ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shishir Hegde Column: ಅಂಗಡಿ ಗಣೇಶ ಭಟ್ಟರು ಮತ್ತು ಸ್ಯಾನ್ಪೋ ಯೋಷಿ ಸುತ್ತಮುತ್ತ

ಒಂದು ಕಡೆ ಸಹ್ಯಾದ್ರಿ, ಒಂದು ಕಡೆ ಕಡಲು, ಮಧ್ಯದಂದು ಯಾವುದಕ್ಕೂ ಇರಲಿ ಎಂಬಂತಿಟ್ಟ ಹೊಳೆ. ಇಲ್ಲ ಬೆಟ್ಟದ ಏರು-ತಗ್ಗುಗಳೇ ನದಿಗಳಾಗಿ, ಆ ನದಿಗಳೇ ಅಲ್ಲಲ್ಲಿ ತಿರುಗಿ ಊರುಗಳಾಗಿವೆ. ಎಂದರಲ್ಲಿ ತೆಂಗು, ಅಡಕೆ, ಬಾಳೆ ತೋಟ, ಇಲ್ಲವೇ ಬೋಳು ಬೆಟ್ಟ. ಅದರ ಮಧ್ಯದಲ್ಲಿ ಅಲ್ಲಲ್ಲಿ ಅಡಗಿ ಕೂತಿರುವ ಮಂಗಳೂರು ಹಂಚಿನ ಟೊಪ್ಪಿಗೆ ಹಾಕಿಕೊಂಡ ತೇರಿನಾಕೃತಿಯ ಮನೆಗಳು.

ಅಂಗಡಿ ಗಣೇಶ ಭಟ್ಟರು ಮತ್ತು ಸ್ಯಾನ್ಪೋ ಯೋಷಿ ಸುತ್ತಮುತ್ತ

-

ಶಿಶಿರಕಾಲ

ಅರಬ್ಬೀ ಸಮುದ್ರದ ಕಿನಾರೆಯಿಂದ ಹೊರಟ ಬೀಸುಗಾಳಿ ನಮ್ಮೂರ ತೆಂಗಿನ ಮರಗಳನ್ನು ಹಾಯಲು ಹತ್ತು ನಿಮಿಷವೂ ಬೇಕಾಗಿಲ್ಲ. ಹಗಲು ಸರಿಯುತ್ತಿದ್ದಂತೆ, ಮನುಷ್ಯ ಗದ್ದಲಗಳು ಕ್ಷೀಣಿಸಿದಂತೆ, ನಮ್ಮೆಲ್ಲರ ಬದುಕಿನ ಶ್ರುತಿಯಂತೆ ಹಿನ್ನೆಲೆಯಲ್ಲಿದ್ದ ಸಮುದ್ರದ ಶಬ್ದ ಕೇಳಿಸುತ್ತದೆ. ಹುಣ್ಣಿಮೆಯ ಅಬ್ಬರ ಸೀಲಿಂಗ್ ಫ್ಯಾನ್ 2ಕ್ಕೆ ಇಟ್ಟಷ್ಟು. ಹಾಗಾಗಿ ನಮ್ಮೂರು ‘ಸಮುದ್ರದ’ ಕೂಗಳತೆ. ಎಂಟು-ಹತ್ತು ಕಿಲೋಮೀಟರ್. ಹಾಗಾಗಿ ಮಾನ್ಸೂನಿನಿಂದ ಬಂಗುಡೆ ಮೀನಿನವರೆಗೆ ಇಲ್ಲಿ ಎಲ್ಲರ ಬದುಕೂ ಸಮುದ್ರದ ಜತೆ ಏನೋ ಒಂದು ನಂಟು ಹೊಂದಿದೆ.

ಒಂದು ಕಡೆ ಸಹ್ಯಾದ್ರಿ, ಒಂದು ಕಡೆ ಕಡಲು, ಮಧ್ಯದಂದು ಯಾವುದಕ್ಕೂ ಇರಲಿ ಎಂಬಂತಿಟ್ಟ ಹೊಳೆ. ಇಲ್ಲ ಬೆಟ್ಟದ ಏರು-ತಗ್ಗುಗಳೇ ನದಿಗಳಾಗಿ, ಆ ನದಿಗಳೇ ಅಲ್ಲಲ್ಲಿ ತಿರುಗಿ ಊರುಗಳಾಗಿವೆ. ಎಂದರಲ್ಲಿ ತೆಂಗು, ಅಡಕೆ, ಬಾಳೆ ತೋಟ, ಇಲ್ಲವೇ ಬೋಳು ಬೆಟ್ಟ. ಅದರ ಮಧ್ಯದಲ್ಲಿ ಅಲ್ಲಲ್ಲಿ ಅಡಗಿ ಕೂತಿರುವ ಮಂಗಳೂರು ಹಂಚಿನ ಟೊಪ್ಪಿಗೆ ಹಾಕಿಕೊಂಡ ತೇರಿನಾಕೃತಿಯ ಮನೆಗಳು.

ತೋಟಗಳ ಮಧ್ಯೆಯ ಮಾವು, ಹುಳಸೆ ಮರಗಳಂತೆ ನಮ್ಮೂರು ‘ಮೂರೂರಿಗೆ’ ಯಾವುದೇ ಆಧುನಿಕತೆಯ ಧಾವಂತವಿಲ್ಲ. ಊರು ಅಘನಾಶಿನಿ ನದಿಯಂತೆ ನಿಧಾನ ಮತ್ತು ಸಮಾಧಾನ. ಉತ್ತರ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ರೀತಿ ಸಂಖ್ಯೆಯನ್ನೇ ಹೆಸರಾಗಿಸಿ ಕೊಂಡ ಒಂದಿಷ್ಟು ಊರುಗಳಿವೆ.

ಒಂದೂರು, ಎರಡೂರು, ಮೂರೂರು, ನಾಲ್ಕೂರು ಇತ್ಯಾದಿ. ಮಜವೇನೆಂದರೆ ನನ್ನ ಊರು ಮೂರೂರು, ನನ್ನ ಅಮ್ಮನ ಮನೆಯ ಊರು ನಾಲ್ಕೂರು! ಆಸುಪಾಸಿನ ಗ್ರಾಮಗಳನ್ನು ಒಗ್ಗೂಡಿಸಿದ ಮಾರ್ಗಮಾತ್ರ ಕಾರಣಕ್ಕೆ ಈ ಊರುಗಳಿಗೆ ಹೀಗೆ ಹೆಸರು ಬಂತೋ, ಅವುಗಳಿಗೆ ಅದಕ್ಕಿಂತ ಮೊದಲು ಬೇರೆ ಹೆಸರೇನಾದರೂ ಇತ್ತೋ- ಗೊತ್ತಿಲ್ಲ.

ಇದನ್ನೂ ಓದಿ: Shishir Hegde Column: ಕುರ್ಚಿಯು ಹೋಗಿ ಮುಟ್ಟಬೇಕಾದ ಜಾಗವಾಗಿದ್ದು ಹೇಗೆ ?

ಅಂಥ ಮೂರು ಆಸುಪಾಸಿನ ಊರುಗಳ ರಸ್ತೆಗಳು ಪೇಟೆಯ ನಾಲ್ಕನೇ ರಸ್ತೆಗೆ ಸೇರುವ ಸ್ಟ್ರಾಟೆಜಿಕ್ ಜಾಗವಾದ ಮೂರೂರು ಪೇಟೆಯಲ್ಲಿ ಇರೋದು ನಾಲ್ಕಾರು ಗೂಡಂಗಡಿ, ಬಟ್ಟೆ, ಕಿರಾಣಿ ಅಂಗಡಿಗಳು ಮತ್ತು ಶ್ರೀಧರ್ ಡಾಕ್ಟರ್ ಕ್ಲಿನಿಕ್, ಸೊಸೈಟಿ, ಬ್ಯಾಂಕ್, ಅಲ್ಲಿಯೇ ಮರೆಯಂದು ರಾಮಪ್ಪನ ‘ಯೆಣ್ಣೆ’ ಅಂಗಡಿ!

ಕುಮಟೆ ಪೇಟೆಯ ಬಸ್ಸುಗಳು ತಾಸುಗಳ ಅಂತರದಲ್ಲಿ ಬರುವುದು ಹೋಗುವುದು ದಿನದ ಮುಖ್ಯ ಘಟನೆಗಳು. ಅದು ಬಿಟ್ಟರೆ ಸಾಯಂಕಾಲ ತೋಟದ ಕೆಲಸ ಮುಗಿಸಿ ಬಂದವರಲ್ಲಿ ಕೆಲವರು ರಾಮಪ್ಪನ ದರ್ಶನ ಮಾಡಿ ಬಂದು ಚಿಕ್ಕಪುಟ್ಟ ಮಾತು, ತಳ್ಳಾಟ.

ಬಿಟ್ಟರೆ ನಮ್ಮೂರಲ್ಲಿ ಬೇರೇನೂ ಬ್ರೇಕಿಂಗ್ ನ್ಯೂಸ್ ಇರುವುದೇ ಇಲ್ಲ. ಅಲ್ಲಿನ ಇಲೆಕ್ಟ್ರಿಕ್ ಕಂಬಗಳಿಗಿದ್ದ ಮೂರ್ನಾಲ್ಕು ಹ್ಯಾಲೊಜೆನ್ ದೀಪಗಳಿಂದಲೋ ಏನೋ, ಅದನ್ನು ನಾವೆಲ್ಲ ಕರೆಯುವುದು ‘ಮೂರೂರು ಪೇಟೆ’.

ಅವರ ಹೆಸರು ‘ಅಂಗಡಿ ಗಣೇಶ ಭಟ್ಟರು’. ಅವರದು ಕಿರಾಣಿ (ದಿನಸಿ) ಅಂಗಡಿ ಇದ್ದ ಕಾರಣ ಅವರ ಹೆಸರಿನ ಜತೆಯೇ ಅಂಗಡಿ ಸೇರಿಕೊಂಡದ್ದು. ಪ್ರತಿ ಊರಿನಲ್ಲೂ ಪ್ರಾಮಾ ಣಿಕತೆಯ ವಿಷಯದಲ್ಲಿ ಯಾವುದೋ ಒಂದು ಅಂಗಡಿಗೆ ಜನಮಾನಸದಲ್ಲಿ ಮೊದಲ ಸ್ಥಾನವಿರುತ್ತದೆಯಲ್ಲ, ಅದು ನಮ್ಮೂರಲ್ಲಿ ಕೆಲವು ದಶಕಗಳಿಂದ ಗಣೇಶ ಭಟ್ಟರ ಕಿರಾಣಿ ಅಂಗಡಿ.

ಗಣೇಶ ಭಟ್ಟರು ವ್ಯಾಪಾರದ ಡಿಗ್ರಿ ಮುಗಿಸಿದವರಲ್ಲ. ಅವರದೇನು ಕೋಟಿ ಲೆಕ್ಕದ ವಹಿವಾಟಲ್ಲ. ಅವರೆಂದೂ ಪ್ರಾಮಾಣಿಕತೆಯ ಬಗ್ಗೆ ಭಾಷಣ ಬಿಗಿದು ಬೀಗಿದವರಲ್ಲ. ಒಬ್ಬ ಸಾಮಾನ್ಯ ವ್ಯಾಪಾರಿ. ಅಂಗಡಿಯ ಮರದ ಗಾಜಿನ ಕಪಾಟಿನ ಮೈಸೂರು ಸ್ಯಾಂಡಲ್, ಹಮಾಮು ಸೋಪುಗಳ ಹಿಂದೆ ನಿಂತು ದಶಕ ದಶಕಗಳ ಕಾಲ ಅಕ್ಕಿ, ಸಕ್ಕರೆ, ಕಾಳು-ಬೇಳೆ ಇತ್ಯಾದಿ ತೂಗಿದ ಅವರ ತಕ್ಕಡಿ ಎಂದೂ, ಒಮ್ಮೆಯೂ ಮೋಸದಿಂದ ಒಂದು ಕಡೆ ಹೆಚ್ಚು ವಾಲಿದ್ದಿಲ್ಲ, ಅವರಂತೆಯೇ.‌

Screenshot_1 R

ಊರಿನವರ ಮುಖ್ಯ ಆದಾಯ ಕೃಷಿ. ಕೃಷಿ ಕಾರ್ಮಿಕರು ನಿತ್ಯ ದುಡಿಯುವವರು ಇವರ ಅಂಗಡಿಯಲ್ಲಿ ಆಗಿಂದಾಗ್ಗೆ ಹಣಕೊಟ್ಟು ವಸ್ತುಗಳನ್ನು ಖರೀದಿಸುತ್ತಿದ್ದರು. ಉಳಿದಂತೆ ಕೃಷಿ ಆದಾಯ ಎಂದರೆ ತಿಂಗಳಿಗೊಮ್ಮೆ ಬರುವ ಸಂಬಳದಂತಲ್ಲವಲ್ಲ. ಹಾಗಾಗಿ ಊರಿನ ಹಲವಾರು ಮನೆಗಳ ಉದ್ರಿಪಟ್ಟಿ ಇರುತ್ತಿತ್ತು. ಪ್ರತಿ ಬಾರಿ ಅವರಂಗಡಿಗೆ ವಸ್ತುಗಳನ್ನು ಖರೀದಿಸಲು ಹೋದರೆ, ಅದರಲ್ಲಿ ಖರೀದಿಸಿದ ಸಾಮಾನು ಮತ್ತು ಮೊತ್ತ ಬರೆದು ಕೊಡು ತ್ತಿದ್ದರು. ತಿಂಗಳಿಗೊಮ್ಮೆ ಅಥವಾ ಒಂದಿಷ್ಟು ಅವಧಿಯ ನಂತರ- ಸಾಮಾನ್ಯವಾಗಿ ಕೃಷಿಕರು ಬೆಳೆ ಮಾರಿ ಬಂದಾಗ ಈ ಲೆಕ್ಕವನ್ನು ಚುಕ್ತಾ ಮಾಡುತ್ತಿದ್ದರು. ಒಮ್ಮೊಮ್ಮೆ ಹೀಗಾಗುತ್ತಿತ್ತು.

ಕೆಲವರ ಖರೀದಿ ಹೆಚ್ಚಿ- ಉದ್ರಿ ಪಟ್ಟಿಯ ಮೊತ್ತ ದೊಡ್ಡದಾಗಿ ಬಿಡುತ್ತಿತ್ತು (ಕ್ರೆಡಿಟ್ ಕಾರ್ಡ್ ಬಳಸಿದಂತೆ). ಆ ಸಮಯದಲ್ಲಿ ಗಣೇಶ ಭಟ್ಟರು ಒಂದು ಸೂಕ್ಷ್ಮ ಪಾಲಿಸುತ್ತಿದ್ದರು. ಸುಮ್ಮನೆ ಉದ್ರಿ ಪಟ್ಟಿಯಲ್ಲಿ ಇಲ್ಲಿಯವರೆಗಿನ ಎಲ್ಲಾ ಮೊತ್ತವನ್ನು ಲೆಕ್ಕ ಮಾಡಿ ಬರೆಯುತ್ತಿದ್ದರು. ಅವರು ಹಾಗೆ ಬಾಕಿ ಮೊತ್ತ ಬರೆದರು ಎಂದರೆ ಊರಿನವರಿಗೆ ಅರ್ಥವಾಗಿ ಬಿಡುತ್ತಿತ್ತು.

ಹಣದ ಬಾಕಿಯನ್ನು ಅತ್ಯಂತ ಸೂಕ್ಷ್ಮದಲ್ಲಿ ಈ ರೀತಿ ಕೇಳುತ್ತಿದ್ದರು. ಅವರೆಂದೂ ಯಾರನ್ನೂ ಈ ಬಾಕಿ ಮೊತ್ತಕ್ಕೆ ಅವಮಾನಿಸಿದ್ದು ಇಲ್ಲವೇ ಇಲ್ಲ. ತೀರಾ ಬಾಕಿಯಾಗಿ ಬಿಟ್ಟರೆ ಪಕ್ಕದಲ್ಲಿ ಕರೆದು ಯಾರಿಗೂ ತಿಳಿಯದಂತೆ ಗುಟ್ಟಲ್ಲಿ ಹೇಳುತ್ತಿದ್ದರು.

ಪ್ರಾಮಾಣಿಕತೆ ಎಂದರೆ ತೂಕದಲ್ಲಷ್ಟೇ ಅಲ್ಲ, ಅವರ ಪ್ರತಿಯೊಂದು ನಡೆಯಲ್ಲೂ ಇತ್ತು. ಒಮ್ಮೊಮ್ಮೆ ಅವರು ದೂರದ ಹುಬ್ಬಳ್ಳಿಯಿಂದ ತರುತ್ತಿದ್ದ ಸಾಮಾನುಗಳಲ್ಲಿ ಕಲಬೆರಕೆ ಇದ್ದುಬಿಡುತ್ತಿತ್ತು. ಅದನ್ನು ಅವರು ಸುಮ್ಮನೆ ಗ್ರಾಹಕರಿಗೆ ದಾಟಿಸುತ್ತಿರಲಿಲ್ಲ. ಬದಲಿಗೆ ಈ ಬಾರಿ ಈ ಅಕ್ಕಿಯಲ್ಲಿ ಕಲ್ಲು ಜಾಸ್ತಿ ಇದೆ ಎಂಬಿತ್ಯಾದಿ ಅವರೇ ಹೇಳಿ ಬಿಡುತ್ತಿದ್ದರು.

ಅಂಥ ಸಾಮಾನುಗಳಿಗೆ ದರ ಕಡಿಮೆ ಮಾಡಿ, ಕೆಲವೊಮ್ಮೆ ನಷ್ಟಕ್ಕೆ ಮಾರುತ್ತಿದ್ದುದೂ ಉಂಟು. ಅವರದು ಅಷ್ಟು ಹೊಣೆಗಾರಿಕೆ. ಕೆಲವೊಮ್ಮೆ ಅವರ ಅಂಗಡಿಗೆ ಶಾಲೆ ಮಕ್ಕಳು ಕೈಮುಷ್ಟಿಯಲ್ಲಿ ಐದು-ಹತ್ತು ರುಪಾಯಿ ಹಿಡಿದು ಬಂದು “ಚಾಕಲೇಟ್ ಕೊಡಿ" ಎಂದು ಕೈ ಮುಂದು ಮಾಡುತ್ತಿದ್ದರು. ಆದರೆ ಗಣೇಶ ಭಟ್ಟರು ಸುಮ್ಮನೆ ದುಡ್ಡು ತೆಗೆದುಕೊಂಡು ಚಾಕಲೇಟ್ ಕೊಟ್ಟುಬಿಡುತ್ತಿರಲಿಲ್ಲ.

“ಯಾರು ದುಡ್ಡು ಕೊಟ್ಟರು? ಎಲ್ಲಿಂದ ದುಡ್ಡು ಬಂತು?" ಎಂದೆಲ್ಲ ಚಿಕ್ಕಧ್ವನಿಯಲ್ಲಿ ವಿಚಾರಿಸುತ್ತಿದ್ದರು. ಒಂದು ವೇಳೆ ಅವರಿಗೆ ನಂಬಿಕೆ ಬಾರದಿದ್ದಲ್ಲಿ ಅಂಥ ಮಕ್ಕಳನ್ನು ಹಾಗೆಯೇ ಕಳಿಸಿ ಬಿಡುತ್ತಿದ್ದರು. ಆ ಹುಡುಗ ಮುಂದಿನ ಇನ್ನೊಂದು ಅಂಗಡಿಯಲ್ಲಿಯೇ ಚಾಕಲೇಟ್ ಖರೀದಿಸುತ್ತಾನೆ ಎನ್ನುವುದು ಅವರಿಗೆ ಅಂದಾಜಿತ್ತು.

ಅವರದಿನ್ನೊಂದು ಗುಣ ಎಂದರೆ ಎಲ್ಲರಿಗೂ ಏಕರೂಪದ ಮರ್ಯಾದಿ. ಅವರ ತಕ್ಕಡಿ ಯಲ್ಲಿ ಚಿಕ್ಕಮಕ್ಕಳಾದಿಯಾಗಿ ಎಲ್ಲರದೂ ಒಂದೇ ತೂಕ. ಒಮ್ಮೆ ಹೀಗಾಯಿತು. ಚಿಕ್ಕ ಹುಡುಗನೊಬ್ಬ ಅವರ ಅಂಗಡಿಗೆ ಬಂದು ಏಕವಚನದಲ್ಲಿ “ಯೇ, ಗಣೇಶ ಭಟ್ಟಾ, ಒಂದು ಕೆಜಿ ಅವಲಕ್ಕಿ ಕೊಡು" ಎಂದು ಅವರನ್ನುದ್ದೇಶಿಸಿ ಏಕವಚನದಲ್ಲಿ ಹೇಳಿಬಿಟ್ಟ!

ಅರವತ್ತರ ಆಸುಪಾಸಿನಲ್ಲಿದ್ದ ಗಣೇಶ ಭಟ್ಟರಿಗೆ ಯಾರೂ ಏಕವಚನ ಬಳಸುತ್ತಿರಲಿಲ್ಲ. ನಮ್ಮಲ್ಲಿ ಈ ರೀತಿ ಏಕವಚನದ ಬಳಕೆ ತೀರಾ ಕಡಿಮೆ. ಅದರಲ್ಲೂ ಚಿಕ್ಕಹುಡುಗ ಈ ರೀತಿಯಲ್ಲಿ ಏಕವಚನ ಬಳಸಿದ್ದು ಕಂಡು ಅಲ್ಲಿರುವವರೆಲ್ಲ ಹುಬ್ಬುಗಟ್ಟಿದರು. ಅಂಗಡಿ ಯ ಕೆಲಸದವರು, ಮತ್ತಿತರರು ಆ ಹುಡುಗನನ್ನು ಗದರಿಸಿದರು. ಆದರೆ ಗಣೇಶ ಭಟ್ಟರು ಕೋಪಗೊಳ್ಳಲಿಲ್ಲ, ಬದಲಿಗೆ ಅವರನ್ನೆಲ್ಲ ಸುಮ್ಮನಾಗಿಸಿದರು.

“ನೋಡಿ, ಇದರಲ್ಲಿ ಅವನದೇನೂ ತಪ್ಪಿಲ್ಲ, ಮನೆಯಲ್ಲಿ ಅವನ ತಂದೆಯೋ, ತಾಯಿಯೋ, ಹಿರಿಯರೋ ‘ಗಣೇಶ ಭಟ್ಟನ’ ಅಂಗಡಿಯಿಂದ ಒಂದು ಕೆಜಿ ಅವಲಕ್ಕಿ ತೆಗೆದುಕೊಂಡು ಬಾ ಎಂದು ಹೇಳಿರುತ್ತಾರೆ, ಅದನ್ನೇ ಈ ಹುಡುಗ ಇಲ್ಲಿ ಬಂದು ಹೇಳಿದ್ದಾನೆ" ಎಂದು ನಸುನಕ್ಕು, ಅವನ ತಲೆ ಸವರಿ ಮನೆಗೆ ಕಳುಹಿಸಿಕೊಟ್ಟರು.

ಪ್ರಾಮಾಣಿಕ ತೂಕ, ಮೋಸವಿಲ್ಲದ ಉತ್ತಮ ಗುಣಮಟ್ಟದ ಪಕ್ಕಾ ಸಾಮಾನುಗಳು, ಯಾರಿಗೂ ಅವಮಾನಿಸದ, ನೋಯಿಸದ ರೀತಿಯ ವ್ಯವಹಾರ. ಎಲ್ಲರಿಗೂ ಗೌರವ. ಹಾಗಾಗಿ ಅವರ ಅಂಗಡಿಗೆ ಎಲ್ಲಿಲ್ಲದ ವ್ಯಾಪಾರ. ದೂರದ ಬೆಂಗಳೂರಿನಂಥ ಶಹರಗಳಿಗೆ ಸೇರಿದ ತಂಬಾಕು ತಿನ್ನುವ ಪುರುಷರು ಊರಿಗೆ ಬಂದಾಗ, ಅಲ್ಲಿ ಒಳ್ಳೆಯ ಮಾಲು ಸಿಗುವು ದಿಲ್ಲ ಎಂದು ಇವರಿಂದ ಒಂದೆರಡು ಕೆಜಿ ತಂಬಾಕು ಒಯ್ಯುತ್ತಿದ್ದರು.

ಪರ ಊರು ಸೇರಿದ ಊರಿನ ಮಹಿಳೆಯರು ತವರಿಗೆ ಬಂದಾಗ ಮಾಡಬೇಕಾದ ಕೆಲಸಗಳ ಪಟ್ಟಿಯಲ್ಲಿ- ಗಣೇಶ ಭಟ್ಟರ ಅಂಗಡಿಯ ಅಫ್ಘಾನಿ ಇಂಗು, ನಟರಾಜ್ ಬ್ರ್ಯಾಂಡಿನ ಅಸಲಿ ಕೇಸರಿ ಇತ್ಯಾದಿ ಇರುತ್ತಿತ್ತು. ವ್ಯಾಪಾರಂ ದ್ರವ್ಯ, ದ್ರೋಹ ಇತ್ಯಾದಿ ಚಿಂತನಂ ಎಂದಿದೆ ಯಲ್ಲ, ಅದಕ್ಕೆ ವಿರುದ್ಧ ಬದುಕಿದವರು ಅಂಗಡಿ ಗಣೇಶ ಭಟ್ಟರು. ಅವರು ನಮ್ಮೂರಿನ ಬಾಕಿ ಅಂಗಡಿಗಳಿಗಿಂತ ಹೆಚ್ಚಿನ ವ್ಯಾಪಾರ ಮಾಡುತ್ತಿದ್ದರು.

ನಾನು ಕೆಲಸ ಮಾಡುವ ಕಂಪನಿ ಜಪಾನ್ ಮೂಲದ್ದು. ಹಾಗಾಗಿ ನನ್ನ ಉದ್ಯೋಗದಲ್ಲಿ ಜಪಾನ್ ಆಡಳಿತ ಮಂಡಳಿಯವರ ಜತೆ ಮೀಟಿಂಗ್, ಮಾತುಕತೆ ನಡೆಯುತ್ತಿರುತ್ತದೆ. ಈಗೆರಡು ವಾರದ ಹಿಂದೆ ನಮ್ಮ ಕಂಪನಿಯ ಜಪಾನ್ ವಿಭಾಗದ ಮುಖ್ಯಸ್ಥರು- ನಾವು ಕೆಲವು ಸಹೋದ್ಯೋಗಿಗಳ ಜತೆ ಮಾತನಾಡುತ್ತಿದ್ದರು. ಅವರು ಜಪಾನಿನ ಓಮಿ ವ್ಯಾಪಾರಸ್ಥರ ಬಗ್ಗೆ ಒಂದಿಷ್ಟು ವಿಚಾರ ಹಂಚಿಕೊಂಡರು.

17-18ನೇ ಶತಮಾನದ ಸಮಯ. ಜಪಾನಿನ ಓಮಿ ಎಂಬ ಪ್ರಾಂತ್ಯ. ಅಲ್ಲಿನ ಕೃಷಿ ಭೂಮಿ ಅಷ್ಟು ಫಲವತ್ತಲ್ಲ. ಹಾಗಾಗಿ ಅಲ್ಲಿನ ಯುವಕರು ಆದಾಯಕ್ಕೆಂದು ಒಂದೂರಿಂದ ಇನ್ನೊಂದೂರಿಗೆ ವ್ಯಾಪಾರಕ್ಕೆ ಹೋಗುತ್ತಿದ್ದರು. ಉದ್ದದ ಕೋಲಿಗೆ ಆಚೀಚೆ ಸಾಮಾನು ಗಳನ್ನು ಕಟ್ಟಿ (ಶ್ರವಣಕುಮಾರ ತಂದೆ-ತಾಯಿಯನ್ನು ಒಯ್ದಂತೆ) ಊರೂರು ಸುತ್ತುವುದು, ವಸ್ತುಗಳನ್ನು ಮಾರುವುದು, ವ್ಯಾಪಾರ ಮಾಡುವುದು.

ಕ್ರಮೇಣ ಅವರ ಪ್ರಾಮಾಣಿಕತೆಯಿಂದಾಗಿ ಈ ವ್ಯಾಪಾರಿ ಸಮೂಹ ಬೆಳೆಯಿತು, ದೊಡ್ಡ ದಾಯಿತು. ಹತ್ತಿಪ್ಪತ್ತಿದ್ದ ವ್ಯಾಪಾರಿಗಳ ಸಂಖ್ಯೆ ಇನ್ನೂರು-ಮುನ್ನೂರು ದಾಟಿತು. ಕ್ರಮೇಣ ಈ ಓಮಿ ವ್ಯಾಪಾರಿಗಳ ನೆಟ್‌ವರ್ಕ್ ಇಡೀ ಜಪಾನನ್ನು ಆವರಿಸಿತು.

Philosophy of Sanpo Yoshi &- ಇದು ಈ ನೂರಾರು ವ್ಯಾಪಾರಿಗಳು ಪಾಲಿಸಿಕೊಂಡು ಬಂದ ಏಕತತ್ವ. ಸ್ಯಾನ್ಪೋಯೋಷಿ. ಇದು ಮೂರೇ ಮೂರು ಸಾಲಿನ ವ್ಯಾಪಾರಿ ಸೂತ್ರ. Good For Seller. Good For Buyer. Good For Society. ವ್ಯಾಪಾರದಿಂದ ‘ಮಾರಾಟ ಮಾಡುವವನಿಗೆ ಒಳ್ಳೆಯದಾಗಬೇಕು. ಖರೀದಿಸುವ ಗ್ರಾಹಕನಿಗೆ ಒಳ್ಳೆಯದಾಗಬೇಕು. ಸಮಾಜಕ್ಕೆ ಒಳ್ಳೆಯದಾಗಬೇಕು’. ಈ ಮೂರರಲ್ಲಿ ಮೂರಕ್ಕೆ ಮೂರೂ ಹೊಂದಬೇಕು. ಒಂದನ್ನು ಬೇಕೆಂದು ಅನುಕೂಲಕ್ಕೆ ಬಿಡುವಂತಿಲ್ಲ.

ಊರೂರು ಅಲೆದು ಮಾರಾಟಮಾಡುವವರಿಗೆ ಅನಾಮಿಕತೆಯ, ಮೋಸ ಮಾಡುವ ಅವಕಾಶ ಮತ್ತು ಸಾಧ್ಯತೆ ಎರಡೂ ಹೆಚ್ಚು. ಅಗ್ಗದ ವಸ್ತುವನ್ನು ಹಿಗ್ಗಿಸಿ ಮಾರಾಟಮಾಡಿ, ಒಂದಕ್ಕೆರಡು ಲಾಭ ಮಾಡಿ ಮಾಯವಾಗಿಬಿಡಬಹುದು. ಆದರೆ ಓಮಿ ವ್ಯಾಪಾರಿಗಳು ನೂರು ಪ್ರತಿಶತ ಸಮಯ, ಸರಿಯಾದ ಬೆಲೆಗೆ ವಸ್ತುಗಳನ್ನು ಮಾರುತ್ತಿದ್ದರು. ಅವರೆಂದೂ ಗ್ರಾಹಕನನ್ನು ನೋಡಿ ಬೆಲೆ ನಿರ್ಧರಿಸುತ್ತಿರಲಿಲ್ಲ.

ಮಾರುವ ವಸ್ತುವಿನ ಗುಣಾವಗುಣಗಳನ್ನು ಅವರೇ ಹೇಳಿ ಬಿಡುತ್ತಿದ್ದರು. ಇದು ಹೀಗೆ, ಇಷ್ಟು ಕಾಲ ಬಾಳಿಕೆ ಬರಬಹುದು, ಹೀಗೆ ಬಳಸಬೇಕು ಎಲ್ಲ ವಿವರಗಳಲ್ಲಿ ಎಳ್ಳಷ್ಟೂ ಸುಳ್ಳಿಲ್ಲ. ಪ್ರಾಮಾಣಿಕತೆಯೇ ಅವರ ಸೇಲ್ಸ ಪಿಚ್. ವಸ್ತುಗಳು ಸರಿಯಿಲ್ಲದಿದ್ದರೆ, ಹೇಳಿದಂತೆ ನಡೆಯದಿದ್ದರೆ ಮುಂದಿನ ಬಾರಿ ಬಂದಾಗ ಯಾವುದೇ ಪ್ರಶ್ನೆಯಿಲ್ಲದೆ ಮರಳಿ ಪಡೆಯು ತ್ತಿದ್ದರು.

ಬಂದ ಸ್ವಲ್ಪ ಲಾಭದಲ್ಲಿ ಒಂದಂಶ ಅದೇ ಊರಿನ ದೇವಸ್ಥಾನ-ಶಾಲೆಗಳಿಗೆ ತಪ್ಪದೆ ದಾನ ಮಾಡುತ್ತಿದ್ದರು. ಓಮಿ ವ್ಯಾಪಾರಿಗಳು ಅದೆಷ್ಟು ಫೇಮಸ್ ಎಂದರೆ ಜನರು ಸ್ಥಳೀಯ ಅಂಗಡಿ ಗಳಿಗಿಂತ ಹೆಚ್ಚಾಗಿ ಓಮಿ ವ್ಯಾಪಾರಿಗಳನ್ನು, ಅವರ ವಸ್ತುಗಳನ್ನು ನಂಬುತ್ತಿದ್ದರು. ಊರು ಅವರನ್ನು ಸ್ವಾಗತಿಸುತ್ತಿತ್ತು- ಅವರು ಕೂಡ ಇದ್ದಷ್ಟೂ ದಿನ ಅದೇ ಊರಿನವರಾಗಿ ವ್ಯವಹರಿಸುತ್ತಿದ್ದರು.

ಒಂದಿಬ್ಬರಲ್ಲ- ಎಲ್ಲರೂ ಹಿತಮಿತವಾದ ಮಾತು- ಶುದ್ಧ, ಮೋಸವಿಲ್ಲದ ವ್ಯವಹಾರ. ನಿಯಮಿತ ಲಾಭ. ನಮ್ಮ ಕಂಪನಿಯ ಜಪಾನ್ ವಿಭಾಗದ ಸಿಇಒ ಈ ‘ಓಮಿ ವ್ಯಾಪಾರಿಗಳ’ ತತ್ವವನ್ನು ಬೋಧಿಸುತ್ತಿದ್ದರೆ ನನಗೆ ಮಾತ್ರ ಪ್ರತಿಯೊಂದು ವಾಕ್ಯದ ತುದಿಯಲ್ಲೂ ನೆನಪಾಗುತ್ತಿದ್ದುದು ಊರಿನ ಅಂಗಡಿ ಗಣೇಶ ಭಟ್ಟರು.

ಮಾರುವವನಿಗೆ, ಕೊಳ್ಳುವವನಿಗೆ ಮತ್ತು ಸಮಾಜಕ್ಕೆ ಒಳ್ಳೆಯದಾಗಬೇಕು. ಓಮಿ ವ್ಯಾಪಾರಿ ಗಳು ನಂತರದ ದಿನದಲ್ಲಿ ಅದೆಷ್ಟೇ ಪ್ರಭಾವಿಗಳಾಗಿ ಬೆಳೆದರೂ, ವ್ಯವಹಾರ ಬೆಳೆದರೂ ಈ ತತ್ವವನ್ನು ಮಾತ್ರ ಬಿಡಲಿಲ್ಲ. ಈಗ ಆ ಓಮಿಗಳು ಕಟ್ಟಿದ ವ್ಯಾಪಾರ ಜಪಾನಿನ ನೂರಾರು ಕಂಪನಿಗಳಾಗಿ ಬದಲಾಗಿವೆ. ಅದರಲ್ಲಿ ಹೆಚ್ಚಿನ ಕಂಪನಿಗಳು ಇಂದಿಗೂ ಇದೇ ತತ್ವವನ್ನು ಪಾಲಿಸಿಕೊಂಡು ಬಂದಿವೆ.

‘ಮೇಡ್ ಇನ್ ಜಪಾನ್’ ಎಂದರೆ ಅದು ನಂಬಿಕೆ ಎಂಬುದು ಇಂದಿಗೂ ಹಾಗೆಯೇ ಉಳಿದಿದೆ. ಗಣೇಶ ಭಟ್ಟರ ನಂತರ ಅವರ ಮಗ ಮತ್ತು ಈಗ ಮೊಮ್ಮಗ ಅಂಗಡಿ ನೋಡಿಕೊಳ್ಳುತ್ತಾರೆ. ಅಂಗಡಿಯ ಮುಂಗಟ್ಟು ಬದಲಾಗಿದೆ, ಕಟ್ಟಡ ದೊಡ್ಡದಾಗಿದೆ, ಮಂಗಳೂರು ಹಂಚಿದ್ದಲ್ಲಿ ಆರ್‌ಸಿಸಿ ಚಾವಣಿ ಮನೆಯನ್ನು ಸಪಾಟು ಮಾಡಿದೆ. ಆದರೆ ಇಂದಿಗೂ ಗಣೇಶ ಭಟ್ಟರ ಅಂಗಡಿಯಲ್ಲಿ ‘ನೈತಿಕತೆ’ ಎಂಬ ಶ್ರುತಿಯು ದೂರದ ಸಮುದ್ರದಂತೆ ಸದಾ ಹಿನ್ನೆಲೆಯಲ್ಲಿ ಇದ್ದೇ ಇದೆ.

ನಾನು ಬೆಂಗಳೂರಿನಲ್ಲಿ ಮೊದಲು ನೋಡಿದ, ಸುತ್ತಿದ ಜಾಗ ಮೆಜೆಸ್ಟಿಕ್. ನಮ್ಮ ಮಹಾ ನಗರಗಳಲ್ಲಿ ಬಹುತೇಕ ವ್ಯಾಪಾರಗಳಲ್ಲಿ ಗ್ರಾಹಕರು ಅನಾಮಿಕರು. ವ್ಯಾಪಾರ ಹೆಚ್ಚಾಗಿ ಒಂದೇ ವಿನಿಮಯಕ್ಕೆ ಸೀಮಿತ. ಎಸ್‌ಪಿ ರೋಡ್, ಮೆಜೆಸ್ಟಿಕ್ ಇತ್ಯಾದಿ ಉದಾಹರಣೆಗೆ. ಜನಸಂಖ್ಯೆ ಮೋಸಕ್ಕೊಂದು ಸಾಧ್ಯತೆಯನ್ನು ಕಲ್ಪಿಸಿಕೊಡುತ್ತದೆ.

ಆದರೆ ಈ ಎಲ್ಲ ಸದ್ದುಗದ್ದಲಗಳ ನಡುವೆ ಪ್ರತಿ ಊರಿನಲ್ಲೂ ಒಬ್ಬ ಪ್ರಾಮಾಣಿಕ ಓಮಿ, ಗಣೇಶ ಭಟ್ಟರಂಥ ಅಂಗಡಿಕಾರನಿರುತ್ತಾನೆ. ಅವಕಾಶವಿದೆ ಎಂದು ಅವನೆಂದೂ ಮೋಸ ಮಾಡುವುದಿಲ್ಲ. ಅವನು ಎಲ್ಲರಿಗಿಂತ ಹೆಚ್ಚಿನ ಲಾಭವನ್ನು ಸದ್ದಿಲ್ಲದೆ ಮಾಡುತ್ತಿರುತ್ತಾನೆ.

ಕೆಲವು ವ್ಯಾಪಾರಿಗಳು ಗ್ರಾಹಕನನ್ನು ಮಾತಿನಲ್ಲಿ ಮರಳುಮಾಡುವ ಬುದ್ಧಿವಂತಿಕೆಯನ್ನೇ ‘ಸೇಲ್ಸ್ ಪಿಚ್’ ಎಂದು ಭಾವಿಸಿರುತ್ತಾರೆ. ಗ್ರಾಹಕ ಆ ಕ್ಷಣಕ್ಕೆ ಮೋಸಹೋಗಬಹುದು, ಆದರೆ ಅವನು ಅದನ್ನು ಇಂದಲ್ಲ ನಾಳೆ ಅರ್ಥಮಾಡಿಕೊಳ್ಳುತ್ತಾನೆ. ಮೋಸ ಹೋದವನು ಎಂದಿಗೂ ಅದನ್ನು ನೆನಪಿಟ್ಟುಕೊಳ್ಳುತ್ತಾನೆ ಎನ್ನುವುದು ಅತ್ಯಂತ ಸರಳ, ನೇರ ವಿಚಾರ. ನಾನು ಹೈಸ್ಕೂಲ್ ಕಲಿಯುತ್ತಿದ್ದಾಗ ಒಮ್ಮೆ ಬೆಂಗಳೂರಿಗೆ ಬಂದಿದ್ದೆ.

ಆಗ ಮೆಜೆಸ್ಟಿಕ್ʼನಲ್ಲಿ- ರಸ್ತೆ ಬದಿ ಬೆಂಕಿಪಟ್ಟಿಗೆಯಾಕೃತಿಯ ‘ಎಫ್ಎಂ’ ರೇಡಿಯೋ ಮಾರಾಟ ಮಾಡುತ್ತಿದ್ದರು. ನಾನೂ ಒಂದು ರೇಡಿಯೋ ಖರೀದಿಸಿದೆ. ಅವನು ಅದನ್ನು ಪ್ಲಾಸ್ಟಿಕ್ ಬ್ಯಾಗ್ ಒಂದರಲ್ಲಿ ಹಾಕಿ ಕೊಟ್ಟ. ಹಾಕಿ ಕೊಡುವಾಗ ಕೈ ಬದಲಾಯಿಸಿ ವೈರ್ ತುಂಡಾದ ರೇಡಿಯೋವನ್ನು ಹಾಕಿಕೊಟ್ಟು ಬಿಟ್ಟಿದ್ದ. ಅವನು ಏನೋ ಮಾಡಿದ್ದು ಕಾಣಿಸಿತು, ನಾನು ಅಲ್ಲಿ ನೋಡಲಿಲ್ಲ. ‌

ಏನಾಯಿತೆಂದು ನನಗೆ ತಿಳಿದದ್ದು ಮನೆಗೆ ಬಂದ ಮೇಲೆ. ಒಂದಕ್ಕೆ ನಾಲ್ಕು ದುಡ್ಡು ಕೊಟ್ಟು ಕಸವೊಂದನ್ನು ಮನೆಗೆ ತಂದಿದ್ದೆ. ಆ ವ್ಯಾಪಾರಿಯ ಮುಖ ನನಗೆ ಇನ್ನೂ ನೆನಪಿದೆ. ಏಕೆ ಹೇಳಿದೆ ಎಂದರೆ ಯಾರೇ ಆಗಲಿ- ಮೋಸ ದೊಡ್ಡದಿರಲಿ, ಎಂಟಾಣೆ ಯದಿರಲಿ- ಮೋಸ ಹೋದದ್ದನ್ನು ಮಾತ್ರ ಯಾರೂ ಎಂದಿಗೂ ಮರೆಯುವುದಿಲ್ಲ.

ನಮ್ಮ ರಚನೆಯೇ ಹಾಗಿದೆ. ವ್ಯಾಪಾರಿಯು ಲಾಭದ ಲೆಕ್ಕವನ್ನು ಮರೆತರೂ, ಗ್ರಾಹಕರು ಮೋಸದ ಲೆಕ್ಕವನ್ನು ಮರೆಯುವುದಿಲ್ಲ.. ಇವೆಲ್ಲ ನೈತಿಕತೆಗಿಂತ ಹೆಚ್ಚಾಗಿ ವ್ಯಾಪಾರಿಗಳಲ್ಲಿ ಇರಬೇಕಾದ್ದು ಕಾಮನ್ ಸೆನ್ಸ್ ಸಾಮಾನ್ಯ ಬುದ್ಧಿವಂತಿಕೆ. ನಾವೆಲ್ಲರೂ ಒಂದಿಂದು ರೀತಿಯಲ್ಲಿ ವ್ಯಾಪಾರಿಗಳೇ. ‌

ಇಂದು ಪ್ರಾಮಾಣಿಕತೆಯು ನೈತಿಕ ಅವಶ್ಯಕತೆಯಲ್ಲ, ದೇವರು, ನ್ಯಾಯ, ಧರ್ಮ, ಕರ್ಮದ ವಿಚಾರವಲ್ಲ. ನಿರಂತರ ಬೆಳವಣಿಗೆ ( Sustained Growth ) ಬೇಕೆಂದರೆ ಪ್ರಾಮಾಣಿಕತೆ ಅವಶ್ಯಕತೆ, ಶೀಲ. ಇಂಥದ್ದೊಂದು ಸೂಕ್ಷ್ಮ ಅದೆಷ್ಟೋ ವ್ಯಾಪಾರಸ್ಥರಿಗೆ ತಿಳಿಯುವುದಿಲ್ಲ!

Good for the seller. Good for the buyer. Good for society.