Prakash Shesharaghavachar Column: ಭಯೋತ್ಪಾದನೆಯ ಮತ್ತೊಂದು ಕರಾಳ ಮುಖ
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಮಹಿಳಾ ಉದ್ಯೋಗಿಗಳ ವರ್ತನೆ ಮತ್ತು ಜೀವನ ಶೈಲಿಯಲ್ಲಿ ಏಕಾಏಕಿ ಬದಲಾವಣೆಯಾಗುತ್ತದೆ. ಈ ಮಹಿಳೆಯರು ತಮ್ಮ ಉಡುಪು ಮತ್ತು ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆ ಮಾಡಿಕೊಳ್ಳುತ್ತಾರೆ. ಸಾಂಪ್ರದಾಯಿಕ ಹಿಂದೂ ಆಚರಣೆಗಳಿಂದ ದೂರ ಸರಿದು, ರಂಜಾನ್ ಸಮಯದಲ್ಲಿ ಉಪವಾಸ ಆಚರಿಸಲು ಆರಂಭಿಸುತ್ತಾರೆ.
-
ಪ್ರಕಾಶಪಥ
ಪ್ರಕಾಶ್ ಶೇಷರಾಘವಾಚಾರ್
ಮಹಿಳಾ ಪೊಲೀಸರು ಸಿಬ್ಬಂದಿಗಳಾಗಿ ಸಂಸ್ಥೆಯಲ್ಲಿ ದಾಖಲಾಗಿ ರಹಸ್ಯ ಕಾರ್ಯಾಚರಣೆ ನಡೆಸು ತ್ತಾರೆ. ಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದಾಗ ಆರೋಪಿಗಳು ಮಹಿಳಾ ಉದ್ಯೋಗಿಗಳ ಮೇಲೆ ಅನೇಕ ಬಾರಿ ಅಸಭ್ಯ ವರ್ತನೆ, ಕಿರುಕುಳ ಮತ್ತು ಅಶ್ಲೀಲ ಕ್ರಿಯೆಗಳನ್ನು ನಡೆಸಿರುವುದು ಪತ್ತೆ ಮಾಡುತ್ತಾರೆ. ಅಮರಾವತಿಯ ಪರತ್ವಾಡ ಮತ್ತು ಕಠೋರಾ ನಾಕಾ ಪ್ರದೇಶಗಳಲ್ಲಿ ಲೈಂಗಿಕ ಶೋಷಣೆ ಮತ್ತು ಬ್ಲ್ಯಾಕ್‌ಮೇಲ್‌ನ ಸಂಘಟಿತ ಜಾಲ ಹೊರ ಬಿದ್ದಿದೆ.
ನವೆಂಬರ್ 10, 2025 ಸಂಜೆ 6.54 ನಿಮಿಷಕ್ಕೆ ದೆಹಲಿಯ ಕೆಂಪುಕೋಟೆ ಸಮೀಪ ಕಾರ್ ಬಾಂಬ್ ಸ್ಪೋಟವಾಗುತ್ತದೆ. ಸ್ಪೋಟಕ ತುಂಬಿದ ಕಾರನ್ನು ಬಳಸಿಕೊಂಡು ಡಾ. ಅಬ್ದುಲ್ ರೆಹಮಾನ್ ಕೈಗೊಂಡ ಆತ್ಮಾಹುತಿ ದಾಳಿಗೆ ಹದಿನೈದು ಜನರು ಸಾವಿಗೀಡಾಗುತ್ತಾರೆ ಮತ್ತು ಇಪ್ಪತ್ತು ಜನರು ತೀವ್ರವಾಗಿ ಗಾಯಗೊಳ್ಳುತ್ತಾರೆ.
ಇದರ ತನಿಖೆಯು ಹಲವಾರು ಆಘಾತಕಾರಿ ವಿಷಯಗಳನ್ನು ಹೊರತರುತ್ತದೆ. ಹರಿಯಾಣದ ಫರೀದಾಬಾದ್‌ನಲ್ಲಿರುವ ಖಾಸಗಿ ವಿಶ್ವವಿದ್ಯಾಲಯ ಅಲ್ ಫಲಾಹ್‌ದಲ್ಲಿ ವೈದ್ಯ ಅಧ್ಯಾಪಕ ವೃತ್ತಿಯಲ್ಲಿದ್ದ ಮೂವರು ಮತ್ತು ಲಕ್ನೊದಲ್ಲಿದ್ದ ಮತ್ತೊಬ್ಬ ಮಹಿಳಾ ವೈದ್ಯರು ಈ ಸ್ಪೋಟದ ಹಿಂದಿನ ರೂವಾರಿಗಳಾಗಿದ್ದರು. ಅತ್ಯುನ್ನತ ವ್ಯಾಸಂಗ ಮಾಡಿದ್ದರೂ ಇವರ ಮತಾಂಧತೆಯ ಮಾನಸಿಕತೆಯಲ್ಲಿ ಯಾವ ಬದಲಾವಣೆಯಾಗಿರಲಿಲ್ಲ. ವೃತ್ತಿಯಲ್ಲಿ ವೈದ್ಯರಾದ ಈ ವೈಟ್ ಕಾಲರ್ ಭಯೋತ್ಪಾದಕ ಚಟುವಟಿಕೆಗೆ ಅಲ್ ಫಲಾಹ ವಿಶ್ವವಿದ್ಯಾಲಯ ಕೇಂದ್ರಸ್ಥಾನವಾಗಿತ್ತು ಎಂಬುದು ಅತ್ಯಂತ ಆತಂಕದ ವಿಷಯ.
ವಿಶ್ವವಿದ್ಯಾಲಯದ ಆವರಣದಲ್ಲಿಯೇ 2600 ಕೆ.ಜಿ., ಸ್ಪೋಟಕವನ್ನು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಡಾ.ಮುಜಮ್ಮಿಲ್ ಶಕೀಲ್ ಗನಿ ಬಾಡಿಗೆಗೆ ಪಡೆದಿದ್ದ ರೂಮಿನಿಂದ 350 ಕೆ.ಜಿ., ಸೋಟಕಗಳ ಜತೆಗೆ, ಅಸಾಲ್ಟ್ ರೈಫಲ್, ಪಿಸ್ತೂಲ್‌ಗಳು, ಮದ್ದುಗುಂಡುಗಳು ಮತ್ತು ಬಾಂಬ್ ತಯಾರಿಕಾ ಉಪಕರಣಗಳನ್ನು(ಟೈಮರ್‌ಗಳು ಮತ್ತು ರಾಸಾ ಯನಿಕಗಳನ್ನು ಸಂಸ್ಕರಿಸಲು ಬಳಸುವ ಗ್ರೈಂಡರ್) ವಶಪಡಿಸಿಕೊಳ್ಳಲಾಗಿದೆ. ದೇಶದ ಉದ್ದಗಲ ಕ್ಕೂ ಆತ್ಮಾಹುತಿ ದಾಳಿ ಮಾಡಲು ಎರಡು ವರ್ಷದಿಂದ ಸಿದ್ಧತೆಯನ್ನು ಮಾಡಿಕೊಂಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: Prakash Shesharaghavachar Column: ಮೋದಿಯವರನ್ನು ವಿರೋಧಿಸಲು ಹೋಗಿ ಬೆತ್ತಲಾದವರು
ದೆಹಲಿಯ ಸ್ಪೋಟದ ಆಘಾತ ಆಗುವ ಮುನ್ನವೇ ನಾಸಿಕ್‌ನಿಂದ ಮತ್ತೊಂದು ಆಘಾತಕರ ಸುದ್ದಿ ಯು ಹೊರ ಬಿದ್ದಿದೆ. ಪ್ರತಿಷ್ಠಿತ ಟಾಟಾ ಗುಂಪಿನ ಟಿಸಿಎಸ್ ಬಿಪಿಒ ಸಂಸ್ಥೆಯಲ್ಲಿ ಕಾರ್ಪೊರೇಟ್ ಜಿಹಾದ್ ನಡೆದಿರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲಿ ಕೆಲಸ ಮಾಡುತ್ತಿರುವ ಹಲವಾರು ಮಹಿಳಾ ಉದ್ಯೋಗಿಗಳು ಲೈಂಗಿಕ ಶೋಷಣೆ, ಧಾರ್ಮಿಕ ಕಿರುಕುಳ, ಮತ್ತು ತಮ್ಮ ಮುಸ್ಲಿಂ ಸಹೋದ್ಯೋಗಿಗಳಿಂದ ಬಲವಂತದ ಧರ್ಮಾ ಪರಿವರ್ತನೆಯ ಒತ್ತಡಕ್ಕೆ ಒಳಗಾಗಿದ್ದೇವೆ ಎಂದು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.
ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಮಹಿಳಾ ಉದ್ಯೋಗಿಗಳ ವರ್ತನೆ ಮತ್ತು ಜೀವನ ಶೈಲಿಯಲ್ಲಿ ಏಕಾಏಕಿ ಬದಲಾವಣೆಯಾಗುತ್ತದೆ. ಈ ಮಹಿಳೆಯರು ತಮ್ಮ ಉಡುಪು ಮತ್ತು ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆ ಮಾಡಿಕೊಳ್ಳುತ್ತಾರೆ. ಸಾಂಪ್ರದಾಯಿಕ ಹಿಂದೂ ಆಚರಣೆ ಗಳಿಂದ ದೂರ ಸರಿದು, ರಂಜಾನ್ ಸಮಯದಲ್ಲಿ ಉಪವಾಸ ಆಚರಿಸಲು ಆರಂಭಿಸುತ್ತಾರೆ. ಜತೆಗೆ, ತಮ್ಮ ಸ್ನೇಹಿತರು ಮತ್ತು ಸಾಮಾಜಿಕ ವಲಯದಿಂದ ದೂರ ಸರಿದು ಎಲ್ಲರಲ್ಲೂ ಅನುಮಾನ ಮೂಡುವಂತಾಗುತ್ತದೆ.
ಪ್ರಾರಂಭದಲ್ಲಿ, ಈ ಮಹಿಳೆಯರು ಭಯ, ಸಾಮಾಜಿಕ ಒತ್ತಡ ಮತ್ತು ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಮೌನವಾಗಿದ್ದರು. ಆದರೆ, ಸಮಯ ಕಳೆಯುತ್ತಿದ್ದಂತೆ ಪರಿಸ್ಥಿತಿ ಸಹಿಸಲಾಗದ ಮಟ್ಟಕ್ಕೆ ತಲುಪಿದಾಗ, ಒಂಬತ್ತು ಮಹಿಳಾ ಉದ್ಯೋಗಿಗಳು ಮತ್ತು ಒಬ್ಬ ಪುರುಷ ಉದ್ಯೋಗಿ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ.
ಪೀಡಿತ ಉದ್ಯೋಗಿಗಳ ಪ್ರಕಾರ, ಕಂಪನಿಯ ಕೆಲವು ಹಿರಿಯ ಸಿಬ್ಬಂದಿ - ವಿಶೇಷವಾಗಿ ತಂಡದ ನಾಯಕರೂ ಮತ್ತು HR ವ್ಯವಸ್ಥಾಪಕರೂ - ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ಇಸ್ಲಾಂ ಧರ್ಮಕ್ಕೆ ಪರಿವರ್ತಿಸಲು ನಿರಂತರ ಪ್ರಯತ್ನ ಮಾಡುತ್ತಿದ್ದರು. ಉದ್ಯೋಗಿಗಳಿಗೆ ಪದೋನ್ನತಿ ಮತ್ತು ಉತ್ತಮ ವೃತ್ತಿ ಅವಕಾಶಗಳ ಭರವಸೆ ನೀಡಿ ಆಕರ್ಷಿಸ ಲಾಗುತ್ತಿತ್ತು.
ಕೆಲವು ಪೀಡಿತರು ತಮ್ಮನ್ನು ಗೋಮಾಂಸ ಸೇವಿಸಲು ಬಲವಂತ ಮಾಡಲಾಗಿತ್ತು ಮತ್ತು ಕಚೇರಿ ಆವರಣದ ನಮಾಜ್ ಮಾಡುವಂತೆ ಒತ್ತಾಯಿಸಲಾಗಿತ್ತು ಎಂದು ಹೇಳಿದ್ದಾರೆ. ಜತೆಗೆ, ಅವರ ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ಚಿಹ್ನೆಗಳನ್ನು ಹಾಸ್ಯಕ್ಕೆ ಗುರಿಪಡಿಸಿ ಅವರ ನಂಬಿಕೆ ಯನ್ನು ದುರ್ಬಲಗೊಳಿಸಲು ಪ್ರಯತ್ನಿಸಲಾಗುತ್ತಿತ್ತು ಎಂದು ದೂರಿದ್ದಾರೆ.
ದೂರು ದಾಖಲಾದ ನಂತರ, ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಈ ಕಾರ್ಯಾಚರಣೆ ಅತ್ಯಂತ ಸಂಘಟಿತವಾಗಿ ನಡೆಯುತ್ತಿದ್ದರಿಂದ ಸಾಕ್ಷ್ಯ ಸಂಗ್ರಹ ಕಷ್ಟಕರವಾಗಿತ್ತು. ಇದನ್ನು ಎದುರಿಸಲು, ಮಹಿಳಾ ಪೊಲೀಸರು ಸಿಬ್ಬಂದಿಗಳಾಗಿ ಸಂಸ್ಥೆಯಲ್ಲಿ ದಾಖಲಾಗಿ ರಹಸ್ಯ ಕಾರ್ಯಾಚರಣೆ ನಡೆಸುತ್ತಾರೆ. ಆರೋಪಿಗಳ ಚಟುವಟಿಕೆಗಳನ್ನು ಗಮನಿಸಿ ಸಾಕ್ಷ್ಯಗಳನ್ನು ಸಂಗ್ರಹ ಮಾಡುತ್ತಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದಾಗ ಆರೋಪಿಗಳು ಮಹಿಳಾ ಉದ್ಯೋಗಿಗಳ ಮೇಲೆ ಅನೇಕ ಬಾರಿ ಅಸಭ್ಯ ವರ್ತನೆ, ಕಿರುಕುಳ ಮತ್ತು ಅಶ್ಲೀಲ ಕ್ರಿಯೆಗಳನ್ನು ನಡೆಸಿರುವುದು ಪತ್ತೆ ಮಾಡುತ್ತಾರೆ. ಪೀಡಿತ ಸಿಬ್ಬಂದಿಗಳು ಅಧಿಕೃತವಾಗಿ ದೂರು ದಾಖಲಿಸಿದ ತರುವಾಯ ಎಂಟು ಜನರನ್ನು ಬಂಧಿಸಲಾಗಿದೆ. ಒಟ್ಟು 6 ಪ್ರಮುಖ ಆರೋಪಿಗಳ ವಿರುದ್ಧ 9 FIR ಗಳು ದಾಖಲಾಗಿವೆ: ಡ್ಯಾನಿಷ್ ಶೇಖ್, ತೌಸಿಫ್ ಅಟ್ಟಾರ್, ರಝಾ ಮೆಮನ್, ಶಾರುಖ್ ಕುರೇಶಿ, ಶಫಿ ಶೇಖ್ ಮತ್ತು ಆಸಿಫ್ ಅಂಸಾರಿ. ಈ ಪಟ್ಟಿಯಲ್ಲಿ ಒಬ್ಬ ತಂಡದ ನಾಯಕ (ಟೀಮ್ ಲೀಡರ್) ಮತ್ತು ಮಾನವ ಸಂಪನ್ಮೂಲ (HR) ಇಲಾಖೆಯ ಪ್ರತಿನಿಧಿಯೂ ಸೇರಿದ್ದಾರೆ.
ನಿದಾ ಖಾನ್ ಎಂಬುವಳು ಪ್ರಕರಣ ಬಯಲಾಗುತ್ತಿದ್ದ ಹಾಗೆಯೇ ತಲೆ ಮರೆಸಿಕೊಂಡಿದ್ದಾಳೆ. ಇವರೆಲ್ಲರ ಮೇಲೆ ಲೈಂಗಿಕ ಶೋಷಣೆ, ಮಾನಸಿಕ ಕಿರುಕುಳ, ಬೆದರಿಕೆ ಹಾಗೂ ಧರ್ಮಾಂತರಕ್ಕೆ ಒತ್ತಾಯ ಮಾಡಿದಂತಹ ಗಂಭೀರ ಆರೋಪಗಳು ದಾಖಲಾಗಿವೆ.
ಈಗ ಈ ಪ್ರಕರಣವನ್ನು ಮುಚ್ಚಿ ಹಾಕುವ ಮತ್ತು ಅಪರಾಧಿಗಳಿಗೆ ರಕ್ಷಣೆ ನೀಡುವ ಕೆಲಸ ನಡೆಯು ತ್ತಿದೆ. ಟಿಸಿಎಸ್ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿ ಪ್ರಕರಣ ತನಿಖೆಗೆ ಮುಂದಾಗಿದೆ. ತನಿಖೆಯು ಆರಂಭಕ್ಕೆ ಮುನ್ನವೇ ಕಂಪನಿಯು ಸಂತ್ರಸ್ಥರಿಂದ ಯಾವುದೇ ದೂರು POSH ಚಾನಲ್ ಮೂಲಕ ಸ್ವೀಕರಿಸಿಲ್ಲ ಮತ್ತು ನಿದಾ ಖಾನ್ ಕೇವಲ process assistant ಆಗಿ ಕೆಲಸ ಮಾಡುತ್ತಿದ್ದರು, ಯಾವುದೇ ನಾಯಕತ್ವದ ಜವಾಬ್ದಾರಿಗಳನ್ನು ಹೊಂದಿರಲಿಲ್ಲ ಎಂದು ಆರಂಭಿಕ ಹಂತದಲ್ಲಿಯೇ ತನಿಖಾ ದಾರಿಯನ್ನು ತಪ್ಪಿಸುವ ಹೇಳಿಕೆಗಳನ್ನು ಕಂಪನಿಯು ಮಾಡಿರುವುದು ಇವರ ಆಂತರಿಕ ತನಿಖೆಯ ವಿಶ್ವಾಸಾರ್ಹತೆಯ ಮೇಲೆ ಅನುಮಾನ ಮೂಡುವುದು ಸಹಜ.
ಖ್ಯಾತ ಪತ್ರಕರ್ತ ರಾಜ್ ದೀಪ್ ಸರ್ದೇಸಾಯ್ ನಾಸಿಕ್ ಪ್ರಕರಣಕ್ಕೆ ಟ್ವಿಸ್ಟ್ ಎಂದು ಇಂಡಿಯನ್ ಎಕ್ಸಪ್ರೆಸ್‌ನ ಬುಡವಿಲ್ಲದ ವರದಿಯನ್ನು ಆಧರಿಸಿ ತನಿಖೆಯು ಪಾರದರ್ಶಕವಾಗಿರಲಿ, ಸಾಮಾಜಿಕ ತಾಣದ ಆಕ್ರೋಶದ ಮೇಲೆ ತನಿಖೆ ಬೇಡ ಎಂದು ಆರೋಪಿಗಳ ಪರವಾಗಿ ನಿಲ್ಲುತ್ತಾರೆ.
ನಕಲಿ ಫ್ಯಾಕ್ಟ್ ಚೆಕ್ಕರ್ ಮಹಮ್ಮದ್ ಜುಬೇರ್ ಪೂರ್ಣ ಪ್ರಮಾಣದಲ್ಲಿ ಶಂಕಿತ ಆರೋಪಿಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ನಿದಾ ಖಾನ್ ಗರ್ಭಿಣಿಯಂತೆ ಮುಂಬೈ ಮನೆಯಲ್ಲಿ ಇದ್ದಾರೆ ಎಂದು ಟ್ವೀಟ್ ಮಾಡುತ್ತಾರೆ. ನಿದಾ ಖಾನ್ ಗಂಡ ಕೊಟ್ಟ ವಿಳಾಸಕ್ಕೆ ಪೊಲೀಸರು ಹೋದಾಗ ಮನೆಗೆ ಬೀಗ ಹಾಕಿರುತ್ತದೆ.
ಶಂಕಿತ ಆರೋಪಿಗಳ ಕುಟುಂಬದ ಸದಸ್ಯರು ತಮ್ಮ ಮಗ ಅಥವಾ ಸಹೋದರ ನಿರಪರಾಧಿ, ಇದೊಂದು ಷಡ್ಯಂತ್ರ ಎಂದು ಹೇಳಿಕೆ ನೀಡಿದರೆ, ನಮ್ಮ ಡೋಂಗಿ ಜಾತ್ಯಾತೀತವಾದಿಗಳು ಅದನ್ನು ಮಹಾಪ್ರಸಾದ ಎಂದು ಸ್ವೀಕರಿಸಿ ಆರೋಪಿಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ನಿದಾ ಖಾನ್ HR ಮುಖ್ಯಸ್ಥರಲ್ಲ ಎಂಬುವುದನ್ನು ಪ್ರಕರಣದ ದಾರಿ ತಪ್ಪಿಸಲು ಅಸ್ತ್ರವಾಗಿ ಬಳಸುತ್ತಿದ್ದಾರೆ.
ಮಹಾರಾಷ್ಟ್ರ ಸರಕಾರವು ಈಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದೆ. ಈಗಾಗಲೇ ಎಸ್‌ಐಟಿ ತನ್ನ ತನಿಖೆಯನ್ನು ಆರಂಭಿಸಿದೆ. ತನಿಖೆಯ ವರದಿಯು ಬರುವ ಮುನ್ನವೇ ಡೋಂಗಿ ಜಾತ್ಯತೀತವಾದಿ ಗಳು ತಮ್ಮ ತೀರ್ಪು ನೀಡಲು ಆತುರವಾಗಿದ್ದಾರೆ. ಇವರಲ್ಲಿ ಒಬ್ಬರೂ ಸಂತ್ರಸ್ತರ ಪರವಾಗಿ ನಿಲ್ಲದಿರುವುದು ಅತ್ಯಂತ ನೋವಿನ ಸಂಗತಿ. ಕಾರ್ಪೊರೇಟ್ ಜಿಹಾದ್‌ಗೆ ಬಲಿಯಾಗಿ ಮಾನಸಿಕ ಯಾತನೆ ಅನುಭವಿಸಿದ್ದೇವೆ ಎಂದು ದೂರು ನೀಡಿದವರ ಬಗ್ಗೆ ಇವರೆಲ್ಲರಿಗೂ ಕಿಂಚಿತ್ತೂ ಕಾಳಜಿಯಿಲ್ಲ.
ಏಪ್ರಿಲ್ ತಿಂಗಳಿನಲ್ಲಿಯೇ ಮಹಾರಾಷ್ಟ್ರದ ಅಮರಾವತಿ ಸೆಕ್ಸ್ ಸ್ಕ್ಯಾಂಡಲ್ ಹಗರಣ ಬಯಲಾಗಿದೆ. ಅಮರಾವತಿಯ ಪರತ್ವಾಡ ಮತ್ತು ಕಠೋರಾ ನಾಕಾ ಪ್ರದೇಶಗಳಲ್ಲಿ ಲೈಂಗಿಕ ಶೋಷಣೆ ಮತ್ತು ಬ್ಲ್ಯಾಕ್‌ಮೇಲ್‌ನ ಸಂಘಟಿತ ಜಾಲ ಹೊರಬಿದ್ದಿದೆ. ಅಯಾನ್ ಅಹ್ಮದ್ ಎಂಬುವವನು ಇದರ ಪ್ರಮುಖ ಆರೋಪಿ. ಇವನೊಂದಿಗೆ ಹಲವಾರು ಜನರು ಸಹ ಈ ಕರಾಳ ಕೃತ್ಯದಲ್ಲಿ ಭಾಗಿಯಾ ಗಿದ್ದಾರೆ.
ಯುವತಿಯರನ್ನು ಮತ್ತು ಅಪ್ರಾಪ್ತ ಬಾಲಕಿಯರನ್ನು ಕಮಲ್ ರೆಸಿಡೆನ್ಸಿ ಎಂಬ ಕಟ್ಟಡದ ಬಾಡಿಗೆ ಫ್ಲ್ಯಾಟ್ ಸೇರಿದಂತೆ ನಿರ್ದಿಷ್ಟ ಸ್ಥಳಗಳಿಗೆ ಆಮಿಷವೊಡ್ಡಿ ಕರೆದೊಯ್ದು ಸಂತ್ರಸ್ತರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ರಹಸ್ಯವಾಗಿ ಚಿತ್ರೀಕರಿಸಲಾಗಿದೆ. ನಂತರ ಕಿಡಿ ಗೇಡಿಗಳು ಈ ಅಶ್ಲೀಲ ವಿಡಿಯೋ ಗಳನ್ನು ಬಳಸಿ ಸಂತ್ರಸ್ತರನ್ನು ಬ್ಲ್ಯಾಕ್‌ಮೇಲ್ ಮಾಡಿzರೆ ಮತ್ತು ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಪ್ರಕರಣವು ಬಯಲಾದ ತರುವಾಯ ಮಹಾರಾಷ್ಟ್ರ ಪೊಲೀಸರು ಬೃಹತ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಮುಖ ಆರೋಪಿ ಅಯಾನ್ ಅಹಮದ್ ಮತ್ತು ಅವನ ಸಹಚರರನ್ನು ಬಂಧಿಸಲಾಗಿದೆ. ಪೊಲೀಸರ ಮಾಹಿತಿಯ ಪ್ರಕಾರ 180 ಅಪ್ರಾಪ್ತ ಬಾಲಕಿಯರ ಮತ್ತು ಇತರರ 350 ವಿಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏಪ್ರಿಲ್ ತಿಂಗಳಿನಲ್ಲಿಯೇ ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣದ ದೂರು ದಾಖಲಾಗಿದೆ. ಜಿಮ್ ಟ್ರೈನರ್ ಸಮೀರ್ ಮುಲ್ಲಾ ಹಿಂದೂ ಮಹಿಳೆಯರನ್ನು ಒಲಿಸಿಕೊಂಡು ಅವರ ಜತೆ ನಿಕಟ ಸಂಪರ್ಕ ಬೆಳೆಸಿ ಅದರ ವಿಡಿಯೊ ತೆಗೆದು ಬ್ಲ್ಯಾಕ್‌ಮೇಲ್ ಮಾಡುವ ಬಗ್ಗೆ ಯುವತಿಯ ದೂರು ಹುಬ್ಬಳ್ಳಿ ನಗರದಲ್ಲಿ ಸಂಚಲನ ಸೃಷ್ಟಿಸಿದೆ.
ಏಪ್ರಿಲ್ 18, 2024ರಂದು ಕಾಂಗ್ರೆಸ್ ಕಾರ್ಪೊರೇಟರ್ ಮಗಳಾದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರನ್ನು, ತನ್ನ ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕಾಗಿ ಆಕೆಯ ಮಾಜಿ ಸಹಪಾಠಿ ಫಯಾಜ್ ಖೋಂಡುನಾಯ್ಕ್ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದನು.
ಮತಾಂಧ ಶಕ್ತಿಗಳು ಆಸೆ ಆಮಿಷ ಒಡ್ಡಿ ಅಪ್ರಾಪ್ತರನ್ನು ಬಲೆಗೆ ಕೆಡವಿ ಮತ್ತು ಹಿಂದೂ ಮಹಿಳೆ ಯರನ್ನು ಮರುಳು ಮಾಡಿ ಧರ್ಮಾಂತರ ಮಾಡುವ ಪ್ರಕರಣಗಳು ಸಾಲು ಸಾಲಾಗಿ ಬಯಲಾಗು ತ್ತಿವೆ. ಇಂತಹ ಮತಾಂಧ ಶಕ್ತಿಗಳನ್ನು ಮಟ್ಟ ಹಾಕಲು ರಾಜ್ಯಸರಕಾರಗಳು ತಮ್ಮ ಓಟ್ ಬ್ಯಾಂಕ್ ರಾಜಕಾರಣವನ್ನು ಮರೆತು ಸಮಾಜದ ಈ ಪಿಡುಗಿಗೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.