Dr Sadhanashree Column: ಆಯುರ್ವೇದ ಹೇಳುವ ಕಿವಿಗಳ ಕಾಳಜಿ
ಕಿವಿ ಮತ್ತು ವಾತದೋಷ ನಮ್ಮ ದೇಹದಲ್ಲಿ ಕಿವಿಗಳು ಬಹು ಮಹತ್ವದ ಸ್ಥಾನ ಹೊಂದಿವೆ. ಮಾತು ಗಳನ್ನು ಆಲಿಸುವುದರ ಜತೆಗೆ ಸುತ್ತಮುತ್ತಲ ಸದ್ದು-ನಾದ ಗಳನ್ನು ಗ್ರಹಿಸುವ ಮೂಲಕ ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಕಿವಿಗಳ ಪಾತ್ರ ಅಪಾರ. ಇಂದಿನ ಯುಗದಲ್ಲಿ ಮೊಬೈಲ, ಇಯರ್ ಫೋನ್, ಜೋರಾದ ಸಂಗೀತ, ಶಬ್ದ ಮಾಲಿನ್ಯ ಮತ್ತು ಒತ್ತಡದ ಜೀವನಶೈಲಿ- ಇವುಗಳಿಂದ ಕಿವಿಯ ಸಂಬಂಧಿ ಸಮಸ್ಯೆಗಳು ಎಲ್ಲ ವಯೋಮಾನ ದವರಲ್ಲೂ ಹೆಚ್ಚುತ್ತಿವೆ.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಸುಮಾರು ೪೫ ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ತಮ್ಮ ವೃತ್ತಿಯ ನಿಮಿತ್ತವಾಗಿ ದಿನದಲ್ಲಿ ೬-೭ ಗಂಟೆಗಳ ಕಾಲ ಇಯರ್ ಫೋನ್ ಬಳಕೆ, ಖಾಲಿ ಹೊಟ್ಟೆಯಲ್ಲಿ ಪದೇ ಪದೆ ಚಹಾ-ಕಾಫಿ ಸೇವನೆ, ಅಕಾಲಿಕ ಊಟ ಮತ್ತು ತಡರಾತ್ರಿಯ ತನಕ ಲ್ಯಾಪ್‌ಟಾಪ್ ಬಳಕೆ ಮುಂತಾದ ಶೈಲಿಗೆ ಒಡ್ಡಿಕೊಂಡಿದ್ದರು; ಕೆಲವು ತಿಂಗಳಿಂದ ಎಡಕಿವಿಯಲ್ಲಿ ‘ಸದಾ ಶಿಳ್ಳೆ ಹೊಡೆಯುವ ಶಬ್ದ’ ಮತ್ತು ನಿದ್ರಾಹೀನತೆ ಅವರನ್ನು ಕಾಡತೊಡಗಿತು.
ಆಯುರ್ವೇದ ತಜ್ಞರನ್ನು ಕಂಡರು. ಅವರ ಸಲಹೆಯಂತೆ ಕರ್ಣಪೂರಣ, ಶಿರೋ ಅಭ್ಯಂಗ, ನಸ್ಯ ಚಿಕಿತ್ಸೆಗಳನ್ನು ಪಡೆದು ತಮ್ಮ ಆಹಾರ-ವಿಹಾರಗಳಲ್ಲಿ ಬದಲಾವಣೆ ಮಾಡಿಕೊಂಡರು. ಕ್ರಮೇಣ ವಾಗಿ ಅವರ ಶ್ರವಣಶಕ್ತಿಯಲ್ಲಿ ಸುಧಾರಣೆ ಕಾಣಿಸಿತು. ಆಗ ಅವರಿಗೆ ಸಿಕ್ಕ ಪಾಠ- ಔಷಧೋಪಚಾರ ಗಳು ತಾತ್ಕಾಲಿಕ ಶಮನವನ್ನು ನೀಡಿದರೆ, ಜೀವನಶೈಲಿಯ ಬದಲಾವಣೆಯಿಂದ ಮಾತ್ರ ಸ್ವಾಸ್ಥ್ಯದ ಸಂಪೂರ್ಣ ಅನುಭವ ಸಾಧ್ಯ.
ಆಯುರ್ವೇದದ ದೃಷ್ಟಿಕೋನ: ಕಿವಿ ಮತ್ತು ವಾತದೋಷ ನಮ್ಮ ದೇಹದಲ್ಲಿ ಕಿವಿಗಳು ಬಹು ಮಹತ್ವದ ಸ್ಥಾನ ಹೊಂದಿವೆ. ಮಾತುಗಳನ್ನು ಆಲಿಸುವುದರ ಜತೆಗೆ ಸುತ್ತಮುತ್ತಲ ಸದ್ದು-ನಾದ ಗಳನ್ನು ಗ್ರಹಿಸುವ ಮೂಲಕ ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಕಿವಿಗಳ ಪಾತ್ರ ಅಪಾರ. ಇಂದಿನ ಯುಗದಲ್ಲಿ ಮೊಬೈಲ, ಇಯರ್ ಫೋನ್, ಜೋರಾದ ಸಂಗೀತ, ಶಬ್ದ ಮಾಲಿನ್ಯ ಮತ್ತು ಒತ್ತಡದ ಜೀವನಶೈಲಿ- ಇವುಗಳಿಂದ ಕಿವಿಯ ಸಂಬಂಧಿ ಸಮಸ್ಯೆಗಳು ಎಲ್ಲ ವಯೋಮಾನ ದವರಲ್ಲೂ ಹೆಚ್ಚುತ್ತಿವೆ.
ಆಯುರ್ವೇದದಲ್ಲಿ ಕಿವಿಯನ್ನು ಶ್ರವಣೇಂದ್ರಿಯ ಎಂದು ಕರೆದಿದ್ದಾರೆ. ಇದು ಒಂದು ಜ್ಞಾನೇಂದ್ರಿ ಯ. ಇದು ಶಬ್ದವನ್ನು ಗ್ರಹಿಸುತ್ತದೆ. ಕಿವಿಯು ಮುಖ್ಯವಾಗಿ ವಾತದೋಷಕ್ಕೆ ಸಂಬಂಧಪಟ್ಟಿದೆ. ಇದು ವಾತ ದೋಷದ ಸ್ಥಾನ. ತಪ್ಪಾದ ಆಹಾರ ವಿಹಾರಗಳಿಂದ ದೇಹದಲ್ಲಿ ವಾತದೋಷವು ವಿಕೃತವಾದರೆ ಅದರ ಪರಿಣಾಮ ಕಿವಿಯ ಮೇಲೂ ಆಗುತ್ತದೆ.
ಕಿವಿಯಲ್ಲಿ ನೋವು, ಅತಿಯಾದ ಶಬ್ದ, ಶ್ರವಣಶಕ್ತಿಯ ಕುಗ್ಗುವಿಕೆಯಂಥ ಲಕ್ಷಣಗಳು ಕಾಣಿಸಿ ಕೊಳ್ಳುತ್ತವೆ. ಆದ್ದರಿಂದ ಕಿವಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಇಡಬೇಕಾದ ಮೊದಲನೇ ಹೆಜ್ಜೆಯೆಂದರೆ ಆಹಾರ ವಿಹಾರಗಳ ಸುಧಾರಣೆ. ಕಿವಿಗೆ ಸಂಬಂಧಿತ ತೊಂದರೆಗಳಿಗೆ ಕಾರಣಗಳು ಹೀಗಿವೆ: ಕಿವಿಯು ಮುಖ್ಯವಾಗಿ ವಾತದೋಷದ ಅಧೀನದಲ್ಲಿರುವ ಅಂಗ ಎಂದು ಆಗಲೇ ಹೇಳಿದೆ.
ವಾತದೋಷ ಎನ್ನುವುದು ಮುಖ್ಯವಾಗಿ ದೇಹದ ಚಲನೆ, ನರಮಂಡಲದ ಕಾರ್ಯ ಮತ್ತು ಶಬ್ದ ಗ್ರಹಣಕ್ಕೆ ಸಂಬಂಧಿಸಿದ ದೋಷವಾಗಿದೆ. ಆದ್ದರಿಂದ ವಾತ ಸಮತೋಲನದಲ್ಲಿದ್ದರೆ ಶ್ರವಣ ವ್ಯವಸ್ಥೆಯು ಸರಾಗವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ವಾತ ಉಲ್ಬಣಗೊಂಡಾಗ ಮೊದಲು ಹಾನಿಗೊಳಗಾಗುವುದು ಕಿವಿ ಮತ್ತು ನರಮಂಡಲದ ವ್ಯವಸ್ಥೆಯೇ. ಇಂದಿನ ಜೀವನ ಶೈಲಿಯಲ್ಲಿ ಹಲವು ಅಂಶಗಳು ವಾತದೋಷವನ್ನು ಹೆಚ್ಚಿಸುತ್ತಿವೆ ಮತ್ತು ಅದೇ ಕಿವಿಯ ಸಮಸ್ಯೆಗಳ ಮೂಲ ಕಾರಣವಾಗುತ್ತಿದೆ ಎಂದು ಆಯುರ್ವೇದ ಸ್ಪಷ್ಟವಾಗಿ ಹೇಳುತ್ತದೆ.
೧. ಅತಿಯಾದ ತಂಪಿನ ಸಂಪರ್ಕ: ಅತಿಯಾದ ತಂಪು ವಾತಾವರಣ, ಏರ್ ಕಂಡೀಷನರ್ ಗಾಳಿ ನೇರವಾಗಿ ಕಿವಿಗಳಿಗೆ ಬೀಳುವುದು, ತಲೆಯ ಮೇಲೆ ತಣ್ಣೀರು ಸುರಿಯುವ ಅಭ್ಯಾಸ, ರಾತ್ರಿಯಲ್ಲಿ ತಲೆಯು ಒzಯಾಗಿರುವ ಸ್ಥಿತಿಯ ಮಲಗುವುದು- ಇವೆಲ್ಲವೂ ವಾತದೋಷವನ್ನು ಗಂಭೀರವಾಗಿ ಹೆಚ್ಚಿಸುತ್ತವೆ. ಆಯುರ್ವೇದದ ಪ್ರಕಾರ ವಾತವು ಸ್ವಭಾವತಃ ಒಣ ಮತ್ತು ಶೀತ ಗುಣ ಹೊಂದಿರು ವುದು. ಅದಕ್ಕೆ ಮತ್ತಷ್ಟು ತಂಪಿನ ಸಂಪರ್ಕವಾದಾಗ ಕಿವಿಯ ಒಳಭಾಗದಲ್ಲಿನ ಸ್ನಿಗ್ಧಾಂಶ ಕಡಿಮೆ ಯಾಗುತ್ತದೆ. ಪರಿಣಾಮವಾಗಿ ಕಿವಿಯ ನರಗಳು ಒಣಗುತ್ತವೆ, ನೋವು, ಶಬ್ದಗಳು ಅಥವಾ ಕೇಳುವ ಶಕ್ತಿಯ ಕುಗ್ಗುವಿಕೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ತಣ್ಣೀರಿನಲ್ಲಿ ಅತಿಯಾಗಿ ಮುಳುಗುವುದು, ಈಜುವುದು, ತಂಪಾದ ಆಹಾರದ ಅತಿಯಾದ ಸೇವನೆ, ಪದೇ ಪದೆ ಆಗುವ ನೆಗಡಿ/ಮೂಗಿನ ಸಮಸ್ಯೆ, ಅತಿಯಾಗಿ ಬಿಸಿಲಿನಲ್ಲಿ ರಕ್ಷಣೆಯಿಲ್ಲದೆ ಓಡಾಡು ವುದು ಸಹ ಕಿವಿಯ ಸಮಸ್ಯೆಗಳಿಗೆ ಕಾರಣವಾಗಬಹುದು.
೨. ಜೋರಾದ ಶಬ್ದಶ್ರವಣ: ನಿರಂತರ ಜೋರಾದ ಶಬ್ದಗಳಿಗೆ ಒಳಗಾಗುವುದು ಕಿವಿಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಸಾರಿಗೆ ವಾಹನಗಳು, ಯಂತ್ರೋಪಕರಣಗಳು, ಜೋರಾದ ಮ್ಯೂಸಿಕ್, ಹೆಡ್ ಫೋನ್‌ಗಳು- ಇವೆಲ್ಲವೂ ಕಿವಿಯ ಒಳಗಿನ ನರಗಳನ್ನು ನೇರವಾಗಿ ಪ್ರಭಾವಿತಗೊಳಿಸುತ್ತವೆ.
ದೀರ್ಘಕಾಲ ಇದೇ ರೀತಿ ಶಬ್ದದ ಒತ್ತಡ ಬಂದಾಗ ಕಿವಿಯ ನರಗಳಲ್ಲಿ ಶುಷ್ಕತೆ, ಕಂಪನ ಮತ್ತು ಅಸಮತೋಲನ ಉಂಟಾಗುತ್ತವೆ. ಇದರ ಪರಿಣಾಮವಾಗಿ ಕಿವಿರೋಗಗಳ ಲಕ್ಷಣಗಳು ಕಾಣಿಸಿ ಕೊಳ್ಳಬಹುದು.
೩. ಹೆಚ್ಚಾಗಿ ಒಣ ಆಹಾರ ಸೇವನೆ: ಚಿಪ್ಸ್, ಬಿಸ್ಕೆಟ್‌ಗಳು, ಬ್ರೆಡ್, ಪ್ಯಾಕೆಟ್ ಫುಡ್, ಹೆಚ್ಚಾಗಿ ಫಾಸ್ಟ್ ಫುಡ್, ಒಣ ತರಕಾರಿ, ಒಣ ಕಾಳುಗಳು- ಇವುಗಳ ಸ್ವಭಾವವೇ ಒಣ. ಇಂಥ ಆಹಾರ ಸೇವನೆಯಿಂದ ದೇಹದ ದ್ರವಾಂಶ ಮತ್ತು ಸ್ನಿಗ್ಧಾಂಶ ಕಡಿಮೆಯಾಗುತ್ತದೆ. ಆಯುರ್ವೇದದ ಪ್ರಕಾರ ಒಣ ಆಹಾರವು ವಾತವನ್ನು ಹೆಚ್ಚಿಸುತ್ತದೆ. ಕಿವಿಯ ಒಳಗಿನ ಸೂಕ್ಷ್ಮ ನರವ್ಯೂಹವು ತೇವಾಂಶಕ್ಕೆ ಅವಲಂಬಿತ ವಾಗಿದೆ. ಆಹಾರದಲ್ಲಿ ಸ್ನಿಗ್ಧ ಪದಾರ್ಥಗಳ ಕೊರತೆಯಿಂದ ಕಿವಿಯಲ್ಲಿ ಒಣತನ ಹೆಚ್ಚಾಗಿ, ಇದು ಶ್ರವಣದ ಗುಣಮಟ್ಟವನ್ನು ಕುಂಠಿತಗೊಳಿಸುತ್ತದೆ.
೪. ನಿದ್ರೆಯ ಅಭಾವ: ರಾತ್ರಿ ನಿದ್ರೆಯು ದೇಹದ ಪುನಃಸ್ಥಾಪನೆಯ ಸಮಯ. ಆಯುರ್ವೇದವು ನಿದ್ರೆಯನ್ನು ಆರೋಗ್ಯದ ಮೂರು ಉಪ ಸ್ತಂಭಗಳಲ್ಲಿ ಒಂದೆಂದು ಹೇಳುತ್ತದೆ. ನಿರಂತರವಾಗಿ ನಿದ್ರೆ ಕೊರತೆಯಾದರೆ/ರಾತ್ರಿ ಜಾಗರಣೆ ಮಾಡಿದರೆ ನರಮಂಡಲವು ದುರ್ಬಲಗೊಳ್ಳುತ್ತದೆ. ಕಿವಿಯ ಕಾರ್ಯವೂ ನರಮಂಡಲಕ್ಕೆ ನೇರವಾಗಿ ಸಂಬಂಧಿಸಿದೆ.
ನಿದ್ರೆ ಕೊರತೆಯಾದರೆ ಕಿವಿಯಲ್ಲಿ ಶಬ್ದ, ನೋವು, ತಲೆತಿರುಗುವುದು ಮತ್ತು ಶ್ರವಣಶಕ್ತಿಯ ಕುಗ್ಗು ವಿಕೆ ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆಯುರ್ವೇದ ಪ್ರಕಾರ ನಿದ್ರೆಯ ಅಭಾವ ಕೂಡ ವಾತವನ್ನು ಉಲ್ಬಣಗೊಳಿಸುವ ಪ್ರಮುಖ ಕಾರಣ.
೫. ಹೆಚ್ಚಾದ ಮೊಬೈಲ್ ಬಳಕೆ: ಮೊಬೈಲ್ ಬಳಕೆಯು ಕಿವಿಗೆ ಮಾತ್ರವಲ್ಲದೆ ಮನಸ್ಸಿಗೂ ಹಾನಿಕಾರಕವಾಗಿದೆ. ಹೆಡ್‌ಸೆಟ್ ಅಥವಾ ಇಯರ್ ಫೋನ್‌ನ ನಿರಂತರ ಬಳಕೆಯು ನೇರವಾಗಿ ಕಿವಿಯ ನರಗಳನ್ನು ಒತ್ತಡಕ್ಕೆ ಒಳಪಡಿಸುತ್ತದೆ. ಜತೆಗೆ ಮೊಬೈಲ್ ಪರದೆ ನೋಡುವುದರಿಂದ ಉಂಟಾಗುವ ರೂಕ್ಷತೆ, ಮಾನಸಿಕ ಅಶಾಂತಿ ಮತ್ತು ನಿದ್ರೆಯ ಅಭಾವ ಕೂಡ ವಾತವನ್ನು ಹೆಚ್ಚಿಸಿ ಕಿವಿಯನ್ನು ಹಾಳುಮಾಡುತ್ತದೆ.
೬. ಮಾನಸಿಕ ಒತ್ತಡ: ಆಯುರ್ವೇದದ ಪ್ರಕಾರ ಮನಸ್ಸು ಮತ್ತು ದೇಹ ಬೇರೆಬೇರೆ ಅಲ್ಲ. ಅತಿ ಯಾದ ಚಿಂತೆ, ಭಯ, ಉದ್ವಿಗ್ನತೆ- ಇವು ವಾತದೋಷವನ್ನು ಹೆಚ್ಚಿಸುವ ಪ್ರಮುಖ ಕಾರಣ ಗಳಾಗಿವೆ. ನಿರಂತರ ಒತ್ತಡದಲ್ಲಿ ಇರುವ ವ್ಯಕ್ತಿಗಳಿಗೆ ಕಿವಿಯಲ್ಲಿ ಶಬ್ದ, ಕೇಳುವ ತೊಂದರೆ, ತಲೆ ಸುತ್ತು ಮುಂತಾದ ಲಕ್ಷಣಗಳು ಹೆಚ್ಚು ಸಾಮಾನ್ಯ. ಕಾರಣ- ಒತ್ತಡವು ನರಮಂಡಲವನ್ನು ದುರ್ಬಲ ಗೊಳಿಸುತ್ತದೆ ಮತ್ತು ಶ್ರವ ಣೇಂದ್ರಿಯದ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ.
೭. ಕಾಲಕ್ಕೆ ಸರಿಯಾಗಿ ಊಟ ಮಾಡದಿರುವಿಕೆ- ಅಕಾಲಿಕ ಊಟವು ದೇಹದ ಜೀರ್ಣಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಜೀರ್ಣಕ್ರಿಯೆ ಕೆಟ್ಟಾಗ ದೇಹಕ್ಕೆ ಸಮರ್ಪಕ ಪೋಷಣೆ ದೊರಕುವುದಿಲ್ಲ. ಇದರಿಂದ ಕಿವಿಯ ನರಗಳಿಗೆ ಬೇಕಾದ ಶಕ್ತಿ ಮತ್ತು ಪೋಷಕಾಂಶ ಲಭ್ಯವಾಗದೆ ದೌರ್ಬಲ್ಯ ಉಂಟಾಗುತ್ತದೆ.
ಆಯುರ್ವೇದದ ಪ್ರಕಾರ ಅಕಾಲಿಕ ಭೋಜನವು ವಾತವನ್ನು ಹೆಚ್ಚಿಸಿ ಇಂದ್ರಿಯಗಳ ಕ್ಷೀಣತೆಗೆ ಕಾರಣವಾಗುತ್ತದೆ.
ಕಿವಿಗೆ ಪೌಷ್ಟಿಕ ಆಹಾರ ಯಾವುದು?
ಕಿವಿಗಳ ಆರೋಗ್ಯಕ್ಕೆ ಸರಿಯಾದ ಆಹಾರ ಅತ್ಯವಶ್ಯಕ. ಆಯುರ್ವೇದದಲ್ಲಿ ಸ್ನಿಗ್ಧ, ಉಷ್ಣ ಮತ್ತು ಪೌಷ್ಟಿಕ ಆಹಾರವನ್ನು ಕಿವಿಗೆ ಉಪಯುಕ್ತವೆಂದು ಹೇಳಲಾಗುತ್ತದೆ. ಕಿವಿಗೆ ಹಿತಕರವಾದ ಆಹಾರ ಗಳು ಹೀಗಿವೆ:
ಹಾಲು, ತುಪ್ಪ, ಬೆಣ್ಣೆ
ಎಳ್ಳೆಣ್ಣೆ , ಕಡಲೆಕಾಯಿ ಎಣ್ಣೆ
ಅಕ್ಕಿ, ಗೋಧಿ, ರಾಗಿ
ಹೆಸರು ಬೇಳೆ
ಎಳ್ಳು, ಕಡಿಮೆ ಪ್ರಮಾಣದಲ್ಲಿ ಕಡಲೆಕಾಯಿ
ಹಣ್ಣಿನಲ್ಲಿ- ಬಾಳೆಹಣ್ಣು, ದಾಳಿಂಬೆ, ಪಪಾಯಿ, ಒಣದ್ರಾಕ್ಷಿ, ಬಾದಾಮಿ
ತರಕಾರಿಯಲ್ಲಿ- ಬೂದುಕುಂಬಳಕಾಯಿ, ಹೀರೇಕಾಯಿ, ಸೋರೇಕಾಯಿ, ಪಡವಲಕಾಯಿ
ಶುಂಠಿ, ಜೀರಿಗೆ, ಬೆಳ್ಳುಳ್ಳಿ, ಹಿಂಗು ಸಣ್ಣ ಪ್ರಮಾಣದಲ್ಲಿ ಈ ಆಹಾರಗಳು ವಾತವನ್ನು ಶಮನಗೊಳಿಸಿ ಕಿವಿಯ ಒಳರಚನೆಯನ್ನು ಪೋಷಿಸುತ್ತವೆ.
ತಪ್ಪಿಸಬೇಕಾದ ಆಹಾರಗಳು ಹೀಗಿವೆ: ಅತಿಯಾದ ತಂಪು ಪಾನೀಯಗಳು, ಬಹಳ ಒಣ ಆಹಾರ, ಫ್ರಿಜ್ ಆಹಾರ, ಸಂಸ್ಕರಿತ ಮತ್ತು ಪ್ಯಾಕ್ ಮಾಡಲಾದ ಆಹಾರ, ಮದ್ಯಪಾನ, ಧೂಮಪಾನ. ಇವು ವಾತವನ್ನು ಹೆಚ್ಚಿಸಿ ಕಿವಿಯಲ್ಲಿ ಒಣತನ ಮತ್ತು ನೋವನ್ನು ಉಂಟು ಮಾಡುತ್ತವೆ.
ವಿಹಾರ: ಕಿವಿಗೆ ಅನುಕೂಲವಾದ ಜೀವನಶೈಲಿ
ತೀವ್ರ ಶಬ್ದಗಳಿಂದ ದೂರವಿರಿ
ಹೆಡ್ ಫೋನ್ ಬಳಕೆ ಕಡಿಮೆ ಮಾಡಿ;
ವಾಲ್ಯೂಮ್ ೫೦ ಪರ್ಸೆಂಟ್‌ಗಿಂತ ಹೆಚ್ಚು ಇರಬಾರದು
ಪ್ರತಿ ಗಂಟೆಗೊಮ್ಮೆ ೨ ನಿಮಿಷಗಳಷ್ಟು ಕಿವಿಗೆ ವಿಶ್ರಾಂತಿ ನೀಡಿ
ತಂಪು ಗಾಳಿಗೆ/ಎದುರು ಗಾಳಿಗೆ ಕಿವಿಯನ್ನು ನೇರವಾಗಿ ಒಡ್ಡದಂತೆ ನೋಡಿಕೊಳ್ಳಬೇಕು
ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಕಿವಿ ಬೆಚ್ಚಗಿರಲಿ
ದೀರ್ಘಕಾಲದ ಮೊಬೈಲ್ ಕರೆಯಿಂದ ಕಿವಿಗೆ ಒತ್ತಡ ಕೊಡಬಾರದು
ಉಗುರು ಬೆಚ್ಚಿನ ನೀರಿನಲ್ಲಿ ತಲೆಸ್ನಾನ ಮಾಡಿ,
ತಲೆಯ ಮೇಲೆ ಅತಿಯಾದ ಬಿಸಿನೀರು/ ತಣ್ಣೀರು ಹಾಕುವುದನ್ನು ತಪ್ಪಿಸುವುದು ಒಳ್ಳೆಯದು
ದಿನಚರ್ಯೆ: ಅನುಸರಿಸಬಹುದಾದ ಕ್ರಮಗಳು
ಹಲ್ಲುಜ್ಜಿದ ನಂತರ ಬೆಚ್ಚಗಿನ ಎಣ್ಣೆಯಲ್ಲಿ ೪-೫ ನಿಮಿಷ ಬಾಯಿ ಮುಕ್ಕಳಿಸುವುದು
ಪ್ರಾತಃಕಾಲ ಶಿರೋಭ್ಯಂಗ (ತಲೆಯ ಎಣ್ಣೆ ಮಸಾಜ್): ಪ್ರತಿನಿತ್ಯವೂ ಖಾಲಿಹೊಟ್ಟೆಯಲ್ಲಿ ಸ್ನಾನಕ್ಕೆ ಮುನ್ನ ಬೆಚ್ಚಗಿನ ಎಣ್ಣೆಯನ್ನು ತಲೆಗೆ ಹಚ್ಚಿ , ೨೦-೩೦ ನಿಮಿಷಗಳ ನಂತರ ಹೂಬೆಚ್ಚಗಿನ ನೀರಿನಲ್ಲಿ ತಲೆಯಸ್ನಾನ.
ನಿತ್ಯವೂ ಕರ್ಣಪೂರಣ (ಕಿವಿಗೆ ಎಣ್ಣೆ ಹಾಕುವ ಕ್ರಮ): ಪ್ರತಿನಿತ್ಯವೂ ಖಾಲಿಹೊಟ್ಟೆಯಲ್ಲಿ ಸ್ನಾನಕ್ಕೆ ಮುನ್ನ ಬೆಚ್ಚಗಿನ ಎಣ್ಣೆಯನ್ನು (ಎಳ್ಳೆಣ್ಣೆ) ೪-೫ ಹನಿಗಳಂತೆ ಕಿವಿಗೆ ಹಾಕಿ/ ಅಥವಾ ಎಣ್ಣೆಯಲ್ಲಿ ಹತ್ತಿಯನ್ನು ನೆನೆಸಿ ಕಿವಿಯೊಳಗೆ ಇಟ್ಟುಕೊಳ್ಳುವುದು. ಸ್ವಲ್ಪ ಸಮಯದ ನಂತರ ಸ್ನಾನ ಮಾಡುವಾಗ ತೊಳೆದು ಒಣಗಿಸಿಕೊಳ್ಳಬೇಕು.
ನಸ್ಯ: ಪ್ರತಿನಿತ್ಯವೂ ಖಾಲಿಹೊಟ್ಟೆಯಲ್ಲಿ ಸ್ನಾನಕ್ಕೆ ಮುನ್ನ ಬೆಚ್ಚಗಿನ ಎಣ್ಣೆಯನ್ನು ೨-೨ ಹನಿಗಳಂತೆ ಮೂಗಿನ ಹೊಳ್ಳೆಗಳಿಗೆ ಹಾಕುವುದು. ನೆನಪಿಡಿ ಮೂಗಿನ ಮೂಲಕ ಹಾಕುವ ತೈಲವು ಕಣ್ಣು, ಕಿವಿ, ಗಂಟಲು ಮತ್ತು ಕಣ್ಣುಗಳಿಗೆ ಲಾಭಕರ.
ಮನಸ್ಸಿನ ಶಾಂತಿಯೂ ಕಿವಿಗೆ ಔಷಧವೇ: ಒತ್ತಡ, ಭಯ, ಆತಂಕ ಇವೆಲ್ಲವೂ ನರಮಂಡಲದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ನಿತ್ಯ ವ್ಯಾಯಾಮ, ಧ್ಯಾನ, ಪ್ರಾಣಾಯಾಮ, ಮೌನ ಮತ್ತು ನಿದ್ರೆಗಳು ಕಿವಿಯ ಆರೋಗ್ಯಕ್ಕೂ ಅವಶ್ಯಕ.
ರಾತ್ರಿಯ ಆಹಾರ ಸೇವನೆಯನ್ನು ಬೇಗನೆ ಮುಗಿಸುವುದು.
ರಾತ್ರಿಯ ಆಹಾರದ ನಂತರ ಮತ್ತೆ ನೀರು, ಹಾಲು, ಹಣ್ಣು ಮತ್ತಿತರ ಆಹಾರಗಳ ಸೇವನೆಯು ಕಿವಿಯ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ. ಕಿವಿಗಳು ನಮ್ಮ ಬದುಕಿನ ಗುಣಮಟ್ಟವನ್ನು ನಿರ್ಧರಿಸುವ ಅತ್ಯಂತ ಸೂಕ್ಷ್ಮ ಹಾಗೂ ಅಮೂಲ್ಯ ಅಂಗಗಳು. ಶ್ರವಣಶಕ್ತಿ ಕುಂದಿದಾಗ ಕೇವಲ ಶಬ್ದಗಳಲ್ಲ, ನಮ್ಮ ಸಂಬಂಧಗಳು ಮತ್ತು ಸಂಭಾಷಣೆಗಳೂ ಮೌನವಾಗುತ್ತವೆ.
ಪರಿಣಾಮವಾಗಿ, ವ್ಯಕ್ತಿಯು ನಿಧಾನವಾಗಿ ಮಾನಸಿಕ ಒಂಟಿತನದ ಕಡೆಗೆ ಜಾರಲು ಆರಂಭಿಸುತ್ತಾನೆ. ಆಯುರ್ವೇದ ಹೇಳುವಂತೆ ಕಿವಿಗಳ ಆರೈಕೆ ಒಂದು ದಿನದ ಚಿಕಿತ್ಸೆ ಅಲ್ಲ- ಅದು ಪ್ರತಿದಿನ ಪಾಲಿಸಬೇಕಾದ ಒಂದು ಬದುಕಿನ ಶಿಸ್ತು, ಒಂದು ಆರೋಗ್ಯದ ಪ್ರತಿe. ಇಂದು ಸ್ವಲ್ಪ ಜಾಗ್ರತೆ ವಹಿಸಿದರೆ, ನಾಳೆ ದೊಡ್ಡ ಸಮಸ್ಯೆಗಳಿಂದ ದೂರ ಉಳಿಯಬಹುದು.
ಕಿವಿಯು ಕೇವಲ ಅಂಗವಲ್ಲ, ಅದು ನಮ್ಮ ಜೀವನದ ನಾದವನ್ನು, ಮಮತೆಯ ಮಾತುಗಳನ್ನು ಮತ್ತು ಪ್ರೀತಿಯ ಧ್ವನಿಗಳನ್ನು ನಮ್ಮೊಳಗೆ ಹೊತ್ತು ತರುವ ಸಾಧನ. ಅದನ್ನು ಕಾಪಾಡಿ ಕೊಳ್ಳುವುದು ಎಂದರೆ ನಮ್ಮ ಜೀವನದ ಗುಣಮಟ್ಟವನ್ನೇ ಗೌರವಿಸುವುದು. ಕಿವಿಗಳ ಆರೈಕೆ ಇಂದೇ ಪ್ರಾರಂಭವಾಗಲಿ! ‘ಭದ್ರಂ ಕರ್ಣೇಭಿಃ ಶೃಣು ಯಾಮ ದೇವಾಃ’ ಎಂಬ ಪ್ರಾರ್ಥನೆ ನಮ್ಮದಾಗಲಿ!