ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lokesh Kayarga Column: ಕೆಪಿಎಸ್‌ʼಸಿಗೂ ಜಿರಳೆ ನುಗ್ಗಬೇಕಿತ್ತು...!

ಒಂದು ವೇದಿಕೆ ಬೇಕಿತ್ತು. ಅದು ಸಿಕ್ಕಾಕ್ಷಣ ಅವರು ಎದ್ದು ನಿಂತ ಪರಿ ಮಾತ್ರ ಬೆರಗು ಮೂಡಿಸು ವಂಥದ್ದು. ಕೇಂದ್ರ ಸರಕಾರವಾಗಲಿ, ನಮ್ಮ ಗುಪ್ತಚರ ಸಂಸ್ಥೆಗಳಾಗಲಿ, ಪೊಲೀಸ್ ಇಲಾಖೆ ಯಾಗಲಿ ಈ ಮಟ್ಟದ ಪ್ರತಿಭಟನೆ ನಡೆಯುತ್ತದೆ ಎಂದು ನಿರೀಕ್ಷಿಸಿಯೇ ಇರಲಿಲ್ಲ. ಸಿಜೆಐ ಹೇಳಿಕೆ ಖಂಡಿಸಿ ವಿದೇಶ ದಲ್ಲಿ ಓದುತ್ತಿದ್ದ ಅಭಿಜಿತ್ ದಿಪ್ಕೆ ಎಂಬ ಒಬ್ಬ ವಿದ್ಯಾರ್ಥಿ ಹಾಕಿದ ವ್ಯಂಗ್ಯಭರಿತ ಪೋಸ್ಟ್ ದಿನ ಬೆಳಗಾಗುವದರೊಳಗೆ ಸಂಚಲನ ಸೃಷ್ಟಿಸಿತ್ತು.

Lokesh Kayarga Column: ಕೆಪಿಎಸ್‌ʼಸಿಗೂ ಜಿರಳೆ ನುಗ್ಗಬೇಕಿತ್ತು...!

-

ಲೋಕಮತ

ಎರಡೂವರೆ ದಶಕಗಳ ಹಿಂದೆ ಈ ಮಟ್ಟದ ಸಾಮಾಜಿಕ ಜಾಲತಾಣದ ಬಲ ನಮ್ಮ ಬೆಂಗಾವಲಿಗಿರ ಲಿಲ್ಲ ಎನ್ನುವುದು ನಿಜ. ಯಾವುದೇ ಘಟನೆಯಾದರೂ ಒಂದಷ್ಟು ಪತ್ರಿಕೆಗಳಲ್ಲಿ, ಆಗಷ್ಟೇ ಕಣ್ಣು ಬಿಡುತ್ತಿದ್ದ ಟಿವಿ ಮಾಧ್ಯಮಗಳಲ್ಲಿ ಬರಬೇಕಿತ್ತು. ಆದರೆ ತಮ್ಮನ್ನು ಜಿರಳೆ ಎಂದು ಕರೆದ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯೊಬ್ಬರ ಹೇಳಿಕೆಯನ್ನೇ ನೆಪ ಮಾಡಿಕೊಂಡು ರಾತ್ರೋರಾತ್ರಿ ಎದ್ದು ಕುಳಿತ ಜೆನ್‌ಜಿ ವರ್ಗದ ಧೈರ್ಯ ನಮಗೆ ಅಂದು ಇರಲಿಲ್ಲ.

ಈಗಲೂ ಇಲ್ಲ ಎನ್ನುವುದು ನಿಜವೇ. ಹಾಗೆ ನೋಡಿದರೆ ಕರ್ನಾಟಕ ಲೋಕಸೇವಾ ಆಯೋಗದ ಸಾಲು, ಸಾಲು ಹಗರಣಗಳ ಮುಂದೆ ಈ ನೀಟ್ ಹಗರಣ ಏನೇನೂ ಅಲ್ಲ. ಇಷ್ಟು ವರ್ಷಗಳಲ್ಲಿ ಒಬ್ಬರಿಗಾದರೂ ನಮಗೆ ಶಿಕ್ಷೆ ಕೊಡಿಸಲು ಸಾಧ್ಯವಾಗಿದೆಯೇ?, ಅನ್ಯಾಯಕ್ಕೊಳಗಾದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ದೊರೆತಿದೆಯೇ ಎಂದರೆ ಇಲ್ಲ ಎನ್ನುವುದೊಂದೇ ಉತ್ತರ. ನಮ್ಮ ಕಣ್ಮುಂದೆಯೇ ಮೊದಲ ಬಾರಿ ಕಣ್ಣು ಬಿಟ್ಟ ಈ ಜೆನ್‌ಜಿಗಳಿಗೆ ನ್ಯಾಯಮೂರ್ತಿಯೊಬ್ಬರ ಹೇಳಿಕೆ ಒಂದು ನೆಪ ಮಾತ್ರ. ಅವರ ಆಕ್ರೋಶವನ್ನು ಹೊರ ಹಾಕಲು ಒಂದು ಧ್ವನಿ ಬೇಕಿತ್ತು.

ಒಂದು ವೇದಿಕೆ ಬೇಕಿತ್ತು. ಅದು ಸಿಕ್ಕಾಕ್ಷಣ ಅವರು ಎದ್ದು ನಿಂತ ಪರಿ ಮಾತ್ರ ಬೆರಗು ಮೂಡಿಸು ವಂಥದ್ದು. ಕೇಂದ್ರ ಸರಕಾರವಾಗಲಿ, ನಮ್ಮ ಗುಪ್ತಚರ ಸಂಸ್ಥೆಗಳಾಗಲಿ, ಪೊಲೀಸ್ ಇಲಾಖೆ ಯಾಗಲಿ ಈ ಮಟ್ಟದ ಪ್ರತಿಭಟನೆ ನಡೆಯುತ್ತದೆ ಎಂದು ನಿರೀಕ್ಷಿಸಿಯೇ ಇರಲಿಲ್ಲ. ಸಿಜೆಐ ಹೇಳಿಕೆ ಖಂಡಿಸಿ ವಿದೇಶದಲ್ಲಿ ಓದುತ್ತಿದ್ದ ಅಭಿಜಿತ್ ದಿಪ್ಕೆ ಎಂಬ ಒಬ್ಬ ವಿದ್ಯಾರ್ಥಿ ಹಾಕಿದ ವ್ಯಂಗ್ಯಭರಿತ ಪೋಸ್ಟ್ ದಿನ ಬೆಳಗಾಗುವದರೊಳಗೆ ಸಂಚಲನ ಸೃಷ್ಟಿಸಿತ್ತು.

ಇದನ್ನೂ ಓದಿ: Lokesh Kayarga Column: ಅಂದು-ಇಂದು, ಎಂದೆಂದೂ ‘ಲೋಪ’ವೇ ಸೇವೆ !

‘ಕಾಕ್ರೋಚ್ ಜನತಾ ಪಾರ್ಟಿ’ ಹೆಸರಿನ ಆನ್‌ಲೈನ್ ಅಭಿಯಾನಕ್ಕೆ ವಾರದೊಳಗಾಗಿ ಲಕ್ಷಗಟ್ಟಲೆ -ಫಾಲೋವರ್ಸ್ ಸೇರಿಕೊಂಡಿದ್ದರು. ಸಿಜೆಪಿ ಅಭಿಯಾನಕ್ಕೆ ಪೂರ್ವ ಸಿದ್ಧತೆ ಇತ್ತು. ಇಂಥದ್ದೊಂದು ಅವಕಾಶಕ್ಕೆ ಅವರು ಕಾಯುತ್ತಿದ್ದರು ಎಂದು ಮೋದಿ ಕಟ್ಟಾ ಅಭಿಮಾನಿಗಳು, ಬಿಜೆಪಿ ನಾಯಕರು ಹೇಳಬಹುದು. ಆದರೆ ಚುನಾವಣೆಗಾಗಿ ಕೋಟಿಗಟ್ಟಲೆ ಖರ್ಚು ಮಾಡುವ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳಿಗೆ ಸಿಜೆಪಿ ಹೆಸರಿನಲ್ಲಿ ಹುಟ್ಟಿಕೊಂಡ ಮೀಮ್ಸ್‌ಗಳನ್ನು, ಅತ್ಯಂತ ಮೊನಚಿನ, ವ್ಯಂಗ್ಯೋಕ್ತಿಯ ರ್ಯಾಪ್ ಹಾಡುಗಳನ್ನು ಸೃಷ್ಟಿಸಲು ಈಗಲೂ ಸಾಧ್ಯವಿಲ್ಲ.

ಏಕೆಂದರೆ ಈ ಹಾಡುಗಳು ಜಿನ್‌ಜಿ ಹೃದಯಗಳಿಂದ ನೇರವಾಗಿ ಹುಟ್ಟಿಕೊಂಡ ಭಾವನೆಗಳು. ನಮ್ಮ ವ್ಯವಸ್ಥೆ ವಿರುದ್ಧ ಅವರು ಎಷ್ಟರ ಮಟ್ಟಿಗೆ ಆಕ್ರೋಶಗೊಂಡಿದ್ದರು ಎನ್ನುವುದರ ನೇರ ಸಾಕ್ಷಿ. ಜಂತರ್ ಮಂತರ್‌ನಲ್ಲಿ ನಡೆದ ಹೋರಾಟದಲ್ಲಿ ದೇಶದ್ರೋಹಿ ಶಕ್ತಿಗಳು, ಕ್ರಿಮಿನಲ್ ಹಿನ್ನೆಲೆಯವರು ಭಾಗಿಯಾಗಿದ್ದರೆಂದು ದೆಹಲಿ ಪೊಲೀಸರ ವಾದ. ಆದರೆ ಲಕ್ಷಾಂತರ ಮಂದಿ ಭಾಗವಹಿಸಿದ ಈ ರೀತಿಯ ಸಾಮೂಹಿಕ ಹೋರಾಟದಲ್ಲಿ ಸೇರಿಕೊಂಡು ಸಮಾಜ ಘಾತುಕ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುವುದು ಹೊಸದೇನೂ ಅಲ್ಲ.

ಅಲ್ಲಿ ಭಾಗವಹಿಸಿದ್ದ ಅನೇಕರಿಗೆ ದೇಶದ ಪರಂಪರೆ, ಸಂಸ್ಕೃತಿ, ಇತಿಹಾಸ ಮತ್ತು ಕಾನೂನುಬದ್ಧ ಹೋರಾಟ ಹೇಗಿರಬೇಕೆಂಬ ಅರಿವು ಇರಲಿಲ್ಲ ಎನ್ನುವುದೂ ನಿಜವಿರಬಹುದು. ಆದರೆ ಅಲ್ಲಿ ದುಡ್ಡಿನಾಸೆಗೆ, ಗ್ಯಾರಂಟಿಗಳ ಆಮಿಷಕ್ಕೆ ಒಳಗಾಗಿ ಬಂದವರು ಇರಲಿಲ್ಲ. ಸರಕಾರ ವ್ಯವಸ್ಥೆಯಲ್ಲಿ ತಮ್ಮ ಪೀಳಿಗೆಗೆ, ಸಹಪಾಠಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ನೋವು ಅವರೆಲ್ಲರನ್ನೂ ಒಂದು ಗೂಡಿಸಿತ್ತು.

Screenshot_6 ಒಕ

18 ರಿಂದ 25ರ ಆಸುಪಾಸಿನ ಈ ವಿದ್ಯಾರ್ಥಿಗಳು ನೀಟ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದಂತೆ ಕಳೆದ ಎರಡೂವರೆ ದಶಕಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಹೆಸರಿನಲ್ಲಿ ನಡೆದ ಭ್ರಷ್ಟಾಚಾರ, ಅನ್ಯಾಯ, ಅಕ್ರಮಗಳನ್ನು ಖಂಡಿಸಿ ಕರ್ನಾಟಕದಲ್ಲಿ ಒಂದಾದರೂ ವ್ಯಾಪಕ ಪ್ರತಿಭಟನೆ ನಡೆದಿದ್ದರೆ, ಕೆಪಿಎಸ್‌ಸಿ ಕರ್ಮಕಾಂಡ ನಿರಂತರವಾಗಿ ಮುಂದುವರಿದುಕೊಂಡು ಬರಲು ಸಾಧ್ಯವಿತ್ತೇ? ಎಂದು ಈಗ ಯೋಚನೆಯಾಗುತ್ತಿದೆ.

ಅನ್ಯಾಯಕ್ಕೊಳಗಾದ ಉದ್ಯೋಗಾಕಾಂಕ್ಷಿಗಳು ಕಾನೂನು ಹೋರಾಟವನ್ನೇ ನೆಚ್ಚಿಕೊಳ್ಳುವ ಬದಲು, ಬೀದಿಗಿಳಿದು ಹೋರಾಟ ಮಾಡಿದ್ದರೆ, ಸರಕಾರ ಮತ್ತು ಆಯೋಗದಲ್ಲಿದ್ದ ಭ್ರಷ್ಟರಿಗೆ ಸ್ವಲ್ಪಮಟ್ಟಿಗಾದರೂ ನಡುಕ ಹುಟ್ಟಿಸಿದ್ದರೆ, ಅನ್ಯಾಯದ ಪರಂಪರೆ ಈಗಲೂ ಮುಂದುವರಿಯು ತ್ತಿರಲಿಲ್ಲ.

ನೀಟ್ ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದ ಜೆನ್ ಜಿ ವರ್ಗವೂ ಆಯೋಗವು ನಡೆಸುವ ವಿವಿಧ ಪರೀಕ್ಷೆಗಳಲ್ಲಿ ಈಗ ಭಾಗಿಯಾಗು ತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಈ ಪೀಳಿಗೆ ತಮ್ಮ ಸಂತೋಷ ಮತ್ತು ಆಕ್ರೋಶ ವನ್ನು ಅದುಮಿಟ್ಟುಕೊಳ್ಳುವವರಲ್ಲ. ಇಂತಹ ದಿನಗಳಲ್ಲೂ 2 ಲಕ್ಷಕ್ಕೂ ಅಧಿಕ ಮಾಸಿಕ ಸಂಬಳ ಪಡೆಯುವ ಕೆಪಿಎಸ್‌ಸಿ ಅಧ್ಯಕ್ಷರೊಬ್ಬರು ತಮ್ಮ ವಾರ್ಷಿಕ ಆದಾಯ ಕೇವಲ 40 ಸಾವಿರ ಎಂದು ಹೇಳಿ 3ಬಿ ಮೀಸಲಿನಡಿ ಇಬ್ಬರು ಪುತ್ರಿಯರಿಗೆ ಹುದ್ದೆ ಕೊಡಿಸಲು ಮುಂದಾಗುತ್ತಿದ್ದಾರೆ.

ಕೆಪಿಎಸ್‌ಸಿ ಹೆಸರಿನಲ್ಲಿ ಮಧ್ಯವರ್ತಿಗಳು ನೇರವಾಗಿ ಕರೆ ಮಾಡಿ ಇಂತಿಷ್ಟು ಕೊಟ್ಟರೆ ಹುದ್ದೆ ಗ್ಯಾರಂಟಿ ಎನ್ನುತ್ತಿದ್ದಾರೆ ಎಂದರೆ ಇವರಿಗೆ ಇದೇ ಆಯೋಗದ ಮೂಲಕ ಸೃಷ್ಟಿಯಾದ ಭ್ರಷ್ಟ ವ್ಯವಸ್ಥೆಯ ಬೆಂಬಲವಿದೆ ಎಂದರ್ಥ. ಕೆಪಿಎಸ್‌ಸಿ ಉದ್ಯೋಗಾಕಾಂಕ್ಷಿಗಳಂತೆ ನೀಟ್ ಆಕಾಂಕ್ಷಿಗಳು ಕಾನೂನು ಹೋರಾಟಕ್ಕಿಳಿದಿದ್ದರೆ, ಹೆಚ್ಚೆಂದರೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಿಗಳ ಬಂಧನ ವಾಗುತ್ತಿತ್ತು. ಕೋರ್ಟಿನಲ್ಲಿ ಜಾಮೀನು ಪಡೆದು ಇವರು ತಮ್ಮ ದಂಧೆ ಮುಂದುವರಿಸುತ್ತಿದ್ದರು. ಆದರೆ ಲಕ್ಷಾಂತರ ವಿದ್ಯಾರ್ಥಿಗಳ ಒಕ್ಕೊರಲ ಆಕ್ರೋಶದ ಹೆದರಿದ ಸರಕಾರ ಮರುಪರೀಕ್ಷೆಗೆ ಆದೇಶ ನೀಡಿತು.

ಖುದ್ದು ಪ್ರಧಾನಿಯೇ ಉಸ್ತುವಾರಿ ವಹಿಸಿಕೊಂಡು ಸೇನಾ ಹೆಲಿಕಾಪ್ಟರ್ ಮೂಲಕ ಪ್ರಶ್ನೆಪತ್ರಿಕೆ ಗಳನ್ನು ಸಾಗಾಟ ಮಾಡುವಂತಾಯಿತು. ಜಂತರ್ ಮಂತರ್‌ನ ಹೋರಾಟಕ್ಕೆ ಮಣಿದು ಎನ್‌ಟಿಎನ 40ಕ್ಕೂ ಹೆಚ್ಚು ಅಽಕಾರಿಗಳ ತಲೆದಂಡದ ಜತೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವಂತಾಯಿತು. ಸಾಂವಿಧಾನಿಕ ಸಂಸ್ಥೆಯಾದ ಕೆಪಿಎಸ್‌ಸಿಯನ್ನು ಭ್ರಷ್ಟ ವ್ಯವಸ್ಥೆಯ ಕಪಿಮುಷ್ಟಿಯಿಂದ ಬಿಡಿಸಿ ಸುಧಾರಣೆ ತರಲು ಇಂತಹ ಸಾಮೂಹಿಕ ಹೋರಾಟವೊಂದು ಅಗತ್ಯವಿತ್ತು. ಆದರೆ ಸರಕಾರಿ ಹುದ್ದೆಗಳನ್ನು ಪಡೆಯಲು ಹೊರಟವರು ಬೀದಿಗಿಳಿದು ಹೋರಾಡುವ ಮನಸ್ಥತಿ ಹೊಂದಿರುವುದಿಲ್ಲ. ಬೀದಿ ಹೋರಾಟದಲ್ಲಿ ಸಿಕ್ಕಿ ಹಾಕಿಕೊಂಡು ಪೊಲೀಸ್ ಕೇಸು ಜಡಿದರೆ ಮುಂದೊಂದು ದಿನ ತಮ್ಮ ಹುದ್ದೆಯ ಕನಸು ಕೈ ಬಿಡಬೇಕಾಗುತ್ತದೆ ಎಂಬ ಭಯ ಎಲ್ಲ ಆಕಾಂಕ್ಷಿಗಳಲ್ಲಿ ಇದ್ದೇ ಇರುತ್ತದೆ.

ಹೀಗಾಗಿ ಕೆಪಿಎಸ್‌ಸಿ ಅಕ್ರಮಗಳ ಬಗ್ಗೆ ಆಕ್ರೋಶದ ಮೂಟೆಯನ್ನೇ ಹೊತ್ತುಕೊಂಡು ಅಭ್ಯರ್ಥಿಗಳು ಮತ್ತೆ, ಮತ್ತೆ ಪರೀಕ್ಷೆ ಬರೆಯುತ್ತಲೇ ಇದ್ದಾರೆ. ‘ಕೆಪಿಎಸ್‌ಸಿಯ ಭಾನಗಡಿಗೆ ಕೊನೆ ಇಲ್ಲವೇ’ ಎಂದು ಹೈಕೋರ್ಟ್ ನ್ಯಾಯಾಧೀಶರೇ ಪ್ರಶ್ನಿಸಬೇಕಾದರೆ, ಆಯೋಗದ ಭ್ರಷ್ಟಾಚಾರದ ಇತಿಹಾಸ ಹೇಗಿರಬೇಕು ನೀವೇ ಯೋಚಿಸಿ ? ಇಲ್ಲಿ ಒಂದೊಂದು ಪರೀಕ್ಷೆಯಲ್ಲೂ ಅನ್ಯಾಯವಾಗಿದ್ದು ಒಬ್ಬರು, ಇಬ್ಬರಿಗಲ್ಲ.

ಸಾವಿರಾರು ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ. ಪ್ರಶ್ನೆ ಪತ್ರಿಕೆ ಸೋರಿಕೆ, ಉತ್ತರ ಪತ್ರಿಕೆ ತಿದ್ದುವಿಕೆ, ಹೆಚ್ಚುವರಿ ಅಂಕ ಸೇರ್ಪಡೆ, 200 ಅಂಕಗಳ ವ್ಯಕ್ತಿತ್ವ ಪರೀಕ್ಷೆಗಳಲ್ಲಿ ತಮಗೆ ಬೇಕಾದವ ರಿಗೆ ಭರ್ಜರಿ ಅಂಕ ಪ್ರದಾನ, ತಮಗೆ ಬೇಕಾದವರನ್ನು ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆ ಮಾಡಲು ಮೀಸಲು ಪಟ್ಟಿಯಲ್ಲಿ ಏರುಪೇರು, ಪ್ರತಿಭಾವಂತ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಮುನ್ನವೇ ‘ಜಾತಿ, ಆದಾಯ ಪ್ರಮಾಣ ಪತ್ರ’ ಕೈ ಬಿಟ್ಟು ಜನರಲ್ ಕೆಟಗರಿಯಡಿ ಸಂದರ್ಶನ ಎದುರಿಸಲು ಪರೋಕ್ಷ ನಿರ್ದೇಶನ.. ಇತ್ಯಾದಿ ಒಂದೆರಡಲ್ಲ ನೂರಾರು ಅಕ್ರಮಗಳು ಇಲ್ಲಿ ನಡೆದಿವೆ. 1999 ಮತ್ತು 2004ರ ಗಜೆಟೆಡ್ ಹುದ್ದೆಗಳ ಪರೀಕ್ಷೆಯನ್ನೇ ತೆಗೆದುಕೊಳ್ಳಿ. ಈ ಪರೀಕ್ಷೆಯ ಆಯ್ಕೆ ಪಟ್ಟಿ ಒಂದಲ್ಲ ಆರು ಬಾರಿ ಬದಲಾಗಿದೆ.

ಆಯ್ಕೆಯಾದವರಲ್ಲಿ ಅನೇಕರು ಐಎಎಸ್ ಅಧಿಕಾರಿಗಳಾಗಿದ್ದು ಸೆಕ್ರೆಟರಿ ಗ್ರೇಡ್ ಹುದ್ದೆಗಳಲ್ಲಿದ್ದಾರೆ. ಕೆಲವು ನಿವೃತ್ತರಾಗಿದ್ದಾರೆ. ಆದರೆ ಇವರ ಆಯ್ಕೆಯನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಈಗಲೂ ನ್ಯಾಯಾಲಯ ದಲ್ಲಿದೆ. ಸಿಐಡಿ ವರದಿ, ಕೆಎಟಿ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನೀಡಿದ ಹಲವು ತೀರ್ಪುಗಳಲ್ಲಿ 1998 ಮತ್ತು 2004ರ ಪತ್ರಾಂಕಿತ ಹುದ್ದೆಗಳ ನೇಮಕದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಈ ತೀರ್ಪುಗಳು ಅನ್ಯಾಯ ಕ್ಕೊಳಗಾದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಲಿಲ್ಲ ಎನ್ನುವುದೂ ಅಷ್ಟೇ ಸತ್ಯ.

ತಮ್ಮ ಪರ ಕೋರ್ಟ್ ತೀರ್ಪು ಬಂದ ಬಳಿಕವೂ ಅನೇಕರಿಗೆ ಕಾರ್ಯಾಂಗದ ಭಾಗವಾಗಲು ಸಾಧ್ಯ ವಾಗಲಿಲ್ಲ. 1998ರಲ್ಲಿ ಅಧಿಸೂಚನೆ ಹೊರಡಿಸಲಾದ 383 ಗಜೆಟೆಡ್ ಪ್ರೊಬೆಷನರ್‌ಗಳ ಪರೀಕ್ಷೆ ನಡೆದು ಆಯ್ಕೆ ಪಟ್ಟಿ ಪಟ್ಟಿ ಪ್ರಕಟವಾಗಿದ್ದು ಮೂರು ವರ್ಷಗಳ ಬಳಿಕ. ಆದರೆ ಒಂದೇ ಕುಟುಂಬದ ನಾಲ್ವರ ಹೆಸರು ರ್ಯಾಂಕ್‌ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಗದ್ದಲ ಆರಂಭವಾಯಿತು.

ಮರುಮೌಲ್ಯ ಮಾಪನಕ್ಕೆ ಕೋರ್ಟ್ ಆದೇಶ ನೀಡಿದ್ದೇ ಆಯೋಗಕ್ಕೆ ಮತ್ತಷ್ಟು ಅಕ್ರಮಗಳನ್ನು ಎಸಗಲು ಅವಕಾಶ ಕೊಟ್ಟಂತಾಯಿತು. ಈ ಹಂತದಲ್ಲಿ ಮೊದಲ ಪಟ್ಟಿಯಲ್ಲಿ ಹುದ್ದೆಗೆ ಆಯ್ಕೆಯಾಗಿದ್ದ 200ಕ್ಕೂ ಹೆಚ್ಚು ಅಭ್ಯರ್ಥಿಗಳ ಮಂದಿಯ ಹೆಸರನ್ನು ಕೈ ಬಿಟ್ಟು ಹೊಸ ಪಟ್ಟಿ ಪ್ರಕಟಿಸಲಾಯಿತು.

ಮಾಡರೇಶನ್ ಸೂತ್ರದ ಹೆಸರಿನಲ್ಲಿ ನಡೆದ ಮರುಮೌಲ್ಯಮಾಪನವು ಕೋರ್ಟ್ ತೀರ್ಪನ್ನು ಅಣಕಿಸು ವಂತಿತ್ತು. ಈ ಮೌಲ್ಯಮಾಪನದಲ್ಲಿ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಕನ್ನಡ ಪರೀಕ್ಷೆಯಲ್ಲಿ ಸೊನ್ನೆ ಅಂಕ ಪಡೆದಿದ್ದರು. ಲಿಖಿತ ಪರೀಕ್ಷೆಗಳಲ್ಲಿ ಕಡಿಮೆ ಅಂಕ ಪಡೆದರೂ ವ್ಯಕ್ತಿತ್ವ ಪರೀಕ್ಷೆಗಳಲ್ಲಿ ಆಯ್ದ ಕೆಲವರು 150ರ ಮೇಲಿನ ಅಂಕ ಪಡೆದಿದ್ದರು. ಇನ್ನು ಕೆಲವು ನತದೃಷ್ಟರು ಲಿಖಿತ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆದರೂ ಸಂದರ್ಶನದಲ್ಲಿ 50ರೊಳಗಿನ ಅಂಕ ಪಡೆದು ಕೆಲವೇ ಅಂಕಗಳ ಅಂತರದಲ್ಲಿ ಹುದ್ದೆಗಳಿಂದ ವಂಚಿತರಾಗಿದ್ದರು.

ಅನ್ಯಾಯವನ್ನು ಪ್ರಶ್ನಿಸಿ ಕೆಲವರು ಕೆಎಟಿಗೆ ಹೋಗಿದ್ದರು. ಆದರೆ ಕೆಎಟಿ ದಶಕಗಳ ನಂತರವೂ ಪೂರ್ಣವಾಗಲಿಲ್ಲ. ಸುಪ್ರೀಂಕೋರ್ಟ್ ಸೂಚನೆಯಂತೆ ಕೆಲವರಿಗೆ ಹಿಂಬಡ್ತಿ ನೀಡಬೇಕಿತ್ತು. ಆದರೆ ಹಿಂಬಡ್ತಿ ಆದೇಶ ಪ್ರಶ್ನಿಸಿ ಈ ಅಧಿಕಾರಿಗಳು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಈ ತಡೆಯಾಜ್ಞೆ ಆದೇಶದ ಮೂಲಕ ಈಗಲೂ ಹಿಂದಿನ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಆಯೋಗವು ನೂರಾರು ಪರೀಕ್ಷೆ ನಡೆಸಿದೆ.

ಪತ್ರಾಂಕಿತ ಹುದ್ದೆಗಳಿಗಾಗಿಯೇ ಅರೇಳು ಬಾರಿ ಪರೀಕ್ಷೆ ನಡೆದಿದೆ. ಇದಲ್ಲದೆ, ವೈದ್ಯರು, ಸಹಾಯಕ ಇಂಜಿನಿಯರ್‌ಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮುಂತಾದ ಇಲಾಖಾವಾರು ಎ ಮತ್ತು ಬಿ ವೃಂದದ ಪರೀಕ್ಷೆಗಳು ಪ್ರತ್ಯೇಕವಾಗಿ ನಡೆದಿವೆ. ಗ್ರೂಪ್ ‘ಸಿ’ (ತಾಂತ್ರಿಕ ಹಾಗೂ ತಾಂತ್ರಿಕೇತರ) ಶ್ರೇಣಿಗೆ ಅತಿ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ವಾಣಿಜ್ಯ ತೆರಿಗೆ ಪರಿವೀಕ್ಷಕರು, ವಾರ್ಡನ್‌ಗಳು, ಜೈಲರ್, ಕಿರಿಯ ಇಂಜಿನಿಯರ್ ಮುಂತಾದ ಹುದ್ದೆಗಳಿಗೆ ಅನೇಕ ಪರೀಕ್ಷೆಗಳನ್ನು ನಡೆಸಲಾಗಿದೆ. ಆದರೆ ವಿವಾದಗಳಿಲ್ಲದೆ ಪರೀಕ್ಷೆಗಳು ಸುಗಮವಾಗಿ ನಡೆದ ಉದಾಹರಣೆ ಗಳು ತೀರಾ ಕಡಿಮೆ.

ಕಳೆದ ಎರಡೂವರೆ ದಶಕಗಳ ಪರೀಕ್ಷಾ ಹಾಜರಾತಿಯ ಅಂಕಿ-ಅಂಶಗಳನ್ನು ಗಮನಿಸಿದರೆ ಗೆಜೆಟೆಡ್ ಹುದ್ದೆಗಳಿಗೆ ಪ್ರತಿ ಬಾರಿಯೂ ಸರಾಸರಿ 1.5 ಲಕ್ಷದಿಂದ 3.5 ಲಕ್ಷದವರೆಗೆ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಸಾಮಾನ್ಯ ಪದವಿ ಅರ್ಹತೆ ಇರುವ ಗ್ರೂಪ್ ‘ಸಿ’ ಹುದ್ದೆಗಳಿಗೆ 3 ಲಕ್ಷದಿಂದ 6 ಲಕ್ಷದವರೆಗೂ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಪುನರಾವರ್ತಿತ ಅಭ್ಯರ್ಥಿಗಳನ್ನು ಸೇರಿಸಿದರೆ ಈ ಅವಧಿಯಲ್ಲಿ ಸರಿಸುಮಾರು 1.5 ಕೋಟಿಯಿಂದ 2 ಕೋಟಿಗೂ ಹೆಚ್ಚು ಅರ್ಜಿಗಳು ಸಲ್ಲಿಕೆ ಯಾಗಿವೆ.

ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ. ಇವರಲ್ಲಿ ಎಷ್ಟು ಮಂದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಸರಕಾರಿ ಸೇವೆಗೆ ಆಯ್ಕೆಯಾಗಿದ್ದಾರೆ ಎಂದು ಹೇಳುವುದು ಕಷ್ಟ. ಭ್ರಷ್ಟರಿಂದ ಸೃಷ್ಟಿಯಾದ ವ್ಯವಸ್ಥೆ ಭ್ರಷ್ಟರನ್ನೇ ಸೃಷ್ಟಿಸುತ್ತದೆ ಎನ್ನುವುದು ಸುಳ್ಳಲ್ಲ. ಇಲ್ಲೂ ‘ಜಿರಳೆ’ ಮಾದರಿಯ ಹೋರಾಟ ನಡೆಯದ ಹೊರತು ಈ ವ್ಯವಸ್ಥೆ ಮೂಲೋತ್ಪಾಟನೆ ಸಾಧ್ಯವಿಲ್ಲ.