಾವುದೋ ವಿಷಯದ, ಸರಿಯಾದ ಸತತವಾದ ಹೇಳುವಿಕೆ ಎನ್ನಬಹುದಾದರೂ, ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಏಕಾಗ್ರತೆಯಿಂದ ವಿಧಿಪೂರ್ವಕವಾಗಿ ಆ ಕಾರ್ಯವನ್ನು ಸಂಪನ್ನಗೊಳಿಸುವುದು ಎಂಬುದು ಇದರ ಸಂಪೂರ್ಣ ಅರ್ಥ. ಇದೇ ಯೋಗ , ಇದೇ ರಸಾಯನ!

ಎಂದಿನಂತೆ, ವೈದ್ಯರಿಗೆ ತಮ್ಮ ಚಿಕಿತ್ಸಾಲಯವೇ ತಮ್ಮ ದೇವಾಲಯ. ಗ್ರಂಥಗಳಲ್ಲಿ ಗ್ರಹಿಸಿದ ವಿಷಯಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗುವ ಪುಣ್ಯಸ್ಥಳ ಅದು. ರೋಗಿಗಳ ಜತೆಗಿನ ಒಡನಾಟವು, ಯಾವ ಪಠ್ಯಪುಸ್ತಕವೂ ನೀಡಲಾಗದ ಅಪಾರವಾದ ಜ್ಞಾನವನ್ನು ಉಣಬಡಿಸುತ್ತದೆ. ಅಂಥದ್ದೇ ಒಂದು ಸನ್ನಿವೇಶವಿದು- ೪೦ರ ಆಸುಪಾಸಿ ನಲ್ಲಿರುವ ವ್ಯಕ್ತಿಯೊಬ್ಬರು ಕ್ಲಿನಿಕ್ಕಿಗೆ ಬಂದರು.

ಮುಖದ ಮೇಲೆ ಏನೋ ಒಂದು ರೀತಿಯ ಕಸಿವಿಸಿ. ಸ್ವಲ್ಪ ಮಾತುಕತೆಯ ನಂತರ ಅವರು, “ವೈದ್ಯರೇ, ನಾನು ಪ್ರತಿದಿನ ಉತ್ತಮವಾದ ಆಹಾರ, ವ್ಯಾಯಾಮ, ಔಷಧ ಹೀಗೆ ಎಲ್ಲವನ್ನು ಪಾಲಿಸುತ್ತಿದ್ದರೂ ಯಾಕೋ ನೆಮ್ಮದಿ ಇಲ್ಲ. ಮನಃಶಾಂತಿ, ಸಮಾಧಾನವಿಲ್ಲ. ಆಯಸ್ಸು ಕಡಿಮೆಯಾಗುತ್ತಿರುವ ಭಯ ಕಾಡುತ್ತಿದೆ. ಇಷ್ಟೆ ಮಾಡಿದರೂ ಸಂಪೂರ್ಣ ಸ್ವಾಸ್ಥ್ಯದ ಅನುಭವ ಏಕೆ ಸಿಗುತ್ತಿಲ್ಲ ಎನ್ನುವ ಅಸಮಾಧಾನ" ಎಂದರು. ನಾನು ಒಂದು ಕ್ಷಣ ಯೋಚಿಸಿ ಅವರನ್ನು ಪುನಃ ಪ್ರಶ್ನಿಸಿದೆ- “ನೀವು ನಿಮ್ಮ ದೇಹವನ್ನು ಖಂಡಿತವಾಗಿಯೂ ಬಹಳ ಉತ್ತಮ ವಾಗಿಯೇ ಆರೈಕೆ ಮಾಡುತ್ತಿದ್ದೀರಾ. ಆದರೆ, ಮನಸ್ಸನ್ನು ಯಾವ ರೀತಿ ನೋಡಿಕೊಳ್ಳುತ್ತಿದ್ದೀರಾ? ಇಂದ್ರಿಯಗಳಿಗೆ ಯಾವ ರೀತಿಯ ಆಹಾರ ನೀಡುತ್ತಿದ್ದೀರಾ? ಆತ್ಮದ ಉನ್ನತಿಗೆ ಯಾವ ರೀತಿ ಪ್ರತಿನಿತ್ಯ ಪ್ರಯತ್ನ ಮಾಡುತ್ತಿದ್ದೀರಾ?" ಎಂದು.

ಇದನ್ನೂ ಓದಿ: Dr Sadhanashree Column: ಹೇಮಂತದ ಧಾವಂತ: ಮುಗ್ಧ ಮನಸು, ಸ್ನಿಗ್ಧ ತಿನಿಸು

ಅದಕ್ಕೆ ಅವರು ಆಶ್ಚರ್ಯದಿಂದ “ಇಂದ್ರಿಯ ಮನಸ್ಸನ್ನು ಸಹ ಆರೈಕೆ ಮಾಡಬೇಕೇ? ಆತ್ಮೋದ್ಧಾರದ ಪ್ರಯತ್ನ ಇಷ್ಟು ಚಿಕ್ಕ ವಯಸ್ಸಿನಿಂದಲೇ ಮಾಡಬೇಕೇ?"ಎಂದು ಕೇಳಿದರು. ಖಂಡಿತವಾಗಿಯೂ ಹೌದು. ಸತ್ಯ, ದಯೆ, ಕ್ಷಮೆ, ಶಾಂತಿ ಇತ್ಯಾದಿಗಳು ಮನಸ್ಸಿನ ಆಹಾರಗಳು, ಇಂದ್ರಿಯಗಳನ್ನು ಪೋಷಿಸುವ ಅಂಶ ಗಳು. ಆತ್ಮೋನ್ನತಿಯ ಕಡೆಗೆ ನಮ್ಮನ್ನು ಕರೆದೊಯ್ಯುವ ಮಾರ್ಗಗಳು. ಇವುಗಳು ನಮ್ಮ ಮನಸ್ಸನ್ನು ಶುದ್ಧಗೊಳಿಸಿ, ದೇಹದ ಪ್ರತಿಯೊಂದು ಕೋಶವನ್ನೂ ಪ್ರಭಾವಿಸುತ್ತವೆ.

ಒಂದೇ ವಾಕ್ಯದಲ್ಲಿ ಹೇಳಬೇಕಾದರೆ ಮನಸ್ಸಿನ ತುಷ್ಟಿಗೆ ಎಲ್ಲರೂ ನಿತ್ಯವೂ ‘ಆಚಾರ ರಸಾಯನ’ವನ್ನು ಪಾಲಿಸಬೇಕು. ನಮಗೆ ದೀರ್ಘಾಯುಷ್ಯವನ್ನು ಧಾರೆ ಎರೆಯುವ ಆಯುರ್ವೇದೋಕ್ತ ‘ಆಚಾರ ರಸಾಯನ’ವೆಂದರೇನು? ಬನ್ನಿ ಈ ಲೇಖನದಲ್ಲಿ ಸಂಕ್ಷಿಪ್ತ ವಾಗಿ ತಿಳಿದುಕೊಳ್ಳೋಣ.

ಸ್ವಾಸ್ಥ್ಯವೆಂದರೆ ಶರೀರ-ಇಂದ್ರಿಯ-ಮನಸ್ಸು ಮತ್ತು ಆತ್ಮಗಳ ನಡುವಿನ ಪರಸ್ಪರ ಹೊಂದಾಣಿಕೆ ಮತ್ತು ಸಹಕಾರ. ನಮ್ಮ ಆಯುವಿನ ಈ ನಾಲ್ಕು ಘಟಕಗಳು ಸಹ ಸದೃಢ ವಾಗಿ, ಒಂದಕ್ಕೊಂದು ಪೂರಕವಾಗಿದ್ದರೆ ಮಾತ್ರ ಸ್ವಾಸ್ಥ್ಯದ ಅನುಭವ ಸಾಧ್ಯ. ಆದ್ದರಿಂದ ನಮ್ಮನ್ನು ನಾವು ಆರೋಗ್ಯವಂತರಾಗಿ ಕಾಪಾಡಿಕೊಳ್ಳುವುದು ಎಂದರೆ ಶರೀರದ ಪಾಲನೆ-ಪೋಷಣೆ ಮಾತ್ರವಲ್ಲದೆ, ಸಮನಾಗಿ ಇಂದ್ರಿಯ -ಮನಸ್ಸುಗಳ ಪೋಷಣೆಯೂ ಅದರಲ್ಲಿ ಸೇರಿಕೊಳ್ಳುತ್ತದೆ.

ಈ ದಿಕ್ಕಿನಲ್ಲಿ, ನಿತ್ಯವೂ ಪ್ರಯತ್ನ ಹಾಕುವುದು ಅತ್ಯಂತ ಅನಿವಾರ್ಯ. ಇದರ ಕುರಿತಾಗಿ ನಮ್ಮ ಆಚಾರ್ಯರು ಆಚಾರ ರಸಾಯನದ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ. ಆಚಾರ ರಸಾಯನ ಎನ್ನುವುದು ಆಯುರ್ವೇದದ ಅತ್ಯಂತ ವಿಶಿಷ್ಟ ತತ್ವ. ರಸಾಯನ ಎಂಬ ಪದವನ್ನು ಸಂಕ್ಷಿಪ್ತವಾಗಿ ವಿವರಿಸುವುದಾದರೆ ಅದು ನಮ್ಮ ದೀರ್ಘಾಯುಷ್ಯ, ಬಲ, ಸ್ಮೃತಿ, ಪ್ರಜ್ಞೆ, ಆರೋಗ್ಯ ಮತ್ತು ವ್ಯಾಧಿ ಕ್ಷಮತ್ವವನ್ನು ವೃದ್ಧಿಸುವ ಮಾರ್ಗ. ಆಚಾರ ರಸಾಯನ ವೆಂದರೆ ನಮ್ಮ ನಿತ್ಯ ಜೀವನದಲ್ಲಿ ಸತ್ಕಾರ್ಯಗಳು, ನಡತೆ, ಸಂಯಮ, ಮನೋಭಾವ ಹಾಗೂ ಸಾಮಾಜಿಕ ನೈತಿಕತೆಗಳ ಮೂಲಕ ದೇಹ -ಇಂದ್ರಿಯ-ಮನಸುಗಳನ್ನು ಶುದ್ಧಗೊಳಿ ಸುವ ಒಂದು ರೀತಿಯ ಆಂತರಿಕ ಚಿಕಿತ್ಸೆ.

ಇದು ಔಷಧಿ ಅಲ್ಲದ ಔಷಧಿ. ನಡತೆಯ ಮೂಲಕ ಜೀವಶಕಿಯನ್ನು ಪುನರುಜ್ಜೀವನ ಗೊಳಿಸುವ ಮಾರ್ಗ. ನಮ್ಮ ಆಚಾರವೇ ನಮ್ಮ ಆಯುಷ್ಯವನ್ನು ವಿಸ್ತರಿಸುವ ನಿಜವಾದ ರಸಾಯನವೆಂಬುದನ್ನು ಇದು ನಮಗೆ ಮನವರಿಕೆ ಮಾಡಿಕೊಳ್ಳುತ್ತದೆ. ಆಚಾರ ರಸಾಯನ ದಲ್ಲಿ ವಿವರಿಸಿರುವ ತತ್ವಗಳ ಬಗ್ಗೆ ಸ್ವಲ್ಪ ಗಮನ ಹರಿಸೋಣ. ಆಚಾರ ರಸಾಯನದ ಮೊಟ್ಟ ಮೊದಲ ತತ್ವವೆಂದರೆ ‘ಸತ್ಯವಾದಿನಮ’. ಎಂದರೆ ಸತ್ಯವನ್ನೇ ಸದಾ ಮಾತನಾಡ ಬೇಕು. ಇದು ಹೇಗೆ ನಮ್ಮ ಸ್ವಾಸ್ಥ್ಯ ಪರಿಪಾಲನೆಗೆ ಅಗತ್ಯ ಎಂಬುದನ್ನು ನಾನು ಹೆಚ್ಚಾಗಿ ವಿವರಿಸಬೇಕಾಗಿಲ್ಲ. ನಾವು ಸತ್ಯವನ್ನು ಮಾತನಾಡಿದಾಗ ಇರುವ ನಮ್ಮ ಮನಸ್ಥಿತಿಗೂ, ಯಾವುದಾದರೂ ವಿಷಯವನ್ನು ತಿರುಚಿ, ಸುಳ್ಳನ್ನು ಹೇಳಿದಾಗ ಇರುವ ಮನಸ್ಥಿಗೂ ಅಜಗಜಾಂತರದಷ್ಟು ವ್ಯತ್ಯಾಸವಿದೆ.

ಸುಳ್ಳು ನುಡಿದ ನಂತರ ನೆಮ್ಮದಿಯಿಂದ ಇರಲು ಸಾಧ್ಯವೇ ಇಲ್ಲ. ಅದು ದೇಹ- ಇಂದ್ರಿಯ-ಮನಸ್ಸುಗಳಿಗೆ ಒಂದು ರೀತಿಯ ಪೀಡನೆಯನ್ನು ನೀಡುತ್ತದೆ. ಸುಳ್ಳಿನ ಸುಳಿಯಲ್ಲಿ ಸಿಲುಕಿ ಕೊಂಡಾಗ ಆಗುವ ಮನಸ್ಸಿನ ಉದ್ವೇಗ ಮತ್ತು ಇಂದ್ರಿಯಗಳ ವೈಪರೀತ್ಯವು ಸ್ವಾಸ್ಥ್ಯ ವನ್ನು ಹದಗೆಡಿಸುವುದರಲ್ಲಿ ಸಂಶಯವಿಲ್ಲ.

ಆಚಾರ ರಸಾಯನದ ಎರಡನೆಯ ವಿಷಯ ‘ಅಕ್ರೋಧಮ’- ಎಂದರೆ ಸಿಟ್ಟನ್ನು ತ್ಯಜಿಸಿ ವ್ಯವಹರಿಸಬೇಕು. ಕ್ರೋಧವು ಅರಿಷಡ್ವರ್ಗದಲ್ಲಿ ಒಂದು. ಅಂದರೆ ಮಾನವನ ಉದ್ಧಾರಕ್ಕೆ ಅಡ್ಡಿ ಮಾಡುವ ಆರು ವೈರಿಗಳಲ್ಲಿ ಈ ಸಿಟ್ಟು ಸಹ ಒಂದು. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯಗಳೆಂಬ ಆರು ವೈರಿಗಳಿಂದ ಸದಾ ದೂರ ಇರುವಂತೆ ಜಾಗೃತ ಸ್ಥಿತಿಯಲ್ಲಿ ಇರುವುದು ಬಹಳ ಅವಶ್ಯಕ.

ಮುಂದೆ ಹೋಗುತ್ತಾ, ಆಚಾರ ರಸಾಯನದಲ್ಲಿ ತಿಳಿಸಿರುವ ವಿಷಯವೆಂದರೆ ‘ಮದ್ಯ ಮತ್ತು ಮೈಥುನ’ಗಳಿಂದ ದೂರವಿರುವುದು. ನಮ್ಮ ದೇಹದ ಸಪ್ತ ಧಾತುವಿನ ವಿಶಿಷ್ಟವಾದ ಅಂಶವೇ ಓಜಸ್ಸು. ಇದು ನಮ್ಮ ಶರೀರವನ್ನು ಸದಾ ಕಾಪಾಡುವ ತೇಜಸ್ಸು. ಮದ್ಯವು ಈ ಓಜಸ್ಸಿಗೆ ವಿರುದ್ಧವಾದ ಗುಣಗಳನ್ನು ಹೊಂದಿರುವ ಕಾರಣ ಅದು ನೇರವಾಗಿ ಓಜಸ್ಸನ್ನು ಕ್ಷೀಣಿಸಿ ವಿವಿಧ ರೀತಿಯ ತೊಂದರೆಗಳನ್ನು ಉಂಟುಮಾಡುತ್ತದೆ.

ಅಂತೆಯೇ ಅಕ್ರಮ ವಾದ, ಅತಿಯಾದ, ಅಕಾಲಿಕ ಮೈಥುನವೂ ಧಾತುಗಳನ್ನು ಕ್ಷೀಣಿಸಿ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಆಚಾರ ರಸಾಯನದ ಮುಂದಿನ ತತ್ವ ‘ಅಹಿಂಸ ಕಮ’. ಎಂದರೆ ಸದಾ ಅಹಿಂಸೆಯ ಮಾರ್ಗದಲ್ಲೇ ನಡೆಯಬೇಕು. ‘ಅಹಿಂಸಾ ಪರಮೋ ಧರ್ಮಃ’ ಎಂಬುದನ್ನು ಹಲವಾರು ಶ್ರೇಷ್ಠ ವ್ಯಕ್ತಿಗಳು ತಮ್ಮ ಜೀವನದ ಧ್ಯೇಯವಾಗಿಸಿ ಕೊಂಡು ನಡೆದಿರುವುದನ್ನು ಕಂಡಿದ್ದೇವೆ.

ಆಯುರ್ವೇದವು ಸಹ ತನ್ನನ್ನು ಯಾವ ರೀತಿಯಲ್ಲೂ ನೋಯಿಸಿಕೊಳ್ಳದೆ, ಪರರಿಗೂ ಎಂದಿಗೂ ಯಾವ ರೀತಿಯ ಹಿಂಸೆಯನ್ನು ನೀಡದೆ ಜೀವಿಸುವುದು ಶ್ರೇಯಸ್ಕರ ಎಂದು ಹೇಳಿದೆ. ಕಳ್ಳತನ, ಕಠೋರವಾದ ಮಾತಿನಿಂದ ನೋಯಿಸುವುದು, ಹೊಡೆಯುವುದು, ಬಯ್ಯುವುದು, ನೋವು ಕೊಡುವಂಥ ಕೆಲಸಗಳನ್ನು ಮಾಡುವುದು ಅಹಿಂಸೆಯೇ. ಎಲ್ಲ ರೀತಿಯ ಹಿಂಸೆಗಳಿಂದ ದೂರ ಇರುವುದು ನಮಗೆ ರಸಾಯನವಾಗಿ ಪರಿಣಮಿಸುತ್ತದೆ.

ನಂತರದ ರಸಾಯನವು ‘ಅನಾಯಾಸಮ’ ಅಂದರೆ, ಅನಾಯಾಸವು ರಸಾಯನಕಾರಕ ಎಂದು ಆಚಾರ್ಯರು ತಿಳಿಸಿದ್ದಾರೆ. ನಮ್ಮ ದಿನಚರಿಯಲ್ಲಿ ಮಾಡುವ ಶಾರೀರಿಕ ಶ್ರಮ ಮತ್ತು ವ್ಯಾಯಾಮಗಳು ಇತಿಮಿತಿಯಲ್ಲಿದ್ದಾಗ ಅದು ದೇಹಕ್ಕೆ ಪುಷ್ಟಿಯನ್ನು ನೀಡಿ ಲವಲವಿಕೆಯನ್ನು ಉಂಟುಮಾಡುತ್ತದೆ. ಆದರೆ ಮಿತಿ ಮೀರಿದಾಗ ಅದು ಆಯಾಸವಾಗಿ, ದೇಹ ಇಂದ್ರಿಯಗಳಿಗೆ ಪೀಡನೆಯನ್ನು ಉಂಟು ಮಾಡಿ, ಕಾಲ ಕಳೆದಂತೆ ಓಜಸ್ಸನ್ನು ಕ್ಷೀಣಿಸಿ ಆಯುಕ್ಷಯವನ್ನು ಉಂಟುಮಾಡುತ್ತದೆ.

ಆದ್ದರಿಂದ ಅನಾಯಾಸವೆಂದರೆ ವ್ಯಾಯಾಮ ಇಲ್ಲದೆ ಇರುವುದು ಎಂದರ್ಥವಲ್ಲದೆ ನಮ್ಮ ಇತಿ ಮಿತಿಯನ್ನು ತಿಳಿದು ಮಾಡುವ ಶಾರೀರಿಕ ಶ್ರಮ ಎಂದೂ ಅರ್ಥವಿದೆ. ‘ಪ್ರಶಾಂತ’ ಎನ್ನುವುದು ಮುಂದಿನ ಆಚಾರ ರಸಾಯನ. ಅಂದರೆ ಇಂದ್ರಿಯ ಮತ್ತು ಮನಸ್ಸುಗಳ ಶಾಂತತೆಯನ್ನು ಕಾಪಾಡಿಕೊಳ್ಳುವುದು ಸಹ ಒಂದು ರಾಸಾಯನವೇ. ಪ್ರಶಾಂತ ಮನಸ್ಥಿತಿ ಉಳ್ಳವನು ಅತ್ಯುನ್ನತವಾದ ದೇಹ ಹಾಗೂ ಇಂದ್ರಿಯ ಬಲವನ್ನು ಪಡೆಯುತ್ತಾನೆ ಎಂಬುದು ಶಾಸ್ತ್ರದ ವಾಕ್ಯ.

‘ಪ್ರಿಯವಾದಿನಮ’ ಎಂದರೆ ಸದಾ ಪರರೊಂದಿಗೆ ಒಳ್ಳೆಯ, ಪ್ರಿಯವಾದ, ಮಧುರವಾದ ಮಾತುಗಳನ್ನು ಆಡುವುದು ಸಹ ಒಂದು ರಸಾಯನದ ಮಾರ್ಗವೇ ಎಂದು ನೆನಪಿನಲ್ಲಿ ಡೋಣ. ಬೇರೆಯೊಬ್ಬರಿಗೆ ನೀಡಬಹುದಾದ ಅತ್ಯಮೂಲ್ಯವಾದ ವಸ್ತುವೆಂದರೆ ಪ್ರೀತಿ ಮತ್ತು ವಿಶ್ವಾಸದ ನಾಲ್ಕು ಮಾತುಗಳು; ಅದನ್ನು ಸಹ ನೀಡಲು ಸಾಧ್ಯವಾಗದ ದರಿದ್ರ ವ್ಯಕ್ತಿಗಳು ನಾವಾಗುವುದು ಬೇಡ.

ನಿತ್ಯವೂ ಜಪ ಮಾಡುವುದು ರಸಾಯನದ ಮತ್ತೊಂದು ಮುಖ್ಯವಾದ ತತ್ವ. ‘ಜಪ’ಎಂದರೆ ಯಾವುದೋ ವಿಷಯದ, ಸರಿಯಾದ ಸತತವಾದ ಹೇಳುವಿಕೆ ಎಂದು ಅರ್ಥೈಸ ಬಹುದಾದರೂ, ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ನಮ್ಮನ್ನು ಸಂಪೂರ್ಣ ವಾಗಿ ತೊಡಗಿಸಿಕೊಂಡು ಏಕಾಗ್ರತೆಯಿಂದ ವಿಧಿಪೂರ್ವಕವಾಗಿ ಆ ಕಾರ್ಯವನ್ನು ಸಂಪನ್ನಗೊಳಿಸುವುದು ಎಂಬುದು ಇದರ ಸಂಪೂರ್ಣ ಅರ್ಥ. ಇದೇ ಯೋಗ , ಇದೇ ರಸಾಯನ!

ಆಚಾರ ರಸಾಯನದ ಮುಂದಿನ ಭಾಗಗಳೆಂದರೆ: ದೇಹ, ಇಂದ್ರಿಯ ಮತ್ತು ಮನಸ್ಸಿನ ಶೌಚ ಬುದ್ಧಿವಂತಿಕೆಯಿಂದ, ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳುವಿಕೆ ಪ್ರತಿನಿತ್ಯ ಯಾವುದಾದರು ರೀತಿಯಲ್ಲಿ ದಾನ ಮಾಡುವುದು/ಕೊಡುವುದು ಜೀವನದ ಎಲ್ಲಾ ಕರ್ತವ್ಯಗಳನ್ನು ಒಂದು ತಪಸ್ಸಿನಂತೆ ನಿಭಾಯಿಸುವುದು ದೇವ, ಗೋವು, ಆಚಾರ್ಯ, ಗುರು, ವೃದ್ಧರ ಸೇವೆಯಲ್ಲಿ ತೊಡಗುವುದು ಕರುಣೆಯನ್ನು ಸದಾ ಎಲ್ಲಾ ಆಚಾರ ವಿಚಾರ ಗಳಲ್ಲಿ ಅಳವಡಿಸಿಕೊಳ್ಳುವುದು ವಿಧಿಪೂರ್ವಕ ನಿಧಿ ಮತ್ತು ಜಾಗರಣೆಯನ್ನು ಪಾಲಿಸು ವುದು ನಿತ್ಯವೂ ಹಾಲು ಮತ್ತು ತುಪ್ಪಗಳ ಸೇವನೆ ದೇಶ-ಕಾಲಗಳ ಪ್ರಮಾಣವನ್ನ ರಿತು ಯುಕ್ತಿಪೂರ್ವಕವಾಗಿ ನಡೆದುಕೊಳ್ಳುವುದು ಅಹಂಕಾರವನ್ನು ತ್ಯಜಿಸುವುದು ಸದಾ ಕಲ್ಯಾಣಕಾರ್ಯವನ್ನು ಮಾಡುವುದು ಸರಳ ಜೀವನವನ್ನು ಅನುಸರಿಸುವುದು ಅಧ್ಯಾತ್ಮಿಕ ಚಿಂತನೆಯಲ್ಲಿ ತೊಡಗುವುದು ಆಸ್ತಿಕನಾಗಿರುವುದು ಮನಸ್ಸನ್ನು ಸದಾ ಹತೋಟಿಯಲ್ಲಿ ಡುವ ಪ್ರಯತ್ನ ಸದಾ ಯಾವುದಾದರೂ ಅಧ್ಯಯನದಲ್ಲಿ ತೊಡಗುವುದು ಇವಿಷ್ಟು ಆಯುರ್ವೇದೋಕ್ತ ಆಚಾರ ರಸಾಯನ- ನಮ್ಮ ಇಂದ್ರಿಯ, ಮನಸ್ಸು ಮತ್ತು ಆತ್ಮದ ಪೋಷಣೆಗಾಗಿ ಪಾಲಿಸಬೇಕಾದ ನಿಯಮಗಳು.

ಸ್ನೇಹಿತರೆ, ಆರೋಗ್ಯವು ಹೊರಗಿನಿಂದ ಸಿಗುವ ಅನುಗ್ರಹವಲ್ಲ, ಅದು ಒಳಗಿನಿಂದ ಅರಳುವ ಅರಿವಿನ ಫಲ. ನಮ್ಮ ನಡತೆಯ ಶುದ್ಧತೆಯು ನಮ್ಮ ಆಯುಷ್ಯದ ವ್ಯಾಪ್ತಿ ಯನ್ನು ನಿರ್ಧರಿಸುತ್ತದೆ ಮತ್ತು ಮನಸ್ಸಿನ ಶಾಂತಿಯು ನಮ್ಮ ಜೀವದ ಗುಣವನ್ನು ನಿರ್ಧರಿಸುತ್ತದೆ. ಔಷಧಿಯಾಗದೆ ಔಷಧಿಯಂತಿರುವ ಈ ಆಚಾರ ರಸಾಯನವೇ ಮಾನವನ ನಿಜವಾದ ಅಮೃತ. ಆಚಾರವೇ ಆಯುಷ್ಯ, ಅದರಿಂದ ಮೂಡುವ ಆಂತರಿಕ ಶಾಂತಿಯೆ ನಿಜವಾದ ಸ್ವಾಸ್ಥ್ಯ.