Dr Sadhanashree Column: ಆಹಾರ ಸೇವಿಸುವ ಮುನ್ನ ಗಮನಿಸಿ ಈ ಆರನ್ನು...
‘ಬದುಕುವುದಕ್ಕಾಗಿ ತಿನ್ನುವುದು’ ಎಂದು ನಮ್ಮ ಹಿರಿಯರು ತೋರಿಸಿಕೊಟ್ಟ ಮಾರ್ಗವನ್ನು ಮರೆತು ‘ತಿನ್ನುವುದಕ್ಕಾಗಿಯೇ ಬದುಕುವುದು’ ಎಂಬ ಆಧುನಿಕತೆಯ ದಾರಿಯನ್ನು ನಮ್ಮದಾಗಿಸುವ ಪ್ರಯತ್ನ ದಲ್ಲಿದ್ದೇವೆ. ಕೆಲವರಿಗೆ, ನನ್ನ ಮಾತುಗಳು ಅಚ್ಚರಿಯೆನಿಸಬಹುದು. ಅರೆ, ಇವರು ಯಾಕಪ್ಪ ಹೀಗೆ ಮಾತಾಡ್ತಾ ಇದ್ದಾರೆ?! ಈ ರೀತಿ ತಿನ್ನುವುದರಲ್ಲಿ ತಪ್ಪೇನಿಲ್ವಲ್ಲ? ನಾವೆಲ್ಲರೂ ಇದನ್ನೇ ಮಾಡುವು ದಲ್ಲವೇ? ಎಂದೆನಿಸುವುದು ಸಹಜ.


ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಆಯುರ್ವೇದದ ಪ್ರಕಾರ ಚಿಂತಾ, ಶೋಕ, ಭಯ, ಕ್ರೋಧ ಮತ್ತು ಉದ್ವೇಗಗಳು ಇದ್ದಾಗ ಆಹಾರ ಸೇವಿಸಿದರೆ ಅದು ಸರಿಯಾಗಿ ಜೀರ್ಣವಾಗುವುದಿಲ್ಲ. ಕಾರಣ, ನಮ್ಮ ಭಾವನೆ ಗಳಿಗೂ ಮತ್ತು ನಮ್ಮ ಜೀರ್ಣಕ್ರಿಯೆಗೂ ನೇರವಾದ ಸಂಬಂಧವಿದೆ. ಮಾನಸಿಕ ಏರುಪೇರು ಗಳಿಂದ ಜೀರ್ಣಕ್ರಿಯೆಯೂ ಏರುಪೇರು ಆಗುತ್ತದೆ. ಅಂತೆಯೇ ಜೀರ್ಣಕ್ರಿಯೆ ಸರಿ ಇಲ್ಲದಿ ದ್ದಾಗ ಮಾನಸಿಕ ಅಸಮತೋಲನವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಒಳ್ಳೆಯ ಮನಸ್ಸಿನಿಂದ ಮತ್ತು ಉತ್ತಮ ಭಾವನೆಗಳೊಂದಿಗೆ ಆಹಾರವನ್ನು ಸೇವಿಸುವುದು ಸದಾ ಶ್ರೇಷ್ಠ.
ಬೆಳಗ್ಗೆ ಎದ್ದ ಕೂಡಲೇ ಒಂದು ಲೀಟರ್‌ನಷ್ಟು ನೀರು, ಸ್ವಲ್ಪ ಹೊತ್ತು ಬಿಟ್ಟು ಒಂದು ಬಟ್ಟಲಿನಷ್ಟು ನೆನೆಸಿಟ್ಟ ಡ್ರೈ ಫ್ರೂಟ್ಸ್, ಸ್ವಲ್ಪ ಸಮಯದ ನಂತರ ರಾಗಿ ಗಂಜಿ/ಅಂಬಲಿ. ಇದಾದ ಮೇಲೆ ವ್ಯಾಯಾಮ. ವ್ಯಾಯಾಮದ ಮಧ್ಯೆ ಮಧ್ಯೆ ಜ್ಯೂಸ್ ಹೀರುವ ಅಭ್ಯಾಸ. ನಂತರ ಮನೆಯಲ್ಲಿ ಎಲ್ಲರಿಗೂ ತಯಾರಿಸಿದಂಥ ತಿಂಡಿಯ ಸೇವನೆ. ಜತೆಗೆ ಟೀ ಅಥವಾ ಕಾಫಿ ಇರಲೇಬೇಕು.
ಒಂದೆರಡು ಗಂಟೆಗಳು ಕಳೆದ ಮೇಲೆ ಒಂದು ಬಟ್ಟಲಿನಷ್ಟು ಹಣ್ಣು. ಸ್ವಲ್ಪ ಹೊತ್ತಾದ ಮೇಲೆ ಸ್ಪ್ರೌಟ್ಸ್ ಅಥವಾ ಸಲಾಡ್. ಮಧ್ಯಾಹ್ನದ ಊಟವಂತೂ ಇದ್ದಿದ್ದೇ. ಊಟದ ನಂತರ ಸ್ವೀಟ್ ತಿನ್ನಬೇಕೆಂಬುವ ಚಪಲ. ಸುಮಾರು ನಾಲ್ಕೂವರೆ ಹೊತ್ತಿಗೆ ಟೀ ಜತೆಗೆ ಬಿಸ್ಕತ್ತು ಅಥವಾ ಖಾರದ ಯಾವುದಾದರೂ ಒಂದು ಕರಿದ ಪದಾರ್ಥ. ನಂತರ ವಾಕಿಂಗ್‌ಗೆ ಹೋಗಿ ಬಂದ ಮೇಲೆ ಯಾವುದಾ ದರೂ ಒಂದು ಪಾನೀಯ. ನಂತರದ ಪ್ರಾಣಾಯಾಮಾಭ್ಯಾಸವನ್ನು ಮುಗಿಸಿ ರಾತ್ರಿಯ ಊಟ. ಮಲಗುವ ಮುನ್ನ ಒಂದು ಲೋಟ ಹಾಲನ್ನು ಕುಡಿದರೆ ನಿದ್ದೆಗೆ ಒಳ್ಳೆಯದು ಎಂಬ ಗೆಳೆಯರ ಆದೇಶದಂತೆ ನಿತ್ಯವೂ ರಾತ್ರಿಯ ಸಮಯದಲ್ಲಿ ಕ್ಷೀರಪಾನ. ಇನ್ನು, ಯಾರಾದರೂ ಅತಿಥಿಗಳು ಮನೆಗೆ ಬಂದಾಗ ಅಗಷ್ಟೇ ತಿಂಡಿ ತಿಂದು ಕುಳಿತಿದ್ದರೂ, ಅವರಿಗೆ ಕಾಫಿ ತಿಂಡಿಯನ್ನು ನೀಡಿ ಅವರ ಜತೆಗೆ ಮತ್ತೆ ಮೆಲ್ಲುವ ಅಭ್ಯಾಸ.
ಮತ್ತೆ, ವಾಕಿಂಗ್‌ಗೆ ಹೋದಾಗ ಯಾರಾದರೂ ಸ್ನೇಹಿತರು ಸಿಕ್ಕಿಬಿಟ್ಟರೆ ಅ ಹತ್ತಿರದ ಹೋಟೆಲ್‌ಗೆ ಹೋಗಿ ಅವರ ಜತೆ ಸ್ವಲ್ಪ ಕಾಫಿ ಅಥವಾ ಸ್ವಲ್ಪ ತಿಂಡಿ ಸೇವಿಸುವ ಅಭ್ಯಾಸ... ಮೇಲಿನ ಅಭ್ಯಾಸ ವಿರುವ ಈ ವ್ಯಕ್ತಿ ನಮ್ಮೆಲ್ಲರಿಗೂ ಚಿರಪರಿಚಿತ ಅನ್ನಿಸುತ್ತಾರೆ, ಅಲ್ಲವೇ? ಕಾರಣ ಮಾಡರ್ನ್ ಲೈಫ್ ಸ್ಟೈಲ್‌ನ ಮೋಡಿಗೆ ಒಳಗಾದ ನಮ್ಮೆಲ್ಲರದ್ದೂ ಹೆಚ್ಚು ಕಡಿಮೆ ಇದೇ ಕಥೆ.
ಇದನ್ನೂ ಓದಿ: Dr Sadhanashree Column: ಹಬ್ಬದ ನಲ್ಮೆಯ ನಂತರದ ನರಳಾಟ ಅನಿವಾರ್ಯವೇ ?
‘ಬದುಕುವುದಕ್ಕಾಗಿ ತಿನ್ನುವುದು’ ಎಂದು ನಮ್ಮ ಹಿರಿಯರು ತೋರಿಸಿಕೊಟ್ಟ ಮಾರ್ಗವನ್ನು ಮರೆತು ‘ತಿನ್ನುವುದಕ್ಕಾಗಿಯೇ ಬದುಕುವುದು’ ಎಂಬ ಆಧುನಿಕತೆಯ ದಾರಿಯನ್ನು ನಮ್ಮದಾಗಿಸುವ ಪ್ರಯತ್ನದಲ್ಲಿದ್ದೇವೆ. ಕೆಲವರಿಗೆ, ನನ್ನ ಮಾತುಗಳು ಅಚ್ಚರಿಯೆನಿಸಬಹುದು. ಅರೆ, ಇವರು ಯಾಕಪ್ಪ ಹೀಗೆ ಮಾತಾಡ್ತಾ ಇದ್ದಾರೆ?! ಈ ರೀತಿ ತಿನ್ನುವುದರಲ್ಲಿ ತಪ್ಪೇನಿಲ್ವಲ್ಲ? ನಾವೆಲ್ಲರೂ ಇದನ್ನೇ ಮಾಡುವುದಲ್ಲವೇ? ಎಂದೆನಿಸುವುದು ಸಹಜ.
ಆದರೆ ಆಯುರ್ವೇದ ಹೇಳುವಂತೆ ನೀತಿ-ನಿಯಮ ಇಲ್ಲದ ಬದುಕು ಮತ್ತು ಶಿಸ್ತು-ಬದ್ಧತೆ ಇಲ್ಲದ ಊಟ ಎಂದಿಗೂ ರೋಗಕಾರಕ. ಹಾಗಾದರೆ, ಬನ್ನಿ ಯಾವಾಗ ತಿನ್ನಬೇಕು ಮತ್ತು ಎಷ್ಟು ತಿನ್ನಬೇಕು ಎಂಬ ಪ್ರಶ್ನೆಗಳಿಗೆ ಆಯುರ್ವೇದ ಸಿದ್ಧಾಂತದಲ್ಲಿ ಸಮಂಜಸವಾದ ಉತ್ತರವನ್ನು ಹುಡುಕೋಣ.
ಆಯುರ್ವೇದದ ಶಾಸ್ತ್ರದಲ್ಲಿ ನಮ್ಮ ಆಚಾರ್ಯರು ಒಂದು ಕಡೆ ಹೀಗೆ ಉಲ್ಲೇಖಿಸಿದ್ದಾರೆ- ಸಾಮಾನ್ಯ ವಾಗಿ ಎಲ್ಲಾ ರೋಗಗಳಿಗೂ ಮೂಲ ಕಾರಣವೇ ‘ಆಹಾರ’. ಮತ್ತೊಂದೆಡೆ ಆಹಾರವನ್ನು ‘ಮಹಾ ಭೈಷಜ್ಯ’ ಎಂದು ಕರೆದಿದ್ದಾರೆ. ಅಂದರೆ, ಆಹಾರಕ್ಕೆ ಮಿಗಿಲಾದ ಔಷಧವಿಲ್ಲ ಎಂದು.
ಹಾಗಾದರೆ, ಎಲ್ಲ ವ್ಯಾಧಿಗಳಿಗೂ ಕಾರಣವಾಗುವ ಆಹಾರವನ್ನು ಒಂದು ಮಹತ್ತರವಾದ ಔಷಧಿ ಯನ್ನಾಗಿ ಬದಲಾಯಿಸುವ ವಿಧಿ ಏನು? ಎನ್ನುವ ಪ್ರಶ್ನೆಗೆ ಏಕೈಕ ಉತ್ತರವೆಂದರೆ ಆಹಾರ ಸೇವನಾ ನಿಯಮವನ್ನು ಪಾಲಿಸುವುದು. ಆಯುರ್ವೇದದಲ್ಲಿ ಉಲ್ಲೇಖಿಸಿರುವ ಆಹಾರ ವಿಜ್ಞಾನದ ಬಗ್ಗೆ ಅರಿವು ಮೂಡಿಸಿಕೊಳ್ಳುವುದು.
ನಮ್ಮ ಶಾಸ್ತ್ರದ ಆಹಾರ ವಿಜ್ಞಾನದಲ್ಲಿ ಯಾವಾಗ ತಿನ್ನಬೇಕು ಎಂಬ ಮುಖ್ಯವಾದ ಪ್ರಶ್ನೆಗೆ ಬಹಳ ವೈಜ್ಞಾನಿಕವಾದ ಉತ್ತರವನ್ನು ಕಾಣಬಹುದು. ಅದರಂತೆ, ಆಹಾರವನ್ನು ಸೇವಿಸುವ ಮುನ್ನ ಈ ಕೆಳಗೆ ಹೇಳಿದ ಲಕ್ಷಣಗಳು ಇವೆಯೇ ಎಂದು ಗಮನಿಸಬೇಕು.
- ಮಲ ಮೂತ್ರ ವಿಸರ್ಜನೆ ಆಗಿರಬೇಕು: ನಾವು ಸೇವಿಸುವ ಆಹಾರವು ಪಚನವಾಗುವಾಗ ಆಹಾರದ ಸಾರಭಾಗ ಹಾಗೂ ಬೇಡದ ವಸ್ತುಗಳ ಮಲಭಾಗವು ಬೇರ್ಪಡೆಯಾಗುತ್ತವೆ. ಸಾರಭಾಗವು ನಮ್ಮ ದೇಹದ ಎಲ್ಲಾ ಧಾತುಗಳನ್ನು ಪೋಷಿಸಿದರೆ, ಮಲಭಾಗವು ಸಮಯಕ್ಕೆ ಸರಿಯಾಗಿ ದೇಹದಿಂದ ಹೊರ ಹೋಗುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ. ಬೆಳಗ್ಗೆ ಎದ್ದ ಕೂಡಲೇ ಯಾವುದೇ ಬಾಹ್ಯ ಪ್ರಚೋದನೆ ಇಲ್ಲದೆ ಆಗುವ ಮಲಪ್ರವೃತ್ತಿಯು ಸಮಯಕ್ಕೆ ಸರಿಯಾಗಿ ಆಗದಿದ್ದರೆ ಹಸಿವು ಚೆನ್ನಾಗಿ ಆಗುವುದಿಲ್ಲ ಎಂಬುದು ಎಲ್ಲರ ಅನುಭವ.
ಆದ್ದರಿಂದ ನಮ್ಮ ಅಗ್ನಿಯು ಸರಿಯಾಗಿ ಪ್ರಚೋದನೆಗೊಂಡು ಸೇವಿಸಿದ ಆಹಾರವು ಉತ್ತಮ ರೀತಿಯಲ್ಲಿ ಜೀರ್ಣವಾಗಬೇಕಾದರೆ, ಸಕಾಲದಲ್ಲಿ ಮಲಪ್ರವೃತ್ತಿಯಾಗಿರಬೇಕು. ಆಹಾರ ಸೇವನೆಗೆ ಇದು ಬಹಳ ಅವಶ್ಯಕವಾದ ಲಕ್ಷಣ.
- ಶರೀರವು ಲಘುವಾಗಿರಬೇಕು: ಸಾಮಾನ್ಯವಾಗಿ ಜೀರ್ಣಕ್ರಿಯೆ ಉತ್ತಮವಾಗಿದ್ದು ದೇಹದಲ್ಲಿ ಯಾವುದೇ ರೀತಿಯ ಆಮ (ಸರಿಯಾಗಿ ಜೀರ್ಣವಾಗದ ಆಹಾರ) ಶೇಖರಣೆ ಇಲ್ಲವಾದರೆ ಶರೀರವು ಲಘು ಎನಿಸುತ್ತದೆ. ಅಂತೆಯೇ, ಯಾವುದೇ ರೀತಿಯ ಜಡತ್ವ ಅಥವಾ ಆಲಸ್ಯವಿಲ್ಲದಿದ್ದಾಗ ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗುತ್ತದೆ.
ಹಾಗಾಗಿ, ಆಹಾರ ಸೇವನೆಯ ಮುನ್ನವಾಗಿ ನಮ್ಮ ಶರೀರದ ಸ್ಥಿತಿಯನ್ನು ಗಮನಿಸಿ ನಂತರ ಆಹಾರ ಬೇಕೇ ಬೇಡವೇ ಎಂದು ವಿವೇಚಿಸಿ ಸೇವಿಸುವುದು ಒಳ್ಳೆಯದು. ಇಂದ್ರಿಯಗಳು ಶುದ್ಧವಾಗಿರಬೇಕು- ಇಂದ್ರಿಯಗಳಲ್ಲಿ, ವಿಶೇಷವಾಗಿ ನಮ್ಮ ನಾಲಿಗೆ ಮತ್ತು ಮೂಗುಗಳು ಸುಸ್ಥಿತಿಯಲ್ಲಿದ್ದಾಗ ಆಹಾರವು ಹೆಚ್ಚು ರುಚಿಸುತ್ತದೆ. ಆಹಾರದ ದೃಶ್ಯ ಮತ್ತು ಘಮಘಮಿಸುವ ಪರಿಮಳ ಬಂದರೆ ಅದರಿಂದ ನಮ್ಮ ಹಸಿವು ಇನ್ನೂ ಹೆಚ್ಚಾಗಿ, ಜೀರ್ಣಕ್ರಿಯೆ ಉತ್ತಮಗೊಂಡು, ಆಹಾರವು ಸರಿಯಾದ ರೀತಿ ಯಲ್ಲಿ ಜೀರ್ಣಗೊಳ್ಳುತ್ತದೆ.
ಆದರೆ ಇಂದ್ರಿಯಗಳಲ್ಲಿಯೇ ಜಡತ್ವವಿದ್ದರೆ ಅದು ಖಂಡಿತವಾಗಿಯೂ ಅಜೀರ್ಣದ ಲಕ್ಷಣ. ಅಂಥ ಸ್ಥಿತಿಯಲ್ಲಿ ಆಹಾರವನ್ನು ಸೇವಿಸಿದರೆ ಮತ್ತಷ್ಟು ತೊಂದರೆಯಾಗಿ ಆರೋಗ್ಯ ಹದಗೆಡುವುದು.
- ಮನಸ್ಸು ಸಂತೋಷದಿಂದಿರಬೇಕು: ಆಯುರ್ವೇದದ ಪ್ರಕಾರ ಚಿಂತಾ, ಶೋಕ, ಭಯ, ಕ್ರೋಧ ಮತ್ತು ಉದ್ವೇಗಗಳು ಇದ್ದಾಗ ಆಹಾರ ಸೇವಿಸಿದರೆ ಅದು ಸರಿಯಾಗಿ ಜೀರ್ಣವಾಗುವು ದಿಲ್ಲ. ಕಾರಣ, ನಮ್ಮ ಭಾವನೆಗಳಿಗೂ ಮತ್ತು ನಮ್ಮ ಜೀರ್ಣಕ್ರಿಯೆಗೂ ನೇರವಾದ ಸಂಬಂಧ ವಿದೆ. ಮಾನಸಿಕ ಏರುಪೇರುಗಳಿಂದ ಜೀರ್ಣಕ್ರಿಯೆಯೂ ಏರುಪೇರು ಆಗುತ್ತದೆ.
ಅಂತೆಯೇ ಜೀರ್ಣಕ್ರಿಯೆ ಸರಿ ಇಲ್ಲದಿದ್ದಾಗ ಮಾನಸಿಕ ಅಸಮತೋಲನವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಒಳ್ಳೆಯ ಮನಸ್ಸಿನಿಂದ ಮತ್ತು ಉತ್ತಮ ಭಾವನೆಗಳೊಂದಿಗೆ ಆಹಾರವನ್ನು ಸೇವಿಸುವುದು ಸದಾ ಶ್ರೇಷ್ಠ. ಅಳುತ್ತಿರುವಾಗ, ಬೇರೆ ಯಾರ ಮೇಲೋ ಕೋಪಗೊಂಡಾಗ, ಯಾವುದೋ ವಿಷಯದ ಬಗ್ಗೆ ಅತಿಯಾಗಿ ಚಿಂತಿಸುತ್ತಿರುವಾಗ ಆಹಾರದಿಂದ ದೂರ ಇರುವುದೇ ಉತ್ತಮ.
- ಶುದ್ಧವಾದ ತೇಗು ಬರಬೇಕು: ನಮ್ಮ ಜೀರ್ಣಾಂಗದಲ್ಲಿ ಮೊದಲು ಸೇವಿಸಿದ ಆಹಾರವು ಇನ್ನೂ ಜೀರ್ಣವಾಗದೆ ಇದ್ದರೆ ತೇಗು ಬಂದಾಗ ನಾವು ಮೊದಲು ಸೇವಿಸಿದ ಆಹಾರದ್ದೇ ವಾಸನೆ ಮತ್ತು ರುಚಿ ಇರುತ್ತವೆ. ಅಂಥ ತೇಗು ಬಂದಾಗ ಮತ್ತೆ ಆಹಾರ ಸೇವಿಸಬಾರದು. ತೇಗು ಸಂಪೂರ್ಣವಾಗಿ ಶುದ್ಧವಾಗಿದ್ದಾಗ ಮಾತ್ರ ಅದು ಆಹಾರ ಸೇವಿಸಲು ಯೋಗ್ಯ ಸಮಯ ಎಂದರ್ಥ. ಹಸಿವೆ ಇರಬೇಕು- ನಾವು ಪ್ರತಿ ಬಾರಿಯೂ ಆಹಾರ ಸೇವಿಸುವ ಮುನ್ನ ಗಮನಿಸಲೇ ಬೇಕಾದ ಲಕ್ಷಣವೆಂದರೆ ಹಸಿವು.
ಆಯುರ್ವೇದದ ಪ್ರಕಾರ ನಮಗೆ ಹಸಿವಿದ್ದಾಗ ಮಾತ್ರ ಆಹಾರವನ್ನು ಸೇವಿಸಬೇಕು. ನಾವು ಯಾವಾಗ ತಿನ್ನಬೇಕು ಎನ್ನುವ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರ ಕೊಡಬೇಕೆಂದರೆ, ಹಸಿವೆ ಇದ್ದಾಗ ಮಾತ್ರ ಆಹಾರ ಸೇವಿಸತಕ್ಕದ್ದು. ಕಾರಣ, ಶರೀರಕ್ಕೆ ಆಹಾರವು ಅಗತ್ಯವಿದ್ದಾಗ ಅದು ಹಸಿವೆ ಎಂಬ ಕರೆಯ ಮೂಲಕ ನಮಗೆ ಸೂಚನೆಯನ್ನು ನೀಡುತ್ತದೆ. ಆ ಸೂಚನೆಯ ಅರ್ಥ ವೇನೆಂದರೆ, ಜೀರ್ಣಾಂಗವ್ಯೂಹವು ಖಾಲಿಯಾಗಿದ್ದು ಈಗ ಸೇವಿಸುವ ಆಹಾರವನ್ನು ಸಂಪೂರ್ಣ ವಾಗಿ ಜೀರ್ಣಮಾಡಿಕೊಳ್ಳಲು ಸಿದ್ಧವಿದೆ ಎಂದರ್ಥ.
ನಮಗೆ ಹಸಿವಿಲ್ಲದಿದ್ದರೆ ಅದು ಆಹಾರವು ಇನ್ನೂ ಜೀರ್ಣಗೊಳ್ಳುತ್ತಿದೆ ಎಂಬುದರ ಸೂಚಕ. ಅಂಥ ಸಮಯದಲ್ಲಿ ಆಹಾರವನ್ನು ಪದೇಪದೆ ಸೇವಿಸುತ್ತಿದ್ದರೆ ಅದು ಸರಿಯಾಗಿ ಜೀರ್ಣಗೊಳ್ಳದೆ, ಅಗ್ನಿಯನ್ನು ಹಾಳು ಮಾಡಿ, ಬೇರೆ ಬೇರೆ ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಆಹಾರ ಸೇವಿಸುವ ಮುನ್ನ ಹಸಿವು ಎಂಬ ಲಕ್ಷಣ ಇರಲೇಬೇಕು.
- ವಾತಾನುಲೋಮನವಾಗಿರಬೇಕು: ಜೀರ್ಣಕ್ರಿಯೆಯು ನಡೆಯುವ ಸಂದರ್ಭದಲ್ಲಿ ಇಡೀ ಜೀರ್ಣಾಂಗದಲ್ಲಿ ವಿವಿಧ ರೀತಿಯ ಚಲನೆಗಳು ಉಂಟಾಗುತ್ತವೆ. ಅಂತೆಯೇ, ನಾವು ಸೇವಿಸುವ ಆಹಾರದ ಗುಣಗಳಿಂದ ಜೀರ್ಣಾಂಗವ್ಯೂಹದಲ್ಲಿ ಒಂದು ರೀತಿಯ ಗಾಳಿಯು ಉತ್ಪತ್ತಿಯಾಗು ತ್ತದೆ. ಈ ಗಾಳಿಯು ತೇಗಿನ ರೂಪದಲ್ಲಿ ಮೇಲ್ಮುಖವಾಗಿ ಹೊರಗೆ ಹೋಗುತ್ತದೆ ಮತ್ತು ಅಧೋವಾತದ ರೂಪದಲ್ಲಿ ಗುದಮಾರ್ಗದ ಮೂಲಕ ಹೊರಕ್ಕೆ ಹೋದಾಗ ಜೀರ್ಣಾಂಗವ್ಯೂಹ ವು ಮತ್ತೊಮ್ಮೆ ಆಹಾರವನ್ನು ಸ್ವೀಕರಿಸಿ ಅದನ್ನು ಪಚನ ಮಾಡಲು ಯೋಗ್ಯವಾಗಿದೆ ಎಂದು ನಾವು ತಿಳಿಯಬೇಕು.
ಸರಿಯಾದ ಸಮಯಕ್ಕೆ ವಾತಾನುಲೋಮನವು ಆಗದಿದ್ದರೆ ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಹೊಟ್ಟೆ ಬಿಗಿತ, ಮಲಬದ್ಧತೆ, ತಲೆನೋವಿನಂಥ ವಿವಿಧ ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು.
- ಜೀರ್ಣಶಕ್ತಿ ಉತ್ತಮವಾಗಿರಬೇಕು: ನಾವು ಆಹಾರದಲ್ಲಿ ಘನ ಪದಾರ್ಥಗಳನ್ನು ಸೇವಿಸ ಬೇಕೆಂದರೆ ಅದಕ್ಕೆ ಉತ್ತಮ ಜೀರ್ಣಶಕ್ತಿಯ ಅವಶ್ಯಕತೆ ಇರುತ್ತದೆ. ಹಸಿವು ಸರಿಯಾದ ಸಮಯ ದಲ್ಲಿ ಆಗುತ್ತಿದೆಯೇ, ಸೇವಿಸಿದ ಆಹಾರವು ಯಾವುದೇ ತೊಂದರೆ ಇಲ್ಲದೆ ಜೀರ್ಣ ವಾಗುತ್ತಿದೆಯೇ ಎಂದು ಗಮನಿಸಿ, ನಂತರ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂದು ನಿರ್ಧರಿಸ ಬೇಕು. ಒಂದು ವೇಳೆ, ಜೀರ್ಣಕ್ರಿಯೆ ಉತ್ತಮವಾಗಿಲ್ಲವೆಂದರೆ ಗಂಜಿ/ಕಟ್ಟು ಸಾರು/ತೊವ್ವೆ/ ತಂಬುಳಿ ಮುಂತಾದ ತಿಳಿಯ ಪದಾರ್ಥಗಳನ್ನು ಸೇವಿಸುವುದು ಉತ್ತಮ.
ಮೇಲಿನ ಲಕ್ಷಣಗಳೆಲ್ಲವೂ ಕಂಡುಬಂದಾಗ ಅದೇ ಆಹಾರವನ್ನು ಸೇವಿಸಲು ಯೋಗ್ಯವಾದ ಕಾಲ. ನಮ್ಮ ಆಹಾರದ ಗುಣಗಳನ್ನು ಮತ್ತು ಪ್ರಮಾಣವನ್ನು ಸರಿಯಾಗಿ ಸಂಯೋಜಿಸಿಕೊಳ್ಳುವ ಮೂಲಕ, ಕೇವಲ ಎರಡು ಅಥವಾ ಮೂರು ಆಹಾರ ಕಾಲದಲ್ಲಿ ಮಾತ್ರ ಆಹಾರವನ್ನು ಸೇವಿಸಿ, ಅವುಗಳ ಮಧ್ಯೆ ಏನನ್ನೂ ತಿನ್ನದೆ ಅಥವಾ ಕುಡಿಯದೆ ಇದ್ದರೆ ಆಗ ಪ್ರತಿ ಆಹಾರ ಕಾಲದಲ್ಲಿಯೂ ಈ ಲಕ್ಷಣಗಳನ್ನು ಗಮನಿಸಬಹುದು.
ಈ ಲಕ್ಷಣಗಳನ್ನು ಸಾಧಿಸಿಕೊಂಡಾಗ ಮಾತ್ರ ನಾವು ಆಹಾರವನ್ನು ಸೇವಿಸುತ್ತಾ ಬಂದರೆ ನಮಗಿರುವ ಎಷ್ಟೋ ಆರೋಗ್ಯದ ಸಮಸ್ಯೆಗಳು ಯಾವುದೇ ಬೇರೆ ಪ್ರಯತ್ನ ಅಥವಾ ಔಷಧಿ ಗಳಿಲ್ಲದೆ ಶಮನವಾಗುವುದನ್ನು ನಾವು ಅನುಭವಿಸಬಹುದು.
ಇದರಿಂದ ಯಾವಾಗ ಆಹಾರವನ್ನು ಸೇವಿಸಬೇಕು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತು. ಆದರೆ ‘ಎಷ್ಟು’ ಸೇವಿಸಬೇಕು ಎನ್ನುವ ಪ್ರಶ್ನೆ ಇನ್ನೂ ಹಾಗೇ ಉಳಿದಿದೆ, ಅಲ್ಲವೇ? ಸ್ನೇಹಿತರೆ, ಸಾಮಾನ್ಯವಾಗಿ ನಾವು ಸೇವಿಸುವ ಆಹಾರವು ‘ಘನ’ ಮತ್ತು ‘ದ್ರವ’ ಎಂಬ ಎರಡು ಪ್ರಕಾರzಗಿರುತ್ತದೆ. ನಮ್ಮ ಹೊಟ್ಟೆ ಯನ್ನು ಕಾಲ್ಪನಿಕವಾಗಿ ನಾಲ್ಕು ಭಾಗಗಳಾಗಿ ವಿಭಾಗಿಸಿದರೆ ಅದರಲ್ಲಿ ಅರ್ಧದಷ್ಟು ಘನ ಆಹಾರ ದಿಂದಲೂ, ಕಾಲುಭಾಗವನ್ನು ದ್ರವ ಆಹಾರದಿಂದಲೂ ತುಂಬಿಸಿ ಉಳಿದ ಕಾಲುಭಾಗವನ್ನು ಖಾಲಿ ಬಿಡತಕ್ಕದ್ದು.
ಹೀಗೆ ಖಾಲಿ ಬಿಡುವುದರಿಂದ ಆಹಾರವು ಸರಿಯಾಗಿ ಜೀರ್ಣವಾಗಲು ಸಹಕಾರಿಯಾಗುತ್ತದೆ. ಊಟದ ನಂತರದ ಹೊಟ್ಟೆಭಾರ, ಉಸಿರಾಟಕ್ಕೆ ತೊಂದರೆ, ಕುಳಿತುಕೊಳ್ಳಲು, ಓಡಾಡಲು, ನಿಂತು ಕೊಳ್ಳಲು ಕಷ್ಟವಾಗುವುದು, ಮುಂದಿನ ಆಹಾರದ ಕಾಲದ ಹೊತ್ತಿಗೆ ಹಸಿವೆ ಆಗದೆ ಇರುವುದು, ಶರೀರದಲ್ಲಿ ಆಲಸ್ಯ ಮತ್ತು ಜಡತ್ವ- ಇವುಗಳು ನಾವು ಸೇವಿಸಿದ ಆಹಾರದ ಪ್ರಮಾಣವು ಹೆಚ್ಚಾ ಯಿತು ಎಂದು ಸೂಚಿಸುತ್ತವೆ.
ಹೊಟ್ಟೆಯು ಸಂಪೂರ್ಣವಾಗಿ ತುಂಬಿದ ಲಕ್ಷಣ ಕಂಡುಬರುವ ಮುನ್ನವೇ ಅಂದರೆ ಹೊಟ್ಟೆಯಲ್ಲಿ ಇನ್ನೂ ಸ್ವಲ್ಪ ಜಾಗವಿದೆ ಎಂಬ ಭಾವನೆ ಇದ್ದಾಗಲೇ ಆಹಾರ ಸೇವನೆಯನ್ನು ನಿಲ್ಲಿಸುವುದು ಆರೋಗ್ಯ ರಕ್ಷಕವಾಗಿ ಪರಿಣಮಿಸುತ್ತದೆ. ಈ ರೀತಿಯಾಗಿ ಎಚ್ಚರದಿಂದ ಆಹಾರವನ್ನು ಸೇವಿಸುವು ದರಿಂದ ಮಾತ್ರ ನಾವು ರೋಗಕಾರಕ ಆಹಾರವನ್ನು ಮಹಾಭೈಷಜ್ಯವನ್ನಾಗಿಸಬಹುದು!