Lokesh Kaayarga Column: ಕೇರಳದ ಲಾಬಿ ನಮಗೆ ಪಾಠವಾಗಬಹುದೇ ?
2016 ಮತ್ತು 2017ರಲ್ಲೂ ದಕ್ಷಿಣ ಗೋವಾದ ವಾಸ್ಕೋ ಸಮೀಪವಿರುವ ‘ಬೈನಾ ಕಡಲತೀರ’ದಲ್ಲಿದ್ದ ನೂರಾರು ಮನೆಗಳನ್ನು ಕೆಡವಲಾಯಿತು. ಕರ್ನಾಟಕ ಮೂಲದವರಾದರೂ ಇವರಲ್ಲಿ ಹೆಚ್ಚಿನವರು ಗೋವಾದ ಕಾಯಂ ನಿವಾಸಿಗಳಾಗಿದ್ದರು. ಹೆಚ್ಚಿನವರ ಬಳಿ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿಗಳಿದ್ದವು. ಆದರೆ ಅಕ್ರಮ ಒತ್ತುವರಿ ಮತ್ತು ಸಿಆರ್ಝೆಡ್ ನಿಯಮಗಳ ಉಲ್ಲಂಘನೆ ನೆಪದಲ್ಲಿ ಇವರನ್ನು ಹೊರ ದಬ್ಬ ಲಾಯಿತು.
-
ಲೋಕಮತ
ಕೇರಳವು ತನ್ನ ಜನರ ಹಿತಾಸಕ್ತಿ ಕಾಪಾಡಲು ಸಂಘಟಿತವಾಗಿ ಲಾಬಿ ಮಾಡುವುದರಲ್ಲಿ ಯಾವತ್ತೂ ಮುಂದಿದೆ ಎಂಬುದು ಸತ್ಯ. ಕೋಗಿಲು ಪ್ರಕರಣದಲ್ಲಿಯೂ ಕೇರಳದ ರಾಜಕಾರಣಿಗಳು ಒಗ್ಗಟ್ಟಾಗಿ ಧ್ವನಿ ಎತ್ತಿದ್ದರಿಂದ ಕರ್ನಾಟಕ ಸರಕಾರ ತನ್ನ ನಿರ್ಧಾರವನ್ನು ಬದಲಿಸಬೇಕಾಯಿತು. ಆದರೆ ಕನ್ನಡಿಗರದೇ ವಿಚಾರದಲ್ಲಿ ನಾವು ಈ ಮಟ್ಟಿಗಿನ ಔದಾರ್ಯ ತೋರುವುದಿಲ್ಲ. ಮಲೆನಾಡಿನಲ್ಲಿ ಅರಣ್ಯ ಅತಿಕ್ರಮಣದ ಹೆಸರಿನಲ್ಲಿ ನೂರಾರು ಮನೆಗಳಿಗೆ ನೋಟಿಸ್ ನೀಡಲಾಗಿದೆ. ಫಲ ನೀಡುತ್ತಿರುವ ಅಡಕೆ ಮರಗಳನ್ನು ಅಧಿಕಾರಿಗಳು ಯಾವ ಕರುಣೆಯೂ ಇಲ್ಲದೆ ಕತ್ತರಿಸುತ್ತಿದ್ದಾರೆ. ಇದನ್ನು ತಡೆಯಲು ನಮ್ಮ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇದೇ ಘಟನೆ ಕೇರಳದಲ್ಲಿ ನಡೆದಿದ್ದರೆ ಪ್ರತಿಕ್ರಿಯೆ ಬೇರೆಯೇ ಇರುತ್ತಿತ್ತು. ತಮ್ಮವರಿಗಾಗಿ ಕೇರಳಿಗರು ತೋರಿಸುವ ಒಗ್ಗಟ್ಟು ಮತ್ತು ಲಾಬಿ ನಮಗೂ ಪಾಠ.
ರಾಜಧಾನಿ ಬೆಂಗಳೂರಿನಲ್ಲಿ ಒತ್ತುವರಿ ತೆರವು ಮಾಡುವ ಅಧಿಕಾರಿಗಳಿಗೆ ಅಲ್ಲಿನ ನಿವಾಸಿಗಳ ಕೂಗಾಟ, ಚೀರಾಟ, ನೋವು, ಹತಾಶೆಯ ಮಾತುಗಳು, ಹಿಡಿ ಶಾಪ...ಇದಾವುದೂ ಹೊಸದಲ್ಲ. ಆದರೆ ಯಲಹಂಕದ ಕೋಗಿಲು ಬಡಾವಣೆಯಲ್ಲಿ ಸುಮಾರು 200 ಅನಧಿಕೃತ ಶೆಡ್ ಮನೆಗಳನ್ನು ತೆರವು ಮಾಡಿದ ಅಧಿಕಾರಿಗಳಿಗೆ ಈಗ ಪೀಕಲಾಟ ಶುರುವಾಗಿದೆ. ನೆರೆಯ ಕೇರಳ ಸರಕಾರದ ಮುಖ್ಯಮಂತ್ರಿ, ಕರ್ನಾಟಕದಲ್ಲಿ ‘ಬುಲ್ಡೋಜರ್ ಸಂಸ್ಕೃತಿ’ ಇದೆ ಎಂದು ರಂಪ ಎಬ್ಬಿಸಿದರೆ, ಕಾಂಗ್ರೆಸ್ ಹೈಕಮಾಂಡ್ನಲ್ಲಿರುವ ಕೇರಳ ನಾಯಕರು ಸಿಎಂ, ಡಿಸಿಎಂಗೆ ಖುದ್ದು ಕರೆ ಮಾಡಿ ಈ ನಿರಾಶ್ರಿತರಿಗೆ ನೆಲೆ ಕಲ್ಪಿಸುವಂತೆ ತಾಕೀತು ಮಾಡಿದ್ದಾರೆ.
ಇದು ಸಾಲದೆಂಬಂತೆ ವೈರಿ ರಾಷ್ಟ್ರ ಪಾಕಿಸ್ತಾನವು ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಈ ಪ್ರಕರಣ ಸಾಕ್ಷಿ ಎಂದು ಗುಲ್ಲೆಬ್ಬಿಸಿದೆ. ಈ ಸದ್ದಿಗೆ ಬೆಚ್ಚಿ ಬಿದ್ದ ಕರ್ನಾಟಕ ಸರಕಾರ ಕೋಗಿಲು ‘ನಿರಾಶ್ರಿತರಿಗೆ’ ಮನೆ ನೀಡಲು ಮುಂದಾಗಿದೆ. ನಮ್ಮದೇ ರಾಜ್ಯದ ಮಾನವ ಹಕ್ಕು ಆಯೋಗ ಸ್ಥಳಕ್ಕೆ ಭೇಟಿ ನೀಡಿ, ‘ಸಂತ್ರಸ್ತರ’ ಅಹವಾಲು ಆಲಿಸಿ ‘ತಪ್ಪಿತಸ್ಥ’ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ.
ಇಂಥದ್ದೇ ಇನ್ನೊಂದಷ್ಟು ಘಟನೆಗಳನ್ನು ನೆನಪು ಮಾಡಿಕೊಳ್ಳಿ. 2015ರಿಂದ ನಮ್ಮ ನೆರೆ ರಾಜ್ಯ ಗೋವಾದಲ್ಲಿ ಇದೇ ರೀತಿಯ ತೆರವು ಕಾರ್ಯಾಚರಣೆ ನಡೆಯುತ್ತಲೇ ಇದೆ. ಇನ್ನೂರು, ಮುನ್ನೂ ರಲ್ಲ, ರಾತ್ರೋರಾತ್ರಿ ಸಾವಿರಾರು ಜನರನ್ನು ಒಕ್ಕಲೆಬ್ಬಿಸಲಾಗಿದೆ. ಇಲ್ಲಿ ಬೀದಿ ಪಾಲಾದವರಲ್ಲಿ ಮೂರ್ನಾಲ್ಕು ದಶಕಗಳಿಂದ ಅಲ್ಲಿಯೇ ನೆಲೆಯೂರಿ ಬದುಕು ಕಂಡುಕೊಂಡವರೂ ಇದ್ದಾರೆ. ವ್ಯತ್ಯಾಸ ಎಂದರೆ ಇಲ್ಲಿ ಸಂತ್ರಸ್ತರು ಕನ್ನಡಿಗರು !
ಇದನ್ನೂ ಓದಿ: Lokesh Kayarga Column: ಎಲ್ಲ ಡಿಗ್ರಿಗಳನ್ನು ಕಂಪ್ಯೂಟರ್ ನುಂಗಿ ಹಾಕಿತೇ ?
ಇವರನ್ನು ತೆರವು ಮಾಡಿದ್ದು ಗೋವಾದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರ ಗಳು. 2015ರ ಸೆಪ್ಟೆಂಬರ್ ತಿಂಗಳು. ಮುಂಗಾರು ಮಳೆ ಇನ್ನೂ ಅಬ್ಬರಿಸುತ್ತಿದ್ದ ಕಾಲವದು. ಗೋವಾ ದ ಬೈನಾ ಕಡಲ ತೀರದಲ್ಲಿ ಸುಮಾರು 157 ಜೋಪಡಿ ಮನೆಗಳನ್ನು ನಡುರಾತ್ರಿಯಲ್ಲಿ ಕೆಡವ ಲಾಯಿತು. ಇಲ್ಲಿ ಮನೆ ಕಟ್ಟಿಕೊಂಡವರಲ್ಲಿ ಬಹುತೇಕರು ಉತ್ತರ ಕರ್ನಾಟಕದ ಮೂಲದ ಕನ್ನಡಿ ಗರು. ಇವರು ಕೂಲಿ ಕೆಲಸಕ್ಕೆಂದು ಬಂದು ಗೋವಾದಲ್ಲಿಯೇ ನೆಲೆಯಾಗಿದ್ದರು. ದೈಹಿಕ ಶ್ರಮದ ಕೆಲಸದಲ್ಲಿ ಹಿಂದೇಟು ಹಾಕುವ ಗೋವನ್ನರಿಗೆ ಇವರು ಆಧಾರವಾಗಿದ್ದರು. ಈ ಪ್ರಕರಣ ಕರ್ನಾಟ ಕದ ಮಾಧ್ಯಮಗಳಲ್ಲಿ ಸಣ್ಣದಾಗಿ ಸುದ್ದಿಯಾಯಿತೇ ವಿನಾ ಉಳಿದಂತೆ ಏನೂ ಆಗಲಿಲ್ಲ.
ಈ ಕಾರ್ಯಾಚರಣೆ ಇಲ್ಲಿಗೇ ನಿಲ್ಲಲಿಲ್ಲ. 2016 ಮತ್ತು 2017ರಲ್ಲೂ ದಕ್ಷಿಣ ಗೋವಾದ ವಾಸ್ಕೋ ಸಮೀಪವಿರುವ ‘ಬೈನಾ ಕಡಲತೀರ’ದಲ್ಲಿದ್ದ ನೂರಾರು ಮನೆಗಳನ್ನು ಕೆಡವಲಾಯಿತು. ಕರ್ನಾಟಕ ಮೂಲದವರಾದರೂ ಇವರಲ್ಲಿ ಹೆಚ್ಚಿನವರು ಗೋವಾದ ಕಾಯಂ ನಿವಾಸಿಗಳಾಗಿದ್ದರು. ಹೆಚ್ಚಿನವರ ಬಳಿ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿಗಳಿದ್ದವು. ಆದರೆ ಅಕ್ರಮ ಒತ್ತುವರಿ ಮತ್ತು ಸಿಆರ್ಝೆಡ್ ನಿಯಮಗಳ ಉಲ್ಲಂಘನೆ ನೆಪದಲ್ಲಿ ಇವರನ್ನು ಹೊರ ದಬ್ಬ ಲಾಯಿತು. ಸುಮಾರು 500ಕ್ಕೂ ಹೆಚ್ಚು ಕನ್ನಡಿಗರ ಆಕ್ರಂದನ ಮುಗಿಲು ಮುಟ್ಟುವಂತಿದ್ದರೂ ಆಗಿನ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೇಕರ್ ಮತ್ತು ನಂತರ ಬಂದ ಮನೋಹರ್ ಪರಿಕ್ಕರ್ ಸರಕಾರ ಕ್ಯಾರೇ ಎನ್ನಲಿಲ್ಲ.
ಕಳಸಾ-ಬಂಡೂರಿ ಯೋಜನೆಯ ಹೋರಾಟ ನಡೆಯುತ್ತಿದ್ದ ಸಮಯದಲ್ಲಿ ಈ ತೆರವು ನಡೆದಿದ್ದ ರಿಂದ, ಇದು ಗೋವಾ ಸರಕಾರದ ಸೇಡಿನ ಕ್ರಮ ಎಂದು ಅಂದು ಕರ್ನಾಟಕದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಂದು ರಾಜ್ಯ ಸರಕಾರವೂ ಗೋವಾ ಸಿಎಂಗೆ ಪತ್ರ ಬರೆದು, ದಶಕಗಳಿಂದ ಅಲ್ಲಿ ವಾಸಿಸುತ್ತಿರುವ ಕನ್ನಡಿಗರನ್ನು ಏಕಾಏಕಿ ಬೀದಿಗೆ ತಳ್ಳುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿತ್ತು. ಇಲ್ಲಿನ ಮಂತ್ರಿಗಳು ಅಲ್ಲಿಗೆ ಧಾವಿಸಿ ಸಂತ್ರಸ್ತರ ಅಹವಾಲು ಆಲಿಸಿದ್ದರು. ಆದರೆ ಗೋವಾ ಸರಕಾರ ಒತ್ತಡಕ್ಕೆ ಮಣಿಯಲಿಲ್ಲ. ನೂರಾರು ಮಂದಿ ಬೀದಿಗೆ ಬಿದ್ದರೂ ಈ ಘಟನೆ ರಾಷ್ಟ್ರಮಟ್ಟದ ಸುದ್ದಿಯಾಗಲಿಲ್ಲ. ನಮ್ಮ ಸಂಸದರು ಇದನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ, ಗದ್ದಲ ಎಬ್ಬಿಸುವುದಿರಲಿ, ಕನಿಷ್ಠ ನ್ಯಾಯ ಕೇಳುವ ಪ್ರಯತ್ನವನ್ನೂ ಮಾಡಲಿಲ್ಲ. ಅಲ್ಲಿಗೇ ಈ ಪ್ರಕರಣ ಮುಕ್ತಾಯ ಕಂಡಿತು.
ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಮತ್ತು ಕಡಲತೀರವನ್ನು ಸ್ವಚ್ಛವಾಗಿಡಲು ಈ ಒತ್ತುವರಿ ತೆರವು ಅನಿವಾರ್ಯ ಎಂದು ಅಂದು ಗೋವಾ ಸರಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು. ಇದು ಸರಕಾರದ ಸ್ವಯಂಪ್ರೇರಿತ ನಿರ್ಧಾರವಲ್ಲ, ನ್ಯಾಯಾಲಯದ ಆದೇಶದಂತೆ ಅಕ್ರಮ ಕಟ್ಟಡ ಗಳನ್ನು ತೆರವುಗೊಳಿಸುತ್ತಿದ್ದೇವೆ ಎಂದು ಗೋವಾ ಅಧಿಕಾರಿಗಳು ಹೇಳಿದ್ದರು. ಸಂತ್ರಸ್ತರಿಗೆ ಬಿದ್ದು ಹೋದ ಮನೆಗಳಿಗೆ ಕನಿಷ್ಠ ಪರಿಹಾರ ನೀಡುವ ಸೌಜನ್ಯವನ್ನೂ ತೋರಿಸಲಿಲ್ಲ.
ಹಾಗೆ ನೋಡಿದರೆ ಯಲಹಂಕದ ಕೋಗಿಲು ಬಳಿ ಅಕ್ರಮವಾಗಿ ನೆಲೆ ನಿಂತವರು ತೀರಾ ಇತ್ತೀಚೆಗೆ ಬಂದು ಇಲ್ಲಿ ಠಿಕಾಣಿ ಹೂಡಿದವರು. ಸ್ಥಳೀಯ ಪುಢಾರಿಗಳ ಬೆಂಬಲದಿಂದ ಜೋಪಡಿ ಕಟ್ಟಿ ಕೊಂಡು ಬೆಂಗಳೂರಿನಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದರು. ವೋಟ್ ಬ್ಯಾಂಕ್ ಉದ್ದೇಶದಿಂದ ಕೆಲವು ನಾಯಕರು ಮುತುವರ್ಜಿ ವಹಿಸಿ ಇವರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಮತದಾರರ ಚೀಟಿ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಇವರು ವಾಸ್ತವ್ಯ ಹೂಡಿದ್ದ ಸ್ಥಳದಲ್ಲಿಯೇ ರಾಜಕಾಲುವೆ ಇದೆ. ರಾಜಕಾಲುವೆ ಒತ್ತುವರಿ ಯಾರೇ ಮಾಡಿ ದ್ದರೂ ಅದನ್ನು ತೆರವು ಮಾಡಬೇಕೆಂದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನಗಳಿವೆ. ಸ್ವತ: ಡಿಸಿಎಂ ಡಿ.ಕೆ. ಶಿವಕುಮಾರ್ ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಆದೇಶವನ್ನು ಪಾಲಿಸಲು ಹೋದ ಅಧಿಕಾರಿಗಳೀಗ ಮಾನವ ಹಕ್ಕು ಉಲ್ಲಂಘನೆಯ ಆರೋಪ ಎದುರಿಸಬೇಕಾಗಿದೆ. ಕರ್ನಾಟಕ ಸರಕಾರ ನೆರೆ ರಾಜ್ಯದ ಸಿಎಂ ಕಣ್ಣಲ್ಲಿ ‘ಬುಲ್ಡೋಜರ್ ಸರಕಾರ’ ವಾಗಿ ಬದಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯ ಸರಕಾರ ಈ ನಡೆಗೆ ತಮ್ಮದೇ ಪಕ್ಷದ ಹೈಕಮಾಂಡ್ನ ಕೆಂಗಣ್ಣಿಗೆ ಗುರಿಯಾಗಿದೆ. ಕೇರಳದ ಮಾಧ್ಯಮಗಳು ಈ ಘಟನೆಯನ್ನು ಯಾವ ಮಟ್ಟಕ್ಕೆ ಪ್ರಚಾರ ಮಾಡಿವೆ ಎಂದರೆ ನೆರೆಯ ಪಾಕಿಸ್ತಾನವೂ ಈ ಸುದ್ದಿಗೆ ಪ್ರತಿಕ್ರಿಯಿಸಿದೆ. ಈ ಮೂಲಕ ಇದೊಂದು ಅಂತಾರಾಷ್ಟ್ರೀಯ ಘಟನೆ ಎಂಬ ಮಟ್ಟಕ್ಕೆ ಬಿಂಬಿತವಾಗಿದೆ.
ಕರ್ನಾಟಕವೀಗ ‘ತಪ್ಪಿತಸ್ಥನ’ ಭಾವದಲ್ಲಿ ನಿಂತಿದೆ. ರಾಜ್ಯ ಸರಕಾರ ಹೈಕಮಾಂಡ್ನಲ್ಲಿ ಆಯಕಟ್ಟಿ ನಲ್ಲಿರುವ ನಾಯಕರೊಬ್ಬರ ಆಜ್ಞಾನುವರ್ತಿಯಾಗಿ‘ ಕೋಗಿಲು ಸಂತ್ರಸ್ತರಿಗೆ’ ಮನೆ ಕಟ್ಟಿಕೊಡುವ ವಾಗ್ದಾನ ಮಾಡಿದೆ. ಜೋಪಡಿಯಲ್ಲಿದ್ದವರಲ್ಲಿ ಸದ್ಯವೇ ಬೈಯಪ್ಪನಹಳ್ಳಿಯ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಅಪಾರ್ಟ್ಮೆಂಟ್ ನಿವಾಸಿಗಳಾಗಲಿದ್ದಾರೆ. ಇಲ್ಲಿ ಮನೆ ಬೇಕೆಂದು ಹಲವು ವರ್ಷಗಳ ಹಿಂದೆಯೇ ಅರ್ಜಿ ಹಾಕಿಕೊಂಡು ಕಾಯುತ್ತಿದ್ದವರಿಗೆ ಮನೆ ಸಿಗುವ ಖಾತರಿ ಇಲ್ಲ. ಆದರೆ ‘ಕೋಗಿಲು ಸಂತ್ರಸ್ತರಿಗೆ’ ಹೊಸ ವರ್ಷದ ಆರಂಭದಲ್ಲಿಯೇ ಈ ಅಪಾರ್ಟ್ ಮೆಂಟ್ ಸಿಗುವುದು ಖಚಿತವಾಗಿದೆ. ಇವರು ಸರಕಾರಕ್ಕೆ ಪಾವತಿಸಬೇಕಿರುವ ಕನಿಷ್ಠ ಮೊತ್ತವನ್ನು ಭರಿಸಲು ಇಲ್ಲಿನ ದಾನಿಗಳು ಮುಂದೆ ಬರಬಹುದು !
ನಾವೆಲ್ಲರೂ ಭಾರತೀಯರು. ಆದರೆ ಭಾಷಾವಾರು ನೆಲೆಗಟ್ಟಿನ ಮೇಲೆ ರಾಜ್ಯಗಳ ವಿಂಗಡಣೆಯಾದ ಕಾರಣಕ್ಕೆ ನಾವು ಕನ್ನಡಿಗರು, ಮಲಯಾಳಿಗಳು, ತಮಿಳರು, ತೆಲುಗರು, ಉತ್ತರ ಭಾರತೀಯರು, ದಕ್ಷಿಣ ಭಾರತೀಯರು ಎಂದು ಗುರುತಿಸಿಕೊಳ್ಳುತ್ತೇವೆ. ನಮ್ಮ ಭಾಷೆ ನಮಗೆ ನೀಡಿರುವ ವಿಶಿಷ್ಟ ಐಡೆಂಟಿಟಿಯಿಂದಾಗಿ ಇಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ, ಪರಂಪರೆ ಎಲ್ಲವೂ ‘ನಮ್ಮದು’ ಎನ್ನುತ್ತೇವೆ. ಇದನ್ನು ರಕ್ಷಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ. ಆದರೆ ಮಲಯಾಳಿ ಗಳು ಮತ್ತು ತಮಿಳರು ಈ ವಿಷಯದಲ್ಲಿ ಎಲ್ಲರಿಗಿಂತಲೂ ಒಂದು ಹೆಜ್ಜೆ ಮುಂದೆ. ನೆಲ-ಜಲ, ಉದ್ಯೋಗ, ಯೋಜನೆಗಳಲ್ಲಿ ಗರಿಷ್ಠ ಪಾಲು ಪಡೆಯುವ ವಿಚಾರದಲ್ಲಿ ಕೇರಳ ಮತ್ತು ತಮಿಳು ನಾಡು ಯಾವತ್ತೂ ಮುಂದೆ.
ಹೊರ ರಾಜ್ಯದಲ್ಲಿರಬಹುದು, ಹೊರ ದೇಶದಲ್ಲಿರಬಹುದು, ಮಲಯಾಳಿಯೊಬ್ಬನಿಗೆ ನ್ಯಾಯ ಬೇಕಿದೆ ಎಂದಾಗ ಅಲ್ಲಿನ ಮಾಧ್ಯಮಗಳು ಅದನ್ನು ರಾಷ್ಟ್ರಮಟ್ಟದ ಸುದ್ದಿಯಾಗಿ ಪ್ರಕಟಿಸುತ್ತವೆ. ಅಲ್ಲಿನ ಪತ್ರಕರ್ತರು ಘಟನಾ ಸ್ಥಳಕ್ಕೆ ಬಂದು ವರದಿ ಮಾಡುತ್ತಾರೆ. ಅಲ್ಲಿನ ಶಾಸಕರು, ಸಚಿವರು, ಸಂಸದರು ಖುದ್ದಾಗಿ ಬಂದು ಮಲಯಾಳಿಗಳ ಕಷ್ಟ ಸುಖ ವಿಚಾರಿಸುತ್ತಾರೆ. 2023ರ ಮಳೆಗಾಲದಲ್ಲಿ ಶಿರೂರು ಬಳಿ ಗುಡ್ಡ ಕುಸಿತವಾಗಿ ಲಾರಿ ಸಹಿತ ಚಾಲಕ ನಾಪತ್ತೆಯಾಗಿದ್ದ. ಈತ ಕೇರಳಿಗ ಎಂದು ಗೊತ್ತಾಗುತ್ತಿದ್ದಂತೆ ಧಾವಿಸಿ ಬಂದ ಅಲ್ಲಿನ ಪತ್ರಕರ್ತರು ತಿಂಗಳುಗಟ್ಟಲೆ ಇಲ್ಲಿಯೇ ಬಿಡಾರ ಹೂಡಿ ದ್ದರು. ಅಲ್ಲಿನ ಶಾಸಕನೂ ಶಿರೂರಿಗೆ ಬಂದು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ. ಭಾರೀ ಪ್ರಮಾಣದಲ್ಲಿ ಕುಸಿದ ಗುಡ್ಡದ ಮಣ್ಣನ್ನು ಎತ್ತಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಕೈ ಚೆಲ್ಲಿದಾಗ ಅಲ್ಲಿನ ಜನಪ್ರತಿನಿಧಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕಾರ್ಯಾಚರಣೆ ಪೂರ್ಣ ಗೊಂಡು ಲಾರಿ ಮತ್ತು ಚಾಲಕನ ಶವ ಪತ್ತೆಯಾಗುವವರೆಗೂ ಕೇರಳಿಗರು ತಮ್ಮ ಪಟ್ಟು ಬಿಡಲಿಲ್ಲ.
ಹಾಗೆಯೇ ಒಂದು ಕ್ಷಣ ಯೋಚಿಸಿ. ಬಡಪಾಯಿ ಕನ್ನಡಿಗನೊಬ್ಬ ಇಂಥದ್ದೇ ಸನ್ನಿವೇಶದಲ್ಲಿ ಕೇರಳ ದಲ್ಲಿ ಮಣ್ಣುಪಾಲಾಗಿದ್ದರೆ ಆತನ ಶವ ತರಲು ಕನ್ನಡಿಗರು, ಇಲ್ಲಿನ ಮಾಧ್ಯಮಗಳು, ನಾಯಕರು ಈ ಮಟ್ಟಕ್ಕೆ ಒತ್ತಡ ಹೇರುವ ಸಾಧ್ಯತೆಗಳಿದ್ದವೇ ? ಕಾಸರಗೋಡು ಅಪ್ಪಟ ಕನ್ನಡ ನಾಡು, ಅದು ಕರ್ನಾಟಕಕ್ಕೆ ಸೇರಬೇಕೆಂದು ಕೇರಳ ಸಿಎಂ ನಂಬೂದಿರಿಪ್ಪಾಡ್ ಹೇಳಿದ ಬಳಿಕವೂ ನಾವು ಕಾಸರಗೋಡನ್ನು ಉಳಿಸಿಕೊಳ್ಳಲಿಲ್ಲ. ಈ ಜಿಲ್ಲೆಗಾಗಿ ತಮ್ಮ ಬೆವರು, ರಕ್ತ ಹರಿಸಿದ ಹೋರಾಟಗಾರರ ಜತೆ ಕೈ ಜೋಡಿಸಲಿಲ್ಲ. ಎಸ್.ಎಂ. ಕೃಷ್ಣ ಅವರಂತಹ ‘ಮುತ್ಸದ್ಧಿ’ ನಾಯಕ ಕಾಸರಗೋಡು ಮುಗಿದ ವಿಚಾರ ಎನ್ನುವ ಮೂಲಕ ಇಲ್ಲಿನ ಗಡಿ ಕನ್ನಡಿಗರ ಹೋರಾಟಕ್ಕೆ ತಾವೇ ಎಳ್ಳು ನೀರು ಬಿಟ್ಟರು.
ಕರ್ನಾಟಕ ಮೂಲದ ಜಾರ್ಜ್ ಫರ್ನಾಂಡಿಸ್ ಅವರು ಕೊಂಕಣ ರೈಲ್ವೆಗೆ ಚಾಲನೆ ನೀಡಿದಾಗ, ‘ಮುಂಬಯಿ ಮತ್ತು ಬೆಂಗಳೂರು ಇನ್ನಷ್ಟು ಹತ್ತಿರವಾಗಲಿದೆ’ ಎಂದಿದ್ದರು. ಈ ಯೋಜನೆ ಕಾರ್ಯ ಗತಗೊಳ್ಳಲು ಅತಿ ಹೆಚ್ಚು ಭೂಮಿ ನೀಡಿದ್ದು ಕರ್ನಾಟಕ. ಸಹಜವಾಗಿಯೇ ಯೋಜನೆಯ ಹೆಚ್ಚಿನ ಲಾಭ ಕರ್ನಾಟಕಕ್ಕೆ ಸಿಗಬೇಕಿತ್ತು. ಆದರೆ ಆಗಿದ್ದೇ ಬೇರೆ. ಕೊಂಕಣ ರೈಲ್ವೆ ಕೇರಳ- ಮುಂಬಯಿ ಬೆಸೆಯುವ ಮಾರ್ಗವಾಯಿತು.
ಮುಂಬೈ-ಗೋವಾ ನಡುವೆ ಸಂಚರಿಸುತ್ತಿದ್ದ ಹಲವು ರೈಲುಗಳು ತಿರುವನಂತಪುರಕ್ಕೆ ವಿಸ್ತರಣೆ ಯಾದವು. ಮಾತ್ರವಲ್ಲ ಮಂಗಳೂರು-ಬೆಂಗಳೂರು ಮಧ್ಯೆ ಓಡುತ್ತಿದ್ದ ರೈಲು ಕಣ್ಣೂರಿಗೆ ವಿಸ್ತರಣೆ ಯಾಯಿತು. ಕೆಲವು ರೈಲುಗಳು ಮಂಗಳೂರು ಸೆಂಟ್ರಲ್ಗೆ ಬಾರದೆ ಬೈಪಾಸ್ ಮೂಲಕ ಸಂಚರಿಸು ವಂತಾಯಿತು. ಇದು ಕೇರಳದ ಜನಪ್ರತಿನಿಧಿಗಳ ತಾಕತ್ತು. ಸಂಸತ್ತಿನಲ್ಲಿ ನಮಗಿಂತ ಕಡಿಮೆ ಸಂಸದ ರನ್ನು ಹೊಂದಿದ್ದರೂ ಮಲಯಾಳಿ ನಾಯಕರ ಸದ್ದಿನ ಮುಂದೆ ನಮ್ಮವರ ಸದ್ದು ಕೇಳಿಸುವುದೇ ಇಲ್ಲ. ಇಷ್ಟೇ ಅಲ್ಲ, ಅಧಿಕಾರಿಗಳ ಬೆನ್ನು ಹತ್ತಿ ಕೆಲಸ ಮಾಡಿಸುವುದರಲ್ಲಿ ಅಲ್ಲಿನ ನಾಯಕರು ಯಾವತ್ತೂ ಮುಂದು. ನೈಋತ್ಯ ರೈಲ್ವೆಯ ಭಾಗವಾಗಬೇಕಿದ್ದ ಮಂಗಳೂರು ಇಂದಿಗೂ ದಕ್ಷಿಣ ರೈಲ್ವೆ ಭಾಗವಾಗಿ ಉಳಿಯಲು ಕಾರಣ ಕೇರಳಿಗರ ಲಾಬಿ.
ತೀರಾ ಇತ್ತೀಚೆಗೆ ಬಂಡೀಪುರ-ಗುಂಡ್ಲುಪೇಟೆ ಮೂಲಕ ಅಹೋರಾತ್ರಿ ಬಸ್ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಕೇರಳ ನಡೆಸಿದ ಲಾಬಿಯನ್ನು ನೆನಪಿಸಿಕೊಳ್ಳಿ. ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ ಅವರನ್ನು ಮುಂದಿಟ್ಟುಕೊಂಡು ಕೇರಳ, ಕರ್ನಾಟಕದ ಮೇಲೆ ಪ್ರಭಾವ ಬೀರುವ ಎಲ್ಲ ಪ್ರಯತ್ನವನ್ನೂ ಮಾಡಿತ್ತು. ಅಲ್ಲಿನ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದಾಗ ಕೇರಳ ಮೂಲದ ಕರ್ನಾಟಕದ ಶಾಸಕರೂ ಜತೆಯಾಗಿದ್ದರು. ಸುಪ್ರೀಂಕೋರ್ಟ್ ನಿರ್ದೇಶನ ಇಲ್ಲದೇ ಹೋಗಿದ್ದರೆ ನಮ್ಮ ನಾಯಕರು ತಮ್ಮ ನಾಯಕಿಯ ನಿರ್ದೇಶನದಂತೆ ರಾತ್ರಿ ವಾಹನ ಓಡಾಟಕ್ಕೆ ಅನುಮತಿ ಕೊಡುತ್ತಿದ್ದರು.
ಕರ್ನಾಟಕದ ರಾಜಕೀಯವನ್ನು ಕೇರಳ ಬಹಳ ಹಿಂದಿನಿಂದಲೂ ನಿಯಂತ್ರಿಸುತ್ತಾ ಬಂದಿದೆ. ಬಂಗಾರಪ್ಪ ಅವರನ್ನು ಕೆಳಗಿಳಿಸಿ ವೀರಪ್ಪ ಮೊಯಿಲಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಅಂದಿನ ಕೇರಳ ಸಿಎಂ ಕೆ.ಕರುಣಾಕರನ್ ಪ್ರಮುಖ ಪಾತ್ರವಹಿಸಿದ್ದರು. ಈಗಲೂ ವೇಣುಗೋಪಾಲ್ ಮತ್ತು ಕರುಣಾಕರನ್ ಪುತ್ರ ಮುರಳೀಧರನ್ ಅವರು ದಿಲ್ಲಿಯಲ್ಲಿ ಪ್ರಭಾವಿ ನಾಯಕರು. ರಾಜ್ಯ ರಾಜಕೀಯಕ್ಕೆ ಹೊಸ ದಿಕ್ಕು ತೋರಿಸಬಲ್ಲ ಸಾಮರ್ಥ್ಯ ಇವರಲ್ಲಿದೆ. ಅಷ್ಟೇ ಅಲ್ಲ ಸರ್ವಜ್ಞನಗರ, ಶಾಂತಿನಗರ, ಕೆ.ಆರ್.ಪುರಂ ಮತ್ತು ಬೊಮ್ಮನಹಳ್ಳಿ ಮುಂತಾದ ಕ್ಷೇತ್ರಗಳಲ್ಲಿ ಮಲಯಾಳಿ ಮತದಾರರು ಅಭ್ಯರ್ಥಿಗಳ ಗೆಲುವನ್ನು ನಿರ್ಧರಿಸುವಷ್ಟು ಪ್ರಭಾವಿಗಳಾಗಿದ್ದಾರೆ.
ಕೇರಳವು ತನ್ನ ಜನರ ಹಿತಾಸಕ್ತಿ ಕಾಪಾಡಲು ಸಂಘಟಿತವಾಗಿ ಲಾಬಿ ಮಾಡುವುದರಲ್ಲಿ ಯಾವತ್ತೂ ಮುಂದಿದೆ ಎಂಬುದು ಸತ್ಯ. ಕೋಗಿಲು ಪ್ರಕರಣದಲ್ಲಿಯೂ ಕೇರಳದ ರಾಜಕಾರಣಿಗಳು ಒಗ್ಗಟ್ಟಾಗಿ ಧ್ವನಿ ಎತ್ತಿದ್ದರಿಂದ ಕರ್ನಾಟಕ ಸರಕಾರ ತನ್ನ ನಿರ್ಧಾರವನ್ನು ಬದಲಿಸಬೇಕಾಯಿತು. ಆದರೆ ಕನ್ನಡಿಗರದೇ ವಿಚಾರದಲ್ಲಿ ನಾವು ಈ ಮಟ್ಟಿಗಿನ ಔದಾರ್ಯ ತೋರುವುದಿಲ್ಲ.
ಮಲೆನಾಡಿನಲ್ಲಿ ಅರಣ್ಯ ಅತಿಕ್ರಮಣದ ಹೆಸರಿನಲ್ಲಿ ನೂರಾರು ಮನೆಗಳಿಗೆ ನೋಟಿಸ್ ನೀಡಲಾಗಿದೆ. ಫಲ ನೀಡುತ್ತಿರುವ ಅಡಕೆ ಮರಗಳನ್ನು ಅಧಿಕಾರಿಗಳು ಯಾವ ಕರುಣೆಯೂ ಇಲ್ಲದೆ ಕತ್ತರಿಸು ತ್ತಿದ್ದಾರೆ. ಇದನ್ನು ತಡೆಯಲು ನಮ್ಮ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಇದೇ ಘಟನೆ ಕೇರಳ ದಲ್ಲಿ ನಡೆದಿದ್ದರೆ ಪ್ರತಿಕ್ರಿಯೆ ಬೇರೆಯೇ ಇರುತ್ತಿತ್ತು. ತಮ್ಮವರಿಗಾಗಿ ಕೇರಳಿಗರು ತೋರಿಸುವ ಒಗ್ಗಟ್ಟು ಮತ್ತು ಲಾಬಿ ನಮಗೂ ಪಾಠ. ಈ ನಿಟ್ಟಿನಲ್ಲಿ ಕೋಗಿಲು ಪ್ರಕರಣ ನಮಗೆ ಪಾಠವಾಗಲಿ.