Lokesh Kayarga Column: ಎಲ್ಲ ಡಿಗ್ರಿಗಳನ್ನು ಕಂಪ್ಯೂಟರ್ ನುಂಗಿ ಹಾಕಿತೇ ?
ಐ.ಟಿ ಕ್ರಾಂತಿಯ ಬಳಿಕ ಕಂಪ್ಯೂಟರ್ ಶಿಕ್ಷಣವೇ ಪ್ರಮುಖ ಎಂದೆನಿಸಿಕೊಂಡಿತು. ಈಗ ಕಂಪ್ಯೂಟರ್ ಕೋರ್ಸ್ ಎಂದರೆ ಸಾಕಾಗುವುದಿಲ್ಲ. ಅದರಲ್ಲಿ ಯಾವ ವಿಭಾಗ ಎಂದು ಪ್ರತ್ಯೇಕವಾಗಿ ಹೇಳಬೇಕು. ಕರ್ನಾಟಕದ ಬಹುತೇಕ ಎಲ್ಲ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳು ಈಗ ಅಸ್ತಿತ್ವ ಉಳಿಸಿಕೊಂಡಿರು ವುದೇ ಕಂಪ್ಯೂಟರ್ ಕೋರ್ಸ್‌ಗಳ ಕಾರಣಕ್ಕಾಗಿ.
-
ಲೋಕಮತ
ಇತ್ತೀಚೆಗೆ ನಾಡಿನ ಖ್ಯಾತ ವೈದ್ಯರೊಬ್ಬರು ಫೇಸ್ ಬುಕ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ‘ಇನ್ನು ಮುಂದೆ ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಿಮ್ಮ ಮಕ್ಕಳಿಗೆ ಎಂಬಿಬಿಎಸ್ ಓದಿಸ ಬೇಡಿ’ ಎನ್ನುವುದು ಅವರ ಕಳಕಳಿಯಾಗಿತ್ತು. ಅವರ ಪ್ರಕಾರ ಕರ್ನಾಟಕದಲ್ಲಿ ಈಗ ಅಗತ್ಯಕ್ಕಿಂತ ಹೆಚ್ಚು ವೈದ್ಯರಿದ್ದಾರೆ. ಕೊರತೆ ಇರುವುದು ತಜ್ಞರ ವೈದ್ಯರಿಗೆ ಮಾತ್ರ. ಇಂಟರ್ನ್‌ಶಿಪ್ ಸೇರಿ ಐದೂ ವರೆ ವರ್ಷ ಎಂಬಿಬಿಎಸ್ ಓದಿ ಹೊರ ಬರುವ ವಿದ್ಯಾರ್ಥಿಗಳು 20 ಸಾವಿರ ಸಂಬಳಕ್ಕೆ ದುಡಿಯು ತ್ತಿದ್ದಾರೆ.
ಇಲ್ಲಿ ಕೆಲಸ ಮಾಡಿಕೊಂಡೇ ಎಂ.ಡಿ, ಎಂಎಸ್ ಸೀಟು ಸಿಗಬೇಕಾದರೆ ಮತ್ತಷ್ಟು ಓದಬೇಕು. ರಾಷ್ಟ್ರ ಮಟ್ಟದ ಪೈಪೋಟಿಯಲ್ಲಿ ಗೆದ್ದು ಎಂ.ಡಿ ಸಿಕ್ಕಿದರೂ ಸಿಗುವ ಸ್ಟೈಪೆಂಡ್ ಕಡಿಮೆ. ಇವರು ಸ್ವಂತ ಪ್ರಾಕ್ಟಿಸ್ ಶುರು ಮಾಡುವವರೆಗೂ ಅಥವಾ ಉತ್ತಮ ವೇತನದ ಕೆಲಸ ದೊರಕುವವರೆಗೂ ತಂದೆ-ತಾಯಿಗಳ ದುಡ್ಡಿನಲ್ಲಿಯೇ ಬದುಕುವುದು ಅನಿವಾರ‍್ಯ ಎನ್ನುವುದು ಈ ವೈದ್ಯರ ಅನುಭವದ ಮಾತಾಗಿತ್ತು.
ಡಿಗ್ರಿ ಯಾವುದೇ ಇರಲಿ, ಆ ಡಿಗ್ರಿ ನಮಗೆ ಕೈ ತುಂಬಾ ಸಂಬಳ ನೀಡುವ ಕೆಲಸ ಕೊಡಿಸಬೇಕೆನ್ನು ವುದು ಈಗ ವಿದ್ಯಾರ್ಥಿಗಳು ಮತ್ತು ಪಾಲಕರ ಏಕಮೇವ ಮಂತ್ರ. ಆದರೆ ಮಗ/ಮಗಳಿಗೆ ಎಂಬಿಬಿ ಎಸ್ ಸೀಟು ಸಿಕ್ಕಿದರೆ ಸಾಕು, ಲೈಫ್ ಸೆಟ್ಲ್ ಎಂದುಕೊಳ್ಳುತ್ತಿದ್ದವರಿಗೂ ಈಗ ಆತಂಕ ಎದುರಾಗಿದೆ.
ಎಂಬಿಬಿಎಸ್‌ನಿಂದ ಎಂಡಿ ತನಕ ಎಲ್ಲವೂ ಮೆರಿಟ್ ಸೀಟಿನಲ್ಲಿಯೇ ಓದಿದರೂ ಒಬ್ಬ ವಿದ್ಯಾರ್ಥಿ ಪ್ರಸ್ತುತ ತಜ್ಞ ವೈದ್ಯ ಎನಿಸಿಕೊಳ್ಳಬೇಕಾದರೆ ಕನಿಷ್ಠ 20ರಿಂದ 30 ಲಕ್ಷ ರು. ಖರ್ಚು ಮಾಡಬೇಕು. ಇನ್ನು ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಸೀಟು ಪಡೆಯುವುದಾದರೆ ಕೋಟಿಗಳ ಬಾಬ್ತು.
ಇದನ್ನೂ ಓದಿ: Lokesh Kaayarga Column: ಬಿರಿಯಾನಿ ತಿಂದ ನಾಯಿಗಳು ಕಚ್ಚೋದಿಲ್ವೇ ?!
ಹೀಗಿದ್ದರೂ ನಮ್ಮ ಮಧ್ಯಮ ವರ್ಗದ ಜನತೆ ಸಾಲ-ಸೋಲ ಮಾಡಿ ತಮ್ಮ ಮಕ್ಕಳನ್ನು ವೈದ್ಯ ರನ್ನಾಗಿಸಬೇಕೆಂಬ ಹಂಬಲ ಹೊಂದಿದ್ದಾರೆ. ಮುಂದೊಂದು ದಿನ ಈ ‘ಶ್ರಮ ಮತ್ತು ಬಂಡವಾಳ’ಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎನ್ನುವುದು ಅವರ ನಂಬಿಕೆ. ಆದರೆ ಹಿರಿಯ ವೈದ್ಯರ ಮಾತನ್ನು ನಂಬುವು ದಾದರೆ ಭವಿಷ್ಯದಲ್ಲಿ ‘ಹಾದಿಗೊಬ್ಬ, ಬೀದಿಗೊಬ್ಬ’ ವೈದ್ಯರು ಕ್ಲಿನಿಕ್ ತೆರೆಯಲಿದ್ದು, ಸಂಪಾದನೆಯ ಮಾರ್ಗ ಕಠಿಣವಾಗಲಿದೆ.
ರಾಜ್ಯದ ವಿದ್ಯಾರ್ಥಿಗಳಿಗೆ ಸದ್ಯ ಮೆರಿಟ್ ಕೋಟಾದಲ್ಲಿ ಸುಮಾರು 13 ಸಾವಿರ ವೈದ್ಯ ಸೀಟುಗಳು ಲಭ್ಯವಿದೆ. ಜಿಲ್ಲೆಗೊಂದು ಸರಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜು ತೆರೆಯುವ ರಾಜ್ಯ ಸರಕಾರದ ಭರವಸೆ ಸಾಕಾರಗೊಂಡರೆ ಈ ಸೀಟುಗಳ ಪ್ರಮಾಣ 20 ಸಾವಿರ ದಾಟಬಹುದು. ಆದರೆ ಇಲ್ಲಿ ಪಾಸಾ ದವರೆಲ್ಲರೂ ಕರ್ನಾಟಕದಲ್ಲಿಯೇ ಉದ್ಯೋಗ ಕಂಡುಕೊಳ್ಳುತ್ತಾರೆ ಎಂದೇನೂ ಇಲ್ಲ.
ಹಲವರು ಹೆಚ್ಚಿನ ಅವಕಾಶ ಬಯಸಿ ವಿದೇಶಕ್ಕೆ ತೆರಳುತ್ತಾರೆ. ಆದರೂ ರಾಜ್ಯದಲ್ಲಿ ವೈದ್ಯರ ಸಂಖ್ಯೆ ಭರಪೂರವಾಗಿದೆ. ಉದ್ಯೋಗ ಮಾರುಕಟ್ಟೆ ಕುಸಿದಿದೆ ಎನ್ನುವುದಾದರೆ ಉಳಿದ ಕೋರ್ಸ್‌ಗಳ ಪಾಡೇನು ಎಂಬ ಭಯ ಕಾಡುತ್ತಿದೆ. ಬಿಎ, ಬಿಕಾಂ ಮತ್ತು ಬಿಎಸ್ಸಿ ಮುಂತಾದ ಸಾಂಪ್ರದಾಯಿಕ ಕೋರ್ಸ್‌ಗಳ ಗೋಳು ಬೇರೆಯೇ ಇವೆ.
ಈ ಕೋರ್ಸ್‌ಗಳು ಮಾತ್ರವಲ್ಲ ಇವನ್ನು ಕಲಿಸುತ್ತಿರುವ ಕಾಲೇಜುಗಳು ಕೂಡ ಒಂದೊಂದಾಗಿ ಮುಚ್ಚುತ್ತಿವೆ. ಮಂಗಳೂರು ವಿವಿ ಅಧೀನದ 22 ಡಿಗ್ರಿ ಕಾಲೇಜುಗಳನ್ನು ಮುಚ್ಚುವ ನಿರ್ಧಾರ ಪ್ರಕಟವಾಗಿದೆ. ಇನ್ನು ರಾಜ್ಯದ ನಾನಾ ವಿವಿಗಳಲ್ಲಿರುವ ಅನೇಕ ಸ್ನಾತಕ ವಿಭಾಗಗಳನ್ನು ವಿದ್ಯಾರ್ಥಿಗಳಿಲ್ಲ ಎಂಬ ನೆಪದಲ್ಲಿ ಮುಚ್ಚಲಾಗುತ್ತಿದೆ.
ವಾಸ್ತವದಲ್ಲಿ ಇಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ ಅನೇಕ ವರ್ಷಗಳಿಂದ ಕಾಯಂ ಶಿಕ್ಷಕರೂ ಇಲ್ಲ. ವಿವಿಗಳ ಪುರಾಣ ಬಿಟ್ಟು ಸದ್ಯ ವೃತ್ತಿಪರ ಕೋರ್ಸ್ʼಗಳ ಬಗ್ಗೆ ಮಾತ್ರ ಇಲ್ಲಿ ಚರ್ಚಿಸೋಣ. ಎಂಬಿಬಿಎಸ್ ಬಿಟ್ಟರೆ ಅತಿ ಹೆಚ್ಚು ಬೇಡಿಕೆ ಇರುವುದು ಎಂಜಿನಿಯರಿಂಗ್ ಸೀಟುಗಳಿಗೆ. ಆದರೆ ಇತ್ತೀಚೆಗೆ ಎಂಜಿನಿಯರ್‌ಗಳಾದವರು ಅದೊಂದು ಬಿಟ್ಟು ಬೇರೆಲ್ಲವನ್ನೂ ಮಾಡುವಂತಾಗಿದೆ.
ರಾಜ್ಯದಲ್ಲಿ ಪ್ರತೀ ವರ್ಷ ಸುಮಾರು ಎರಡೂವರೆ ಲಕ್ಷ ಮಕ್ಕಳು ಎಂಜಿನಿಯರಿಂಗ್ ಸೀಟು ಬಯಸಿ ಪರೀಕ್ಷೆ ಬರೆಯುತ್ತಾರೆ. ಸರಿ ಸುಮಾರು 1.1 ಲಕ್ಷದಿಂದ 1.40 ಲಕ್ಷದಷ್ಟು ವಿದ್ಯಾರ್ಥಿಗಳು ಇಲ್ಲಿನ ಇಂಜಿನಿಯರಿಂಗ್ ಕಾಲೇಜುಗಳನ್ನು ಸೇರಿಕೊಳ್ಳುತ್ತಾರೆ. ಕೆಲವು ನೂರು ವಿದ್ಯಾರ್ಥಿಗಳು ಐಐಟಿ ಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಲು ಸಫಲರಾಗುತ್ತಾರೆ. ಅಂದರೆ ಒಂದು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ರಾಜ್ಯದ ಯಾವುದೋ ಭಾಗದ ಎಂಜಿನಿಯರಿಂಗ್ ಕಾಲೇಜು ಗಳಲ್ಲಿ ಶಿಕ್ಷಣ ಮುಗಿಸುತ್ತಾರೆ.
ಇವುಗಳಲ್ಲಿ ಯಾವುದೇ ಕಂಪನಿ ಈ ತನಕ ಕ್ಯಾಂಪಸ್ ಸೆಲೆಕ್ಷನ್ʼಗೆಂದು ಕಾಲಿಡದ ಕಾಲೇಜುಗಳೂ ಸೇರಿವೆ. ವರದಿಗಳ ಪ್ರಕಾರ, ಸಾಮಾನ್ಯ ಖಾಸಗಿ ಕಾಲೇಜುಗಳಲ್ಲಿ ಕೇವಲ ಶೇ.20 ರಿಂದ ಶೇ.40 ರಷ್ಟು ವಿದ್ಯಾರ್ಥಿಗಳು ಮಾತ್ರ ಕ್ಯಾಂಪಸ್ ಮೂಲಕ ಉದ್ಯೋಗ ಪಡೆಯುತ್ತಿದ್ದಾರೆ. ಅಂದರೆ ಶೇ.70ರಿಂದ 80ರಷ್ಟು ವಿದ್ಯಾರ್ಥಿಗಳು ಉದ್ಯೋಗಕ್ಕೆ ಅರ್ಜಿ ಗುಜರಾಯಿಸುವುದು ಅನಿವಾರ‍್ಯ.
ಇವರಲ್ಲಿ ಬಹುತೇಕರು ತಾವು ಓದಿದ ಕೋರ್ಸ್‌ಗೆ ಯಾವುದೇ ಸಂಬಂಧವಿರದ ಉದ್ಯೋಗಗಳಲ್ಲಿ ನೆಲೆ ಕಾಣುತ್ತಿದ್ದಾರೆ. ಲಕ್ಷಾಂತರ ರು. ಫೀಜು ಕೊಟ್ಟು ಎಂಜಿನಿಯರಿಂಗ್ ಓದಿದವರು 10-12 ಸಾವಿರ ರು.ಗಳ ಆರಂಭಿಕ ವೇತನಕ್ಕೆ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ.
ಇನ್ಫೋಸಿಸ್‌ನಂತಹ ಪ್ರತಿಷ್ಠಿತ ಐಟಿ ಸಂಸ್ಥೆ ಕೂಡ 20 ವರ್ಷಗಳ ಹಿಂದೆ ನಿಗದಿ ಮಾಡಿದ ಆರಂಭಿಕ ವೇತನವನ್ನು ಈಗಲೂ ಮುಂದುವರಿಸಿಕೊಂಡು ಬಂದಿದೆ ಎಂಬ ದೂರುಗಳಿವೆ. ಇಷ್ಟಾ ದರೂ ನಮ್ಮ ಪಾಲಕರು ಏನು ಟ್ರೆಂಡ್ ಸೃಷ್ಟಿಯಾಗುತ್ತದೋ ಅದನ್ನೇ ಅನುಸರಿಸಲು ಬಯಸು ತ್ತಾರೆ. ಎಂಜಿನಿಯರಿಂಗ್ ಕೋರ್ಸ್ ಆರಂಭವಾದ ಶುರುವಾತಿನಲ್ಲಿ ಎಂಜಿನಿಯರ್ ಅಂದರೆ ವಿಶ್ವೇಶ್ವರಯ್ಯ ಅವರಂತೆ ಸಿವಿಲ್ ಕೆಲಸದಲ್ಲಿ ಪರಿಣತಿ ಪಡೆದವ ಎಂಬ ಅಭಿಪ್ರಾಯವಿತ್ತು.
ನಂತರದ ದಿನಗಳಲ್ಲಿ ಮೆಕ್ಯಾನಿಕಲ್ ಬಲು ಬೇಡಿಕೆಯ ಕೋರ್ಸ್ ಆಗಿತ್ತು. ಐ.ಟಿ ಕ್ರಾಂತಿಯ ಬಳಿಕ ಕಂಪ್ಯೂಟರ್ ಶಿಕ್ಷಣವೇ ಪ್ರಮುಖ ಎಂದೆನಿಸಿಕೊಂಡಿತು. ಈಗ ಕಂಪ್ಯೂಟರ್ ಕೋರ್ಸ್ ಎಂದರೆ ಸಾಕಾಗುವುದಿಲ್ಲ. ಅದರಲ್ಲಿ ಯಾವ ವಿಭಾಗ ಎಂದು ಪ್ರತ್ಯೇಕವಾಗಿ ಹೇಳಬೇಕು. ಕರ್ನಾಟಕದ ಬಹುತೇಕ ಎಲ್ಲ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳು ಈಗ ಅಸ್ತಿತ್ವ ಉಳಿಸಿಕೊಂಡಿರುವುದೇ ಕಂಪ್ಯೂಟರ್ ಕೋರ್ಸ್‌ಗಳ ಕಾರಣಕ್ಕಾಗಿ.
ಆರಂಭದಲ್ಲಿ ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇನ್ಫಾ ರ್ಮೆಶನ್ ಸೈನ್ಸ್ ಎಂಬ ಎರಡು ವಿಭಾಗಗಳು ಇರುತ್ತಿದ್ದವು. ತಲಾ 60 ವಿದ್ಯಾರ್ಥಿಗಳಂತೆ ಎರಡು ಕೋರ್ಸ್‌ಗಳಿಗೆ 120 ವಿದ್ಯಾರ್ಥಿಗಳಿದ್ದರೆ ಹೆಚ್ಚು. ಈಗ ಒಂದೊಂದು ಕಾಲೇಜಿನಲ್ಲೂ ನಾನಾ ಹೆಸರಿನ ಐಟಿ ಕೋರ್ಸ್‌ಗಳಿಗೆ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಕೆಲವು ಸ್ವಾಯತ್ತ ಕಾಲೇಜು ಗಳಿಗೆ ಸಾವಿರಕ್ಕೂ ಮಿಕ್ಕಿದ ಸೀಟುಗಳು ಮಂಜೂರಾಗಿವೆ.
ಇಲ್ಲೂ ಮೆರಿಟ್, ಕಾಮೆಡ್-ಕೆ, ಮ್ಯಾನೇಜ್ʼಮೆಂಟ್ ಎಂಬ ಮೂರು ಸ್ತರದಲ್ಲಿ ಅವರವರ ಶಕ್ತ್ಯಾನು ಸಾರ ಫೀಜು ವಸೂಲಿ ಮಾಡಲಾಗುತ್ತದೆ. ಸ್ವಲ್ಪ ಪ್ರತಿಷ್ಠಿತ ಎನಿಸಿಕೊಂಡ ಕಾಲೇಜಿನಲ್ಲಿ ಮ್ಯಾನೇಜ್ ಮೆಂಟ್ ಸೀಟು 50 ಲಕ್ಷಕ್ಕಿಂತ ಮೇಲಿನ ದರಕ್ಕೆ ಬಿಕರಿಯಾಗುತ್ತದೆ.
ಐಟಿ ಶಿಕ್ಷಣವೊಂದೇ ಉದ್ಯೋಗಕ್ಕೆ ತಾರಕ ಮಂತ್ರ ಎಂದು ಭಾವಿಸಿರುವ ಲಕ್ಷಾಂತರ ವಿದ್ಯಾರ್ಥಿಗಳು ಇತ್ತೀಚಿನ ವರ್ಷಗಳಲ್ಲಿ ಇದೊಂದೇ ಕೋರ್ಸ್‌ಗೆ ಜೋತು ಬೀಳುತ್ತಿದ್ದಾರೆ. ಕಂಪ್ಯೂಟರ್ ಸೈನ್ಸ್ ಸಿಇಟಿ ಮೆರಿಟ್ ಲಿಸ್ಟಿನಲ್ಲಿ ಬಂದ ಬಹುತೇಕ ಎಲ್ಲ ವಿದ್ಯಾರ್ಥಿಗಳ ಮೊದಲ ಆಯ್ಕೆ. ಒಂದು ವೇಳೆ ತಮ್ಮ ಇಷ್ಟದ ಕೋರ್ಸ್ ಸಿಗದೇ ಹೋದರೂ ಇದೇ ವಿಭಾಗದಡಿ ಕನಿಷ್ಠ ಏಳೆಂಟು ಶಾಖೆಗಳು ತೆರದುಕೊಂಡಿವೆ. ಡಾಟಾ ಸೈನ್ಸ್, ಎಐ-ಎಂಎಲ್, ಸೈಬರ್ ಸೆಕ್ಯೂರಿಟಿ, ಕ್ಲೌಡ್ ಕಂಪ್ಯೂಟಿಂಗ್ ಇವೇ ಮೊದಲಾದ ವಿಷಯವಾರು ವಿಭಾಗಗಳಿಗೂ ಬಲು ಬೇಡಿಕೆ ಇದೆ.
ಕೃತಕ ಬುದ್ಧಿ ಮತ್ತೆ ತಂತ್ರಜ್ಞಾನದ ಕಾರಣಕ್ಕೆ ಐಟಿ ಕ್ಷೇತ್ರ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಕುತ್ತು ಬರಬಹುದೆಂದು ತಜ್ಞರು ಎಚ್ಚರಿಸುತ್ತಿದ್ದರೂ ಎಲ್ಲರೂ ಸದ್ಯದ ‘ಟ್ರೆಂಡ್’ ಅನುಸರಿಸಿ ಹೋಗುತ್ತಿದ್ದಾರೆ. ಈ ಕಾಲೇಜುಗಳ ಹೊರತಾಗಿ ಕಂಪ್ಯೂಟರ್ ಶಿಕ್ಷಣದ ಹೆಸರಿನಲ್ಲಿ ಆಫ್ ಲೈನ್ ಮತ್ತು ಆನ್ಲೈನ್‌ನಲ್ಲಿ ನೂರಾರು ಕೋರ್ಸ್‌ಗಳಿವೆ. ಕಂಪ್ಯೂಟರ್ ಶಿಕ್ಷಣದ ಅಬ್ಬರದಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಹೊರತುಪಡಿಸಿ ಉಳಿದ ಎಂಜಿನಿಯರಿಂಗ್ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ನೀರಸ ಎನಿಸತೊಡಗಿವೆ.
ಸಿವಿಲ್, ಮೆಕಾನಿಕಲ್, ಎಲೆಕ್ಟ್ರಿಕಲ್ ಮುಂತಾದ ಕೋರ್ ಎಂಜಿನಿಯರಿಂಗ್ ವಿಭಾಗಗಳು ವಿದ್ಯಾರ್ಥಿ ಗಳಿಲ್ಲದೆ ಬಿಕೋ ಎನ್ನತೊಡಗಿವೆ. ಪ್ರತಿಭಾವಂತ ವಿದ್ಯಾರ್ಥಿ ತಾನು ಇಷ್ಟಪಟ್ಟು ಈ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡರೂ ಕಡಿಮೆ ಅಂಕ ಪಡೆದ ಕಾರಣಕ್ಕೆ ಈ ಕೋರ್ಸ್ ಸೇರಿದ್ದಾನೆ ಎಂಬ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗಿದೆ.
ಕೇವಲ ಎರಡು ದಶಕಗಳ ಹಿಂದೆ ನಮ್ಮ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಶಿಕ್ಷಣದಲ್ಲಿ ಆಯ್ಕೆಗೆ ಎಷ್ಟೊಂದು ಅವಕಾಶಗಳಿದ್ದವು. ಸಿವಿಲ್, ಮೆಕಾನಿಕಲ್, ಇಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಅಲ್ಲದೆ ಆರ್ಕಿಟೆಕ್ಚರ್, ಪಾಲಿಮರ್ ಸೈನ್ಸ್, ಟೆಕ್ಸ್‌ಟೈಲ್, ಏರೋಸ್ಪೇಸ್ ಮತ್ತು ಏರೋನಾಟಿಕಲ್, ಮೆಕಾಟ್ರಾನಿಕ್ಸ್, ಕೆಮಿಕಲ್ ಎಂಜಿನಿಯರಿಂಗ್, ಮೈನಿಂಗ್ ಎಂಜಿನಿಯರಿಂಗ್, ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್, ಅಗ್ರಿಕಲ್ಚುರಲ್ ಎಂಜಿನಿಯರಿಂಗ್..ಹೀಗೆ ತರಹೇವಾರಿ ಕೋರ್ಸ್‌ಗಳಿದ್ದವು.
ಇಂದು ವಿದ್ಯಾರ್ಥಿಗಳಿಂದ ಬೇಡಿಕೆ ಇಲ್ಲ ಎಂಬ ಕಾರಣಕ್ಕೆ ಬಹುತೇಕ ಕಾಲೇಜುಗಳು ಈ ಕೋರ್ಸ್ ಗಳನ್ನು ಸ್ಥಗಿತಗೊಳಿಸಿವೆ. ಹೆಚ್ಚಿನ ಕಾಲೇಜುಗಳು ಕಂಪ್ಯೂಟರ್ ಶಿಕ್ಷಣಕ್ಕೆ ಬಡ್ತಿ ಪಡೆದು ಪ್ರವಾಹದ ಮುಖ್ಯ ವಾಹಿನಿಯಲ್ಲಿ ಬೆರೆತಿವೆ. ಆದರೆ ಅಪ್‌ಗ್ರೇಡ್ ಸಾಧ್ಯವಾಗದೆ ಹಳೆಯ ಕೋರ್ಸ್ ಗಳನ್ನೇ ನೆಚ್ಚಿಕೊಂಡ 10 ರಿಂದ 15 ಎಂಜಿನಿಯರಿಂಗ್ ಕಾಲೇಜುಗಳು ಕಳೆದ ಎರಡು ವರ್ಷಗಳಲ್ಲಿ ಮುಚ್ಚಿವೆ. ಕೆಲವು ಎಐಸಿಟಿಇನಿಂದ ಮುಚ್ಚುವ ಅನುಮತಿ ಪಡೆದಿವೆ.
ಸದ್ಯ ಕಂಪ್ಯೂಟರ್ ಶಿಕ್ಷಣವೊಂದನ್ನೇ ನೆಚ್ಚಿಕೊಂಡು ಇಡೀ ರಾಜ್ಯದ ಎಂಜಿನಿಯರಿಂಗ್ ಶಿಕ್ಷಣ ಸಾಗುತ್ತಿದೆ. ಸಿವಿಲ್, ಮೆಕಾನಿಕಲ್ ಮುಂತಾದ ಎಲ್ಲ ಕಾಲಕ್ಕೂ ಬೇಕಾದ ಕೋರ್ಸ್‌ಗಳನ್ನು ನಮ್ಮ ಪ್ರತಿಭಾವಂತ ಪೀಳಿಗೆ ಆಯ್ಕೆ ಮಾಡಿಕೊಳ್ಳದೇ ಹೋದರೆ ಇವುಗಳಲ್ಲಿ ಹೊಸತನ, ನಾವೀನ್ಯತೆ ಬರುವುದಾದರೂ ಹೇಗೆ ಎಂಬ ಪ್ರಶ್ನೆಗೆ ಉತ್ತರವಿಲ್ಲ.
ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕಂಪ್ಯೂಟರ್ ವಿದ್ಯಾರ್ಥಿಗಳಿರುವ ಕಾರಣಕ್ಕೆ ಹೊಸದಾಗಿ ಯಾವು ದೇ ಕಾಲೇಜುಗಳಲ್ಲಿ ಕಂಪ್ಯೂಟರ್ ಕೋರ್ಸ್ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವರು ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಭರವಸೆ ನೀಡಿದ್ದಾರೆ.
ಆದರೆ ಅನುಮತಿ ಪಡೆಯುವ ವಿಧಾನವನ್ನು ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಹೇಳಿ ಕೊಡಬೇಕಾಗಿಲ್ಲ. ಎಐ ಆಧಾರಿತ ತಂತ್ರಜ್ಞಾನ ಬಂದ ಬಳಿಕ ಉದ್ಯೋಗ ಮಾರುಕಟ್ಟೆ ನೀರ ಮೇಲಣ ಗುಳ್ಳೆ ಎಂದು ತಜ್ಞರು ಎಚ್ಚರಿಸುತ್ತಿದ್ದರೂ ಕಂಪ್ಯೂಟರ್ ಮೋಹ ಕಡಿಮೆಯಾಗಿಲ್ಲ. ಆದರೆ ಭವಿಷ್ಯದ ಸವಾಲು ಗಳಿಗೆ ಇದೊಂದೇ ಸಾಕೇ, ಸಂಶೋಧನೆ, ತಂತ್ರಜ್ಞಾನ ಆಧರಿತ ಮೂಲ ಶಿಕ್ಷಣಕ್ಕೆ ಆದ್ಯತೆ ನೀಡದೇ ಹೋದರೆ ನಾವು ಅನ್ಯರ ‘ಸೇವೆ’ ಮಾಡುತ್ತಲೇ ಜೀವನ ಸವೆಸಬೇಕೇ ಎಂಬ ಪ್ರಶ್ನೆಗೆ ಈಗಲೇ ಉತ್ತರ ಕಂಡುಕೊಳ್ಳಬೇಕಾಗಿದೆ.